Thursday, December 12, 2024

ಕೇರ್ ಟೇಕರ್ ಸೆರೆ : 12 ಲಕ್ಷ ಮೌಲ್ಯದ ಆಭರಣ ಜಪ್ತಿ

Most read

ಬೆಂಗಳೂರು: ಮನೆಯೊಂದರಲ್ಲಿ ಕೇರ್ ಟೇಕರ್ ಕೆಲಸ ಮಾಡಿಕೊಂಡಿದ್ದ ಮಹಿಳಾ ಕೇರ್ ಟೇಕರ್ ಮಾಲೀಕರ ಕಣ್ತಪ್ಪಿಸಿ ಆಭರಣ ಕಳವು ಮಾಡಿದ್ದರು. ಈಕೆಯನ್ನು ಬಂಧಿಸಿ 12 ಲಕ್ಷ ಮೌಲ್ಯದ 108 ಗ್ರಾಂ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.


ಅಂಜನಾದ್ರಿ ಲೇಔಟ್‌ ಅಪಾರ್ಟ್‌ ಮೆಂಟ್‌ ವೊಂದರಲ್ಲಿ ವಾಸವಿರುವ ನಿವಾಸಿಯೊಬ್ಬರು ತಮ್ಮ ಅತ್ತೆಯನ್ನು ನೋಡಿಕೊಳ್ಳಲು ಮಹಿಳಾ ಕೇರ್ ಟೇಕರ್ ವೊಬ್ಬರನ್ನು ನೇಮಿಸಿಕೊಂಡಿದ್ದರು. ಮನೆಯಲ್ಲಿ ಎಲ್ಲೆಲ್ಲಿ ಆಭರಣಗಳನ್ನು ಇರಿಸಿದ್ದಾರೆ ಎಂದು ನೋಡಿಕೊಂಡಿದ್ದಳು. ದಸರಾ ಹಬ್ಬದಂದು ಚಿನ್ನದ ಆಭರಣಗಳನ್ನು ಧರಿಸಿ ಅನಂತಪದ್ಮನಾಭ ದೇವರ ವ್ರತ ಮಾಡಿ ಮರುದಿನ ಆಭರಣಗಳನ್ನು ತೆಗೆದು ರೂಮಿನಲ್ಲಿ ಕಬ್ಬಿಣದ ಪೆಟ್ಟಿಗೆಯಲ್ಲಿ ಇಟ್ಟಿದ್ದರು.


ಅ.31ರಂದು ಬೆಳಗ್ಗೆ ಲಕ್ಷ್ಮಿಪೂಜೆ ಮಾಡುವ ಸಲುವಾಗಿ ಕಬ್ಬಿಣದ ಪೆಟ್ಟಿಗೆಯಲ್ಲಿದ್ದ ಚಿನ್ನದ ಒಡವೆಗಳನ್ನು ನೋಡಿದಾಗ ಅದರಲ್ಲಿ ಒಡವೆಗಳು ಇರಲಿಲ್ಲ. ಮನೆಯಲ್ಲಿದ್ದ ಕೇರ್ ಟೇಕರ್ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಪ್ರಕರಣದ ತನಿಖೆ ಮುಂದುವರೆಸಿದ ಪೊಲೀಸರು ಸಿಕೆ ಪಾಳ್ಯದ ಬಿಜಿ ರಸ್ತೆಯಲ್ಲಿರುವ ಕೇರ್ ಟೇಕರ್ ನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕಳವು ಮಾಡಿರುವ ವಿಷಯವನ್ನು ಒಪ್ಪಿಕೊಂಡಿದ್ದಳು. ಆಕೆ ಮನೆಯಲ್ಲಿ ಇಟ್ಟಿದ್ದ 18 ಗ್ರಾಂ ಆಭರಣ, ಜ್ಯುವೆಲರಿ ಅಂಗಡಿಯೊಂದರಲ್ಲಿ ಮಾರಾಟ ಮಾಡಿದ್ದ 82 ಗ್ರಾಂ ಆಭರಣ ಹಾಗೂ ಪತಿಗೆ ನೀಡಿದ್ದ 8 ಗ್ರಾಂ ಚಿನ್ನದ ಓಲೆಯನ್ನು ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 12 ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ

More articles

Latest article