ಶಿವಕುಮಾರ ಮಾವಲಿ, ಉಪನ್ಯಾಸಕರು
‘ಆಯುಧಗಳನ್ನು ಲೋಹದಿಂದ ಮಾಡಲಾಗಿದ್ದರೂ, ಅವು ಕೊಲೆಪಾತಕವಾಗಲು ಮನುಷ್ಯನೊಳಗಿನ ದ್ವೇಷದ ಸಿಡಿಮದ್ದೇ ನಿಜವಾದ ಕಾರಣ’ ಎಂಬ ಮಾತು ನಾಟಕ ನೋಡುತ್ತಿರುವ ಸಹೃದಯ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚಿತು. ಧರ್ಮದ ಅಮಲೇರಿಸಿಕೊಂಡು ಹಿಂಸೆಗೆ ಇಳಿಯುವ ಮತಾಂಧನಿಗೆ ಆತ ಯಾವ ವಿದ್ವಾಂಸನನ್ನು ಕೊಲೆ ಮಾಡಿರುತ್ತಾನೋ ಆ ವಿದ್ವಾಂಸರ ಮನೆಗೆ ಕರೆತಂದು ಅವರ ಮನೆಯಲ್ಲಿರುವ ಪುಸ್ತಕಗಳನ್ನು ಓದಿ ಅವುಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು ಎಂಬ ಶಿಕ್ಷೆ ವಿಧಿಸಿದಾಗ ಪ್ರೇಕ್ಷಕರು ಇಂಥದ್ದೊಂದು ಧನಾತ್ಮಕ ಶಿಕ್ಷೆ ನಿಜಕ್ಕೂ ಇದ್ದರೆ ಎಷ್ಟು ಒಳಿತಾಗುತ್ತಿತ್ತು ಎಂದು ಕಲ್ಪಿಸಿಕೊಂಡರು. ಆದರೆ ಅಷ್ಟೊತ್ತಿಗಾಗಲೇ ರಂಗದ ಮೇಲೆ ಆ ಪ್ರೊಫೆಸರ್ ಕೊಲೆಯಾಗಿ ಹೋಗಿದ್ದರು. ಹಾಗೆ ನೋಡಿದರೆ ನಾಟಕ ಆರಂಭವಾಗುವ ಮುನ್ನವೇ ಅಲ್ಲಿ ನೆರೆದಿದ್ದ ಎಲ್ಲರಿಗೂ ಆ ಪ್ರೊಫೆಸರ್ ಕೊಲೆಯಾಗುತ್ತಾರೆ ಎಂಬುದು ಗೊತ್ತಿತ್ತು. ಏಕೆಂದರೆ ‘ಭಗವಂತನ ಮರಣ’ ನಾಟಕವನ್ನು ಎಂ.ಎಂ. ಕಲ್ಬುರ್ಗಿಯವರ ಹತ್ಯೆಯ ಹಿನ್ನೆಲೆಯಲ್ಲಿ ಕಟ್ಟಲಾಗಿದೆ ಎಂಬುದು ತಿಳಿದೇ ಆ ನಾಟಕ ನೋಡಲು ಕುಳಿತಿದ್ದ ಪ್ರೇಕ್ಷಕನಲ್ಲಿ ನಾಟಕ ಒಂದು ಸಣ್ಣ ಪಶ್ಚಾತ್ತಾಪ ವನ್ನು ಉಳಿಸಿತು. ನಾಟಕದುದ್ದಕ್ಕೂ ಬಳಸಿದ ಬಸವಣ್ಣನವರ ವಚನಗಳು ಸಮಯೋಚಿತವೂ,ಸೂಕ್ತವೂ ಆಗಿದ್ದವು.

