ಬಡವರ ಮೂಲಭೂತ ಹಕ್ಕುಗಳನ್ನು ಕಸಿಯದೆ ಅವರಿಗೆ ಸಿಗಬೇಕಾದ ಸೌಲಭ್ಯ ಕಲ್ಪಿಸಿದರೆ ಯಾವ ಸಮಸ್ಯೆಗಳೂ ಇರೋದಿಲ್ಲ. ಸರ್ಕಾರ, ಅಧಿಕಾರಿಗಳು ಕಾಡಿನ ಅಭಿವೃದ್ಧಿ ಹೆಸರಿನಲ್ಲಿ ಅಕೇಶಿಯಾ, ನೀಲಗಿರಿ ಗಿಡ ನೆಟ್ಟು ಬಿಲ್ ಮಾಡಿಕೊಳ್ಳುವುದು ಬಿಡಬೇಕು. ಬಡವರ ಅನ್ನಕ್ಕೆ ಕನ್ನ ಹಾಕದೆ ಅವರ ಹೊಟ್ಟೆಯನ್ನು ತಣ್ಣಗಿಟ್ಟರೆ ಆಳುವವರ ಕುರ್ಚಿಗಳೂ ಶೇಕ್ ಆಗುವುದಿಲ್ಲ – ರಮೇಶ್ ಹಿರೇಜಂಬೂರ್, ಹಿರಿಯ ಪತ್ರಕರ್ತರು.
ಈ ದೇಶದಲ್ಲಿ ಅನ್ನದಾತ ದೇಶದ ಬೆನ್ನೆಲುಬು ಎಂದು ಹೇಳಲಾಗುತ್ತೆ, ಹಾಗೇ ಹೇಳುತ್ತಲೇ ಅನ್ನದಾತನ ಬೆನ್ನೆಲುಬು ಮುರಿದು ಕೂರಿಸುವ ಪ್ರಯತ್ನಗಳು ಸದ್ದಿಲ್ಲದೆ ಎಲ್ಲ ಪಕ್ಷಗಳಿಂದಲೂ ನಡೆಯುತ್ತಲೇ ಇದೆ. ಇದೇ ಕಾರಣಕ್ಕೆ ಬಡವರು ಬಡವರಾಗಿ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗಿ ಬದುವ ಸ್ಥಿತಿ ನಿರ್ಮಾಣವಾಗಿದೆ. ಇದು ಕೇವಲ ಒಂದು ಪಕ್ಷದ ಅಧಿಕಾರದಲ್ಲಿ ಮಾತ್ರವಲ್ಲ, ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಆರ್.ಜೆಡಿ, ಜೆ.ಎಂ.ಎಂ., ಎನ್.ಡಿ.ಎ ಮೈತ್ರಿ ಕೂಟ ಹೀಗೆ ಎಲ್ಲ ಪಕ್ಷಗಳ ಅವಧಿಯಲ್ಲೂ ಅದೇ ಆಗುತ್ತಿದೆ.
ರಾಜ್ಯ ಮಾತ್ರವಲ್ಲ, ಇಡೀ ದೇಶದಲ್ಲಿ ಈಗ ಎರಡು ವಿಚಾರಗಳು ಹೆಚ್ಚು ಸದ್ದು ಮಾಡುತ್ತಿವೆ. ಒಂದು ಅರಣ್ಯ ಒತ್ತುವರಿ ಹೆಸರಿನಲ್ಲಿ ರೈತರನ್ನು, ಆದಿವಾಸಿಗಳನ್ನು, ಕಾಡಿನ ಬದಿಯಲ್ಲಿ ಜೀವನ ನಡೆಸುವ ಬಡಜನರನ್ನು ಒಕ್ಕಲೆಬ್ಬಿಸುವುದು ಮತ್ತೊಂದು ಪಡಿತರ ಚೀಟಿಯ ಮಾನದಂಡಗಳನ್ನು ಬದಲಿಸಿ ಸಿಗುವ ಬಡವರ ಅನ್ನವನ್ನೂ ಕಸಿದುಕೊಳ್ಳುವುದು. ಆದರೆ ಇದಕ್ಕೆ ಪಾರ್ಟಿ ಪಕ್ಷಗಳ ಲೇಪನ ಬೇರೆ. ಜನರ ಎದರು ಹಾವು ಮುಂಗುಸಿಯಂತೆ ಕಿತ್ತಾಡುವ ರಾಜಕೀಯ ನಾಯಕರು ಒಳಗೊಳಗೇ ಒಂದಾಗಿ ಬಡವರ ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟುವ ಕಾಯಕ ಶುರು ಮಾಡಿದ್ದಾರೆ.
