ವಿಡಂಬನೆ
ಯಾರು ಹೇಳಿದ್ದು ರಾಜಕಾರಣಿಯ ಮಕ್ಕಳು ರಾಜಕಾರಣಕ್ಕೆ ಬರಬಾರದು ಅಂತಾ? ಆ ರೀತಿ ರೂಲ್ಸ್, ಕಾಯಿದೆ, ನಿರ್ಬಂಧ, ನಿಷೇಧ ಏನಾದ್ರೂ ಇದೆಯಾ? ಮೈದಾನ ಮುಂದಿರುವಾಗ, ಅವಕಾಶ ದೊರತಿರುವಾಗ ಯಾರು ಬೇಕಾದರೂ ತಮ್ಮ ಕುದುರೆ ಓಡಿಸಬಹುದು. ಕುಟುಂಬ ರಾಜಕಾರಣಿಯ ಕೃಪಾಕಟಾಕ್ಷ, ಪ್ರಭಾವ ಹಾಗೂ ಹಣಬಲ ಇದ್ದರೆ ಕುಂಟ ಕುದುರೆಯೂ ಓಡುತ್ತೆ, ಮೆದುಳಿಲ್ಲದ ಕತ್ತೆಯೂ ಗೆಲ್ಲುತ್ತೆ. ಗೆದ್ದಮೇಲೆ ಸಿಕ್ಕಿದ್ದನ್ನೆಲ್ಲಾ ಮೇಯುತ್ತೆ. ಇದಕ್ಕೆಲ್ಲಾ ನಮ್ಮ ಸಂವಿಧಾನದಲ್ಲೇ ಅವಕಾಶ ಇದ್ದೇ ಇದೆ ಅಲ್ವಾ? ಮತ್ಯಾಕೆ ಕುಟುಂಬ ರಾಜಕಾರಣವನ್ನು ಖಂಡಿಸುವುದು? ತಪ್ಪಲ್ವಾ?
ಈಗಾಗಲೇ ಹೆಸರು ಹಣ ಮಾಡಿ ತಮ್ಮದೇ ಆದ ಸಾಮ್ರಾಜ್ಯ ಸ್ಥಾಪಿಸಿದ ಹಿರಿಯ ರಾಜಕಾರಣಿಗಳೇನು ಇದ್ದಕ್ಕಿದ್ದಂತೆ ರಾತ್ರೋ ರಾತ್ರಿ ಎಲ್ಲವನ್ನೂ ಸಂಪಾದಿಸಿ ಸಕಲ ಸವಲತ್ತು ಪಡೆದು ಮೆರೆದ್ರಾ? ನೋ.. ಹತ್ತಿಪ್ಪತ್ತು ವರ್ಷ, ಕೆಲವರು ಮೂವತ್ತು ನಲವತ್ತಕ್ಕೂ ಹೆಚ್ಚು ವರ್ಷಗಳ ಕಾಲ ರಾಜಕೀಯದ ಇಮಾರತು ಕಟ್ಟಿಕೊಳ್ಳಲು ಕಲ್ಲು ಮಣ್ಣು ಮತ್ತೊಂದು ಹೊತ್ತಿರ್ತಾರೆ. ಏನೆಲ್ಲಾ ಕಷ್ಟಾ ಪಟ್ಟು, ಕಾಲಕಾಲಕ್ಕೆ ಬಕೆಟ್ಟು ಹಿಡಿದು, ಆಡಬಾರದ್ದನ್ನು ಆಡಿ, ಮಾಡಬಾರದ್ದನ್ನು ಮಾಡಿ ರಾಜಕೀಯದ ಅಖಾಡದಲ್ಲಿ ತಮ್ಮದೇ ಆದ ಸ್ಥಾನ ಪ್ರತಿಷ್ಠೆ ಮತ್ತೊಂದು ಮಗದೊಂದು ಗಿಟ್ಟಿಸಿಕೊಂಡು ಪಟ್ಟಕ್ಕೇರಿ ಇಳಿದು ಮಾಡಿರುತ್ತಾರೆ.
