ಅತಿದಾರಿದ್ರ್ಯದ ನಿರ್ಲಕ್ಷಿತ ರೋಗ: ‘ನೋಮ’

Most read

ಭಾರತದಲ್ಲಿ 2010ಕ್ಕಿಂತ ಹಿಂದೆ ಪತ್ತೆಯಾಗದ ನೋಮ ಈಗ ಮತ್ತೆ ಕಾಣಿಸಿ ಕೊಂಡಿರುವುದು ನಮ್ಮ ಜನಾರೋಗ್ಯದ ಅಸಮಾನತೆಯ ಕಡೆ ಬೊಟ್ಟು ಮಾಡುತ್ತಿದೆ. ಆರ್ಥಿಕವಾಗಿ ಹಿಂದುಳಿದ ಆಫ್ರಿಕಾ ದೇಶದ ರೋಗವೆಂದೇ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ʼನೋಮʼ ಕರ್ನಾಟಕದಲ್ಲೂ ಇತ್ತೀಚೆಗೆ ವರದಿಯಾಗುತ್ತಿರುವುದು ನಮ್ಮನ್ನು ಎಚ್ಚರಿಸಬೇಕಿದೆ – ಡಾ ಸುಶಿ ಕಾಡನಕುಪ್ಪೆ, ಸಹ ಪ್ರಾಧ್ಯಾಪಕರು, ಸಮುದಾಯ ಆರೋಗ್ಯ ದಂತ ವೈದ್ಯಕೀಯ ವಿಭಾಗ.

ಉತ್ತರ ಕರ್ನಾಟಕದ ಅತ್ಯಂತ ಹಿಂದುಳಿದ ಹಳ್ಳಿ. ಬಡತನ ಮತ್ತು ಅಪೌಷ್ಟಿಕತೆ ಅಲ್ಲಿನ ಜನರ ನಿತ್ಯ ಬದುಕಿನಲ್ಲಿದೆ. ಅಲ್ಲಿನ 2 ವರ್ಷದ ಮಗುವಿಗೆ ಜ್ವರ ಬಂದಿದೆ. ಹಾಲು ಕುಡಿಯಲು, ಊಟ ಮಾಡಲು ನಿರಾಸಕ್ತಿ ಹೊಂದಿರುವ ತನ್ನ ಮಗುವನ್ನು ಕಂಡು ತಾಯಿಗೆ ಏನೂ ತೋಚದಾಗಿದೆ. ನೆರೆಹೊರೆಯವರು ಮಗುವಿಗೆ ಜ್ವರ ಬಂದಿದೆ, ಸ್ವಲ್ಪ ದಿನಗಳಲ್ಲಿ ಹೋಗುವುದು ಎಂದು ಸಮಾಧಾನ ಹೇಳಿ ಮನೆ ಮದ್ದು ಮಾಡಿದ್ದಾರೆ. ಒಂದು ವಾರವಾಗುವಷ್ಟರಲ್ಲಿ ಮಗು ಏನೂ ತಿನ್ನಲಾರದೆ ಅರೆ ಹೊಟ್ಟೆಯಲ್ಲಿ ಸಣಕಲಾಗಿದೆ. ವಾರದ ಹಿಂದೆ ಬಾಯಿಯಲ್ಲಿ ಸಣ್ಣ ಹುಣ್ಣು ಇದ್ದದ್ದನ್ನು ಗಮನಿಸಿದ್ದ ತಾಯಿಗೆ ಅದೇನೂ ದೊಡ್ಡ ವಿಷಯವಲ್ಲವೆಂದು ತೋಚಿತ್ತು. ಈಗ ಆ ಹುಣ್ಣು ಬಾಯಿಯ ಮೂಲಕ ಮುಖದ ಚರ್ಮವನ್ನು ಸೀಳಿ ಕೀವು ಸೋರುತ್ತಿದೆ. ಅಪಾರ ನೋವು ಮತ್ತು ಬಾಯಿಂದ ಏನೂ ಸೇವಿಸದ ಸ್ಥಿತಿಯಿಂದ ಮಗು ಅಳಲೂ ಸಾಧ್ಯವಾಗದಷ್ಟು ನಿತ್ರಾಣವಾಗಿದೆ. ಎರಡು ದಿನಗಳು ಕಳೆದಂತೆಯೇ ಹುಣ್ಣು ಮೇಲಿನ ದವಡೆ, ಮೂಗು ಮತ್ತು ಕೆನ್ನೆಯನ್ನು ಸಂಪೂರ್ಣ ತಿಂದು ಹಾಕಿದೆ. ಈಗ ಉಸಿರಾಡಲು ಮಗು ಕಷ್ಟಪಡುತ್ತಿದೆ. ಮುಖ ಅತ್ಯಂತ ವಿಕಾರವಾಗಿ ಕಾಣುತ್ತಿದೆ. ದಿಕ್ಕು ತೋಚದ ತಾಯಿಗೆ ದೊಡ್ಡಾಸ್ಪತ್ರೆಗೆ ಹೋಗಲು ಯಾರೋ ಹೇಳುತ್ತಾರೆ. ಆಸ್ಪತ್ರೆ 250 ಕಿಮೀ ದೂರದಲ್ಲಿದೆ! ದುಡ್ಡು ಹೊಂದಿಸಿಕೊಂಡು ಮೂರು ಬಸ್ಸು ಹಿಡಿದು ಆಸ್ಪತ್ರೆ ತಲುಪುವ ಹೊತ್ತಿಗೆ ಮತ್ತೆರಡು ದಿನಗಳಾಗುತ್ತವೆ. ಮಗು ಸಂಪೂರ್ಣ ನಿಶಕ್ತಿಗೊಂಡು ಆಸ್ಪತ್ರೆಯ ವೈದ್ಯಕೀಯ ಚಿಕಿತ್ಸೆ ಫಲಕಾರಿಯಾಗದೆ ಜೀವ ಬಿಡುತ್ತದೆ.

