ಅಂದು ಆ ಮೊನಾಲಿಸಾ ಇಂದು ಈ ಮೊನಾಲಿಸಾ ….

Most read

ಇಂದಿನ ಮೊನಾಲಿಸಾಳ ಬದುಕು  ಎಲ್ಲ ಜೊಲ್ಲುಬಾಕರ ನಡುವೆ ಕರಗಿ ಹೋಗದಿರಲಿ. ಈ ಶತಮಾನದ ಕುಂಭದ ಪುಣ್ಯವೇ ಇದ್ದರೆ ಈ ಸಹೋದರಿಯ ಬದುಕು ಧನಾತ್ಮಕತೆಯತ್ತ ಸಾಗಲಿ – ರೇಶ್ಮಾ ಗುಳೇದಗುಡ್ಡಾಕಾರ್, ಕವಯಿತ್ರಿ.

ಅಫ್ಘಾನಿಸ್ತಾನದ ಮೊನಾಲಿಸಾ  ಆಗಿ ಒಬ್ಬ  ಯುವತಿಯ ಚಿತ್ರ ಬಹಳ ಜನಪ್ರಿಯ ಸುದ್ದಿಯಾಗಿತ್ತು. ಅದನ್ನು ಪತ್ರಿಕೆಯಲ್ಲಿ ಓದಿದ ನೆನಪು, ಆ ಫೋಟೋವನ್ನು ನೋಡಿದ ನೆನಪು ಸಹ ಇದೆ. ಆಗೆಲ್ಲ ಇಂದಿನ ದಿನಗಳಂತೆ ಅಂತರ್ಜಾಲ ಇರಲಿಲ್ಲ. ಪತ್ರಿಕೆ ಯಲ್ಲಿ ಸುದ್ದಿ ಹಬ್ಬಿತ್ತು ಅಷ್ಟೆ . ಇಂದಿನ ದಿನಗಳ ಭರ್ಜರಿ ಪ್ರಚಾರ  ಅದಕ್ಕೆ ಸಿಗುವುದು ಸಾಧ್ಯವಿರಲಿಲ್ಲ..

ಆದರೆ ಈಗ ಕಾಲ ಬದಲಾಗಿದೆ AI  ತಂತ್ರಜ್ಞಾನದಿಂದ ಜೀವನ ವೇಗವಾಗಿ ಸಾಗುತ್ತಲಿದೆ. ಇಲ್ಲಿ ಯಾರು ಯಾವಾಗ ಪ್ರಚಾರಕ್ಕೆ ಬರುತ್ತಾರೆ, ಯಾರು ಯಾವಾಗ ಮುಗ್ಗರಿಸುತ್ತಾರೋ ಗೊತ್ತೇ ಆಗುವುದಿಲ್ಲ.

ಆದರೆ ಕಳೆದ ದಿನಗಳಿಂದ ಎಲ್ಲೆಡೆ ಅಂತರ್ಜಾಲಗಳಲ್ಲಿ ರಾರಾಜಿಸುತ್ತಿರುವ ಫೋಟೋ ಹಾಗೂ ಬಹುತೇಕರ ಖಾತೆಯಲ್ಲಿ ಜಾಗವನ್ನು ಪಡೆದುಕೊಂಡಿರುವ ಫೋಟೋ ಎಂದರೆ ಇಂದಿನ  ಮೊನಾಲಿಸಾ. ಅಖಿಯೊ ವಾಲೆ ಎಂದು ಜನಪ್ರಿಯತೆ  ಪಡೆದಿರುವ ಕುಂಭಮೇಳದ ಹುಡುಗಿ..!

ಶತಮಾನದ ಕುಂಭಮೇಳದಷ್ಟೇ ಈ ಹುಡುಗಿಯ ಫೋಟೋಗಳು ಸಹ ಖ್ಯಾತಿ ಪಡೆಯುತ್ತಿವೆ. ಕಳೆದ ಕೆಲವು ದಿನಗಳಿಂದ  ಮಕ್ಕಳನ್ನು ಹೆರುವ, ಹೆಚ್ಚು ಮಕ್ಕಳನ್ನು ಹಡೆಯುವ, ಜಾತಿಯನ್ನು ವಿಸ್ತಾರ ಮಾಡುವ ಸುದ್ದಿಗಳು ಚರ್ಚೆಯಾದವು… ಆದರೆ ಈಗ ಕನಸು ಕಂಗಳ ಮುಗ್ಧ ನಗುವಿನ ಹುಡುಗಿಯ ಚಿತ್ರಗಳು, ಜೊತೆಗೆ ಈ ಯುವತಿ ಎಲ್ಲೆಲ್ಲಿ ಹೋಗುತ್ತಾಳೋ, ಅಲ್ಲೆಲ್ಲ ಸೇರುವ ಜನರ ಗುಂಪು, ಎಷ್ಟು ಸಾಧ್ಯವೊ ಅಷ್ಟು ಅವಳ ಸಂದರ್ಶನಗಳು ಅವಳ ಫೋಟೋಗಳು ಅಂತರ್ಜಾಲದಲ್ಲಿ ಬಿಕರಿಯಾಗುತ್ತಿವೆ..

