Saturday, July 27, 2024

ಕರಾವಳಿಯಲ್ಲಿ ಯಶಸ್ಸು ಪಡೆದ ಸಹಕಾರಿ ಚಳುವಳಿಯಲ್ಲಿ ಕೋಮುವಾದಕ್ಕೆ ಅವಕಾಶ ಇರಲಿಲ್ಲ | ಪುರುಷೋತ್ತಮ ಬಿಳಿಮಲೆ

Most read

ಮಂಗಳೂರು, ಫೆ.26 : 20 ನೇ ಶತಮಾನದ ಮೊದಲ ಭಾಗದಲ್ಲಿ ಕರಾವಳಿಯನ್ನು ಬೆಳೆಸಿದ ಸಹಕಾರಿ ಚಳುವಳಿ ಮತ್ತು ಬ್ಯಾಂಕಿಂಗ್‌ ಉದ್ಯಮವು ಸಾಮುದಾಯಿಕ ಗುಣಗಳನ್ನು ಹೊಂದಿತ್ತು. ಅಲ್ಲಿ ಯಾವುದೇ ರೀತಿಯ ಕೋಮುವಾದಕ್ಕೆ ಅವಕಾಶ ಇರಲಿಲ್ಲ. ಆದುದರಿಂದಲೇ ದಕ್ಷಿಣ ಕನ್ನಡ ಜಿಲ್ಲೆಯು ಉತ್ಕೃಷ್ಟವಾದ ಅಭಿವೃದ್ಧಿಯನ್ನು ಸಾಧಿಸಿತು. ಸಾಮಾಜಿಕ ಅಭಿವೃದ್ಧಿಯಲ್ಲಿ ಎಲ್ಲರೂ ತಮ್ಮನ್ನು ತೊಡಗಿಸಿಕೊಳ್ಳುವುದು ಅಗತ್ಯ. ಕೋಮುವಾದದಿಂದ ಯಾವುದೇ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಹಿರಿಯ ವಿದ್ವಾಂಸ ಪುರುಷೋತ್ತಮ ಬಿಳಿಮಲೆ ಹೇಳಿದರು.

ಮಂಗಳೂರಿನ ತೊಕ್ಕೊಟ್ಟಿನಲ್ಲಿ ನಡೆಯುತ್ತಿರುವ  ಡಿವೈಎಫ್ಐ ನ 12 ನೇ ರಾಜ್ಯ ಸಮ್ಮೇಳನದ ಎರಡನೇ ದಿನದ ಮೊದಲ ಅಧಿವೇಶನದಲ್ಲಿ “ಕರಾವಳಿ ಕಟ್ಟಿದ ಬಗೆ” ಎಂಬ ವಿಷಯದ ಮೇಲೆ ಅವರು ವಿಶೇಷ ಉಪನ್ಯಾಸ ನೀಡುತ್ತಿದ್ದರು. 19 ಮತ್ತು 20 ನೆಯ ಶತಮಾನದಲ್ಲಿ ಕರಾವಳಿ ಅಭಿವೃದ್ಧಿಯ ಪಥದತ್ತ ಸಾಗಿದ್ದರ ಕುರಿತು ಅವರು ಅನೇಕ ಮಾಹಿತಿಗಳನ್ನು ನೀಡಿದರು.

