ಕೇಂದ್ರದ ದಬ್ಬಾಳಿಕೆ ಹಾಗೂ ಪ್ರತ್ಯೇಕ ರಾಷ್ಟ್ರ ಬೇಡಿಕೆ

Most read

ದಬ್ಬಾಳಿಕೆ ಮಿತಿ ಮೀರಿದರೆ ಪ್ರತಿರೋಧ ಸಹಜ ಪ್ರಕ್ರಿಯೆ. ಅದಕ್ಕೂ ಪ್ರತಿಫಲ ಸಿಗದೇ ಇದ್ದಾಗ ಆಕ್ರೋಶ ಹೆಚ್ಚಾಗದೇ ಇದ್ದೀತೆ? ಹಾಗೆ ಹುಟ್ಟಿದ ಆಕ್ರೋಶದ ಪರಿಣಾಮವೇ ಸಂಸದ ಡಿಕೆ ಸುರೇಶರವರ ಪ್ರತ್ಯೇಕ ರಾಷ್ಟ್ರದ ಬೇಡಿಕೆಯ ಮಾತು. ಈ ಬೇಡಿಕೆ ತಪ್ಪಾಗಿ ಗೋಚರಿಸಬಹುದು. ಆದರೆ ಅದರ ಹಿಂದಿರುವ ಆತಂಕ, ಆಕ್ರೋಶದಲ್ಲಿ ಮಾತ್ರ ತಪ್ಪಿಲ್ಲ.

ಶಶಿಕಾಂತ ಯಡಹಳ್ಳಿ, ಪತ್ರಕರ್ತರು

ಪತ್ಯೇಕತೆಯ ಕೂಗು ಯಾವಾಗ ಬರುತ್ತೆ? ಯಾವಾಗ ಶೋಷಣೆ ತಾರತಮ್ಯ ಅತಿಯಾಗುತ್ತೋ ಆವಾಗ. ಹಾಗಾದಾಗ ಏನು ಮಾಡಬೇಕು? ಸಮಗ್ರತೆ ಕಾಪಾಡಲು ಹಾಗೆ ಕೂಗುವವರ ಧ್ವನಿಯನ್ನು ಅಡಗಿಸಬೇಕು. ಹೌದು. ಅದೇ ಆಗೋದು ಹಾಗೂ ಆಗ್ತಿರೋದು.

ಕೇಂದ್ರ ಸರಕಾರದಿಂದ ಎಲ್ಲದರಲ್ಲೂ ನಮ್ಮ ನಾಡಿಗೆ ಅನ್ಯಾಯ ಆಗುತ್ತಿರುವುದನ್ನು ನೋಡಿಯೂ ಕರ್ನಾಟಕದ ಅಷ್ಟೂ ಬಿಜೆಪಿ ಶಾಸಕರು ತಮ್ಮ ಪಂಚೇಂದ್ರಿಯಗಳನ್ನು ಮುಚ್ಚಿಕೊಂಡು ಸುಮ್ಮನಿರುವಾಗ ಕಾಂಗ್ರೆಸ್ಸಿನ ಏಕೈಕ ಸಂಸದ ಡಿಕೆ ಸುರೇಶ್ ರವರು ಎತ್ತಿದ ಒಂದೇ ಒಂದು ಪ್ರಶ್ನೆ ಸಂಸತ್ತಿನ ಒಳಗೆ ಹೊರಗೆ ಬೆಂಕಿ ಹಚ್ಚಿ ಬಿಟ್ಟಿತು. ನಕಲಿ ದೇಶಪ್ರೇಮಿಗಳಲಿ ಒಡಲುರಿ ಹೆಚ್ಚಿಸಿತು.

