ಕರ್ನಾಟಕದ ತಾಯಂದಿರೇ…

Most read

ದೇಶದ ಬಡವರಿಗೆ ಆರ್ಥಿಕ ಶಕ್ತಿ ಕೊಡುವ ಕೆಲಸ ಮಾಡುವ ಸರ್ಕಾರ ಬೇಕೋ? ಅಥವಾ ಬೆಲೆ ಏರಿಕೆ ಮಾಡಿ ತೆರಿಗೆ ಹಾಕುತ್ತ ನಿಮ್ಮ ಸಾವಿರ ರೂಪಾಯಿಯಲ್ಲಿ 200 ರೂಪಾಯಿ ಕಿತ್ತುಕೊಳ್ಳುವ ಸರ್ಕಾರ ಬೇಕೋ?. ಜನರ ಬದುಕು, ಕಷ್ಟ ಸುಖದ ಬಗ್ಗೆ ಮಾತನಾಡುವವರು ಬೇಕೋ? ಅಥವಾ ಹಿಂದೂ ಮುಸ್ಲಿಂ ಎಂದು ಜನರನ್ನು ಕೆರಳಿಸುವ ಸರ್ಕಾರ ಬೇಕೋ? ನೀವೇ ಯೋಚನೆ ಮಾಡಿ -ಎಂ ಜಿ ಹೆಗಡೆ, ಜನಪರ ಹೋರಾಟಗಾರರು.

ಕರ್ನಾಟಕದ ಕಾಂಗ್ರೆಸ್ ಸರ್ಕಾರ ತನ್ನ ಮಾತಿನಂತೆ ಗೃಹಲಕ್ಷ್ಮಿ, ಗೃಹ ಜ್ಯೋತಿ ಯೋಜನೆ ಸೇರಿದಂತೆ 5 ಯೋಜನೆ ಜಾರಿಗೆ ತಂದಿದೆ. ನಿಮಗೆ ತಲುಪುತ್ತಲೂ ಇದೆ. ಈ ಸಣ್ಣ ಮೊತ್ತದಿಂದ ಕೆಲವರು ಮಕ್ಕಳ ಶಾಲಾ ಫೀ ಕಟ್ಟಿದ್ದೀರಿ, ಕೆಲವರು ಟಿವಿ, ಫ್ರಿಡ್ಜ್, ಮೊಬೈಲ್,  ಮಿಕ್ಸಿ ಯಾವುದೋ ವಸ್ತು ತಗೊಂಡಿರ ಬಹುದು. ಬಡ್ಡಿ ಸಾಲ ತೀರಿಸಿದ್ದೋ, ಅಡವಿಟ್ಟ ತುಂಡು ಬಂಗಾರ ಬಿಡಿಸಿದ್ದೋ  ಹೀಗೆ ಎನೋ ಒಂದು ಉಪಯೋಗ ಮಾಡಿದ್ದೀರಿ ಅಲ್ಲವೇ?.

ಲೋಕ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತ ಬಂದರೆ ಬಡ ಮಹಿಳೆಯ ಕುಟುಂಬ ಒಂದಕ್ಕೆ ವಾರ್ಷಿಕ ಒಂದು ಲಕ್ಷ ಗ್ಯಾರಂಟಿ ಘೋಷಿಸಿದೆ. ಈಗ ನೀವು  ಲೋಕಸಭೆಗೆ 2 ನೇ ಹಂತದ ಚುನಾವಣೆಯಲ್ಲಿ ಮತ ಚಲಾಯಿಸಬೇಕಿದೆ. ಈ ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ನಷ್ಟ, ಇದು ಬಿಟ್ಟಿ ಭಾಗ್ಯ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತ, ಮತ್ತೆ ಮತ್ತೆ ಭಾವನಾತ್ಮಕ ವಿಷಯ ಕೆರಳಿಸಿ ನಿಮ್ಮ ವೋಟು ಕೇಳುತ್ತಿದೆ. ನೀವು ಗೊಂದಲದಲ್ಲಿರಬಹುದು.

