ಇವರು ಬ್ರಿಟಿಷರ ಬಂಟರು; ಕಾನೂನಿಗೆ ನೆಂಟರು!

Most read

ಬ್ರಿಟಿಷ್ ಆಡಳಿತ ಜತೆಗೆ ಉತ್ತಮ ಸಂಬಂಧ ಹೊಂದಿದ್ದ ಕಾರಣಕ್ಕೆ ಕರಾವಳಿ- ಮಲೆನಾಡು ಪ್ರದೇಶಗಳಲ್ಲಿ ಧರ್ಮಸ್ಥಳದ ಪ್ರಭಾವ ಹೆಚ್ಚಲಾರಂಭಿಸಿತ್ತು. ಮಂಜಯ್ಯ ಹೆಗ್ಗಡೆ ಅವರ ಆಡಳಿತಾವಧಿಯಲ್ಲಿ ದೇವಸ್ಥಾನ ಯಾತ್ರಿಕರನ್ನು ಆಕರ್ಷಿಸಿತ್ತು. ಪಾಳೇಗಾರಿಕೆ ಅಧಿಕೃತವಾಗಿ ಅಂತ್ಯವಾಗಿತ್ತು. ನ್ಯಾಯ ಪಂಚಾಯ್ತಿಗೆ, ದೇವಸ್ಥಾನದ ಆಡಳಿತಕ್ಕೆ ಸೀಮಿತವಾಗಿದ್ದ ಧರ್ಮಾಧಿಕಾರದ ಪಟ್ಟವನ್ನು ಮಂಜಯ್ಯ ಹೆಗ್ಗಡೆ ಆಧುನಿಕ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕುವ ಮೂಲಕ ಸಂವಿಧಾನದ ಚೌಕಟ್ಟಿಗೂ ವಿಸ್ತಾರಗೊಳಿಸಿದ್ದರು – ಪ್ರಶಾಂತ್‌ ಹುಲ್ಕೋಡ್‌, ಪತ್ರಕರ್ತರು.

ಜೈನ ಧರ್ಮದವರ ಆಡಳಿತಾಧಿಕಾರ ಒಪ್ಪಿಕೊಂಡು ಮಾಧ್ವ ಬ್ರಾಹ್ಮಣರಿಂದ ನಿತ್ಯಪೂಜೆಯ ಸ್ವರೂಪದಲ್ಲಿ ಶುರುವಾದ ಅಲೌಕಿಕ ಒಳಒಪ್ಪಂದ; ಶಿವನ ಸ್ವರೂಪದ ಮಂಜುನಾಥ ಸ್ವಾಮಿ ದೇವಾಲಯ ರಚನೆಗೆ ಕಾರಣವಾಗಿತ್ತು. ಇದೇ ಹೊತ್ತಿಗೆ ಈ ಭಾಗದಲ್ಲಿ ಸೃಷ್ಟಿಯಾದ ನೂರಾರು ದೇವಸ್ಥಾನಗಳ ಪೈಕಿ ಇದೂ ಒಂದು ಎಂಬುದು ಗಮನಾರ್ಹ.

ಧರ್ಮಸ್ಥಳದಲ್ಲಿ ದೇವಾಲಯ ಸ್ಥಾಪನೆಯಾಗುವ ಹೊತ್ತಿಗಾಗಲೇ ಪಕ್ಕದ ವಿಟ್ಲದಲ್ಲಿ ಮನೆತನವೊಂದು ಪ್ರಭಾವಶಾಲಿಯಾಗಿತ್ತು. ನಾಥ ಸಂಪ್ರದಾಯಕ್ಕೆ ಪರ್ಯಾಯವಾದ ಶಕ್ತಿ ಪರಂಪರೆಯನ್ನು- ಅಂದರೆ ದೇವಿ ಮಾತ್ರವೇ ಜಗತ್ತಿನ ಸರ್ವಶಕ್ತಿ- ಈ ಅರಸೊತ್ತಿಗೆ ಪಾಲಿಸುತ್ತಿತ್ತು. ಇವತ್ತಿಗೂ ಕರಾವಳಿ ಭಾಗದಲ್ಲಿ ಕಾಣಸಿಗುವ ಅಳಿಯ ಸಂತಾನ ಅಥವಾ ಮಾತೃ ಪ್ರಧಾನ ವ್ಯವಸ್ಥೆ ಇವರ ಆಡಳಿತದ ಬಳವಳಿ. ಅವರನ್ನೂ ಹೆಗ್ಗಡೆ ಅರಸರು ಎಂದೇ ಕರೆಯಲಾಗುತ್ತಿತ್ತು. ಅವರ ಮನೆಯನ್ನು ಅರಮನೆ ಎಂದೂ, ದ್ವಾರವನ್ನು ಆನೆಯ ಹೆಬ್ಬಾಗಿಲೂ ಎಂದು ಗುರುತಿಸಲಾಗುತ್ತಿತ್ತು ಎಂಬುದಕ್ಕೆ ಉಲ್ಲೇಖಗಳು ಸಿಗುತ್ತವೆ. ‘ಡೆಕ್ಕನ್ ಹೆರಾಲ್ಡ್’ ದಿನ ಪತ್ರಿಕೆಯ 2019ರ ವರದಿ ಪ್ರಕಾರ, ಈಗಲೂ ಅಳಿದುಳಿದಿರುವ ಮನೆಯ ಆವರಣದಲ್ಲಿ ಇರುವ ‘ಶಕ್ತಿ ಕಲ್ಲು’, ಬಾವಿಗಳು, ಮುರಿದು ಬಿದ್ದ ಕೋಟೆಯ ಗೋಡೆಗಳು ಇವರ ಆಡಳಿತ ವ್ಯವಸ್ಥೆಯ ಪುರಾವೆಯಾಗಿ ಉಳಿದುಕೊಂಡಿವೆ.

