ಕಾರವಾರ: ಕೇಂದ್ರ ಸರ್ಕಾರದ ಐವತ್ತಾರು ಇಂಚಿನ ಎದೆಯಲ್ಲಿ ಜನಪರ ಕಳಕಳಿಯ ಹೃದಯವಿಲ್ಲ. ಇಂಥವರಿಗೆ ಮೇ 7ರಂದು ಮನೆ ದಾರಿ ತೋರಿಸಬೇಕಿದೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್ ಹೇಳಿದರು.
ಮಲ್ಲಾಪುರ ಹಾಗೂ ಕದ್ರಾದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜನ್ ಕೀ ಬಾತ್ ಕೇಳಿ ಮಾಡಿರುವ ನ್ಯಾಯ ಪ್ರಣಾಳಿಕೆ ನಮ್ಮದು. ಐವತ್ತಾರು ಇಂಚಿನ ಎದೆಯಲ್ಲಿ ಎರಡಿಂಚಿನ ಹೃದಯವಿಲ್ಲ. ಹೃದಯವಿದ್ದಿದ್ದರೆ ಅರಣ್ಯ ಅತಿಕ್ರಮಣದಾರರ ಸಹಸ್ರಾರು ಅರ್ಜಿಗಳು ಬಾಕಿ ಇರುತ್ತಿರಲಿಲ್ಲ. ಆಶೀರ್ವಾದ ನೀಡಿ ಅರಿಸಿ ತಂದರೆ ಸಂಸತ್‌ನ ಮೊದಲ ಅಧಿವೇಶನದಲ್ಲೇ ಅರಣ್ಯ ಅತಿಕ್ರಮಣದಾರರ ಬಗ್ಗೆ ಮಾತನಾಡುತ್ತೇನೆ ಎಂದರು.
ಇದು ಬಡವರ ಧ್ವನಿಯನ್ನು ಸಂಸತ್‌ವರೆಗೆ ಕೊಂಡೊಯ್ಯುವ ಹೋರಾಟದ ಚುನಾವಣೆ. ಜಿಎಸ್‌ಟಿ ಹೇರಿ ಆ ದುಡ್ಡನ್ನ ಅದಾನಿ- ಅಂಬಾನಿಗೆ ಕೊಡುವ ಕೆಲಸ ಕೇಂದ್ರದ ಬಿಜೆಪಿ ಸರ್ಕಾರದಿಂದ ಆಗುತ್ತಿದೆ. ಹಿಂದುತ್ವ, ರಾಮನ ಚಿತ್ರ ತೋರಿಸಿದರೆ ಮತ ಹಾಕಿಬಿಡುತ್ತಾರೆನ್ನುವುದು ಬಿಜೆಪಿಗರ ಯೋಚನೆ. ಮೋದಿ ರಾಮ ಒಬ್ಬರೇ ಎನ್ನುತ್ತಾರೆ. ಯುವಕರು ಕೂಡ ವಾಟ್ಸಪ್ ಯೂನಿವರ್ಸಿಟಿಯಿಂದಾಗಿ ಕೇವಲ ಜೈ ರಾಮ್ ಎನ್ನುತ್ತಾರೆ. ಹನುಮಾನ್ ಚಾಲೀಸಾ ಓದೋರು ಜೈ ಸಿಯಾ ರಾಮ್ ಅಂತಲೇ ಹೇಳುತ್ತಾರೆ. ಆದರೆ ಪ್ರಧಾನಿಗೆ ಸಂಸಾರ ಮಾಡಿದ್ದರೆ ಇವೆಲ್ಲ ಗೊತ್ತಾಗುತ್ತಿತ್ತು. ಅವರು ಹೊಸ ಹಿಂದುತ್ವದ ಸರ್ಟಿಫಿಕೇಟ್ ಬಿಟ್ಟು ಇತಿಹಾಸ ತಿಳಿದುಕೊಳ್ಳಲಿ ಎಂದರು.
ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಮಾತನಾಡಿ, ಅರಣ್ಯ ಅತಿಕ್ರಮಣಕ್ಕೆ ಪರಿಹಾರ ಕೇಂದ್ರದಿಂದ ಆಗಬೇಕಿದೆ. ಹೋದ ಪುಟ್ಟ, ಬಂದ ಪುಟ್ಟ ಎಂಬಂತೆ ಮೋದಿಯವರು ಶಿರಸಿಗೆ ಬಂದು ಹೋಗಿದ್ದಾರೆ. ಜಿಲ್ಲೆಯಲ್ಲಿ ಸಮಸ್ಯೆಗಳ ಸರಪಳಿಯೇ ಇದೆ. ಅದರ ಬಗ್ಗೆ ಕೇಳಿಲ್ಲ, ಮಾತನಾಡಿಯೂ ಇಲ್ಲ. ಕೇವಲ ಚುನಾವಣಾ ಪ್ರಚಾರಕ್ಕೆ ಅವರು ಸೀಮಿತರಾಗಿದ್ದಾರೆ. ಅಧಿಕಾರ ಬರುತ್ತೆ, ಹೋಗತ್ತೆ. ಆದರೆ ನಿಮ್ಮ ಒಳಿತಿಗಾಗಿ, ಸ್ವಾರ್ಥಕ್ಕಾಗಿ ಡಾ.ಅಂಜಲಿಗೆ ಮತ ನೀಡಬೇಕಿದೆ ಎಂದರು.
