ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿ ಹಾಗೂ ಕೈಗೊಳ್ಳಬೇಕಿರುವ ಜನಪರ ಕೆಲಸಗಳ ಕುರಿತು ಸಮಗ್ರ ಚರ್ಚೆ ನಡೆಸಲು ಮುಂದಿನ ಸಚಿವ ಸಂಪುಟ ಸಭೆಯನ್ನು ಕಲಬುರಗಿಯಲ್ಲಿ ನಡೆಸಲು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಸಂಪುಟದ ಎಲ್ಲ ಸಚಿವರು ಒಪ್ಪಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಈ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಉದ್ದೇಶದಿಂದ ಸಿಎಂ ಅವರಿಗೆ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಲು ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಹಾಗೂ ಸಚಿವರು ಸಭೆ ನಡೆಸಲು ಒಪ್ಪಿಗೆ ಸೂಚಿಸಿದ್ದು ಸಭೆಯ ದಿನಾಂಕ ಸದ್ಯದಲ್ಲೇ ನಿಗದಿಪಡಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ದಿಗಾಗಿ ಸಂವಿಧಾನ ಕಲಂ 371 ಕ್ಕೆ ತಿದ್ದುಪಡಿ ತಂದು ಜೆ ಸೇರಿಸಿ ಶಿಕ್ಷಣ, ಉದ್ಯೋಗ ಹಾಗೂ ಅನುದಾನ ಒದಗಿಸಿಕೊಡುವುದಕ್ಕೆ ವಿಶೇಷ ಸ್ಥಾನಮಾನ ಜಾರಿಗೆ ಬಂದು ದಶಕಗಳು ಕಳೆದಿರುವ ಈ ಸಂದರ್ಭದಲ್ಲಿ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿ ಈ ಭಾಗದ ಅಭಿವೃದ್ದಿಗೆ ಸಹಕಾರಿಯಾಗುವಂತ ಯೋಜನೆಗಳನ್ನು ಜಾರಿಗೊಳಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಇಡೀ ಸಚಿವ ಸಂಪುಟ ಕಲಬುರಗಿ ಗೆ ಆಗಮಿಸುತ್ತಿರುವುದು ಹರ್ಷ ತಂದಿದೆ. ನನ್ನ ಮನವಿಗೆ ಓಗೊಟ್ಟು ಸಭೆ ನಡೆಸಲು ಒಪ್ಪಿರುವ ಮುಖ್ಯಮಂತ್ರಿಗಳಿಗೆ ವೈಯಕ್ತಿಕವಾಗಿ ನನ್ನ,ನಮ್ಮ ಭಾಗದ ಎಲ್ಲ ಶಾಸಕರ ಹಾಗೂ ಈ ಭಾಗದ ಎಲ್ಲ ಜನರ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.
ಕಲಬುರಗಿ ಯಲ್ಲಿ ಸಚಿವ ಸಂಪುಟ ಸಭೆ ನಡೆಸುವುದರಿಂದ ಶಿಕ್ಷಣ, ಆರೋಗ್ಯ, ಮೂಲಭೂತ ಸೌಲಭ್ಯದಂತ ಕ್ಷೇತ್ರಗಳ ಅಭಿವೃದ್ದಿಗೆ ಸಹಕಾರಿಯಾಗಲಿದೆ ಮತ್ತು ಇದರಿಂದ ಮಹತ್ತರ ಬೆಳವಣಿಗೆಯಾಗಲಿದೆ.ಈ ಭಾಗದ ಅಭಿವೃದ್ದಿಗೆ ನಾನು ಹಾಗೂ ನಮ್ಮ ಸರ್ಕಾರ ಸದಾ ಕಟಿಬದ್ಧವಾಗಿದ್ದು ಉದ್ದೇಶಿತ ಸಭೆ ನಮ್ಮೆಲ್ಲ ಆಶೋತ್ತರಗಳಿಗೆ ಸ್ಪಂದಿಸಲಿದೆ ಎಂದು ಖರ್ಗೆ ಹೇಳಿದ್ದಾರೆ.

                                    