ಆಂಧ್ರದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ 11 ದಿನಗಳ ಕಾಲ ಗೋವಿನ ಮೂತ್ರ-ಸೆಗಣಿ ಸೇರಿಸಿದ ಪಂಚಗವ್ಯ ಸೇವಿಸಿ ಪ್ರಾಯಶ್ಚಿತ ಮಾಡುವುದಾಗಿ ನಾಟಕೀಯ ಹೇಳಿಕೆ ಕೊಟ್ಟಿದ್ದಾರೆ. ಆದರೆ ಈ ವಿಷಯದಲ್ಲಿ ಸಿಬಿಐ ತನಿಖೆಗೆ ಆದೇಶ ಕೊಟ್ಟಿಲ್ಲ ಯಾಕೆ? ಈ ವಿಷಯದಲ್ಲಿ ಬಲಪಂಥೀಯ ಐಟಿ ಸೆಲ್ ಮತ್ತು ಗೋದಿ ಮೀಡಿಯಾದ ದಿಢೀರ್ ಚಟುವಟಿಕೆ ನೋಡಿ ಜನರು ಎಚ್ಚೆತ್ತುಕೊಂಡು ಇದೆಲ್ಲಾ ಯಾವುದೋ ದೂರಗಾಮಿ ದುರುದ್ದೇಶಕ್ಕಾಗಿ ಎಬ್ಬಿಸಿರುವ ಧೂಳು, ಹಾಗಾಗಿ ಈ ವಿಷಯವನ್ನು ನಾಟಕೀಯವಾಗಿ ತಿರುಚಿ ಜನರಿಗೆ ಉಣಬಡಿಸಲಾಗುತ್ತಿದೆ ಎಂಬುದನ್ನು ಅರಿತುಕೊಳ್ಳಬೇಕಿದೆ – ಪ್ರವೀಣ್ ಎಸ್ ಶೆಟ್ಟಿ, ಚಿಂತಕರು.
ತಿರುಪತಿ ಲಡ್ಡುನಲ್ಲಿ ಪ್ರಾಣಿಜನ್ಯ ಕೊಬ್ಬು ಇರುವ ವಿವಾದ ಹುಟ್ಟು ಹಾಕಿದ್ದು ಯಾರೆಂದರೆ, ಹಿಂದೂ ದೇವಸ್ಥಾನಗಳನ್ನು ಸರಕಾರದ ಹಿಡಿತದಿಂದ ಹೊರತಂದು ಅದನ್ನು ತಮ್ಮ ಹಿಡಿತದಲ್ಲಿ ತೆಗೆದುಕೊಳ್ಳ ಬಯಸುವ ಕೇಸರಿ ಸಂಘಟನೆಗಳ ಗುರಿಕಾರರು! ಅಯೋಧ್ಯೆಯ ಹೊಸ ರಾಮಲಲ್ಲಾ ಮಂದಿರದಲ್ಲಿ ಹೇಗೆ ಅಂಧಾದುಂಧಿ ಲೂಟಿ ನಡೆಯುತ್ತಿದೆ ಎಂದು ಎಲ್ಲರಿಗೂ ಗೊತ್ತು. ಯಾಕೆಂದರೆ ಅದು ಪ್ರತ್ಯೇಕ ಟ್ರಸ್ಟಿನ ಆಡಳಿತದಲ್ಲಿ ಇದೆ.
ಹಿಂದಿನ ಹಲವಾರು ವರ್ಷಗಳಿಂದ ಭಾರೀ ಆದಾಯವಿರುವ ತಿರುಪತಿ, ಗುರುವಾಯೂರು, ಉಜ್ಜಯಿನಿ ಮಹಾಕಾಲೇಶ್ವರ, ಶಬರಿಮಲೆ, ಶಿರಡಿ ಸಾಯಿಬಾಬಾ ಮಂದಿರ, ಕೊಲ್ಲೂರು, ಕಟೀಲು, ಕಾಶಿ, ಮಥುರಾ, ಕೇದಾರನಾಥ, ಬದ್ರಿನಾಥ, ಅಸ್ಸಾಮಿನ ಕಾಮಾಖ್ಯಾ, ಜಮ್ಮುವಿನ ವೈಶ್ಣೋದೇವಿ ಮುಂತಾದ ದೇಶದ ಎಲ್ಲಾ ಶ್ರೀಮಂತ ದೇವಸ್ಥಾನಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು ದೇಶದೆಲ್ಲೆಡೆ ಹಿಂದೂ ಧರ್ಮದ ಮೇಲೆ ತಮ್ಮ ಹಿಡಿತ ಸಾಧಿಸಿ ಆ ಮೂಲಕ ರಾಜಕೀಯದಲ್ಲಿ ತಮ್ಮ ಶಾಶ್ವತ ಹಿಡಿತ ಸಾಧಿಸುವ ಮನುವಾದಿಗಳ ದೇಶವ್ಯಾಪಿ ಷಡ್ಯಂತ್ರ ಈಗಿನ ಈ ತಿರುಪತಿ ಲಡ್ಡುವಿನಲ್ಲಿ ದನ-ಹಂದಿಯ ಕೊಬ್ಬಿನ ವಿವಾದದ ಹಿಂದೆ ಅಡಗಿರುವುದು ಸ್ಪಷ್ಟ. ಅದಕ್ಕಾಗಿಯೇ ಉಡುಪಿ ಮಠಾಧಿಪತಿಗಳ ಸಹಿತ ಒಬ್ಬರ ನಂತರ ಒಬ್ಬರು ಮಠಾಧೀಶರು, ಶಂಕರಾಚಾರ್ಯರು, ಬಾಬಾಗಳು, ಸ್ವಘೋಷಿತ ಸ್ವಾಮೀಜಿಗಳು, ಸದ್ಗುರುಗಳು ಸಾರ್ವಜನಿಕ ಹೇಳಿಕೆ ಕೊಡುತ್ತಾ, ಕೋಟಿಗಟ್ಟಲೆ ಗಳಿಕೆ ಇರುವ ಪುರಾತನ ತೀರ್ಥಸ್ಥಾನಗಳ ಸಹಿತ ಎಲ್ಲಾ ಶ್ರೀಮಂತ ದೇವಸ್ಥಾನಗಳನ್ನು ಸರಕಾರದ ಅಧಿಕಾರ ವ್ಯಾಪ್ತಿಯಿಂದ ಹೊರತಂದು ಹಿಂದೂ ಸಂಘಸಂಸ್ಥೆಗಳಿಗೆ (ಸ್ಥಾಪಿತ ಹಿತಾಸಕ್ತಿಗಳಿಗೆ) ವಹಿಸಿ ಕೊಡಬೇಕು ಎಂಬ ನರೇಟಿವ್ ಹುಟ್ಟು ಹಾಕಿರುವುದು. ಅದಕ್ಕಾಗಿಯೇ ಹಿಂದೂ ದೇವಸ್ಥಾನಗಳ ಹಣವೆಲ್ಲಾ ಚರ್ಚ್-ಮಸೀದಿಗಳ ನಿರ್ವಹಣೆಗೆ ಹೋಗುತ್ತಿದೆ ಎಂದು ‘ದ್ವೇಷ-ಪ್ರೇಮಿಗಳು’ ಸುಳ್ಳು ಪ್ರಚಾರವನ್ನು ನಿರಂತರವಾಗಿ ಮಾಡುತ್ತಿರುವುದು. ನಿಜವಾಗಿ ಸಂಘಪರಿವಾರದ ಅಂಗ ಸಂಸ್ಥೆಗಳ ಸಲಹೆಯಂತೆಯೇ ಚಂದ್ರಬಾಬು ನಾಯ್ಡು ಜೂನ್ ತಿಂಗಳಲ್ಲಿ ಅಧಿಕಾರಕ್ಕೆ ಬಂದ ಹತ್ತೇ ದಿನದೊಳಗೆ ತಿರುಪತಿ ಲಡ್ಡುವಿನ ಸ್ಯಾಂಪಲ್ ತರಿಸಿಕೊಂಡು ತಮ್ಮ ಕೈಯಳತೆಯಲ್ಲಿಯೇ ಇರುವ ಹೈದರಾಬಾದಿನ ಸರಕಾರಿ ಆಹಾರ ಪರೀಕ್ಷಣಾ ಲ್ಯಾಬ್ ಗೆ ಕಳುಹಿಸುವ ಬದಲು ದೂರದ ಗುಜರಾತಿಗೆ ಕಳುಹಿಸಿದ್ದು ಎಂದು ಹೇಳಲಾಗುತ್ತಿದೆ. .
ಈ ಕೆಳಗಿನ ಪ್ರಶ್ನೆಯಲ್ಲಿಯೇ ಉತ್ತರ ಅಡಗಿದೆ…
1) ಇದೇ ವರ್ಷ ಜೂನ್ ತಿಂಗಳಲ್ಲಿ ನಾಯ್ಡು ಸರಕಾರ ಆಂಧ್ರದಲ್ಲಿ ಅಸ್ತಿತ್ವಕ್ಕೆ ಬಂದ ಎರಡೇ ವಾರದೊಳಗೆ ತಮ್ಮ ಪಕ್ಷದ ವರಿಷ್ಠರನ್ನು ಹಾಗೂ ಪವನ ಕಲ್ಯಾಣರ ಮಿತ್ರ ಪಕ್ಷವನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಿರುಪತಿ ಲಡ್ಡುವಿನ ಸ್ಯಾಂಪಲ್ಲನ್ನು ಗುಜರಾತಿನ ಒಂದು ಲ್ಯಾಬಿಗೆ ಅರ್ಜೆಂಟಾಗಿ ಪರೀಕ್ಷೆಗೆ ಕಳುಹಿಸುವ ಅಗತ್ಯ ನಾಯ್ಡುಗೆ ಏನಿತ್ತು?