‘ನಾನು ಬದುಕಿರುವುದೇ ಎರಡು ವಿಷಯಗಳಿಗೆ. ಒಂದು ಕನ್ನಡ ; ಇನ್ನೊಂದು ಬಸವಣ್ಣ’ ಎಂದು ಹೇಳುತ್ತಿದ್ದ ಕಲ್ಬುರ್ಗಿಯವರನ್ನು ಅವರ ಮನೆಯಲ್ಲೇ ಹೋಗಿ ಕೊಲ್ಲಲಾಯಿತು. ಸತ್ಯ ಶೋಧನೆಯ ಹಾದಿಯಲ್ಲಿ ಹೋದ ಅನೇಕರಿಗೆ ಇಂಥ ಅಂತ್ಯವನ್ನೇ ಕೊಟ್ಟಿರುವ ನಮಗೆ ಪಶ್ಚಾತ್ತಾಪವಲ್ಲದೆ ಇನ್ನೇನು ಉಳಿದಿದೆ? ಬಸವಣ್ಣನವರ ನೈಜ ಆಲೋಚನೆಗಳನ್ನು ಜಗಕ್ಕೆ ಹೇಳಿದ ಕಾರಣಕ್ಕೆ ಸ್ವತಃ ಬಸವಣ್ಣನೂ ಎದುರಿಸಿದ ಸಂಕಷ್ಟವನ್ನು ಕಲ್ಬುರ್ಗಿಯವರೂ ಎದುರಿಸಬೇಕಾಯಿತು ಎಂಬುದು ದುರಂತ. ಅವರ ಸಾವಿನ ಸುತ್ತಮುತ್ತ ನಡೆದ ಸಂದರ್ಭ ಮತ್ತು ಸಂಘರ್ಷಗಳನ್ನೇ ವಸ್ತುವಾಗಿಟ್ಟುಕೊಂಡ ನಾಟಕ ‘ಭಗವಂತನ ಮರಣ’ವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುತ್ತಿರುವ ‘ಹೊನ್ನಾರು ರಂಗೋತ್ಸವ’ದ ಎರಡನೆಯ ದಿನ ಬೆಂಗಳೂರಿನ ಸಮುದಾಯ ತಂಡ ಅಭಿನಯಿಸಿತು. ಅದನ್ನು ಅಭಿನಯ ಎನ್ನುವುದಕ್ಕಿಂತ ಕಲ್ಬುರ್ಗಿಯವರ ಹತ್ಯೆಯ ಸುತ್ತಮುತ್ತಲಿನ ಸನ್ನಿವೇಷವನ್ನು ಮರುಸೃಷ್ಟಿಸಿ ನಮ್ಮನ್ನೆಲ್ಲ ಭಾವುಕರನ್ನಾಗಿಸಿತು ಎನ್ನಬಹುದು. ಪ್ರಮುಖ ಮಲಯಾಳಂ ಲೇಖಕಿ ಕೆ.ಆರ್. ಮೀರಾ ಅವರು ಕಲ್ಬುರ್ಗಿಯವರ ಹತ್ಯೆಯ ಬಗ್ಗೆ ಬರೆದ ಕಥೆ ‘ಭಗವಂತನ ಸಾವು’ ಎಂಬ ಹೆಸರಿನಲ್ಲಿ ಕನ್ನಡಕ್ಕೂ ಅನುವಾದವಾಗಿದೆ. ಮೂಲ ಕಥೆಯನ್ನು ಆಧರಿಸಿ ಮಲಯಾಳಂನಲ್ಲಿ ಈ ನಾಟಕ ಈಗಾಗಲೇ ಬಂದಿದ್ದು, ಮಲಯಾಳಂನಲ್ಲಿ ಆ ರಂಗಪಠ್ಯವನ್ನು ಮಾಡಿಕೊಂಡ ಡಾ.ಸ್ಯಾಮ್ ಕುಟ್ಟಿ ಪಟ್ಟಂಕರಿ, ಕೆ.ಪ್ರಭಾಕರನ್ ಅವರ ಕನ್ನಡ ಅನುವಾದವನ್ನು ಸಮುದಾಯ ಬೆಂಗಳೂರಿಗಾಗಿ ನಿರ್ದೇಶಿಸಿದ್ದಾರೆ. ನಾಟಕದುದ್ದಕ್ಕೂ ಬಸವಣ್ಣನವರ ವಚನಗಳನ್ನು ಅತ್ಯಂತ ಸಮಯೋಚಿತವಾಗಿ ಬಳಸಿಕೊಳ್ಳಲಾಗಿದೆ. ಮೂಲ ಮಲಯಾಳಂನಲ್ಲಿ ಈ ವಚನಗಳಿರುವುದು ವಿಶೇಷ.
