ಜನರ ನುಡಿ ಬೇಡವೆನ್ನುವವರೇ ಜನ ದ್ರೋಹಿಗಳು: ಕಾಗೇರಿ ವಿರುದ್ಧ ನಾರಾಯಣಗೌಡ ಕಟುಟೀಕೆ

Most read

ಬೆಂಗಳೂರು: ನಿನ್ನೆ ಕರ್ನಾಟಕದಿಂದ ಆಯ್ಕೆಯಾದ ಎಲ್ಲ ಲೋಕಸಭಾ ಸದಸ್ಯರೂ ಕನ್ನಡದಲ್ಲೇ ಪ್ರಮಾಣವಚನ ಪಡೆದರೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸ್ಕೃತದಲ್ಲಿ ಪ್ರಮಾಣ ಪಡೆದಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಕಟುವಾಗಿ ಟೀಕಿಸಿದ್ದಾರೆ.

ಕಾಗೇರಿಯವರಿಗೆ ಜನರ ನುಡಿ ಬೇಕಾಗಿಲ್ಲ, ಅವರದೇನಿದ್ದರೂ ದೇವರ ಜೊತೆ ಮಾತುಕತೆ. ಜನರ ನುಡಿ ಬೇಡವೆನ್ನುವವರಿಗೆ ಜನರೂ ಬೇಕಾಗಿರುವುದಿಲ್ಲ. ಇವರೇ ನಿಜವಾದ ಜನದ್ರೋಹಿಗಳು ಎಂದು ನಾರಾಯಣಗೌಡ ಟೀಕಿಸಿದ್ದಾರೆ.

ಇದೇ ಸಂದರ್ಭದಲ್ಲಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಎಲ್ಲ ಸಂಸದರಿಗೂ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಎಲ್ಲ ಸಂಸತ್ ಸದಸ್ಯರಿಗೂ ಅಭಿನಂದನೆಗಳು. ಕರ್ನಾಟಕದ ಪ್ರತಿನಿಧಿಗಳಾದ ನೀವು ನಾಡಿನ ಏಳಿಗೆಗೆ ದುಡಿಯುತ್ತೀರಿ ಎಂಬ ಆಶಯ ನನ್ನದು. ಕರ್ನಾಟಕಕ್ಕೆ ಏನೇ ಅನ್ಯಾಯವಾದರೂ ಪಕ್ಷಭೇದ ಮರೆತು ಎಲ್ಲರೂ ಒಂದಾಗಿ ಕೆಲಸ ಮಾಡಿ. ನಿಮಗೆ ಕನ್ನಡಿಗರೇ ನಿಜವಾದ ಹೈಕಮಾಂಡ್ ಅನ್ನುವುದನ್ನು ಮರೆಯಬೇಡಿ. ಎಲ್ಲರಿಗೂ ಶುಭಾಶಯಗಳು ಎಂದು ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.

ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

More articles

Latest article