ರೇಣುಕಾಸ್ವಾಮಿ ಹತ್ಯೆಗೆ ಕಾರಣ ಪುರುಷಹಂಕಾರ ದರ್ಶನ

Most read

ರಾಮಾಯಣ ಮಹಾಭಾರತದ ಯುದ್ಧಗಳು ಆಗಿದ್ದು ಗಂಡಾಳ್ವಿಕೆಯ ಮೇಲಾಟಕ್ಕೆ, ಪೌರುಷದ ಪ್ರದರ್ಶನಕ್ಕೆ. ಆದರೆ ಕದನಕ್ಕೆ ಕಾರಣವೆಂದು ಆರೋಪ ಹೊತ್ತಿದ್ದು ಮಾತ್ರ ಸೀತೆ, ಕೈಕೇಯಿ, ಮಂಥರೆ, ದ್ರೌಪದಿಯಂತಹ ಮಹಿಳೆಯರು. ಪುರುಷ ಪ್ರಧಾನ ವ್ಯವಸ್ಥೆ ಬದಲಾಗಿ ಲಿಂಗತಾರತಮ್ಯವಿಲ್ಲದ ಸಮಾಜ ನಿರ್ಮಾಣ ಆಗುವವರೆಗೂ ಇಂತಹ ಘಟನೆಗಳು ಕಾಲಾತೀತವಾಗಿ ನಡೆಯುತ್ತಲೇ ಇರುತ್ತವೆ. ಪುರುಷಹಂಕಾರ ಎನ್ನುವುದು ಯಾವ ಯಾವುದೋ ರೂಪ ಕುರೂಪಗಳಲ್ಲಿ ವ್ಯಕ್ತವಾಗುತ್ತಲೇ ಇರುತ್ತದೆ- ಶಶಿಕಾಂತ ಯಡಹಳ್ಳಿ, ಪತ್ರಕರ್ತರು.

“ರಾಮಾಯಣದಲ್ಲಿ ರಾಮರಾವಣರ ಕದನಕ್ಕೆ ಮೂಲ ಕಾರಣ ಯಾರು? ಸೀತೆ. ಮಾಯಾ ಜಿಂಕೆಯ ಮೋಹಕ್ಕೆ ಯಾಕೆ ಒಳಗಾಗಬೇಕಿತ್ತು? ಹಾಕಲಾದ ಲಕ್ಷ್ಮಣ ಗೆರೆಯನ್ನು ಯಾಕೆ ದಾಟಬೇಕಿತ್ತು? ಹಾಗೆಯೇ ಮಹಾಭಾರತದ ಯುದ್ಧಕ್ಕೆ ಮೂಲ ಕಾರಣರು ಯಾರು? ದ್ರೌಪತಿ. ದುರ್ಯೋಧನನ್ನು ನೋಡಿ ಆಕೆ ಯಾಕೆ ನಕ್ಕು ಅವಮಾನಿಸಬೇಕಾಗಿತ್ತು?”ಇದು ಪುರುಷ ಪ್ರಧಾನ ವ್ಯವಸ್ಥೆ ಎಲ್ಲದಕ್ಕೂ ಮಹಿಳೆಯೇ ಕಾರಣ ಎನ್ನುವ ಸಂಕಥನಗಳನ್ನು ಸೃಷ್ಟಿಸುವ ಬಗೆ. ಯಶಸ್ವೀ ಪುರುಷರ ಹಿಂದೆ ಮಹಿಳೆ ಇರುತ್ತಾಳೆ ಎನ್ನುವುದು ಬರೀ ಮಾತಿಗಷ್ಟೇ. ಎಲ್ಲಾ ಅನಾಹುತಗಳ ದುರಂತಗಳ ಹಿಂದೆ ಮಹಿಳೆ ಇರುತ್ತಾಳೆ ಎಂದು ಆರೋಪಿಸುವುದು ಪಿತೃಪ್ರಧಾನ ವ್ಯವಸ್ಥೆ ಸೃಷ್ಟಿಸಿದ ವಾಸ್ತವ.