ಡಿ ಕೆ. ಸುರೇಶ್

ಅವರು ಹೇಳಬಾರದ್ದೇನೂ ಹೇಳಿರಲಿಲ್ಲ. “ದಕ್ಷಿಣ ಭಾರತಕ್ಕೆ ಕೇಂದ್ರ ಸರಕಾರದಿಂದ ಭಾರಿ ಅನ್ಯಾಯ ಆಗುತ್ತಿದೆ. ಹೀಗೇ ಆದರೆ  ಪ್ರತ್ಯೇಕ ರಾಷ್ಟ್ರದ ಬೇಡಿಕೆ ಅನಿವಾರ್ಯವಾಗುತ್ತದೆ” ಅನ್ನುವ ಸಂಸದ ಸುರೇಶರವರ ಒಂದೇ ಒಂದು ಹೇಳಿಕೆ ಸಂಘ ಪರಿವಾರದಲ್ಲಿ ಸಂಚಲನವನ್ನುಂಟು ಮಾಡಿದೆ. ಮೊದಲೆ ಕಡ್ಡಿಯನ್ನು ಗುಡ್ಡ ಮಾಡಿ ಜನರನ್ನು ದಡ್ಡರಾಗಿಸುವಲ್ಲಿ ಎಕ್ಸಪರ್ಟ್ ಆಗಿರುವ ಸಂಘಿಗಳು ಇಂತಹ ಅವಕಾಶವನ್ನು ಸುಮ್ಮನೇ ಬಿಡಲು ಸಾಧ್ಯವೇ? “ನೋಡಿ ದೇಶವನ್ನು ವಿಭಜನೆ ಮಾಡುವುದೇ ಕಾಂಗ್ರೆಸ್ಸಿನ ಉದ್ದೇಶ. ಕಾಂಗ್ರೆಸ್ ದೇಶದ್ರೋಹಿ ಪಕ್ಷ” ಎನ್ನುವ ಅಪಪ್ರಚಾರ ಶುರುಮಾಡಿದರು. “ರಾಹುಲ್ ಗಾಂಧಿ ಭಾರತ್ ಜೋಡೋ ಅಂದರೆ ಕಾಂಗ್ರೆಸ್ ಸಂಸದ ಭಾರತ್ ತೋಡೋ ಎನ್ನುತ್ತಿದ್ದಾರೆ” ಎನ್ನುವ ಹೇಳಿಕೆಗಳು ಬಿಜೆಪಿ ಪಾಳಯದಿಂದ ತೂರಿ ಬಂದವು. 

ತಪ್ಪು.. ಮಹಾ ತಪ್ಪು. ಅಖಂಡ ಭಾರತವನ್ನು ಹೀಗೆ ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಅಂತಾ ಪ್ರತ್ಯೇಕ ದೇಶ ಮಾಡುವ ಯೋಚನೆಯೇ ಮಹಾಪ್ರಮಾದ. ಇದನ್ನು ಖಂಡಿಸೋಣ, ಇಂತಹ ಯೋಚನೆಯನ್ನು ವಿರೋಧಿಸೋಣ.‌ 

ಆದರೆ, ನಿರಂತರವಾಗಿ ಆಗುತ್ತಿರುವ ತಾರತಮ್ಯವನ್ನು ಏನು ಮಾಡೋಣ? ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರದ ದಬ್ಬಾಳಿಕೆಯನ್ನು ಎಷ್ಟೂಂತ ಸಹಿಸೋಣ?  ದಕ್ಷಿಣ ಭಾರತದ ಆದಾಯ ಪಡೆದು ಉತ್ತರ ಭಾರತದ ರಾಜ್ಯಗಳಿಗೆ ಹಂಚುವ ಕೇಂದ್ರ ಸರಕಾರದ ಅನೀತಿಯನ್ನು ಹೇಗೆ ಒಪ್ಪಿ ಕೊಳ್ಳೋಣ?. ನಮಗೆ ಕೇಂದ್ರ ಸರಕಾರದ ಹಣ ಬೇಡ, ನಮ್ಮ ರಾಜ್ಯದಿಂದ ಕೇಂದ್ರದ ಬೊಕ್ಕಸಕ್ಕೆ ಜಮೆಯಾದ ಹಣದ ಪಾಲು ಕೊಡಿ ಎಂದು ಕರ್ನಾಟಕ ಕೇಳುತ್ತಿದ್ದರೂ ಕೊಡುತ್ತಿಲ್ಲವಲ್ಲಾ, ಇದು ತಪ್ಪಲ್ವಾ?

ನಿರ್ಮಲಾ ಸೀತಾರಾಮನ್

ಪ್ರತಿ ವರ್ಷ ಕರ್ನಾಟಕದಿಂದ 4 ಲಕ್ಷ ಕೋಟಿಯಷ್ಟು ತೆರಿಗೆ ಹಣ ಕೇಂದ್ರ ಸರಕಾರಕ್ಕೆ ಹೋಗುತ್ತಿದೆಯಲ್ಲಾ.. ಅದರಲ್ಲಿ ವಾಪಸ್ ಕರ್ನಾಟಕಕ್ಕೆ ಶೇಕಡಾ 10 ರಷ್ಟನ್ನು ವಾಪಸ್ ಕೊಡಲು ಸತಾಯಿಸಲಾಗುತ್ತಿದೆಯಲ್ಲಾ.. ಇದು ತಪ್ಪಲ್ವಾ? ಅದೂ ರಾಜ್ಯ ಸರಕಾರ ಕೇಂದ್ರವನ್ನು ಬೇಡಿಕೊಳ್ಳಬೇಕು, ಗೋಗರೆಯಬೇಕು, ಪತ್ರಗಳನ್ನು ಬರೆಯುತ್ತಲೇ ಇರಬೇಕು. ಆದರೂ ಜಿಎಸ್ಟಿ ಪಾಲು ಕಾಲಮಿತಿಯಲ್ಲಿ ಬರುವುದಿಲ್ಲ. ಬಂದರೂ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಷ್ಟು ಯಾತಕ್ಕೂ ಸಾಲುವುದಿಲ್ಲ.  ಕಳೆದ ಸಲ ಬೊಮ್ಮಾಯಿ ನೇತೃತ್ವದ ಸರಕಾರ ಇದ್ದಾಗ ” ಬೇಕಿದ್ದರೆ ಸಾಲ ಮಾಡಲು ಅನುಮತಿ ಕೊಡುತ್ತೇವೆಯೇ ಹೊರತು ಜಿಎಸ್ಟಿ ಕೇಳಬೇಡಿ” ಅಂತಾ ಕೇಂದ್ರ ಸರಕಾರ ಹೇಳಿದ್ದು ಪ್ರಮಾದ ಅಲ್ಲವೇ?. 