ವಿಟ್ಲದಲ್ಲಿ ಈ ದೊಂಬ ಹೆಗ್ಗಡೆಯ ಆಡಳಿತ ಜಾರಿಯಲ್ಲಿದ್ದಾಗಲೇ ಅತ್ತ ಉತ್ತರದಲ್ಲಿ ವಿಜಯನಗರ ಸಾಮ್ರಾಜ್ಯ ಪತನ ಹೊಂದಿತು. ಅವರ ನಂತರ ಸಾಮ್ರಾಜ್ಯ ಕಟ್ಟಲು ಮುಂದಾದ ಕೆಳದಿ ನಾಯಕರು ದಕ್ಷಿಣ ಕನ್ನಡದ ಭೂಭಾಗದ ಮೇಲೂ ಪ್ರಭಾವ ಹೊಂದಿದ್ದರು. ಆದರೆ ವಿಕೇಂದ್ರೀಕರಣಕ್ಕೆ ಒತ್ತು ನೀಡಿದ್ದ ಕೆಳದಿ ನಾಯಕರು ಸ್ಥಳೀಯ ಸಣ್ಣ ಪುಟ್ಟ ರಾಜ ಮನೆತನಗಳನ್ನು ಅಧಿಕಾರದಿಂದ ಕದಲಿಸುವ ಕೆಲಸ ಮಾಡಲಿಲ್ಲ. ಹೀಗಾಗಿ, ಸುಂಕವನ್ನು ಕಟ್ಟಿದರೂ, ಆಡಳಿತದಲ್ಲಿ ವಿಟ್ಲದ ದೊಂಬ ಹೆಗ್ಗಡೆ ಮನೆತನದ ಪ್ರಭಾವಳಿ ಏನೂ ಕಡಿಮೆಯಾಗಿರಲಿಲ್ಲ. ಇವರುಗಳು ಕೂಡ ಸಾಕಷ್ಟು ದೇವತೆಗಳ ಮಂದಿರಗಳನ್ನು ನಿರ್ಮಿಸಿದರು. ಅದರಲ್ಲಿ ಪ್ರಮುಖವಾದುದರಲ್ಲಿ ಇವತ್ತಿನ ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನ ಕೂಡ ಒಂದು.

ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನ

‘ವಿಜಯನಗರ ಸಾಮ್ರಾಜ್ಯದ ಅಂತ್ಯವಾಗುವ ಮೂಲಕ ಕೆಳದಿ ನಾಯಕರಿಗೆ ಹೆಚ್ಚು ಸ್ವಾತಂತ್ರ್ಯ ಸಿಕ್ಕಂತಾಗಿತ್ತು. ಈ ಸಮಯದಲ್ಲಿ ‘ಸಿಸ್ತ್’ ಎಂಬ ತೆರಿಗೆ ಪದ್ಧತಿಯನ್ನು ಜಾರಿಗೆ ತರಲಾಯಿತು. ಇದು ಈ ಭೂಭಾಗದಲ್ಲಿ ನಡೆದ  ಕಂದಾಯ ವಸೂಲಾತಿಯ ಚಿತ್ರಣ,’ ಎಂದು ಉಲ್ಲೇಖಿಸುತ್ತಾರೆ ಕರ್ನಾಟಕದ ಮಾವೋವಾದಿ ಪಕ್ಷದ ಕಾರ್ಯದರ್ಶಿಯಾಗಿದ್ದ ಸಾಕೇತ್ ರಾಜನ್. ಅವರು ‘ಸಾಕಿ’ ಹೆಸರಿನಲ್ಲಿ ಪ್ರಕಟಿಸಿದ ಕರ್ನಾಟಕದ ‘ಮೇಕಿಂಗ್ ಹಿಸ್ಟರಿ’ ಪುಸ್ತಕದಲ್ಲಿ ಈ ವೇಳೆಯಲ್ಲಿ ದಕ್ಷಿಣ ಕನ್ನಡದಲ್ಲಿ ನಡೆದ ಐತಿಹಾಸಿಕ ಬೆಳವಣಿಗೆಗಳನ್ನು ಕಟ್ಟಿಕೊಡುತ್ತಾರೆ. ಕೆಳದಿ ನಾಯಕರ ಕಾಲದಲ್ಲಿ ಹಲವು ವೈಷ್ಣವ ಹಾಗೂ ಶೈವ ದೇವಸ್ಥಾನಗಳಿಗೆ ದೇಣಿಗೆ ನೀಡಿದ ಬಗೆಗೆ ಉಲ್ಲೇಖಗಳು ಸಿಗುತ್ತವೆ. ಆದರೆ ಈ ಸಮಯದಲ್ಲಿ ಧರ್ಮಸ್ಥಳದ ಸುತ್ತಮುತ್ತ ನಡೆದ ಬೆಳವಣಿಗೆಗಳ ಬಗೆಗೆ ದಾಖಲೆಗಳು ಲಭ್ಯವಿಲ್ಲ. ಬಹುಶಃ ರಾಜ ಮನೆತನೆಗಳ ಅಡಿಯಲ್ಲಿಯೇ ದೇವಸ್ಥಾಗಳನ್ನು ಹುಟ್ಟುಹಾಕುವ ಕೆಲಸ ನಡೆಯುತ್ತಿದ್ದ ಈ ಸಮಯದಲ್ಲಿ ಭಿರ್ಮಣ್ಣ ಪರ್ಗಡೆಯವರ ದೇವಸ್ಥಾನ ಇನ್ನೂ ಮುಖ್ಯವಾಹಿನಿಯ ಪ್ರವೇಶ ಪಡೆಯದೇ ಹೋಗಿರುವ ಸಾಧ್ಯತೆಗಳೂ ಇವೆ.

