ಇತ್ತೀಚೆಗೆ ಕರ್ನಾಟಕ ಸರಕಾರ “ದ್ವೇಷ ಭಾಷಣ ನಿಗ್ರಹ ಮಸೂದೆ” ತರಬೇಕೆಂದಾಗ ಇದೇ ಬಿಜೆಪಿ ತೀವ್ರವಾಗಿ ವಿರೋಧಿಸಿತ್ತು. “ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪಿತೂರಿ” ಎಂದು ಗಲಾಟೆ ಮಾಡಿತ್ತು. ರಾಜ್ಯಪಾಲರನ್ನು ಬಳಸಿಕೊಂಡು ಆ ಮಸೂದೆ ಪಾಸ್ ಆಗದ ಹಾಗೆ ನೋಡಿಕೊಂಡಿತ್ತು. ಈಗ ಖರ್ಗೆಯವರೂ ಸಹ ಅದೇ ವಾಕ್ ಸ್ವಾತಂತ್ರ್ಯವನ್ನೇ ಬಳಸಿಕೊಂಡು ಬಿಜೆಪಿ ಹಾಗೂ ಆರೆಸ್ಸೆಸ್ ನ್ನು ವಿಷ ಸರ್ಪ ಎಂದು ಹೇಳಿದ್ದಾರೆ. ಬಿಜೆಪಿಗರು ಮಾಡುವ ದ್ವೇಷ ಭಾಷಣಗಳು ವಾಕ್ ಸ್ವಾತಂತ್ರ್ಯ ಎನ್ನುವುದಾದರೆ ಖರ್ಗೆಯವರ ಭಾಷಣವೂ ಅದೇ ಆಗಿದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
“ಈ ಬಿಜೆಪಿ ಮತ್ತು ಆರೆಸ್ಸೆಸ್ ಎನ್ನುವುದು ವಿಷಕಾರಿ ಹಾವುಗಳು. ನಮಾಜ್ ಮಾಡುವಾಗಲೂ ವಿಷಕಾರಿ ಹಾವು ಕಂಡರೆ ಅದನ್ನು ಕೊಲ್ಲಬೇಕು ಎಂದು ಕುರಾನಿನಲ್ಲಿ ಹೇಳಲಾಗಿದೆ. ಆರೆಸ್ಸೆಸ್ ಮತ್ತು ಬಿಜೆಪಿ ಅದೇ ರೀತಿಯ ವಿಷಕಾರಿ ಹಾವುಗಳು. ಅವುಗಳನ್ನು ಹೊಡೆದು ಕೊಲ್ಲದಿದ್ದರೆ ನೀವು ಬದುಕಲು ಸಾಧ್ಯವಿಲ್ಲ” ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ಎಪ್ರಿಲ್ 6 ರಂದು ಆಸ್ಸಾಂನ ನಿಲಾಂಬಜಾರ್ ನಲ್ಲಿ ನಡೆದ ಸಾರ್ವಜನಿಕ ಚುನಾವಣಾ ಪ್ರಚಾರ ಸಭೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ತಪ್ಪು ತಪ್ಪು. ಹೀಗೆ ದ್ವೇಷ ಭಾಷಣ ಮಾಡುವುದು ಮಹಾ ತಪ್ಪು. ಯಾಕೆಂದರೆ ದೇಶಾದ್ಯಂತ ದ್ವೇಷ ಭಾಷಣ ಹಾಗೂ ಕೋಮು ಪ್ರಚೋದನೆ ಮಾಡುವ ಗುತ್ತಿಗೆಯನ್ನು ಬಿಜೆಪಿ ಹಾಗೂ ಸಂಘ ಪರಿವಾರ ಪಡೆದುಕೊಂಡಿವೆ. ಅವರ ಹಕ್ಕನ್ನು ಬೇರೆಯವರು ಅತಿಕ್ರಮಿಸಿದರೆ ಸುಮ್ಮನಿರುತ್ತಾರೆಯೇ, ಹಾವುಗಳು ಹುತ್ತಬಿಟ್ಟು ಬಂದು ಬುಸಗುಡುತ್ತಿವೆ.

