Tuesday, September 17, 2024

ಮಾತು ಮರೆತವರಿಗೆ ಮತವಿಲ್ಲ…..

Most read

ಕಳೆದು ಹತ್ತು ವರ್ಷದಲ್ಲಿ ನೀಡಿದ ಭರವಸೆಯನ್ನು ಈಡೇರಿಸದ, ಜನ ಹಿತ ಮರೆತು, ತನ್ನ ಆರ್ಥಿಕ, ರಾಜಕೀಯ, ಮತ್ತು ಸಾಂಸ್ಕೃತಿಕ ನೀತಿಗಳನ್ನು ಪಕ್ಷ ಬೆಳೆಸುವುದಕ್ಕೆ ದುಡಿಸಿಕೊಂಡ ಭಾರತೀಯ ಜನತಾ ಪಕ್ಷಕ್ಕೆ ಅತ್ಯಗತ್ಯವಾಗಿ ವಿರಾಮ ನೀಡಲೇ ಬೇಕಿದೆ. ಇಂಡಿಯಾ ಒಕ್ಕೂಟದ ಪ್ರಮುಖ ಪಕ್ಷವಾದ ಕಾಂಗ್ರೆಸ್ಸಿನ ಪ್ರಣಾಳಿಕೆಯನ್ನು ಗಮನಿಸಿದರೆ, ಈ ಬಾರಿ ನಮ್ಮ ಆಯ್ಕೆ ಇಂಡಿಯಾ ಒಕ್ಕೂಟವೆನ್ನುವುದರಲ್ಲಿ ಸಂದೇಹವಿಲ್ಲ-ಡಾ.ಉದಯ ಕುಮಾರ ಇರ್ವತ್ತೂರು, ವಿಶ್ರಾಂತ ಪ್ರಾಂಶುಪಾಲರು.

ನಮ್ಮ ಮುಂದಿರುವ ಈ ಚುನಾವಣೆ ಈ ಹಿಂದಿನ ಎಲ್ಲಾ ಚುನಾವಣೆಗಳಿಗಿಂತ ಭಿನ್ನ ಮತ್ತು ಮಹತ್ತ್ವದ್ದು. ಒಂದು ರೀತಿಯಲ್ಲಿ ನಮ್ಮ ಮುಂದಿನ ಆಯ್ಕೆ ಭರವಸೆಯ ಭವಿಷ್ಯ ಮತ್ತು ಕೇವಲ ಭ್ರಮೆಯ ಭರವಸೆಯ ನಡುವಿನದ್ದು ಕೂಡಾ. ಕಳೆದ ಹತ್ತು ವರ್ಷಗಳಲ್ಲಿ ನಡೆದ ವಿದ್ಯಮಾನಗಳನ್ನು ಮತ್ತು ವರ್ತಮಾನವನ್ನು ಸ್ವಲ್ಪ ವಿಷದವಾಗಿ ವಿಮರ್ಶಾತ್ಮಕವಾಗಿ ನೋಡಿದರೆ ಇದು ಬಹಳ ಸ್ಪಷ್ಟ ಕೂಡಾ.

