ಯುವಜನರಲ್ಲಿ ಮಾನಸಿಕ ಆರೋಗ್ಯವು ದಿನಗಳೆದಂತೆ ಸಂಕೀರ್ಣವಾಗುತ್ತಿರುವ ಈ ಕಾಲಮಾನದಲ್ಲಿ ಒತ್ತಡ, ಟೈಂಪಾಸ್, ಮೋಜು ಎಂಬಿತ್ಯಾದಿ ಯಾವ ಸಮರ್ಥನೆಗಳೂ ಮದ್ಯಪಾನದ ಅಪಾಯಕಾರಿ ವ್ಯಸನಕ್ಕೆ ಮತ್ತು ಇದರಿಂದಾಗುತ್ತಿರುವ ಅಸಂಖ್ಯ ಅವಾಂತರಗಳಿಗೆ ನ್ಯಾಯ ದೊರಕಿಸಿಕೊಡಲಾರವು- ಪ್ರಸಾದ್ ನಾಯ್ಕ್, ದೆಹಲಿ.
ಹುಡುಗರ ಬಹುತೇಕ ಗೆಳೆಯರ ಗುಂಪಿನಲ್ಲಿ ಅವನೊಬ್ಬನಿರುತ್ತಾನೆ.
ಕೀಟಲೆಯ ಹೆಸರಿನಲ್ಲಿ ಕೆರಳಿಸುವುದಷ್ಟೇ ಅವನ ಕೆಲಸ. ಮಾತಿನಲ್ಲಿ ಆಗಸದ ಭ್ರಮೆಯನ್ನು ತೋರಿಸುತ್ತಾ ಅಟ್ಟ ಹತ್ತಿಸುವುದಕ್ಕಷ್ಟೇ ಅವನು ಮೀಸಲು. ನೀವೊಮ್ಮೆ ಗಮನಿಸಿ ನೋಡಿ. ನಂತರ ಆಗುವ ಅವಾಂತರಗಳಲ್ಲಿ ಎಲ್ಲೂ ಆತನ ಪತ್ತೆಯಿರುವುದಿಲ್ಲ. ಅಷ್ಟರಲ್ಲಿ ಕಾಡ್ಗಿಚ್ಚು ಅದೆಷ್ಟರ ಮಟ್ಟಿಗೆ ಹಬ್ಬಿರುತ್ತದೆಂದರೆ ಮೊದಲಿಗೆ ನಿಜವಾಗಿ ಕಿಡಿ ಹೊತ್ತಿಸಿದವನ ನೆನಪೂ ಯಾರಲ್ಲೂ ಉಳಿದಿರುವುದಿಲ್ಲ.
ಇತ್ತೀಚೆಗೆ ಕೋಲಾರದಲ್ಲಿ ಇಪ್ಪತ್ತರ ಪ್ರಾಯದ ಯುವಕನೊಬ್ಬ ಬೆಟ್ಟಿಂಗ್ ಆಸೆಗೆ ಬಿದ್ದು, ಒಂದಿಷ್ಟು ನೀರೂ ಬೆರೆಸದೆ, ಐದು ಬಾಟಲಿ ವಿಸ್ಕಿ ಕುಡಿದು ದುರ್ಮರಣವನ್ನಪ್ಪಿದ್ದಾನೆ. ನೀರು ಬೆರೆಸುವ ಗೋಜಿಗೆ ಹೋಗದೆ, ಶಪಥವಿಟ್ಟವರಂತೆ ಪಟ್ಟು ಹಿಡಿದು, ಐದು ಬಾಟಲ್ ವಿಸ್ಕಿಯನ್ನು ಒಂದೇ ಏಟಿಗೆ ಗಂಟಲಿಗಿಳಿಸುವುದು ದುಸ್ಸಾಹಸವಷ್ಟೇ ಅಲ್ಲ. ಅಪಾಯಕಾರಿಯೂ ಹೌದು. ಎಂಥಾ ಪರಮಕುಡುಕರಿಗಾದರೂ ಇದು ಕಲ್ಪನೆಗೆ ನಿಲುಕದಂಥದ್ದು. ಇಂಥದೊಂದು ಮೂರ್ಖತನದ, ಅರ್ಥವಿಲ್ಲದ ಹುಡುಗಾಟದ ಹಿಂದೆ ಜುಜುಬಿ ಹತ್ತು ಸಾವಿರ ರೂಪಾಯಿಗಳ ಬೆಟ್ಟಿಂಗ್ ಆಮಿಷವಷ್ಟೇ ಇರುವುದು ಅಸಾಧ್ಯ. “ನಿನ್ ಕೆಪಾಸಿಟಿ ಏನ್ ಗುರೂ. ಇದೆಲ್ಲ ಲೆಕ್ಕಾನಾ ನಿಂಗೆ”, ಎಂದು ಅಟ್ಟ ಹತ್ತಿಸುವ ಕೆಲ ಗೆಳೆಯರ ಕುಮ್ಮಕ್ಕೂ ಇರುತ್ತದೆ. ಈ ಘಟನೆಯ ವರದಿಯನ್ನು ಓದುತ್ತಿದ್ದಾಗ ನನಗೆ ನೆನಪಾಗಿದ್ದು ಇಂಥದ್ದೇ ವ್ಯಕ್ತಿಗಳು. ಗೆಳೆಯರೆಂಬ ಹೆಸರಿನಲ್ಲಿ ಸದಾ ನಮ್ಮ ಸುತ್ತಮತ್ತ ಅಡ್ಡಾಡುವ, ಹುಡುಗಾಟವಾಡುತ್ತಲೇ ದಾರಿತಪ್ಪಿಸುವ ಧೂರ್ತರು.
ಹಾಗೆ ನೋಡಿದರೆ ಮದ್ಯಪಾನವೆಂಬುದು ನಮ್ಮ ಸಮಾಜದಲ್ಲಿ ಈ ಮಟ್ಟಿಗೆ ಮುಖ್ಯವಾಹಿನಿಯಲ್ಲಿ ಬೆರೆತುಹೋದ ವೇಗವೇ ನನಗೊಂದು ಸೋಜಿಗ. ಸುಮಾರು ಇಪ್ಪತ್ತು-ಇಪ್ಪತ್ತೈದು ವರ್ಷಗಳ ಹಿಂದೆ ನಮ್ಮ ಸಮಾಜದಲ್ಲಿ ಮದ್ಯಪಾನವನ್ನು ಮಹಾಶಾಪದಂತೆ ಪರಿಗಣಿಸಲಾಗುತ್ತಿತ್ತು. ಮನೆಯಲ್ಲಿ ಯಾರಾದರೂ ಮದ್ಯಪಾನ ಮಾಡುವವರಿದ್ದರೆ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವು ಮನೆಯ ಸದಸ್ಯರಲ್ಲೇ ಇರುತ್ತಿರಲಿಲ್ಲ. ಮನೆಯ ಹಿರಿಯರೊಬ್ಬರು ಕುಡಿತದ ಚಟಕ್ಕೆ ಬಿದ್ದು ಎಲ್ಲವನ್ನು ಕಳೆದುಕೊಂಡು ಬೀದಿಪಾಲಾದ ಪರಿಣಾಮವಾಗಿ, ಸಾರಾಯಿಯ ಹೆಸರು ಕೇಳಿದರೆ ಸಿಟ್ಟಿನಿಂದ ಕಿಡಿಕಿಡಿಯಾಗುತ್ತಿದ್ದ ವ್ಯಕ್ತಿಗಳು ಗಲ್ಲಿಗಿಬ್ಬರು ಸಿಗುತ್ತಿದ್ದರು. ಇನ್ನು ಕುಡುಕನೆನಿಸಿಕೊಂಡ ಹುಡುಗನಿಗೆ ವಿವಾಹಕ್ಕಾಗಿ ಹೆಣ್ಣು ಸಿಗುವುದೂ ಆಗ ಕಷ್ಟವಿತ್ತು. ಅಪರೂಪಕ್ಕೊಮ್ಮೆ ಕುಡಿಯಲು ಹೋಗುತ್ತಿದ್ದವರು ಕೂಡ ಅವರಿವರ ಕಣ್ಣು ತಪ್ಪಿಸಿಕೊಂಡು ಗುಟ್ಟಾಗಿ ಬಾರುಗಳಿಗೆ ಹೋಗುತ್ತಿದ್ದಿದ್ದನ್ನೂ ನಾನು ಚಿಕ್ಕವನಾಗಿದ್ದಾಗ ಸ್ವತಃ ಕಂಡವನು.