ಕರ್ನಾಟಕ ಸರಕಾರ ಕೇಂದ್ರದ ಬೊಕ್ಕಸಕ್ಕೆ 100 ರೂ ತೆರಿಗೆ ಕಟ್ಟಿದರೆ ವಾಪಸ್ ಕರ್ನಾಟಕಕ್ಕೆ ಕೇಂದ್ರ ಕೊಡುವುದು ಕೇವಲ 13.9 ರೂಪಾಯಿಗಳಷ್ಟು ಚಿಲ್ಲರೆ ಹಣವನ್ನು ಅಂದರೆ ಕನ್ನಡಿಗರಿಗೆ ಸಿಟ್ಟು ಬಾರದೇ ಇರುತ್ತದಾ?  ಅದಕ್ಕಿಂತಾ ಬೇಸರದ ಸಂಗತಿ ಏನೆಂದರೆ 100 ರೂ ತೆರಿಗೆ ಪಾವತಿಸುವ ಉತ್ತರ ಭಾರತದ ರಾಜ್ಯಗಳಾದ ಉತ್ತರ ಪ್ರದೇಶಕ್ಕೆ 333.2 ರೂ. ಮಧ್ಯಪ್ರದೇಶಕ್ಕೆ 279.1 ರೂ, ಬಿಹಾರಕ್ಕೆ 922.5 ರೂ. ರಾಜಸ್ತಾನಕ್ಕೆ 154.1 ರೂ. ಹೀಗೆ ಉತ್ತರ ಭಾರತದ ಬಹುತೇಕ ರಾಜ್ಯಗಳಿಂದ ಸಂಗ್ರಹಿಸಿದ ನೂರು ರೂ ತೆರಿಗೆಗೆ ಪ್ರತಿಯಾಗಿ ಎರಡು ಮೂರು ಪಟ್ಟು ಹೆಚ್ಚುವರಿಯಾಗಿ ಅವುಗಳಿಗೆ ವಾಪಸ್ ಕೊಡಲಾಗುತ್ತದೆ. ಆದರೆ ದಕ್ಷಿಣ ಭಾರತದ ರಾಜ್ಯಗಳಿಗೆ ಚಿಲ್ಲರೆ ಕಾಸು ಕೊಡಲಾಗುತ್ತದೆ. ಈ ರೀತಿಯ ತಾರತಮ್ಯ ಗೊತ್ತಾದರೆ ಕನ್ನಡಿಗರ ರಕ್ತ ಕುದಿಯದೇ ಇರುತ್ತದಾ? 

2024-25 ರ ಬಜೆಟ್‌ ನಲ್ಲಿ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರಕಾರ ಮೀಸಲಿಟ್ಟಿದ್ದೇನೆ ಎಂದು ಘೋಷಿಸಿದ ಹಣ ಕೇವಲ 44,485 ಕೋಟಿ ಅಷ್ಟೇ. ಅದೇ ವಾರ್ಷಿಕವಾಗಿ ಕರ್ನಾಟಕದಿಂದ ಕೇಂದ್ರ ವಸೂಲಿ ಮಾಡಿದ್ದು 4 ಲಕ್ಷ ಕೋಟಿ ಹಣವನ್ನು. ಅಂದರೆ ಹೋಗಿದ್ದು 100% ಆದರೆ ಕೊಡುತ್ತೇವೆ ಎಂದಿದ್ದು ಕೇವಲ 11%. ಅದೂ ಸಹ ವಾಪಸ್ ಕೊಡುತ್ತಾರೆ ಎನ್ನುವ ಗ್ಯಾರಂಟಿ ಇಲ್ಲ. ಅದೂ ಸಹ ಕೇವಲ ಬಜೆಟ್ ಘೋಷಣೆ ಅಷ್ಟೇ. ಈ ಅನ್ಯಾಯ ನೋಡಿಯೂ ಕನ್ನಡಿಗರು ಸುಮ್ಮನಿರಬೇಕಾ? 