ಉದಾರೀಕರಣದ ನಂತರ ಅಂದರೆ 1990 ರ ನಂತರ ಇಡೀ ಜಗತ್ತಿನಲ್ಲಿಯೇ ಬದಲಾವಣೆಯ ಗಾಳಿ ಬೀಸಲಾರಂಭಿಸಿತು. ಅದರ ಪರಿಣಾಮ ಭಾರತದಲ್ಲಿಯೂ ಆಗಿದೆ. ಆರ್ಥಿಕ ಅಭಿವೃದ್ಧಿ ವೇಗ ಪಡೆಯಿತು. ಖಾಸಗೀಕರಣವಾಗುತ್ತಾ ಬಂತು. ಬೆಲೆಗಳಲ್ಲಿ ಏರಿಕೆ, ಜಗತ್ತು ಸ್ಪರ್ಧಾತ್ಮಕ, ಬದುಕೂ ಸ್ಪರ್ಧಾತ್ಮಕ, ದಿನನಿತ್ಯದ ಜೀವನದಲ್ಲಿ ಹಿಂದೆಗಿಂತ ಹೆಚ್ಚು ತಾಪತ್ರಯಗಳು ಜನಸಾಮಾನ್ಯರನ್ನು ಬಹಳ ತೀವ್ರವಾಗಿ ತಟ್ಟಲಾರಂಭಿಸಿದವು. ಇಂತಹ ಸಮಯದಲ್ಲಿ ಯುಪಿಎ ಕಾಂಗ್ರೆಸ್ ನೇತೃತ್ವದ ಸರಕಾರ ಇಂತಹ ಬದಲಾವಣೆಯನ್ನು ನಿಲ್ಲಿಸುವ ಅಥವಾ ಅದನ್ನು ಬೇರೆಡೆಗೆ ತಿರುಗಿಸುವ ಸಾಹಸ ಮಾಡುವುದು ಅಸಾಧ್ಯವಾಗಿತ್ತು. ಅಂತಾರಾಷ್ಟ್ರೀಯ ವ್ಯಾಪಾರ ನೀತಿ, ರಾಜಕೀಯ ಪರಿಸ್ಥಿತಿ ಅಂತಹ ಬದಲಾವಣೆಗೆ ಅವಕಾಶ ಮಾಡಿಕೊಡುತ್ತಿರಲಿಲ್ಲ. ಆದರೆ ಪರಿಸ್ಥಿತಿಯಲ್ಲಿ ಜನಸಾಮಾನ್ಯರಿಗೆ ಆಸರೆಯಾಗಬಹುದಾದ ಸಮಸ್ಯೆಗಳ ತೀವ್ರತೆಯನ್ನು ಕಡಿಮೆ ಮಾಡಬಹುದಾದ ಯೋಜನೆಗಳನ್ನು ರೂಪಿಸುವ ಮತ್ತು ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನ ಮಾಡಲು ಪ್ರಯತ್ನ ಮಾಡಿತು. ಅವುಗಳು ಯಾವುವು ಎನ್ನುವುದರ ಕುರಿತು ತಿಳಿಯೋಣ.

ನೇರ ವರ್ಗಾವಣೆ -ಸವಲತ್ತು – ಬಡ ಜನರಿಗೆ ಸರಕಾರದಿಂದ ದೊರೆಯುವ ಸಹಾಯ ಧನ ನೇರವಾಗಿ ಅವರ ಬ್ಯಾಂಕು ಖಾತೆಗೆ ತಲುಪಿಸುವ ನಿಟ್ಟಿನಲ್ಲಿ ‘ನೇರ ವರ್ಗಾವಣೆ -ಸವಲತ್ತ’ನ್ನು ಸೂಕ್ತ ಕ್ರಮಗಳ ಮೂಲಕ ಜಾರಿಗೊಳಿಸಲು ಮುಂದಾಯಿತು. ಇದಕ್ಕೆ ಅಗತ್ಯವಿರುವ ನಾಗರಿಕರಿಗೆ ವಿಶಿಷ್ಟ ಗುರುತಿನ ಚೀಟಿ, ಆಧಾರ್ ಕಾರ್ಡ್  ಯೋಜನೆಯ ಕಲ್ಪನೆಯೂ ಮನಮೋಹನ್ ಸಿಂಗ್ ಅವರದ್ದು. ಇದೆಲ್ಲವನ್ನೂ ಸಾರಾಸಗಟಾಗಿ ವಿರೋಧಿಸಿದ್ದು ಇದೇ ಬಿಜೆಪಿ ಪಕ್ಷ ಮತ್ತು ನರೇಂದ್ರ ಮೋದಿಯವರು. ಈಗಿನ ಸರಕಾರದ ಸಾಧನೆಯ ಬಗ್ಗೆ ತಿಳಿಯಬೇಕಿದ್ದರೆ 2014ರ ಮೊದಲು ನರೇಂದ್ರ ಮೋದಿಯವರು ಅಂದಿನ ಕೇಂದ್ರ ಸರಕಾರವನ್ನು ಕುರಿತು ಮಾಡಿದ ಭಾಷಣ ಕೇಳಿದರೆ ಸಾಕು. ಅಂದು ವಿರೋಧಿಸಿದ ಎಲ್ಲಾ ಯೋಜನೆಗಳನ್ನು ಮುಂದುವರಿಸಲಾಗುತ್ತಿದೆ. ಎನ್‍ಡಿಎ ಸರಕಾರ ಹಿಂದಿನ ಯು.ಪಿ.ಎ. ಸರಕಾರದ ಯೋಜನೆಗಳ ಹೆಸರು ಬದಲಿಸಿ ತಮ್ಮದೇ ಯೋಜನೆ ಎಂದು ಭರ್ಜರಿ ಪ್ರಚಾರ ಪಡೆಯಿತು.

