ಸಂಪಿಗೆ ಚಿತ್ರಮಂದಿರ ಮಾಲೀಕರ ಮನೆಯಲ್ಲಿ ಕಳ್ಳತನ: ಆರೋಪಿಗಳ ಬಂಧನ

Most read

ಬೆಂಗಳೂರು: ಮಲ್ಲೇಶ್ವರಂನ ಸಂಪಿಗೆ ಚಿತ್ರಮಂದಿರದ ಮಾಲೀಕರ ನಿವಾಸದಲ್ಲಿ 1.12 ಕೋಟಿ ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನು ಕಳವು ಮಾಡಿದ್ದ ಮೂವರು ಅರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಜಯನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.


ಮನೆಯ ಮಾಲೀಕರು ಮನೆಯಲ್ಲಿ ಒಬ್ಬರೇ ಇದ್ದ ಸಮಯವನ್ನು ನೋಡಿಕೊಂಡು ಅವರಿಗೆ ಪ್ರಜ್ಞೆ ತಪ್ಪಿಸುವ ಔಷಧಿಯನ್ನು ಮದ್ಯದಲ್ಲಿ ಬೆರೆಸಿ ಕೋಟಿ ಲೂಟಿ ಮಾಡಿದ್ದರು. ಸೆಕ್ಯುರಿಟಿ ಗಾರ್ಡ್ ಅಫಿಲ್ ಶಾಯಿ(41), ಫುಡ್ ಡೆಲವರಿ ಬಾಯ್ ಜಗದೀಶ್ ಶಾಯಿ(30) ಮತ್ತು ಮತ್ತೊಬ್ಬ ಸೆಕ್ಯುರಿಟಿ ಗಾರ್ಡ್ ಪ್ರಕಾಶ್ ಶಾಯಿ(40) ಬಂಧಿತ ಆರೋಪಿಗಳು. ಆದರೆ ಈ ಪ್ರಕರಣದ ಪ್ರಮುಖ ಆರೋಪಿಗಳಾದ ನೇಪಾಳ ಮೂಲದ ದಂಪತಿ ಗಣೇಶ್ ಮತ್ತು ಗೀತಾ ತಲೆಮರೆಸಿಕೊಂಡಿದ್ದು, ಇವರ ಪತ್ತೆಗೆ ಬಲೆ ಬೀಸಲಾಗಿದೆ.
ಸಂಪಿಗೆ ಚಿತ್ರಮಂದಿರದ ಮಾಲೀಕ ನಾಗೇಶ್(65) ಅವರು ಜಯನಗರ ಮೂರನೇ ಹಂತದಲ್ಲಿರುವ ಮನೆಯಲ್ಲಿ ವಾಸವಾಗಿದ್ದಾರೆ. ಇವರ ಮನೆಯಲ್ಲಿ ಎರಡು ವರ್ಷಗಳಿಂದ ನೇಪಾಳ ಮೂಲದ ದಂಪತಿ ಸೆಕ್ಯೂರಿಟಿಗಾರ್ಡ್ ಹಾಗೂ ತೋಟದ ಕೆಲಸ ಮಾಡಿಕೊಂಡಿದ್ದರು.


