ಬೆಂಗಳೂರು : ಇತರೇ ರಾಜ್ಯಗಳಿಂದ ಕರ್ನಾಟಕದ ಚರ್ಚ್ಗಳಲ್ಲಿ ಧರ್ಮಾಧ್ಯಕ್ಷರಾಗಲು ಬರುವವರು ಕಡ್ಡಾಯವಾಗಿ ಕನಿಷ್ಠ ಆರು ತಿಂಗಳು ವ್ಯವಹಾರಿಕ ಕನ್ನಡವನ್ನು ಕಲಿತು ಬರಬೇಕು. ಇಲ್ಲದಿದ್ದರೆ ಇಲ್ಲಿನ ಧರ್ಮಾಧ್ಯಕ್ಷರ ಸ್ಥಾನಕ್ಕೆ ಗೌರವ ಉಳಿಯುವುದಿಲ್ಲ ಎಂದು ಸಾಹಿತಿ ಡಾ.ಎಲ್.ಹನುಮಂತಯ್ಯ ತಿಳಿಸಿದ್ದಾರೆ.
ಶನಿವಾರ ನಗರದ ಫ್ರೀಡಂ ಪಾರ್ಕ್‌ನಲ್ಲಿ ಅಖಿಲ ಕರ್ನಾಟಕ ಕಥೋಲಿಕ ಕ್ರೈಸ್ತರ ಕನ್ನಡ ಸಂಘ ಹಮ್ಮಿಕೊಂಡಿದ್ದ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇವರು ಮತ್ತು ಭಕ್ತರ ನಡುವಿನ ಭಾಷೆಯಲ್ಲಿ ಕಂದಕ ಇರಬಾರದು. ಪ್ರಪಂಚದಲ್ಲಿ ಲಭ್ಯವಿರುವ ಎಲ್ಲ ಧರ್ಮಗಳಿಗೂ ಇರಬೇಕಾದಂತ ಸಾಮಾನ್ಯ ಕಾನೂನುನೆಂದರೆ ದೇವರು ಮತ್ತು ಭಕ್ತರ ನಡುವಿನ ಸಂವಾದ ಅವರಿಬ್ಬರಿಗೂ ತಿಳಿದಿರುವ ಭಾಷೆಯಲ್ಲಿ ನಡೆಯಬೇಕು. ಇದು ಸರಳವಾದ ಸತ್ಯ ಎಂದರು.
ನಾವು ವ್ಯಾಟಿಕನ್ ನಗರದಲ್ಲಿ ಕನ್ನಡದವರನ್ನು ಧರ್ಮಾಧ್ಯಕ್ಷರನ್ನಾಗಿ ನೇಮಕ ಮಾಡಿ ಎಂದು ಕೇಳುತ್ತಿಲ್ಲ. ಬೆಂಗಳೂರು ಮತ್ತು ರಾಜ್ಯಾದ್ಯಂತ ಇರುವ ಚರ್ಚ್ಗಳಲ್ಲಿ ಕನ್ನಡದವರನ್ನು ಧರ್ಮಾಧ್ಯಕ್ಷರನ್ನಾಗಿ ನೇಮಕ ಮಾಡಿ ಎಂದು ಕೇಳುತ್ತಿದ್ದೇವೆ. ಇದಕ್ಕೆ ಸುಪ್ರೀಂಕೋರ್ಟ್ ಕೂಡ ವಿರೋಧಿಸಲು ಸಾಧ್ಯವಿಲ್ಲ. ಕನ್ನಡಕ್ಕೆ ಕ್ರೈಸ್ತರ ಕೊಡುಗೆ ದೊಡ್ಡದು. ರೆವರೆಂಡ್ ಕಿಟ್ಟಲ್ ಅವರು ಕನ್ನಡಕ್ಕೆ ದೊಡ್ಡ ನಿಘಂಟನ್ನು ಕೊಟ್ಟವರು ಎಂದು ಹನುಮಂತಯ್ಯ ಸ್ಮರಿಸಿದರು.