ಈಗ ದರ್ಶನ್ ಎನ್ನುವ ಜನಪ್ರಿಯ ನಟನೊಬ್ಬ ಕೊಲೆ ಕೇಸಿನಲ್ಲಿ ಸಿಕ್ಕಾಕಿಕೊಂಡು ಜೈಲು ಸೇರಿದ ಪ್ರಕರಣವನ್ನೇ ಗಮನಿಸೋಣ. “ತುಂಬಾ ಕಷ್ಟ ಪಟ್ಟು ದರ್ಶನ್ ಮೇಲೆ ಬಂದಿದ್ದು ಒಂದು ಹೆಣ್ಣಿನ ಸಹವಾಸದಿಂದ ಕೆಳಗೆ ಬೀಳುವಂತಾಯಿತು” ಎಂದು ಈ ನಟನ ಅಭಿಮಾನಿ ಪಡೆ ಸುದ್ದಿ ಹಬ್ಬಿಸುತ್ತಿದೆ. ಹೌದಲ್ಲಾ ಎಂದೂ ಹಲವರು ಯೋಚಿಸುವಂತಾಗಿದೆ. ರೇಣುಕಾಸ್ವಾಮಿ ಕೊಲೆಯಾಗಲು ಪ್ರಚೋದನೆ ಕೊಟ್ಟಿದ್ದು ದರ್ಶನ್ ಪ್ರೇಯಸಿ ಪವಿತ್ರಾಗೌಡ ಎನ್ನುವವರ ತರ್ಕದ ಹಿಂದೆ ಪುರುಷ ಪ್ರಧಾನ ಪಾಳೆಗಾರಿಕೆ ಮನಸ್ಥಿತಿಯೇ ಇರುವಂತಿದೆ. ದರ್ಶನ್ ಪ್ರಕರಣವನ್ನು ನಿರಂತರವಾಗಿ ಬಿತ್ತರಿಸುತ್ತಿರುವ ಸುದ್ದಿ ಮಾಧ್ಯಮಗಳೂ ಸಹ ದರ್ಶನ್ ಹಾಗೂ ಆತನ ಗ್ಯಾಂಗ್ ಮಾಡಿದ ಪಾತಕಕ್ಕೆ ಮೂಲ ಕಾರಣ ಪವಿತ್ರಾಗೌಡ ಎಂದೇ ಬಿಂಬಿಸುತ್ತಿವೆ. ಪವಿತ್ರಾರವರ ಇತಿಹಾಸವನ್ನು ಜಾಲಾಡುತ್ತಿವೆ.

ಪವಿತ್ರಾಗೌಡರನ್ನು ಸಮರ್ಥಿಸಿಕೊಳ್ಳುವುದು ಈ ಲೇಖನದ ಉದ್ದೇಶವಲ್ಲ. ಆದರೆ ಗಂಡಾಳ್ವಿಕೆಯ ಮನಸ್ಥಿತಿ ಅದು ಹೇಗೆ ಮಹಿಳೆಯರ ಮೇಲೆ ಆರೋಪಗಳನ್ನು ಮಾಡುತ್ತಾ ಗಂಡಸರಿಂದಾಗುವ ದುರಂತಗಳ ಹೊಣೆಯನ್ನು ಹೆಣ್ಣಿನ ಮೇಲೆ ಹೊರೆಸಲು ಪ್ರಯತ್ನಿಸಲಾಗುತ್ತದೆ ಎಂಬುದರ ಕುರಿತು ಚರ್ಚಿಸಬೇಕಾಗಿದೆ. ಈಗ ವಿಷಯಕ್ಕೆ ಬರೋಣ.

