ಮಹಿಳೆಯರ ಪ್ರಪಂಚ ವಿಶಾಲವಾಗಬೇಕು  | ಬಿ ಎಂ ರೋಹಿಣಿ

Most read

ಮಂಗಳೂರು: ಎರಡು ಸ್ಲೋಗನ್‌ಗಳನ್ನು ಮಹಿಳೆಯರು ಎಂದಿಗೂ ಹೇಳಬಾರದು. ಒಂದು, ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾ: ಎಂಬುದು. ಹೆಣ್ಣನ್ನು ದೇವತೆ ಎಂದು ಪೂಜಿಸುವವರು ಹಥರಾಸ್‌ ನಲ್ಲಿ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಸಾಯಿಸುತ್ತಾರೆ. ಹತ್ತಿರದ ಕಡಬದಲ್ಲಿ ಶಾಲಾ ಬಾಲಕಿಯ ಮೇಲೆ ಆಸಿಡ್‌ ಹಾಕಿದ್ದಾರೆ. ಎಲ್ಲಿ ನೋಡಿದರೂ ಹೆಣ್ಣಿನ ಮೇಲೆ ಹಿಂಸೆಯೇ ನಡೆಯುತ್ತಿದ್ದು ಮತ್ತೆ ದೇವತೆಯ ಸ್ಥಾನ ಎಲ್ಲಿದೆ? ಎರಡನೆಯದು ಹೆಣ್ಣಿಗೆ ಹೆಣ್ಣೇ ಶತ್ರು. ಇದನ್ನು ಗಂಡಸರು ಹೇಳಿದರೆ ಬೇರೆ ಬೇರೆ ಕಾರಣಗಳಿಗಾಗಿ ಅದನ್ನು  ಸ್ವೀಕರಿಸಬಹುದು. ಆದರೆ ಮಹಿಳೆಯರೇ ಇದನ್ನು ಹೇಳುತ್ತಿರುವುದು ನಮ್ಮ ಕಾಲದ ದುರಂತ. ಇಂದಿನಿಂದ ಈ ಎರಡೂ ಸ್ಲೋಗನ್‌ ಗಳನ್ನು ಎಲ್ಲಿಯೂ ಎಂದೂ ಹೇಳಬೇಡಿ  ಎಂದು ಖ್ಯಾತ ಹಿರಿಯ ಲೇಖಕಿ ಬಿ ಎಂ ರೋಹಿಣಿಯವರು ಮಹಿಳೆಯರಿಗೆ  ಕಿವಿ ಮಾತು ಹೇಳಿದರು.

ಬಿ.ಎಂ.ರೋಹಿಣಿ

ನಗರದ ಮಹಿಳಾ ಸಭಾದಲ್ಲಿ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ಮತ್ತು ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತಾಡುತ್ತಿದ್ದರು.

ಯುಕ್ರೇನ್‌ ಮತ್ತು ಪ್ಯಾಲೆಸ್ತೀನ್‌ ಯುದ್ಧ ನಡೆಯುತ್ತಿದೆ. ಅಲ್ಲಿಯ ಮಹಿಳೆಯರು ಮಕ್ಕಳು ಅನುಭವಿಸುತ್ತಿರುವ ನೋವು ಸಂಕಟಗಳು ನಮ್ಮದು ಕೂಡಾ ಎಂಬ  ಭಾವ ನಮ್ಮದಾಗಬೇಕು. ಮಹಿಳೆಯರ ಪ್ರಪಂಚ ವಿಸ್ತಾರವಾಗಬೇಕು. ಒಂದು ವೇಳೆ ಅಲ್ಲಿ ಮಹಿಳೆಯೊಬ್ಬರು ಪ್ರಧಾನಿಯಾಗಿದ್ದರೆ ಈ ರೀತಿಯ ಹಿಂಸೆ ನಡೆಯುವುದು ಸಾಧ್ಯವಿತ್ತೇ ಎಂದು ಅವರು ಪ್ರಶ್ನಿಸಿದರು. ನಮ್ಮ ಮಹಿಳೆಯರು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಸುರಕ್ಷಿತ ವಲಯದಲ್ಲಿದ್ದಾರೆ. ಅದರಿಂದ ಹೊರಬಂದು ಪ್ರಪಂಚದ ಕಷ್ಟ ಸುಖಗಳು ನಮ್ಮದೂ ಎಂಬಂತೆ ಅವುಗಳನ್ನು ತಿಳಿದು ಕೊಂಡು ಪ್ರತಿಕ್ರಿಯಿಸಬೇಕು. ಹಾಗೆಯೇ ನಮ್ಮದನ್ನೂ ಜಗತ್ತಿಗೆ ತಿಳಿಯ ಪಡಿಸಬೇಕು. ಪರಸ್ಪರ ಸಹಾನುಭೂತಿ ಹೊಂದುವುದು ನಮ್ಮ ಆದ್ಯತೆಯಾಗಬೇಕು ಎಂದೂ ಅವರು ಹೇಳಿದರು.