2) ಜುಲೈ 15 ರೊಳಗೆಯೇ ಗುಜರಾತ್ ಲ್ಯಾಬ್ ನಿಂದ ಲಾಡು ಪರೀಕ್ಷೆಯ ರಿಪೋರ್ಟ್ ಬಂದಿತ್ತು. ಆದರೂ ಅದನ್ನು ಎರಡು ತಿಂಗಳ ಕಾಲ ನಾಯ್ಡು ಸರಕಾರ ತನ್ನದೇ ಪಕ್ಷದ ಸದಸ್ಯರಿಂದ ಹಾಗೂ ಪವನ್ ಕಲ್ಯಾಣರ ಪಕ್ಷದಿಂದ ಯಾಕೆ ಗುಟ್ಟಾಗಿ ಇಟ್ಟಿದ್ದು? ತಿರುಪತಿ ದೇವಸ್ಥಾನದ್ದೇ ಸ್ವಂತ ಲ್ಯಾಬ್ ಇರುವಾಗ ಹೊರಗಿನ ಲ್ಯಾಬ್ ಗೆ ಯಾಕೆ ಕಳುಹಿಸಿದ್ದು?
3) ಈ ರಿಪೋರ್ಟಿನ ಎರಡು ಕಾಪಿ ಬಂದಿದೆ, ಈ ಎರಡೂ ಕಾಪಿಯಲ್ಲಿ ಬೇರೆ ಬೇರೆ ರಿಜಿಸ್ಟರ್ ಸಂಖ್ಯೆ ಯಾಕೆ ಹಾಕಲಾಗಿದೆ ?
4) ರಿಪೋರ್ಟಿನಲ್ಲಿ ಕೇವಲ ಬೀಫ್ ಮತ್ತು ಹಂದಿಯ ಕೊಬ್ಬು ಮತ್ತು ಮೀನಿನ ಎಣ್ಣೆ ಇರುವ ಸಾಧ್ಯತೆಯ ಬಗ್ಗೆ ಮಾತ್ರ ಹೇಳಿಲ್ಲ, ರಿಪೋರ್ಟಿನಲ್ಲಿ ಒಟ್ಟು 14 ಬಗೆಯ ಬಾಹ್ಯ ಕೊಬ್ಬು/ಎಣ್ಣೆ ಇರುವ ಸಾಧ್ಯತೆಯ ಬಗ್ಗೆ ಕೂಡಾ ಉಲ್ಲೇಖ ಇದೆ. ಆದರೆ ಖಚಿತವಾಗಿ ಯಾವ ಎಣ್ಣೆ/ಕೊಬ್ಬು ಎಷ್ಟು ಪ್ರಮಾಣದಲ್ಲಿ ಇದೆ ಎಂಬ ಬಗ್ಗೆ ಈ ರಿಪೋರ್ಟ್ ನಿರ್ದಿಷ್ಟವಾಗಿಲ್ಲ. (ಆ ಎರಡೂ ರಿಪೋರ್ಟ್ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ). ಆ ರಿಪೋರ್ಟ್ ನಲ್ಲಿ ಒಟ್ಟು 14 “ಬಾಹ್ಯ ತೈಲಾಂಶ ಇರುವ ಸಾಧ್ಯತೆಯ” ಉಲ್ಲೇಖ ಮಾತ್ರ ಇದೆ, ಆದರೆ ಪ್ರಾಣಿಜನ್ಯ ಕೊಬ್ಬು-ಎಣ್ಣೆ ಇದ್ದೇ ಇದೆ ಎಂದು ಖಚಿತವಾಗಿ ಹೇಳಿಲ್ಲ. ಶೇಂಗಾ, ಬಾದಾಮಿ, ಸಾಸಿವೆ, ಎಳ್ಳು, ಸೂರ್ಯಕಾಂತಿ ಇವೆಲ್ಲವುಗಳಿಂದ ಎಣ್ಣೆ ತೆಗೆದ ಮೇಲೆ ಉಳಿಯುವ “ಹಿಂಡಿ/ಪುಂಡಿ” ಗೆ ಹಳ್ಳಿಗಳಲ್ಲಿ ತುಂಬಾ ಬೇಡಿಕೆ ಇದೆ. ರೈತರು ತಮ್ಮ ಸಾಕು ಪ್ರಾಣಿಗಳಿಗೆ ಇದನ್ನೇ ತಿನ್ನಿಸುವುದು. ಯಾಕೆಂದರೆ ಇವುಗಳು ದನಗಳಿಗೆ ತುಂಬಾ ಪೌಷ್ಟಿಕವಾದ ಪಶು ಆಹಾರ. ಹಾಗಾದರೆ ಹನ್ನೊಂದು ತರದ ಸಸ್ಯಾಹಾರಿ ತೈಲಾಂಶಗಳನ್ನು ಬಿಟ್ಟು “ಕೇವಲ ಬೀಫ್ ಹಂದಿ ಮತ್ತು ಮೀನಿನ ಕೊಬ್ಬು” ಇರುವ ಆರೋಪ ಎಲ್ಲಿಂದ ಹುಟ್ಟಿತು?
5) ಇಷ್ಟೊಂದು ಗಹನವಾದ ವಿಷಯ ಎರಡು ತಿಂಗಳುಗಳ ಕಾಲ ನಿರ್ಲಕ್ಷ್ಯ ಮಾಡುವಂತಹಾ ಜುಜುಬಿ ವಿಷಯವಾಗಿತ್ತೇ? ಅದು ಕೇವಲ ಒಂದೂವರೆ ಪೇಜಿನ ರಿಪೋರ್ಟ್, ಆದರೂ ಅದನ್ನು ತನ್ನ ಪಕ್ಷದವರಿಗೇ ಬಹಿರಂಗ ಪಡಿಸಲು ನಾಯ್ಡುಗೆ 64 ದಿನ ಯಾಕೆ ಬೇಕಾಯಿತು.?