ಆಹಾರ ಭದ್ರತಾ ಮಸೂದೆ ಲೋಕಸಭೆಯಲ್ಲಿ ಮಂಡನೆ

ಆಹಾರ ಭದ್ರತೆಯ ಕಾಯಿದೆ- ಅಭಿವೃದ್ಧಿ ಹೊಂದಿದ ದೇಶಗಳಿಗೆ ನಮ್ಮಂತಹ ದೇಶಗಳ ಮಾರುಕಟ್ಟೆಯನ್ನು ಮುಕ್ತಗೊಳಿಸಬೇಕು ಎನ್ನುವ ಬೇಡಿಕೆ ಬಂದಿತು. ಹಾಗೆ ಮಾಡಿದರೆ ಅತ್ಯಂತ ಕಡಿಮೆ ಬೆಲೆಗೆ ಆಹಾರ ಧಾನ್ಯಗಳನ್ನು ಮುಂದುವರಿದ ದೇಶಗಳು ನಮ್ಮ ಮಾರುಕಟ್ಟೆಗೆ ತಂದು ಸುರಿದರೆ, ಕೃಷಿ ರಂಗದ ಮೇಲೆ ಕೆಟ್ಟ ಪರಿಣಾಮ ಆಗಬಹುದಿತ್ತು. ಆಹಾರ ಧಾನ್ಯಗಳು ಬೆಲೆ ಏರಿಕೆಯಾಗಿ ಬಡಜನರಿಗೆ ತೀರಾ ಸಂಕಷ್ಟ ಉಂಟು ಮಾಡುವ ಸಾಧ್ಯತೆ ಇತ್ತು. ಶ್ರೀಮಂತ ದೇಶಗಳ ಒತ್ತಡಕ್ಕೆ ಬಗ್ಗದೆ ಅವರಿಗೆಲ್ಲ ಸೆಡ್ಡು ಹೊಡೆದು ಬಡ ಮತ್ತು ಸಾಮಾಜಿಕ ಸಂಕಷ್ಟದಲ್ಲಿರುವವರ ರಕ್ಷಣೆಗಾಗಿ ಆಹಾರ ಭದ್ರತೆಯಂತಹ ಕ್ರಮಕ್ಕೆ ಮುಂದಾಗಿ, ಆಹಾರ ಭದ್ರತೆ ಕಾನೂನು ಜಾರಿಗೆ ತಂದಿತು. ಪಡಿತರದ ಮೂಲಕ ಜನರಿಗೆ ಆಹಾರ ಧಾನ್ಯ ಒದಗಿಸುವ ಕೆಲಸ ಮಾಡಿತು.