ಅ.21ರಂದು ಸಂಜೆ ನಾಗೇಶ್ ಅವರ ಪುತ್ರ ವೆಂಕಟೇಶ್ ತಮ್ಮ ಕುಟುಂಬದವರ ಜತೆ ಹೊರಗೆ ಹೋಗಿದ್ದರು. ಆ ಸಂದರ್ಭವನ್ನು ಬಳಸಿಕೊಂಡ ಗಣೇಶ್ ಮತ್ತು ಗೀತಾ ನಾಗೇಶ್ ಅವರಿಗೆ ಮದ್ಯದಲ್ಲಿ ಪ್ರಜ್ಞೆ ತಪ್ಪಿಸುವ ಔಷಧಿ ಬೆರೆಸಿ ಕುಡಿಸಿದ್ದರು. ನಾಗೇಶ್ ಆ ಮದ್ಯ ಸೇವಿಸಿದ ನಂತರ ಪ್ರಜ್ಞೆ ತಪ್ಪಿದ್ದರು. ನಂತರ ಇವರು ತಮ್ಮ ಮೂವರು ಸಹಚರರೊಂದಿಗೆ ಸೇರಿಕೊಂಡು ಮನೆಯ ಕೊಠಡಿಯ ಬೀರುವಿನಲ್ಲಿದ್ದ 2 ಕೆಜಿ 510 ಗ್ರಾಂ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ 5 ಲಕ್ಷ ರೂ. ಹಣ ದೋಚಿಕೊಂಡು ಪರಾರಿಯಾಗಿದ್ದರು.
ಕೆಲವು ಗಂಟೆಗಳ ನಂತರ ನಾಗೇಶ್ ಮನೆಗೆ ಬಂದಾಗ ಮನೆಯಲ್ಲಿದ್ದ ಸೆಕ್ಯೂರಿಟಿಗಾರ್ಡ್ ಹಾಗೂ ಆತನ ಪತ್ನಿ ಇರಲಿಲ್ಲ. ಅನುಮಾನಗೊಂಡು ಕೊಠಡಿಯೊಳಗೆ ಹೋಗಿ ನೋಡಿದಾಗ ಹಣ, ಆಭರಣ ಕಳವಾಗಿರುವುದು ಗೊತ್ತಾಗಿತ್ತು. ಕೂಡಲೇ ಅವರು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.


ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗಾಗಿ 5 ತಂಡಗಳನ್ನು ರಚಿಸಿ ಕಾರ್ಯಾಚರಣೆ ಕೈಗೊಂಡಿದ್ದರು. ತನಿಖಾ ತಂಡಗಳು ಗುಜರಾತ್, ರಾಜಸ್ಥಾನ, ದೆಹಲಿ ಹಾಗೂ ಮುಂಬೈಗೆ ತೆರಳಿ ಆರೋಪಿಗಳ ಮೊಬೈಲ್ ನೆಟ್ ವರ್ಕ್ ಆಧರಿಸಿ ಮಾಹಿತಿ ಕಲೆ ಹಾಕಿದಾಗ ಆರೋಪಿ ದಂಪತಿ ನೇಪಾಳಕ್ಕೆ ಪರಾರಿಯಾಗಿರುವುದು ಗೊತ್ತಾಗಿದೆ. ತನಿಖೆ ಮುಂದುವರೆಸಿದ ಪೊಲೀಸರು ಖಚಿತ ಮಾಹಿತಿ ಮೇರೆಗೆ ವರ್ತೂರಿನ ಬಲಗೆರೆ ರಸ್ತೆಯಲ್ಲಿ ನೇಪಾಳ ಮೂಲದ ಮೂವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಚಿನ್ನಾಭರಣ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.


ಈ ಮೂವರನ್ನು ಸುದೀರ್ಘ ವಿಚಾರಣೆಗೊಳಪಡಿಸಿದಾಗ ಆರೋಪಿಯೊಬ್ಬ, ವರ್ತೂರಿನ ಮನೆಯಲ್ಲಿ ಕಳವು ಮಾಡಿದ ಚಿನ್ನಾಭರಣಗಳನ್ನು ಬಚ್ಚಿಟ್ಟಿರುವುದಾಗಿ ತಿಳಿಸಿದ್ದಾನೆ. ಆತನ ಮನೆಯಿಂದ 1 ಕೆಜಿ 600 ಗ್ರಾಂ ಚಿನ್ನಾಭರಣ, 450 ಗ್ರಾಂ ಬೆಳ್ಳಿ ವಸ್ತುಗಳು, ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 1.12 ಕೋಟಿ ರೂ.ಗಳೆಂದು ಅಂದಾಜು ಮಾಡಲಾಗಿದೆ.

More articles

Latest article