ಪವಿತ್ರಾ ಗೌಡ

ಪವಿತ್ರಾಗೌಡರವರು ದರ್ಶನ್ ಎನ್ನುವ ನಟನ ಗೆಳತಿ, ಪ್ರೇಯಸಿ, ಎರಡನೇ ಹೆಂಡತಿ ಇದ್ದರೆ ಇರಲಿ. ಆ ಸಂಬಂಧದ ಬಗ್ಗೆ ಪ್ರಶ್ನಿಸಬೇಕಾದದ್ದು ದರ್ಶನ್ ರವರ ಪತ್ನಿ ವಿಜಯಲಕ್ಷ್ಮಿಯೇ ಹೊರತು ಬೇರೆ ಯಾರಿಗೂ ಕಾನೂನಾತ್ಮಕ ಅಧಿಕಾರವಿಲ್ಲ. “ ಈ ಪವಿತ್ರಾ ಯಾಕೆ ದರ್ಶನ್ ಹಿಂದೆ ಬಿದ್ದಿದ್ದಾಳೆ? ಮದುವೆಯಾಗಿ ಮಗಳನ್ನೂ ಹೊಂದಿರುವ ಆಕೆ ನೆಟ್ಟಗೆ ಸಂಸಾರ ಮಾಡಲಾಗದೇ ಯಾಕೆ ಗಂಡನಿಂದ ದೂರವಾಗಿದ್ದಾಳೆ? ದರ್ಶನ್ ರವರನ್ನು ಬುಟ್ಟಿಗೆ ಹಾಕಿಕೊಂಡು ಅವರ ಸಂಸಾರದಲ್ಲಿ ಯಾಕೆ ಬಿರುಗಾಳಿ ಎಬ್ಬಿಸಬೇಕಿತ್ತು, ಇದೆಲ್ಲಾ ತಪ್ಪಲ್ಲವೇ?” ಎಂದೆಲ್ಲಾ ಪ್ರಶ್ನಿಸುವ ಮೂಲಕ ತಮ್ಮ ‌(ಅ)ನೈತಿಕ ಪೊಲೀಸ್‌ಗಿರಿ ಕೆಲಸವನ್ನು ಅನೇಕರು ಮಾಡುತ್ತಿದ್ದಾರೆ. “ಹೋಗಲಿ ಯಾರೋ ಒಬ್ಬ ತಲೆಕೆಟ್ಟವ ಅಶ್ಲೀಲ ಸಂದೇಶ ಕಳುಹಿಸಿದ್ದರೆ, ಮರ್ಮಾಂಗದ ಫೋಟೋ ಕಳಿಸಿದ್ದರೆ,  ಆತನನ್ನು ಮೊಬೈಲಲ್ಲಿ ಬ್ಲಾಕ್ ಮಾಡಬೇಕಾಗಿತ್ತು. ಅದನ್ನು ಬಿಟ್ಟು ದರ್ಶನ್ ರವರನ್ನು ಕೆರಳಿಸಿ ಕೊಲೆಯಂತಹ ದುರಂತಕ್ಕೆ ಯಾಕೆ ಪ್ರೇರೇಪಿಸಬೇಕಾಗಿತ್ತು? ಈ ಪವಿತ್ರಾ ದರ್ಶನ್ ಬದುಕಲ್ಲಿ ಇರದೇ ಇದ್ದಿದ್ದರೆ ಇಂತಹ ಅನಾಹುತ ಆಗಲು ಹೇಗೆ ಸಾದ್ಯವಾಗುತ್ತಿತ್ತು?” ಎಂಬುದು ಬಹುತೇಕರ ಅಭಿಪ್ರಾಯವೂ ಆಗಿದೆ. ಇಂತಹ ಅನಿಸಿಕೆಗಳು ರೂಪಗೊಳ್ಳಲು ಕೂಗುಮಾರಿ ಮಾಧ್ಯಮಗಳೂ ಕಾರಣವಾಗಿವೆ.

ಅಸಲಿಗೆ ಪವಿತ್ರಾ ಮತ್ತು ದರ್ಶನ್ ಈ ಇಬ್ಬರ ಸಂಬಂಧ ಅತ್ಯಂತ ಖಾಸಗಿಯಾದದ್ದು ಹಾಗೂ ಇಬ್ಬರಿಗೂ ಒಪ್ಪಿತವಾದದ್ದು. ಒಪ್ಪಿತ ಸಂಬಂಧಕ್ಕೆ ಕಾನೂನಿನ ನಿರ್ಬಂಧವೂ ಇಲ್ಲ. ಅದನ್ನು ನೈತಿಕ ಅನೈತಿಕ ಚೌಕಟ್ಟಿನಲ್ಲಿಟ್ಟು ನೋಡುವುದು ಸಮಂಜಸವಲ್ಲ. ಹತ್ಯೆಯಂತಹ ಅನಪೇಕ್ಷಿತ ಘಟನೆ ನಡೆಯಲು ಕಾರಣ ದರ್ಶನ್ ಎನ್ನುವ ನಟನಲ್ಲಿರುವ ದುರಹಂಕಾರವೇ ಹೊರತು ಬೇರೇನಲ್ಲ. ತನ್ನ ಪ್ರೇಯಸಿಗೆ ಯಾವನೋ ಅಶ್ಲೀಲ ಸಂದೇಶ ಕಳುಹಿಸಿದ್ದನ್ನು ಸಹಿಸಲು ಸಾಧ್ಯವಾಗದೇ ಅಂತವನನ್ನು ಹುಡುಕಿ ಹಿಡಿದು ತಂದು ಹಲ್ಲೆ ಮಾಡಿ ಅಮಾನುಷವಾಗಿ ಹತ್ಯೆ ಮಾಡಿದ್ದು ಹಾಗೂ ಮಾಡಿಸಿದ್ದಕ್ಕೆ ದರ್ಶನ್ ನೊಳಗಿದ್ದ ಪುರುಷಹಂಕಾರವೇ ಕಾರಣ.