1799 ರಲ್ಲಿ ಟಿಪ್ಪೂ ಮಡಿದ ಆನಂತರ ದ.ಕ ಜಿಲ್ಲೆಯು ವಸಾಹತೀಕರಣಕ್ಕೆ ಒಳಗಾಯಿತು. ಆಡಳಿತದ ಅನುಕೂಲದ ಕಾರಣ ನೀಡಿ 1863 ರಲ್ಲಿ ಒಂದಾಗಿದ್ದ ಜಿಲ್ಲೆಯನ್ನು ಒಡೆಯಲಾಯಿತು. ಹೀಗಾಗಿ ಕರಾವಳಿಯ ಕೆಲವು ಭಾಗಗಳು ಬಾಂಬೆ ಪ್ರಾಂತಕ್ಕೂ, ಇನ್ನು ಕೆಲವು ಭಾಗಗಳು ಮದ್ರಾಸ್‌ ಪ್ರೆಸಿಡೆನ್ಸಿಗೂ ಸೇರಿತು. ಇದರಿಂದ ಕರಾವಳಿಯ ಅಭಿವೃದ್ಧಿಯು ಏಕ ರೂಪದಲ್ಲಿರದೆ ಭಿನ್ನ ಭಿನ್ನವಾಯಿತು. ಈ ಸಂದರ್ಭದಲ್ಲಿ ಇಂಗ್ಲಿಷ್‌ ವಿದ್ಯಾಭ್ಯಾಸಕ್ಕೆ ತಮ್ಮನ್ನು ತೆರೆದುಕೊಂಡ ಪೊಳಲಿ ಶೀನಪ್ಪ ಹೆಗ್ಡೆ, ಗಣಪತಿ ರಾವ್‌ ಐಗಳು, ಗೋವಿಂದ ಪೈ, ಬಿ ಎ ಸಾಲೆತ್ತೂರು ಮತ್ತು ಕೇಶವ ಕೃಷ್ಣ ಕುಡ್ವ ಅವರು ವಿಸ್ತಾರವಾದ ಓದು, ಅಪಾರವಾದ ಕ್ಷೇತ್ರಕಾರ್ಯ ಮತ್ತು ಅನೇಕ ಬಗೆಯ ಚರ್ಚೆಯ ಸಹಾಯದಿಂದ ಕರಾವಳಿಯ ಚರಿತ್ರೆಯನ್ನು ಬರೆದರು. ತುಳುನಾಡಿನ ಮೇಲೆ ವಿಶೇಷವಾದ ಪ್ರೀತಿ ಇರಿಸಿ ಬರೆದ ಈ ಚರಿತ್ರೆಯು  ಉದಾರವಾದಿ ನೆಲೆಯಿಂದ ಹೊರಡುವುದು ಅನಿವಾರ್ಯವಾಗಿತ್ತು. ಈ ನೆಲೆಯಿಂದ ಹೊರಬಂದು ವೃತ್ತಿಪರವಾಗಿ ಕರಾವಳಿಯ ಚರಿತ್ರೆಯನ್ನು ಬರೆದವರು ಬಿ ಎ ಸಾಲೆತ್ತೂರು. ಅವರು ತುಳುವ ಇತಿಹಾಸವನ್ನು ವಿಶ್ವಕ್ಕೆ ಪರಿಚಯಿಸಿದರು. ಸ್ವಾತಂತ್ರ್ಯೋತ್ತರ ಕಾಲದಲ್ಲಿ ಈ ಕೆಲಸಗಳನ್ನು ಮುಂದುವರಿಸಿದವರು ಡಾ. ಕೆ ವಿ ರಮೇಶ್‌ ಮತ್ತು ಪಾದೂರು ಗುರುರಾಜ್‌ ಭಟ್.‌ ಇವರ ಪುಸ್ತಕ  ನಮಗೆ ಇವತ್ತಿಗೂ ಒಂದು ಆಕರ ಗ್ರಂಥವಾಗಿದೆ.