ಮೊನ್ನೆ ಇದ್ದಕ್ಕಿದ್ದ ಹಾಗೆ ಉಡುಪಿಯ ಹೆಬ್ರಿಯಲ್ಲಿ ಗುಂಡಿನ ಸದ್ದು ಕೇಳಿದೆ. ವಿಕ್ರಂ ಗೌಡ ಎಂಬ ಆದಿವಾಸಿ ಯುವಕನ ಹತ್ಯೆಯಾಗಿದೆ. ಆತ ಅದ್ಯಾವುದೋ ನಕ್ಸಲ್ ಗುಂಪಿನ ನಾಯಕ, ಥೇಟ್ ತೆಲುಗಿನ ಪುಷ್ಪಾ ಸಿನಿಮಾ ಹೀರೋ ರೀತಿ ಅಂತೆಲ್ಲ ಕೆಲವು ಮಾಧ್ಯಮಗಳು ಪೊಲೀಸರ ಕಪೋಲಕಲ್ಪಿತ ಕಥೆಗಳನ್ನು ನಂಬಿ ಬಿಂಬಿಸಿದವು. ಆದರೆ ನಕ್ಸಲ್ ಚಳವಳಿಯ ಸ್ವರೂಪದ ಅರಿವೂ ಇಲ್ಲದ ಎಡಬಿಡಂಗಿ ಪತ್ರಕರ್ತರು, ಸರ್ಕಾರ ನೀಡುವ ಇನಾಮಿನ ಕಿರೀಟದ ಹಪಹಪಿಯಲ್ಲಿರುವ ಪೊಲೀಸರು, ಪ್ರಚಾರದ ಗೀಳು ಮೈಗಂಟಿಸಿಕೊಂಡಿರುವ ಪೊಲೀಸ್ ಅಧಿಕಾರಿಗಳು ಸೇರಿ ಎನ್ ಕೌಂಟರ್ ಹೆಸರಿನಲ್ಲಿ ಒಂದು ಜೀವ ತೆಗೆದು ಹಾಕಿದರು. ಒಬ್ಬ ಭಯೋತ್ಪಾದಕ ಅಥವಾ ಕೊಲೆಗಡುಕನನ್ನು ತಪ್ಪಿತಸ್ಥ ಎಂದು ಸಾಬೀತಾದ ನಂತರ ಗಲ್ಲಿಗೇರಿಸುವಾಗ ನ್ಯಾಯಾಲಯ ಅವನ ಕೊನೆ ಆಸೆ ಕೇಳುವ ಮಾನವೀಯತೆ ಮೆರೆಯುತ್ತದೆ. ಆದರೆ ಅದೇ ಕಾನೂನಿನ ಅಡಿಯಲ್ಲಿ ಕೆಲಸ ಮಾಡುವ ಪೊಲೀಸರು ನಿರ್ಭಯವಾಗಿ, ನಿರ್ಧಯವಾಗಿ ಒಬ್ಬ ಆದಿವಾಸಿ ಯುವಕನನ್ನ ಗುಂಡಿಟ್ಟು ಕೊಂದು ಹಾಕುತ್ತಾರೆ.