6) ಈ ಅವಧಿಯಲ್ಲಿ ದಿನಕ್ಕೆ ಎರಡು ಲಕ್ಷ ಭಕ್ತರಂತೆ ಒಂದೂಕಾಲು ಕೋಟಿಗಿಂತಲೂ ಹೆಚ್ಚು ಭಕ್ತರು ಈ ತಿರುಪತಿ ಲಡ್ಡು ತಿಂದಿದ್ದರು. ಅಂದರೆ ನಾಯ್ಡು ಸರಕಾರದ ನಿರ್ಲಕ್ಷ್ಯದಿಂದ ಇಷ್ಟು ದೊಡ್ಡ ಸಂಖ್ಯೆಯ ಭಕ್ತರ ಧರ್ಮ ಹಾಳಾಯಿತು ಅಲ್ಲವೇ? ಇದರಲ್ಲಿ ದೊಡ್ಡ ಸಂಖ್ಯೆಯಲ್ಲಿ ಅವರ ಪಕ್ಷದ ಕಾರ್ಯಕರ್ತರೇ ಇದ್ದರು. ಯಾಕೆಂದರೆ ಜೂನ್ ನಲ್ಲಿ ಚುನಾವಣೆ ಗೆದ್ದ ಖುಷಿಯಲ್ಲಿ ಅವರೆಲ್ಲಾ ತಿರುಪತಿಗೆ ಕುಟುಂಬ ಸಹಿತ ನುಗ್ಗಿ ತಮ್ಮ ಹರಕೆ ತೀರಿಸಿದ್ದರು.
7) ಸ್ವತಃ ನಾಯ್ಡು ಕುಟುಂಬದ್ದೇ ಒಂದು ಪ್ರಸಿದ್ಧ ಹಾಲಿನ ಬ್ರ್ಯಾಂಡ್ ಆಂಧ್ರ ಮತ್ತು ತೆಲಂಗಾಣದಲ್ಲಿ ಇದೆ. ಅದರ ಹೆಸರು ಹೆರಿಟೇಜ್ ಫುಡ್ಸ್ ಲಿಮಿಟೆಡ್. ಮಂಗಳೂರಿನಲ್ಲಿಯೂ ಈ ಕಂಪನಿಯ ಹಾಲು ಬೆಣ್ಣೆ ಯೋಗರ್ಟ್ ಪನೀರ್ ಮತ್ತು ಚೀಸ್ ಇವೆಲ್ಲಾ ಡಿಪಾರ್ಟ್‌ಮೆಂಟಲ್ ಸ್ಟೋರ್ ಗಳಲ್ಲಿ ಮಾರಾಟಕ್ಕಿವೆ. ಇದು ನಮ್ಮ ನಂದಿನಿ ಗಿಂತಲೂ 20% ಹೆಚ್ಚು ದುಬಾರಿ. ಈ ಕಂಪನಿಯ ವಾರ್ಷಿಕ ವ್ಯವಹಾರ ಸುಮಾರು ನಾಲ್ಕು ಸಾವಿರ ಕೋಟಿಯದಾಗಿದ್ದು ವಾರ್ಷಿಕ ನಿವ್ವಳ ಲಾಭ ರೂ.300 ಕೋಟಿ ದಾಟಿರುತ್ತದೆ. ನಾಯ್ಡು ಕುಟುಂಬಕ್ಕೆ ತಿರುಪತಿ ದೇವರಾದ ವೆಂಕಟೇಶ್ವರನ ಮೇಲೆ ನಿಜವಾದ ಭಕ್ತಿ ಇದ್ದರೆ ಅವರ ಹೆರಿಟೇಜ್ ಕಂಪನಿಯೇ ತಿರುಪತಿ ದೇವಸ್ಥಾನಕ್ಕೆ ಶುದ್ಧ ತುಪ್ಪವನ್ನು ಇತರ ಪೂರೈಕೆದಾರರಿಗಿಂತ ಕಡಿಮೆ ಬೆಲೆಯಲ್ಲಿ ಪೂರೈಸಿದ್ದರೆ ಇಂತಹ ಕಲಬೆರಕೆ ತಪ್ಪಿಸಬಹುದಿತ್ತು ತಾನೇ?
8) ಎರಡು ತಿಂಗಳುಗಳ ಕಾಲ ಸುಮಾರು ಒಂದೂ ಕಾಲು ಕೋಟಿ ಭಕ್ತರ ಧರ್ಮ ಕೆಡಿಸಿದ ಪಾಪ ನಾಯ್ಡುರವರ ಟಿಡಿಪಿ ಪಕ್ಷಕ್ಕೆ ತಗಲಿತು ಅಲ್ಲವೇ? ನೇರವಾಗಿ ಅಪವಿತ್ರ ಕೆಲಸ ಮಾಡಿ ಬರುವ ಪಾಪಕ್ಕಿಂತ ಇತರರು ತಮಗರಿವಿಲ್ಲದೆ ಪಾಪಕ್ಕೆ ಈಡಾಗುತ್ತಿರುವಾಗ ಅದನ್ನು ನಾವು ದುರುದ್ದೇಶದಿಂದ ತಡೆಯದಿದ್ದರೆ ಅದರಿಂದ ನಮಗೇನೇ ಹೆಚ್ಚು ಪಾಪ ತಗಲುತ್ತದೆಯಂತೆ. ಹೀಗೆ ನಂಬಿಕೆ ಇರುವಾಗ ಎರಡು ತಿಂಗಳು ರಿಪೋರ್ಟನ್ನು ಅಡಗಿಸಿಟ್ಟು ಮಾಡಿರುವ ಘೋರ ಪಾಪ ನಾಯ್ಡು ಮತ್ತು ಅವರ ಪಕ್ಷಕ್ಕೆ ತಗಲುವುದು ಖಚಿತವಲ್ಲವೇ?.