ಅಂತವರು ಅಧಿಕಾರಕ್ಕಾಗಿ ಮಾಡಿದ ಪಕ್ಷಾಂತರಗಳೆಷ್ಟೋ, ಮತಬೇಟೆಗೆ ಕೊಟ್ಟ ಹುಸಿ ಭರವಸೆಗಳೆಷ್ಟೋ, ಕಬಳಿಸಿದ ಆಸ್ತಿಗಳೆಷ್ಟೊ, ಅಕ್ರಮ ಸಂಪಾದನೆಗಳೆಷ್ಟೋ, ತುಳಿದ ತಲೆಗಳೆಷ್ಟೋ ಲೆಕ್ಕ ಇಟ್ಟವರಿಲ್ಲ. ಆದರೆ ಇದೆಲ್ಲವನ್ನೂ ದಶಕಗಳ ಕಾಲ ಮಾಡಿ ಕೂಡಾಕಿದ್ದನ್ನು ಇನ್ಯಾರಿಗೋ ಬಿಟ್ಟು ಹೋದರೆ ಅದು ರಾಜಕಾರಣಕ್ಕೆ ಅಪಮಾನ. ನುಂಗಿದ್ದನ್ನೆಲ್ಲಾ ತಲೆಮಾರುಗಳ ಕಾಲ ಜೀರ್ಣಿಸಿಕೊಳ್ಳಲಾದಿದ್ದರೆ ರಾಜಕೀಯದಲ್ಲಿದ್ದು ಏನುಪಯೋಗ?
ಹೀಗಾಗಿ.. ತಾತ ಗಳಿಸಿದ ಆಸ್ತಿ ಮಕ್ಕಳಿಗೆ, ಮಕ್ಕಳದ್ದು ಮೊಮ್ಮಕ್ಕಳಿಗೆ ಹೋಗಬೇಕಾದದ್ದು ಕಾನೂನಾತ್ಮಕ ಒಪ್ಪಿತ ಒಪ್ಪಂದ ಅಲ್ವಾ? ಹಾಗೆಯೇ ರಾಜಕಾರಣಿಯ ವೃತ್ತಿ, ಶಕ್ತಿ, ಯುಕ್ತಿ, ಸಂಪಾದನೆ, ಸಂಪನ್ಮೂಲಗಳೆಲ್ಲಾ ಕುಟುಂಬದವರಿಗೆ ಹಸ್ತಾಂತರವಾಗುವುದರಲ್ಲಿ ಏನಿದೆ ತಪ್ಪು? ಅಕ್ರಮವಾಗಿ ಸಂಪಾದಿಸಿದ ಆಸ್ತಿ ಸಂಪತ್ತನ್ನು ರಕ್ಷಿಸಲು, ಉಳಿಸಿ ಬೆಳೆಸಿಕೊಂಡು ಹೋಗಲು ವಂಶದ ಕುಡಿಗಳು ಅಧಿಕಾರದಲ್ಲಿರುವುದು ಅತ್ಯಂತ ಅಗತ್ಯವಷ್ಟೇ ಅಲ್ಲಾ ಅನಿವಾರ್ಯವೂ ಅಲ್ಲವೇ?