ಇಷ್ಟಕ್ಕೂ ಮಾಹಿತಿಗಳ ಪ್ರಕಾರ ಪವಿತ್ರಾ ತನಗೆ ಬಂದ ಅಶ್ಲೀಲ ಸಂದೇಶಗಳ ಬಗ್ಗೆ ದರ್ಶನ್ ಗೆ ತಿಳಿಸಿರಲಿಲ್ಲ. ಯಾಕೆಂದರೆ ಆತ ಕೋಪಿಷ್ಟ ವ್ಯಕ್ತಿ ಎಂಬುದು ಆಕೆಗೆ ಗೊತ್ತಿತ್ತು. ಮುಂದಾಗಬಹುದಾದ ಅನಾಹುತದ ಅರಿವು ಇದ್ದಿದ್ದರಿಂದಲೇ ಪವಿತ್ರಾ ಏನನ್ನೂ ಹೇಳದೇ ಸುಮ್ಮನಿದ್ದರು. ಆಕ್ಷೇಪಣೀಯ ಸಂದೇಶ ಕಳುಹಿಸಿ ತನ್ನನ್ನು ಅಪಮಾನಿಸಿದ ವ್ಯಕ್ತಿಯನ್ನು ಅಪಹರಿಸಿ ಕೊಲ್ಲಲು ಪವಿತ್ರಾ ಪ್ರೇರೇಪಿಸಿರಲಿಲ್ಲ. ‘ಇಂತಹ ವಿಕ್ಷಿಪ್ತ ವ್ಯಕ್ತಿ ಯಾರು ಎಂದು ಮಾಹಿತಿ ಪಡೆಯಿರಿ’ ಎಂದು ತನ್ನ ವಾಹನ ಚಾಲಕನಿಗೆ ಹೇಳಿದ್ದಾರೆ. ಆತ ಈ ವಿಷಯವನ್ನು ದರ್ಶನ್ ಗೆ ತಿಳಿಸಿದ್ದಾನೆ. ತದನಂತರ ಪವಿತ್ರಾಗೆ ಗೊತ್ತಿಲ್ಲದೇ ರೇಣುಕಾಸ್ವಾಮಿಯನ್ನು ಅಪಹರಿಸಿ ಕರೆತಂದ ನಂತರ ‘ಸರ್ಪ್ರೈಸ್ ಇದೆ ಬಾ’ ಎಂದು ಪವಿತ್ರಾಳನ್ನು ಶೆಡ್ ಒಂದಕ್ಕೆ ಕರೆದುಕೊಂಡು ಹೋಗಿ ತೋರಿಸಿದ್ದಾನೆ. ತನಗಾದ ಅಪಮಾನಕ್ಕೆ ಪ್ರತಿಯಾಗಿ ಆಕೆಯೂ ಚಪ್ಪಲಿಯಿಂದ ಹೊಡೆದು ಸಿಟ್ಟು ತೀರಿಸಿ ಕೊಂಡಿದ್ದಾಳೆ. ಪವಿತ್ರಾ ಸಹ ಹಲ್ಲೆ ಮಾಡಿದ್ದು ತಪ್ಪೇ ಆದರೂ ಕೊಲೆ ಮಾಡಿಲ್ಲ. ಕರೆಂಟ್ ಶಾಕ್ ಕೊಟ್ಟಿದ್ದು, ಸಣಕಲ ಸ್ವಾಮಿಯನ್ನು ಎತ್ತಿ ಗೋಡೆಗೆ ಅಪ್ಪಳಿಸಿದ್ದು, ಮರ್ಮಾಂಗಕ್ಕೆ ಒದ್ದು ಸಾಯಿಸಿದ್ದು ದರ್ಶನ್ ಮತ್ತು ಆತನ ಗ್ಯಾಂಗ್ ಹೊರತು ಪವಿತ್ರಾ ಅಲ್ಲ. ಆದರೂ ಈ ಎಲ್ಲಾ ದುರ್ಘಟನೆಗಳಿಗೆ ಮೂಲ ಕಾರಣ ಪವಿತ್ರಾಗೌಡ ಎಂದೇ ಗಂಡಾಳ್ವಿಕೆಯ ವಾರಸುದಾರರು ಆರೋಪಿಸುತ್ತಾ ಪವಿತ್ರಾಳನ್ನು ನಿಂದಿಸುತ್ತಿದ್ದಾರೆ.

