Monday, May 20, 2024

ಹಣ ಸಂಪಾದನೆಗೆ ಒತ್ತು ಕೊಡಬೇಕಾದ ದಲಿತ ಸಮುದಾಯದ ಯುವಕರು ಯುವತಿಯರು

Most read

ಒಂದು ಮಾರ್ಗ ಮುಚ್ಚಿದರೆ ಮತ್ತೊಂದು ಮಾರ್ಗ ತೆರೆದೇ ತೆರೆಯುತ್ತದೆ. ಅದಕ್ಕಾಗಿ ಪ್ರಯತ್ನ ಪಡಬೇಕು. ವ್ಯಾಪಾರ ವ್ಯವಹಾರ ಬಿಸಿನೆಸ್ ಉದ್ಯಮಶೀಲತೆ ಎಂದು ಮಾಡಬೇಕು. ಲಾಭವೊ ನಷ್ಟವೊ ಮಾಡಬೇಕು. ಒಮ್ಮೆ ದುಡ್ಡು ಓಡಾಡಿದರೆ ಪ್ರಬಲ ಜಾತಿ ಜನರು ಬಾಲ ಮುದುರಿಕೊಳ್ಳುತ್ತಾರೆ. ದೌರ್ಜನ್ಯ ಮಾಡಲು ಹಿಂದು ಮುಂದು ನೋಡುತ್ತಾರೆರಘೋತ್ತಮ ಹೊ.ಬ

ಮೊನ್ನೆ ಒಬ್ಬ ಯುವಕ ಸಿಕ್ಕಿದ್ದ “ಅಣ್ಯ, ಇಲ್ಲೆ ಪ್ರಸಾದ್ ರವರ ಸಮಾಧಿಗೆ ಬಂದಿದ್ದಿ. ಬಸ್ ಚಾರ್ಜ್ ಬೇಕು ಕಣೈ. ವಾಪಸ್ ಊರಿಗೆ ಹೋಗೋಕೆ” ಅಂದ. ಜೇಬಲ್ಲಿದ್ದ ದುಡ್ಡಲ್ಲಿ ಅವರಿಗೆ ಬಸ್ ಚಾರ್ಜ್ ಎಷ್ಟು ಬೇಕೊ ಅಷ್ಟು ಮಾತ್ರ ಕೊಟ್ಟೆ. ನಂತರ ಅನಿಸಿದ್ದು “ಯುವಕ ಎಲ್ಲದರಲ್ಲೂ ದಷ್ಟ ಪುಷ್ಟ ಇದ್ದ. ನಲವತ್ತರ ಆಸುಪಾಸು. ದುಡಿಯೋಕೆ ಏನ್ ಕಷ್ಟ” ಎಂದು.

ಹೌದು, ದುಡಿಮೆ ಇಂದು ದಲಿತ ಸಮುದಾಯದ ಯುವಕರು ಅಥವಾ ಯುವತಿಯರು ಅಥವಾ ಮಧ್ಯ ವಯಸ್ಕರು ಉದಾಸೀನ ಮಾಡುತ್ತಿರುವ ಕ್ಷೇತ್ರವಿದು. ಅಂದಹಾಗೆ ದುಡಿಮೆ ಅಂದರೆ ಎಲ್ಲಾದರೂ ಕೆಲಸಕ್ಕೆ ಸೇರಿ ಕೆಲಸ ಮಾಡೋದಷ್ಟೆ ಅಲ್ಲ. ವ್ಯಾಪಾರ ವ್ಯವಹಾರ ಕೂಡ ದುಡಿಮೆಯೇ. ಬರೀ ವ್ಯಾಪಾರ ವ್ಯವಹಾರ ಅಷ್ಟೇ ಅಲ್ಲ. ಆನ್ ಲೈನ್ ಆಫ್ ಲೈನ್ ವಿವಿಧ ರೀತಿಯ ಸೇವೆಗಳನ್ನು ನೀಡುವುದು ಕೂಡ ದುಡಿಮೆ. ಇದನ್ನೆಲ್ಲ ಯಾರೂ ಕರೆದು ಕೊಡಲ್ಲ . ಒಂದೈದು ನಿಮಿಷ ಏನಾದರೂ ಮಾಡಬೇಕು ಎಂದು ತಲೆಕೆಡಿಸಿಕೊಂಡರೆ ಬರುತ್ತದೆ. ಪ್ರಬಲ ಜಾತಿಗಳವರನ್ನು ಅವರು ಹಂಗ್ ಮಾಡುದ್ರು ಹಿಂಗ್ ಮಾಡುದ್ರು ಎಂದು ದೂರುವ ಬದಲು ಅವರು ದುಡಿಯುವ ದುಡಿಮೆ ಮಾಡುವ ವ್ಯಾಪಾರ ವ್ಯವಹಾರ ಸಣ್ಣಪುಟ್ಟ ಬಿಸಿನೆಸ್, ಆನ್ ಲೈನ್ ಆಫ್ ಲೈನ್ ಯಾವುದಾದರೂ ಸರಿ ಅನುಕರಿಸಿದರೆ ಸಾಕು ಬರುತ್ತದೆ.

