ನಂಜನಗೂಡು: ಹಬ್ಬಕ್ಕೆ ಹಸುಗಳನ್ನು ತೊಳೆಯಲು ಹೋದ ಮೂವರು ನೀರುಪಾಲಾದ ದುರಂತ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕಾಮಳ್ಳಿಯಲ್ಲಿ ನಡೆದಿದೆ. ಮುದ್ದೇಗೌಡ (48), ಬಸವೇಗೌಡ (45), ವಿನೋದ್ (17) ಮೃತ ದುರ್ದೈವಿಗಳು. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ವಿನೋದ್ ಹಸುಗಳನ್ನು ತೊಳೆಯಲು ಹೋಗಿದ್ದರು. ಈ ಸಂದರ್ಭದಲ್ಲಿ ವಿನೋದ್ ಅವರನ್ನು ಹಗ್ಗದ ಸಮೇತ ಕೆರೆಗೆ ಹಸುಎಳೆದೊಯ್ದಿದೆ. ನೀರಿನಲ್ಲಿ ಮುಳುಗುತ್ತಿದ್ದ ವಿನೋದ್ ಅವರನ್ನು ಕಾಪಾಡಲು ಕೆರೆಗೆ ಇಳಿದ ಮುದ್ದೇಗೌಡ ಹಾಗೂ ಬಸವೇಗೌಡ ಅವರು ಈಜು ಬಾರದ ಕಾರಣ ಮೂವರೂ ನೀರಿನಲ್ಲಿ ಮುಳುಗಿ ಅಸು ನೀಗಿದ್ದಾರೆ. ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.