ಆ ಪಕ್ಷದವರು ಈ ಪಕ್ಷದವರ ವಂಶಾಡಳಿತದ ಬಗ್ಗೆ ಬಾಯಿ ಬಡಿದು ಕೊಳ್ಳುತ್ತಲೇ ತಮ್ಮ ಪಕ್ಷದಲ್ಲೇ ಇರುವ ಕುಟುಂಬ ರಾಜಕಾರಣದ ಬಗ್ಗೆ ಬಾಯಿ ಬುಡ ಮುಚ್ಚಿಕೊಂಡು ಜಾಣ ಮೌನಿಯಾಗುತ್ತಾರೆ. ಈ ಪಕ್ಷದವರು ಆ ಪಕ್ಷದವರನ್ನು ಕುಟುಂಬ ರಾಜಕಾರಣಿಗಳೆಂದು ಹಂಗಿಸುತ್ತಾರೆ. ಈ ಕುಟುಂಬವೇ ಇಲ್ಲದ, ಇದ್ದರೂ ದೂರವಾಗಿರುವ, ಮಕ್ಕಳು ಮರಿ ಸಂತಾನಗಳೇ ಇಲ್ಲದ ಮೋದಿಯಂತವರು ಅವಕಾಶ ಸಿಕ್ಕಗಲೆಲ್ಲಾ ಆ ಪಕ್ಷದ ಕುಟುಂಬ ರಾಜಕಾರಣವನ್ನು ಶತಾಯ ಗತಾಯ ವಿರೋಧಿಸುತ್ತಲೇ ಇರುತ್ತಾರೆ. ಹೆಂಡತಿ ಮಕ್ಕಳು ಇದ್ದಿದ್ದರೆ ಹೀಗೆ ವಿರೋಧಿಸಲು ಸಾಧ್ಯವಿತ್ತೇ ಎಂದು ವಿರೋಧ ಪಕ್ಷದವರು ಪ್ರಶ್ನಿಸುತ್ತಾರೆ. ಪ್ರಧಾನಿಗಳು ಕುಟುಂಬದಿಂದ ವಂಚಿತರಾದರೇನು ಅವರ ಪಕ್ಷ ಹಾಗೂ ಮಿತ್ರ ಪಕ್ಷದ ನಾಯಕರುಗಳಿಗೆ ಕುಟುಂಬ ಎನ್ನುವುದು ಇದೆಯಲ್ಲಾ, ತಾಯಿ ತಂಗಿ ಅಣ್ಣ ತಮ್ಮ ಮಕ್ಕಳು ಮರಿಗಳು ಅಂತಾ ರಕ್ತ ಸಂಬಂಧಗಳು ಇದ್ದಾವಲ್ಲಾ. ಅವರನ್ನೆಲ್ಲಾ ಹಂಗೆ ಅನಾಥವಾಗಿ ಬಿಡಲು ಸಾಧ್ಯವಾ? ಕುಟುಂಬದೊಳಗಿನವರನ್ನೇ ಉತ್ತರಾಧಿಕಾರಿಯಾಗಿ ಬೆಳೆಸದೇ ಹೋದರೆ ರಾಜಕಾರಣದಲ್ಲಿದ್ದೂ ಏನುಪಯೋಗ? ರಾಜಕೀಯದಲ್ಲಿ ಗಳಿಸಿದ ಪ್ರಭಾವ ಪ್ರಾಬಲ್ಯಗಳು ಕುಟುಂಬದ ಮುಂದಿನ ತಲೆಮಾರಿಗೆ ಹಸ್ತಾಂತರ ಮಾಡದೇ ಹೋದರೆ ರಕ್ತ ಸಂಬಂಧದ ನಡುವೆ ಸುಳಿವ ಅಂತರಾತ್ಮ ಸುಮ್ಮನಿರಲು ಸಾಧ್ಯವೇ?
ಅದಕ್ಕಾಗಿ.. ಕುಟುಂಬದ ಸದಸ್ಯರಿಗೆ ಅನುಭವ ಇರಲಿ ಬಿಡಲಿ, ಅರ್ಹತೆ ಇರಲಿ ಇಲ್ಲದಿರಲಿ ಅಧಿಕಾರದ ಮೆಟ್ಟಿಲು ಹತ್ತಿಸಿ ಪಟ್ಟಕಟ್ಟಬೇಕೆಂಬುದು ಬಹುತೇಕ ರಾಜಕಾರಣಿಗಳ ಅಂತರಾಳದ ಹೆಬ್ಬಯಕೆ.
