ನೆಹರೂ ಅವರನ್ನು ದ್ವೇಷಿಸುವುದು ಎಂದರೆ ಭಾರತವನ್ನು ದ್ವೇಷಿಸುವುದು

Most read

ಸ್ವತಃ ಕಾಂಗ್ರೆಸ್ ಪಕ್ಷದವರೇ ನೆಹರೂ ವಿರುದ್ಧ ತೋರುತ್ತಿರುವ ಕೃತಘ್ನತೆಯನ್ನು ಏನೆಂದು ಹೇಳುವುದು? ಇಂದು ಕರ್ನಾಟಕ ಸರ್ಕಾರ ನೆಹರೂ ಜನ್ಮದಿನದ, ಪರ್ಯಾಯವಾಗಿ ಮಕ್ಕಳ ದಿನಾಚರಣೆಯ ಅಂಗವಾಗಿ ನೀಡಿದ ಜಾಹೀರಾತಿನಲ್ಲಿ ನೆಹರೂ ಅವರ ಒಂದು ಸಣ್ಣ ಫೋಟೋ ಬಿಡಿ, ರೇಖಾ ಚಿತ್ರವೂ ಇಲ್ಲ! ಅಂದರೆ,  ನೆಹರೂ ನೆನಪಿನಲ್ಲಿ ಉಳಿಯಬಾರದು ಎಂದು ನೆಹರೂ ವಿರೋಧಿಗಳು ನಡೆಸುತ್ತಿರುವ ಯಜ್ಞಕ್ಕೆ ಕಾಂಗ್ರೆಸ್ ದೊಡ್ಡ ಹವಿಸ್ಸು ಅರ್ಪಿಸುತ್ತಿದೆ -ಎ. ನಾರಾಯಣ, ಅಜೀಂ ಪ್ರೇಮ್ ಜಿ ‌ ವಿ ವಿ.

ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ವಿಷಯದಲ್ಲಿ ದೇಶ ತೋರುತ್ತಿರುವ ಕೃತಘ್ನತೆಯನ್ನು ಚರಿತ್ರೆ ಕ್ಷಮಿಸಲಾರದು ಮತ್ತು ಕ್ಷಮಿಸಬಾರದು. ಈ ಕೃತಘ್ನತೆಯಿಂದಾಗಿ ಅರುವತ್ತು ದಶಕಗಳ ಹಿಂದೆ ಕಾಲವಾದ ನೆಹರೂ ಅವರು ಕಳೆದುಕೊಳ್ಳುವುದಕ್ಕೆ ಏನೂ ಇಲ್ಲ. ಆದರೆ ಅವರ ವಿಷಯದಲ್ಲಿ ಹೀಗೆ ನಡೆದುಕೊಳ್ಳುವ ಮೂಲಕ ಭಾರತ ತನ್ನ ಸಣ್ಣತನವನ್ನು ಪ್ರದರ್ಶಿಸುತ್ತಿದೆ. ಮೂರ್ತಿಯನ್ನು ಕೆತ್ತಿದವರಿಗೆ ಈ ದೇಶದಲ್ಲಿ ಸ್ಥಾನ ಗರ್ಭಗುಡಿಯಿಂದ ಹೊರಗೆ ತಾನೇ? ಅದೇ ಪರಂಪರೆಯ ಮುಂದುವರಿಕೆಯೋ ಎಂಬಂತೆ, ಈ ದೇಶವನ್ನು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಜಗಮೆಚ್ಚಿ ಹೌದು ಹೌದು ಎನ್ನುವಂತೆ ಮುನ್ನಡೆಸಿದ, ಸ್ವತಂತ್ರ ಭಾರತವನ್ನು ಅಕ್ಷರಶ: ಕೆತ್ತಿ ನಿಲ್ಲಿಸಿದ ಶಿಲ್ಪಿಯ ಬಗ್ಗೆ ಭಾರತ ನಡೆದುಕೊಳ್ಳುತ್ತಿದೆ. ಹುಟ್ಟುಗುಣ.