“ಇದು ಹಿಂಸೆಗೆ ಪ್ರಚೋದನೆ ನೀಡುವ ಹೇಳಿಕೆಯಾಗಿದೆ” ಎಂದು ವಿಶ್ವ ಹಿಂದೂ ಪರಿಷತ್ ಆಕ್ಷೇಪವೆತ್ತಿದೆ. “ಈ ಹೇಳಿಕೆಯು ನೇರಾ ನೇರಾ ಹಿಂಸೆಗೆ ಪ್ರಚೋದಿಸುತ್ತದೆ. ಹಿಂದೂ ಮತ್ತು ಮುಸ್ಲಿಮರಲ್ಲಿ ದ್ವೇಷವನ್ನು ಹರಡುತ್ತದೆ ” ಎಂದು ವಿಎಚ್ ಪಿ ಅಧ್ಯಕ್ಷ ಅಲೋಕ್ ಕುಮಾರ್ ಗುಡುಗಿದ್ದಾರೆ. ಕೇಂದ್ರ ಸಚಿವ ಹರ್ಷ ಮಲ್ಹೋತ್ರಾ ನೇತೃತ್ವದಲ್ಲಿ ಬಿಜೆಪಿ ನಿಯೋಗವು ಪೊಲೀಸ್ ಕಮಿಷನರ್ ಗೆ ದೂರು ನೀಡಿದೆ. ಆರೆಸ್ಸೆಸ್ ಈಗಾಗಲೇ “ಸಮುದಾಯಗಳ ನಡುವೆ ಶತ್ರುತ್ವ ಹುಟ್ಟುಹಾಕುವ ಮತ್ತು ಚುನಾವಣಾ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ” ಎಂದು ಆರೋಪಿಸಿ ಆಸ್ಸಾಂನಲ್ಲಿ ಎರಡು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದೆ. “ಇದು ಪ್ರಜಾಪ್ರಭುತ್ವಕ್ಕೆ ಸರಿ ಹೊಂದುವ ಭಾಷೆಯಲ್ಲ” ಎಂದು ಗೃಹಮಂತ್ರಿ ಅಮಿತ್ ಶಾ ಹೇಳಿದ್ದಾರೆ.
ಖರ್ಗೆಯವರು ಹೀಗೆ ಆರೋಪಿಸುತ್ತಿರುವುದು ಇದೇ ಮೊದಲ ಬಾರಿ ಏನಲ್ಲ. 2024 ರ ಕರ್ನಾಟಕ ಹಾಗೂ ಮಹಾರಾಷ್ಟ್ರ ಚುನಾವಣೆಗಳಲ್ಲಿ ಬಿಜೆಪಿ ಹಾಗೂ ಆರೆಸ್ಸೆಸ್ ನ್ನು ವಿಷ, ವಿಷಕಾರಿ ಹಾವು ಎಂದು ಹೋಲಿಸಿ ಟೀಕಿಸಿದ್ದಾರೆ. ಆದರೆ ಈ ಬಾರಿ ಕುರಾನ್ ಉಲ್ಲೇಖಿಸಿ ಹೇಳಿದ್ದು ಕೋಮುವಾದಿಗಳಿಗೆ ಅತೀವ ಸಂಕಟವನ್ನುಂಟು ಮಾಡಿದೆ, ಅವರ ಬುಡಕ್ಕೆ ಬೆಂಕಿ ಇಟ್ಟಿದೆ.
ಈಗ ಕೇವಲ ಒಂದು ವಾರದ ಹಿಂದೆ ಸಂಘ ಪರಿವಾರದ ಅಂಗವಾದ ಹಿಂದೂ ರಕ್ಷಣಾದಳದ ನಾಯಕ ಪಿಂಕಿ ಚೌಧರಿ ಎಂಬಾತ “ಹಿಂದೂಗಳ ರಕ್ಷಣೆಗಾಗಿ ಭಯೋತ್ಪಾದನೆ ಮಾಡಬಹುದು, ಭಯೋತ್ಪಾದಕರಾಗಬಹುದು, ಭಯೋತ್ಪಾದಕರನ್ನು ಹುಟ್ಟು ಹಾಕಬಹುದು. ಭಾರತದಿಂದ ಮುಸ್ಲಿಮರನ್ನ ಅಳಿಸಿ ಹಾಕಬೇಕು, ಅವರಿಗೆ ನಾಯಿ ಪಟ್ಟ ಕಟ್ಟಬೇಕು…” ಎಂದೆಲ್ಲಾ ಬಹಿರಂಗವಾಗಿಯೇ ದ್ವೇಷ ಭಾಷಣ ಮಾಡಿದ್ದಾನೆ. ಆದರೆ ಆಗ ಈ ಆರೆಸ್ಸೆಸ್ ಬಿಜೆಪಿಯ ಯಾರೊಬ್ಬರೂ ಬಾಯಿ ಬಿಡಲಿಲ್ಲ. ಪಿಂಕಿ ಚೌಧರಿ ಹೇಳಿದ್ದು ಹಿಂದೂ ಭಯೋತ್ಪಾದನೆಗೆ ಪ್ರಚೋದನೆ ಅಲ್ವಾ?. ಮುಸ್ಲಿಂ ವಿರೋಧಿ ಕೋಮುದ್ವೇಷ ಪ್ರಚೋದನೆ ಅಲ್ವಾ? ಆದರೂ ಯಾಕೆ ಈ ಬಿಜೆಪಿಗರ ಮೌನ?. ಆ ಮತಾಂಧ ಚೌಧರಿ ಹೇಳಿಕೆಗೆ ಸಂಘಿಗಳ ಸಹಮತವೂ ಇದೆಯಾ? ಸಂಘ ಪರಿವಾರದವರು ಏನು ಬೇಕಾದರೂ ದ್ವೇಷ ಭಾಷಣ ಮಾಡಬಹುದು, ಬೇರೆ ಪಕ್ಷದವರು ಅದನ್ನೇ ಮಾಡಿದರೆ ಅದು ಅಕ್ಷಮ್ಯ ಅಪರಾಧವಾ?