ಇದು ‘ನೋಮ’ (ಕ್ಯಾಂಕ್ರಮ್ ಓರಿಸ್) ಎಂಬ ರೋಗದಿಂದ ಎದುರಾಗುವ ಸಾವಿನ ರೀತಿ. ರೋಗ ಶುರುವಾದ ಎರಡು ವಾರದೊಳಗೆ ಚಿಕಿತ್ಸೆ ಸ್ವಲ್ಪ ಮಟ್ಟಿಗೆ ಉಪಯೋಗವಾಗಬಹುದು. ಆದರೆ ಎರಡರಿಂದ ನಾಲ್ಕು ವಾರಗಳಲ್ಲಿ ನೋಮ ಅತ್ಯಂತ ವೇಗವಾಗಿ ಆವರಿಸಿ ಇಡೀ ಮುಖವನ್ನು ತಿಂದು ಬಿಡುತ್ತದೆ. ಈ ಅವಧಿಯಲ್ಲಿ ಚಿಕಿತ್ಸೆ ಫಲಕಾರಿಯಾಗದು. ಈ ಸೋಂಕಿಗೆ ಮೂಲ ಕಾರಣ ಅಪೌಷ್ಟಿಕತೆ. ಅತಿ ಬಡತನದಲ್ಲಿ ಬಳಲುವ ಅಂಚಿನಲ್ಲಿರುವ ಸಮುದಾಯಗಳಲ್ಲಿ ಮಾತ್ರ ‘ನೋಮ’ ಕಾಣಿಸಿಕೊಳ್ಳುತ್ತದೆ.

ನೋಮ ಬೆಳವಣಿಗೆಯ ಹಂತದಲ್ಲಿರುವ ಅತಿ ಸಣ್ಣ ವಯಸ್ಸಿನ ಮಕ್ಕಳಲ್ಲೇ (2 ರಿಂದ 6 ವರ್ಷಗಳು) ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅಂಚಿನ ಸಮುದಾಯದ ಈ ಮಕ್ಕಳು ಸಾಮಾನ್ಯವಾಗಿ ಅಪೌಷ್ಟಿಕತೆ ಮತ್ತು ಭಯಾನಕ ಸೋಂಕುಗಳಾದ ಮಲೇರಿಯಾ, ಎಚ್.ಐ.ವಿ, ದಡಾರ ಮುಂತಾದವುಗಳಿಂದ ಬಳಲುವುದು ಹೆಚ್ಚು. ಹಾಗೆಯೇ ಆಹಾರ ಅಭದ್ರತೆ, ಬಡತನ, ಕುಡಿಯಲು ಯೋಗ್ಯವಾದ ನೀರು ಮತ್ತು ಶುಚಿತ್ವದ ಕೊರತೆ; ಜಾನುವಾರುಗಳ ಸನಿಹ ವಾಸಮಾಡುವುದು ಈ ರೋಗದಿಂದ ಬಳಲುವ ಮಕ್ಕಳ ಸಮುದಾಯಗಳಲ್ಲಿ ಕಂಡುಬಂದಿದೆ. ಈ ಪರಿಸ್ಥಿತಿಯಲ್ಲಿ ಬದುಕುವ ಮಕ್ಕಳ ರೋಗನಿರೋಧಕ ಶಕ್ತಿ ದುರ್ಬಲ ಗೊಂಡಿರುತ್ತದೆ. ಸಮಾಜದ ಅಸಮಾನತೆಯ ನೆರಳಿನಲ್ಲಿ ಹುಟ್ಟಿರುವ ಈ ರೋಗವನ್ನು ‘ಬಡತನದ ಮುಖ’ವೆಂದೇ ಬಣ್ಣಿಸಲಾಗುತ್ತದೆ. ಕ್ಯಾನ್ಸರ್ ಮತ್ತು ಇತರ ಕಾರಣಗಳಿಂದ ರೋಗನಿರೋಧಕ ಶಕ್ತಿ ಕಳೆದುಕೊಂಡ ಅತಿ ದುರ್ಬಲ ಆರೋಗ್ಯದ ವಯಸ್ಕರಲ್ಲೂ ಇದು ಅಪರೂಪಕ್ಕೆ ಕಾಣಿಸಿಕೊಳ್ಳುತ್ತದೆ.