ಈ ದೇಶದಲ್ಲಿ ನೆಹರೂ ಅವರ ಹೆಸರಲ್ಲಿ ಸಾವಿರಾರು ರಸ್ತೆಗಳಿವೆ, ನೂರಾರು ಸಂಸ್ಥೆಗಳಿವೆ, ಹತ್ತಾರು ಸ್ಮಾರಕಗಳಿವೆ, ಒಂದು ವಿಶ್ವವಿದ್ಯಾನಿಲಯವೂ ಇದೆ, ಇನ್ನೂ ಏನೇನೋ ಇವೆ. ಇವೆಲ್ಲವನ್ನು ಇಟ್ಟುಕೊಂಡೇ, ಅಥವಾ ಇವೆಲ್ಲವೂ ಇವೆ ಎನ್ನುವುದನ್ನು ಸಹಿಸಲಾರದೆ, ಒಂದು ವರ್ಗ ನೆಹರೂ ಅವರನ್ನು ರಾಕ್ಷಸೀಕರಿಸುವ, ಅವರ ಕೊಡುಗೆಗಳನ್ನು ನಿರಾಕರಿಸುವ ಮತ್ತು ಅವರನ್ನು ಸ್ವತಂತ್ರ ಭಾರತದ ಚರಿತ್ರೆಯಿಂದ ಅಳಿಸಿಬಿಡುವ ಕೆಲಸವನ್ನು ತಪಸ್ಸಿನಂತೆ ಮಾಡುತ್ತಿದೆ. ಆ ವರ್ಗ ಯಾವುದು ಅಂತ ಪ್ರತ್ಯೇಕವಾಗಿ ಹೆಸರಿಸುವ ಅಗತ್ಯವೇನೂ ಇಲ್ಲ. ಅವರು ನೆಹರೂ ವಿಚಾರದಲ್ಲಿ ಹರಡುತ್ತಿರುವ ಸುಳ್ಳುಗಳು ವ್ಯಾಪಕವಾಗಿ ಜನರನ್ನು ತಲುಪುತ್ತಿವೆ. ಅವರು ಯಾಕೆ ಹೀಗೆ ಮಾಡುತ್ತಿದ್ದಾರೆ ಎನ್ನುವುದನ್ನು ಚರ್ಚಿಸುವುದು ಈ ಲೇಖನದ ಉದ್ದೇಶ. ಆದರೆ ಅದಕ್ಕೆ ಮೊದಲು ಯಾವುದೋ ಒಂದು ವರ್ಗಕ್ಕೆ ಸೇರಿದ ಜನ ನೆಹರು ವಿಷಯದಲ್ಲಿ ಕೃತಘ್ನರಾಗಿ ನಡೆದುಕೊಂಡದ್ದಕ್ಕೆ ದೇಶಕ್ಕೆ ದೇಶವೇ ಅವರತ್ತ ಕೃತಘ್ನತೆ ತೋರಿದೆ ಅಂತ ಮೇಲೆ ಯಾಕೆ ಹೇಳಿದ್ದು ಎನ್ನುವುದನ್ನು ಸ್ಪಷ್ಟಪಡಿಸಬೇಕಿದೆ.