ಸಾರ್ವಜನಿಕ ಶಿಕ್ಷಣ, ಉನ್ನತ ಶಿಕ್ಷಣಕ್ಕೆ ಅನುದಾನದಲ್ಲಿ ತೀವ್ರ ಕಡಿತ, ರಾಜ್ಯದ ಆಡಳಿತದ ಮೇಲೆ ರಾಜ್ಯಪಾಲರ ಮೂಲಕ ತೊಡಕು ಉಂಟು ಮಾಡುವುದು,  ಬಿಜೆಪಿ ಪಕ್ಷ ಬಹುಮತ ಪಡೆಯದೇ ಹೋದಾಗ ಕೋಟ್ಯಂತರ ದುಡ್ಡು ಸುರಿದು ಜನಪ್ರತಿನಿಧಿಗಳನ್ನು ಪಕ್ಷಾಂತರ ಮಾಡಿಸುತ್ತಿರುವುದು, ಮಾಧ್ಯಮಗಳನ್ನು ಸಾರಾಸಗಟಾಗಿ ಖರೀದಿಸುವುದು, ಸರಕಾರದ ನೀತಿಗಳನ್ನು, ನಡೆಗಳನ್ನು ವಿಮರ್ಶೆ ಮಾಡುವ ಸಮಾಜದ ಹಿತಚಿಂತಕರನ್ನು ಗುರಿಮಾಡಿ ಟ್ರೋಲ್ ಮಾಡುವುದು, ಪರ್ಯಾಯ ಅಭಿವೃದ್ಧಿ ಮಾದರಿಯ ಮೂಲಕ ಜನಜೀವನ ಸುಧಾರಿಸುವ ಆಡಳಿತ ನೀಡುವ ʼಆಪ್‍ʼ ನಂತಹ ಪಕ್ಷಗಳನ್ನು ದುರ್ಬಲ ಗೊಳಿಸಲು ಈಡಿ, ಐಟಿ ಸಂಸ್ಥೆಗಳನ್ನು ದುರುಪಯೋಗ ಪಡಿಸುತ್ತಿರುವುದು, ದೇಶದ ರೈತರ ಹಿತಕಾಯುವ ಬಗ್ಗೆ ಡಾ. ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಕುರಿತು ಕ್ರಮ ಕೈ ಗೊಳ್ಳುವ ಬದಲು ರೈತರ ಧ್ವನಿ ಅಡಗಿಸುವ ರೀತಿಯಲ್ಲಿ ವರ್ತಿಸುವುದು, ದೇಶದ ಜನರ ಆಸ್ತಿ ಮತ್ತು ಸ್ವಾಭಿಮಾನದ ಸಂಕೇತಗಳಾದ ಸಾರ್ವಜನಿಕ ಸಂಸ್ಥೆಗಳನ್ನು ಗುಜರಾತ್ ಮೂಲದ ಖಾಸಗೀ ಸಂಸ್ಥೆಗಳ ಮಡಿಲಿಗೆ ಹಾಕುತ್ತಿರುವುದು… ಇಂತಹ ನೂರಾರು ವಿದ್ಯಮಾನಗಳು ಈಗಿನ ಸರಕಾರದ ಆಕ್ರಮಣಕಾರೀ ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ನೀತಿಗಳು, ಬಹುಜನರ ಹಿತಾಸಕ್ತಿಗೆ ಪೂರಕವಾಗಿಲ್ಲ ಎನ್ನುವುದನ್ನು ಬಹಳ ಸ್ಪಷ್ಟವಾಗಿಯೇ ಪ್ರತಿಬಿಂಬಿಸುತ್ತಿವೆ. ದೇಶದಲ್ಲಿ ಹತ್ತು ವರ್ಷದ ಸಾಧನೆಯನ್ನು ಗಮನಿಸಿದರೆ, ಈ ಬಾರಿ ಕೇಂದ್ರ ಸರಕಾರದಲ್ಲಿ ಬದಲಾವಣೆ ಅನಿವಾರ್ಯವಾಗಿದೆ.

