ಲೈಂಗಿಕ ಹಗರಣದ ಆರೋಪ ಬಂದಾಗ ದೇಶದ ಗೃಹ ಸಚಿವರಾಗಿ ತನಿಖೆ ಆಗಲಿ ಎಂದು ಹೇಳುವುದು ಬಿಟ್ಟು ಫೇಕ್ ವಿಡಿಯೋವನ್ನು ಸಮಯ ನೋಡಿ ಬಿಡುಗಡೆ ಮಾಡಲಾಗಿದೆ ಎಂದು ಕಾಂಗ್ರೆಸ್ ಸರಕಾರದ ಮೇಲೆ ಆರೋಪಿಸುವ ಮೂಲಕ ಈ ಗೃಹ ಸಚಿವರು “ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಪೆನ್ ಡ್ರೈವ್ ನಕಲಿ ಎಂದು ಹೇಳಿ ತನಿಖೆಗೆ ಮೊದಲೇ ಕ್ಲೀನ್ ಚಿಟ್ ಕೊಟ್ಟಿರುವುದು ಅಕ್ಷಮ್ಯ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು
“ನಾವು ಮಹಿಳೆಯರ ಮೇಲಿನ ಅವಮಾನವನ್ನು ಸಹಿಸುವುದಿಲ್ಲ. ಬಿಜೆಪಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಪ್ರಜ್ವಲ್ ರೇವಣ್ಣ ಫೇಕ್ ವಿಡಿಯೋ ಕರ್ನಾಟಕ ಸರ್ಕಾರಕ್ಕೆ ಗೊತ್ತಿದೆ. ಸಮಯ ನೋಡಿ ಬಿಡುಗಡೆ ಮಾಡಲಾಗಿದೆ. ಇಲ್ಲಿವರೆಗೂ ಯಾಕೆ ವಿಚಾರಣೆ ಶುರುಮಾಡಿಲ್ಲ” ಎಂದು ದೇಶದ ಗೃಹ ಸಚಿವ ಅಮಿತ್ ಶಾ ರವರು ಮೇ 1 ರಂದು ನಡೆದ ಸುದ್ದಿಗೋಷ್ಟಿಯಲ್ಲಿ ಹೇಳಿದರು.
“ದೇಶದ ಮಾತೆಯರ ಮಾತೃಶಕ್ತಿಯ ಅಪಮಾನವಾಗಬಾರದು ಎಂಬುದು ಮೋದಿಯವರ ಬದ್ಧತೆಯಾಗಿದೆ” ಎಂದೂ ಹೇಳಿದ ಈ ಗೃಹ ಸಚಿವರು ಬಿಜೆಪಿಯ ಬ್ರಿಜ್ ಭೂಷಣ್ ಎನ್ನುವ ಕಾಮಾಂಧ ಸಂಸದ ಮಹಿಳಾ ಕುಸ್ತಿ ಪಟುಗಳ ಮೇಲೆ ಮಾಡಿದ ಲೈಂಗಿಕ ದೌರ್ಜನ್ಯವನ್ನು ಹೇಗೆ ಸಹಿಸಿ ಬೆಂಬಲಿಸಿದರು? ಆ ಸಂತ್ರಸ್ತರು ಮಹಿಳೆಯರಲ್ಲವೇ?. ಮಣಿಪುರದಲ್ಲಿ ಬಿಜೆಪಿ ಸರಕಾರವೇ ಇರುವಾಗ ಹಾಡು ಹಗಲೇ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಬೆತ್ತಲೆ ಮೆರವಣಿಗೆ ಮಾಡಲಾಯ್ತಲ್ಲಾ ಅದು ನಾರಿಶಕ್ತಿಗೆ ಆದ ಅವಮಾನ ಅಲ್ಲವಾ? ಅದರ ಬಗ್ಗೆ ಮೋದಿ ಶಾ ಇದುವರೆಗೂ ಒಂದೇ ಒಂದು ಮಾತೂ ಆಡಿಲ್ಲವಲ್ಲಾ.. ಇವರಿಗೆ ಮನುಷತ್ವ ಇಲ್ವಾ?. ಮೋದಿ ತವರು ಗುಜರಾತಿನ ಬಿಲ್ಕಿಸ್ ಭಾನು ಮೇಲೆ ಅತ್ಯಾಚಾರ ಮಾಡಿ ಅವಳ ಕುಟುಂಬದ ಸದಸ್ಯರನ್ನು ಸುಟ್ಟುಹಾಕಿದವರನ್ನು ಗುಜರಾತ್ ಸರಕಾರ ಅವಧಿಪೂರ್ವ ಬಿಡುಗಡೆ ಮಾಡಿತಲ್ಲಾ, ಬಿಜೆಪಿ ಶಾಸಕ ಸಂಸದರು ಆ ಕೊಲೆಪಾತಕರಿಗೆ ಸನ್ಮಾನ ಮಾಡಿದರಲ್ಲಾ ಇದೆಲ್ಲಾ ಸಂತ್ರಸ್ತ ಮಹಿಳೆಗೆ ಮಾಡಿದ ಅವಮಾನ ಅಲ್ವಾ?
ಈ ಬಿಜೆಪಿ ನಾಯಕರು ಹೇಳುವುದೇ ಒಂದು ಮಾಡುವುದೇ ಒಂದು. ಪ್ರಜ್ವಲ್ ಲೈಂಗಿಕ ದೌರ್ಜನ್ಯ ಪ್ರಕರಣದ ಕುರಿತು ಮಾಹಿತಿ ಇದ್ದರೂ ಜೆಡಿಎಸ್ ಜೊತೆ ಕೂಡಿಕೆ ಮಾಡಿಕೊಂಡಿದ್ದೇಕೆ? ಪ್ರಜ್ವಲ್ ನಂತಹ ಹೆಣ್ಣುಬಾಕನಿಗೆ ಎನ್ ಡಿ ಎ ಪರವಾಗಿ ಸ್ಪರ್ಧಿಸಲು ಅವಕಾಶ ಕೊಟ್ಟಿದ್ದೇಕೆ? ‘ಪ್ರಜ್ವಲ್ ಗೆ ಮತ ಹಾಕಿದರೆ ನನಗೆ ಮತ ಹಾಕಿದಂತೆ’ ಎಂದು ಮೋದಿಯವರು ಮೈಸೂರಿನ ಪ್ರಚಾರ ಸಭೆಯಲ್ಲಿ ಹೇಳಿದ್ದೇಕೆ? ಇಷ್ಟೆಲ್ಲಾ ಆದಮೇಲೂ ಇದೊಂದು ಫೇಕ್ ವಿಡಿಯೋ ಎಂದು ಹೇಳಲು ಅಮಿತ್ ಶಾ ಗೆ ಸ್ವಲ್ಪವೂ ನಾಚಿಕೆ ಸಂಕೋಚ ಆಗುವುದೇ ಇಲ್ವಾ?
ಲೈಂಗಿಕ ಹಗರಣದ ಆರೋಪ ಬಂದಾಗ ದೇಶದ ಗೃಹ ಸಚಿವರಾಗಿ ತನಿಖೆ ಆಗಲಿ ಎಂದು ಹೇಳುವುದು ಬಿಟ್ಟು ಫೇಕ್ ವಿಡಿಯೋವನ್ನು ಸಮಯನೋಡಿ ಬಿಡುಗಡೆ ಮಾಡಲಾಗಿದೆ ಎಂದು ಕಾಂಗ್ರೆಸ್ ಸರಕಾರದ ಮೇಲೆ ಆರೋಪಿಸುವ ಮೂಲಕ ಈ ಗೃಹ ಸಚಿವರು “ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಪೆನ್ ಡ್ರೈವ್ ನಕಲಿ ಎಂದು ಹೇಳಿ ತನಿಖೆಗೆ ಮೊದಲೇ ಕ್ಲೀನ್ ಚಿಟ್ ಕೊಟ್ಟಿರುವುದು ಅಕ್ಷಮ್ಯ. ಇಂತಹ ವ್ಯಕ್ತಿ ಗೃಹ ಸಚಿವ ಆಗಿರುವುದೇ ಈ ದೇಶದ ದೌರ್ಭಾಗ್ಯ.