9) ಮನುಷ್ಯರಿಗೆ ರೋಗ ತಗಲಿದಾಗಲೂ ರೋಗದ ಪರೀಕ್ಷೆಯ ವಿಷಯದಲ್ಲಿ ನಾವು ನಮ್ಮ ಕುಟುಂಬ ವೈದ್ಯರನ್ನೂ ಪೂರ್ಣ ನಂಬುವುದಿಲ್ಲ. ಒಬ್ಬ ಡಾಕ್ಟರ್ ಕೊಟ್ಟ ಒಪಿನಿಯನ್ ನ್ನು ನಾವು ಇನ್ನೊಬ್ಬ ಡಾಕ್ಟರ್ ಗೆ ತೋರಿಸಿ “ಸೆಕೆಂಡ್ ಒಪಿನಿಯನ್” ಪಡೆಯುತ್ತೇವೆ. ಹಾಗಿರುವಾಗ ನಾಯ್ಡುರವರು ನಂಬಿಕಾರ್ಹವಲ್ಲದ ಗುಜರಾತ್ ಲ್ಯಾಬ್ ರಿಪೋರ್ಟನ್ನು ಮತ್ತು ಅದೇ ಲಾಡು ಸ್ಯಾಂಪಲ್ಲನ್ನು ಇನ್ನೊಂದು ಹೆಚ್ಚು ನಂಬಿಕಸ್ತ ಲ್ಯಾಬ್ ಗೆ ಕಳುಹಿಸಿ ಸೆಕೆಂಡ್ ಒಪಿನಿಯನ್ ಯಾಕೆ ಪಡೆಯಲಿಲ್ಲ? ಗುಜರಾತಿನ ಯಾವುದೇ ಸಂಸ್ಥೆ ಈಗ ನಂಬಿಕೆಗೆ ಅರ್ಹವಾಗಿ ಉಳಿದಿಲ್ಲ ಎಂದು ದೇಶಕ್ಕೆಲ್ಲ ಗೊತ್ತಿರುವಾಗ ಅದೇ ಸ್ಯಾಂಪಲ್ಲನ್ನು ಹತ್ತಿರದಲ್ಲಿಯೇ ಇರುವ ನಂಬಿಕೆಗೆ ಅರ್ಹವಾದ ಹೈದರಾಬಾದಿನ ಕೇಂದ್ರ ಸರಕಾರದ ಆಹಾರ ಪರೀಕ್ಷಣಾ ಕೇಂದ್ರಕ್ಕೆ ಎರಡನೇ ಪರೀಕ್ಷೆಗೆ ಕಳುಹಿಸಬಹುದಿತ್ತು ತಾನೇ?. ಕೇವಲ ನಾಲ್ಕು ವೈಷ್ಣವ ಪುರೋಹಿತ ಕುಟುಂಬದ ಖಾಸಗಿ ಆಸ್ತಿಯಂತೆ ಆಗಿರುವ ಟಿಟಿಡಿ ದೇವಸ್ಥಾನದ ಆಡಳಿತ ಮಂಡಳಿ ಗಾಢ ಮೌನ ವಹಿಸಿರುವುದು ತಿರುಪತಿ ದೇವರ ಹೆಸರಲ್ಲಿ ಯಾವುದೋ ದೂರಗಾಮಿ ಸಂಚಿನ ವಾಸನೆ ಹೊಡೆಸುತ್ತಿದೆಯಲ್ಲವೇ?.