ಕಾರಣ ಇಷ್ಟೇ. ಆ ಒಂದು ವರ್ಗಕ್ಕೆ ಸೇರಿದವರು, ನೆಹರೂ ಅವರ ವಿರುದ್ಧ  ಸುಳ್ಳುಗಳನ್ನು ಹರಡುತ್ತಾ, ದ್ವೇಷವನ್ನು ಹಬ್ಬುತ್ತಾ ಅವರನ್ನು ಕಡೆಗಣಿಸುವುದರ ಜತೆಗೆ ರಾಕ್ಷಸೀಕರಿಸುತ್ತಿರುವಾಗ ಈ ದೇಶದಲ್ಲಿ ನೆಟ್ಟಗೆ ನಿಂತು ಅಂತವರ ಬಾಯಿ ಮುಚ್ಚಿಸುವ, ಬೇಡ ಒಂದು ಸಮರ್ಥ ಪ್ರತಿರೋಧವನ್ನಾದರೂ ತೋರುವವರು ಯಾರೂ ಇಲ್ಲದೆ ಹೋದರಲ್ಲ, ಅದಕ್ಕೆ ನೆಹರು ಅವರ ವಿಚಾರದಲ್ಲಿ ಇಡೀ ದೇಶವೇ ಕೃತಘ್ನತೆ ತೋರುತ್ತಿದೆ ಅಂತ ಹೇಳಿದ್ದು. ಉಳಿದವರ ಕತೆ ಹಾಗಿರಲಿ. ನೆಹರು ಕಟ್ಟಿಬೆಳೆಸಿದ ಕಾಂಗ್ರೆಸ್ ಪಕ್ಷದವರಾದರೂ ಮಹಾನ್ ನಾಯಕನ ಚಾರಿತ್ರ್ಯ ವಧೆ ಎಗ್ಗಿಲ್ಲದೆ ನಡೆಯುತ್ತಿರುವಾಗ ಅವರ ರಕ್ಷಣೆಗೆ ನಿಲ್ಲಬೇಕಿತ್ತಲ್ಲ. ಅದೂ ಕಾಣುತಿಲ್ಲ. ‘ನೆಹರೂ ಅವರ ವಿಷಯ ಹೆಚ್ಚು ಪ್ರಸ್ತಾಪಿಸುವುದು ಬೇಡ, ಟೀಕೆಗಳಿಗೆ ಉತ್ತರಿಸುವುದು ಕಷ್ಟ ಆಗುತ್ತದೆ’ ಅಂತ ಕರ್ನಾಟಕದ ಕಾಂಗ್ರೆಸ್ ನಾಯಕರೊಬ್ಬರು ತಮ್ಮ ಅನುಯಾಯಿಗಳಿಗೆ ಹೇಳಿದ್ದರಂತೆ. ‘ಅರುವತ್ತು ವರ್ಷಗಳಲ್ಲಿ ಕಾಂಗ್ರೆಸ್ ಏನೂ ಮಾಡಲಿಲ್ಲ, ದೇಶಕ್ಕೆ ಸ್ವಾತಂತ್ರ್ಯ ಬಂದದ್ದೇ 2014ರಲ್ಲಿ’ ಎನ್ನುವ ಒಂದು ವ್ಯವಸ್ಥಿತ ಸುಳ್ಳನ್ನು ತೇಲಿಬಿಟ್ಟಾಗ ಅದು ಕಾಂಗ್ರೆಸ್ ಮೇಲಿನ ಪ್ರಹಾರಕ್ಕಿಂತಲೂ ಹೆಚ್ಚಾಗಿ ನೆಹರೂ ಅವರ ಕೊಡುಗೆಗಳನ್ನು ಅಲ್ಲಗಳೆಯುವ ಮತ್ತು ನಿರಾಕರಿಸುವ ತಂತ್ರವಾಗಿತ್ತು. ಕಾಂಗ್ರೆಸ್ ಕಡೆಯಿಂದ ಕೊನೆಗೂ ಅದಕ್ಕೊಂದು ಸಮರ್ಪಕ ಪ್ರತ್ಯುತ್ತರ ಬರಲೇ ಇಲ್ಲ.

ಇಂದು ನೆಹರು ಹುಟ್ಟಿದ ದಿನ. ಆದರೆ ಅಖಿಲ ಭಾರತ ಕಾಂಗ್ರೆಸ್ ಕಡೆಯಿಂದಾಗಲೀ, ಕರ್ನಾಟಕ ಕಾಂಗ್ರೆಸ್ ಕಡೆಯಿಂದಾಗಲಿ ಅವರನ್ನು ನೆನಪಿಸುವ ಒಂದು ಜಾಹೀರಾತು ಪತ್ರಿಕೆಗಳಲ್ಲಿ ಕಾಣಿಸಲಿಲ್ಲ. ಇಲ್ಲ ಎನ್ನುವುದಕ್ಕೆ ಮಕ್ಕಳ ದಿನಾಚರಣೆಗೆಂದು ನೀಡಿದ ಸಣ್ಣ ಜಾಹೀರಾತಿನಲ್ಲಿ ನೆಹರು ಅವರ ಜನ್ಮದಿನ ಪ್ರಯುಕ್ತ ಅಂತ ಸಣ್ಣ ಅಕ್ಷರದಲ್ಲಿ ಬರೆಯಲಾಗಿದೆ.