ಇನ್ನೊಂದು ಕಡೆ ಹಲ್ಲೆ ಮತ್ತು ಹತ್ಯೆಗೊಳಗಾದ ರೇಣುಕಾಸ್ವಾಮಿಯನ್ನು ಅಮಾಯಕ, ಅಸಹಾಯಕ ಎಂದೆಲ್ಲಾ ಬಿಂಬಿಸುವ ಹಾಗೂ ಬೇರೆಯವರನ್ನು ನಂಬಿಸುವ ಕ್ರಿಯೆಗಳೂ ನಡೆಯುತ್ತಿವೆ. ಎಲ್ಲ ಪಕ್ಷಗಳ ನಾಯಕರುಗಳು, ಫಿಲಂ ಚೇಂಬರಿನ ಪದಾಧಿಕಾರಿಗಳು ರೇಣುಕಾಸ್ವಾಮಿ ಮನೆಗೆ ಹೋಗಿ ಸಾಂತ್ವನ ಹೇಳುತ್ತಿದ್ದಾರೆ. ದುಃಖದಲ್ಲಿರುವ ಕುಟುಂಬಕ್ಕೆ ಸಾಂತ್ವನ ಹೇಳುವುದಾಗಲೀ ಇಲ್ಲವೇ ಸಹಾಯ ಮಾಡುವುದಾಗಲೀ ತಪ್ಪಲ್ಲ, ಅದೆಲ್ಲಾ ಮಾನವೀಯತೆ. ಆದರೆ ಈ ಎಲ್ಲಾ ಅನಾಹುತಕ್ಕೆ ಮೂಲ ಕಾರಣೀಕರ್ತನೇ ಈ ರೇಣುಕಾಸ್ವಾಮಿ ಎನ್ನುವ ವಿಕ್ಷಿಪ್ತ ವ್ಯಕ್ತಿ ಹಾಗೂ ಆತನ ಮೆದುಳು ತೊಳೆದು ನೈತಿಕತೆಯ ಬೀಜಗಳನ್ನು ಬಿತ್ತಿರುವ ಸಂಘಟಿತ ಶಕ್ತಿ.

ಹೊಸದಾಗಿ ಮದುವೆಯಾಗಿದೆ, ಹೆಂಡತಿ ಆರು ತಿಂಗಳ ಗರ್ಭಿಣಿಯಾಗಿದ್ದಾಳೆ. ಮಾಡಲು ಯಾವುದೋ ಒಂದು ಕೆಲಸವಿದೆ. ತನ್ನ ಕುಟುಂಬವನ್ನು ನಿರ್ವಹಿಸಿಕೊಂಡು ಹೋಗಬೇಕಾದ ರೇಣುಕಾಸ್ವಾಮಿ ಇನ್ನೊಬ್ಬರ ಕುಟುಂಬದಲ್ಲಿ ಅನಗತ್ಯವಾಗಿ ಮೂಗುತೂರಿಸುವ ಅತಿರೇಕದ ಕೆಲಸ ಮಾಡಬಾರದಿತ್ತು. ಆತ ಹಾಗೆ ಮಾಡಲು ಎರಡು ಕಾರಣಗಳಿವೆ. ಒಂದು ದರ್ಶನ್ ಎನ್ನುವ ನಟನ ಮೇಲಿರುವ ಅಂಧಾಭಿಮಾನ ಹಾಗೂ ಎರಡನೆಯದ್ದು ತನ್ನ ಮಿದುಳಲ್ಲಿ ತುಂಬಿಕೊಂಡಿದ್ದ ʼನೈತಿಕತೆʼ ಎನ್ನುವ ದುರಭಿಮಾನ. ಹೀಗಾಗಿ ತಾನು ಆರಾಧಿಸುವ ವ್ಯಕ್ತಿಯ ಸಂಸಾರದಲ್ಲಿ ಇನ್ನೊಬ್ಬಳು ಬಂದು ತೊಂದರೆ ಕೊಡುತ್ತಿರುವುದನ್ನು ರೇಣುಕಾಸ್ವಾಮಿಗೆ ಸಹಿಸಲಾಗಲಿಲ್ಲ. ಹೇಗಾದರೂ ಮಾಡಿ ಈ ಅಪವಿತ್ರ ಸಂಬಂಧವನ್ನು ಕೊನೆಗಾಣಿಸಲು ಪವಿತ್ರಾರವರ ಮೇಲೆ ಈತ ಅನಪೇಕ್ಷಿತ ಸಂದೇಶಗಳ ದಾಳಿ ಮಾಡಲು ಮುಂದುವರೆಸಿದ್ದ. ತನ್ನದೇ ಮರ್ಮಾಂಗದ ಪೊಟೋ ಕಳುಹಿಸಿ ಕೇಳಿಗೆ ಕರೆಯುವಂತಹ ಹೀನ ಮಟ್ಟಕ್ಕೆ ಇಳಿದಿದ್ದ. ಇದರಿಂದಾಗಿ ತನ್ನ ಅಂತ್ಯವನ್ನು ತಾನೇ ಆಹ್ವಾನಿಸಿಕೊಂಡಿದ್ದ.