ಆವರೆಗೂ ರಾಜ ಹಾಗೂ ರಾಜಮನೆತನಗಳ ಬಗ್ಗೆ ಬೆಳೆದಿದ್ದ ಆರಾಧನಾ ಭಾವವು, ದೇವಸ್ಥಾನ ಹಾಗೂ ದೇವರುಗಳ ಕಡೆಗೆ ತಿರುಗಿದ ಕಾಲಘಟ್ಟವೂ ಇದೇ ಆಗಿತ್ತು ಎಂಬುದು ಗಮನಾರ್ಹ. ಅದಕ್ಕೆ ಹೊರಗಿನಿಂದ ವ್ಯಾಪಾರಕ್ಕಾಗಿ ಬಂದಿಳಿದಿದ್ದ ಪೋರ್ಚುಗೀಸರು, ಬ್ರಿಟಿಷರು ಹಾಗೂ ಡಚ್ಚರ ಜತೆಯಲ್ಲಿ ಕೆಳದಿ ನಾಯಕರು ಸಂಪರ್ಕಗಳನ್ನು ಇಟ್ಟುಕೊಂಡಿದ್ದರ ಪ್ರಭಾವವೂ ಕಾರಣ ಇರಬಹುದು. ಜತೆಗೆ, ದೇವರು ಎಂಬ ಪರಿಕಲ್ಪನೆಗೆ ಹೆಚ್ಚು ರಾಜಾಶ್ರಯದ ಜತೆಗೆ ಹಣಬಲವೂ ಸೇರಿಕೊಂಡಿದ್ದು ಪ್ರಮುಖವಾಗಿತ್ತು. ಹೇಗೆ ಎಂದರೆ, ದೇವರನ್ನು ಪೂಜಿಸುವ ವರ್ಗ ಎಂದು ಅಷ್ಟೊತ್ತಿಗಾಗಲೇ ಗುರುತಿಸಿಕೊಂಡು, ಆಚರಣೆಗೆ ಇಳಿದಿದ್ದ ಸ್ಥಳೀಯ ಬ್ರಾಹ್ಮಣ ಜನಾಂಗಕ್ಕೆ ಕೆಳದಿ ನಾಯಕ ‘ಸಿಸ್ತ್’ ತೆರಿಗೆ ಸಂಗ್ರಹಿಸುವ ಹೊಣೆಗಾರಿಕೆ ವಹಿಸಿದ್ದು ಒಂದು ರೀತಿಯಲ್ಲಿ ಗೇಮ್‌ ಚೇಂಜರ್‍. ಈ ವೇಳೆಯಲ್ಲಿ, ರಾಜರನ್ನು ಪಕ್ಕಕ್ಕಿಟ್ಟು, ಬ್ರಾಹ್ಮಣರೇ ಮುಂದಾಳುಗಳಾಗಿ ದೇವಸ್ಥಾನಗಳನ್ನು ನಿರ್ಮಿಸುವ ಕೆಲಸವನ್ನೂ ಮಾಡಿದ್ದಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತವೆ.

