ದಲಿತರು, ಹಿಂದೂ, ಬ್ಯುಸಿನೆಸ್‌ಮನ್‌ಗಳನ್ನು ಕೊಲ್ಲುವ ಇವರು ಹಿಂದುತ್ವವಾದಿಗಳಲ್ಲ ಭೂಗತ ಪಾತಕಿಗಳು – ನವೀನ್‌ ಸೂರಿಂಜೆ

Most read


ನಾನು
ಕಳೆದ 19-20 ವರ್ಷಗಳಿಂದ ವಿಶೇಷವಾಗಿ ಮಂಗಳೂರಿನ ಕೋಮು ಗಲಭೆಗಳನ್ನು ವರದಿ ಮಾಡ್ತಾ ಇದ್ದೇನೆ. ನನಗೆ ಕಂಡ ಪ್ರಕಾರ ಹಿಂದುತ್ವವಾದಿಗಳು ಯಾರೆಲ್ಲ ಕೊಲೆ ಮಾಡಿದ್ದಾರೋ ಜೊತೆಗೆ ಯಾರೆಲ್ಲ ಕೊಲೆ ಆಗಲ್ಪಟ್ಟಿದ್ದಾರೋ ಇವರು ಯಾರು ಕೂಡ ಹಿಂದುತ್ವವಾದಿಗಳಲ್ಲ ಅಥವಾ ಹಿಂದುತ್ವವಾದಿ ಸಂಘಟನೆಯವರಲ್ಲ. ಇವರೆಲ್ಲರೂ ಕೂಡ ಕ್ರಿಮಿನಲ್ ಬ್ಯಾಕ್‌ಗ್ರೌಂಡ್ ಇರುವಂತಹ ರೌಡಿ ಶೀಟರ್‌ಗಳು ಅಥವಾ ಪಕ್ಕಾ ಭೂಗತ ಜಗತ್ತಿಗೆ ಸಂಬಂಧಪಟ್ಟವರು. ಅದು ಕ್ಯಾಂಡಲ್ ಸಂತು ಆಗಿರಬಹುದು ಅಥವಾ ಅದು ಎಕ್ಕೂರು ಬಾಬಾ ಆಗಿರಬಹುದು ಎಲ್ಲರೂ ಕೂಡ ಅಂಡರ್‌ವರ್ಲ್ಡ್‌ ಗೆ ಸಂಬಂಧಪಟ್ಟವರೇ. ಒಂದು ರೀತಿಯಲ್ಲಿ ಹಿಂದುತ್ವದ ಪೋಷಾಕನ್ನ ಹಾಕಿಕೊಂಡು ಅಥವಾ ಹಿಂದುತ್ವ ಮತ್ತು ದೇಶಾಭಿಮಾನ ಅನ್ನುವಂತದ್ದರ ಹಿಂದೆ ಅಡಗಿಕೊಂಡು ಮಾಡಿರುವಂತ ಕೆಲಸಗಳು. ಅವರ ಟ್ರ್ಯಾಕ್ ರೆಕಾರ್ಡ್ ಅನ್ನ ತೆಗೆದು ನೋಡಿದರೆ ಅವರೆಲ್ಲರೂ ಕೂಡ ಹಿಂದೂಗಳನ್ನೇ ಶೋಷಣೆ ಮಾಡಿದವರು. ಹಿಂದೂಗಳಲ್ಲೂ ಕೂಡ ಉದ್ಯಮಿಗಳು, ಹಿಂದುಳಿದ ವರ್ಗದವರು ದಲಿತರು ಇಂತವರನ್ನೇ ಶೋಷಣೆ ಮಾಡಿದಂತಹ ಒಂದು ಭೂಗತ ಜಗತ್ತೇನಿದೆ ಅಥವಾ ದಂಧೆಕೋರರು ಯಾರಿದ್ದಾರೆ ಇವರೇ ಕೊನೆ ಕೊನೆಯ ಹಂತದಲ್ಲಿ ಹಿಂದುತ್ವವಾದಿಗಳಾಗಿ ಕನ್ವರ್ಟ್ ಆಗ್ತಾರೆ ಅಥವಾ ಹಿಂದೂ ಸಂಘಟನೆಗಳು ಅವರನ್ನು ಕೊಲೆಗಳಿಗೆ ಬಳಸಿಕೊಳ್ಳುತ್ತೆ ಅನ್ನುವಂತದ್ದು ಸ್ಪಷ್ಟ. ಅದರಲ್ಲಿ ನಿನ್ನೆ ಕೊಲೆಯಾದಂತಹ ಸುಭಾಷ್ ಶೆಟ್ಟಿಯವರದ್ದು ಕೂಡ ಇಂತದ್ದೇ ಹಿನ್ನೆಲೆ. ಅವರು ಫಾಜಿಲ್‌ ನ ಕೊಲೆ ಮಾಡುವುದಕ್ಕಿಂತ ಮೊದಲು ಅವರ ಮೇಲೆ ದಾಖಲಾದಂತಹ ಎಲ್ಲಾ ಎಫ್ಐಆರ್‌ ಗಳಲ್ಲಿ ಯಾವುದು ಕೂಡ ಹಿಂದುತ್ವಕ್ಕೆ ಸಂಬಂಧಪಟ್ಟಿದ್ದಾಗಲಿ ಗೋರಕ್ಷಣೆಗೆ ಸಂಬಂಧಪಟ್ಟಿದ್ದಾಗಲಿ ಧರ್ಮರಕ್ಷಣೆಗೆ ಸಂಬಂಧಪಟ್ಟಿದ್ದಾಗಲಿ ಅಲ್ಲ ಅನ್ನುವಂತದ್ದು ಬಹಳ ಮುಖ್ಯ ಆಗುತ್ತೆ. ಸುಭಾಷ್ ಶೆಟ್ಟಿ ಅವರ ಮೇಲೆ ಈ ಹಿಂದೆ ಹಾಕಿದಂತ ಎಫ್ಐಆರ್ ಗಳಲ್ಲಿ  ಒಂದು ಎಸ್ಸಿ ಎಸ್ಟಿ ದೌರ್ಜನ್ಯಕ್ಕೆ ಸಂಬಂಧಪಟ್ಟಂತ ಪ್ರಕರಣ ಇದೆ. ಅಂದ್ರೆ ಎಸ್ಸಿ ಎಸ್ಟಿಗಳು ಹಿಂದೂಗಳಲ್ವಾ? ಅವರ ಮೇಲೆ ಯಾಕೆ ಸುಭಾಷ್ ಶೆಟ್ಟಿ ದೌರ್ಜನ್ಯ ಮಾಡಬೇಕಾಗಿತ್ತು? ಅವರ ಮೇಲೆ ಅವರು ಯಾಕೆ ಎಫ್ಐಆರ್ ಅನ್ನ ದಾಖಲಿಸಬೇಕಾಗಿತ್ತು ಅನ್ನೋ ಪ್ರಶ್ನೆಗೆ ಹಿಂದುತ್ವವಾದಿ ಸಂಘಟನೆಗಳು ಇವತ್ತು ಉತ್ತರವನ್ನು ಕೊಡಬೇಕಾಗುತ್ತೆ.

