Friday, December 6, 2024

ಮತಾಂಧತೆ, ಭ್ರಮೆಯ ಸುಳಿಯಲ್ಲಿ ನರಳುತ್ತಿರುವ ಯುವಜನತೆಯನ್ನು ಹೊರತರಬೇಕು: ನಿವೃತ್ತ ನ್ಯಾ. ನಾಗಮೋಹನ್ ದಾಸ್  ಕರೆ 

Most read

ಮಂಗಳೂರು, ಫೆ. 25: ದೇಶದಲ್ಲಿ ಹಿಂದೆಂದೂ ಕಾಣದ ನಿರುದ್ಯೋಗ ಅಸಮಾನತೆಯ ಹಲವು ಸಮಸ್ಯೆಗಳ ನಡುವೆ ಯುವ ಜನತೆ ಮತಾಂಧತೆ, ಭ್ರಮೆಯ ಸುಳಿಯಲ್ಲಿ ಸಿಲುಕಿ ನರಳುತ್ತಿದ್ದು ಅದರಿಂದ ಹೊರ ತರುವಲ್ಲಿ ಗ್ರಾಮಗಳಿಂದ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಉದ್ಯೋಗ ಸೃಷ್ಟಿ ಕುಸಿಯ ತೊಡಗಿದರೆ ಕೋಮುವಾದ ಭಯೋತ್ಪಾದನೆ ಅಪರಾಧ ಮುಂತಾದುವುಗಳು  ಸಮಾಜದಲ್ಲಿ ಏರಿಕೆಯಾಗುತ್ತದೆ. ನಿರುದ್ಯೋಗಕ್ಕೂ ಕೋಮುವಾದಕ್ಕೂ ನೇರ ಸಂಬಂಧ ಇದೆ ಎಂಬುದನ್ನು ಸರ್ಕಾರ ತಿಳಿದುಕೊಳ್ಳಬೇಕು ಎಂದು ಕರ್ನಾಟಕದ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್  ಹೇಳಿದರು.

 ‘ಸಾಮರಸ್ಯ , ಉದ್ಯೋಗ, ಘನತೆಯ ಬದುಕಿಗಾಗಿ ‘ ಎಂಬ ಘೋಷ ವಾಕ್ಯದೊಂದಿಗೆ ನಡೆಯಲಿರುವ ಮೂರು ದಿನಗಳ ಡಿವೈಎಫ್ಐ 12ನೇ ರಾಜ್ಯ ಸಮ್ಮೇಳನಕ್ಕೆ ಉಳ್ಳಾಲದ ಕಲ್ಲಾಪು ಬಳಿ ಇರುವ ಯುನಿಟಿ ಸಭಾಂಗಣದಲ್ಲಿ ರವಿವಾರ  ಬೆಳಗ್ಗೆ ಚಾಲನೆ ನೀಡಿ ಅವರು ಮಾತನಾಡಿದರು. ದ.ಕ ಜಿಲ್ಲೆಯ ಮೂಲ ನಿವಾಸಿಗಳಾದ ಕೊರಗ ಸಮುದಾಯದ ಸಾಂಸ್ಕೃತಿಕ ಸಾಧನ  ಡೋಲು ಬಾರಿಸುವ ಮೂಲಕ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪ್ರಸಕ್ತ ಸಂಧಿಗ್ಧ ಪರಿಸ್ಥಿತಿಯಲ್ಲಿ ದೇಶದಲ್ಲಿ ಸಮಾನ ಹಾಗೂ ಗುಣಮಟ್ಟದ ಶಿಕ್ಷಣ ನೀತಿ ಜೊತೆ ಯುವ ನೀತಿಯನ್ನು ಸರಕಾರ ಜಾರಿಗೊಳಿಸಲು ಸಮ್ಮೇಳನದಲ್ಲಿ ಚರ್ಚಿಸಿ ನಿರ್ಣಯ ಕೈ ಗೊಳ್ಳಬೇಕು,  ಈ ಕುರಿತಾದ ಚಳವಳಿಯ ನೇತೃತ್ವವನ್ನು ಡಿ ವೈ ಎಫ್ ಐ ವಹಿಸಬೇಕು ಎಂದೂ ಅವರು ಕರೆ ನೀಡಿದರು.