ನಂತರ ಬಂದ ಹೈದರ್ ಅಲಿ, ಟಿಪ್ಪು ಆಡಳಿತ ಕಾಲದಲ್ಲೂ ಧಾರ್ಮಿಕ ಕ್ಷೇತ್ರಗಳ ವಿಚಾರದಲ್ಲಿ ಹೆಚ್ಚಿನ ಬದಲಾವಣೆಗಳೇನೂ ಆಗಲಿಲ್ಲ. ಬದಲಿಗೆ ಆಡಳಿತ ವ್ಯವಸ್ಥೆಯೇ ಎಲ್ಲಾ ತರಹದ ಧಾರ್ಮಿಕ ಕೇಂದ್ರಗಳಿಗೆ ದಾನಗಳನ್ನು ನೀಡಿದ್ದಕ್ಕೆ ಪುರಾವೆಗಳು ಸಿಗುತ್ತವೆ. 1763ರಲ್ಲಿ ಕೆಳದಿ ಸಂಸ್ಥಾನವನ್ನು ಮೈಸೂರು ಸಾಮ್ರಾಜ್ಯ ವಶಕ್ಕೆ ಪಡೆಯುವ ಮೂಲಕ ಹೈದರ್ ಅಲಿ ದಕ್ಷಿಣ ಕನ್ನಡದ ಭೂಭಾಗದ ಮೇಲೆ ಹಿಡಿತ ಸಾಧಿಸಲು ಮುಂದಾಗುತ್ತಾರೆ. ಅದೇ ವರ್ಷ ವಿಟ್ಲದ ದೊಂಬ ಹೆಗ್ಗಡೆ ಕುಟುಂಬವನ್ನೂ ಅಧಿಕಾರದಿಂದ ಉಚ್ಛಾಟಿಸಲಾಗುತ್ತದೆ. ಈ ಸಮಯದಲ್ಲಿ ದೊಂಬ ಹೆಗ್ಗಡೆ ಹಾಗೂ ಮರಿಯಪ್ಪರಸು ಮತ್ತು ಇನ್ನೂ ನಾಲ್ವರು ತಮ್ಮಂದಿರು ಇಸ್ಲಾಂಗೆ ಮತಾಂತರವಾಗುತ್ತಾರೆ. ಇದಕ್ಕೆ ಒಪ್ಪಿದ ಹೈದರ್ ಅಲಿ ಮತ್ತೆ ಅವರನ್ನು ವಿಟ್ಲದ ಅರಮನೆಗೆ ಹಿಂತಿರುಗಿಸುತ್ತಾರೆ ಎಂಬ ಉಲ್ಲೇಖಗಳಿವೆ. ಡಾ. ಎನ್. ಶ್ಯಾಮ ಭಟ್ ಅವರ “THE SULTANS OF MYSORE AND THEIR RELATIONS WITH THE CHIEFTAINS OF SOUTH KANARA” ಎಂಬ ಮಹಾಪ್ರಬಂಧ ಈ ಕುರಿತು ಹೆಚ್ಚಿನ ಬೆಳಕು ಚೆಲ್ಲುತ್ತದೆ.

ಶಿಥಿಲ ಗೊಂಡಿರುವ ವಿಟ್ಲ ಅರಮನೆ

ವಿಟ್ಲದ ರಾಜರ ಆಡಳಿತ ಮುಂದುವರಿಯಿತಾದರೂ, ಮೊದಲಿದ್ದ ಸ್ವತಂತ್ರ ಕಳೆದು ಹೋಗಿತ್ತು. ಮೇಲಾಗಿ, ಹೈದರ್ ಅಲಿ ದುಬಾರಿ ತೆರಿಗೆ ಭಾರವನ್ನು ಅವರು ಹೊರಲು ಸಾಧ್ಯವಾಗದೇ ಹೋಗಿದ್ದರು. ಒಂದು ಹಂತದಲ್ಲಿ ಹೈದರ್ ಅಲಿ ದೊಂಬ ಹೆಗ್ಗಡೆ ಆಡಳಿತವನ್ನು ಪಕ್ಕಕ್ಕಿಟ್ಟು ಜನರಿಗೆ ನೇರವಾಗಿ ಕೃಷಿಯನ್ನು ಉತ್ತೇಜಿಸಿದ್ದು, ಯಾರು ಹೊಸತಾಗಿ ಕೃಷಿ ಭೂಮಿಯನ್ನು ಉಳುಮೆ ಮಾಡುತ್ತಾರೋ ಅವರನ್ನೇ ಭೂ ಒಡೆಯರನ್ನಾಗಿ ಮಾಡುವ ನಿರ್ಧಾರಗಳು, ತೆರಿಗೆ ಸಂಗ್ರಹ ಜಾಗದಲ್ಲಿದ್ದ ಬ್ರಾಹ್ಮಣರನ್ನು ಪಕ್ಕಕ್ಕಿಟ್ಟು ಮುಸ್ಲಿಂರನ್ನು ಆ ಜಾಗಗಳಿಗೆ ನೇಮಕ ಮಾಡಿದ್ದು ಸ್ಥಳೀಯ ಪಾಳೇಗಾರರ ಸ್ವರೂಪದ ರಾಜ ಮನೆತನಗಳಿಗೆ ಕಿರಿಕಿರಿಯೂ ಆಗಿತ್ತು. ಹೀಗಿರುವಾಗಲೇ, ಮೊದಲ ಆಂಗ್ಲೋ- ಮೈಸೂರು ಯುದ್ಧ ಘೋಷಣೆಯಾಗಿತ್ತು; 1767.