ಇದು ಏನು ಸೂಚಿಸುತ್ತದೆ? ಸಾವಿರಾರು ಎಕರೆ ಭೂಮಿ ಒತ್ತುವರಿ ಮಾಡಿ ಕಾಫಿ ಎಸ್ಟೇಟ್, ತೋಟ ಮಾಡಿಕೊಂಡ ಭೂ ಹಿಡುವಳಿದಾರರ ಕಡೆ ಕಣ್ಣೆತ್ತಿ ಕೂಡ ನೋಡದ ಸರ್ಕಾರ, ಪೊಲೀಸ್ ವ್ಯವಸ್ಥೆ, ಅರಣ್ಯ ಇಲಾಖೆ ಅಧಿಕಾರಿಗಳು ಅದಕ್ಕೂ ನಮಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸಿದರೆ, ಬಡ ರೈತರಿಗೆ, ಬಡ ಆದಿವಾಸಿಗಳಿಗೆ ಮಾತ್ರ ನೋಟೀಸಿನ ಮೇಲೆ ನೋಟೀಸು ನೀಡಿ ಭಯ ಹುಟ್ಟಿಸಿ ಚಿತ್ರಹಿಂಸೆ ನೀಡುತ್ತದೆ! ಇದು ಬಡವರಿಗೆ ನೀಡುವ ನ್ಯಾಯ!
ಮತ್ತೊಂದೆಡೆ ಇಡೀ ದೇಶದಲ್ಲಿ 5.8 ಕೋಟಿ ಪಡಿತರ ಚೀಟಿಗಳನ್ನು ರದ್ದು ಮಾಡುವ ಪ್ರಕ್ರಿಯೆ ಶುರುವಾಗಿದೆ. ಕರ್ನಾಟಕದಲ್ಲಿ 11 ಲಕ್ಷ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದೆ. “ಸರ್ಕಾರಿ ನೌಕರರು, ಸಹಕಾರಿ ಸಂಘಗಳ ಅಧಿಕಾರಿಗಳು, ಆದಾಯ ತೆರಿಗೆ ಪಾವತಿದಾರರು ಬಿಪಿಎಲ್ ಪಡೆದಿದ್ದಾರೆ. ಹೀಗಾಗಿ ನಾವು ಪರಿಷ್ಕರಣೆ ಮಾಡುತ್ತಿದ್ದೇವೆ. ಒಂದು ವೇಳೆ ಅರ್ಹ ಪಡಿತರದಾರರ ಹೆಸರು ರದ್ದಾದರೆ ಮತ್ತೆ ಅರ್ಜಿ ಪಡೆದು ಬಿಪಿಎಲ್ ಕಾರ್ಡ್ ನೀಡುತ್ತೇವೆ” ಎಂದು ಸರ್ಕಾರಗಳು ಹೇಳುತ್ತಿವೆ. ಹಾಗಾದರೆ ಇಷ್ಟೊಂದು ಪ್ರಮಾಣದ ನಕಲಿ ಪಡಿತರ ಚೀಟಿ ನೀಡಿದವರು ಯಾರು? ಅವರು ತಪ್ಪಿತಸ್ಥರಲ್ಲವೇ? ಬಡವರಿಗೆ ಎರಡೆರಡು ಪಡಿತರ ಚೀಟಿಗಳನ್ನು ಎಲ್ಲಾದರೂ ನೀಡಿದ್ದಾರಾ? ಉಳ್ಳವರಿಗೆ ಬಿಪಿಎಲ್ ಕಾರ್ಡ್ ಕೊಟ್ಟವರು ಯಾರು? ಇದ್ಯಾವುದಕ್ಕೂ ಸರ್ಕಾರಗಳ ಬಳಿ ಉತ್ತರ ಇಲ್ಲ!