 ಯುನಿಟಿ ಹಾಲ್ ನ ಪ್ರೊಫೆಸರ್‌ ಅಮೃತ ಸೋಮೇಶ್ವರ ವೇದಿಕೆ,‌ ಡಾ. ವಿಠಲ್ ಭಂಡಾರಿ ಸಭಾಂಗಣದಲ್ಲಿ ಕಾಂ. ನಾಗೇಶ್ ಕುಮಾರ್ ನಗರದಲ್ಲಿ ಸಮ್ಮೇಳನವು ನಡೆಯುತ್ತಿದ್ದು ಸಮ್ಮೇಳನದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ,  ವಿಶ್ರಾಂತ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಐಎಎಸ್ ಮಾತನಾಡಿ, ಶೇಕಡ ನೂರರಷ್ಟು ಸಾಕ್ಷರತೆ ಹೊಂದಿದ್ದು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಜಗತ್ತಿಗೆ ಮಾದರಿಯಾಗಬೇಕಾದ ಜಿಲ್ಲೆ ನಮ್ಮ ದಕ್ಷಿಣ ಕನ್ನಡ. ಆದರೆ ವಿಪರ್ಯಾಸವೆಂದರೆ ಕಳೆದ ಮೂರು ದಶಕಗಳಲ್ಲಿ ನಮ್ಮ ಜಿಲ್ಲೆ ಕೋಮುವಾದದ ಕಬಂಧ ಬಾಹುಗಳಲ್ಲಿ ಸಿಲುಕಿ ಕುಖ್ಯಾತಿಯನ್ನೇ  ಪಡೆಯುತ್ತಾ ಬಂದಿರುವ ನೆಲವಾಗಿದೆ. ಮತೀಯವಾದವನ್ನು ಬಿತ್ತುವ ಶತ್ರುಗಳನ್ನು ಸೋಲಿಸುವ ನಮ್ಮ ಪ್ರಯತ್ನವನ್ನು ನಿಲ್ಲಿಸದೆ  ಅದು ನಿರಂತರವಾಗಿ ಮುಂದುವರೆಯಬೇಕು ; ಜಿಲ್ಲೆಯ ಸೌಹಾರ್ದ ಪರಂಪರೆ ಯನ್ನು ಕಾಪಾಡಬೇಕು ಎಂದು ಅವರು ಕರೆ ನೀಡಿದರು.

ದೇಶದಲ್ಲಿ ಕಳೆದ ಒಂದು ದಶಕದಲ್ಲಿ  ಸಂವಿಧಾನವನ್ನು ದುರ್ಬಲ ಗೊಳಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ. ಆ ಮೂಲಕ ಚಾತುರ್ವರ್ಣ, ಜಾತಿ  ವ್ಯವಸ್ಥೆಯನ್ನು ಮುನ್ನೆಲೆಗೆ ತರುವ ಪಿತೂರಿ ನಡೆಯುತ್ತಿದ್ದು, ಇದರ ವಿರುದ್ಧ ಗ್ರಾಮ ಮಟ್ಟದಿಂದ ಜನರಿಗೆ ಮನವರಿಕೆ ಮಾಡುವ ಚಳವಳಿ ಆಗಬೇಕು ಎಂದೂ ಹೇಳಿದರು.

 ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಡಿವೈಎಫ್ಐ ಕರ್ನಾಟಕ ರಾಜ್ಯ ಅಧ್ಯಕ್ಷರಾದ ಮುನೀರ್ ಕಾಟಿಪಳ್ಳ ವಹಿಸಿದ್ದರು.

ಡಿವೈಎಫ್ಐ ಕೇಂದ್ರ ಸಮಿತಿಯ ಜೆಕ್ ಸಿ. ಥಾಮಸ್,  ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ್ ಪೂಜಾರ್, ಡಿವೈಎಫ್‌ಐ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ರಜೀಶ್ ವೆಲ್ಲಾಟ್, ಡಿವೈಎಫ್‌ಐ ಕರ್ನಾಟಕ ರಾಜ್ಯ ಸಮಿತಿ ಸದಸ್ಯರು ರೇಣುಕಾ ಕಹಾರ್, ಆಶಾ ಬೋಳೂರು, ಎಸ್‌ಎಫ್‌ಐನ ರಾಜ್ಯ ಕಾರ್ಯದರ್ಶಿ ಭೀಮನಗೌಡ, ಸ್ವಾಗತ ಸಮಿತಿ ಸದಸ್ಯರಾದ ಸುನೀಲ್ ಕುಮಾರ್ ಬಜಾಲ್, ಕೃಷ್ಣಪ್ಪ ಕೊಂಚಾಡಿ, ಬಿಕೆ ಇಂಮ್ತಿಯಾಜ್,  ವಕೀಲ ರಾಮಚಂದ್ರ ಬಬ್ಬುಕಟ್ಟೆ, ಡಾ. ಜೀವನ್ ರಾಜ್ ಕುತ್ತಾರ್ ಉಪಸ್ಥಿತರಿದ್ದರು.  

ರಮೇಶ್ ಕುಮಾರ್ ಸ್ಮರಣೆಯಲ್ಲಿ ಹೋರಾಟ ಚಳುವಳಿಗಳ ನೆನಪಿನ ಪೋಸ್ಟರ್ ಗ್ಯಾಲರಿಯನ್ನು ವಿಶ್ರಾಂತ ಜಿಲ್ಲಾಧಿಕಾರಿ (ಐಎಎಸ್), ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಎ.ಬಿ. ಇಬ್ರಾಹಿಂ ಉದ್ಘಾಟನೆ ಮಾಡಿದರು.  

ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಸ್ವಾಗತಿಸಿದರು. ಡಿವೈಎಫ್‌ಐ ಮುಖಂಡರಾದ ಮನೋಜ್ ವಾಮಂಜೂರು ಕಾರ್ಯಕ್ರಮ ನಿರ್ವಹಿಸಿದರು.

More articles

Latest article