ನೆಹರೂ ಜತೆಗೆ ಗಾಂಧೀಜಿಯವರ ರಾಕ್ಷಸೀಕರಣವೂ ದೊಡ್ಡ ಮಟ್ಟದಲ್ಲೇ ಆಗುತ್ತಿದೆ. ಗಾಂಧೀಜಿಯವರ ವಿರುದ್ಧ ನಡೆಯುತ್ತಿರುವ ಈ ಕೃತಘ್ನತಾ ಆಂದೋಲನದ ವಿರುದ್ದವೂ ಬರಬೇಕಿದ್ದಷ್ಟು ಪ್ರತಿರೋಧ ಬರಲಿಲ್ಲ ಎನ್ನುವುದು ನಿಜ. ಆದರೆ, ಮೌನವಾಗಿಯಾದರೂ ಗಾಂಧೀಜಿಯವರ ರಕ್ಷಣೆಗೆ ನಿಲ್ಲುವ ಮನಸ್ಸುಗಳು ಇನ್ನೂ ದೇಶದಲ್ಲಿ ವ್ಯಾಪಕವಾಗಿಯೇ ಇವೆ. ಗಾಂಧೀಜಿಯ ವಿಚಾರದಲ್ಲಿ ಮಾತನಾಡುವವರು ಏನೋ ತಪ್ಪು ಮಾಡುತ್ತಿದ್ದಾರೆ ಎನ್ನುವ ಒಂದು ಸಣ್ಣ ಪಜ್ಞೆ ಉಳಿದುಕೊಂಡಿದೆ. ಆದರೆ ನೆಹರೂ ಅವರಿಗೆ ಈ ವಿನಾಯತಿಯೂ ಇಲ್ಲ.

ಈ ಎಲ್ಲ ಕಾರಣಕ್ಕೆ ಹೇಳಿದ್ದು ನೆಹರೂ ಅವರ ವಿಷಯದಲ್ಲಿ ಇಡೀ ದೇಶ ಅಕ್ಷಮ್ಯ ಕೃತಘ್ನತೆ ತೋರುತ್ತಿದೆ ಅಂತ.

ಈಗ ನೆಹರೂ ಕುರಿತಾಗಿ ದೇಶಭಕ್ತರು ಅಂತ ತಮ್ಮನ್ನು ತಾವು ಕರೆದುಕೊಳ್ಳುವ ಆ ಒಂದು ವರ್ಗಕ್ಕೆ ಅಷ್ಟೊಂದು  ದ್ವೇಷ, ಸಿಡಿಮಿಡಿ, ಸಿಡುಕು, ಅಸಹನೆ ಇತ್ಯಾದಿಗಳೆಲ್ಲಾ ಯಾಕೆ? ನೆಹರು ಆ ನಿರ್ಣಯ ಹಾಗೆ ಕೈಗೊಳ್ಳಬಾರದಿತ್ತು, ಈ ನಿರ್ಣಯ ಹೀಗೆ ಕೈಗೊಳ್ಳಬಾರದಿತ್ತು ಇತ್ಯಾದಿ ಏನೇನೋ  ಅವರು ಹೇಳಬಹುದು. ಅದು ನಿಜವಾದ ಕಾರಣವಲ್ಲ. ಎಲ್ಲಾ ಕಾಲದ ಎಲ್ಲಾ ನಾಯಕರು ಕೈಗೊಳ್ಳುವ ನಿರ್ಣಯಗಳ ಕುರಿತಾಗಿಯೂ ಹೀಗೆ ಹೇಳಿ ಬಿಡಬಹುದು.  ಅನಿವಾರ್ಯ ನಿರ್ಣಯಗಳನ್ನು ಕೈಗೊಳ್ಳುವ ವೇಳೆ ಆಗುವ ಪ್ರಮಾದಗಳು  (error of judgement) ಏನಾದರೂ ಇದ್ದರೆ ಅವುಗಳನ್ನೇ ಹಿಡಿದುಕೊಂಡು ಒಬ್ಬ ನಾಯಕನ ಚಾರಿತ್ರ್ಯ ವಧೆ ಮಾಡುವುದು ಸಣ್ಣತನ ಮಾತ್ರವಲ್ಲ ಧೂರ್ತತನ ಕೂಡಾ. ಅದೇನೇ ಇದ್ದರೂ ನಿಜವಾದ ಕಾರಣಗಳು ಬೇರೆಯೇ ಇವೆ. ಅವುಗಳ ಪೈಕಿ ಮೂರು ಪ್ರಮುಖ ಕಾರಣಗಳು ಹೀಗಿವೆ.

