ಬೆಂಗಳೂರು: ನಿನ್ನೆ ಸ್ವಲ್ಪ ಪ್ರಮಾಣದ ಮಳೆಯನ್ನು ನೋಡಿದ್ದ ಬೆಂಗಳೂರಿನಲ್ಲಿ ಇಂದು ಮಧ್ಯಾಹ್ನ ಮೂರು ಗಂಟೆಯಿಂದಲೇ ಮತ್ತೆ ಮಳೆಯ ಸಿಂಚನವಾಯಿತು. ಬೆಂಗಳೂರಿನ ಬನಶಂಕರಿ ವ್ಯಾಪ್ತಿಯಲ್ಲಿ ಹಲವೆಡೆ ಆಲಿಕಲ್ಲು ಮಳೆಯೂ ಆಯಿತು. ಸುಡುಬಿಸಿಲಿನಿಂದ ರೋಸಿ ಹೋಗಿದ್ದ ಉದ್ಯಾನನಗರಿಯ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ರಾಜರಾಜೇಶ್ವರಿ ನಗರ, ನಾಯಂಡಹಳ್ಳಿ, ಉತ್ತರ ಹಳ್ಳಿ ಮತ್ತು ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಇಂದು ಗುಡುಗು ಸಹಿತ ಮಳೆಯಾಯಿತು.
ಸುಮಾರು ಒಂದು ಗಂಟೆಯ ಕಾಲ ಸುರಿದ ಮಳೆಯಿಂದಾಗಿ, ತಾಪಮಾನದಲ್ಲೂ ಇಳಿಕೆಯಾಯಿತು. ಮಳೆಯ ಜೊತೆ ಗಾಳಿಯೂ ಕೂಡ ವೇಗವಾಗಿ ಬೀಸಿದ್ದರಿಂದ ವಾತಾವರಣ ಕೊಂಚ ತಂಪಾಯಿತು.
ಓಲ್ಡ್ ಮದ್ರಾಸ್ ರಸ್ತೆಯ ಬೂದಿಗೆರೆ ಬಳಿ ವೇಗವಾದ ಮಳೆ ಮೋಡಗಳಿಂದಾಗಿ ಮಧ್ಯಾಹ್ನ ಮೂರು ಗಂಟೆಗೇ ಸಂಜೆಯ ಕತ್ತಲಾದಂತೆ ಭಾಸವಾಯಿತು.
ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ಮೋಡ ಕಾಣಿಸಿಕೊಂಡಿದ್ದು, ಬಿಡದಿ, ಮದ್ದೂರು, ರಾಮನಗರ, ಚನ್ನಪಟ್ಟಣಗಳಲ್ಲಿ ಮಳೆ ಆರಂಭಗೊಂಡಿದೆ. ಕನಕಪುರದಲ್ಲೂ ಸಾಕಷ್ಟು ಮಳೆಯಾದ ವರದಿಗಳು ಬಂದಿವೆ.
ಪೀಣ್ಯದಲ್ಲಿ ಭಾರೀ ಮಳೆಯಿಂದಾಗಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥಗೊಂಡಿತ್ತು. ಬಿಟಿಎಂ ಲೇಔಟ್ ನಲ್ಲಿ ಮಳೆ-ಗಾಳಿಯಿಂದಾಗಿ ರಸ್ತೆಗಳು ಖಾಲಿ ಹೊಡೆಯುತ್ತಿದ್ದವು.
ಎಲೆಕ್ಟ್ರಾನಿಕ್ ಸಿಟಿಯಲ್ಲೂ ಮಳೆಯಾದ ವರದಿಗಳು ಬಂದಿದ್ದು, ಮಲ್ಲೇಶ್ವರಂ, ಗಾಂಧಿನಗರಗಳಲ್ಲೂ ಇಂದು ಮಳೆಯಾಗಿದೆ.