ಇವತ್ತು ಏನು ಸುಭಾಷ್ ಶೆಟ್ಟಿಯವರ ಸಾವಿನಲ್ಲಿ ಹಿಂದುತ್ವ ಅನ್ನೋದನ್ನ ಬೆರೆಸಿ ಜೊತೆಗೆ ಮೆರವಣಿಗೆಯನ್ನು ಮಾಡಿದರೋ ಅದೇ ಕೀರ್ತಿ ಅನ್ನುವಂತ 20 ವರ್ಷದ ಹುಡುಗನನ್ನ ಇದೇ ಸುಭಾಷ್ ಶೆಟ್ಟಿ ಕೊಲೆ ಮಾಡಿದಾಗ ಕೀರ್ತಿಯವರ ಮನೆಯವರಿಗೆ ಯಾವ ಉತ್ತರವನ್ನ ಹಿಂದೂ ಸಂಘಟನೆಗಳು ಕೊಡುತ್ತವೆ? ಬಜರಂಗದಳ, ವಿಶ್ವ ಹಿಂದೂ ಪರಿಷತ್ತು ಇವತ್ತು ಕೀರ್ತಿ ಅವರ ತಂದೆ ತಾಯಿಗೆ ಯಾವ ಉತ್ತರವನ್ನು ಕೊಡುತ್ತವೆ  ಅನ್ನುವಂತ ಪ್ರಶ್ನೆಗೆ ಇವತ್ತು ಬಜರಂಗದಳ, ವಿಶ್ವ ಹಿಂದು ಪರಿಷತ್ ಉತ್ತರಿಸ ಬೇಕಾಗುತ್ತೆ. ಅದರ ಜೊತೆಗೆನೇ ಇವತ್ತು ಸುಭಾಷ್ ಶೆಟ್ಟಿ ಅನ್ನುವಂತಹ ಒಂದು ಬಂಟ ಕಮ್ಯೂನಿಟಿಗೆ ಸೇರಿದಂತ ಹುಡುಗ ಹತ್ಯೆ ಆಗಿದ್ದಾರೆ, ಅದಕ್ಕೆ ಎಲ್ಲರ ಕಡೆಯಿಂದಲೂ ಕೂಡ ಖಂಡನೆ ವ್ಯಕ್ತ ಆಗಿದೆ. ಮನುಷ್ಯರಾದವರು ಎಲ್ಲರೂ ಕೂಡ ಎಲ್ಲಾ ಕೊಲೆಯನ್ನು ಖಂಡಿಸಬೇಕು. ನಾವು ಕೂಡ ಅದನ್ನು ಖಂಡಿಸುತ್ತೇವೆ. ಆದರೆ ಇವತ್ತು ಹಿಂದುಳಿದ ವರ್ಗಗಳೇ ಜೈಲಿಗೆ ಹೋಗುವಂತದ್ದು, ಸಾಯುವಂತದ್ದು ಯಾಕೆ?