ಮೋದಿಯವರಲ್ಲದೆ ಇನ್ಯಾರು? ಈ ಪ್ರಶ್ನೆ ಪ್ರಜಾಪ್ರಭುತ್ವದಲ್ಲಿ ಅಪ್ರಸ್ತುತ. ದೇಶ ಗಾಂಧಿ ಇಲ್ಲದೆ, ನೆಹರು ಇಲ್ಲದೆ, ಇಂದಿರಾಗಾಂಧಿ ಇಲ್ಲದೆ, ವಾಜಪೇಯಿಯವರೂ ಇಲ್ಲದೆ ಮುಂದುವರಿದಿದೆ ಎಂದರೆ, ನರೇಂದ್ರ ಮೋದಿಯವರ ನಂತರವೂ ಇನ್ನಷ್ಟು ಬಲಿಷ್ಠವಾಗಿ ಮುಂದುವರಿಯಲಿದೆ. ಒಂದು ವೇಳೆ ಅದರ ಬಗ್ಗೆ ಅನುಮಾನವಿದೆ ಎಂದರೆ ಇದು ನರೇಂದ್ರ ಮೋದಿಯವರ ಆಡಳಿತ ಹಳಿ ತಪ್ಪಿದ್ದರ ಸಂಕೇತವೂ ಆಗಬಹುದು. ಈ ದೃಷ್ಟಿಯಿಂದಲೂ ಬದಲಾವಣೆ ಅನಿವಾರ್ಯ. ಕಳೆದ ಹತ್ತು ವರ್ಷದಲ್ಲಿ ದೇಶ ಬಲಿಷ್ಟವಾಗಿದ್ದರೆ, ಆಡಳಿತಯಂತ್ರ ಚುರುಕು ಪಡೆದಿದ್ದರೆ, ಸರಕಾರ ಜನಪರವಾಗಿ ಕೆಲಸ ಮಾಡಿದ್ದರೆ, ಇತರ ಪಕ್ಷಗಳ ಭ್ರಷ್ಟರನ್ನು ಯಾಕೆ ಪಕ್ಷಕ್ಕೆ ಬರಮಾಡಿ ಕೊಳ್ಳುತ್ತೀರಿ?. ಈಗ ನಮಗೆ ಬೇಕಿರುವುದು ಪ್ರಸ್ತುತ ಸರಕಾರದಿಂದ ಮುಕ್ತಿ. 1977 ರಲ್ಲಿಯೂ ಜನ ಇದೇ ಪ್ರಶ್ನೆ ಕೇಳುತ್ತಿದ್ದರು. ಹಲವಾರು ಪಕ್ಷಗಳು ಒಟ್ಟು ಸೇರಿ ಜನತಾ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಿತು. ಆ ಸರಕಾರ ಬಹಳ ಕಾಲ ಅಧಿಕಾರ ನಡೆಸದೇ ಹೋದರೂ ದೇಶದ ಪ್ರಜಾತಂತ್ರ ವ್ಯವಸ್ಥೆಗೆ ಬಲ ನೀಡಿತು. ಅದರ ನಂತರ ಜನ ಬೇರೆ ಬೇರೆ ಪಕ್ಷಗಳಿಗೆ ಅಧಿಕಾರ ನೀಡುವ ಜನಕೇಂದ್ರಿತ ವ್ಯವಸ್ಥೆ ಬಲಗೊಂಡಿತು. ಅದೇ ರೀತಿ ಕರ್ನಾಟಕದಲ್ಲಿಯೂ ರಾಮಕೃಷ್ಣ ಹೆಗ್ಡೆಯವರ ನಾಯಕತ್ವದಲ್ಲಿ ಅಧಿಕಾರಕ್ಕೆ ಬಂದ ಸರಕಾರ ನಾಡು ಸದಾ ನೆನಪಿಡುವ ರೀತಿಯಲ್ಲಿ ಕೆಲಸ ಮಾಡಿತು. ಆ ಸರಕಾರದಲ್ಲಿ ಸಚಿವರಾಗಿದ್ದ ನಝೀರ್ ಸಾಬ್, ಎಂ.ಪಿ. ಪ್ರಕಾಶ್, ಪಿ.ಜಿ.ಆರ್.ಸಿಂಧಿಯಾ, ಸಿದ್ದರಾಮಯ್ಯ, ದೇವೇ ಗೌಡ, ಎಸ್ ಆರ್ ಬೊಮ್ಮಾಯಿ, ಜೆ.ಹೆಚ್.ಪಟೇಲ್ ಮೊದಲಾದವರು ತಮ್ಮ ಜನಪರ ಕೆಲಸಗಳಿಂದ ಜನ ಮೆಚ್ಚುಗೆ ಗಳಿಸಿದ್ದನ್ನು ನಾವು ಮರೆಯಬಾರದು. ಅಷ್ಟೇ ಏಕೆ, ಯು.ಪಿ.ಎ. ಸೈದ್ಧಾಂತಿಕವಾಗಿ ಭಿನ್ನವಾಗಿದ್ದ ಹಲವು ಪಕ್ಷಗಳ ಒಕ್ಕೂಟವಾಗಿದ್ದರೂ ಮೊದಲ ಐದು ವರ್ಷ (2004-09) ಅತ್ಯುತ್ತಮ ಆಡಳಿತ ನೀಡಿದೆ. ಹಾಗಾಗಿ ಮೋದಿ ಬಿಟ್ಟರೆ ಇನ್ಯಾರು ಎನ್ನುವ ಪ್ರಶ್ನೆಯೇ ಜನತಂತ್ರಕ್ಕೆ ಮಾಡುವ ಅಪಚಾರ.