ತೀರಾ ಬಡವರ ಕೈಗೆ ಪ್ರತೀ ತಿಂಗಳೂ ಹಣ ಸಿಕ್ಕರೆ ಏನು ಮಾಡುತ್ತಾರೆ? ಅಗತ್ಯವಾದ ವಸ್ತು ಕೊಂಡು ಕೊಳ್ಳುತ್ತಾರೆ.  ಬಡ್ಡಿಯಲ್ಲಿ ಪಡೆದ ಸಾಲ ತೀರಿಸಿ ಕೊಳ್ಳುತ್ತಾರೆ. ಗ್ರಾಮೀಣ ಪ್ರದೇಶದ ಬಹುತೇಕ ತಾಯಂದಿರು ಸ್ವಸಹಾಯ ಗುಂಪಿನ ಮೂಲಕ  ಅಥವಾ ಫೈನಾನ್ಸ್ ಸಾಲ ಮಾಡಿ ಬಡ್ಡಿ ಕಟ್ಟಿಯೇ ಸುಸ್ತಾಗಿರುತ್ತೀರಿ. ಮನೆಗೆ ಏನೋ ಒಂದು ವಸ್ತು ತರುವ ಕನಸೂ ನನಸಾಗಿರುವುದಿಲ್ಲ. ಪತಿಯ ದುಡಿಮೆ ಈ ಬೆಲೆ ಏರಿಕೆಯಿಂದಾಗಿ ಯಾವುದಕ್ಕೂ ಸಾಕಾಗುವುದಿಲ್ಲ. ಸಣ್ಣ ಪ್ರಮಾಣದ ಹೊಲ ತೋಟ ಇದ್ದರೆ ಅದನ್ನು ಅಭಿವೃದ್ಧಿ ಮಾಡಲೂ ಆಗುತ್ತಿಲ್ಲ. ಇದರಿಂದ ಬೆಳೆದು ನಿಂತ ಮಗ ದೂರದ ಊರಿಗೆ ಸಣ್ಣಪುಟ್ಟ ಕೆಲಸಕ್ಕೆ ಸೇರುವ ಪರಿಸ್ಥಿತಿ.

ಸಬಲೀಕರಣ

ಈ ರೀತಿ ಸರ್ಕಾರ ಪ್ರತಿ ತಿಂಗಳೂ ಹಣ, ಫ್ರೀ ವಿದ್ಯುತ್, ಅಕ್ಕಿ, ಉಚಿತ ಪ್ರಯಾಣ ಮಾಡಿದಾಗ ನಿಮ್ಮ ಕೈಯಲ್ಲಿ ಸ್ವಲ್ಪ ಹಣ ಉಳಿಯಲು ಪ್ರಾರಂಭವಾಗುತ್ತದೆ. ಅದನ್ನು ನೀವು ಮಾರ್ಕೆಟ್ ಗೆ ಹೋಗಿ ಏನಾದರೂ ಖರೀದಿಸುತ್ತೀರಿ. ಅಂಗಡಿಯವರಿಗೂ ವ್ಯಾಪಾರ. ಅಂಗಡಿ ವಸ್ತುಗಳನ್ನ ಕೊಡುವ ಕೈಗಾರಿಕೆಗಳಿಗೂ ವ್ಯಾಪಾರ. ಅದನ್ನು ಸಾಗಾಟ ಮಾಡುವವರಿಗೂ ಕೆಲಸ. ಹೀಗೆ ಆ ಹಣ ಸುತ್ತಾಡುತ್ತದೆ. ಸರ್ಕಾರಕ್ಕೂ ಮತ್ತೆ ಮತ್ತೆ ತೆರಿಗೆ ಹಣ ಸಿಗುತ್ತದೆ.

ನೆಮ್ಮದಿಯ ಬದುಕು ಇದ್ದರೆ ನಿಮ್ಮ ಸಣ್ಣಪುಟ್ಟ ಹೊಲದಲ್ಲೂ ನೀವು ಬೆಳೆ ಬೆಳೆಯುತ್ತೀರಿ. ಎರಡು ಹಸು ಸಾಕಿ ಹಾಲಿನ ವ್ಯಾಪಾರ, ಹೊಲಿಗೆ ಕೆಲಸ ಹೀಗೆ ಚಟುವಟಿಕೆ ಮಾಡುತ್ತೀರಿ. ಇದರಿಂದ ನಾಡಿನ ಬಡ ಕುಟುಂಬದವರೂ ಆರ್ಥಿಕವಾಗಿ ಗಟ್ಟಿಯಾಗುತ್ತಾರೆ.