ಇಷ್ಟಕ್ಕೂ ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ಈ ಹಿಂದೆ ರಾಜಪ್ರಭುಗಳು ಇದ್ದಾಗ ಅವರ ಸಂತಾನವೇ ಪಟ್ಟಕ್ಕೇರುವ ಅಘೋಷಿತ ನಿಯಮ ಇತ್ತಲ್ಲವೇ? ಹಾಗೆಯೇ ಪ್ರಜಾಪ್ರಭುತ್ವದಲ್ಲಿ ಆಳುವ ಅಧಿಕಾರ ಪಡೆದ ಪ್ರಭುಗಳು ಸಹ ತಮ್ಮದೇ ಕುಟುಂಬದವರನ್ನು ಉತ್ತರಾಧಿಕಾರಿಯನ್ನಾಗಿ ಘೋಷಿಸ್ತಾರೆ ಅಷ್ಟೇಯಾ? ಇದನ್ನು ಪ್ರಶ್ನಿಸುವವರನ್ನು ದೇಶದ್ರೋಹಿಗಳು ಎಂದು ಘೋಷಿಸಿ ಗಡಿಪಾರು ಮಾಡುವ ಕಾನೂನು ತರುವುದು ಸೂಕ್ತ ಅಲ್ಲವೇ?
ಯಾರು ಏನೇ ಹೇಳಲಿ ರಾಜಕಾರಣ ಸೇವಾಕ್ಷೇತ್ರ ಅನ್ನೋದೆಲ್ಲಾ ಈಗ ಸುಳ್ಳು. ಅದೊಂದು ಉದ್ಯಮ. ಹೇಗೆ ಉದ್ಯಮಿಯೊಬ್ಬ ತನ್ನ ಉದ್ಯಮ ಸಾಮ್ರಾಜ್ಯದ ಆಧಿಪತ್ಯವನ್ನು ಆಳಲು ತನ್ನ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾನೆಯೋ ಹಾಗೆಯೇ ಈ ರಾಜಕೀಯೋದ್ಯಮಿಗಳೂ ಸಹ ತಾವು ಕಟ್ಟಿದ ಸಾಮ್ರಾಜ್ಯವನ್ನು ಇನ್ನೊಬ್ಬ ನಾಯಕನಿಗೋ ಇಲ್ಲಾ ಸೋ ಕಾಲ್ಡ್ ಕಾರ್ಯಕರ್ತನಿಗೋ ಬಿಟ್ಟು ಕೊಡುವ ಚಾನ್ಸೇ ಇಲ್ಲ. ‘ಎಲ್ಲಾ ಅಧಿಕಾರ ಸಂಪತ್ತುಗಳು ತನಗೇ ಹಾಗೂ ತನ್ನ ಕುಟುಂಬದವರಿಗೆ ಇರಲಿ, ಇವರ ಅಧಿಕಾರದ ಪಟ್ಟಕ್ಕೆ ಮೆಟ್ಟಿಲಾದವರು ತುಳಿತಕ್ಕೆ ಒಳಗಾಗುತ್ತಾ ಇದ್ದಲ್ಲೇ ಬಿದ್ದಿರಲಿ’ ಎನ್ನುವುದೇ ರಾಜಕೀಯೋದ್ಯಮದ ಮೂಲಮಂತ್ರ. ಹೀಗಾಗಿ ಕುಟುಂಬ ರಾಜಕಾರಣವನ್ನು ಎಷ್ಟು ನಿಂದಿಸಿದರೂ, ಅದೆಷ್ಟೇ ಹೀಗಳೆದರೂ, ಅದರಿಂದ ಈ ದೇಶಕ್ಕೆ ಮುಕ್ತಿ ಎನ್ನುವುದಿಲ್ಲ. ವಂಶಪಾರಂಪರ್ಯ ಆಡಳಿತಕ್ಕೆ ಕೊನೆ ಮೊದಲಿಲ್ಲ. ಇದಕ್ಕೆ ಯಾವ ಪಕ್ಷದವರೂ ಹೊರತಲ್ಲ. ಆದ್ದರಿಂದ ಕುಟುಂಬ ರಾಜಕಾರಣಕ್ಕೆ ಜೈ.. ವಂಶಾಡಳಿತಕ್ಕೆ ಡಬಲ್ ಜೈ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು, ರಂಗಕರ್ಮಿ
ಇದನ್ನೂ ಓದಿ- ಟ್ರಾಫಿಕ್ ಪೊಲೀಸರ ಹೆಲ್ಮೆಟ್ ಪ್ರಹಸನ