ಹೀಗಿದ್ದ ಪರಿಸ್ಥಿತಿಯು ಕೇವಲ ಎರಡೂವರೆ ದಶಕಗಳಲ್ಲಿ ಈ ಮಟ್ಟಿಗೆ ಉಲ್ಟಾ ಹೊಡೆದಿರುವುದು ಕಡೆಗಣಿಸುವ ಸಂಗತಿಯೇ ಅಲ್ಲ. ಮಹಾನಗರಗಳಲ್ಲಿ ಇಂದು ಕುಡಿತವೆಂಬುದು ದುಶ್ಚಟಗಳ ಪಟ್ಟಿಯಲ್ಲಿ ಉಳಿದಿಲ್ಲ. ಬದಲಾಗಿ ಅದೊಂದು “ಸೋಶಿಯಲ್ ನಾರ್ಮ್” ಆಗಿಬಿಟ್ಟಿದೆ. ಸರಳ ಭಾಷೆಯಲ್ಲಿ ಹೇಳುವುದಾದರೆ ಆಧುನಿಕ ಜಗತ್ತಿನ ಸಾಮಾಜಿಕ ರೂಢಿ. ಪ್ರತಿಷ್ಠಿತ ಸಂಸ್ಥೆಗಳು ಆಗಾಗ ಆಯೋಜಿಸುವ ಅದ್ದೂರಿ ಪಾರ್ಟಿಗಳಲ್ಲಿ ಇಂದು ಮದ್ಯವು ಖಾಯಂ ಸ್ಥಾನವನ್ನು ಗಳಿಸಿದೆ. ಮದುವೆಯಂತಹ ಖಾಸಗಿ ಕೌಟುಂಬಿಕ ಸಮಾರಂಭಗಳಲ್ಲೂ ಇದಕ್ಕೀಗ ಎಂಟ್ರಿ ಸಿಕ್ಕಿದೆ. ಸೋಷಿಯಲ್ ಡ್ರಿಂಕಿಂಗ್ ಎಂಬ ಹೆಸರಿನಲ್ಲಿ ಎಲ್ಲರೊಳಗೊಂದಾಗುವ ಪ್ರಕ್ರಿಯೆಯಲ್ಲಿ ಇಂದು ಮದ್ಯಕ್ಕೆ ಪ್ರಮುಖ ಸ್ಥಾನ. “ಬಡವರು ಕುಡಿದರೆ ಸಾರಾಯಿ, ಸಿರಿವಂತರು ಸವಿಯುವುದು ಡ್ರಿಂಕ್”, ಎಂಬಂತಿನ ಪೊಳ್ಳು ಪ್ರತಿಷ್ಠೆ. ಒಟ್ಟಿನಲ್ಲಿ ಚಂದದ ಪದಗಳದ್ದೇ ಚಮತ್ಕಾರ!
ಮಹಾನಗರಗಳಲ್ಲಿ, ಅದರಲ್ಲೂ ಯುವಕ-ಯುವತಿಯರಲ್ಲಿ ಹೆಚ್ಚುತ್ತಿರುವ ಮದ್ಯವ್ಯಸನದ ಬಗ್ಗೆ ಖ್ಯಾತ ವೈದ್ಯರೊಬ್ಬರಲ್ಲಿ ಮಾತಾಡುತ್ತಿದ್ದಾಗ ಅವರೊಮ್ಮೆ ಹೀಗೆ ಹೇಳಿದ್ದರು: “ಮದ್ಯದ ಸುತ್ತಲಿರುವ ಒಂದು ಬಗೆಯ ವಿಚಿತ್ರ ಗ್ಲಾಮರ್ ಯುವಜನತೆಯನ್ನು ಸದಾ ಆಕರ್ಷಿಸುತ್ತಲೇ ಬಂದಿದೆ. ಶಾಲಾಕಾಲೇಜಿನ ವಿದ್ಯಾರ್ಥಿಗಳು ಇದನ್ನೊಂದು ಕೂಲ್ ಫ್ಯಾಕ್ಟರ್ ಎಂಬಂತೆ ಪರಿಗಣಿಸುತ್ತಿದ್ದಾರೆ. ತಾವು ದೊಡ್ಡವರಾಗಿದ್ದೇವೆ ಎಂಬ ಕಾಲ್ಪನಿಕ ಐಡೆಂಟಿಟಿಯೊಂದನ್ನು ಆವಾಹಿಸಿಕೊಳ್ಳುತ್ತಿರುವ ಜೊತೆಗೆ, ಸದ್ದಿಲ್ಲದೆ ಈ ಜಾಲಕ್ಕೆ ನಿಧಾನವಾಗಿ ಬಲಿಯಾಗುತ್ತಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ವಿಪರೀತವೆಂಬಷ್ಟು ಹೆಚ್ಚಿರುವ ಮದ್ಯದ ಲಭ್ಯತೆ, ಅದರೊಂದಿಗೆ ಬರುವಂತೆ ಭಾಸವಾಗುವ ಸಾಮಾಜಿಕ ಸ್ಥಾನಮಾನದ ತೋರಿಕೆಯ ಭ್ರಮೆ, ಇದೊಂದು ಊಟ-ತಿಂಡಿಗಳಷ್ಟೇ ಸಹಜ ಪ್ರಕ್ರಿಯೆ ಎಂಬಂತಹ ಅರ್ಥವಿಲ್ಲದ ತರ್ಕ-ಸಮರ್ಥನೆಗಳು ಇವುಗಳ ಅಸ್ತಿತ್ವವನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಮತ್ತಷ್ಟು ಗಟ್ಟಿಗೊಳಿಸಿವೆ”, ಎಂದು.
ಕೆಲ ವರ್ಷಗಳ ಹಿಂದೆ ನಮ್ಮ ಜೊತೆಗಿದ್ದ ಮಧ್ಯವಯಸ್ಕ ಸಹೋದ್ಯೋಗಿಯೊಬ್ಬನಿಗೆ ಇಂಥದ್ದೇ ಉಡಾಫೆಯಿತ್ತು. “ಇವತ್ತು ಖುಷಿಯ ದಿನವೋ? ನಡೀರಿ, ಕುಡಿಯೋಣ. ಬೇಜಾರೋ? ಅದಕ್ಕೂ ಸರಿ, ಕುಡಿಯೋಣ. ಮಾಡುವುದಕ್ಕೆ ಬೇರೇನಿಲ್ಲವೋ? ಒಂದೊಂದು ಪೆಗ್ ಹಾಕೋಣ ಬನ್ನಿ”, ಎನ್ನುತ್ತಿದ್ದ ಆತ. ಒಂದು ಮಟ್ಟದ ನಂತರ ಇದು ಎಲ್ಲಿಯವರೆಗೆ ತಲುಪಿತೆಂದರೆ ಆತ ಕುಡಿದೇ ಆಫೀಸಿಗೆ ಹಾಜರಾಗುತ್ತಿದ್ದ. ತೆಳುವಾದ ರಟ್ಟಿನ ಫೈಲು ಹಿಡಿದಾಗಲೂ ಆತನ ಕೈಗಳು ಸಣ್ಣಗೆ ಕಂಪಿಸುತ್ತಿದ್ದವು. ಇನ್ನು ನಿಸ್ತೇಜ ಕಣ್ಣುಗಳು, ಸಣ್ಣಗೆ ಓಲಾಡುತ್ತಿದ್ದ ದೇಹ, ಬೆಳ್ಳಂಬೆಳಗ್ಗೆ ದುರ್ವಾಸನೆ ಹೊಮ್ಮಿಸುತ್ತಿದ್ದ ಬಾಯಿಯು ಪದಗಳ ಹಂಗಿಲ್ಲದೆಯೇ ಎಲ್ಲವನ್ನು ಹೇಳುತ್ತಿದ್ದವು.