ಮೊದಲನೆಯದ್ದು ನೆಹರು ಮಹಾನ್ ಸೆಕ್ಯುಲರ್ ವಾದಿಯಾಗಿದ್ದರು. ಅಂದರೆ, ಸರಕಾರ ಯಾವುದೇ ಒಂದು ಧರ್ಮದ ಜತೆ ಗುರುತಿಸಿಕೊಳ್ಳಬಾರದು, ಎಲ್ಲಾ ಧರ್ಮಕ್ಕೆ ಸೇರಿದವರನ್ನೂ ಸಮಾನವಾಗಿ ನೋಡಬೇಕು ಎಂದು ನೆಹರು ಪ್ರತಿಪಾದಿಸಿದ್ದು ಮಾತ್ರವಲ್ಲ, ಅದನ್ನು ಆಚರಿಸುವಲ್ಲಿ ಅವರು ಅಷ್ಟೇ ಕಟ್ಟುನಿಟ್ಟಾಗಿದ್ದರು. ಅವರು ಪ್ರಧಾನಿಯಾಗಿದ್ದಾಗ, 1951ರಲ್ಲಿ ನವೀಕೃತ ಸೋಮನಾಥ ದೇಗುಲದ ಉದ್ಘಾಟನಾ ಸಮಾರಂಭದಲ್ಲಿ ಅಂದಿನ ರಾಷ್ಟ್ರಾಧ್ಯಕ್ಷರು ಭಾಗವಹಿಸಬಾರದು ಎಂದು ನೆಹರು ಬಹಿರಂಗವಾಗಿ ಪ್ರತಿಪಾದಿಸಿದ್ದು, ನವೀಕರಣಕ್ಕೆ ಸರಕಾರದಿಂದ ಹಣ ನೀಡಲು ನಿರಾಕರಿಸಿದ್ದು ಇತ್ಯಾದಿಗಳಿಗೆ ಕಾರಣ  ಅವರು ಸೆಕ್ಯುಲರಿಸಂ ತತ್ವದಲ್ಲಿ ಹೊಂದಿದ್ದ ಅಪರಿಮಿತ ಬದ್ಧತೆಯೇ ಆಗಿತ್ತು. ಇಂತಹ ನಿಲುವು ಹೊಂದಿದ್ದ ಓರ್ವ ನಾಯಕನನ್ನು ಆದರ್ಶ ಎಂದು  ದೇಶ ಭಾವಿಸಿದರೆ ಅವರು ಪ್ರತಿಪಾದಿಸಿದ ಸೆಕ್ಯುಲರಿಸಂ ತತ್ವವನ್ನೂ ಜನ ಆದರ್ಶ ಅಂತ ತಿಳಿದುಕೊಂಡು ಬಿಡುತ್ತಾರೆ. ಹಾಗಾಗದಂತೆ ನೋಡಿಕೊಳ್ಳಲು ಇರುವ ಒಂದೇ ಮಾರ್ಗ ಎಂದರೆ ಅವರನ್ನು ಒಬ್ಬ ಖಳನಾಯಕನಂತೆ ಬಿಂಬಿಸುವುದು, ದೇಶ ವಿರೋಧಿಯ ಪಟ್ಟ ನೀಡಿ ಬಿಡುವುದು.