ಚರಿತ್ರೆಯನ್ನು ಬರೆಯುವುದರ ಜೊತೆಗೆ ಕರಾವಳಿಯ ಚರಿತ್ರೆಯನ್ನು ಆಧುನಿಕ ಚೌಕಟ್ಟಿನಲ್ಲಿ ಕಟ್ಟಲು ಪ್ರಯತ್ನಿಸಿದವರು ಬಾಸೆಲ್‌ ಮಿಶನರಿಗಳು. ಅವರು ಸ್ಥಾಪಿಸಿದ ಮುದ್ರಣಾಲಯದಿಂದ ಖಾಸಗಿಯಾಗಿದ್ದ ಭಾರತೀಯ ಜ್ಞಾನವು ಸಾರ್ವತ್ರಿಕವಾಯ್ತು. 1838 ರಿಂದ ಮಿಶನರಿಗಳು ಸ್ಥಾಪಿಸಿದ ಶಾಲೆಗಳಿಂದಾಗಿ ಹಿಂದುಳಿದ ಸಮುದಾಯಗಳಿಗೆ ಆಧುನಿಕ ಶಿಕ್ಷಣ ದೊರೆಯಿತು. ಆಸ್ಪತ್ರೆ, ಮುನ್ಸಿಪಾಲಿಟಿ, ಹಂಚಿನ ಕಾರ್ಖಾನೆ, ಗೇರುಬೀಜ ಕಾರ್ಖಾನೆ ಮೊದಲಾದುವುಗಳನ್ನು ಹುಟ್ಟು ಹಾಕುವುದರ ಮೂಲಕ ಕರಾವಳಿಯ ಅನೇಕರಿಗೆ ಉದ್ಯೋಗ ಸಿಗುವಂತಾಯ್ತು. ಗ್ರಂಥ ಸಂಪಾದನೆ, ನಿಘಂಟುಗಳ ರಚನೆ, ಪಾಡ್ದನಗಳ ಸಂಪಾದನೆ, ಪಠ್ಯ ಪುಸ್ತಕಗಳ ರಚನೆ ಇತ್ಯಾದಿ ಕೆಲಸಗಳ ಮೂಲಕ ಕರಾವಳಿಯಲ್ಲಿ 19 ನೆಯ ಶತಮಾನದ ಉತ್ತರಾರ್ಧ ಮತ್ತು 20 ನೇ ಶತಮಾನದ ಮೊದಲಾರ್ಧದಲ್ಲಿ ಕರಾವಳಿಯಲ್ಲಿ ಶಿಕ್ಷಣ ಕ್ರಾಂತಿಯೇ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯ ಜನರು ಬುದ್ಧಿವಂತರು ಎಂಬ ಮಾತುಗಳನ್ನು ಎಲ್ಲೆಡೆಯೂ ಕೇಳುವಂತಾಯ್ತು.

ಮಿಶಿನರಿಗಳು ಈ ರೀತಿ ಕೆಲಸ ಮಾಡುತ್ತಿರುವಾಗ ಸನಾತನ ಸಂಸ್ಕೃತಿಯನ್ನು ಪರಿಷ್ಕರಿಸಿ ಅದನ್ನು ಆಧುನಿಕ ಗೊಳಿಸುವ ಕೆಲಸವನ್ನು ಬ್ರಹ್ಮ ಸಮಾಜ, ಆರ್ಯ ಸಮಾಜ ಥಿಯೋಸೋಫಿಕಲ್‌ ಸೊಸೈಟಿ ಮತ್ತು ರಾಮಕೃಷ್ಣ ಮಿಷನ್ ಗಳು ಮಾಡಿದವು. ಇವರು ಮಾಡಿದ ಕೆಲಸಗಳಲ್ಲಿ ಬಹಳ ಮುಖ್ಯವಾದದ್ದು ಮಹಿಳೆಯರಿಗೆ ನೀಡಿದ ಶಿಕ್ಷಣ ಮತ್ತು ವಿಧವಾ ವಿವಾಹ ಕಾರ್ಯಕ್ರಮಗಳು. ಇಂದು ಈ ಎಲ್ಲ ಸಂಸ್ಥೆಗಳು ಪರಿಷ್ಕರಣಾವಾದಿ ಧೋರಣೆಗಳನ್ನು ಕೈ ಬಿಟ್ಟು ಸನಾತನ ಸಂಸ್ಥೆಗಳಾಗಿ ಮಾರ್ಪಟ್ಟಿರುವುದು ನಿಜ. ಆದರೂ ಚಾರಿತ್ರಿಕವಾಗಿ ಇವು ಕೊಟ್ಟ ಕೊಡುಗೆಗಳನ್ನು ಮರೆಯುವಂತಿಲ್ಲ. ಕನ್ನಡದ ಮೊದಲ ಕಾದಂಬರಿಯನ್ನು ಬರೆದ ಗುಲ್ವಾಡಿ ವೆಂಕಟ್ರಾವ್‌, ಗುಲ್ವಾಡಿ ಅಣ್ಣಾಜಿ ರಾವ್‌, ಬೋಳಾರ ಬಾಬು ರಾವ್‌ ಮೊದಲಾದವರು ಶಿಶು ವಿವಾಹ ವರದಕ್ಷಿಣೆ, ಮಹಿಳಾ ಶೋಷಣೆ, ಅಸ್ಪೃಶ್ಯತೆ ಮತ್ತಿತರ ವಿಷಯಗಳ ಕುರಿತು ಪ್ರಖರವಾಗಿ ಬರೆದರು.