ನಂತರದ ಹಂತದಲ್ಲಿ ಆತ ನಿತ್ಯವೂ ಕೂರುತ್ತಿದ್ದ ಪುಟ್ಟ ಮೂಲೆಯ ಸಂದಿಗಳಲ್ಲಿ ಅಡಗಿಸಿಟ್ಟ ಬಾಟಲ್ಲುಗಳು ನಮಗೆ ಸಿಗುತ್ತಿದ್ದವು. ಕ್ರಮೇಣ ಕುಡಿತವು ಹೆಚ್ಚಾದ ಪರಿಣಾಮವಾಗಿ ಕರ್ತವ್ಯಕ್ಕೆ ನಿಯಮಿತವಾಗಿ ಬರುವುದು ನಿಂತುಹೋಯಿತು. ಬೆನ್ನುಬೆನ್ನಿಗೆ ನೋಟೀಸುಗಳು ಜಾರಿಯಾಗಿ ಉದ್ಯೋಗವನ್ನು ಉಳಿಸಿಕೊಳ್ಳುವುದೇ ಒಂದು ಸಾಹಸವಾಗಿ ಬಿಟ್ಟಿತು. ನಾನು ಒಂದೆರೆಡು ವಿಭಾಗಗಳಲ್ಲಿ ಸೇವೆ ಸಲ್ಲಿಸಿ ಮಾತೃಇಲಾಖೆಗೆ ಮರಳುವಷ್ಟರಲ್ಲಿ ಆತ ಅಲ್ಲಿರಲಿಲ್ಲ. ಆತ ತೀರಿಹೋಗಿಯೇ ಒಂದು ವರ್ಷವಾಯ್ತಲ್ಲ ಎಂದು ಆಪ್ತರೊಬ್ಬರು ನಿರ್ಭಾವುಕರಾಗಿ ಹೇಳಿದ್ದರು. ದುಃಖದ ಸಂಗತಿಯೆಂದರೆ ಮಹಾಕುಡುಕ ಎಂಬ ಹಣೆಪಟ್ಟಿಯೊಂದನ್ನು ಬಿಟ್ಟು ಬೇರ್ಯಾವ ಆಪ್ತ ನೆನಪುಗಳನ್ನೂ ಆತ ತನ್ನ ಸಹೋದ್ಯೋಗಿಗಳಲ್ಲಿ ಬಿಟ್ಟುಹೋಗಿರಲಿಲ್ಲ.
ಇಂದು ನಾನಿರುವ ಗುರುಗ್ರಾಮ ಸೇರಿದಂತೆ ಹರಿಯಾಣದ ಕೆಲ ನಗರಗಳಲ್ಲಿ ಅಡ್ಡಾಡಿದರೆ ಯಾವ ಆಭರಣದಂಗಡಿಯನ್ನೂ ನಾಚಿಸುವಂತಿರುವ, ಐಷಾರಾಮಿ ವಾಹನಗಳ ಶೋರೂಮ್ ಗಳಿಗೂ ಸೆಡ್ಡುಹೊಡೆಯುವಂತಿನ ವೈಭವವುಳ್ಳ ವೈನ್ ಶಾಪ್ ಗಳು ರಸ್ತೆಯ ಬದಿಗಳಲ್ಲೇ ಕಾಣಸಿಗುತ್ತವೆ. ವೈಭವದ ಒಳಾಂಗಣ, ಝಗಮಗಿಸುವ ಬೆಳಕಿನ ಸಂಯೋಜನೆ, ವಿಶಾಲ ಪಾರ್ಕಿಂಗ್ ವ್ಯವಸ್ಥೆಗಳನ್ನು ಹೊಂದಿರುವ ಈ ಸಾರಾಯಿ ಅಂಗಡಿಗಳು ಕುಡಿತಕ್ಕೆ ಸಂಬಂಧವೇ ಇಲ್ಲದಿರುವ ಮಂದಿಗೂ ಹೊರಗಿನಿಂದ ಕಣ್ಣುಕುಕ್ಕುತ್ತವೆ. ನಗರಕ್ಕೆ ಹೊಸಬರಾದರೆ ಇದ್ಯಾವ ಜಾಗವಪ್ಪ ಎಂದು ಕಣ್ಣರಳಿಸಿ ತನ್ನತ್ತ ನೋಡುವಂತೆ ಮಾಡುತ್ತವೆ. ಇಲ್ಲಿ ಲಿಂಗಭೇದವಿಲ್ಲದೆ, ಟ್ರಾಲಿಗಳನ್ನು ತಳ್ಳಿಕೊಂಡು ವಾರದ ಸಂತೆಯಲ್ಲಿ ತರಕಾರಿಗಳನ್ನು ಕೊಳ್ಳುವಷ್ಟೇ ಸಹಜವಾಗಿ ಗ್ರಾಹಕರು ಮದ್ಯದ ಬಾಟಲಿಗಳನ್ನು ಪರೀಕ್ಷಿಸಿ ತಮ್ಮ ಕಾರ್ಟುಗಳಿಗೆ ಇಳಿಸುತ್ತಾರೆ. ಹಿಂದೆಲ್ಲ ಅಲ್ಲೆಲ್ಲೋ ದೂರದಿಂದ ಕಾಣುತ್ತಿದ್ದ ಕತ್ತಲಕೋಣೆಯ ಬಾರುಗಳು ಈಗ ಬೇರೆಯದೇ ಜನ್ಮದ ನೆನಪೇನೋ ಎಂಬಂತೆ ಅಚ್ಚರಿಯಾಗುತ್ತದೆ.
ಬೆಚ್ಚಿಬೀಳಿಸುವ ಸಂಗತಿಯೆಂದರೆ ಸೂರ್ಯಾಸ್ತವಾದ ನಂತರ ಭಾರತದ ಕೆಲ ಮಹಾನಗರಗಳಲ್ಲಿ ಸುಮ್ಮನೆ ತಮ್ಮ ಪಾಡಿಗೆ ನಡೆದುಕೊಂಡು ಹೋಗುವುದು ಕೂಡ ಇಂದು ಸವಾಲಿನ ಮಾತಾಗಿಬಿಟ್ಟಿದೆ. ಇದರ ಸಂಪೂರ್ಣ ಶ್ರೇಯ ಕಂಠಪೂರ್ತಿ ಕುಡಿದು, ಮೈಮೇಲೆ ದೆವ್ವ ಬಂದಂತೆ ಎರ್ರಾಬೆರ್ರಿ ವಾಹನ ಚಲಾಯಿಸುವ ಪುಂಡರಿಗೆ ಸಲ್ಲಬೇಕು. ಈ ವರ್ಗದ ಮಂದಿಯಲ್ಲಿ ಯುವಜನರದ್ದೇ ಸಿಂಹಪಾಲು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಅಂದುಕೊಂಡಿದ್ದೇನೆ. ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿಯವರ ಚಲನಚಿತ್ರಗಳಲ್ಲಿ ಕಾಣಸಿಗುವ ಹಾರಾಡುವ ಕಾರುಗಳಂತೆ, ತಡರಾತ್ರಿಯ ಬೀದಿ-ಹೆದ್ದಾರಿಗಳಲ್ಲಿ ವಿನಾಕಾರಣ ಭಯಾನಕ ಸ್ಟಂಟುಗಳನ್ನು ಮಾಡುವ ಐಷಾರಾಮಿ ವಾಹನಗಳನ್ನು ನೋಡುತ್ತಾ ಜೀವ ಬಾಯಿಗೆ ಬಂದಂತೆ ಹಲವು ಬಾರಿ ಕಂಗಾಲಾದವರಲ್ಲಿ ನಾನೂ ಒಬ್ಬ.
