ಕಾಂಗ್ರೆಸ್ ಮತ್ತು ಜನತಾದಳ ಸರ್ಕಾರಗಳ ಅವಧಿಯಲ್ಲಿ ಅನೇಕ ಮುಸಲ್ಮಾನ ಮುಖಂಡರು ಸಚಿವರಾಗಿ ಕರ್ತವ್ಯ ನಿಭಾಯಿಸಿದ್ದಾರೆ. ಅವರೆಲ್ಲರಿಗೂ ತಮ್ಮ ಸಾಂವಿಧಾನಿಕ ಹುದ್ದೆಯ ಅರಿವಿತ್ತು. ಯಾರೊಬ್ಬರೂ ವಿವಾದಗಳನ್ನು ಹುಟ್ಟು ಹಾಕಿರಲಿಲ್ಲ. ಅವಕಾಶ ಕೊಟ್ಟ ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಗೋಜಿಗೆ ಹೋಗಿರಲಿಲ್ಲ. ಆದರೆ ಜಮೀರ್ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ – ಎಚ್.ಮಾರುತಿ, ಹಿರಿಯ ಪತ್ರಕರ್ತರು.
ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಅವರು ಒಂದಲ್ಲ ಒಂದು ಅವಾಂತರಗಳನ್ನು ಸೃಷ್ಟಿಸಿ ತಾವಷ್ಟೇ ಮುಜುಗರಕ್ಕೀಡಾಗದೆ ಸರ್ಕಾರ ಮತ್ತು ಪಕ್ಷವನ್ನೂ ಇಕ್ಕಟ್ಟಿಗೆ ಸಿಲುಕಿಸುತ್ತಲೇ ಬಂದಿದ್ದಾರೆ. ಆರ್ಥಿಕ ಮುಗ್ಗಟ್ಟಿನ ನಡುವೆಯೂ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ನೀಡಿ ರಾಜ್ಯದ ಜನತೆಯ ವಿಶ್ವಾಸವನ್ನು ಗಳಿಸಿಕೊಂಡಿತ್ತು. ಜಮೀರ್ ಅವರಿಂದಾಗಿ ಇದೀಗ ಎಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಜಮೀರ್ ಅವರನ್ನು ಸಹಿಸಿಕೊಂಡಿದ್ದು ಸಾಕು, ಕೂಡಲೇ ಅವರನ್ನು ಸಚಿವ ಸ್ಥಾನದಿಂದ ಕೈ ಬಿಡಿ ಎಂದು ಪಕ್ಷದ ಮುಖಂಡರು, ಕೆಪಿಸಿಸಿ ಅಧ್ಯಕ್ಷ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಪಕ್ಷದ ಉಪಾಧ್ಯಕ್ಷ ಎ.ಆರ್.ಎಂ. ಹುಸೇನ್ ಅವರು ಈ ಪತ್ರ ಬರೆದಿದ್ದು, ಪಕ್ಷ ಮತ್ತು ಸರ್ಕಾರಕ್ಕೆ ನಿರಂತರವಾಗಿ ಹಾನಿ ಮಾಡುತ್ತಲೇ ಬಂದಿರುವ ಜಮೀರ್ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹ ಪಡಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ವಕ್ಫ್ ವಿಷಯದಲ್ಲಿ ಸರ್ಕಾರಕ್ಕೆ ಸಾಕಷ್ಟು ಹಾನಿಯುಂಟಾಗಿದೆ.
ಬೇರೆಯವರು ಹೇಳುವುದೇನು? ಇತ್ತೀಚೆಗಷ್ಟೇ ಮುಗಿದ ಚನ್ನಪಟ್ಟಣ ಉಪ ಚುನಾವಣೆ ಸಂದರ್ಭದಲ್ಲಿ ಜಮೀರ್ ಆಡಿದ ಮಾತುಗಳಿಂದ ಹಾನಿಯಾಗಿದೆ ಎಂದು ಕೈ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರು ಅಲವತ್ತುಕೊಂಡಿದ್ದರು. ಜಮೀರ್ ಅವರ “ಕರಿಯ ಕುಮಾರಸ್ವಾಮಿ” ಹೇಳಿಕೆಯಿಂದ ಸಾಕಷ್ಟು ಹಾನಿಯಾಗಿದೆ ಎಂದು ಬಹಿರಂಗವಾಗಿಯೇ ಹೇಳಿದ್ದರು.
