ನಗರದಲ್ಲಿ ರಸ್ತೆ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಲು ಸೂಚನೆ: ತುಷಾರ್ ಗಿರಿ ನಾಥ್

Most read

ಬಿಬಿಎಂಪಿ ವ್ಯಾಪ್ತಿಯ ಆರ್ಟಿಯಲ್, ಸಬ್ ಆರ್ಟಿರಿಯಲ್ ಹಾಗೂ ವಾರ್ಡ್ ರಸ್ತೆಗಳಲ್ಲಿ ಬಿದ್ದಿರುವ ರಸ್ತೆ ಗುಂಡಿಗಳನ್ನು ತ್ವರಿತಗತಿಯಲ್ಲಿ ಮುಚ್ಚಲು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿ ಮಳೆ ಮುಂಜಾಗ್ರತಾ ಕ್ರಮ, ರಸ್ತೆ ಗುಂಡಿ ಮುಚ್ಚುವುದು ಸೇರಿದಂತೆ ಇನ್ನಿತರೆ ವಿಷಯಗಳ ಕುರಿತು ವೀಡಿಯೋ ಸಂವಾದದ ಮೂಲಕ ಇಂದು ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಈಗಾಗಲೇ ಮಳೆ ಪ್ರಾರಂಭವಾಗಿದ್ದು, ರಸ್ತೆ ಗುಂಡಿಗಳನ್ನು ಗುರುತಿಸಿ ತ್ವರಿತಗತಿಯಲ್ಲಿ ಮುಚ್ಚಬೇಕೆಂದು ಸೂಚಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಬರುವ 8 ವಲಯಗಳ ವಲಯ ಆಯುಕ್ತರು ರಸ್ತೆ ಗುಂಡಿಗಳು ಬಿದ್ದಿರುವದನ್ನು ಪರಿಶೀಲಿಸಿ ಕೂಡಲೆ ರಸ್ತೆಗುಂಡಿಗಳನ್ನು ಮುಚ್ಚಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ರಸ್ತೆ ಗುಂಡಿಗಳನ್ನು ಮುಚ್ಚುವ ಸಲುವಾಗಿ ಸರಿಯಾಗಿ ಡಾಂಬರು ಮಿಶ್ರಣ ವ್ಯವಸ್ಥೆ ಮಾಡುವ ಏಜೆನ್ಸಿಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಆಯಾ ವಲಯ ವ್ಯಾಪ್ತಿಯಲ್ಲಿ ಎಷ್ಟು ಡಾಂಬರು ಅವಶ್ಯಕತೆಯಿದೆ ಎಂಬುದನ್ನು ಏಜೆನ್ಸಿಗಳಿಗೆ ತಿಳಿಸಿ ಅವಶ್ಯಕ ಡಾಂಬರು ಪಡೆದು ಕೂಡಲೆ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡಬೇಕೆಂದು ತಿಳಿಸಿದರು.

ನಗರದಲ್ಲಿ ಈಗಾಗಲೇ ಮಳೆಯಾಗುತ್ತಿರುವ ಹಿನ್ನೆಲೆ ಡಾಂಬರು ಏಜೆನ್ಸಿಗಳಿಂದ ಹಾಟ್ ಮಿಕ್ಸ್ ಹಾಗೂ ಕೋಲ್ಡ್ ಮಿಕ್ಸ್ ಪಡೆದು ಹಗಲು – ರಾತ್ರಿ ರಸ್ತೆಗುಂಡಿಗಳನ್ನು ಮುಚ್ಚಬೇಕು. ಪಾಲಿಕೆಯ ಹಾಟ್ ಮಿಕ್ಸ್ ಪ್ಲಾಂಟ್ ನಿಂದ ಡಾಂಬರು ಪಡೆದು ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸ ಮಾಡಬೇಕು. ದೋಷಮುಕ್ತ ಅವಧಿಯಲ್ಲಿರುವ(ಡಿಎಲ್‌ಪಿ) ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದರೆ ಸಂಬಂಧಪಟ್ಟ ಗುತ್ತಿಗೆದಾರರಿಂದಲೇ ರಸ್ತೆಗುಂಡಿಗಳನ್ನು ಮುಚ್ಚಿಸಬೇಕೆಂದು ಸೂಚನೆ ನೀಡಿದರು.

ರಸ್ತೆ ಕತ್ತರಿಸದಂತೆ ಕ್ರಮವಹಿಸಿ:

ಮಳೆಗಾಲದ ಹಿನ್ನೆಲೆ ರಸ್ತೆಗಳನ್ನು ಕತ್ತಿರಿಸಿದರೆ ಸಾಕಷ್ಟು ಸಮಸ್ಯೆಯಾಗಲಿದ್ದು, ಆಯಾ ವಲಯ ವ್ಯಾಪ್ತಿಯಲ್ಲಿ ಯಾವುದೇ ಸಂಸ್ಥೆಗಳು ರಸ್ತೆ ಕತ್ತಿರಿಸದಂತೆ ಸೂಕ್ತ ಕ್ರಮವಹಿಸಬೇಕು. ಎಲ್ಲಿಯೂ ಅನಧಿಕೃತವಾಗಿ ಕತ್ತರಿಸದಂತೆ ನಿಗಾವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಜಕಾಲುವೆಗಳಲ್ಲಿ ಸ್ವಚ್ಛತೆ ಕಾಪಾಡಿ:

ನಗರದಲ್ಲಿ ಬರುವ ಪ್ರಥಮ, ದ್ವಿತೀಯ ರಾಜಕಾಲುವೆಗಳಲ್ಲಿ ಸಕ್ರಿಯವಾಗಿ ಹೂಳೆತ್ತುವ ಮೂಲಕ ಸ್ವಚ್ಛತೆ ಕಾಪಾಡಿ ಎಲ್ಲಿಯೂ ನೀರು ನಿಲ್ಲದೆ ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು. ರಾಜಕಾಲುವೆಯಿಂದ ತೆಗೆದ ಹೂಳನ್ನು ಅಲ್ಲಿಯೇ ಬಿಡದೆ ಕೂಡಲೆ ತೆರವುಗೊಳಿಸಬೇಕೆಂದು ಸೂಚಿಸಿದರು. ಜೊತೆಗೆ ರಾಜಕಾಲುವೆ ಒತ್ತುವರಿಗಳನ್ನು ತೆರವುಗೊಳಿಸಲು ಸೂಚನೆ ನೀಡಿದರು.

ಬ್ಲಾಕ್ ಸ್ಪಾಟ್ಸ್ ಗಳನ್ನು ತೆರವುಗೊಳಿಸಿ:

ನಗರದ ರಸ್ತೆ ಬದಿಗಳಲ್ಲಿ ಸಾಕಷ್ಟು ಕಡೆ ಕಸ ಸುರಿಯುವ ಸ್ಥಳ(ಬ್ಲಾಕ್ ಸ್ಪಾಟ್)ಗಳಿದ್ದು, ಘನತ್ಯಾಜ್ಯ ವಿಭಾಗವು ಕೂಡಲೆ ಎಲ್ಲಾ ಕಡೆ ಕಸ ಸುರಿಯುವ ಸ್ಥಳಗಲ್ಲಿ ಸ್ವಚ್ಛತೆ ಮಾಡಿ ಅಲ್ಲಿ ಮತ್ತೆ ಕಸ ಹಾಕದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದರು.

ನಿಯಂತ್ರಣ ಕೊಠಡಿಗಳು ಸರಿಯಾಗಿ ಮೇಲುಸ್ತವಾರಿ ವಹಿಸಿ ಕಾರ್ಯನಿರ್ವಹಿಸಬೇಕು:

ಪಾಲಿಕೆಯ ನಿಯಂತ್ರನ ಕೊಠಡಿಗಳು ಸರಿಯಾಗಿ ಮೇಲುಸ್ತವಾರಿ ವಹಿಸಿ ಕಾರ್ಯನಿರ್ವಹಿಸಬೇಕು. ಮಳೆ ಬೀಳುವ ಸಮಯದಲ್ಲಿ ನಾಗರೀಕರಿಂದ ಪಾಲಿಕೆ ನಿಯಂತ್ರಣ ಕೊಠಡಿಗಳಿಗೆ ಸಾಕಷ್ಟು ದೂರುಗಳು ಬರಲಿದ್ದು, ಬರುವಂತಹ ದೂರುಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರವಾಹ ಪೀಡಿತ ಪ್ರದೇಶಗಳ ಬಳಿ ನಿಗಾವಹಿಸಿ:

ನಗರದಲ್ಲಿ 198 ಪ್ರವಾಹ ಪೀಡಿದ ಪ್ರದೇಶಗಳ ಪೈಕಿ ಈಗಾಗಲೇ 124 ಕಡೆ ಯಾವುದೇ ಸಮಸ್ಯೆಯಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಉಳಿದ 74 ಸ್ಥಳಗಳ ಪೈಕಿ 24 ಕಡೆಯೂ ಯಾವುದೇ ಸಮಸ್ಯೆಯಾಗದಂತೆ ಕ್ರಮವಹಿಸಲಾಗಿದ್ದು, ಉಳಿದ 50 ಸ್ಥಳಗಳಲ್ಲಿ ಯಾವುದೇ ತೊಂದರೆಯಾಗದಂತೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಪ್ರಹ್ಲಾದ್ ರವರು ಸಭೆಯಲ್ಲಿ ಮಾಹಿತಿ ನೀಡಿದರು.

ಈ ವೇಳೆ ಯೋಜನಾ ವಿಭಾಗದ ವಿಶೇಷ ಆಯುಕ್ತರಾದ ಡಾ. ಕೆ. ಹರೀಶ್ ಕುಮಾರ್, ವಿಪತ್ತು ನಿರ್ವಹಣಾ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್, ಎಲ್ಲಾ ವಲಯ ಆಯುಕ್ತರು, ವಲಯ ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಪಾಲ್ಗೊಂಡಿದ್ದರು.

More articles

Latest article