ಎರಡನೆಯದ್ದು ನೆಹರು ಒಬ್ಬ ಆಧುನಿಕ ಚಿಂತನೆಯ ನಾಯಕ. ಆಧುನಿಕತೆಯ ಬಗ್ಗೆ ಮತ್ತು ಆಧುನಿಕತೆಯ ಜತೆಯಾಗಿ ಬರುವ ವಿಜ್ಞಾನ, ವಿಚಾರವಾದ, ಪ್ರಜಾತಂತ್ರ, ಕೈಗಾರಿಕೀಕರಣ ಇತ್ಯಾದಿಗಳ ಬಗ್ಗೆ ನೆಹರು ಅವರಿಗೆ ಇದ್ದಷ್ಟು ನಂಬಿಕೆ ಬೇರೆ ಯಾವ ನಾಯಕರಿಗೂ ಇದ್ದ ಹಾಗೆ ಕಾಣಿಸುವುದಿಲ್ಲ. ಗಾಂಧೀಜಿ ಸೆಕ್ಯುಲರ್ ವಾದಿಯಾಗಿದ್ದರು. ಆದರೆ ಅವರು ಆಧುನಿಕತಾವಾದಿಯಾಗಿರಲಿಲ್ಲ. ಹಾಗಾಗಿ, ಅವರಿಗೆ ಆಧುನಿಕತೆಯ ಜತೆಯಾಗಿರುವ ವಿಜ್ಞಾನ, ಸಂಸದೀಯ ಪ್ರಜಾತಂತ್ರ, ಕೈಗಾರಿಕೀಕರಣ ಇತ್ಯಾದಿಗಳ ಬಗ್ಗೆ ವಿರೋಧವಿತ್ತು. ನೆಹರೂ ಆಧುನಿಕತಾವಾದಿ ಆಗಿದ್ದರು ಎನ್ನುವ ಕಾರಣಕ್ಕೆ  ಯಾರಾದರೂ ಯಾಕೆ ಅವರನ್ನು ವಿರೋಧಿಸ ಬೇಕು ಮತ್ತು ದ್ವೇಷಿಸ ಬೇಕು ಎನ್ನುವ ಪ್ರಶ್ನೆ ಬರಬಹುದು. ಅದಕ್ಕೆ ಕಾರಣ ಏನೆಂದರೆ, ಆಧುನಿಕತಾವಾದಿ ನೆಹರು ಧರ್ಮಕ್ಕಿಂತ ವೈಚಾರಿಕತೆ ಮತ್ತು ವಿಜ್ಞಾನವೇ ಶ್ರೇಷ್ಠ ಅಂತ ನಂಬಿದ್ದರು. ಆಧುನಿಕ ಭಾರತದ ಯಾವುದೇ ಯೋಜನೆ ಯೋಚನೆಗಳ ಸ್ಫೂರ್ತಿ ವಿಜ್ಞಾನ ಮತ್ತು ವೈಚಾರಿಕತೆಯೇ ಆಗಿರಬೇಕು ಹೊರತು ಯಾವುದೋ ಧರ್ಮಗ್ರಂಥವಲ್ಲ ಎನ್ನುವುದು ಅವರ ನೇರ ಮತ್ತು ದಿಟ್ಟ ನಿಲುವಾಗಿತ್ತು. ಹಾಗಾಗಿ, ಧರ್ಮದ ಅಮಲನ್ನು ಬಳಸಿಕೊಂಡು ಜನರನ್ನು ರಾಜಕೀಯವಾಗಿ ಒಗ್ಗೂಡಿಸಬೇಕು ಎಂದು ಹೊಂಚು ಹಾಕುತಿದ್ದ ವರ್ಗಕ್ಕೆ ಸಹಜವಾಗಿಯೇ ನೆಹರೂ ಅವರು ವಿರೋಧಿಯಂತೆ ಕಂಡರು. ಒಂದು ವೇಳೆ ನೆಹರೂ ಅವರು ಒಬ್ಬ ಆದರ್ಶ ನಾಯಕ ಅಂತ ಸ್ವೀಕರಿಸಲ್ಪಟ್ಟರೆ ಅದರ ಮೂಲಕ ನೆಹರೂ ನಂಬಿದ್ದ ವೈಚಾರಿಕತೆಯೂ ಜನರಿಗೆ ಆದರ್ಶ ಆಗಿಬಿಡುತ್ತದೆ. ಅದು ಧರ್ಮದ ಆಧಾರದ ಮೇಲೆ ರಾಜಕೀಯ ಮಾಡಹೊರಟವರಿಗೆ ಇಷ್ಟವಾಗದೇ ಇರುವುದು ಸಹಜವೇ ಆಗಿತ್ತು.

