ಬೆಂಗಳೂರು: ಚುನಾವಣೆ ಎದುರಿಸಲು ಸಂಘಟನಾ ಸಾಮರ್ಥ್ಯ ಮುಖ್ಯವೇ ಹೊರತು ಹಣ ಅಲ್ಲ ಎನ್ನುವುದನ್ನು ಯುವ ಕಾಂಗ್ರೆಸ್ ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಲಹೆ ಕಿವಿ ಮಾತು ಹೇಳಿದ್ದಾರೆ.
ಪಕ್ಷದ ಕಚೇರಿಯಲ್ಲಿ ನಡೆದ ಯುವ ಕಾಂಗ್ರೆಸ್ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಯಕರ್ತರು ಮುಖಂಡರ ಹಿಂದೆ ಓಡಾಡಿಕೊಂಡಿದ್ದರೆ ಪ್ರಯೋಜನವಿಲ್ಲ. ಬದಲಾಗಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕು, ಆಗ ಮಾತ್ರ ರಾಜಕಾರಣದಲ್ಲಿ ಉನ್ನತಿ ಸಾಧಿಸಲು ಸಾಧ್ಯ ಎಂದರು.
ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ವಿರುದ್ಧ ಹೋರಾಟ ಮಾಡಿದ ಕಾರಣಕ್ಕಾಗಿಯೇ ನನಗೆ ಸಾತನೂರು ಕ್ಷೇತ್ರದಿಂದ ಟಿಕೆಟ್ ಸಿಕ್ಕಿತ್ತು. ಅದಕ್ಕೆ ನನ್ನ ಸಂಘಟನಾ ಸಾಮರ್ಥ್ಯವೇ ಕಾರಣ ಎಂದು ನಾಯಕರು ಹೇಳುತ್ತಿದ್ದನ್ನು ಅವರು ಸ್ಮರಿಸಿಕೊಂಡರು.
ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತಂದಿದ್ದಕ್ಕಾಗಿ ಸ್ಥಳೀಯ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದು ನೂರಾರು ನಾಯಕರು ಹುಟ್ಟಿಕೊಂಡರು. ನಾನು, ರಾಮಲಿಂಗಾ ರೆಡ್ಡಿ, ವಿ. ಸೋಮಣ್ಣ ಹೀಗೆ ಅನೇಕ ಕಾರ್ಯಕರ್ತರು ನಾಯಕರಾಗಿ ರೂಪುಗೊಂಡರು ಎMದ ಅವರು, ಬೆಂಗಳೂರಿನಲ್ಲಿ ಐದು ಪಾಲಿಕೆಗಳನ್ನು ರಚನೆ ಮಾಡಲಾಗಿದ್ದು, 500ಕ್ಕೂ ಹೆಚ್ಚು ಹೊಸ ನಾಯಕರಿಗೆ ಅವಕಾಶ ಸಿಗಲಿದೆ ಎಂದು ಹೇಳಿದರು.
ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಉದಯ ಬಾನು ಚಿಬ್, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಮಂಜುನಾಥ ಪಾಲ್ಗೊಂಡಿದ್ದರು.