ಚಿಕ್ಕಮಗಳೂರು: 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ ಮಾಡಿ ಅದಕ್ಕೆ ಪಾಕ್ ಸೇನೆಯ ಹಾಡು ಹಾಕಿ ಇನ್‌ಸ್ಟಾಗ್ರಾಂನಲ್ಲಿ ರೀಲ್ ಪೋಸ್ಟ್ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರಿನ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲಾಗಿದೆ. 7 ಮಂದಿಯ ವಿಚಾರಣೆ ನಡೆಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಈದ್ ಮಿಲಾದ್ ಪ್ರಯುಕ್ತ ಮುಸ್ಲಿಂ ಯುವಕರು 40 ಅಡಿ ಎತ್ತರದ ಟಿಪ್ಪು ಸುಲ್ತಾನ್ ಕಟೌಟ್ ಹಾಕಿದ್ದಾರೆ. ಕಟೌಟ್ ವಿಡಿಯೋ ಮಾಡಿ ಅದಕ್ಕೆ ಪಾಕ್ ಸೇನೆ ಮುಜಾಹಿದ್ ಹಾಡು ಬಳಸಿ ರೀಲ್ಸ್ ಮಾಡಿ ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್ ಎಂಬ ಅಕೌಂಟ್ ನಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಟ್ಟಿದ್ದಾರೆ.
ವಿಡಿಯೋವನ್ನು ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮುಸ್ಲಿಂ ಯುವಕರು ಹಂಚಿಕೊಂಡಿದ್ದಾರೆ. ಈ ಹಿನ್ನಲೆ ಚಿಕ್ಕಮಗಳೂರು ನಗರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಧನರಾಜ್ ಚಿಕ್ಕಮಗಳೂರು ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಟಿಪ್ಪು ಸುಲ್ತಾನ್ ಕಟೌಟ್‌ಗಳ ವಿಚಾರ: ಕಠಿಣ ಕ್ರಮ ಕೈಗೊಳ್ಳಲಿ
ಚಿಕ್ಕಮಗಳೂರು ನಗರದಲ್ಲಿ ಟಿಪ್ಪು ಸುಲ್ತಾನ್ ಅವರ ಸುಮಾರು 40 ಕಟೌಟ್‌ಗಳನ್ನು ಹಾಕಿರುವ ಪ್ರಕರಣದ ಕುರಿತು ಕೂಡ ಬಿ.ವೈ. ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
“ಈ ರಾಜ್ಯದಲ್ಲಿ ಕಾನೂನು ಇದೆಯೇ? ಗೃಹ ಸಚಿವರು ಇದ್ದಾರೆಯೇ? ದೇಶದ್ರೋಹದಂತಹ ಕೃತ್ಯಗಳಿಗೆ ಮುಂದಾಗುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಕಾನೂನು ಉಲ್ಲಂಘಿಸುವವರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವ ತಾಕತ್ತನ್ನು ಸರ್ಕಾರ ತೋರಿಸಬೇಕು” ಎಂದು ಅವರು ಸವಾಲು ಹಾಕಿದರು.
ರಾಜ್ಯದ ಯಾವುದೇ ಭಾಗದಲ್ಲೂ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು. ಕಾನೂನು ಸುವ್ಯವಸ್ಥೆಯ ವಿಚಾರದಲ್ಲಿ ಸರ್ಕಾರ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಬಾರದು ಎಂದು ಹೇಳಿದರು.
“ಜನರಲ್ಲಿ, ವಿಶೇಷವಾಗಿ ಹಿಂದೂ ಸಮಾಜದಲ್ಲಿ ಸರ್ಕಾರದ ಬಗ್ಗೆ ನಂಬಿಕೆ ಮೂಡಬೇಕಾದರೆ ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಬಂಧಿಸಿದ ಬಳಿಕ ಅವರು ಸುಲಭವಾಗಿ ಜಾಮೀನಿನ ಮೇಲೆ ಹೊರಗೆ ಬರುವಂತಾಗಬಾರದು. ಕಾನೂನು ತನ್ನ ಕೆಲಸವನ್ನು ಕಠಿಣವಾಗಿ ಮಾಡಬೇಕು” ಎಂದು ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಬಿ.ವೈ. ವಿಜಯೇಂದ್ರ ಸವಾಲು ಹಾಕಿದರು.