2024 ರ ಲೋಕಸಭಾ ಚುನಾವಣಾ ಪ್ರಚಾರದ ಸಭೆಯಲ್ಲಿ ರಾಜಸ್ಥಾನದಲ್ಲಿ ಪ್ರಧಾನಿ ಮೋದಿಯವರು ” ಮುಸ್ಲಿಮರು ಹೆಚ್ಚು ಮಕ್ಕಳನ್ನು ಹೊಂದಿರುವ ಓಟ್ ಜಿಹಾದಿಗಳು” ಎಂದು ಆರೋಪಿಸಿದ್ದರು. ಗೃಹಮಂತ್ರಿಗಳಾದ ಅಮಿತ್ ಶಾ ರವರು ಮುಸಲ್ಮಾನರಿಗೆ ” ಓಟ್ ಜಿಹಾದಿಗಳು, ಗೋ ಹತ್ಯಾಕಾರರು, ಮದ್ರಸಾ ಮಾಫಿಯಾ.. ” ಎಂದೆಲ್ಲಾ ಮುಸ್ಲಿಮರ ವಿರುದ್ದ ದ್ವೇಷ ಕಾರಿದ್ದಾರೆ. ಯುಪಿ ಸಿಎಂ ಯೋಗಿಯವರು “ಮುಸಲ್ಮಾನರನ್ನು ಕಠಿಣವಾಗಿ ನಿಗ್ರಹಿಸುತ್ತೇವೆ, ಅವರ ವಂಶದವರು ನೆನಪಿಟ್ಟುಕೊಳ್ಳುತ್ತಾರೆ” ಎಂದು ಘೋಷಿಸಿದ್ದರು. ಇವರ ದ್ವೇಷ ಭಾಷಣಗಳ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾದರೂ ಯಾವುದೇ ಕ್ರಮ ಆಗಲೇ ಇಲ್ಲ.

ಇತ್ತೀಚೆಗೆ ಕರ್ನಾಟಕ ಸರಕಾರ “ದ್ವೇಷ ಭಾಷಣ ನಿಗ್ರಹ ಮಸೂದೆ” ತರಬೇಕೆಂದಾಗ ಇದೇ ಬಿಜೆಪಿ ತೀವ್ರವಾಗಿ ವಿರೋಧಿಸಿತ್ತು. “ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪಿತೂರಿ” ಎಂದು ಗಲಾಟೆ ಮಾಡಿತ್ತು. ರಾಜ್ಯಪಾಲರನ್ನು ಬಳಸಿಕೊಂಡು ಆ ಮಸೂದೆ ಪಾಸ್ ಆಗದ ಹಾಗೆ ನೋಡಿಕೊಂಡಿತ್ತು. ಈಗ ಖರ್ಗೆಯವರೂ ಸಹ ಅದೇ ವಾಕ್ ಸ್ವಾತಂತ್ರ್ಯವನ್ನೇ ಬಳಸಿಕೊಂಡು ಬಿಜೆಪಿ ಹಾಗೂ ಆರೆಸ್ಸೆಸ್ ನ್ನು ವಿಷ ಸರ್ಪ ಎಂದು ಹೇಳಿದ್ದಾರೆ. ಬಿಜೆಪಿಗರು ಮಾಡುವ ದ್ವೇಷ ಭಾಷಣಗಳು ವಾಕ್ ಸ್ವಾತಂತ್ರ್ಯ ಎನ್ನುವುದಾದರೆ ಖರ್ಗೆಯವರ ಭಾಷಣವೂ ಅದೇ ಆಗಿದೆ. ಆದರೆ ತಮಗೊಂದು, ಬೇರೆಯವರಿಗಿನ್ನೊಂದು ಎನ್ನುವ ದ್ವಂದ್ವ ನೀತಿ ಬಿಜೆಪಿಗರ ನೈತಿಕತೆಯನ್ನೇ ಪ್ರಶ್ನಿಸುವಂತಿದೆ.