” ನಾಲ್ಕೈದು ವರ್ಷಗಳ ಹಿಂದಿನ ವಿಡಿಯೋ ಈಗ ತಂದಿದ್ದಾರೆ” ಎನ್ನುವ ಮೂಲಕ ಪ್ರಜ್ವಲ್ ತಂದೆ ರೇವಣ್ಣನವರೇ ವಿಡಿಯೋ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಚಿಕ್ಕಪ್ಪ ಕುಮಾರಸ್ವಾಮಿಯವರೇ “ಉಪ್ಪು ತಿಂದವರು ನೀರು ಕುಡಿಯಲೇ ಬೇಕು, ತಪ್ಪು ಮಾಡಿದರೆ ಶಿಕ್ಷೆ ಆಗಲೇಬೇಕು” ಎಂದು ಹೇಳಿದ್ದಾರೆ. ಸ್ವತಃ ದೇವೇಗೌಡರೇ ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ನನ್ನು ಅಮಾನತ್ತು ಮಾಡಿದ್ದಾರೆ. ಸತ್ಯ ಏನು ಎಂಬುದು ಇವರಿಗೆಲ್ಲಾ ಗೊತ್ತಿದೆ. ಆದರೆ ಏನೂ ಗೊತ್ತಿಲ್ಲದ ಚಾಣಕ್ಯ ನಾಮಾಂಕಿತ ಈ ಅಮಿತ್ ಶಾ ಎನ್ನುವ ಗೃಹ ಸಚಿವ ತನಿಖೆಗೆ ಮೊದಲೇ ‘ಫೇಕ್ ವಿಡಿಯೋ’ ಎಂದು ಹೇಳಿದ್ದು ಅವರ ದುರಹಂಕಾರ ಮತ್ತು ಸುಳ್ಳುತನವನ್ನು ಸಾಬೀತು ಪಡಿಸುತ್ತದೆ.
ನೂರಾರು ಹೆಣ್ಣು ಮಕ್ಕಳು ಈ ಕಾಮಾಂಧನ ಲೈಂಗಿಕ ತೃಷೆಗೆ ಬಲಿಯಾಗಿದ್ದಾರೆ. ಪೆನ್ ಡ್ರೈವ್‌ನಲ್ಲಿರುವ ವಿಡಿಯೋದಲ್ಲಿ ತಮ್ಮ ನಗ್ನತೆ ಎಲ್ಲಿ ಬಯಲಾಗಿ ಮಾನ, ಮರ್ಯಾದೆ, ಬದುಕು ಬೀದಿಪಾಲಾಗುತ್ತೋ ಎನ್ನುವ ಆತಂಕದಲ್ಲಿ ಸಂತ್ರಸ್ತ ಮಹಿಳೆಯರಿದ್ದಾರೆ. ಇಬ್ಬರು ಮಹಿಳೆಯರು ತಮ್ಮ ಮೇಲೆ ತಂದೆ ಮಗ ಮಾಡಿದ ಲೈಂಗಿಕ ದೌರ್ಜನ್ಯವನ್ನು ಸುದ್ದಿ ವಾಹಿನಿಗೆ ಬಂದು ವಿವರಿಸಿದ್ದಾರೆ ಹಾಗೂ ಲಿಖಿತ ದೂರನ್ನೂ ಕೊಟ್ಟಿದ್ದಾರೆ. ಹತ್ತಕ್ಕೂ ಹೆಚ್ಚು ಸಂತ್ರಸ್ತೆಯರು ತನಿಖಾ ದಳದ ಮುಂದೆ ಹೇಳಿಕೆ ದಾಖಲಿಸಿದ್ದಾರೆ. ಆರೋಪಿ ದೇಶ ಬಿಟ್ಟು ಪಲಾಯನ ಮಾಡಿದ್ದಾನೆ. ನಾಡಿನಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ದೇಶಾದ್ಯಂತ ಈ ಲೈಂಗಿಕ ಹಗರಣ ಸುದ್ದಿಯಾಗಿದೆ. ಇಷ್ಟೆಲ್ಲಾ ಆದರೂ ಪ್ರಧಾನಿಗಳು ಈ ವಿಷಯದ ಬಗ್ಗೆ ಮೌನಿಯಾಗಿದ್ದಾರೆ. ಗೃಹಸಚಿವರು ಮಾತ್ರ ಫೇಕ್ ವಿಡಿಯೋ ಎಂದು ಸುದ್ದಿ ಗೋಷ್ಠಿಯಲ್ಲಿ ಹೇಳಿಕೆ ಕೊಟ್ಟಿದ್ದಾರೆ.