ಈ ಸಮಯದಲ್ಲಿ, ವಿಟ್ಲದ ದೊಂಬ ಹೆಗ್ಗಡೆಯ ತಮ್ಮನಾದ ಅಚ್ಯುತ ಹೆಗ್ಗಡೆ ಬ್ರಿಟಿಷರ ಪರವಾಗಿ ಕೆಲಸ ಮಾಡಿದ್ದ. ಮೂರು ವರ್ಷಗಳ ಕಾಲ ನಡೆದ ಯುದ್ಧದಲ್ಲಿ ಗೆದ್ದು ಬಂದ ಹೈದರ್ ಅಲಿ ಮೊದಲು ಮಾಡಿದ ಕೆಲಸ ಅಚ್ಯುತ ಹೆಗ್ಗಡೆಯನ್ನು ನೇಣಿಗೇರಿಸಿದ್ದು ಮತ್ತು ವಿಟ್ಲದ ಆನೆ ಬಾಗಿಲಿನ ಅರಮನೆಯನ್ನು ಸುಟ್ಟುಹಾಕಿದ್ದು. ಹೀಗೆ ಅನಿವಾರ್ಯವಾಗಿ ವಿಟ್ಲದಿಂದ ಹೊರಬಿದ್ದ ಹೆಗ್ಗಡೆ ಕುಟುಂಬ ಸ್ವೀಕರಿಸಿದ್ದ ಇಸ್ಲಾಂ ಧರ್ಮವನ್ನು ಮರೆತು ತ್ರಿಶೂರ್‌ನಲ್ಲಿದ್ದ ಬ್ರಿಟಿಷರ ನೆಲೆಯಲ್ಲಿ ಆಶ್ರಯ ಪಡೆಯುತ್ತಾರೆ. ವರ್ಷಕ್ಕೆ ನೂರು ರೂಪಾಯಿ ನೆರವನ್ನೂ ಬ್ರಿಟಿಷರಿಂದ ಪಡೆದುಕೊಳ್ಳುತ್ತಾರೆ ಎಂದು ಬರೆಯುತ್ತಾರೆ ಡಾ. ಶ್ಯಾಮ ಭಟ್.

ಅಲ್ಲಿಂದ ಮುಂದೆ, 1799ರಲ್ಲಿ ಟಿಪ್ಪು ಸಾಯುವವರೆಗೂ ದಕ್ಷಿಣ ಕನ್ನಡದ ವಿಟ್ಲದ ರಾಜಮನೆತನ ರಾಜ್ಯ ಭ್ರಷ್ಟರಾಗಿಯೇ ಬದುಕಿದರು. ನಾಲ್ಕನೇ ಆಂಗ್ಲೊ- ಮೈಸೂರು ಯುದ್ಧದಲ್ಲಿ ಟಿಪ್ಪು ಸಾವನ್ನಪ್ಪಿದ ನಂತರ ಮತ್ತೆ ಅವರುಗಳು ತಮ್ಮ ಊರುಗಳಿಗೆ ಮರಳಿದರು. ಆದರೆ ಬದಲಾದ ಆಡಳಿತ ವ್ಯವಸ್ಥೆಯನ್ನು ಅವರು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಈ ಸಮಯದಲ್ಲಿ ತಮ್ಮ ನಿಯತ್ತನ್ನು ಬದಲಿಸಿದ ದೊಂಬ ಹೆಗ್ಗಡೆ ಕುಟುಂಬಸ್ಥರು ಬ್ರಿಟಿಷರ ವಿರುದ್ಧ ಬಂಡಾಯ ಏಳುತ್ತಾರೆ. ‘’ಉಪ್ಪಿನ ಅಂಗಡಿಯಲ್ಲಿ ಬ್ರಿಟಿಷ್ ಅಧಿಕಾರಿಗಳನ್ನು ಓಡಿಸುತ್ತಾರೆ. ನಂತರ ಟಿಪ್ಪು ಕಟ್ಟಿದ ಜಮಾಲಬಾದ್ ಕೋಟೆಯನ್ನು ವಶಕ್ಕೆ ಪಡೆಯುತ್ತಾರೆ. ಅವರನ್ನು ಸೋಲಿಸಲು ಬ್ರಿಟಿಷರು ಧರ್ಮಸ್ಥಳದ ಅಂದಿನ ಆಡಳಿತ ನೋಡಿಕೊಳ್ಳುತ್ತಿದ್ದ ಕುಮಾರಯ್ಯ ಹೆಗ್ಗಡೆಯವರನ್ನು ಸಂಪರ್ಕಿಸುತ್ತಾರೆ. 200 ಸೈನಿಕರನ್ನು ಕಳುಹಿಸಿಕೊಡುತ್ತಾರೆ. ಈ ಮೂಲಕ ಬ್ರಿಟಿಷರ ವಿರುದ್ಧ ಬಂಡಾಯ ಎದ್ದಿದ್ದ ವಿಟ್ಲ ರಾಜರನ್ನು ವಶಕ್ಕೆ ಪಡೆದು ನೇಣಿಗೆ ಏರಿಸಲಾಗುತ್ತದೆ,’’ ಎಂಬುದು ಪತ್ರಕರ್ತ ನವೀನ್ ಸೂರಿಂಜೆ ಅವರ ಸಂಶೋಧನೆ. ಬ್ರಿಟಿಷರಿಗೆ ಸಹಾಯ ಮಾಡಿರುವ ಕಾರಣಕ್ಕೆ ಧರ್ಮಸ್ಥಳ ಕ್ಷೇತ್ರದ ಆಡಳಿತಾಧಿಕಾರವನ್ನು ಸ್ಥಾನಿಕ ಬ್ರಾಹ್ಮಣರಿಂದ ಸ್ಥಾನಿಕ ಜೈನರಿಗೆ ನೀಡಲಾಯಿತು ಎಂಬುದು ಅವರು ಪ್ರತಿಪಾದನೆ.