ದುರಂತ ಅಂದರೆ ಬಹುತೇಕ ದಲಿತ ಯುವಕರು ದೊಡ್ಡ ದೊಡ್ಡ ವೈಚಾರಿಕತೆ, ಮನುವಾದ, ಆ ವಾದ ಈ ವಾದ, ದೇಶದ ರಾಜಕೀಯ… ಹೀಗೆ ಮಾತಾಡುತ್ತಾರೆ. ಸಂಜೆಗಂಟ ಅಲ್ಲಿ ಇಲ್ಲಿ ಟೀ ಕುಡಿದು ಕಾಲ ಕಳೆಯುತ್ತಾರೆ. ಆದರೆ ಯಾವುದಾದರೂ ವ್ಯಾಪಾರ ವ್ಯವಹಾರ ಮಾಡಿ ಅಂದರೆ “ಬಂಡವಾಳ?” ಎಂದು ಬಡಿದುಕೊಳ್ಳುತ್ತಾರೆ. ಊರ ಗ್ರಾಮ ಪಂಚಾಯತಿ ಚುನಾವಣೆಗೆ ಲಕ್ಷ ಲಕ್ಷ ಖರ್ಚು ಮಾಡುತ್ತಾರೆ. ಆದರೆ ಅದೇ ದುಡ್ಡನ್ನು ಒಂದು ಸಣ್ಣ ವ್ಯಾಪಾರ ವ್ಯವಹಾರ ಬಿಸಿನೆಸ್ ಮಾಡಲು ಬಳಸಿ ಎಂದರೆ ಮೂಗು ಮುರಿಯುತ್ತಾರೆ. ಖಂಡಿತ, ಹಿಂಗೆ ಆದರೆ ಹೆಂಗೆ? ಸಮುದಾಯದ ಆರ್ಥಿಕ ಅಭಿವೃದ್ಧಿ ಹೆಂಗೆ?

ಸಮುದಾಯದ ಆರ್ಥಿಕ ಅಭಿವೃದ್ಧಿ ಅಂದರೆ ಆ ಸಮುದಾಯದ ಜನಗಳು ಆರ್ಥಿಕವಾಗಿ ಮುಂದೆ ಬರುವುದು ಆಗಿದೆ. ಪ್ರಬಲ ಜಾತಿಯವನ ಮುಂದೆ ಬುದ್ಧಿ ದುಡ್ಡು ಕೊಡಿ, ಟೀ ಕೊಡಿಸಿ, ಊಟ ಕೊಡಿಸಿ ಎಂದು ಗೋಗರೆಯುವುದಲ್ಲ ಅಥವಾ ಅದಕ್ಕಾಗಿ ಅವರ ಹಿಂದೆ ಅಲೆಯುವುದಲ್ಲ. ಬದಲಿಗೆ ನಾವೇ ಅವರಿಗೆ ಊಟ ಕೊಡಿಸುವುದಾಗಿದೆ. ಟೀ ಕುಡಿಸುವುದಾಗಿದೆ. ನೆನಪಿರಲಿ, ಸರ್ಕಾರಿ ನೌಕರಿ ಹಗಲುಗನಸು. ಈ ನಿಟ್ಟಿನಲ್ಲಿ ಸರ್ಕಾರಿ ನೌಕರಿ ಸಿಗುತ್ತಿಲ್ಲ ಅಂತ ಸಮುದಾಯ ಆರ್ಥಿಕವಾಗಿ ಹಿಂದುಳಿಯಬೇಕೇ?

ಇದನ್ನೂ ಓದಿ- ಅಂಬೇಡ್ಕರ್ ಸಂಘಗಳು ನಡೆಸಬಹುದಾದ ಉದ್ಯಮಶೀಲತೆ ಚಳುವಳಿ

ಅಂದಹಾಗೆ ಒಂದು ಮಾರ್ಗ ಮುಚ್ಚಿದರೆ ಮತ್ತೊಂದು ಮಾರ್ಗ ತೆರೆದೇ ತೆರೆಯುತ್ತದೆ. ಅದಕ್ಕಾಗಿ ಪ್ರಯತ್ನ ಪಡಬೇಕು. ವ್ಯಾಪಾರ ವ್ಯವಹಾರ ಬಿಸಿನೆಸ್ ಉದ್ಯಮಶೀಲತೆ ಎಂದು ಮಾಡಬೇಕು. ಲಾಭವೊ ನಷ್ಟವೊ ಮಾಡಬೇಕು. ಒಮ್ಮೆ ದುಡ್ಡು ಓಡಾಡಿದರೆ ಪ್ರಬಲ ಜಾತಿ ಜನರು ಬಾಲ ಮುದುರಿಕೊಳ್ಳುತ್ತಾರೆ. ದೌರ್ಜನ್ಯ ಮಾಡಲು ಹಿಂದುಮುಂದು ನೋಡುತ್ತಾರೆ. ಅದು ಬಿಟ್ಟು ನನ್ನನ್ನು ಆ ಯುವಕ ಕೇಳಿದ ಹಾಗೆ ದಲಿತ ಸಮುದಾಯದ ಯುವಕರು ಯುವತಿಯರು ಊರಲ್ಲಿ ಪ್ರಬಲ ಜಾತಿ ಜನರಲ್ಲಿ ದುಡ್ಡು ಕೇಳುತ್ತ, ಮತ್ತೊಂದು ಮಗದೊಂದು ಕೇಳುತ್ತಾ ನಿಂತರೆ ಆತ ಅಸ್ಪೃಶ್ಯತೆ ಅದ್ಹೇಗೆ ನಿಲ್ಲಿಸುತ್ತಾನೆ? ನಮ್ಮ ಅಸಹಾಯಕತೆಯೇ ಆತನಿಗೆ ಅಸ್ತ್ರವಾಗುತ್ತದೆಯಲ್ಲವೆ?

ರಘೋತ್ತಮ ಹೊ.ಬ

ಚಿಂತಕರು

ಇದನ್ನೂ ಓದಿ-ದಲಿತರೇಕೆ ಬಿಜೆಪಿ-ಮೋದಿಗೆ ಓಟು ಹಾಕುವುದಿಲ್ಲ?

More articles

Latest article