ರಾಜ್ಯ ಸರಕಾರ ಸಂತ್ರಸ್ತೆಯರು ದೂರು ಕೊಟ್ಟ ತಕ್ಷಣ ವಿಚಾರಣೆಗೆ ವಿಶೇಷ ತನಿಖಾ ದಳ (SIT) ರಚಿಸಿದ್ದಾರೆ. ಹೆಚ್.ಡಿ.ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಮೇಲೆ ಎಫ ಐ ಆರ್ ದಾಖಲಿಸಿದ್ದಾರೆ. ಇಬ್ಬರೂ ಆರೋಪಿಗಳಿಗೆ ವಿಚಾರಣೆಗೆ ಹಾಜರಾಗಲು ನೋಟೀಸ್ ಕೊಟ್ಟಿದ್ದಾರೆ. ವಿಚಾರಣೆಯನ್ನು ತೀವ್ರ ಗೊಳಿಸಲಾಗಿದೆ. ಆದರೂ ಕೇಂದ್ರ ಸರಕಾರದ ಗೃಹ ಸಚಿವರಾಗಿ ಕರ್ನಾಟಕದ ಸರಕಾರ ಇಲ್ಲಿಯವರೆಗೂ ವಿಚಾರಣೆಯನ್ನೇ ಶುರುಮಾಡಿಲ್ಲವೆಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಒಂದು ಕಡೆ ಕಠಿಣಾತಿಕಠಿಣ ಕ್ರಮ ತೆಗೆದುಕೊಳ್ಳಬೇಕು ಎನ್ನುವ ಅಮಿತ್ ಶಾ ರವರು ಅದೇ ಸಮಯಕ್ಕೆ ಫೇಕ್ ವಿಡಿಯೋ ಎಂದೂ ಹೇಳುತ್ತಾರೆ. ಅವರ ಪ್ರಕಾರ ಫೇಕ್ ವಿಡಿಯೋ ಆಗಿದ್ದರೆ ಕಠಿಣ ಕ್ರಮ ಯಾಕೆ ತೆಗೆದುಕೊಳ್ಳಬೇಕು?. ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದರೆ ವಿಡಿಯೋಗಳು ಅಸಲಿ ಆಗಿರಬೇಕಲ್ಲವೇ? ಹೀಗೆ ಗೊಂದಲದ ಹೇಳಿಕೆಯನ್ನು ಕೊಟ್ಟು ವಿಷಯವನ್ನು ತಿರುಚುವುದು ಈ ಬಿಜೆಪಿ ನಾಯಕರ ಗುಣವಿಶೇಷವಾಗಿದೆ.
ಇದು ಈ ದೇಶದ ದುರಂತ. ಇಂತಹ ಅವಿವೇಕಿಗಳಿಗೆ ಅಧಿಕಾರ ಕೊಟ್ಟ ಜನತೆ ಪಶ್ಚಾತ್ತಾಪ ಪಡಬೇಕಿದೆ. ಈ ಸಲದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಮತ ಹಾಕಿ ಅವರನ್ನು ಮನೆಗೆ ಕಳುಹಿಸಬೇಕಿದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- http://ವಿಶ್ವೇಶ್ವರ ಹೆಗಡೆ ಕಾಗೇರಿಗೆ ಹತ್ತು ಪ್ರಶ್ನೆಗಳು By ಕನ್ನಡ ಪ್ಲಾನೆಟ್ ವಾರ್ತೆ May 2, 2024 https://kannadaplanet.com/ten-questions-to-vishweshwar-hegade-kageri/