ಸಚಿವರಾಗಿ ಮುಂದುವರೆಯುವ ಯಾವ ಅರ್ಹತೆಯೂ ಜಮೀರ್ ಗೆ ಇಲ್ಲ. ಅವರಿಂದ ಪಕ್ಷ ಮತ್ತು ಸರ್ಕಾರಕ್ಕೆ ಹಾನಿಯಾಗುತ್ತಿದೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರು ಸರ್ಕಾರ ಮತ್ತು ಪಕ್ಷವನ್ನು ಮುನ್ನಡೆಸಲು ಶ್ರಮಿಸುತ್ತಿದ್ದರೆ ಜಮೀರ್, ತಮ್ಮ ಅನಾಗರೀಕ ಹೇಳಿಕೆಗಳಿಂದ ಮತ್ತು ವಿವಾದಗಳಿಂದ ಇಡೀ ವಾತಾವರಣವನ್ನು ಹಾಳುಗೆಡವುತ್ತಿದ್ದಾರೆ ಎಂದು ಹುಸೇನ್ ಪತ್ರದಲ್ಲಿ ವಿವರಿಸಿದ್ದಾರೆ.
ಒಂದು ವೇಳೆ ಉಪ ಚುನಾಣೆಯಲ್ಲಿ ಹಿನ್ನಡೆಯಾದರೆ ಅದಕ್ಕೆ ಜಮೀರ್ ಅವರು ಹುಟ್ಟು ಹಾಕಿದ ವಿವಾದಗಳೇ ಕಾರಣ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಆದ್ದರಿಂದ ಜಮೀರ್ ಮಾತ್ರವಲ್ಲ, ಜಮೀರ್ ಅಂತಹವರನ್ನು ಪ್ರೋತ್ಸಾಹಿಸಲೇಬಾರದು ಎಂದು ಒತ್ತಾಯಿಸಿದ್ದಾರೆ. ಅದರಲ್ಲೂ ವಕ್ಫ್ ನೋಟಿಸ್ ವಿಷಯದಲ್ಲಂತೂ ಇಡೀ ಒಂದು ಸಮುದಾಯವೇ ಕಾಂಗ್ರೆಸ್ ಸರ್ಕಾರವನ್ನು ಅನುಮಾನದಿಂದ ನೋಡುವಂತಾಗಿದೆ.
ಚುನಾವಣೆಯ ಸಂದರ್ಭದಲ್ಲಿ ಜಮೀರ್, ಇಡೀ ಮುಸ್ಲಿಂ ಸಮುದಾಯ ಚಂದಾ ಎತ್ತಿ ಮಾಜಿ ಪ್ರಧಾನಿ ದೇವೇಗೌಡ ಅವರ ಕುಟುಂಬವನ್ನು ಖರೀದಿಸುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಲ್ಲದೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಬಣ್ಣ ಕುರಿತು ಕರಿಯಾ ಎಂದು ಜರಿದಿದ್ದರು. ನಂತರ ಆ ಹೇಳಿಕೆಗೆ ತೇಪೆ ಹಚ್ಚಲು ಪ್ರಯತ್ನಿಸಿದ್ದರಾದರೂ ಹಾನಿ ಉಂಟಾಗಿದ್ದಂತೂ ಸುಳ್ಳಲ್ಲ. ಈ ಹಿಂದೆಯೂ 25 ಕ್ಕೂ ಹೆಚ್ಚು ಶಾಸಕರು ಮತ್ತು ಪಕ್ಷದ ಅನೇಕ ಮುಖಂಡರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಧ್ಯೆ ಪ್ರವೇಶಿಸಿ ವಕ್ಫ್ ವಿವಾದವನ್ನು ಬಗೆಹರಿಸುವಂತೆ ಕೋರಿದ್ದರು. ಖರ್ಗೆ ಅವರ ಮಧ್ಯ ಪ್ರವೇಶದಿಂದಾಗಿಯೇ ರೈತರಿಗೆ ನೀಡಿದ್ದ ನೋಟಿಸ್ ಗಳನ್ನು ಹಿಂಪಡೆಯಲಾಗಿದೆ. ಆದರೂ ಈ ವಿವಾದ ತಣ್ಣಗಾಗಿಲ್ಲ. ಬಿಜೆಪಿ ದಿನಂಪ್ರತಿ ಜೀವಂತವಾಗಿಡಲು ಪ್ರಯತ್ನ ನಡೆಸುತ್ತಲೇ ಇದೆ.