ಮೊನ್ನೆ ಆದಂತಹ ಮಾಬ್ ಲಿಂಚಿಂಗ್ ನಲ್ಲೂ  20-25 ಜನ ಅರೆಸ್ಟ್ ಆದರು. ಇನ್ನೊಂದಷ್ಟು ಜನ ಭೂಗತರಾಗಿದ್ದಾರೆ. ಇನ್ನೊಂದಷ್ಟು ಜನರನ್ನು ಪೊಲೀಸರು ಹುಡುಕುತ್ತಾ ಇದ್ದಾರೆ. ಮಾಬ್ ಲಿಂಚಿಂಗ್‌ನ ಆರೋಪಿಗಳ ಪಟ್ಟಿಯಲ್ಲಿ ಇರುವಂತ ಎಲ್ಲರೂ ಕೂಡ ಹಿಂದುಳಿದ ವರ್ಗಕ್ಕೆ ಸೇರಿದವರು. ಇವತ್ತು ಜೈಲಿಗೆ ಹೋಗುವವರು ಕೂಡ ಹಿಂದುಳಿದ ವರ್ಗದವರು. ಇವತ್ತು ಕೊಲೆ ಆಗಿರುವರು ಕೂಡ ಹಿಂದುಳಿದ ವರ್ಗದವರು. ಇದೇ ರೀತಿಯಲ್ಲಿ  ಸುಭಾಷ್ ಒಂದು ದಂಧೆಯ ಭಾಗ ಆಗಿದ್ದವರು ಅಥವಾ ಒಂದು ರೌಡಿ ಶೀಟರನ ಭಾಗ ಆಗಿದ್ದವರನ್ನು ಕೊನೆಯ ಕ್ಷಣದಲ್ಲಿ ಅವರನ್ನ ಫಾಸಿಲ್‌ ನ ಕೊಲೆಗೆ ಬಜರಂಗದಳ ಅಥವಾ ವಿಶ್ವ ಹಿಂದೂ ಪರಿಷತ್ ಅವರನ್ನು ಬಳಸಿತ್ತು ಅನ್ನುವಂತದ್ದು ಬಹಳ ಮುಖ್ಯವಾಗುತ್ತೆ.