ಸಿದ್ದರಾಮಯ್ಯ

ಅದೇ ಉತ್ತರ ಪ್ರದೇಶಕ್ಕೆ ಹಂಚಿಕೆ ಮಾಡಲಾದ ಹಣ 2,18,816 ಕೋಟಿ. ಬಿಹಾರಕ್ಕೆ 1,22,685 ಕೋಟಿ,  ಮಧ್ಯಪ್ರದೇಶಕ್ಕೆ 95,752 ಕೋಟಿ. ಯಾಕೆ ಹೀಗೆ? ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣ ಭಾರತದ ರಾಜ್ಯಗಳಿಗೆ ಬಜೆಟ್‌ ನಲ್ಲಿ ಹಂಚಿಕೆಯಾದ ಹಣ ಅತೀ ಕಡಿಮೆ. ಆದರೆ ಕೇಂದ್ರ ಸರಕಾರಕ್ಕೆ ಹೆಚ್ಚು ತೆರಿಗೆ ಹಣ ಸಂಗ್ರಹಿಸಿ ಕೊಡುತ್ತಿರುವುದು ದಕ್ಷಿಣ ಭಾರತದ ರಾಜ್ಯಗಳು. ದ್ರಾವಿಡ ನಾಡಿನ ರಾಜ್ಯಗಳಿಗೆ ಇಷ್ಟೊಂದು ತಾರತಮ್ಯ ಅನ್ಯಾಯ ಆಗುತ್ತಿದ್ದರೂ ಕೇಂದ್ರದ ದಬ್ಬಾಳಿಕೆಯನ್ನು ಸಹಿಸಿಕೊಂಡು ಸುಮ್ಮನಿರಬೇಕಾ?

ಕಳೆದ ಹತ್ತು ವರ್ಷದಲ್ಲಿ ಕೇಂದ್ರ ಸರಕಾರವು 110 ಲಕ್ಷ ಕೋಟಿಗಳಷ್ಟು  ಹಿಂದೆಂದೂ ಯಾರೂ ಮಾಡದಷ್ಟು ಸಾಲವನ್ನು ಮಾಡಿ ಅದರ ಹೊರೆಯನ್ನು ದೇಶದ ಮೇಲೆ ಹೊರಿಸಿದೆ. ಈಗ ಈ ಸಾಲಕ್ಕೆ ವಾರ್ಷಿಕವಾಗಿ ದೇಶದ ಒಟ್ಟು ಆದಾಯದ 20 % ಅಂದರೆ 11.9 ಲಕ್ಷ ಕೋಟಿ ಹಣವನ್ನು ಬಡ್ಡಿ ಕಟ್ಟಬೇಕಿದೆ. ಇಷ್ಟೆಲ್ಲಾ ಸಾಲ ಇದ್ದರೂ  ಕಾರ್ಪೋರೇಟ್ ಕಂಪನಿಗಳ ಲಕ್ಷಾಂತರ ಕೋಟಿ ಹಣ ಸಾಲಮನ್ನಾ ಮಾಡಿ ಕೇಂದ್ರ ಸರಕಾರ ದೇಶವನ್ನೇ ದಿವಾಳಿ ಅಂಚಿಗೆ ತಂದು ನಿಲ್ಲಿಸಿದೆ. 