ರೇಣುಕಾಸ್ವಾಮಿ ಮತ್ತು ದರ್ಶನ್

ಹೋಗಲಿ ಇಂತಹ ನೀಚ ಕೆಲಸವನ್ನು ರೇಣುಕಾಸ್ವಾಮಿ ಯಾಕೆ ಮಾಡಿದ? ಆತನ ಹಿನ್ನೆಲೆಯನ್ನು ಗಮನಿಸಿದರೆ ಆತನ ಕೃತ್ಯದ ಹಿಂದಿರುವ ಪ್ರೇರಕ ಶಕ್ತಿಗಳ ಬಗ್ಗೆ ತಿಳಿಯಬಹುದಾಗಿದೆ. ರೇಣುಕಾಸ್ವಾಮಿ ಆರೆಸ್ಸೆಸ್ ಸಿದ್ಧಾಂತದತ್ತ ಆಕರ್ಷಿತನಾಗಿದ್ದ. ಭಜರಂಗದಳ ಎನ್ನುವ ಮಿಲಿಟೆಂಟ್ ಹಿಂದುತ್ವವಾದಿ ಸಂಘಟನೆಯ ಜಿಲ್ಲಾ ಪ್ರಮುಖನೂ ಆಗಿದ್ದ. ಈ ಸಂಘಪರಿವಾರದ ಸಂಘಟನೆಯಲ್ಲಿ ಸನಾತನ ನೈತಿಕ ಮೌಲ್ಯಗಳ ಕುರಿತು ಪಾಠಗಳನ್ನು ಮಾಡಲಾಗುತ್ತದೆ. ಪುರುಷ ಕೇಂದ್ರಿತ ಮನುವಾದಿ ಸಿದ್ಧಾಂತಗಳನ್ನು ತನ್ನ ಅನುಯಾಯಿಗಳ ತಲೆಯಲ್ಲಿ ತುಂಬಲಾಗುತ್ತದೆ. ಲವ್ ಜಿಹಾದ್ ವಿರುದ್ಧ ಹೋರಾಡಲು ಪ್ರೇರೇಪಿಸಲಾಗುತ್ತದೆ. ನೈತಿಕ ಚೌಕಟ್ಟಿನಲ್ಲಿ ನಿಲ್ಲದ ಸಂಬಂಧಗಳನ್ನೆಲ್ಲಾ ಅನೈತಿಕ ಎಂದು ಪರಿಗಣಿಸಲಾಗುತ್ತಿದೆ. ಇಂತಹ ಸಂಘಟನೆಯಲ್ಲಿ ಬೆಳೆದಿದ್ದ ರೇಣುಕಾಸ್ವಾಮಿಯ ತಲೆಯಲ್ಲಿ ತುಂಬಿದ್ದ ಸಂಘೀ ಪ್ರೇರಣೆಯ ನೈತಿಕ ಪ್ರಜ್ಞೆಯೇ ರೇಣುಕಾಸ್ವಾಮಿ ಮಾಡಿದ ಕುಕೃತ್ಯಕ್ಕೆ ಕಾರಣವಾಗಿದೆ.