ಫಾಜಿಲ್ ಕೊಲೆಯಾದಂತಹ ಸಂದರ್ಭದಲ್ಲಿ ಒಂದು ವಿಷಯ ಗಮನಿಸಬಹುದು. ಆ ಸಂದರ್ಭದಲ್ಲಿ ಬಜರಂಗ ದಳವೇ ಅದನ್ನು ಮಾಡಿದ್ದು ಅಂತ ಒಪ್ಪಿಕೊಂಡಿತ್ತು. ಶರಣ್ ಪಂಪ್ವೆಲ್ ಅದನ್ನು ಒಪ್ಪಿಕೊಂಡಿದ್ರು. ಬಹಿರಂಗವಾಗಿಯೇ ಭಾಷಣದಲ್ಲಿ ಒಪ್ಪಿಕೊಂಡಿದ್ರು. ಅಂದ್ರೆ ಒಬ್ಬ ರೌಡಿ ಶೀಟರ್ ಅನ್ನ ಫಾಜಿಲ್ ಕೊಲೆಗೆ ಬಜರಂಗದಳ ಬಳಸಿತ್ತು ಅನ್ನುವಂತದ್ದು ಇಲ್ಲಿ ಬಹಳ ಮುಖ್ಯ ಆಗುತ್ತೆ. ಆದ್ದರಿಂದ ಈ ರೀತಿ ರೌಡಿ ಶೀಟರ್‌ಗಳನ್ನ ಹಿಂದುತ್ವ ಸಂಘಟನೆಗಳು, ಧಾರ್ಮಿಕ ಸಂಘಟನೆಗಳು ಬಳಸುವಂತದ್ದನ್ನು ನಿಲ್ಲಿಸಬೇಕು. ಜೊತೆಗೆ ಇವತ್ತು ಸುಭಾಷ್ ಶೆಟ್ಟಿ ತೀರಿಕೊಂಡಿದ್ದಾರೆ ಅಥವಾ ಕೊಲೆಯಾಗಿದ್ದಾರೆ, ಕೊಲೆಯಾದ ನಂತರ ಅವರ ಕುಟುಂಬಕ್ಕೆ ಏನು ಆಧಾರ ಅನ್ನುವಂತ ಪ್ರಶ್ನೆಯನ್ನ ಹಿಂದುತ್ವ ಸಂಘಟನೆಗಳು ಕೇಳ್ತಾ ಇದ್ದಾವೆ. ಅವರ ತಂದೆ ತಾಯಿ ಅನಾರೋಗ್ಯ ಪೀಡಿತರಾಗಿದ್ದಾರೆ. ಅವರಿಗೆ ಇನ್ನೂ ಕೂಡ ತನ್ನ ಮಗ ಸತ್ತಿರುವುದನ್ನು ಅರಗಿಸಿಕೊಳ್ಳಿಕ್ಕೆ ಆಗ್ತಾ ಇಲ್ಲ. ಅವರ ತಂದೆ ತಾಯಿಯ ವ್ಯಥೆ, ಅವರ ತಂದೆ ತಾಯಿಯ ಕಣ್ಣೀರು ಏನಿದೆಯೋ ಆ ಕಣ್ಣೀರಿಗೆ ನೇರವಾದ ಜವಾಬ್ದಾರಿಯನ್ನು ಇವತ್ತು ಅದೇ ಹಿಂದೂ ಸಂಘಟನೆಗಳು ಹೊರಬೇಕಾಗುತ್ತೆ. ಅದೇ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ತು ಹೊರಬೇಕಾಗುತ್ತೆ. ಸುಹಾಸ್ ಶೆಟ್ಟಿ ಮಾತ್ರ ಅಲ್ಲ ಕರಾವಳಿಯಲ್ಲಿ ಹತರಾದಂತಹ ಎಲ್ಲ ಹಿಂದುಳಿದ ವರ್ಗಗಳ ಕಾರ್ಯಕರ್ತರು, ಹಿಂದುತ್ವ ಕಾರ್ಯಕರ್ತರು ಏನಿದ್ದಾರೆ ಅವರ ಕುಟುಂಬದ ಇವತ್ತಿನ ಅವಸ್ಥೆಗೆ ಅಥವಾ ಅವರ ಕುಟುಂಬದ ಇವತ್ತಿನ ಸಮಸ್ಯೆಗೆ ಎಲ್ಲದಕ್ಕೂ ಕೂಡ ಈ ಆರ್.ಎಸ್.ಎಸ್ ಪ್ರೇರಿತ ಬಜರಂಗದಳ ವಿಶ್ವ ಹಿಂದೂ ಪರಿಷತ್ತು ಅಥವಾ ಶ್ರೀರಾಮಸೇನೆ, ರಾಮಸೇನೆ, ಹಿಂದೂ ಯುವಸೇನೆ, ಹಿಂದೂ ಜಾಗರಣ ವೇದಿಕೆ ಕಾರಣ ಅನ್ನುವಂತದ್ದನ್ನ ನಾವು ಅರ್ಥ ಮಾಡಿಕೊಳ್ಳಬೇಕಾಗುತ್ತೆ.