ಕೋಮು ಪ್ರಚೋದನೆಯ ದ್ವೇಷ ಭಾಷಣಗಳನ್ನು ಯಾರೇ ಮಾಡಿದರೂ ಅದು ಅಕ್ಷಮ್ಯ. ಅದು ಕೋಮು ಸೌಹಾರ್ದತೆಗೆ ಅಪಾಯಕಾರಿ. ಆದರೆ ಚುನಾವಣಾ ಸಂದರ್ಭದಲ್ಲಿ ಇವುಗಳೆಲ್ಲಾ ಮಾಮೂಲು ಎನ್ನುವಂತಾಗಿವೆ. ದೂರುಗಳೇನೋ ದಾಖಲಾಗುತ್ತವೆ. ಆದರೆ ಚುನಾವಣಾ ಆಯೋಗ ಅವುಗಳನ್ನು ನಿರ್ಲಕ್ಷಿಸುತ್ತದೆ. ನ್ಯಾಯಾಲಯಗಳು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ಹೀಗಾಗಿ ದ್ವೇಷ ಭಾಷಣಗಳು ಚುನಾವಣೆಗಳ ಭಾಗವಾಗಿವೆ. ಇಂತಹುದು ಆಗಬಾರದು ಅಂದರೆ ಕೇಂದ್ರ ಸರಕಾರವೇ “ದ್ವೇಷ ಭಾಷಣ ನಿಗ್ರಹ ಕಾಯಿದೆ” ಜಾರಿಗೊಳಿಸಬೇಕಿದೆ. ಆದರೆ ಬಿಜೆಪಿ ಸರಕಾರದಿಂದ ಅದು ಅಸಾಧ್ಯ. ಯಾಕೆಂದರೆ ಕೋಮು ಸಾಮರಸ್ಯವನ್ನು ಕದಡುವಂತಹ ಪ್ರಚೋದನಕಾರಿ ದ್ವೇಷ ಭಾಷಣಗಳನ್ನು ಮಾಡುವುದರಲ್ಲಿ ಬಿಜೆಪಿಗರು ಸಿದ್ಧಹಸ್ತರು. ಮೊದಲು ಬಿಜೆಪಿಯ ನಾಯಕರುಗಳು ವಿಷ ಕಾರುವುದನ್ನು ನಿಲ್ಲಿಸಲಿ, ಆಮೇಲೆ ಬೇರೆಯವರ ಮೇಲೆ ಆರೋಪ ಮಾಡಲಿ, ದೂರು ನೀಡಲಿ. ಅದು ಬಿಟ್ಟು ತಮ್ಮ ತಟ್ಟೆಯಲ್ಲಿ ಕತ್ತೆ ಸತ್ತು ಬಿದ್ದಿರುವಾಗ ಬೇರೆಯವರ ತಟ್ಟೆಯೊಳಗೆ ನೊಣ ಹುಡುಕಿ ಕುಹಕವಾಡುವುದನ್ನು ನಿಲ್ಲಿಸಲಿ. ನಿಜಕ್ಕೂ ಆರೆಸ್ಸೆಸ್ ಎನ್ನುವುದು ವಿಷ ಸರ್ಪವಾ? ವಿವರ ಬೇಕಾದವರು 2022 ರಲ್ಲಿ ದೇವನೂರು ಮಹಾದೇವರವರು ಬರೆದ “ಆರೆಸ್ಸೆಸ್ ಆಳ ಅಗಲ” ಎನ್ನುವ ಪುಸ್ತಿಕೆಯನ್ನು ಒಮ್ಮೆ ಓದಲಿ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಹಿಂದೂ – ಮುಸ್ಲಿಂ ತುಷ್ಟೀಕರಣ; ಕೆಸರೆರಚಾಟದ ರಾಜಕಾರಣ