10) ತಿರುಪತಿ ಪ್ರಸಾದದ ಲಾಡುನಲ್ಲಿ ಪ್ರಾಣಿಜನ್ಯ ಕೊಬ್ಬು/ಎಣ್ಣೆ ಸಿಕ್ಕಿರುವ ಅರ್ಧಂಬರ್ಧ ಸುದ್ದಿಯ ಆಧಾರದಲ್ಲಿ ಈಗ ಗೋದಿ ಮೀಡಿಯಾದಲ್ಲಿ ವಿಪರೀತ ಚರ್ಚೆ ಚೀರಾಟ ನಡೆದಿದೆ. ಆದರೆ ಈ ರಿಪೋರ್ಟಿನ ಸತ್ಯಾಸತ್ಯತೆಯನ್ನು ಯಾರೂ ಪ್ರಶ್ನಿಸುತ್ತಿಲ್ಲ. ಅಷ್ಟೇ ಅಲ್ಲ, ನಾವು ದಿನನಿತ್ಯ ಕುಡಿಯುವ ಹಾಲಿನಲ್ಲಿ ಹಾಗೂ ನಮ್ಮ ಮಾನವ-ತಾಯಂದಿರ ಹಾಲಲ್ಲಿ ಕೂಡಾ ನೈಸರ್ಗಿಕವಾಗಿ ಬಂದಿರುವ ವಿವಿಧ ಕೊಬ್ಬು ಇರುತ್ತದೆ ಎಂಬುದು ಗೊತ್ತಿಲ್ಲದವರು ಸಹಾ ರಿಪೋರ್ಟನ್ನು ವಿಶ್ಲೇಷಿಸುತ್ತಿದ್ದಾರೆ. ಇದರ ಹಿಂದಿರುವ ಕುಟಿಲ ರಾಜನೀತಿ ಬಹಳ ಅಪಾಯಕಾರಿಯಾಗಿರುವಂತೆ ಭಾಸವಾಗುತ್ತಿದೆ. ಬಿಹಾರದ ಪಾಟ್ನಾದ ಮಹಾವೀರ ಹನುಮಾನ್ ಮಂದಿರದಲ್ಲಿಯೂ ಇದೆ ತರಹ ಕರ್ನಾಟಕದಿಂದ ಲೀಟರಿಗೆ ರೂ.680 ದರದಲ್ಲಿ ತರಿಸಿದ ನಂದಿನಿ ತುಪ್ಪದಿಂದ ಇದೆ ರೀತಿಯ ಲಕ್ಷಾಂತರ ಲಾಡು ಮಾಡಿ ಭಕ್ತರಿಗೆ ದಿನಾಲೂ ವಿತರಿಸಲಾಗುತ್ತಿದೆ. ಪಾಟ್ನಾದಲ್ಲಿ ಈ ವರೆಗೆ ಯಾವುದೇ ದೂರು ಬಂದಿಲ್ಲವಂತೆ??
11) ಮೇಲಾಗಿ ಹೈದರಾಬಾದಿನಲ್ಲಿಯೇ ನಾಯ್ಡುರವರ ದೊಡ್ಡ ‘ಹೆರಿಟೇಜ್ ಫುಡ್ಸ್’ ಡೇರಿ ಇದ್ದು, ಅಲ್ಲಿಯೇ ತಮ್ಮ ಡೇರಿ ಉತ್ಪನ್ನಗಳ ಪರೀಕ್ಷೆಯನ್ನು ಮಾಡಿಸಿ ಆರು ತಿಂಗಳಿಗೊಮ್ಮೆ ಅವರು ಕಡ್ಡಾಯ ಸರ್ಟಿಫಿಕೇಟ್ ಪಡೆಯುವುದು ತಾನೇ?. ಇದಕ್ಕೆಲ್ಲ ಉತ್ತರ ಕೊಡದೆ ಜನರನ್ನು ಅವರಿಗೆ ಅರಿವಾಗದಂತೆ ಸಾಂಪ್ರದಾಯಿಕ ದಳ್ಳುರಿಗೆ ದೂಡಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿದ್ದಾರೆಯೇ ನಾಯ್ಡು?
12) ನಾಯ್ಡುರವರ ಕಟ್ಟಾ ರಾಜಕೀಯ ವೈರಿ ವೈಎಸ್‌ಆರ್ ಕಾಂಗ್ರೆಸ್ಸಿನ ಜಗನ್ ರೆಡ್ಡಿ ಈಗಲೂ ಬಿಜೆಪಿ ಪಕ್ಷದ ಎನ್‌ಡಿಎ ಗುಂಪಿನ ಸದಸ್ಯರೆ ಆಗಿದ್ದು ಕೇಂದ್ರ ಸರಕಾರದ ಎನ್‌ಡಿಎ ಭಾಗವಾಗಿದ್ದಾರೆ. ಜಗನ್ ರವರ ನವಯುಗ ಕನ್ಸ್ಟ್ರಕ್ಷನ್ ಕಂಪನಿ ಮತ್ತು ಕಾಕಿನಾಡ ಬಂದರು ಗೌತಮ್ ಅಡಾಣಿಯ ಸುಪರ್ದಿಗೆ ಹೋಗಿ ಕೆಲವು ವರ್ಷಗಳಾದವು. ಅದ್ಯಾವ ಒತ್ತಡದಿಂದ ಜಗನ್ ರೆಡ್ಡಿ ಇವನ್ನೆಲ್ಲಾ ಅದಾನಿಯ ಮಡಿಲಿಗೆ ಹಾಕಿದರು? ಉತ್ತರ ಯಾರಿಗೂ ಗೊತ್ತಿಲ್ಲ.