ಮೂರನೆಯದ್ದು ನೆಹರೂ ಈ ದೇಶ ಎಲ್ಲಾ ರಾಜ್ಯಗಳು ಸೇರಿ ಆಗಿರುವ ಒಂದು ಒಕ್ಕೂಟವೇ ಹೊರತು ಸಹಜವಾಗಿ ರೂಪುಗೊಂಡ ಒಂದು ರಾಜಕೀಯ ಘಟಕ ಅಲ್ಲ ಎನ್ನುವುದನ್ನು ನಂಬಿದ್ದರು. ಹಾಗಾಗಿಯೇ ಅವರು ದೇಶದ ಎಲ್ಲಾ ಮುಖ್ಯಮಂತ್ರಿಗಳನ್ನು ಅತ್ಯಂತ ಗೌರವದಿಂದ, ತಮ್ಮ ಸಮಸ್ಥಾನದ ಸಹೋದ್ಯೋಗಿಗಳು ಎಂಬಂತೆ ಕಂಡದ್ದು. ನೆಹರೂ ಅವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರಗಳು ಮೂರು ಸಂಪುಟಗಳಲ್ಲಿ ಪ್ರಕಟವಾಗಿವೆ. ಆ ಒಂದೊಂದು ಪತ್ರದಲ್ಲೂ ಕೇಂದ್ರ ಸರಕಾರದ ಹೆಚ್ಚುಗಾರಿಕೆಯನ್ನಾಗಲೀ, ಪ್ರಾಬಲ್ಯವನ್ನಾಗಲೀ ಪ್ರತಿಪಾದಿಸದೆ ದೇಶವನ್ನು ಮುನ್ನಡೆಸುವಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಇರುವ ಸ್ವಾಯತ್ತತೆಯನ್ನು ಮತ್ತು ಜವಾಬ್ದಾರಿಯನ್ನು ನೆನಪಿಸಿದ್ದನ್ನು ಕಾಣುತ್ತೇವೆ. ನೆಹರು ಭಾಷಾವಾರು ನೆಲೆಯಲ್ಲಿ ರಾಜ್ಯಗಳ ಪುನರ್ವಿಂಗಡಣೆ ಆಗುವುದನ್ನು ಆರಂಭದಲ್ಲಿ ವಿರೋಧಿಸಿದ್ದರು. ಇದಕ್ಕೆ ಕಾರಣ ಅವರಿಗೆ ದೇಶವನ್ನು ಒಂದಾಗಿ ಉಳಿಸಿಕೊಳ್ಳುವಲ್ಲಿ ಇದ್ದ ಕಾಳಜಿಯೇ ಹೊರತು ಯಾವುದೇ ರೀತಿಯ ರಾಜ್ಯ ವಿರೋಧಿ ಧೋರಣೆ ಆಗಿರಲಿಲ್ಲ. ಸಹಜವಾಗಿಯೇ ಒಂದೇ ದೇಶ, ಒಂದೇ ನಾಯಕ, ಒಂದೇ ಧರ್ಮ, ಒಂದೇ ಚುನಾವಣೆ ಎನ್ನುವವರಿಗೆ ನೆಹರೂ ಅವರು ಅನುಕರಣೀಯ ನಾಯಕ ಎನ್ನುವಂತೆ ಜನ ಸ್ವೀಕರಿಸುವುದು ಇಷ್ಟವಿರಲಿಲ್ಲ.

ನೆಹರೂ ವಿರೋಧಿಗಳ ಶ್ರಮ ಫಲ ನೀಡಿದೆ. ಇಂದು ನೆಹರೂ ಅವರ ಕೊಡುಗೆಗಳ ಬಗ್ಗೆ ಅವರು ಈ ದೇಶವನ್ನು ರೂಪಿಸಿದ ಚರಿತ್ರೆಯ ಬಗ್ಗೆ ಯಾವುದೇ ನೆನಪುಗಳು ಮುಂದಿನ ತಲೆಮಾರಿಗೆ ಇರಬಾರದು, ನೆನಪಿಸಿಕೊಳ್ಳುವವರು ಅವರನ್ನು ಒಬ್ಬ ಖಳನಾಯಕ ಎಂಬಂತೆ ನೆನಪಿಟ್ಟುಕೊಳ್ಳಬೇಕು ಎಂಬ ಉದ್ದೇಶ ಫಲಿಸುವಂತೆ ಕಾಣಿಸುತ್ತಿದೆ.