ಕರಾವಳಿಯ ಆರ್ಥಿಕ ಬೆಳವಣಿಗೆಯನ್ನು ಎತ್ತಿ ಹಿಡಿದು ಸ್ವಾವಲಂಬನೆಯ ಪಾಠ ಕಲಿಸಿದ್ದು ಅಲ್ಲಿ ಹುಟ್ಟಿದ ಬ್ಯಾಂಕುಗಳು. ಕೆನರಾ, ಕಾರ್ಪೋರೇಷನ್‌, ಕರ್ನಾಟಕ, ಸಿಂಡಿಕೇಟ್‌ ಮತ್ತು ವಿಜಯಾ ಬ್ಯಾಂಕುಗಳು ಕರಾವಳಿಯ ಆರ್ಥಿಕತೆಗೆ ರಾಷ್ಟ್ರೀಯ ಆಯಾಮ ನೀಡಿದರು. ಈ ಬ್ಯಾಂಕುಗಳು ನೀಡಿದ ಸಾಲಗಳ ಪರಿಣಾಮವಾಗಿ ಹೊಟೇಲ್‌ ಉದ್ಯಮವು ಬೆಳೆಯಿತು. ಮುಂಬಯಿ ಮತ್ತು ದುಬಾಯಿಗಳಿಗೆ ವಲಸೆ ಹೋದವರು ಈ ಬ್ಯಾಂಕುಗಳನ್ನು ಬೆಳೆಸುವುದರ ಜತೆಗೆ ತಮ್ಮ ಊರನ್ನು ಬೆಳೆಸಿದರು.