ಹಾಗಾದರೆ ರೇಣುಕಾಸ್ವಾಮಿ ಹತ್ಯೆಗೆ ನಿಜವಾದ ಕಾರಣರು ಯಾರು? ತನಗೆ ಬಂದ ಅಶ್ಲೀಲ ಸಂದೇಶಗಳ ಕಿರುಕುಳ ಮತ್ತು ಅಪಮಾನವನ್ನು ಸಹಿಸಿಕೊಂಡ ಪವಿತ್ರಾಗೌಡವಾ? ತನ್ನ ಪ್ರೇಯಸಿಗೆ ಇಂತಹ ಸಂದೇಶಗಳನ್ನು ಕಳುಹಿಸಿದ್ದನ್ನು ಸಹಿಸಲಾಗದೇ ಹಲ್ಲೆ ಹತ್ಯೆಯನ್ನು ಮಾಡಿದ ದರ್ಶನ್ ಒಳಗಿದ್ದ ಪುರುಷಹಂಕಾರವಾ? ದರ್ಶನ್ ಎನ್ನುವ ನಟನ ಸುತ್ತ ಹುತ್ತಗಟ್ಟಿರುವ ರೌಡಿಗಳ ಪಡೆಯಾ? ಇಲ್ಲಾ ಸ್ವತಃ ಮಾಡಬಾರದ್ದನ್ನು ಮಾಡಿ ತನ್ನ ಸಾವನ್ನು ತಾನೇ ಆಹ್ವಾನಿಸಿಕೊಂಡ ರೇಣುಕಾಸ್ವಾಮಿಯಾ?

ಈ ಎಲ್ಲಾ ವಿಕೃತಿಗಳಿಗೂ ಮೂಲ ಕಾರಣ ಸಂಘೀ ಸಂಸ್ಕೃತಿ. ಭಜರಂಗದಳದಲ್ಲಿದ್ದ ರೇಣುಕಾಸ್ವಾಮಿಯ ಮೆದುಳಲ್ಲಿ ಈ ಮನುವಾದಿ ಮೌಲ್ಯಗಳನ್ನು ಬಿತ್ತದೇ ಹೋಗಿದ್ದರೆ ಆತ  ರೀತಿ ಮಹಿಳೆಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುವ ಮೂಲಕ ತನ್ನ ಅನೈತಿಕಗಿರಿ ತೋರಿಸುತ್ತಿರಲಿಲ್ಲ. ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸದೇ ಇದ್ದರೆ ದರ್ಶನ್ ಒಳಗಿನ ಪುರುಷಹಂಕಾರ ಕೆರಳುತ್ತಿರಲಿಲ್ಲ. ಈಗ ನಡೆದ ಅಪಹರಣ ಹಲ್ಲೆ ಹತ್ಯೆಗಳೇ ನಡೆಯುತ್ತಿರಲಿಲ್ಲ. ಜನಪ್ರಿಯ ನಟನೊಬ್ಬ ಹೀಗೆ ಖಳನಾಯಕನಂತೆ ಮಾಡಬಾರದ್ದನ್ನು ಮಾಡಿ ಅಪಕೀರ್ತಿ ಹೊತ್ತು ಜೈಲು ಸೇರುತ್ತಿರಲಿಲ್ಲ. ಈ ಯಾವ ಘಟನೆಯಲ್ಲೂ ನೇರವಾಗಿ ಭಾಗವಹಿಸಿ ಸಂಚಿನಲ್ಲಿ ಭಾಗಿಯಾಗದ ಪವಿತ್ರಾಗೌಡ ಎನ್ನುವ ಹೆಣ್ಣುಮಗಳು ಎ1 ಆರೋಪಿಯಾಗಿ ಬಂಧಿನಕ್ಕೊಳಗಾಗಿ ಜೈಲು ಸೇರಿ ಅಪಮಾನ ಅನುಭವಿಸುತ್ತಿರಲಿಲ್ಲ.

ಶಶಿಕಾಂತ ಯಡಹಳ್ಳಿ

ಪತ್ರಕರ್ತರು, ರಂಗಕರ್ಮಿ.

ಇದನ್ನೂ ಓದಿ- http://ಅಪರಾಧ ಅಂಕಣ “ಸೆಲೆಬ್ರಿಟಿ ಮೋಹವೆಂಬ ರಹಸ್ಯ ಲೋಕ” https://kannadaplanet.com/the-secret-world-of-celebrity-infatuation/

More articles

Latest article