ಬೆಂಗಳೂರಿಗೆ ಮಳೆ ಏನೋ ಬಂತು, ಆದ ಹಾನಿ ಎಷ್ಟು ಗೊತ್ತೆ?

Most read

ಬೆಂಗಳೂರು: ಈ ವರ್ಷ ಹಿಂದೆಂದೂ ಅನುಭವಿಸದಷ್ಟು ತಾಪಮಾನದಿಂದಾಗಿ ಬೆಂದುಹೋಗಿದ್ದ ಬೆಂಗಳೂರಿಗರು ಮಳೆ ಬಂದರೆ ಸಾಕು ಎಂದು ಕಾದಿದ್ದರು. ಕಳೆದ ಹದಿಮೂರು ದಿನಗಳಲ್ಲಿ ಎರಡು-ಮೂರು ದಿನಗಳಿಗೊಮ್ಮೆ ಮಳೆ ಸುರಿಯುತ್ತಿದ್ದು, ಆಗಿರುವ ನಷ್ಟ ಮಾತ್ರ ಅಪಾರವಾಗಿದೆ.

ಬೆಂಗಳೂರಿನಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ 800ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಧರೆಗುರುಳಿವೆ. ಅಷ್ಟೇ ಅಲ್ಲ, ಸುಮಾರು 160ಕ್ಕೂ ಹೆಚ್ಚು ಟ್ರಾನ್ಸ್‌ ಫಾರ್ಮರ್‌ ಗಳಿಗೆ ಹಾನಿಯಾಗಿದೆ.

ಭಾರೀ  ಮಳೆ ಮತ್ತು ಗಾಳಿಯಿಂದಾಗಿ ಭೂಮಿ ಸಡಿಲಗೊಂಡು ವಿದ್ಯುತ್‌ ಕಂಬಗಳು ಎಲ್ಲೆಡೆ ಕುಸಿದು ಬಿದ್ದಿವೆ. ಅದೇ ರೀತಿ ಸಿಡಿಲು ಬಡಿದು ಹಲವಾರು ಟ್ರಾನ್ಸ್‌ ಫಾರ್ಮರ್‌ ಗಳಿಗೆ ಅಪಾರ ಹಾನಿಯಾಗಿದೆ. ಬೆಸ್ಕಾಂಗೆ ಕಳೆದ ಹದಿಮೂರು ದಿನಗಳಿಂದ 3.30 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ.

160 ಟ್ರಾನ್ಸ್ ಫಾರ್ಮರ್ ಗಳ ಹಾನಿಯಿಂದಾಗಿ 2.19 ಕೋಟಿ ರೂಪಾಯಿ ನಷ್ಟವಾಗಿದ್ದರೆ, 881 ವಿದ್ಯುತ್ ಕಂಬಗಳ ಹಾನಿಗೆ ಬೆಸ್ಕಾಂಗೆ 73.24 ಲಕ್ಷ ನಷ್ಟವಾಗಿದೆ. ಟ್ರಾನ್ಸ್‌ ಫಾರ್ಮರ್‌ ಹಾನಿಯಿಂದಾಗಿ ಹಲವು ಭಾಗಗಳಲ್ಲಿ ವಿದ್ಯುತ್‌ ಕಡಿತವಾದ ಹಿನ್ನೆಲೆಯಲ್ಲಿ ಸಾರ್ವಜನಿಕರು ಪ್ರತಿನಿತ್ಯ ದೂರು ಸಲ್ಲಿಸುತ್ತಿದ್ದು, ಈ ದೂರುಗಳನ್ನು ಅಟೆಂಡ್‌ ಮಾಡುವುದೇ ಬೆಸ್ಕಾಂಗೆ ಕಷ್ಟವಾಗಿಹೋಗಿದೆ.

ಇನ್ನೂ ಒಂದುವಾರ ಕಾಲ ಮುಂಗಾರುಪೂರ್ವ ಮಳೆಯಾಗುವ ಸಂಭವವಿದ್ದು, ಗಾಳಿ, ಸಿಡಿಲಿನೊಂದಿಗೆ ಬೀಳುವ ಮಳೆಯಿಂದಾಗಿ ಇನ್ನೆಷ್ಟು ಹಾನಿಯಾಗುವುದೋ ಎಂಬ ಆತಂಕ ಬೆಸ್ಕಾಂ ಅಧಿಕಾರಿಗಳದ್ದಾಗಿದೆ.

More articles

Latest article