ಬೆಂಗಳೂರು ಸೆಪ್ಟೆಂಬರ್ 11 : ಟ್ರಾಫಿಕ್ ಸಮಸ್ಯೆಯ ನಡುವೆಯೂ ವಾಹನ ಸಂಚಾರರಿಗೆ ಕಿರಿಕಿರಿ ನೀಡದೆ, ಟ್ರಾಫಿಕ್ ಜಾಮ್ ಉಂಟು ಮಾಡದೆ ಸಣ್ಣ ಪ್ರಮಾಣದ ರಸ್ತೆ ಗುಂಡಿಗಳನ್ನು ಮುಚ್ಚಲು ಚೆಟ್ ಪ್ಯಾಚರ್ ತಂತ್ರಜ್ಞಾನ ಸೂಕ್ತ ಎಂದು ಸಚಿವ ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟರು.
ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ವಿಧಾನಸೌಧ ಹಾಗೂ ಎಂಎಸ್ ಬಿಲ್ಡಿಂಗ್ ಮಧ್ಯದ ರಸ್ತೆಯಲ್ಲಿ ಪ್ರಾಯೋಗಿಕವಾಗಿ ಜೆಟ್ ಪ್ಯಾಚರ್ ಬಳಸಿ ರಸ್ತೆ ಗುಂಡಿಗಳನ್ನು ಮುಚ್ಚುವ ಪ್ರಾತ್ಯಕ್ಷಿಕೆಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಸಚಿವರು, ಬೆಂಗಳೂರಿನಲ್ಲಿ ಗುಂಡಿಗಳು ವ್ಯಾಪಕವಾಗಿವೆ. ಈ ಪೈಕಿ ಕೆಲವು ಕಡೆ ರಸ್ತೆ ಮೇಲಿನ ಟಾರ್ ಕಿತ್ತು ಹೋಗಿದ್ದರೆ, ಕೆಲವು ಕಡೆಗಳಲ್ಲಿ ಟಾರ್ ಜೊತೆಗೆ ಜೆಲ್ಲಿಯೂ ಕಿತ್ತುಹೋಗಿ ದೊಡ್ಡ ಗುಂಡಿಗಳಾಗಿರುತ್ತವೆ. ಹೀಗೆ ಎಲ್ಲಾ ಮಾದರಿಯ ಗುಂಡಿಗಳನ್ನು ಮುಚ್ಚಲು ಕೆಲವು ವೈಜ್ಞಾನಿಕ ಪರಿಹಾರಗಳನ್ನು ಹುಡುಕುತ್ತಿದ್ದು, ಈ ಪೈಕಿ ಜೆಟ್ ಪ್ಯಾಚರ್ ಕೂಡ ಒಂದು ಪರಿಹಾರದ ಮಾದರಿ. ಭವಿಷ್ಯದಲ್ಲಿ ಪರಿಸ್ಥಿತಿಗೆ ತಕ್ಕಂತೆ ವಿವಿಧ ತಂತ್ರಜ್ಞಾನಗಳ ಬಳಕೆಗೆ ಇಂದು ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
• ಸಣ್ಣ ಪ್ರಮಾಣದ ಗುಂಡಿ ಮುಚ್ಚಲು ಈ ತಂತ್ರಜ್ಞಾನ ಸೂಕ್ತ
• ಕೇಂದ್ರ ಪಾಲಿಕೆಯಲ್ಲಿ ಯಶಸ್ವಿಯಾದರೆ ಎಲ್ಲಾ ಪಾಲಿಕೆಯಲ್ಲೂ ಜಾರಿ
• ರೂ.2 ಕೋಟಿ ವಚ್ಚದಲ್ಲಿ ಪ್ರಾಯೋಗಿಕ ಅಭಿಯಾನಕ್ಕೆ ಚಾಲನೆ
ಜೆಟ್ ಪ್ಯಾಚರ್ ಬಳಸಿ ಆಳವಾದ ಗುಂಡಿಗಳನ್ನು ಮುಚ್ಚಲು ಸಾಧ್ಯವಿಲ್ಲ. ಆದರೆ, ಎರಡು ಮೂರು ಇಂಚಿನ ಗುಂಡಿಗಳನ್ನು ಮುಚ್ಚಲು ಈ ತಂತ್ರಜ್ಞಾನ ಸೂಕ್ತ. ಗುಂಡಿ ಬಿದ್ದ ಜಾಗವನ್ನು ಮಾತ್ರ ಬ್ಲಾಕ್ ಮಾಡಿ, ಒಂದೇ ಯಂತ್ರದಲ್ಲಿ ಧೂಳನ್ನು ಶುಚಿಗೊಳಿಸಿ ಟಾರ್ ಹಾಕಿ ವೆಟ್ ಮಿಕ್ಸ್ ಹಾಕುವ ಮೂಲಕ ಟ್ರಾಫಿಕ್ ಮಧ್ಯೆಯೂ ಈ ಕೆಲಸವನ್ನು ಮಾಡಬಹುದು. ಗುಂಡಿ ಮುಚ್ಚಿದ ಹತ್ತು ನಿಮಿಷದಲ್ಲಿ ವಾಹನ ಓಡಾಟಕ್ಕೆ ಅವಕಾಶ ನೀಡಬಹುದು. ಹೀಗಾಗಿ ಗುಂಡಿ ಮುಚ್ಚುವ ಕೆಲಸಕ್ಕೆ ರಾತ್ರಿ ವೇಳೆ ತೆರಳುವ ಅಗತ್ಯವೂ ಇಲ್ಲ. ಬೆಂಗಳೂರು ನಗರದ ಪ್ರಮುಖ ಭಾಗಗಳಲ್ಲಿ ಕೇವಲ ಎರಡು ಮೂರು ಇಂಚಿನ ಗುಂಡಿಗಳು ಮಾತ್ರ ಇದ್ದು, ಈ ತಂತ್ರಜ್ಞಾನದ ಸಹಾಯದಿಂದ ಹೆಚ್ಚು ಶ್ರಮವಿಲ್ಲದೆ ಹಾಗೂ ಟ್ರಾಫಿಕ್ ಕಿರಿಕಿರಿ ಇಲ್ಲದಂತೆ ಕೆಲಸ ನಿರ್ವಹಿಸಬಹುದು ಎಂದು ತಿಳಿಸಿದರು.