ರಾಷ್ಟ್ರ ಅಂದರೆ ಆ ನಾಡಿನ ಜನ. ಅವರ ಬದುಕು ಕಟ್ಟುವುದೇ  ಸರ್ಕಾರದ ಕೆಲಸ.  ಶ್ರೀಮಂತರ 12 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರೆ ಸರ್ಕಾರಕ್ಕೆ ನಷ್ಟವಲ್ಲವೆ? ಈಗ ಪೆಟ್ರೋಲ್ ಡೀಸೆಲ್‌ ಕಡಿಮೆ ಸಿಕ್ಕರೂ ದರ ಏರಿಸಿ ನಿಮ್ಮನ್ನು ದೋಚುತ್ತಿದ್ದಾರಲ್ಲ. ಬಡವರಿಗೆ ಹಣ ಕೊಟ್ಟರೆ ದೇಶ ಸಾಲ ಮಾಡಬೇಕು ಅನ್ನುತ್ತಾರೆ. ಮೋದಿ ಸರ್ಕಾರ ಇಂತಹ ಯಾವ ಸಹಾಯ ಮಾಡದೇ, ಬೆಲೆ ಏರಿಕೆ ಇಳಿಸದೇ ಇದ್ದರೂ 169 ಕೋಟಿ ಲಕ್ಷ ಸಾಲ ಮಾಡಿದ್ದು ಯಾಕೆ?.

ಬೆಲೆ ಏರಿಕೆಯ ಬಿಸಿ

ಈಗ ನೀವೇ ಯೋಚಿಸಿ. ದೇಶದ ಬಡವರಿಗೆ ಆರ್ಥಿಕ ಶಕ್ತಿ ಕೊಡುವ ಕೆಲಸ ಮಾಡುವ ಸರ್ಕಾರ ಬೇಕೋ? ಅಥವಾ ಬೆಲೆ ಏರಿಕೆ ಮಾಡಿ ತೆರಿಗೆ ಹಾಕುತ್ತ ನಿಮ್ಮ ಸಾವಿರ ರೂಪಾಯಿಯಲ್ಲಿ 200 ರೂಪಾಯಿ ಕಿತ್ತುಕೊಳ್ಳುವ ಸರ್ಕಾರ ಬೇಕೋ?. ಜನರ ಬದುಕು ಕಷ್ಟ ಸುಖದ ಬಗ್ಗೆ ಮಾತನಾಡುವವರು ಬೇಕೋ? ಅಥವಾ ಹಿಂದೂ ಮುಸ್ಲಿಂ ಎಂದು ಜನರನ್ನು ಕೆರಳಿಸುವ ಸರ್ಕಾರ ಬೇಕೋ? ನೀವೇ ಯೋಚನೆ ಮಾಡಿ.

ನಿಮ್ಮ ಬದುಕಿಗೆ ಬೆಂಬಲವಾಗುವ ಕಾಂಗ್ರೆಸ್ ಗೆ ನೀವು ಶಕ್ತಿ ಕೊಟ್ಟರೆ ಇದೆಲ್ಲವೂ ಸಾಧ್ಯ. ಇಲ್ಲದಿದ್ದರೆ ಇಂತಹ ಕಾರ್ಯಕ್ರಮ ನಿಲ್ಲುತ್ತದೆ. ಈಗ ಹೇಳಿ ದೇಶ ಕಟ್ಟುವ ಅಂದರೆ ನಿಮ್ಮ ಬದುಕು ಕಟ್ಟುವ ಸರ್ಕಾರ ಬೇಕೋ… ಕಚ್ಚಾಟ ಮಾಡಿಸುವ ಸರ್ಕಾರ ಬೇಕೋ..

ನಿಮ್ಮ ಒಳ ಮನಸ್ಸನ್ನು ಕೇಳಿ. ನಿಮ್ಮ ಬೆಂಬಲಕ್ಕೆ ನಿಂತ ಕಾಂಗ್ರೆಸ್ ನ್ನು ನೀವೂ ಬೆಂಬಲಿಸುತ್ತಿರಾ?

ಎಂ ಜಿ ಹೆಗಡೆ

ಜನಪರ ಹೋರಾಟಗಾರರು

ಇದನ್ನೂ ಓದಿ- ಅಭಿವೃದ್ಧಿ ಎಂಬ ಭ್ರಮೆ

More articles

Latest article