13) ಎನ್‌ಡಿಎ ಗುಂಪಿನ ಜಗನ್ ರೆಡ್ಡಿ ಮತ್ತು ಎನ್‌ಡಿಎ ಸಹವರ್ತಿ ನಾಯ್ಡು ಇಬ್ಬರೂ ಈಗ ತಿರುಪತಿ ಲಾಡು ವಿಷಯದಲ್ಲಿ ಸತ್ಯವನ್ನು ಹೇಳದೇ ಮುಗ್ಧ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ತಾವು ದನದ ಮಾಸ ಹಂದಿ ಮಾಂಸ ಮೀನಿನ ಎಣ್ಣೆ/ಕೊಬ್ಬು ಇದ್ದ ಲಾಡು ತಿಂದು ತಮ್ಮ ಜಾತಿ ಕೆಟ್ಟು ಹೋಯಿತಲ್ಲಾ ಎಂದು ಕೋಟ್ಯಂತರ ಮುಗ್ಧ ಭಕ್ತರು ಪರಿತಪಿಸುವಂತೆ ಮಾಡಲಾಯಿತು. ಈ ವಿಷಯ ಇಷ್ಟೊಂದು ಗಂಭೀರವಾಗಿದ್ದರೂ ನಾಯ್ಡು ಸರಕಾರ ಒಂದು ಪತ್ರಿಕಾಗೋಷ್ಠಿ ಸಹಾ ಈವರೆಗೆ ಮಾಡಲಿಲ್ಲ. ದೇವಸ್ಥಾನದ ಆಡಳಿತ ಮಂಡಳಿ ಸಹ ಇಂತಹಾ ಗಂಭೀರ ವಿಷಯವನ್ನು ಹಗುರವಾಗಿ ಪರಿಗಣಿಸಿ ಬೇಕೆಂದೆ ಬಾಯಿ ಮುಚ್ಚಿ ಕೂತಿರುವಂತಿದೆ. ಸಮಯಸಾಧಕ ಸಂಘ ಪರಿವಾರದವರು ಹಾಗೂ ಗೋದಿ ಮೀಡಿಯಾಗಳು ಮಾತ್ರ- ‘ಯಾರ ಹೆಣಬಿದ್ದರೂ ಅದು ನಮಗೇ ಆಹಾರ ತಾನೇ’ ಎನ್ನುವ ರಣಹದ್ದಿನ ನೀತಿಯಂತೆ ಮೂಲಭೂತವಾದಿಗಳು ಹೊತ್ತಿಸಿರುವ ಬೆಂಕಿಗೆ ಗುಜರಾತಿನ ತುಪ್ಪ ಸುರಿಯುತ್ತಿದ್ದಾರೆ, ಹಾಗೂ ತಮಗೆ ಬೇಕಾದಂತೆ ಊಹಿಸಿ- ತಿರುಚಿ ನೆಗೆಟಿವ್ ಸುದ್ದಿಗಳನ್ನು ಮಾತ್ರ ಹರಡುತ್ತಿದ್ದಾರೆ. ಕೇಂದ್ರದ ಬಿಜೆಪಿ ಸರಕಾರ ದೂರದಿಂದ ನೋಡುತ್ತಾ ವಿಕೃತ ಆನಂದ ಪಡೆಯುತ್ತಿದೆ. ಯಾವುದಾದರೂ ಜಿಹಾದಿ ಅಬ್ದುಲ್ಲನನ್ನು ಅಥವಾ ಕ್ರೈಸ್ತ ಮಿಷಿನರಿಯನ್ನು ಇಲ್ಲಿ ಸಿಕ್ಕಿಸಲು ಸಾಧ್ಯವೇ ಎಂದು ಕೋಮುವಾದಿ ಮೀಡಿಯಾಗಳಿಂದ ಪ್ರಯತ್ನ ನಡೆದಿದೆ. “ಸತ್ಯ ನಮ್ಮಿಂದ ನೆರೆಮನೆಗೆ ಹರಡುವುದರೊಳಗೆ ಸುಳ್ಳು ಊರಿಡಿ ಸುತ್ತಿ ಬಂದಿರುತ್ತದೆ” ಎಂಬ ಹಳೆಯ ಗಾದೆ ಇದೆ ತಾನೇ?.
ಎಲ್ಲಾ ಡೇರಿಯವರು ಸಾಕುವುದು ಜರ್ಸಿ ಹಸುಗಳನ್ನು. ಅವುಗಳನ್ನು ವಿಶೇಷ ಮುತುವರ್ಜಿ ವಹಿಸಿ ಸಾಕದಿದ್ದರೆ ಅವು ರೋಗ ಬಂದು ಬೇಗ ಸತ್ತು ಹೋಗುತ್ತವೆ. ತಿಂಗಳಿಗೆರಡು ಬಾರಿ ಜರ್ಸಿ ದನಗಳಿಗೆ ನಿರ್ದಿಷ್ಟ ಔಷಧಿ ಇಂಜೆಕ್ಷನ್ ಕೂಡ ಕೊಡುತ್ತಿರ ಬೇಕಾಗುತ್ತದೆ. ಅವುಗಳ ಮೇವು ಕೂಡಾ ದೇಶಿ ದನಗಳಿಗಿಂತ ಬೇರೆಯಾದದ್ದು. ಜರ್ಸಿ ಹಸುಗಳ ಆಹಾರದಲ್ಲಿ ಹಸಿರು ಹುಲ್ಲಿನ ಜತೆ ಒಣ ಮೀನಿನ ಹಿಂಡಿ ಪ್ರಾಣಿಜನ್ಯ ಪಶು ಆಹಾರ ಕೂಡ ಇರುತ್ತದೆಯಂತೆ. ಈ ಮೂಲಕ ದನಗಳ ಹೊಟ್ಟೆ ಸೇರಿದ ಪಶು ಔಷಧ ಮತ್ತು ಪಶು ಆಹಾರದ ಪರಿಣಾಮವು ಜರ್ಸಿ ದನಗಳ ಹಾಲಿನ ಮೂಲಕ ಕಂಡು ಬರುವುದು ಸಾಮಾನ್ಯ.