ಪೊಲೀಸ್ ಇಲಾಖೆ ನೋಡಿ, ಮೊನ್ನೆ ಮಾಬ್‌ಲಿಂಚಿಂಗ್ ಆದ ನಂತರ ಪೊಲೀಸರು ಒಂದು ರೀತಿಯಲ್ಲಿ ಎಚ್ಚರವನ್ನ ವಹಿಸಬೇಕಾಗಿತ್ತು. ಎಲ್ಲ ಸಂದರ್ಭದಲ್ಲು ಕೂಡ ಅಮಾಯಕ ಮುಸ್ಲಿಮರ ಕೊಲೆಯಾದ ನಂತರ ಒಂದು ಕೋಮುಗಲಭೆ ಆಗುತ್ತೆ.  ಪ್ರವೀಣ್ ನೆಟ್ಟಾರ್ ಕೊಲೆಗೂ ಮುಂಚೆ ಮುಸ್ತಾಫಾ ಅನ್ನುವಂತ ಒಬ್ಬ ಅಮಾಯಕ ಹುಡುಗನನ್ನ ಕೊಲೆ ಮಾಡಿದ್ರು. ಯಾಕೆ ಮುಸ್ತಾಫನನ್ನ ಕೊಲೆ ಮಾಡಿದ್ರು ಅನ್ನುವಂತದ್ದು ಇಲ್ಲಿವರೆಗೂ ಕೂಡ ಯಾರಿಗೂ ಗೊತ್ತಿಲ್ಲ. ಅಮಾಯಕನನ್ನ ಕೊಲೆ ಮಾಡಿದ ನಂತರ ನೆಟ್ಟಾರ್ ಕೊಲೆ ಆಗುತ್ತೆ. ನೆಟ್ಟಾರ್ ಕೊಲೆ ಆದ ನಂತರ ಮತ್ತೆ ಇಬ್ಬರು ಅಮಾಯಕರ ಕೊಲೆ ಆಗುತ್ತೆ. ಇದೇ ರೀತಿಯಲ್ಲಿ ಇವತ್ತು ಒಬ್ಬ ಅಮಾಯಕನ ಕೊಲೆಯಾದ ನಂತರ ಸುಭಾಷ್ ಶೆಟ್ಟಿ ಕೊಲೆ ಆಗಿದೆ. ಶೆಟ್ಟಿಯ ಕೊಲೆಗೂ ಮೊದಲು ಒಬ್ಬ ಅಮಾಯಕನ ಕೊಲೆ ಆಗಿತ್ತಲ್ಲ.. ಪೊಲೀಸರು ಆಗ ಏನು ಕ್ರಮವನ್ನ ತೆಗೆದುಕೊಂಡರು ಅನ್ನುವಂತದನ್ನ ಇವತ್ತು ಪೊಲೀಸರು ಜನತೆಗೆ ಹೇಳಬೇಕಾಗುತ್ತೆ. ಸುಭಾಷ್ ಶೆಟ್ಟಿ ಕೊಲೆಯಾದ ಆನಂತರ ಮತ್ತಷ್ಟು ಚೂರಿ ಇರಿತ ಪ್ರಕರಣಗಳು ಉಡುಪಿಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಲ್ಲಿ ಆಗಿವೆ. ಆದ್ದರಿಂದ ಇದೆಲ್ಲವನ್ನ ನಿರ್ವಹಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಅನ್ನುವಂತದ್ದು ಸ್ಪಷ್ಟ.