ದೇಶ ನೆಹರೂ ಅವರ ಬಗ್ಗೆ ಕೃತಘ್ನವಾಗಿರುವುದನ್ನು ಈ ಹಿನ್ನೆಲೆಯಿಂದ  ಅರ್ಥೈಸಿಕೊಳ್ಳಬಹುದು. ಆದರೆ, ಸ್ವತಃ ಕಾಂಗ್ರೆಸ್ ಪಕ್ಷದವರೇ ಅವರ ವಿರುದ್ಧ ತೋರುತ್ತಿರುವ ಕೃತಘ್ನತೆಯನ್ನು ಏನೆಂದು ಹೇಳುವುದು? ಇಂದು ಕರ್ನಾಟಕ ಸರ್ಕಾರ ನೆಹರೂ ಜನ್ಮದಿನದ, ಪರ್ಯಾಯವಾಗಿ ಮಕ್ಕಳ ದಿನಾಚರಣೆಯ ಅಂಗವಾಗಿ ನೀಡಿದ ಜಾಹೀರಾತಿನಲ್ಲಿ ನೆಹರೂ ಅವರ ಒಂದು ಸಣ್ಣ ಫೋಟೋ ಬಿಡಿ, ರೇಖಾ ಚಿತ್ರವೂ ಇಲ್ಲ! ಅಂದರೆ,  ನೆಹರೂ ನೆನಪಿನಲ್ಲಿ ಉಳಿಯಬಾರದು ಎಂದು ನೆಹರೂ ವಿರೋಧಿಗಳು ನಡೆಸುತ್ತಿರುವ ಯಜ್ಞಕ್ಕೆ ಕಾಂಗ್ರೆಸ್ ದೊಡ್ಡ ಹವಿಸ್ಸು ಅರ್ಪಿಸುತ್ತಿದೆ.

ಮಹಾತ್ಮ ಗಾಂಧಿ ಸ್ವಾತಂತ್ರ್ಯ ಸಂಗ್ರಾಮವನ್ನು ಮುನ್ನಡೆಸಿದ ಕಾರಣಕ್ಕೆ ರಾಷ್ಟ್ರಪಿತ ಹೇಗೋ, ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ರೂಪಿಸಿದ್ದಕ್ಕಾಗಿ ಸಂವಿಧಾನ ಶಿಲ್ಪಿ ಹೇಗೋ, ಹಾಗೆಯೇ ನೆಹರೂ ಆಧುನಿಕ ಭಾರತವನ್ನು ಕಟ್ಟಿನಿಲ್ಲಿಸಿದ ರಾಷ್ಟ್ರ ಶಿಲ್ಪಿ. ಅವರು ಮೊದಲ ಪ್ರಧಾನಿ ಆಗದೆ ಹೋಗಿದ್ದರೆ ಈ ದೇಶ ಒಂದಾಗಿ ಉಳಿಯುತ್ತಲೂ ಇರಲಿಲ್ಲ, ಉಳಿದರೂ ಇಂದು ಸಾಧಿಸಿದಷ್ಟಾದರೂ ಪ್ರಗತಿಯನ್ನು ಕಾಣುವುದಕ್ಕೂ ಸಾಧ್ಯ ಇರಲಿಲ್ಲ. ಹೇಗೆ, ಯಾಕೆ ಎನ್ನುವುದನ್ನೆಲ್ಲಾ ಇಲ್ಲಿ ವಿವರಿಸಲು ಅವಕಾಶ ಇಲ್ಲ, ಅದರ ಅವಶ್ಯಕತೆಯೂ ಇಲ್ಲ. ಸತ್ಯ ಸೂರ್ಯಪ್ರಕಾಶದಷ್ಟು ಸ್ಪಷ್ಟವಾಗಿದೆ. ಸತ್ಯಕ್ಕೆ ಬೆನ್ನು ತಿರುಗಿಸುವ ರೋಗಕ್ಕೆ ವಿವರಣೆ ಇಂದಿಗೂ ಮದ್ದಾಗದು. ನೆಹರೂ ಈ ದೇಶವನ್ನು ಸಮಗ್ರವಾಗಿ ಅರ್ಥಮಾಡಿಕೊಂಡಷ್ಟು ಬೇರೆ ಯಾವುದೇ ನಾಯಕರಿಗೆ ದೇಶವನ್ನು ಅರಿಯಲು ಸಾಧ್ಯವಾಗಿದೆ ಅಂತ ಅನ್ನಿಸುವುದಿಲ್ಲ. ನೆಹರೂ ಬೇರಲ್ಲ. ಭಾರತ ಬೇರಲ್ಲ. ನೆಹರೂ ಅವರನ್ನು ದ್ವೇಷಿಸುವುದು ಎಂದರೆ ಭಾರತವನ್ನು ದ್ವೇಷಿಸುವುದು.

ಎ.ನಾರಾಯಣ

ಇದನ್ನೂ ಓದಿ- ಚಾ ಚಾ ನೆಹರೂ ಅವರೊಂದಿಗೆ ಇಂದಿನ ಚಹಾ..

More articles

Latest article