ಎಷ್ಟೇ ಆಧುನಿಕ ಡೇರಿ ಮತ್ತು ಉತ್ತಮ ಆಡಳಿತವಿದ್ದರೂ ಹಸುವಿನ ಹಾಲಿನ ಶುದ್ಧ ತುಪ್ಪವನ್ನು ಲೀಟರಿಗೆ ರೂ.600 ಕ್ಕಿಂತ ಕಡಿಮೆ ಬೆಲೆಗೆ ಮಾರಲು ಸಾಧ್ಯವೇ ಇಲ್ಲ ಎಂದು ಎಲ್ಲಾ ಪ್ರಾಮಾಣಿಕ ಡೇರಿ ಮಾಲಕರು ಹೇಳುತ್ತಾರೆ. ಎಮ್ಮೆ ಹಾಲಿನ ತುಪ್ಪವನ್ನೂ ಲೀಟರಿಗೆ ರೂ.550 ಕ್ಕಿಂತ ಕಡಿಮೆ ಬೆಲೆಗೆ ಕೊಡುವುದು ಸಾಧ್ಯವಿಲ್ಲ. ಹಾಗಿರುವಾಗ ತಮಿಳುನಾಡಿನ ಖಾಸಗಿ ಡೇರಿಯು ಹಸುವಿನ ತುಪ್ಪವನ್ನು ಲೀಟರ್ ಗೆ ರೂ.320 ಕ್ಕೆ ಕೊಡಲು ಹೇಗೆ ಸಾಧ್ಯ ಎಂದು ಎಲ್ಲರೂ ಕೇಳುತ್ತಿರುವ ಮೂಲ ಪ್ರಶ್ನೆ. ಹಸುಗಳಿಗೆ ಅಗತ್ಯಕ್ಕಿಂತ ಕಡಿಮೆ ಆಹಾರ ಕೊಟ್ಟರೂ ಅವುಗಳದೇ ದೇಹದ ಕೊಬ್ಬು ಕರಗಿ ಅದು ಹಾಲಿನಲ್ಲಿ ಸೇರುತ್ತದೆ ಎನ್ನುತ್ತಾರೆ ಪಶುವೈದ್ಯರು. ಅದು ಬೀಫ್ ಕೊಬ್ಬಿನಂತೆ ಕಾಣಿಸುತ್ತದೆಯಂತೆ. ಈ ಕುರಿತು ಗುಜರಾತ್ ಲ್ಯಾಬ್ ಯಾಕೆ ಸ್ಪಷ್ಟನೆ ಕೊಟ್ಟಿಲ್ಲ?
ಆಂಧ್ರದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ 11 ದಿನಗಳ ಕಾಲ ಗೋವಿನ ಮೂತ್ರ-ಸೆಗಣಿ ಸೇರಿಸಿದ ಪಂಚಗವ್ಯ ಸೇವಿಸಿ ಪ್ರಾಯಶ್ಚಿತ ಮಾಡುವುದಾಗಿ ನಾಟಕೀಯ ಹೇಳಿಕೆ ಕೊಟ್ಟಿದ್ದಾರೆ. ಆದರೆ ಈ ವಿಷಯದಲ್ಲಿ ಮಾತ್ರ ಸಿಬಿಐ ತನಿಖೆಗೆ ಆದೇಶ ಕೊಟ್ಟಿಲ್ಲ ಯಾಕೆ? ಅವರು ಯಾವ ಸೀಮೆ ಉಪಮುಖ್ಯಮಂತ್ರಿ? ಈ ವಿಷಯದಲ್ಲಿ ಬಲಪಂಥೀಯ ಐಟಿ ಸೆಲ್ ಮತ್ತು ಗೋದಿ ಮೀಡಿಯಾದ ದಿಢೀರ್ ಚಟುವಟಿಕೆ ನೋಡಿ ಜನರು ಎಚ್ಚೆತ್ತುಕೊಂಡು ಇದೆಲ್ಲಾ ಯಾವುದೋ ದೂರಗಾಮಿ ದುರುದ್ದೇಶಕ್ಕಾಗಿ ಎಬ್ಬಿಸಿರುವ ಧೂಳು, ಹಾಗಾಗಿ ಈ ವಿಷಯವನ್ನು ನಾಟಕೀಯವಾಗಿ ತಿರುಚಿ ಜನರಿಗೆ ಉಣಬಡಿಸಲಾಗುತ್ತಿದೆ ಎಂಬುದನ್ನು ನಾವು ಅರಿತುಕೊಳ್ಳಬೇಕಿದೆ.
ಪ್ರವೀಣ್ ಎಸ್ ಶೆಟ್ಟಿ, ಮಂಗಳೂರು
ಸಂಸ್ಕೃತಿ ಚಿಂತಕರು
ಇದನ್ನೂ ಓದಿ- ದೇವಸ್ಥಾನಗಳ ಸ್ವಾಯತ್ತದತ್ತ ಪುರೋಹಿತಶಾಹಿ ಚಿತ್ತ