ಮಂಗಳೂರಿನಲ್ಲಿ ನೆಲೆ ನಿಂತು ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಕೆಲಸ  ಮಾಡುವ  ಎನ್‌ ಜಿ ಒ ಗಳನ್ನು ಒಂದೇ ವೇದಿಕೆಗೆ ಕರೆತಂದು ಅವರ ಕೆಲಸ ಕಾರ್ಯಗಳನ್ನು ಅರಿಯುವ, ಕೈಜೋಡಿಸಿ ಕೆಲಸ ಮಾಡುವ ಉದ್ದೇಶದಿಂದ ಎನ್‌ ಜಿ ಒ ಗಳನ್ನು ಆಹ್ವಾನಿಸಲಾಗಿತ್ತು. ಮಕ್ಕಳ ಹಕ್ಕುಗಳಿಗಾಗಿ ಕೆಲಸ ಮಾಡುವ ಪಡಿ ಸಂಸ್ಥೆಯ ಸುಪ್ರೀತಾ, ಕಾನೂನು ಉಪಕ್ರಮಗಳ ಮೂಲಕ ಮಹಿಳಾ ಸಬಲೀಕರಣಕ್ಕಾಗಿ ದುಡಿಯುವ ಡೀಡ್ಸ್‌ ನ ಜೆಸಿಂತಾ, ಸಮಗ್ರ ಅಮಲು ಚಿಕಿತ್ಸಾ ಕೇಂದ್ರದ ಲೀಡಿಯಾ ಲೋಬೋ, ಅಲ್ಪ ಸಂಖ್ಯಾತ ಹೆಣ್ಣುಮಕ್ಕಳ ಹಕ್ಕುಗಳಿಗಾಗಿ ದುಡಿಯುವ ಫಾರ್ವರ್ಡ್‌ ಸಂಸ್ಥೆಯ-ಕನೀಝಾ ಫಾತಿಮಾ, ಪ್ರೀತಿ ಮತ್ತು ಶಾಂತಿಯ ಸಂದೇಶವನ್ನು ಸಾರುವ ʼಕಾರ್ವಾನ್‌ ಎ ಮೊಹಬ್ಬತ್‌ʼನ ಶಬ್ಬೀರ್‌, ಯುವಜನತೆಯೊಂದಿಗೆ ಕೆಲಸ ಮಾಡುವ ಸಂವಾದ ಯುವ ಸಂಪನ್ಮೂಲ ಕೇಂದ್ರದ  ಪವಿತ್ರ,  ಕರಾವಳಿ ಲೇಖಕಿ ವಾಚಕಿಯರ ಸಂಘದ ದೇವಿಕಾ ನಾಗೇಶ್‌, ಮಹಿಳಾ ತರಬೇತುದಾರರ ʼಸಂಚಲನಾʼದ ಆಶಾಲತಾ ಸುವರ್ಣ ವೇದಿಕೆಯನ್ನು ಹಂಚಿಕೊಂಡರು.

ತರಿಕಿಟ ಕಲಾತಂಡದವರು ಹಾಡಿದರು. ವಾಣಿ ಪೆರಿಯೋಡಿ ಕಾರ್ಯಕ್ರಮ ನಿರ್ವಹಿಸಿದರು. ಮಂಜುಳಾ ವಂದಿಸಿದರು

ಕಾರ್ಯಕ್ರಮದ ಬಳಿಕ, ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ವಿರೋಧಿಸಿ (ಹಿಂದಿನ) ಜ್ಯೋತಿ ವೃತ್ತದಲ್ಲಿ ʼಕಪ್ಪು ಉಡುಪಿನಲ್ಲಿ ಮಹಿಳೆಯರುʼ ಪ್ರತಿಭಟನೆ ನಡೆಯಿತು.  ದೌರ್ಜನ್ಯಗಳ ಪ್ಲಕಾರ್ಡ್ ಗಳನ್ನು ಹಿಡಿದು ಸಮಾನ ಮನಸ್ಕ ಪುರುಷರೂ ಮಹಿಳೆಯರೂ ಮೌನವಾಗಿ ನಿಂತು ದೌರ್ಜನ್ಯಗಳ ವಿರುದ್ಧ ತಮ್ಮ ಸಿಟ್ಟು ಆಕ್ರೋಶಗಳನ್ನು ವ್ಯಕ್ತಪಡಿಸಿದರು.

More articles

Latest article