ಕರಾವಳಿಯ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನರು ಸಂಘಟಿತವಾಗಿ ಮುಂದೆ ಹೋಗಲು ಅಲ್ಲಿಯ ಸಹಕಾರಿ ಚಳುವಳಿಯು ಬಹಳ ಮುಖ್ಯ ಕಾರಣ. ಈ ಚಳುವಳಿಯನ್ನು ಅತ್ಯುತ್ತಮವಾಗಿ ಕಟ್ಟಿದ ಕೀರ್ತಿ ಮೊಳಹಳ್ಳಿ ಶಿವರಾಯ, ಮಾಣಿ ಶ್ರೀನಿವಾಸ ರಾಯ, ಬಂಟ್ವಾಳ ನಾರಾಯಣ ನಾಯಕ್‌ ಶಿವರಾಮ ಕಾರಂತ, ಏರ್ಯ ಲಕ್ಷ್ಮಿನಾರಾಯಣ ಆಳ್ವ, ವಾರಣಾಶಿ ಸುಬ್ರಾಯ ಭಟ್‌ ಮೊದಲಾದವರಿಗೆ ಸಲ್ಲಬೇಕು. ಅವರು ಕಟ್ಟಿದ ಸಹಕಾರಿ ಬ್ಯಾಂಕುಗಳು, ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣ ಸಂಸ್ಥೆಗಳು ಈಗ ಶತಮಾನೋತ್ಸವ ಆಚರಿಸುತ್ತಿವೆ. ಧಾರ್ಮಿಕ ಪರಿಷ್ಕರಣವಾದಿ ಚಳುವಳಿ ಮತ್ತು ಆರ್ಥಿಕ ಬೆಳವಣಿಗೆಗೆ ಕಾರಣ ಕರ್ತರಾದ ಸಂಘ ಸಂಸ್ಥೆಗಳ ಒಳಗೆ ಕೋಮುವಾದಕ್ಕೆ ಪ್ರವೇಶ ಮಾಡಲು ಅವಕಾಶವೇ ಇರಲಿಲ್ಲ. ಸಮಾಜದ ಎಲ್ಲ ವರ್ಗದ ಜನರೂ ಒಟ್ಟಾದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂಬ ತಿಳುವಳಿಕೆ ಆ ಕಾಲದ ಮಹನೀಯರಿಗೆ ಇತ್ತು. ಕುದ್ಮುಲ್‌ ರಂಗರಾಯರು, ಬಿ ನರಸಿಂಗ ರಾವ್, ಬೆನೆಗಲ್‌ ರಾಮರಾವ್, ಕಾರ್ನಾಡು ಸದಾಶಿವ ರಾವ್‌, ಪಂಜೆ ಮಂಗೇಶ್ ರಾವ್, ಕಮಲಾದೇವಿ ಚಟ್ಟೋಪಾಧ್ಯಾಯ, ಕು ಶಿ ಹರಿದಾಸ್‌ ಭಟ್‌ ಮತ್ತಿತರರು ಎಲ್ಲರನ್ನು ಒಳಗೊಂಡು ಬೆಳೆಯಬೇಕಾದ ಕರಾವಳಿಗೊಂದು ಭದ್ರವಾದ ಸಾಂಸ್ಕೃತಿಕ ತಳಹದಿಯನ್ನು ಹಾಕಿಕೊಟ್ಟರು. ರಾಷ್ಟ್ರೀಯ ಹೋರಾಟದ ಜೊತೆಗೆ ಕರ್ನಾಟಕದ ಏಕೀಕರಣವನ್ನು ಜೋಡಿಸಿ ಕರ್ನಾಟಕದ ಕರಾವಳಿಯಲ್ಲಿ ಸಮತೆಯನ್ನು ಸಾಧಿಸಲು ಶ್ರಮಿಸಿದ ಮಹಾ ಧೀಮಂತರಲ್ಲಿ ಬಿ ವಿ ಕಕ್ಕಿಲ್ಲಾಯರಿಗೆ ಒಂದು ಪ್ರಮುಖ ಸ್ಥಾನವಿದೆ. ಉಳ್ಳಾಲ  ಶ್ರೀನಿವಾಸ ಮಲ್ಯರು ಮಂಗಳೂರಿಗೆ ವಿಮಾನ ನಿಲ್ದಾಣ, ಆಕಾಶವಾಣಿ, ಬಂದರು ಮೊದಲಾದುವುಗಳನ್ನು ತಂದರು. ಹಾಗೆ ನೋಡಿದರೆ ಆಧುನಿಕ ಕರಾವಳಿಯ ಅಭಿವೃದ್ಧಿ ಪಿತಾಮಹ ಎಂದು ನಾವು ಮಲ್ಯರನ್ನು ಕರೆಯಬಹುದು.