ವಿಟ್ಲದ ಅರಸರ ಬಂಡಾಯವನ್ನು ಹತ್ತಿಕ್ಕಿದ ಬ್ರಿಟಿಷರು ಮೊದಲು ಮೈಸೂರು ಸಾಮ್ರಾಜ್ಯದ ಗಡಿಗಳನ್ನು ಗುರುತಿಸುತ್ತಾರೆ. ಇದರ ಭಾಗವಾಗಿ ಧರ್ಮಸ್ಥಳ ಮದ್ರಾಸು ಪ್ರೆಸಿಡೆನ್ಸಿಗೆ ಸೇರಿಕೊಳ್ಳುತ್ತದೆ. ಅಷ್ಟೊತ್ತಿಗಾಗಲೇ ಸಾಮಾಜಿಕ ಸ್ಥಾನಮಾನದಲ್ಲಿ ಬಹು ಎತ್ತರಕ್ಕೆ ಏರಿದ್ದ ‘ದೇವರು, ದೇವಸ್ಥಾನ’ಗಳ ಆಡಳಿತ ರಾಜಾಧಿಕಾರದ ಆಚೆಗೂ ಪ್ರಭಾವಶಾಲಿಯಾಗಿರುತ್ತದೆ. ಈ ಸಮಯದಲ್ಲಿಯೇ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ಮದ್ರಾಸ್ ಪ್ರೆಸಿಡೆನ್ಸಿಯ ವ್ಯಾಪ್ತಿಯ ಹಲವು ದೇವಸ್ಥಾನಗಳ ದುರಾಡಳಿತಗಳ ಬಗ್ಗೆ ದೂರುಗಳು ಬರಲು ಶುರುವಾಗುತ್ತವೆ. ಪರಿಣಾಮ, Madras Regulation VII of 1817 ಹೊರಬೀಳುತ್ತದೆ. ಇದರ ಅಡಿಯಲ್ಲಿ ದೇವಸ್ಥಾನಗಳ ಆಡಳಿತಕ್ಕೆ ಮೊದಲ ಬಾರಿಗೆ ಪಾರದರ್ಶಕ ವ್ಯವಸ್ಥೆಯ ಅಗತ್ಯವನ್ನು ಬ್ರಿಟಿಷ್ ಆಡಳಿತ ಅಳವಡಿಸುವ ಪ್ರಯತ್ನ ಮಾಡುತ್ತದೆ. ದೇವಸ್ಥಾನಗಳು, ಮಠಗಳು, ಮಸೀದಿಗಳು, ದರ್ಗಾಗಳು, ಶಿಕ್ಷಣ ಸಂಸ್ಥೆಗಳು, ಸಮುದಾಯ ಭವನಗಳು, ನೀರಿನ ಮೂಲಗಳು ಹಾಗೂ ಸೇತುವೆಗಳನ್ನು ಕಂದಾಯ ಇಲಾಖೆ ಅಡಿಯಲ್ಲಿ ತರುವುದು ಈ ಕಾಯ್ದೆಯ ಉದ್ದೇಶವಾಗಿರುತ್ತದೆ. ಆದರೆ, ನಂತರದ ದಿನಗಳಲ್ಲಿ ಕ್ರಿಶ್ಚಿಯನ್ ಮಿಶನರಿಗಳು ಬ್ರಿಟಿಷ್ ಸರಕಾರದ ಇದೇ ಕಾಯ್ದೆಯನ್ನು ಪ್ರಶ್ನಿಸಲು ಶುರುಮಾಡುತ್ತವೆ. ಹೀಗಾಗಿ ಎಲ್ಲಾ ದೇವಸ್ಥಾನ, ಮಸೀದಿಗಳ ನಿತ್ಯ ನಿರೂಪಣೆಯ ಆಡಳಿತದಿಂದ ಬ್ರಿಟಿಷ್ ಆಡಳಿತವೇ ಹಿಂದೆ ಸರಿಯುವ Religious Endowments Act, 1863 ಜಾರಿಗೆ ಬಂತು. ಇದರಿಂದಾಗಿ ಮತ್ತೆ ಧರ್ಮಸ್ಥಳದ ದೇವಸ್ಥಾನದ ಆಡಳಿತ ಜೈನ ಕುಟುಂಬದ ಪಾಲಿಗೆ ಲಭ್ಯವಾಯಿತು ಎನ್ನುತ್ತವೆ ಇತಿಹಾಸದ ದಾಖಲೆಗಳು.

ಆದರೆ, ಅಷ್ಟೊತ್ತಿಗಾಗಲೇ ಅಕ್ಕಪಕ್ಕದ ದೇವಸ್ಥಾನಗಳನ್ನು ಮುನ್ನಡೆಸುತ್ತಿದ್ದ ರಾಜವಂಶಗಳು ಪ್ರಭಾವವನ್ನು ಕಳೆದುಕೊಂಡಿದ್ದವು ಇಲ್ಲವೇ ನಾಶವಾಗಿದ್ದವು. ಬ್ರಿಟಿಷ್ ಆಡಳಿತದಲ್ಲಿ ಕುಟುಂಬ ಕೇಂದ್ರಿತ ದೇವಸ್ಥಾನಗಳೇ ಮುನ್ನೆಲೆಗೆ ಬಂದವು. ಜನರಲ್ಲಿ ಅಷ್ಟೊತ್ತಿಗಾಗಲೇ ಸೃಷ್ಟಿಯಾಗಿದ್ದ ದೇವರ ಎಡೆಗಿನ ಭಕ್ತಿಯನ್ನು ತಮ್ಮ ಕಡೆಗೆ ಸೆಳೆಯುವಲ್ಲಿ ಇಂತಹ ಕೆಲವು ದೇವಸ್ಥಾನಗಳು ಪ್ರಮುಖ ಪಾತ್ರವನ್ನು ವಹಿಸಿದ್ದವು. ಅರಸು ಮನೆತನಗಳಿಗೆ ಹೋಲಿಸಿದರೆ, ಕಡಿಮೆ ಅಧಿಕಾರಯುತ ನಡವಳಿಕೆ ಇಂತಹ ಕ್ಷೇತ್ರಗಳ ಅಂದಿನ ಯಾತ್ರಿಕರ ಆಕರ್ಷಣೆಗೆ ಕಾರಣವಾಗಿರಲೂ ಬಹುದು.