ಇವತ್ತು ಉಸ್ತುವಾರಿ ಸಚಿವರು ಬರುತ್ತಿದ್ದಾರೆ. ಅಥವಾ ಸರ್ಕಾರ ಮಂಗಳೂರಿಗೆ ಬರುತ್ತಿದೆ. ಕಾಂಗ್ರೆಸ್ ಸರ್ಕಾರ ಮಂಗಳೂರಲ್ಲೂ ಕೆಲಸ ಮಾಡ್ತಾ ಇದೆಯಾಂತ ಇನ್ನು ಕೂಡ ನಮಗೆ ಅನುಮಾನ ಇದೆ. ಯಾಕಂದ್ರೆ ಮೊನ್ನೆ ಮಾಬ್‌ಲಿಂಚಿಂಗ್ ಆದ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಕೊಟ್ಟಂತ ಹೇಳಿಕೆಗಳು, ಮಾಡಿದ ರಿಯಾಕ್ಷನ್‌ಗಳು ಇವೆಲ್ಲವೂ ಕೂಡ ನಮಗೆ ತೀರಾ ನಿರಾಸೆಯನ್ನ ತಂದಿತ್ತು. ಆದರೆ ಇವತ್ತು ಒಬ್ಬ ರೌಡಿ ಶೀಟರ್ ಕೊಲೆಗೆ ಉಸ್ತುವಾರಿ ಸಚಿವರು ಮತ್ತು ಸರ್ಕಾರ ಸ್ಪಂದಿಸುತ್ತಾ ಇರುವ ರೀತಿ ನೋಡಿದ್ರೆ ಮತ್ತು ಅವರ ಹೇಳಿಕೆಗಳನ್ನ ನೋಡಿದ್ರೆ ನಮಗೆ ತೀವ್ರ ಕಳವಳ ಆಗ್ತಿದೆ. ಇದನ್ನ ನಾವು ಬಿಡಬಾರದು. ಈ ಕೊಲೆಗಾರರನ್ನ ಕ್ರಿಮಿಗಳು ಅಂತ ಹೇಳಿದ್ದಾರೆ. ಕೊಲೆಗಾರರು ಕ್ರಿಮಿಗಳು ಅನ್ನುವಂತದ್ದು 100% ಸತ್ಯ. ಆದರೆ ಆ ಕ್ರಿಮಿಗಳು ಮೊನ್ನೆ ಕೂಡ 30- 40 ಜನ ಇದ್ರು. ಅವರ ಬಗ್ಗೆ ಈ ಕ್ರಿಮಿಗಳು ಅನ್ನುವಂತಹ ಶಬ್ದವನ್ನು ಉಸ್ತುವಾರಿ ಸಚಿವರು ಯಾಕೆ ಬಳಕೆ ಮಾಡ್ಲಿಲ್ಲ ಅನ್ನುವಂತಹ ಪ್ರಶ್ನೆಯನ್ನ ಜನರು ಉಸ್ತುವಾರಿ ಸಚಿವರಿಗೆ ಕೇಳ್ತಾ ಇದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಂದ್ರೆ ಒಟ್ಟಾರೆಯಾಗಿ ಸರ್ಕಾರ ಬಹುಸಂಖ್ಯಾತರ ಪರವಾದಂತಹ ಒಂದು ಮೇನಿಯದಲ್ಲಿ ಮುಳುಗಿ ಹೋಗಿದೆ ಅನ್ನುವಂತದ್ದು ಸ್ಪಷ್ಟ. ಇದೆಲ್ಲವೂ ಕೂಡ ಇವತ್ತು ಅಭದ್ರತೆಯನ್ನ ಸೃಷ್ಟಿ ಮಾಡುತ್ತೆ. ಆ ಕಾರಣಕ್ಕಾಗಿ ಇಂತದ್ದೆಲ್ಲವೂ ಕೂಡ ಘಟಿಸುತ್ತಲೇ ಇರುತ್ತದೆ. ಇವತ್ತು ಸರ್ಕಾರ ಕಾನೂನು ಸುವ್ಯವಸ್ಥೆಯನ್ನ ಸರಿಯಾದ ರೀತಿಯಲ್ಲಿ ಹ್ಯಾಂಡಲ್ ಮಾಡಬೇಕು ಆದರೆ ಅದನ್ನ ಮಾಡ್ತಾ ಇಲ್ಲ ಅನ್ನುವಂತದ್ದು ಸ್ಪಷ್ಟವಾಗಿ ಕರಾವಳಿಯಲ್ಲಿ ಕಾಣ್ತಾ ಇದೆ.

ನವೀನ್ ಸೂರಿಂಜೆ

ಪತ್ರಕರ್ತರು

ಇದನ್ನೂ ಓದಿ- ಮತಾಂಧತೆಯ ಸೇಡು; ಶಾಂತಿ ಸುವ್ಯವಸ್ಥೆಗೆ  ಕೇಡು

More articles

Latest article