ಹಾಗೆ ನೋಡಿದರೆ ಕುಡುಕರ ಬಗ್ಗೆ ಇರುವಷ್ಟು ಸ್ವಾರಸ್ಯಕರ ಜೋಕ್ ಗಳನ್ನು ನಾನು ಬೇರ್ಯಾವ ವಿಷಯದ ಬಗ್ಗೆಯೂ ಕೇಳಿದಂತಿಲ್ಲ. ಆದರೆ ಕುಡಿತವು ಒಂದು ವ್ಯಸನವಾಗಿ ಒಂದಿಡೀ ಪೀಳಿಗೆಯನ್ನು ಕಾಡುವ ಗಂಭೀರ ಸಂಗತಿಯೆದುರು ಯಾವ ಚಿಲ್ಲರೆ ನಗೆಚಟಾಕಿಗಳೂ ನಿಲ್ಲುವುದಿಲ್ಲ. ಸುಮಾರು ಏಳೆಂಟು ವರ್ಷಗಳ ಹಿಂದೆ ನಟ ಅಮೀರ್ ಖಾನ್ ನಿರೂಪಿಸುತ್ತಿದ್ದ ಸತ್ಯಮೇವ ಜಯತೇ ಎಂಬ ಟಿವಿ ಶೋ ಒಂದರಲ್ಲಿ ಕುಡಿತದ ಚಟದಿಂದ ಕಂಗಾಲಾಗಿ, ಒಂದರ್ಥದಲ್ಲಿ ಸರ್ವನಾಶವೇ ಆಗಿಹೋಗಿದ್ದ ಪ್ರತಿಭಾವಂತ ಪತ್ರಕರ್ತರೊಬ್ಬರು ಅತಿಥಿಯಾಗಿ ಆಗಮಿಸಿದ್ದರು. ಬುದ್ಧಿವಂತ ವಿದ್ಯಾರ್ಥಿಯಾಗಿದ್ದ ಇವರು ಒಳ್ಳೆಯ ಉದ್ಯೋಗವನ್ನು ಗಿಟ್ಟಿಸಿಕೊಂಡ ಹೊರತಾಗಿಯೂ, ಬರೋಬ್ಬರಿ ಒಂಭತ್ತು ತಿಂಗಳುಗಳ ಕಾಲ ತಲೆಯ ಮೇಲೆ ಸೂರಿಲ್ಲದೆ, ದಿಲ್ಲಿಯ ರಸ್ತೆಗಳಲ್ಲಿ ಭಿಕ್ಷುಕನಂತೆ ಮಲಗಿದ್ದರಂತೆ. ಕುಡಿಯಲು ದುಡ್ಡು ಸಾಕಾಗದಿದ್ದಾಗ ತನ್ನದೇ ಒಂದು ಕಿಡ್ನಿ ಮಾರಿದರೆ ಹೇಗೆ ಎಂದು ಕೂಡ ಸಿಕ್ಕಾಪಟ್ಟೆ ತಲೆ ಓಡಿಸಿದ್ದರಂತೆ. ತನ್ನ ಹೆತ್ತವರನ್ನೂ ಸೇರಿದಂತೆ ಬದುಕಿನ ಆ ಹಂತದಲ್ಲಿ ಕಳೆದುಕೊಂಡ ಎಲ್ಲಾ ಸಂಬಂಧಗಳು ನನ್ನನ್ನು ನಿತ್ಯವೂ ತೀವ್ರವಾಗಿ ಮಾನಸಿಕ ನೆಲೆಯಲ್ಲಿ ಹಿಂಸೆಗೊಳಪಡಿಸುತ್ತವೆ ಎನ್ನುತ್ತಾರವರು. “ನನಗಿಂದು ಮದ್ಯದಿಂದ ಮುಕ್ತಿ ಸಿಕ್ಕಿರಬಹುದು; ಆದರೆ ಈ ಪಶ್ಚಾತ್ತಾಪದ ಬೇಗೆಯಿಂದ ಯಾವತ್ತಿಗೂ ಮುಕ್ತಿ ಸಿಗಲಾರದು”, ಎಂಬುದು ಅವರ ಮನದಾಳದ ಅಳಲಾಗಿತ್ತು.