ಕ್ರೈಸ್ತರು ತಮ್ಮ ಮಿಷನರಿಗಳ ಮೂಲಕ ಅಂಚಿನಲ್ಲಿರುವ ಜನರಿಗೆ ಶಿಕ್ಷಣ ಕೊಡಿಸುವ ಕೆಲಸ ಮಾಡಿದ್ದಾರೆ ಮತ್ತು ಸ್ಥಳೀಯ ಭಾಷೆಯಲ್ಲಿಯೇ ಶಿಕ್ಷಣ ಕೊಡಬೇಕೆನ್ನುವುದನ್ನು ಹೇಳಿಕೊಟ್ಟಿದ್ದಾರೆ. ಇದು ಯಾಕೆ ಈಗಿನ ಧರ್ಮದ ಅತ್ಯುನ್ನತ ಸ್ಥಾನದಲ್ಲಿರುವ ಧರ್ಮಾಧ್ಯಕ್ಷರಿಗೆ ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ. ಇದರಿಂದ ನಿಮಗಾಗುವ ಸಮಸ್ಯೆ ಏನು? ಕನ್ನಡ ಭಾಷೆಯಲ್ಲಿ ತೊಡಕುಗಳಿದ್ದರೆ ನಿವಾರಿಸುವ ಕೆಲಸ ಮಾಡೋಣ. ಅದಕ್ಕೆ ಸಾಹಿತ್ಯ ಪರಿಷತ್ತು ಒಳಗೊಂಡಂತೆ ಅನೇಕ ಸಂಸ್ಥೆಗಳು, ಸರಕಾರಿ ಇಲಾಖೆಗಳು ತಯಾರಾಗಿವೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಇಂದು ಅನ್ಯ ಭಾಷಿಗರು ಕನ್ನಡ ಜಾಗವನ್ನು ಆಕ್ರಮಿಸಿಕೊಳ್ಳಲು ಪ್ರಯತ್ತಿಸುತ್ತಿದ್ದಾರೆ. ಹಿಂದಿ ವಲಸಿಗರು ಅತಿಹೆಚ್ಚು ಕೆಲಸಕ್ಕಾಗಿ, ಅನ್ನಕ್ಕಾಗಿ ನಗರಕ್ಕೆ ಬರುತ್ತಿದ್ದಾರೆ. ಇಲ್ಲಿಗೆ ಬಂದಿರುವ ಹಲವರು ಕನ್ನಡವನ್ನು ಕಲಿತು ಮಾತನಾಡುವವರು ಇದ್ದಾರೆ. ಆದರೆ ಇನ್ನು ಕೆಲವರು ಕನ್ನಡವನ್ನು ಕಲಿಯದೇ ಹಿಂದಿಯಲ್ಲಿಯೇ ವ್ಯವಹರಿಸುತ್ತಿದ್ದಾರೆ. ಹಿಂದಿ ಹೇರಿಕೆಯನ್ನು ಪ್ರಭುತ್ವವು ಮಾಡುತ್ತಿದೆ, ಬೇರೆ ರಾಜ್ಯಗಳು ಮಾಡುತ್ತಿವೆ. ಈ ಹಿಂದಿ ಏರಿಕೆಯನ್ನು ತೀವ್ರವಾಗಿ ವಿರೋಧಿಸಬೇಕು ಎಂದು ಹನುಮಂತಯ್ಯ ಕರೆ ನೀಡಿದರು.
ಸಂಘದ ಅಧ್ಯಕ್ಷ ಎ.ಐಸಾಕ್ ಮಾತನಾಡಿ, ದ್ವಿತೀಯ ವಾಟಿಕನ್ ಕೌನ್ಸಿಲ್ ನೀಡಿದ ಮಾರ್ಗದರ್ಶನದ ಪ್ರಕಾರ ಕರ್ನಾಟಕ ಚರ್ಚ್ಗಳಲ್ಲಿ ಕನ್ನಡವನ್ನು ಸಾಮಾನ್ಯ ವರ್ಣಾಕ್ಯುಲರ್ ಪ್ರಾಂತೀಯ ಭಾಷೆಯಾಗಿ ಪರಿಗಣಿಸಿ, ನಿಯಮಿತವಾಗಿ ಕನ್ನಡ ಪೂಜೆಗಳನನ್ನು ನಡೆಸಬೇಕು. ಪ್ರಾದೇಶಿಕ ಗುರುಮಠ ಸ್ಥಾಪನೆ, ಸಂತ ಪೇತ್ರರ ಗುರುಮಂದಿರದ ಸಂಪೂರ್ಣ ಆಡಳಿತ ಕರ್ನಾಟಕ ಧರ್ಮಾಧ್ಯಕ್ಷರುಗಳಿಗೇ ಮೀಸಲಿಡಬೇಕು ಎಂದು ಆಗ್ರಹಿಸಿದರು.
ಧರಣಿಯಲ್ಲಿ ಡಾ.ರಾಜ್ ಕುಮಾರ್ ಆಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್, ಸಾಹಿತಿಗಳಾದ ಡಾ.ಮನು ಬಳಿಗಾರ್, ಡಾ.ರೀಟಾ, ಕನ್ನಡಪರ ಹೋರಾಟಗಾರರಾದ ರಾ.ನಂ.ಚಂದ್ರಶೇಖರ್, ಡಾ.ಆರ್.ಎ.ಪ್ರಸಾಧ್, ವ.ಚ.ಚನ್ನೇಗೌಡ, ಪದ್ಮಿನಿ ನಾಗರಾಜ್, ಸಂಘದ ಪದಾಧಿಕಾರಿಗಳಾದ ಅಂತೋಣಿ ರಾಜ್, ಜಾನ್ ಬ್ರಿಟ್ಟೋ, ಬರ್ತಲೋಮಿಯೋ, ಜಾರ್ಜ್ ಕುಮಾರ್, ದೇವಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.