ವಕ್ಫ್ ಆಸ್ತಿ ವಿಷಯದಲ್ಲಿ ರಾಜ್ಯದ ಉದ್ದಗಲಕ್ಕೂ ರೈತರು, ಮಠ ಮಂದಿರಗಳು ಶಾಲಾ ಕಟ್ಟಡಗಳಿಗೂ ನೋಟಿಸ್ ನೀಡುತ್ತಿರುವುದರಿಂದ ಸರ್ಕಾರಕ್ಕೆ ಸಾಕಷ್ಟು ಹಿನ್ನಡೆಯಾಗಿದೆ. ಬಿಜೆಪಿ ಕೈಗೆ ಪ್ರಬಲ ಅಸ್ತ್ರವನ್ನು ಸರ್ಕಾರವೇ ಕೊಟ್ಟಂತಾಗಿದೆ. ಮುಂಬರುವ ತಾಲೂಕು, ಜಿಲ್ಲಾ ಪಂಚಾಯತ್ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗಳವರೆಗೂ ಈ ವಿಷಯವನ್ನು ಬಿಜೆಪಿ ಜೀವಂತವಾಗಿಡುವುದರಲ್ಲಿ ಸಂಶಯವೇ ಇಲ್ಲ.
ರಾಜಕೀಯ ಪ್ರವೇಶ ಪಡೆದ ದಿನದಿಂದಲೂ ವಿವಾದಾತ್ಮಕ ಹೇಳಿಕೆಗಳಿಗೆ ಇವರು ಗಮನ ಸೆಳೆಯುತ್ತಿದ್ದಾರೆ. ಕಳೆದ ವರ್ಷ ನವಂಬರ್ ನಲ್ಲಿ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು ಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ನಮಸ್ಕಾರ ಹೊಡೆಯಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿ ನಂತರ ಕ್ಷಮೆ ಯಾಚಿಸಿದ್ದರು. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ವಿರುದ್ಧವೂ ವಿವಾದಾತ್ಮಕ ಹೇಳಿಕೆ ನೀಡಿದ್ದರು, ಇವರ ಹೇಳಿಕೆ ಕುರಿತು ಕ್ರಮಕ್ಕೆ ರಾಜ್ಯಪಾಲರು ಅಡ್ವೋಕೇಟ್ ಜನರಲ್ ಗೆ ಪತ್ರ ಬರೆದಿದ್ದಾರೆ.
2022ರಲ್ಲಿ ರಾಜ್ಯದ ಒಕ್ಕಲಿಗರಿಗಿಂತಲೂ ಮುಸಲ್ಮಾನರ ಸಂಖ್ಯೆಯೇ ಹೆಚ್ಚು ಎಂದು ಹೇಳಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು. ಈ ಹಿಂದೆ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಅವರ ಜಗಳ ತಾರಕಕ್ಕೇರಿದ್ದಾಗ ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಅವರ ಮನೆಯ ವಾಚ್ ಮನ್ ಆಗುವೆ ಎಂದು ಹೇಳುವ ಮೂಲಕ ಗಮನ ಸೆಳೆದಿದ್ದರು.
ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಇವರ ರಾಜಕೀಯ ಜೀವನ ಆರಂಭವಾಗಿದ್ದೇ ಜೆಡಿಎಸ್ ನಿಂದ. ಎರಡು ದಶಕಗಳ ಹಿಂದೆ ಜಮೀರ್ ಅವರಿಗೆ ಚುನಾವಣಾ ರಾಜಕೀಯವನ್ನು ಪರಿಚಯಿಸಿದ್ದು ಕುಮಾರಸ್ವಾಮಿ ಅವರೇ. 2005ರಲ್ಲಿ ಚಾಮರಾಜಪೇಟೆಯಿಂದ ಆಯ್ಕೆಯಾಗಿದ್ದ ಎಸ್.ಕೃಷ್ಣ ಅವರು ಮಹಾರಾಷ್ಟ್ರ ರಾಜ್ಯಪಾಲರಾಗಿ ಆಯ್ಕೆಯಾದ ನಂತರ ರಾಜೀನಾಮೆ ನೀಡಿದ್ದರು. ಆಗ ನಡೆದ ಉಪ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಜಮೀರ್ ಅವರನ್ನು ಕರೆ ತಂದು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದ್ದರು.
2006ರಲ್ಲಿ ಮುಖ್ಯಮಂತ್ರಿ ಎನ್. ಧರಂಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರದಿಂದ ಜೆಡಿಎಸ್ ಹೊರಬಂದಿತ್ತು. ಆಗ ಜಮೀರ್ ಜೆಡಿಎಸ್ ಶಾಸಕರನ್ನು ಖಾಸಗಿ ಹೋಟೆಲ್ ನಿಂದ ತಮ್ಮ ಒಡೆತನದ ನ್ಯಾಶನಲ್ ಟ್ರಾವಲ್ಸ್ ಬಸ್ ನಲ್ಲಿ ರೆಸಾರ್ಟ್ ಗೆ ಕರೆದೊಯ್ದಿದ್ದರು. ಈ ಮೂಲಕ ಜಮೀರ್ ತಾನು ಯಾರು ಎಂದು ಇಡೀ ರಾಜ್ಯವೇ ತಿರುಗಿ ನೋಡುವಂತೆ ಮಾಡಿದ್ದರು.
ಮೂರು ಬಾರಿ ಜೆಡಿಎಸ್ ನಿಂದ ಮತ್ತು ಎರಡು ಬಾರಿ ಕಾಂಗ್ರೆಸ್ ನಿಂದ ಇವರು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ನಲ್ಲೂ ಇವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆ ಗುರುತಿಸಿಕೊಂಡಿದ್ದಾರೆ.
ಶಿವಕುಮಾರ್ ಅವರಿಗೂ ಜಮೀರ್ ಅವರಿಗೂ ಅಷ್ಟಕ್ಕಷ್ಟೇ. ಮುಖ್ಯಮಂತ್ರಿ ಹುದ್ದೆ ವಿಷಯ ಬಂದಾಗ ಜಮೀರ್ ಸಿದ್ದರಾಮಯ್ಯ ಪರ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದರು. ಇದರಿಂದ ಇಬ್ಬರ ಸಂಬಂಧ ಹಳಸಿದೆ. ಇವರನ್ನು ಸಂಪುಟದಿಂದ ಕೈಬಿಡಲು ಶಿವಕುಮಾರ್ ಹೈಕಮಾಂಡ್ ಮೇಲೆ ಒತ್ತಡ ಹೇರಿದರೂ ಅಚ್ಚರಿಯಿಲ್ಲ.