ಇಂಡಿಯಾ ಪಕ್ಷಗಳು

ಇಂಡಿಯಅದಿನದ 24 ಗಂಟೆ ಎಲ್ಲಾ ಟಿವಿ, ಪೇಪರ್‌ ಗಳಲ್ಲಿ ಜಾಹೀರಾತು ನೀಡುವ ಸಾಮಾಜಿಕ ಜಾಲತಾಣಗಳಲ್ಲಿ ನೂರಾರು ಐಟಿ ಯೋಧರ ಮೂಲಕ ವಿರೋಧಿಗಳನ್ನು ಇಲ್ಲ ಸಲ್ಲದ ನಿರಾಧಾರ ಆರೋಪ ಮಾಡುತ್ತಾ ಟ್ರೋಲ್ ಮಾಡುವ, ನ್ಯಾಯಯುತ ಪ್ರಶ್ನೆ ಮಾಡುವ ಪತ್ರಕರ್ತರನ್ನು ಬಂಧಿಸುವ, ರಾಜ್ಯ ಪಾಲರ ಮೂಲಕ ಅನ್ಯ ಪಕ್ಷಗಳ ಸರಕಾರದ ಜನಪರ ಕೆಲಸಗಳಿಗೆ ಅಡ್ಡಗಾಲು ಹಾಕುವ ಅಗತ್ಯವೇನಿದೆ?  ಎಲೆಕ್ಟೋರಲ್ ಬಾಂಡ್ ಗೆ ಸಂಬಂಧಿಸಿದ ವಿವರಗಳನ್ನು ಮುಚ್ಚಿಡುವ ಕೆಲಸ ಯಾಕೆ ಮಾಡಿತು? ಪಿ.ಎಮ್.ಕೇರ್ ನಿಧಿಯ ವಿವರಗಳು ಇನ್ನೂ ಯಾಕೆ ಬಹಿರಂಗವಾಗಿಲ್ಲ? ಕೊರೋನಾ ಕಾಲದ ಸಾವು ನೋವಿನ ವಿವರಗಳು ಗೊಂದಲಮಯವಾಗಿರುವುದು ಏಕೆ? ಎಲ್ಲವೂ ಪಾರದರ್ಶಕವಾಗಿದ್ದರೆ, ನ್ಯಾಯಬದ್ಧವೇ ಆಗಿದ್ದರೆ ಸರಕಾರವೇ ಮುಂದೆ ನಿಂತು ಅಂಕಿ ಅಂಶಗಳ ಆಧಾರದ ಮೇಲೆ ಮುಖಾಮುಖಿ ಚರ್ಚೆ ನಡೆಸಿ, ಸರಿ ತಪ್ಪುಗಳ ತೀರ್ಮಾನವನ್ನು ಜನರಿಗೇ ಬಿಟ್ಟು ಬಿಡಬಹುದಲ್ಲಾ? ಆದರೆ ಅದು ಆಗುತ್ತಿಲ್ಲ. ನರೇಂದ್ರ ಮೋದಿಯವರು ಹತ್ತು ವರ್ಷಗಳಲ್ಲಿ ನಿರಂತರವಾಗಿ ಮನದ ಮಾತುಗಳನ್ನು ಆಡುತ್ತಾ ಬಂದರೇ ಹೊರತು ಜನರ ಮಾತುಗಳನ್ನು ಕೇಳಿಸಿ ಕೊಳ್ಳಲಿಲ್ಲ. ಕಳೆದು ಹತ್ತು ವರ್ಷದಲ್ಲಿ ನೀಡಿದ ಭರವಸೆಯನ್ನು ಈಡೇರಿಸದ, ಜನ ಹಿತ ಮರೆತು, ತನ್ನ ಆರ್ಥಿಕ, ರಾಜಕೀಯ, ಮತ್ತು ಸಾಂಸ್ಕೃತಿಕ ನೀತಿಗಳನ್ನು ಪಕ್ಷ ಬೆಳೆಸುವುದಕ್ಕೆ ದುಡಿಸಿಕೊಂಡ ಭಾರತೀಯ ಜನತಾ ಪಕ್ಷಕ್ಕೆ ಅತ್ಯಗತ್ಯವಾಗಿ ವಿರಾಮ ನೀಡಲೇ ಬೇಕಿದೆ. ಇಂಡಿಯಾ ಒಕ್ಕೂಟದ ಪ್ರಮುಖ ಪಕ್ಷವಾದ ಕಾಂಗ್ರೆಸ್ಸಿನ ಪ್ರಣಾಳಿಕೆಯನ್ನು ಗಮನಿಸಿದರೆ, ಈ ಬಾರಿ ನಮ್ಮ ಆಯ್ಕೆ ಇಂಡಿಯಾ ಒಕ್ಕೂಟವೆನ್ನುವುದರಲ್ಲಿ ಸಂದೇಹವಿಲ್ಲ.

ಡಾ.ಉದಯಕುಮಾರ್‌ ಇರ್ವತ್ತೂರು

ವಿಶ್ರಾಂತ ಪ್ರಾಂಶುಪಾಲರು

ಇದನ್ನೂ ಓದಿ-ಮಂಗಳೂರಲ್ಲಿ ಮಳೆಯಾಯಿತು!

More articles

Latest article