ಮಾಜಿ ಸಚಿವ ರಮಾನಾಥ ರೈ, ಬಡವರಿಗೆ ಭೂಮಿ ಕೊಟ್ಟ ಪಕ್ಷ ಕಾಂಗ್ರೆಸ್. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಾತ್ರ ಅರಣ್ಯ ಅತಿಕ್ರಮಣದಾರರ ಸಮಸ್ಯೆಗೆ ಪರಿಹಾರ ಸಿಗಲಿದೆ. ಅದಕ್ಕಾಗಿ ಈ ಬಾರಿ ಡಾ.ಅಂಜಲಿಯವರನ್ನು ಗೆಲ್ಲಿಸಬೇಕಿದೆ ಎಂದರು.
ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರವೀಂದ್ರ ನಾಯ್ಕ ಮಾತನಾಡಿ, ಭೂಮಿ ಹಕ್ಕಿಗೆ ಅನೇಕ ಸಮಸ್ಯೆಗಳಿವೆ. ಆದರೆ ಭೂಮಿ ಹಕ್ಕಿಗೆ ಕಾನೂನು ತಂದಿದ್ದು, ಭೂಸುಧಾರಣಾ ಕಾಯ್ದೆ ತಂದಿದ್ದು ಕಾಂಗ್ರೆಸ್. ೩೩ ವರ್ಷ ಹೋರಾಟ ಮಾಡಿದರೂ ಸ್ಪಂದಿಸಿರುವ ಏಕೈಕ ಪಕ್ಷ ಕಾಂಗ್ರೆಸ್. ಅಂತಿಮ ಪರಿಹಾರ ಕೇಂದ್ರದಿಂದಾಗಬೇಕಿದ್ದು, ಅದಕ್ಕಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದೆ ಎಂದರು.
ಶಾಸಕ ಸತೀಶ್ ಸೈಲ್, ಮಲ್ಲಾಪುರ ಪಂಚಾಯತಿ ಕಾಂಗ್ರೆಸ್‌ನ ಭದ್ರಕೋಟೆ. ಕದ್ರಾ ಡ್ಯಾಂ ಕಟ್ಟುವಾಗ ಯಾವ ಅಧಿಕಾರಿಯ ಮನೆಯೂ ಮುಳುಗದಂತೆ ಎಚ್ಚರ ವಹಿಸಿದ್ದಾರೆ. ಆದರೆ ಜನರ ಮನೆಗಳು ಪ್ರತಿವರ್ಷ ಮುಳುಗುತ್ತಿವೆ. ಬಿಜೆಪಿಗರಿಗೆ ಸಂತ್ರಸ್ತರ ಕಾಳಜಿಯೂ ಇಲ್ಲ. ಕಾಂಗ್ರೆಸ್‌ನ್ನು ಕೇಂದ್ರದಲ್ಲಿ ತಂದರೆ ಮತ್ತೈದು ಮಹಾ ಗ್ಯಾರಂಟಿಗಳು ಬರಲಿವೆ ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ವಕ್ತಾರ ಶಂಭು ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ್ ನಾಯ್ಕ, ಮಹಿಳಾ ಕಾಂಗ್ರೆಸ್ ತಾಲೂಕಾಧ್ಯಕ್ಷೆ ಸೀಮಾ ಪಾಟೀಲ್, ಕದ್ರಾ ಗ್ರಾಪಂ ಅಧ್ಯಕ್ಷೆ ಹನುಮವ್ವ, ಉಪಾಧ್ಯಕ್ಷೆ ಅಶ್ವಿನಿ ಪೆಡ್ನೇಕರ್, ಸದಸ್ಯರಾದ ರೀನಾ ಡಿಸೋಜಾ, ಗ್ರಾಪಂ ಮಾಜಿ ಸದಸ್ಯರಾದ ಯಲ್ಲಮ್ಮ ಭೋವಿ, ರಾಜೇಶ್ ನಾಯಕ, ದಿನೇಶ್ ಮಾರಿತ್ತು, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಕೆಡಿಪಿ ಸದಸ್ಯೆ ತನುಜಾ ರಂಗಸ್ವಾಮಿ, ಮಲ್ಲಾಪುರ ಗ್ರಾಪಂ ಅಧ್ಯಕ್ಷ ಉದಯ್ ಬಾಂದೇಕರ್, ಉಪಾಧ್ಯಕ್ಷೆ ಪಿಯಾದಾದ್ ಡಿಸೋಜಾ, ಎಜಾಜ್ ಶೇಖ್ ಮುಂತಾದವರು ಉಪಸ್ಥಿತರಿದ್ದರು.