ಅಷ್ಟೇ ಯಾಕೆ ಫೆ.1 ರಂದು ಮಂಡಿಸಲಾದ ಬಜೆಟ್‌ ನಲ್ಲೂ ಮತ್ತೆ ಸಾಲ ಎತ್ತುವ ಯೋಜನೆಗೆ ಚಾಲನೆ ಕೊಡಲಾಗಿದೆ.  16.85 ಲಕ್ಷ ಕೋಟಿ ರೂಪಾಯಿಗಳ ವಿತ್ತೀಯ ಕೊರತೆ ಬಜೆಟ್ ಮಂಡಿಸಿದ್ದು 11.75 ಲಕ್ಷ ಕೋಟಿಗಳನ್ನು ಮಾರುಕಟ್ಟೆಯಿಂದ ಸಾಲ ಪಡೆದು ಕೊರತೆಯನ್ನು ತೀರಿಸಲಾಗುತ್ತದೆಯಂತೆ. 19 ಸಾವಿರ ಕೋಟಿ ಅಲ್ಪಾವಧಿ ಸಾಲ, 4.66 ಲಕ್ಷ ಕೋಟಿ ಸಣ್ಣ ಉಳಿತಾಯದ ಭದ್ರತೆ ಮೇಲಿನ ಸಾಲ. 16 ಸಾವಿರ ಕೋಟಿ ವಿದೇಶಿ ಸಾಲ, 3,549 ಕೋಟಿ ರಿಜರ್ವ್ ಬ್ಯಾಂಕಿನ ಮೀಸಲು ನಿಧಿ ಮೇಲೆ ಸಾಲವನ್ನು ಪಡೆಯಲಾಗುವುದಂತೆ. ಅಂದರೆ ಮತ್ತೆ ಹೆಚ್ಚುವರಿ ಸಾಲ ಮತ್ತು ಹೆಚ್ಚುವರಿ ಬಡ್ಡಿ. ಬರುವ ಆದಾಯದಲ್ಲಿ ದೊಡ್ಡ ಪಾಲು ಬಡ್ಡಿ ಕಟ್ಟಲು ಬಳಸಿದರೆ ಅಸಲು ತೀರಿಸುವುದು ಯಾವಾಗ? ರಾಜ್ಯಗಳಿಗೆ ಕೊಡಬೇಕಾದ ಪಾಲು ಕೊಡುವುದು ಯಾವಾಗ? ಈ ದೇಶ ಸಾಲದ ಸುಳಿಯಿಂದ ಹೊರ ಬರುವುದು ಯಾವಾಗ?  ಕೇಂದ್ರ ಸರಕಾರ ತನ್ನ ವಿವೇಚನಾ ರಹಿತ ಯೋಜನೆಗಳಿಗಾಗಿ, ಕಾರ್ಪೋರೇಟ್ ಕುಳಗಳ ಹಿತರಕ್ಷಣೆಗಾಗಿ, ಬಂಡವಾಳಿಗರ ಸಾಲವಸೂಲಾತಿ ಮಾಡಲಾಗದ ಅಸಮರ್ಥತೆಗಾಗಿ ಮಾಡಿಕೊಂಡ ಸಾಲಕ್ಕೆ ದಕ್ಷಿಣ ಭಾರತದ ರಾಜ್ಯಗಳೇಕೆ ತಮ್ಮ ಆದಾಯದ ಬಹುಪಾಲನ್ನು ಕೊಡಬೇಕು? ಕರ್ನಾಟಕ ಏಕೆ ತನ್ನೆಲ್ಲಾ ಜಿಎಸ್ಟಿ ಆದಾಯವನ್ನು ಕೇಂದ್ರಕ್ಕೆ ಧಾರೆಯರೆದು ಚಿಲ್ಲರೆ ಹಣಕ್ಕಾಗಿ ಭಿಕ್ಷೆ ಬೇಡಬೇಕು. ಇನ್ನೆಷ್ಟು ದಿನ ಕೇಂದ್ರದ ಲೂಟಿಕೋರತನವನ್ನು ರಾಜ್ಯ ಸಹಿಸಿಕೊಳ್ಳಬೇಕು.?

ಕೇಂದ್ರ ಸರಕಾರದಲ್ಲಿರುವವರು

ದಬ್ಬಾಳಿಕೆ ಮಿತಿ ಮೀರಿದರೆ ಪ್ರತಿರೋಧ ಸಹಜ ಪ್ರಕ್ರಿಯೆ. ಅದಕ್ಕೂ ಪ್ರತಿಫಲ ಸಿಗದೇ ಇದ್ದಾಗ ಆಕ್ರೋಶ ಹೆಚ್ಚಾಗದೇ ಇದ್ದೀತೆ? ಹಾಗೆ ಹುಟ್ಟಿದ ಆಕ್ರೋಶದ ಪರಿಣಾಮವೇ ಸಂಸದ ಡಿಕೆ ಸುರೇಶರವರ ಪ್ರತ್ಯೇಕ ರಾಷ್ಟ್ರದ ಬೇಡಿಕೆಯ ಮಾತು. 

ದಕ್ಷಿಣ ಭಾರತ ಪ್ರತ್ಯೇಕ ರಾಷ್ಟ್ರ ಆಗಬೇಕಾಗುತ್ತದೆ ಎನ್ನುವ ಆಕ್ರೋಶದ ಹಿಂದೆ ದಕ್ಷಿಣ ಭಾರತದ ರಾಜ್ಯಗಳಿಗೆ ಸಿಗಬೇಕಾದ ಪಾಲು ದೊರೆಯಬೇಕು ಹಾಗೂ ದಕ್ಷಿಣ ರಾಜ್ಯಗಳ ಹಣವನ್ನು ಉತ್ತರದ ರಾಜ್ಯಗಳಿಗೆ ಹಂಚಿಕೆ ಮಾಡುವ ಅನ್ಯಾಯ ನಿಲ್ಲಬೇಕು ಎನ್ನುವುದಾಗಿದೆ. ಸುರೇಶರವರ ಮಾತಿನ ಹಿಂದಿರುವ ರಾಜ್ಯದ ಪರವಾದ ಕಳಕಳಿಯನ್ನು ಅರ್ಥ ಮಾಡಿಕೊಂಡು ಆದ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಎನ್ನುವುದು ರಾಜ್ಯದ ಸಮಸ್ತ ಸಂಸದರ ಒಕ್ಕೊರಲಿನ ಒತ್ತಾಯವಾಗಬೇಕಿತ್ತು. ಆದರೆ ಅವರೆಲ್ಲಾ ಮೋದಿ ಗುಲಾಮಗಿರಿಯನ್ನೇ ದೇಶ ಸೇವೆ ಎಂದುಕೊಂಡಿದ್ದರಿಂದಾಗಿ ಸುರೇಶರವರ ಪ್ರತ್ಯೇಕ ರಾಷ್ಟ್ರ ಬೇಡಿಕೆಯನ್ನೇ ದೊಡ್ಡದು ಮಾಡಿ ಕಾಂಗ್ರೆಸ್ ಪಕ್ಷವನ್ನೇ ದೇಶದ್ರೋಹಿ ಎಂದು ಸಾಬೀತು ಪಡಿಸುವ ಪ್ರಯತ್ನದಲ್ಲಿದ್ದಾರೆ. 

