ವಿರೋಧದ ನಡುವೆಯೂ ದೇಶಾದ್ಯಂತ ಎಸ್‌ಐಆರ್‌: ಚುನಾವಾಣಾ ಆಯೋಗದ ಸಿದ್ಧತೆ

Most read

ನವದೆಹಲಿ: ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್‌ ಐ ಆರ್‌) ತೀವ್ರ ವಿರೋಧ ವ್ಯಕ್ತವಾಗುತ್ತಿದ್ದರೂ ಕೇಂದ್ರ ಚುನಾವಣಾ ಆಯೋಗ ದೇಶಾದ್ಯಂತ ಎಸ್‌ ಐಆರ್‌ ನಡೆಸಲು ಮುಂದಾಗಿದೆ. ಈ ಸಂಬಂಧ ಚುನಾವಣಾ ಆಯೋಗವು ವಿವಿಧ ರಾಜ್ಯಗಳ ಅಧಿಕಾರಿಗಳೊಂದಿಗೆ ಸಭೆಗಳನ್ನು ಆರಂಭಿಸಿದೆ.

ದೇಶದಾದ್ಯಂತ ಎಸ್‌ ಐ ಆರ್‌ ನಡೆಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಎಸ್‌ಐಆರ್‌ ನೀತಿಯ ಬಗ್ಗೆ ಹಿರಿಯ ಅಧಿಕಾರಿಗಳು ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ಬಿಹಾರದ ಮುಖ್ಯ ಚುನಾವಣಾ ಅಧಿಕಾರಿ ಎಸ್‌ಐಆರ್‌ ಅನುಷ್ಠಾನ ಕುರಿತ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫೆಬ್ರುವರಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್‌ ಕುಮಾರ್‌ ಅವರು ಅಧಿಕಾರ ವಹಿಸಿಕೊಂಡ ನಂತರ ಇದು ಮೂರನೇ ಮಹತ್ವದ ಸಭೆಯಾಗಿದೆ.  2026ರಲ್ಲಿ ತಮಿಳುನಾಡು ಮತ್ತು ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ಪುದುಚೇರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ಎಸ್‌ ಐ ಆರ್‌ ಪ್ರಕ್ರಿಯೆ ನಡೆಯಲಿದೆ.

ಹಲವು ರಾಜ್ಯಗಳಲ್ಲಿ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ ದೇಶಗಳ ಅಕ್ರಮ ವಲಸಿಗರನ್ನು ಪತ್ತೆ ಮಾಡಿದ ನಂತರ ವಿದೇಶಿ ಅಕ್ರಮ ವಲಸಿಗರನ್ನು ಪಟ್ಟಿಯಿಂದ ತೆಗೆದು ಹಾಕುವುದು ಎಸ್‌ ಐಆರ್‌ ಮುಖ್ಯ ಉದ್ದೇಶವಾಗಿದೆ. ಈ ರಾಜ್ಯಗಳಲ್ಲಿ ಚುನಾವಣಾ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ದೋಷರಹಿತ ಮತದಾರರ ಪಟ್ಟಿ ರಚನೆಯಾಗಲಿದೆ.

More articles

Latest article