ಮುಂಚೆ ಹಳ್ಳಿಗಳ ಕೆಲ ಮೂಲೆಗಳಲ್ಲಷ್ಟೇ ತನ್ನ ಪಾಡಿಗೆ ತಣ್ಣಗಿದ್ದ ಸಾರಾಯಿ ಅಂಗಡಿಗಳಿಗೆ ಆಧುನಿಕತೆಯ ಉಡುಪು ತೊಡಿಸಿ, ಅದನ್ನು ಜೀವನಶೈಲಿಯ ಭಾಗವೆನಿಸಿದ ಹಿತಾಸಕ್ತಿಗಳಿಗೆ ಏನೆನ್ನಬೇಕೋ ಗೊತ್ತಿಲ್ಲ. ತಣ್ಣಗಿನ ಬಿಯರನ್ನು ಎತ್ತರದ ಬೀಕರುಗಳಲ್ಲಿ ಕೂರಿಸಿ ಅದನ್ನು ನಳ್ಳಿಯಲ್ಲಿ ನೊರೆಯುಕ್ಕುತ್ತಾ ಬರುವಂತೆ ಮಾಡಿದ, ಊಟ ಮಾಡಲೆಂದು ರೆಸ್ಟೋರೆಂಟುಗಳಿಗೆ ಬಂದರೆ ತರಹೇವಾರಿ ಡ್ರಿಂಕ್ ಗಳು ಆಳೆತ್ತರದ ಡ್ರಮ್ಮುಗಳಲ್ಲಿ ತಯಾರಾಗುವುದು ನೋಡುವುದೇ ಒಂದು ಅದ್ಭುತವೆಂಬಂತೆ ಬಿಂಬಿಸಿದ, ಹೊಸ ವರ್ಷವನ್ನು ಸ್ವಾಗತಿಸಲು ಆಧುನಿಕರೆಂದು ಹೇಳಿಕೊಳ್ಳುವ ಮಂದಿಗೆ ಅಮಲು ಕಡ್ಡಾಯವೆಂಬಂತೆ ನಂಬಿಸಿದ, ಪ್ರಭುತ್ವದ ಬೊಕ್ಕಸಕ್ಕಾಗುವ ನಷ್ಟವನ್ನು ತಡೆಹಿಡಿಯುವ ಭರದಲ್ಲಿ ಒಂದಿಡೀ ಪೀಳಿಗೆಯ ಭವಿಷ್ಯವನ್ನು ಜೋಪಾನ ಮಾಡಲು ಮೀನಮೇಷ ಎಣಿಸುವ ವ್ಯವಸ್ಥೆಯ ಎದುರು ಅಗ್ಗದ ಡೊಪಮೀನ್ ಕಿಕ್ ಮಾತ್ರವೇ ಪದೇಪದೇ ಗೆಲ್ಲುತ್ತಿರುವುದು ಈ ಕಾಲದ ವಿಪರ್ಯಾಸ.
ಯುವಜನರಲ್ಲಿ ಮಾನಸಿಕ ಆರೋಗ್ಯವು ದಿನಗಳೆದಂತೆ ಸಂಕೀರ್ಣವಾಗುತ್ತಿರುವ ಈ ಕಾಲಮಾನದಲ್ಲಿ ಒತ್ತಡ, ಟೈಂಪಾಸ್, ಮೋಜು ಎಂಬಿತ್ಯಾದಿ ಯಾವ ಸಮರ್ಥನೆಗಳೂ ಮದ್ಯಪಾನದ ಅಪಾಯಕಾರಿ ವ್ಯಸನಕ್ಕೆ ಮತ್ತು ಇದರಿಂದಾಗುತ್ತಿರುವ ಅಸಂಖ್ಯ ಅವಾಂತರಗಳಿಗೆ ನ್ಯಾಯ ದೊರಕಿಸಿಕೊಡಲಾರವು.
ಪ್ರಸಾದ್ ನಾಯ್ಕ್, ದೆಹಲಿ
ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು”, “ಮರ ಏರಲಾರದ ಗುಮ್ಮ”, “ಜಿಪ್ಸಿ ಜೀತು” ಮತ್ತು “ಮುಸ್ಸಂಜೆ ಮಾತು” ಇವರ ಪ್ರಕಟಿತ ಕೃತಿಗಳು. ಇವರ ಚೊಚ್ಚಲ ಕೃತಿಯಾದ “ಹಾಯ್ ಅಂಗೋಲಾ!” 2018ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವಕ್ಕೆ ಪಾತ್ರವಾಗಿದೆ. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.
ಇದನ್ನೂ ಓದಿ – http://“ನಿಯಾನ್ ಲೈಟುಗಳ ಕೆಳಗಿನ ಕತ್ತಲು” https://kannadaplanet.com/the-darkness-beneath-the-neon-lights/