ಗುಂಡಿ ಮುಚ್ಚಲು ಈ ಹಿಂದೆ ಹಾಟ್ ಮಿಕ್ಸ್ ಬಳಸಲಾಗುತ್ತಿತ್ತು. ಆದರೆ, ಹಾಟ್ ಮಿಕ್ಸ್ ಮೂಲಕ ಗುಂಡಿ ಮುಚ್ಚುವ ಕೆಲಸಕ್ಕೆ ರೋಲರ್ ಬಳಕೆಯೂ ಅನಿವಾರ್ಯ. ಮಳೆಗಾಲದಲ್ಲಿ ಕೆಲಸ ಮಾಡಲು ಆಗೋಲ್ಲ. ಒಂದು ರಸ್ತೆಯಲ್ಲಿ ಒಂದೇ ಗುಂಡಿ ಮಾತ್ರ ಇದ್ದಲ್ಲಿ ಈ ತಂತ್ರಜ್ಞಾನ ಉಪಯೋಗವಲ್ಲ. ಅಲ್ಲದೆ, ಕೆಲಸ ಆರಂಭಿಸುವ ಮುನ್ನ ವಾಹನ ಸಂಚಾರವನ್ನು ತಡೆಯಬೇಕಾಗುತ್ತದೆ. ಇದರಿಂದ ಟ್ರಾಫಿಕ್ ಕಿರಿಕಿರಿ ಉಂಟಾಗುತ್ತದೆ. ಆದರೆ, ವೆಟ್ ಮಿಕ್ಸ್ ಬಳಸಿ ರಸ್ತೆಯಲ್ಲಿ ಒಂದೇ ಗುಂಡಿ ಇದ್ದರೂ ಮುಚ್ಚಬಹುದು ಎಂದು ವಿವರಿಸಿದರು.
ಕೇಂದ್ರ ಪಾಲಿಕೆಯಿಂದ ರೂ. 2 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆದಿದ್ದು, ಪ್ರಾಯೋಗಿಕವಾಗಿ ಕೆಲಸ ಆರಂಭಿಸಲಾಗಿದೆ. ಜೆಟ್ ಪ್ಯಾಚರ್ ತಂತ್ರಜ್ಞಾನ ಇಲ್ಲಿ ಯಶಸ್ವಿಯಾದರೆ ಶೀಘ್ರದಲ್ಲೇ ಎಲ್ಲಾ ಪಾಲಿಕೆಯ ವ್ಯಾಪ್ತಿಯಲ್ಲೂ ಇದೇ ತಂತ್ರಜ್ಞಾನದ ಮೂಲಕ ಗುಂಡಿ ಮುಚ್ಚುವ ಕೆಲಸ ಆರಂಭಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಈ ವೇಳೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, ಕೇಂದ್ರ ನಗರ ಪಾಲಿಕೆಯ ಆಯುಕ್ತ ಜಗದೀಶ್ ಜಿ ರವರು, ಅಪರ ಆಯುಕ್ತ ವೆಂಕಟಾಚಲಪತಿ ಆರ್ ಉಪಸ್ಥಿತರಿದ್ದಾರೆ.