ರಾಜ್ಯದ ಅನೇಕ ಮುಸ್ಲಿಂ ಮುಖಂಡರು ರಾಜ್ಯ ಮತ್ತು ಕೇಂದ್ರದಲ್ಲಿ ಮಹತ್ವದ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅಬ್ದುಲ್ ನಸೀರ್ ಸಾಬ್, ಮಾಜಿ ಕೇಂದ್ರ ಸಚಿವ ಜಾಫರ್ ಷರೀಫ್, ಮಾಜಿ ರಾಜ್ಯಸಭಾ ಉಪಾಧ್ಯಕ್ಷ ಕೆ.ರೆಹಮಾನ್ ಖಾನ್ ತಮ್ಮದೇ ಆದ ರೀತಿಯಲ್ಲಿ ರಾಜ್ಯಕ್ಕೆ ಕೊಡುಗೆ ನೀಡಿದ್ದಾರೆ. ಎಂಭತ್ತರ ದಶಕದಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದ ನಸೀರ್ ಸಾಬ್ ಅವರು ಇಡೀ ರಾಜ್ಯಕ್ಕೆ ಕುಡಿಯುವ ನೀರು ಪೂರೈಕೆ ಮಾಡಲು ಅಪಾರ ಶ್ರಮವಹಿಸಿದ್ದರು. ಹಾಗಾಗಿ ಇವರನ್ನು ಗ್ರಾಮೀಣ ಕರ್ನಾಟಕದ ಜನ ನೀರ್ ಸಾಬ್ ಎಂದೇ ಕರೆಯುತ್ತಾರೆ. ಕೇಂದ್ರ ಸರ್ಕಾರದಲ್ಲಿ ರೈಲ್ವೇ ಸಚಿವರಾಗಿದ್ದ ಜಾಫರ್ ಷರೀಫ್ ಅವರು ದೇಶ ಮತ್ತು ರಾಜ್ಯದ
ರೈಲ್ವೇ ಅಭಿವೃದ್ಧಿಗೆ ನೀಡಿರುವ ಗಮನಾರ್ಹ ಕೊಡುಗೆಯನ್ನು ಮರೆಯಲು ಸಾಧ್ಯವೇ ಇಲ್ಲ. ಕಾಂಗ್ರೆಸ್ ಮತ್ತು ಜನತಾದಳ ಸರ್ಕಾರಗಳ ಅವಧಿಯಲ್ಲಿ ಅನೇಕ ಮುಸಲ್ಮಾನ ಮುಖಂಡರು ಸಚಿವರಾಗಿ ಕರ್ತವ್ಯ ನಿಭಾಯಿಸಿದ್ದಾರೆ. ಅವರೆಲ್ಲರಿಗೂ ತಮ್ಮ ಸಾಂವಿಧಾನಿಕ ಹುದ್ದೆಯ ಅರಿವಿತ್ತು. ಯಾರೊಬ್ಬರೂ ವಿವಾದಗಳನ್ನು ಹುಟ್ಟು ಹಾಕಿರಲಿಲ್ಲ. ಅವಕಾಶ ಕೊಟ್ಟ ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಗೋಜಿಗೆ ಹೋಗಿರಲಿಲ್ಲ. ಆದರೆ ಜಮೀರ್ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಸಿಎಂ, ಡಿಸಿಎಂ ಮತ್ತು ಹೈಕಮಾಂಡ್ ಇವರನ್ನು ನಿಯಂತ್ರಿಸಲು ಕ್ರಮ ವಹಿಸಿ ಪಕ್ಷ ಮತ್ತು ಸರ್ಕಾರ ಗೌರವವನ್ನು ಉಳಿಸಿಕೊಳ್ಳಲಿದೆಯೇ ? ಕಾದು ನೋಡಬೇಕು.
ಎಚ್.ಮಾರುತಿ
ಹಿರಿಯ ಪತ್ರಕರ್ತರು
ಇದನ್ನೂ ಓದಿ- ಮುಸ್ಲಿಂ ಸಮುದಾಯಕ್ಕೆ ತಲೆನೋವಾಗಿರುವ ಸಚಿವ ಝಮೀರ್ ಅಹಮದ್..