ಇವತ್ತಿನ ಧರ್ಮಸ್ಥಳದ ವಿಚಾರದಲ್ಲಿ ದಾಖಲೆಗಳು ಆರಂಭವಾಗುವುದು ಮಂಜಯ್ಯ ಹೆಗ್ಗಡೆ ಮೂಲಕ. ಇವರು 1918ರಲ್ಲಿ ತಮ್ಮ 29ನೇ ವಯಸ್ಸಿಗೆ ಧರ್ಮಾಧಿಕಾರಿಯಾಗಿ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯದ ಉತ್ತರಾಧಿಕಾರ ವಹಿಸಿಕೊಂಡರು. ಇವರ ಆಡಳಿತವಿದ್ದ ಸಮಯದಲ್ಲಿಯೇ Madras Act II of 1927 ಹೊರಬಿತ್ತು. ಇದರ ಭಾಗವಾಗಿ ಬಹುತೇಕ ಸಾರ್ವಜನಿಕ ಧಾರ್ಮಿಕ ಕೇಂದ್ರಗಳು ನೋಂದಾವಣಿ ಮಾಡಿಕೊಳ್ಳಬೇಕು ಎಂದು ಕಾನೂನು ಹೇಳಿತು. ಆದರೆ ಇದೇ ಕಾಯ್ದೆಯ Sec. 3(b) ಅಡಿಯಲ್ಲಿ ಧರ್ಮಸ್ಥಳವನ್ನು ಜೈನ್‌ ಕುಟುಂಬದ ಆಡಳಿತ ಎಂಬ ಒಂದೇ ಕಾರಣಕ್ಕೆ ಹಿಂದೂ ದೇವಸ್ಥಾನಗಳ ನೋಂದಾವಣಿ ಪಟ್ಟಿಯಿಂದ ಕೈಬಿಡಲಾಯಿತು. 1945ರಲ್ಲಿ ಸ್ವಾತಂತ್ರ್ಯ ಸಿಗುವ ಮುಂಚೆ ನಡೆದ ಪ್ರಕ್ರಿಯೆಗಳಲ್ಲಿಯೂ ಧರ್ಮಸ್ಥಳದಲ್ಲಿ ಜೈನ್ ಕುಟುಂಬದ ಸ್ವಾಯತ್ತತೆಯನ್ನು ಮುಂದುವರಿಸಲಾಯಿತು.

ಬ್ರಿಟಿಷ್ ಆಡಳಿತ ಜತೆಗೆ ಉತ್ತಮ ಸಂಬಂಧ ಹೊಂದಿದ್ದ ಕಾರಣಕ್ಕೆ ಕರಾವಳಿ- ಮಲೆನಾಡು ಪ್ರದೇಶಗಳಲ್ಲಿ ಧರ್ಮಸ್ಥಳದ ಪ್ರಭಾವ ಹೆಚ್ಚಲಾರಂಭಿಸಿತ್ತು. ಮಂಜಯ್ಯ ಹೆಗ್ಗಡೆ ಅವರ ಆಡಳಿತಾವಧಿಯಲ್ಲಿ ದೇವಸ್ಥಾನ ಯಾತ್ರಿಕರನ್ನು ಆಕರ್ಷಿಸಿತ್ತು. ಜತೆಯಲ್ಲಿಯೇ ದೇಶದಲ್ಲಿ ನಡೆದ ಸ್ವತಂತ್ರ ಹೋರಾಟ ಸಂವಿಧಾನ ಜಾರಿಗೆ ಕಾರಣವಾಗಿತ್ತು; ಪಾಳೇಗಾರಿಕೆ ಅಧಿಕೃತವಾಗಿ ಅಂತ್ಯವಾಗಿತ್ತು. ನ್ಯಾಯ ಪಂಚಾಯ್ತಿಗೆ, ದೇವಸ್ಥಾನದ ಆಡಳಿತಕ್ಕೆ ಸೀಮಿತವಾಗಿದ್ದ ಧರ್ಮಾಧಿಕಾರದ ಪಟ್ಟವನ್ನು ಮಂಜಯ್ಯ ಹೆಗ್ಗಡೆ ಆಧುನಿಕ ಶಿಕ್ಷಣ ಸಂಸ್ಥೆಯನ್ನು ಹುಟ್ಟುಹಾಕುವ ಮೂಲಕ ಸಂವಿಧಾನದ ಚೌಕಟ್ಟಿಗೂ ವಿಸ್ತಾರಗೊಳಿಸಿದ್ದರು.