ಭ್ರಷ್ಟರೇ ಭ್ರಷ್ಟರಿಗೆ ಅನುಕೂಲ ಕಲ್ಪಿಸಿಕೊಟ್ಟಾಗಿದೆ. ಆದರೆ ಈಗ ಅದರ ಪರಿಶೀಲನೆಯ ಹೆಸರಿನಲ್ಲಿ ಅಮಾಯಕ ಬಡವರ ತುತ್ತು ಅನ್ನವನ್ನೂ ಕಸಿಯುವ ಪ್ರಯತ್ನ ನಡೆಯುತ್ತಿದೆ. ಆಡಳಿತ ವ್ಯವಸ್ಥೆ ಹೀಗೆ ಹೀನಾಯವಾಗಿ ನಡೆದುಕೊಂಡಾಗ ಬಡವರು ಎಷ್ಟು ದಿನ ಎಲ್ಲವನ್ನೂ ಸಹಿಸಿಕೊಂಡು ಕೂರಲು ಸಾಧ್ಯ? ಆಗ ಸಹಜವಾಗಿ ಪ್ರತಿಭಟನೆಗಳು, ದಂಗೆಗಳು ಶುರುವಾಗುತ್ತವೆ. ಆದರೆ ಜನಸಾಮಾನ್ಯರು ನಡೆಸುವ ಯಾವ ನ್ಯಾಯಯುತ ಪ್ರತಿಭಟನೆಗಳಿಗೂ ಯಾವ ರಾಜಕೀಯ ನಾಯಕರೂ ಬೆಂಬಲ ನೀಡುವುದಿಲ್ಲ. ಇವರು ಬೆಂಬಲ ನೀಡುವುದು ತಮಗೆ ತಮ್ಮ ಪಕ್ಷಗಳಿಗೆ ರಾಜಕೀಯ ಲಾಭ ಸಿಗಬಹುದಾದ ಹೋರಾಟಗಳಿಗೆ ಮಾತ್ರ.
ಕೊನೆಮಾತು:
ಆಡಳಿತ ವ್ಯವಸ್ಥೆಗಳು ಬಡವರ ವೋಟಿನಿಂದ ಅಧಿಕಾರಕ್ಕೆ ಬಂದಿರುವುದನ್ನು ಮರೆಯಬಾರದು. ಬಡವರ ಮೂಲಭೂತ ಹಕ್ಕುಗಳನ್ನು ಕಸಿಯದೆ ಅವರಿಗೆ ಸಿಗಬೇಕಾದ ಸೌಲಭ್ಯ ಕಲ್ಪಿಸಿದರೆ ಯಾವ ಸಮಸ್ಯೆಗಳೂ ಇರೋದಿಲ್ಲ. ಸರ್ಕಾರ, ಅಧಿಕಾರಿಗಳು ಕಾಡಿನ ಅಭಿವೃದ್ಧಿ ಹೆಸರಿನಲ್ಲಿ ಅಕೇಶಿಯಾ, ನೀಲಗಿರಿ ಗಿಡ ನೆಟ್ಟು ಬಿಲ್ ಮಾಡಿಕೊಳ್ಳುವುದು ಬಿಡಬೇಕು. ಬಡವರ ಅನ್ನಕ್ಕೆ ಕನ್ನ ಹಾಕದೆ ಅವರ ಹೊಟ್ಟೆಯನ್ನು ತಣ್ಣಗಿಟ್ಟರೆ ಆಳುವವರ ಕುರ್ಚಿಗಳೂ ಶೇಕ್ ಆಗುವುದಿಲ್ಲ… ಅಲ್ವಾ ?
ರಮೇಶ್ ಹಿರೇಜಂಬೂರು
ಹಿರಿಯ ಪತ್ರಕರ್ತರು, ಹೋರಾಟಗಾರರು, ಸಾಹಿತಿಗಳು.
ಇದನ್ನೂ ಓದಿ- http://ಹೃದಯಹೀನ ಸರ್ಕಾರದ ನೀತಿ, ಕ್ರಾಂತಿಯ ಅಪ್ರಯೋಗಿಕ ಹಾದಿ ಮತ್ತೊಬ್ಬ ಬಂಡಾಯಗಾರನ ದುರಂತ ಅಂತ್ಯಕ್ಕೆ ಕಾರಣವಾಗಿವೆ; ನೂರ್ ಶ್ರೀಧರ್ ಹಾಗೂ ಸಿರಿಮನೆ ನಾಗರಾಜ್ ಅವರ ಜಂಟಿ ಹೇಳಿಕೆ https://kannadaplanet.com/joint-statement-by-noor-sridhar-and-sirimane-nagaraj/