ಕಾರಣಾಂತರಗಳಿಂದ ಕನ್ನಡದ ಎದುರು ತುಳು ಸಂಸ್ಕೃತಿಯನ್ನು ನಿಲ್ಲಿಸಿ ತುಳುವಿನ ಮಹತ್ತ್ವವನ್ನು ಗೌಣ ಗೊಳಿಸುತ್ತಿದ್ದಾಗ ತಮ್ಮ ಸಂಶೋಧನೆ, ಪ್ರಕಟಣೆ, ಉಪನ್ಯಾಸ, ಮತ್ತಿತರ ಚಟುವಟಿಕೆಗಳ ಮೂಲಕ ತುಳು ಸಂಸ್ಕೃತಿಯನ್ನು ಎತ್ತಿ ಹಿಡಿದವರು ಅಮೃತ ಸೋಮೇಶ್ವರರು. ಅವರು ಮಾಡಿದ ಕೆಲಸಗಳನ್ನು ವಿವೇಕ ರೈ, ಚಿನ್ನಪ್ಪ ಗೌಡ, ವಾಮನ ನಂದಾವರ ಇಂದಿರಾ ಹೆಗ್ಡೆ  ಮತ್ತಿತರರು ಸಮರ್ಥವಾಗಿ ಮುಂದುವರಿಸಿದರು. ಮುಳಿಯ ತಿಮ್ಮಪ್ಪಯ್ಯ, ಸೇಡಿಯಾಪು ಕೃಷ್ಣ ಭಟ್ಟ ಮರಿಯಪ್ಪ ಭಟ್‌, ಕುಶಾಲಪ್ಪ ಗೌಡ, ಡಿ ಎನ್‌ ಶಂಕರ ಭಟ್‌, ಕುಕ್ಕಿಲ ಕೃಷ್ಣ ಭಟ್‌ ಮೊದಲಾದವರು ಕರಾವಳಿಯ ಶೈಕ್ಷಣಿಕ ಕೆಲಸಗಳಿಗೆ ಪಾಂಡಿತ್ಯದ ಸೊಗಸು ನೀಡಿದರು.  ಮ್ಯಾನರ್‌, ಬ್ರಿಗೆಲ್‌, ಪೀಟರ್‌ ಕ್ಲಾಸ್‌, ಮಾರ್ಥಾ ಆಸ್ಟಿನ್‌, ಬ್ರೂಕನರ್‌, ಲಾರಿ ಹಾಂಕೋ ಮೊದಲಾದ ವಿದ್ವಾಂಸರು ತುಳು ಅಧ್ಯಯನವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿದರು. ಹೀಗೆ ಅನೇಕರ ದಣಿವರಿಯದ ದುಡಿಮೆ, ಮುನ್ನೋಟ, ಸಂಘಟಿತ ಕೆಲಸಗಳನ್ನು ನಾವು ಅರ್ಥ ಮಾಡಿಕೊಳ್ಳುವುದು ಬಹಳ ಅಗತ್ಯ ಎಂದು ಬಿಳಿಮಲೆಯವರು ಅನೇಕ ಉದಾಹರಣೆಗಳ ಮೂಲಕ ವಿವರಿಸಿದರು.

ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕನ್ನಡ ಪರ ಹೋರಾಟಗಾರ  ರಮೇಶ್‌ ಬೆಲ್ಲಂಕೊಂಡ ಅವರು ಕನ್ನಡಿಗರನ್ನು ಎರಡನೆಯ ದರ್ಜೆಯ ನಾಗರಿಕರನ್ನಾಗಿ ನೋಡುವ ಮನೋವೃತ್ತಿಯ ವಿರುದ್ಧ ನಾವು ಹೋರಾಡ ಬೇಕಾಗಿದೆ, ನಮ್ಮ ಭಾಷೆಯಲ್ಲಿ ಸೇರಿಕೊಂಡ ಅನಗತ್ಯವಾದ ಸಂಸ್ಕೃತ ಪದಗಳ ಜಾಗದಲ್ಲಿ ಕನ್ನಡ ಪದಗಳನ್ನು ಬಳಸಬೇಕು ಎಂದು ಕರೆ ನೀಡಿದರು

ಇದೇ ಸಂದರ್ಭದಲ್ಲಿ ಬಿಳಿಮಲೆಯವರ ಅಮರ ಸುಳ್ಯದ ರೈತ ಹೋರಾಟ ಪುಸ್ತಕದ ಎರಡನೇ ಮುದ್ರಣವನ್ನು ಬೆಲ್ಲಂಕೊಂಡ ಅವರು ಬಿಡುಗಡೆ ಮಾಡಿದರು.

ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಬಸವರಾಜ್‌ ಪೂಜಾರ್‌ ಉಪಸ್ಥಿತರಿದ್ದರು. ಮನೋಜ್‌ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು.

ಇದನ್ನೂ ಓದಿ-http://ಮತಾಂಧತೆ, ಭ್ರಮೆಯ ಸುಳಿಯಲ್ಲಿ ನರಳುತ್ತಿರುವ ಯುವಜನತೆಯನ್ನು ಹೊರತರಬೇಕು: ನಿವೃತ್ತ ನ್ಯಾ. ನಾಗಮೋಹನ್ ದಾಸ್ ಕರೆ https://kannadaplanet.com/drive-to-dyfi-state-conference/

More articles

Latest article