ಜೆಟ್ ಪ್ಯಾಚರ್ ಯಂತ್ರದ ವೈಶಿಷ್ಟ್ಯತೆ:
ನಗರದ ರಸ್ತೆಗಳಲ್ಲಿ ಉಂಟಾಗಿರುವ ಗುಂಡಿಗಳನ್ನು ಶೀಘ್ರವಾಗಿ ಹಾಗೂ ಗುಣಮಟ್ಟದೊಂದಿಗೆ ಮುಚ್ಚುವ ಉದ್ದೇಶದಿಂದ ಅಡ್ವಾನ್ಸ್ಡ್ ಜೆಟ್ ಪ್ಯಾಚರ್ ಯಂತ್ರ ಬಳಸಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ಈ ಯಂತ್ರದ ಮೂಲಕ 50 ಮಿ.ಮೀ.ವರೆಗೆ ಆಳವಿರುವ ರಸ್ತೆ ಗುಂಡಿಗಳನ್ನು ಕೋಲ್ಡ್ ಮಿಕ್ಸ್ ತಂತ್ರಜ್ಞಾನದಲ್ಲಿ ಸೆಮಿ ಡೆನ್ಸ್ ಬಿಟ್ಯುಮಿನಸ್ ಕಾಂಕ್ರೀಟ್ ಬಳಸಿ ದುರಸ್ತಿ ಮಾಡಲಾಗುತ್ತದೆ. ಕಾಮಗಾರಿ ಆರಂಭಿಸುವ ಮುನ್ನ ಗುಂಡಿಗಳು/ಹಾನಿಗೊಳಗಾದ ರಸ್ತೆ ಭಾಗಗಳನ್ನು ನಿಯಮಿತ ಆಕಾರ ಮತ್ತು ಗಾತ್ರದಲ್ಲಿ ಗುರುತಿಸಿ, ಸಡಿಲವಾಗಿರುವ ಭಾಗಗಳನ್ನು ತೆರವುಗೊಳಿಸಲಾಗುತ್ತದೆ. ಗುಂಡಿಗಳಲ್ಲಿರುವ ನೀರನ್ನು ಸಂಪೂರ್ಣವಾಗಿ ಹೊರತೆಗೆದು, ಅಗತ್ಯ ಪ್ರಮಾಣದಲ್ಲಿ RS1 ಬಿಟ್ಯುಮೆನ್ ಎಮಲ್ಷನ್ ಟ್ಯಾಕ್ ಕೋಟ್ ಹಾಕಿದ ನಂತರ ಮಿಶ್ರಣವನ್ನು ಅಳವಡಿಸಲಾಗುತ್ತದೆ.
ಕಾಮಗಾರಿಗಾಗಿ 5.50 ರಿಂದ 8.00 ಘನ ಮೀಟರ್ ಸಾಮರ್ಥ್ಯದ, ಅನುಮೋದಿತ ಗುಣಮಟ್ಟ ಮತ್ತು ವಿನ್ಯಾಸದ ಜೆಟ್ ಪ್ಯಾಚಿಂಗ್ ಯಂತ್ರವನ್ನು ಬಳಸಲಾಗುತ್ತದೆ. ಈ ಯಂತ್ರವು ಸಹಾಯಕ ಎಂಜಿನ್, ಹೆವಿ ಡ್ಯೂಟಿ ಬ್ಲೋವರ್ಗೆ ನೇರ ಚಾಲನೆ, ರೋಟರಿ ಪಾಸಿಟಿವ್ ಡಿಸ್ಪ್ಲೇಸ್ಮೆಂಟ್ ಬ್ಲೋವರ್ ಹಾಗೂ ಪ್ರತ್ಯೇಕ ಏರ್ಲೈನ್ ಸೈಲೆನ್ಸರ್ ಹೊಂದಿರುತ್ತದೆ. ಯಂತ್ರದ 15 PSI ಒತ್ತಡ ಮತ್ತು ಗಂಟೆಗೆ 1,370 ಘನ ಮೀಟರ್ ಗಾಳಿಯ ಹರಿವಿನ ಸಾಮರ್ಥ್ಯ ಹೊಂದಿರುತ್ತದೆ.
ಮಿಶ್ರಣವನ್ನು ಅಳವಡಿಸಿದ ನಂತರ ಪ್ಲೇಟ್ ಕಾಂಪ್ಯಾಕ್ಟರ್ ಬಳಸಿ ಸಮರ್ಪಕವಾಗಿ ಕಾಂಪ್ಯಾಕ್ಷನ್ ಮಾಡಲಾಗುತ್ತದೆ. ಕಾಮಗಾರಿ ಸ್ಥಳವನ್ನು ಸ್ವಚ್ಛಗೊಳಿಸಲಾಗುತ್ತದೆ. ಕಾಮಗಾರಿಯಲ್ಲಿ ಬಳಸುವ ಮಿಶ್ರಣದಲ್ಲಿ ಬಿಟ್ಯುಮೆನ್ ಶೇ.5ರಷ್ಟು ಅಥವಾ ನಿರ್ದಿಷ್ಟಪಡಿಸಿದಂತೆ RS1 ಬಿಟ್ಯುಮೆನ್ ಎಮಲ್ಷನ್ ಶೇ.10ರಷ್ಟು ಪ್ರಮಾಣದಲ್ಲಿ ಬಳಸಲಾಗುತ್ತದೆ. ಈ ಆಧುನಿಕ ಜೆಟ್ ಪ್ಯಾಚಿಂಗ್ ತಂತ್ರಜ್ಞಾನದಿಂದ ರಸ್ತೆ ಗುಂಡಿಗಳ ದುರಸ್ತಿಯನ್ನು ವೇಗವಾಗಿ, ಪರಿಣಾಮಕಾರಿಯಾಗಿ ಹಾಗೂ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿ ಕೈಗೊಳ್ಳಲು ಸಾಧ್ಯವಾಗಲಿದೆ.