ಸೈದ್ಧಾಂತಿಕ ಸಂಘರ್ಷಕ್ಕಾಗಿ ಪ್ರೊಫೆಸರ್ ಅವರನ್ನು ಕೊಲ್ಲಲು ತಯಾರಾಗುವ ಧಾರ್ಮಿಕ ಸಂಘಟನೆಯ ವ್ಯಕ್ತಿಯೊಬ್ಬ ಕೊಲೆಯ ಸುಪಾರಿ ಪಡೆದು ಅವರ ಮನೆಗೆ ಬಂದು ಅವರ ಶಿಷ್ಯನಾಗಿ ಬದಲಾಗುವ ಪರಿ ಸೋಜಿಗವೆನಿಸುತ್ತದೆ. ಬಹುಷಃ ಜಗತ್ತಿನಲ್ಲಿ ನಡೆಯುವ ಬಹುತೇಕ ಧಾರ್ಮಿಕ ಕಾರಣಗಳ ಹತ್ಯೆಗಳನ್ನು ಈ ದೃಷ್ಟಿಯಲ್ಲಿ ಅವಲೋಕಿಸಬಹುದು. ಕೊಲ್ಲಲು ಹೊರಟವನು ತಾನು ಕೊಲ್ಲಬೇಕಾಗಿರುವ ವ್ಯಕ್ತಿಯೊಡನೆ ಒಮ್ಮೆ ‘ಸಂವಾದ’ ನಡೆಸಲು ಸಾಧ್ಯವಾದರೆ ಆ ಕೊಲೆ ಒಂದು ‘ಸಂಬಂಧ’ವಾಗಿ ಮಾರ್ಪಾಡಾಗುವ ಸಾಧ್ಯತೆಯನ್ನು ಈ ನಾಟಕ ನಮ್ಮ ಮುಂದೆ ಕಾಣಿಸುತ್ತದೆ. ಬಹುತೇಕ ಧಾರ್ಮಿಕ ಮೂಲಭೂತವಾದಿಗಳು ತಮ್ಮ ದೇವರು ಮತ್ತು ಧರ್ಮಗಳ ಬಗ್ಗೆ ಅತ್ಯುತ್ಸಾಹಿಗಳಾಗಿ ನೈಜತೆಯನ್ನು ಮರೆತಿರುತ್ತಾರೆ ಎಂಬಂಶವನ್ನು ಪ್ರೊಫೆಸರ್ ಹೇಳುವ, ‘ನಿನ್ನ ಸಂಘಟನೆಯ ಮಲ್ಲಪ್ಪನ ರಾಮನಿಗೂ, ವಾಲ್ಮೀಕಿಯ ರಾಮನಿಗೂ ಇರುವ ವ್ಯತ್ಯಾಸವನ್ನು ತಿಳಿ’ ಎಂಬ ಮಾತಿನಿಂದ ಅರ್ಥ ಮಾಡಿಕೊಳ್ಳಬಹುದು. ಪ್ರೊಫೆಸರ್ ಅವರನ್ನು ಕೊಲ್ಲಲು ಬಂದವನ ಪ್ರೇಮ ಪ್ರಕರಣವು ನಾಟಕದಲ್ಲಿ ಬಹು ಮುಖ್ಯ ಅಂಶವಾಗಿದೆ. ಅವನ ಪ್ರೇಯಸಿಯನ್ನು ‘ದಲಿತ’ಳೆಂಬ ಕಾರಣಕ್ಕೆ ಕೊಂದಾಗ ಆತನಿಗೆ ತಾನು ಯಾವ ಧರ್ಮಕ್ಕಾಗಿ ಕೊಲೆ ಮಾಡಲು ಸಿದ್ಧನಾಗಿದ್ದನೋ ಅದೇ ಧರ್ಮದ ಜಾತಿ ವ್ಯವಸ್ಥೆಯ ಕ್ರೂರತೆ ಅರ್ಥವಾಗುತ್ತದೆ.