ಇಷ್ಟಕ್ಕೂ ಸಂಸದ ಸುರೇಶರವರು ಹೇಳಿದ್ದಾದರೂ ಏನು? ” ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರಕಾರ ಹಣ ಬಿಡುಗಡೆ ಮಾಡುತ್ತಿಲ್ಲ. ಜಿಎಸ್ಟಿ ಹಾಗೂ ತೆರಿಗೆಯ ಸೂಕ್ತ ಪಾಲನ್ನೂ ನೀಡುತ್ತಿಲ್ಲ. ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಿದೆ. ಇದೇ ಧೋರಣೆ ಮುಂದುವರಿಸಿದರೆ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಮುಂದಿಡಬೇಕಾಗುತ್ತದೆ” ಎಂದು ಕೇಂದ್ರ ಸರಕಾರದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅವರೇನೂ ಪ್ರತ್ಯೇಕ ರಾಷ್ಟ್ರ ಕೇಳಿಲ್ಲ, ಬೇಡಿಕೆ ಮುಂದಿಡಬೇಕಾಗುತ್ತದೆ ಅಂದಿದ್ದಾರಷ್ಟೇ. ಆದರೆ ಅವರ ಮಾತಿನಲ್ಲಿರುವ ‘ಪ್ರತ್ಯೇಕ ರಾಷ್ಟ್ರದ ಬೇಡಿಕೆ’ ಎನ್ನುವ ಮೂರು ಶಬ್ದಗಳನ್ನು ಮಾತ್ರ ತೆಗೆದುಕೊಂಡ ಬಿಜೆಪಿ ಪಕ್ಷ ತನ್ನ ದ್ವೇಷದಾಟ ಶುರುಮಾಡಿದೆ. ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಆಗಿದೆ ಎನ್ನುವುದನ್ನು ಮರೆಮಾಚಲು ದೇಶದ್ರೋಹದ ಟ್ರಂಪ್ ಕಾರ್ಡ್ ಬಳಸಲು ಮುಂದಾಗಿದೆ. ಕಾಂಗ್ರೆಸ್ ಸಹ ಬಿಜೆಪಿಯ ಪ್ರಹಾರಕ್ಕೆ ಆತಂಕಗೊಂಡು ಸಂಸದನ ಪ್ರತ್ಯೇಕ ರಾಷ್ಟ್ರ ಬೇಡಿಕೆಯ ಹೇಳಿಕೆಯನ್ನು ಸಮರ್ಥಿಸಿ ಕೊಳ್ಳಲು ನಿರಾಕರಿಸಿದೆ.  ಅಂತರ ಕಾಪಾಡಿಕೊಂಡಿದೆ. 

ಸಂವಿಧಾನಕ್ಕೂ ಅಂಬೇಡ್ಕರ್ ಅವರಿಗೂ ಘೋರ ಅವಮಾನ ಮಾಡಿರುವ ಸುರೇಶ್ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತಾ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ ಜೋಶಿಯವರು ಸಂಸತ್ತಿನಲ್ಲಿ ಆಗ್ರಹಿಸಿದ್ದಾರೆ. ಸರಿ ಯಾವುದೇ ಕ್ರಮ ಕೈಗೊಳ್ಳಲಿ. ಹಾಗೆಯೇ ಸಂವಿಧಾನದಲ್ಲಿ ಒಕ್ಕೂಟ ವ್ಯವಸ್ಥೆಗೆ ಪ್ರಾಧಾನ್ಯತೆ ಕೊಡಲಾಗಿದೆಯಲ್ಲವೇ.  ಆ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿರುವ ಕೇಂದ್ರ ಸರಕಾರದ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು. ನ್ಯಾಯವಾಗಿ ಕರ್ನಾಟಕಕ್ಕೆ ಸಿಗಬೇಕಾದ ತೆರಿಗೆ ಪಾಲನ್ನೂ ಕೊಡದೇ ವಂಚಿಸುತ್ತಿರುವ ಮೋದಿ ಸರಕಾರದ ವಿರುದ್ಧ ಯಾರು ಕ್ರಮ ಕೈಗೊಳ್ಳಬೇಕು. ಕೇಂದ್ರ ಸರಕಾರವು ಒಕ್ಕೂಟ ವ್ಯವಸ್ಥೆಗೆ ಗೌರವ ಕೊಟ್ಟು ತಾರತಮ್ಯ ಮಾಡದೇ ಇದ್ದಿದ್ದರೆ, ರಾಜ್ಯದ ಪಾಲನ್ನು ಕೊಟ್ಟಿದ್ದರೆ ಈ ರೀತಿ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಕೇಳಿ ಬರುತ್ತಿರಲಿಲ್ಲವಲ್ಲಾ. ಇಂತಹ ಹೇಳಿಕೆ ಬಂದಿದ್ದಕ್ಕೆ ಕೇಂದ್ರದ ಮಲತಾಯಿ ಧೋರಣೆ ಹಾಗೂ ನಿರ್ಲಕ್ಷವೇ ಕಾರಣವಲ್ಲವೇ?. ಮೊದಲು ಕ್ರಮ ಕೈಗೊಳ್ಳಬೇಕಾದದ್ದು ಕಾರಣಕ್ಕೆ ಹೊರತು ಪರಿಣಾಮಕ್ಕಲ್ಲ. 