“ಸರಕಾರ ಧರ್ಮಸ್ಥಳವನ್ನು ವಶಪಡಿಸಿಕೊಳ್ಳಲು ಬಂದಿತ್ತಂತೆ, ಆಗ ನೇತ್ರಾಣಿಗೆ (ನೇತ್ರಾವತಿ) ಬೆಂಕಿ ಬಿದ್ದು ಸೇತುವೆಗಳೆಲ್ಲಾ ಸುಟ್ಟು ಹೋಯ್ತಂತೆ…’ ಎಂಬ ಕತೆಯನ್ನು ತೊಂಬತ್ತರ ದಶಕದಲ್ಲಿ ತೀರ್ಥಹಳ್ಳಿಯಲ್ಲಿ ವಾಸಿಸುತ್ತಿದ್ದ ನನ್ನ ಅಜ್ಜಿ ಹೇಳುತ್ತಿದ್ದ ಮಾತುಗಳನ್ನು ನನ್ನ ಸಂಬಂಧಿಯೊಬ್ಬರು ನೆನಪಿಸಿದರು. ಧರ್ಮಸ್ಥಳದಿಂದ ಒಂದು ಕಲ್ಲನ್ನೂ ತರಬಾರದು ಎಂಬ ಜನಪದ ಪ್ರತೀತಿಗಳಿಗೆ ಮನ್ನಣೆ ಸಿಕ್ಕ ಕಾಲವೂ ಇದೆ.

ಇದನ್ನೂ ಓದಿ- ಧರ್ಮಸ್ಥಳ: ಮುಖ್ಯವಾಹಿನಿಯ ಆಟ ಮತ್ತು ಡಿಜಿಟಲ್ ಪ್ರತಿರೋಧ | ಭಾಗ 1

ಶಿವಮೊಗ್ಗದಲ್ಲಿರುವ ಸ್ನೇಹಿತ ಪ್ರದೀಪ್ ಕೆ. ಎಸ್ ಜತೆಯಲ್ಲಿಯೂ ಇಂತಹದ್ದೇ ನೆನಪುಗಳಿವೆ. ಅವರ ತಂದೆ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದವರು. ಬೂದಿ ಬಸಪ್ಪನ ನಗರ ಕೋಟೆಯ ಪರಿಸರದಲ್ಲಿಯೇ ಬೆಳೆದ ಪ್ರದೀಪ್‌ ಸುತ್ತಲೂ ಧರ್ಮಸ್ಥಳದ ಛಾಯೆ ಬಾಲ್ಯದಿಂದಲೂ ಹರಡಿಕೊಂಡಿದೆ. “ನನ್ನ ತಂದೆ ಸಂಪ್ರದಾಯವಾದಿಯಾಗಿರಲಿಲ್ಲ. ದೇವರು ಧರ್ಮಗಳ ವಿಚಾರದಲ್ಲಿ ನಮಗೇನು ಕಟ್ಟುಪಾಡುಗಳನ್ನು ಹಾಕಿರಲಿಲ್ಲ. ಆದರೂ, ಧರ್ಮಸ್ಥಳದ ವಿಚಾರ ಬಂದಾಗ ಅವರ ಭಾವನೆಗಳು ಆದರಣೀಯ ಅನ್ನಿಸುತ್ತಿತ್ತು. ನಾವೆಲ್ಲಾ ಚಿಕ್ಕವರಿರುವಾಗ ಅಣ್ಣಪ್ಪ ಸ್ವಾಮಿ, ಮಂಜುನಾಥ ಸ್ವಾಮಿ ಮೇಲೆ ಆಣೆ ಅಂತ ಯಾರಾದರೂ ಹೇಳಿದರೆ ಅದನ್ನು ಸತ್ಯ ಎಂದು ನಂಬಲೇಬೇಕಿತ್ತು,’’ ಎಂಬುದು ಪ್ರದೀಪ್ ನೆನಪುಗಳು. ತೀರ್ಥಹಳ್ಳಿಯಂತಹ ಪ್ರಬುದ್ಧ ಮತಕ್ಷೇತ್ರದಲ್ಲಿಯೂ ಅಭ್ಯರ್ಥಿಗಳ ನಡುವೆ ಧರ್ಮಸ್ಥಳದ ಹೆಸರಿನಲ್ಲಿ ನಡೆದ ಆಣೆ ಪ್ರಮಾಣದ ಬಗೆಗೆ ಮಾಧ್ಯಮ ವರದಿಗಳು ಸಿಗುತ್ತವೆ.

ಮುಂದಿನ ಭಾಗದಲ್ಲಿ: ದಿ ರೈಸ್ ಆಫ್ ವೀರೇಂದ್ರ ಹೆಗ್ಗಡೆ: ಗ್ರಾಮೀಣಾಭಿವೃದ್ಧಿ ಮರೆಯಲ್ಲಿ ರಾಷ್ಟ್ರಪತಿ ಕನಸು!

ಪ್ರಶಾಂತ್‌ ಹುಲ್ಕೋಡ್

ಪತ್ರಕರ್ತರು

ಇದನ್ನೂ ಓದಿ- http://ದಿ ಮೇಕಿಂಗ್ ಆಫ್‌ ಧರ್ಮಸ್ಥಳ: ಹುಟ್ಟಿನ ಹಿಂದಿನ ರಹಸ್ಯಗಳು | ಭಾಗ – 2 https://kannadaplanet.com/the-making-of-dharmasthala-part-2/




More articles

Latest article