ಗೆಲಿಲಿಯೋನಿಂದ ಹಿಡಿದು ಅನೇಕರು ತಮ್ಮ ವೈಚಾರಿಕ ಅಭಿಪ್ರಾಯಗಳ ಕಾರಣಕ್ಕೆ ಜೀವ ತೆತ್ತಿದ್ದಾರೆ. ತತ್ವಜ್ಞಾನಿಗಳು, ವಿದ್ವಾಂಸರು, ಸಂಶೋಧಕರು ತಮ್ಮ ಕಾಲದಲ್ಲಿ ಆದರಿಸಲ್ಪಡುವುದು ಅಪರೂಪ. ಅವರ ತದನಂತರವೇ ಸಮಾಜಕ್ಕೆ ಅವರ ಮೌಲ್ಯ ಅರ್ಥವಾಗುವುದು ಎಂಬ ಮಾತೊಂದಿದೆ. ಹಾಗೆ ಕಲ್ಬುರ್ಗಿಯಂಥವರ ಹತ್ಯೆಗಳು, ನಾವು ಹೆಚ್ಚು ಮನುಷ್ಯರಾಗಬೇಕು ಎಂದು ಹೇಳಿದವರನ್ನು ಒಂದು ಸಮಾಜವಾಗಿ ನಾವು ಕೊಂದಿದ್ದೇವೆ ಎಂಬುದನ್ನು ಸಾರಿ ಹೇಳುತ್ತವೆ. ಇಂಟರ್ ನೆಟ್ ಯುಗದಲ್ಲಿ ‘Books of the dead’ಗಳ ಕಾರಣಕ್ಕೆ ದ್ವೇಷ ಮತ್ತು ಅಸಹನೆ ಇನ್ನೂ ಹೆಚ್ಚುತ್ತಿದೆ. ಇಂಥ ವಿಷಮ ಸಂದರ್ಭದಲ್ಲಿ ನಾವು ಮನುಷ್ಯತ್ವವನ್ನು ಮರೆಯಬಾರದು ಎಂಬುದನ್ನು ನೆನಪಿಸುವ ನಾಟಕವನ್ನು ಪ್ರದರ್ಶನಕ್ಕೆ ಅಣಿ ಮಾಡಿಕೊಂಡ ಸಮುದಾಯ ತಂಡದವರು ನಿಜಕ್ಕೂ ಅಭಿನಂದನಾರ್ಹರು. ಮನುಷ್ಯರು ಮನುಷ್ಯರಾಗಲು ಅಥವಾ ಮನುಷ್ಯರಾಗಿಯೇ ಉಳಿಯಲು ಪ್ರೇರೇಪಿಸುವ ನಾಟಕ ‘ಭಗವಂತನ ಮರಣ’
( ಇದೇ 26 ನೇ ತಾರೀಖಿಗೆ ರಂಗಶಂಕರದಲ್ಲಿ ಮತ್ತೆ ಈ ನಾಟಕದ ಶೋ ಇದೆ)

ಶಿವಕುಮಾರ ಮಾವಲಿ
ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನವರಾಗಿದ್ದು ಬೆಂಗಳೂರಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡದ ಉದಯೋನ್ಮುಖ ಕತೆಗಾರ ಮತ್ತು ನಾಟಕಕಾರರಲ್ಲಿ ಒಬ್ಬರು.
ಇದನ್ನೂ ಓದಿ- ರಂಗ ವಿಮರ್ಶೆ | ಸ್ತ್ರೀ ಕೇಂದ್ರಿತ ಸಂವೇದನೆಯ ಶರ್ಮಿಷ್ಠೆ