ಇದನ್ನೂ ಓದಿ-ಆ ಒಂದು ಮಾತಿನಿಂದ ಸಂಸದ ಡಿ.ಕೆ. ಸುರೇಶ್ ದೇಶದ್ರೋಹಿಯಾಗಿಬಿಟ್ಟರೆ?

“ಅನುದಾನ ಹಂಚಿಕೆಯಲ್ಲಿ ಅನ್ಯಾಯವಾಗಿದ್ದರೆ ಬಜೆಟ್ ಚರ್ಚೆ ವೇಳೆ ಮಾತಾಡಬೇಕು” ಎಂದು ಮಾನ್ಯ ದೇವೇಗೌಡರು ಸಲಹೆ ಕೊಟ್ಟಿದ್ದಾರೆ. ಆದರೆ ಮಾತಾಡುವವರು ಯಾರು? ಇವರ ಮೊಮ್ಮಗ ಪ್ರಜ್ವಲ್ ರವರನ್ನೂ ಸೇರಿಸಿ ಕರ್ನಾಟಕದ ಯಾವುದಾದರೂ ಸಂಸದರು ಕೇಂದ್ರದ ತಾರತಮ್ಯದ ಬಗ್ಗೆ ಇಲ್ಲಿವರೆಗೂ ಚರ್ಚಿಸಿದ್ದಾರಾ? ಬಿಜೆಪಿಯ  ಇಪ್ಪತ್ತಾರು ಸಂಸದರಲ್ಲಿ ಒಬ್ಬರಾದರೂ ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಬರಬೇಕಾದ ಪಾಲಿಗಾಗಿ ಯಾವತ್ತಾದರೂ ಒತ್ತಾಯಿಸಿದ್ದಾರಾ? ಈ ಹಿಂದೆ ರಾಜ್ಯದಲ್ಲಿ ಪ್ರವಾಹ ಬಂದಾಗ ರಾಜ್ಯದಲ್ಲೂ ಬಿಜೆಪಿ ಸರಕಾರವೇ ಇದ್ದಾಗ ಈ ಯಾವ ಸಂಸದರೂ ಕೇಂದ್ರದ ಪರಿಹಾರಕ್ಕೆ ಆಗ್ರಹಿಸಲಿಲ್ಲ ಹಣವನ್ನೂ ತರಲಿಲ್ಲ. ಈಗ ರಾಜ್ಯದಲ್ಲಿ ತೀವ್ರ ಬರ ಬಿದ್ದಿದೆ. ಈಗಿನ ಆಡಳಿತಾರೂಢ ಸರಕಾರ ಬರ ಪರಿಹಾರ ಕೊಡಿ ಎಂದು ಕೇಂದ್ರಕ್ಕೆ ಕೇಳುತ್ತಲೇ ಇದೆ. ಇಲ್ಲಿವರೆಗೂ ಒಂದು ಪೈಸೆ ಕೂಡಾ ಹಣ ಬಂದಿಲ್ಲ. ಈ ಯಾವ ಸಂಸದರೂ ಒತ್ತಾಯಿಸಲಿಲ್ಲ. ವಿಷಯ ಹೀಗಿರುವಾಗ ಬಜೆಟ್ ಮೇಲೆ ನಡೆವ ಚರ್ಚೆಯಲ್ಲಿ ಕರ್ನಾಟಕದ ಸಂಸದರು ಬಾಯಿಬಿಡಲು ಸಾಧ್ಯವೇ ಇಲ್ಲ. ಕರ್ನಾಟಕಕ್ಕೆ ತಾರತಮ್ಯ ತಪ್ಪುವುದಿಲ್ಲ.