ಕುಂಭ  ಮೇಳದ  ಪುಣ್ಯ ಸ್ನಾನಕ್ಕೆ, ದೇವರ ಧ್ಯಾನಕ್ಕೆ ಹೋಗಿರುವವರು ಮಾಡುತ್ತಿರುವುದು ಅಲ್ಲಿನ ಈ ಯುವತಿಯ ಪ್ರಚಾರವನ್ನು. ಈ ಬಾಲೆಗೆ ಗೊತ್ತಿದೆಯೊ  ಇಲ್ಲವೊ ತಾನು ಎಷ್ಟೊಂದು ಪ್ರಚಾರಕ್ಕೆ ಒಳಗಾಗಿದ್ದೇನೆ ಎಂದು.

ದಿನ ಬೆಳಗಾದರೆ ಗೊತ್ತಿರುವವರಿಂದ, ಹೆಚ್ಚು ಪರಿಚಿತರಿಂದಲೇ ಹೆಣ್ಣು ಮಕ್ಕಳ ಶೋಷಣೆಯಾಗುತ್ತಿರುವುದು ಅಂತರ್ಜಾಲಗಳಲ್ಲಿ ವರದಿಯಾಗುತ್ತಿವೆ….ಗೊತ್ತಿರುವವರಾದರೇನು ?, ಅಪರಿಚಿತರಾದರೇನು? ಹೆಣ್ಣೊಂದು ಕಣ್ಣಿಗೆ ಕಂಡರೆ ಸಾಕು ವಯಸ್ಸಿನ ಮಿತಿ ಇಲ್ಲದಂತೆ ಅವಳನ್ನು ಶೋಷಣೆ ಮಾಡಿ ತಮ್ಮ ವ್ಯಕ್ತಿತ್ವ ಕಳೆದುಕೊಳ್ಳುವವರ ಸಂಖ್ಯೆ ಅಧಿಕವಾಗಿದೆ .

ಹೀಗಿರುವಾಗ, ಅಷ್ಟೊಂದು ಜನ ಸೇರುವ ಸಾರ್ವಜನಿಕ ಸ್ಥಳಗಳಲ್ಲಿ ಇಷ್ಟೊಂದು ಪ್ರಚಾರ ಪಡೆಯುತ್ತಿರುವ ಈ ಹರೆಯದ ಬಾಲೆಯ ಬದುಕು  ಭದ್ರವಾಗಿದೆಯೇ? ಮುಂದಿನ ದಿನಗಳಲ್ಲಿ  ಈ ಪ್ರಚಾರ ಅವಳಿಗೆ ಎಂಥ ಅಪಾಯದ  ಬದುಕನ್ನು ತಂದೊಡ್ಡಬಹುದು? ಎಂಬೆಲ್ಲ ಪ್ರಶ್ನೆಗಳು ಚಿತ್ತಪಟಲದಲ್ಲಿ ಮೂಡುತ್ತವೆ.

ಅಂದಿನ ಆಫ್ಘನ್ ಯುವತಿಯ ಚಿತ್ರ  ಚರ್ಚೆಯಾದಾಗ  ಆಫ್ಘನ್  ಮಹಿಳೆಯರ ಅಂದಿನ ಸ್ಥಿತಿಗತಿಗಳು  ವರದಿಯಾದವು. ಇಂದಿನ ಶತಮಾನದ ಕುಂಭಮೇಳದಲ್ಲಿ ಅಲ್ಲಿನ ಪರಿಸ್ಥಿತಿ,  ಅಷ್ಟೊಂದು ಜನ ಸೇರುವ ಜಾಗದ ಭದ್ರತೆ, ಆರೋಗ್ಯ, ಪರಿಸರದ ಸುರಕ್ಷತೆ ಇವುಗಳ ಬಗ್ಗೆ ಚರ್ಚೆಯಾಗಬೇಕಾಗಿತ್ತು. ವಿಪರ್ಯಾಸವೆಂದರೆ ಇವೆಲ್ಲ ಬದಿಗೆ ಸರಿದು  ಅಲ್ಲಿನ ಆ ಹುಡುಗಿಯ ಭಾವಚಿತ್ರಗಳು, ಅವಳ ವೈಯಕ್ತಿಕ ವಿವರವನ್ನು ಕೇಳುವ ಸುದ್ದಿಗಳು ಢಾಳಾಗಿ ಗೋಚರಿಸುತ್ತಿವೆ.

ರೇಶ್ಮಾ ಗುಳೇದಗುಡ್ಡಾಕಾರ್

ಕವಯಿತ್ರಿ

ಇದನ್ನೂ ಓದಿ- ಸತ್ಯವೆನ್ನುವ ಜವಾರಿ ಮತ್ತು ಸುಳ್ಳಿನ ಸವಾರಿ

More articles

Latest article