ಆಕ್ರಮಣಕೋರ ಸಂಘ ಪರಿವಾರದ ನಾಯಕತ್ವಕ್ಕೆ ವಿಸ್ತರಣಾವಾದದಲ್ಲಿ ಅಪಾರ ನಂಬಿಕೆ. ಪಾಕಿಸ್ತಾನ, ಅಫ್ಘಾನಿಸ್ಥಾನ, ಬಾಂಗ್ಲಾ ಸೇರಿದಂತೆ ಭಾರತದ ಅಕ್ಕಪಕ್ಕದ ದೇಶಗಳನ್ನೆಲ್ಲಾ ಸೇರಿಸಿ ಅಖಂಡ ಭಾರತ ಕಟ್ಟುವ ಕನಸು ಸಂಘದ್ದಾಗಿದೆ. ಇಂತಹುದರಲ್ಲಿ ಪ್ರತ್ಯೇಕತೆಯ ಕೂಗು ಬಂದರೆ ಸುಮ್ಮನಿರಲು ಸಾಧ್ಯವೇ? ಯಥಾ ಪ್ರಕಾರ ಸಂಘದ ಸಾಕು ಕೂಸುಗಳಾದ ಕೂಗುಮಾರಿ ಮಾಧ್ಯಮಗಳು ದೇಶ ಇಬ್ಬಾಗವಾಗಿ ಹೋಯಿತೇನೋ ಎನ್ನುವ ರೇಂಜಿಗೆ ಬಾಯಿ ಬಡಿದುಕೊಳ್ಳುತ್ತಿವೆ. ಆದರೆ ಯಾರೂ ಕೇಂದ್ರ ಸರಕಾರದಿಂದ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ ಎಂದು ಧ್ವನಿ ಎತ್ತುತ್ತಿಲ್ಲ. ನಮ್ಮ ರಾಜ್ಯದ ಹಣವನ್ನು ಪಡೆದು ಪಾಲನ್ನು ಕೊಡದೇ ವಂಚಿಸಲಾಗುತ್ತಿದೆ ಎಂಬುದನ್ನು ವಿರೋಧಿಸುತ್ತಿಲ್ಲ. ಕೇಂದ್ರದ ದಬ್ಬಾಳಿಕೆಯಿಂದ ನಲುಗಿರುವ ಕನ್ನಡಿಗರೂ ಪ್ರತಿಭಟಿಸುತ್ತಿಲ್ಲ. ಎಲ್ಲರೂ ಅಖಂಡ ಭಾರತದ ಏಕತೆ ಬಗ್ಗೆ ಮಾತಾಡುತ್ತಿದ್ದಾರೆ. ಆದರೆ ಒಕ್ಕೂಟ ವ್ಯವಸ್ಥೆಯ ಮೇಲೆ ಕೇಂದ್ರ ಸರಕಾರದ ದಮನದ ಬಗ್ಗೆ ಹೇಳುತ್ತಿಲ್ಲ. ಗಟ್ಟಿ ಧ್ವನಿಯಲ್ಲಿ ಹೇಳಿದರೆ ಎಲ್ಲಿ ದೇಶದ್ರೋಹದ ಪಟ್ಟ ಗಟ್ಟಿಯಾಗುತ್ತದೋ ಎನ್ನುವ ಆತಂಕ. ಹೀಗೇ ಆದರೆ ಕರ್ನಾಟಕವು ಕೇಂದ್ರದ ದಾಳಿಕೋರರಿಗೆ ಸುಲಭದ ತುತ್ತಾಗುತ್ತದೆ. ನಕಲಿ ರಾಷ್ಟ್ರೀಯವಾದದ ಕೆಸರಲ್ಲಿ ಕರ್ನಾಟಕದ ಅಸ್ಮಿತೆಯೇ ಹೂತುಹೋಗುತ್ತದೆ. 

ಸಂಸದ ಸುರೇಶರವರ ಪ್ರತ್ಯೇಕ ದೇಶದ ಬೇಡಿಕೆ ತಪ್ಪಾಗಿ ಗೋಚರಿಸಬಹುದು. ಆದರೆ ಅದರ ಹಿಂದಿರುವ ಆತಂಕ ಆಕ್ರೋಶದಲ್ಲಿ ಮಾತ್ರ ತಪ್ಪಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಮೇಲೆ ಕೇಂದ್ರ ಸರಕಾರದ ದಾಳಿ ಹೀಗೆಯೇ ಮುಂದುವರೆದರೆ ದಕ್ಷಿಣ ಭಾರತದ ರಾಜ್ಯಗಳ ದಾಸ್ಯತನಕ್ಕೆ ಮುಕ್ತಿಯೆಂಬುದಿಲ್ಲ.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ, ಪತ್ರಕರ್ತರು

More articles

Latest article