ಪಶ್ಚಿಮ ಆಫ್ರಿಕಾದ ಅತಿ ಬಡ ದೇಶಗಳಲ್ಲಿ ‘ನೋಮ’ ಹೆಚ್ಚು ದಾಖಲಾಗಿದೆ. ಭಾರತದಲ್ಲಿ ಈ ರೋಗದ ಪ್ರಕರಣಗಳ ಸರಿಯಾದ ದಾಖಲೆಗಳು ಇಲ್ಲ. ಜಾಗತಿಕ ಮಟ್ಟದಲ್ಲೂ ಈ ರೋಗದ ಅಧ್ಯಯನಗಳು ಬಹಳ ಕಡಿಮೆ. ಅತಿ ಬಡತನದ ಸಮುದಾಯದ ರೋಗವಾದ್ದರಿಂದಲೋ ಏನೋ ಇದು ಅತ್ಯಂತ ನಿರ್ಲಕ್ಷಿತ ಅಧ್ಯಯನ ವಸ್ತುವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯೂ ನೋಮ ಪ್ರಕರಣಗಳ ಅಂಕಿಅಂಶಗಳನ್ನು 1998ರಿಂದೀಚೆಗೆ ನೀಡಿಲ್ಲ. 1998ರ ವರದಿಯ ಪ್ರಕಾರ ವಿಶ್ವದಲ್ಲಿ ಪ್ರತಿ ವರ್ಷ 140,000 ನೋಮ ಪ್ರಕರಣಗಳು ಉಂಟಾಗಬಹುದೆಂದು ಅಂದಾಜಿಸಲಾಗಿದೆ. ಆದರೆ ಈಗಿನ ಪರಿಸ್ಥಿತಿಯ ಬಗ್ಗೆ ಯಾವುದೇ ಅಂದಾಜುಗಳು-ಅಂಕಿಅಂಶಗಳನ್ನು ನೀಡದೇ ಇರುವುದು ವಿಪರ್ಯಾಸ. ಇತ್ತೀಚೆಗಷ್ಟೇ 2023ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನೋಮವನ್ನು ನಿರ್ಲಕ್ಷಿತ ಉಷ್ಣವಲಯದ ರೋಗಗಳ ಪಟ್ಟಿಗೆ ಸೇರಿಸಿದೆ.

1950-2019ರ ಅವಧಿಯ ಅಧ್ಯಯನಗಳ ಪ್ರಕಾರ ನೋಮ 88 ದೇಶಗಳಲ್ಲಿ ಗುರುತಿಸಲ್ಪಟ್ಟಿದ್ದು, ನಿಗೆರ್, ಸೆನೆಗಲ್, ಮಾಲಿ, ಟೋಗೊ ಮತ್ತು ಜಾಂಬಿಯಾದಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದಿವೆ. ಭಾರತದಲ್ಲಿ ಮೊದಲ ದಾಖಲೆ 1880ರಲ್ಲಿ ನಮ್ಮ ದೇಶದಲ್ಲಿ ನೆಲೆಸಿದ್ದ ಐರಿಶ್ ಮತ್ತು ಬ್ರಿಟೀಷ್ ಯೋಧರ ಸಮುದಾಯದಲ್ಲಿ ಕಂಡುಬಂದರೂ, 1950ರಿಂದ 2010ರವರೆಗೆ ಯಾವುದೇ ವರದಿಗಳು ಇಲ್ಲ. 2010-2019ರ ನಡುವೆ ಮಾತ್ರ ಭಾರತದ ರಾಜ್ಯಗಳಿಂದ ಸರಾಸರಿ 12 ಪ್ರಕರಣಗಳು ವರದಿಯಾಗಿವೆ. ಇವುಗಳಲ್ಲಿ ಉತ್ತರ ಕರ್ನಾಟಕದ ಅಂಚಿನ ಸಮುದಾಯಗಳ ಮಕ್ಕಳಲ್ಲಿ ಸುಮಾರು 1 ರಿಂದ 5 ಪ್ರಕರಣಗಳು ವರದಿಯಾಗಿರುವುದು ಆತಂಕಕಾರಿ ಅಂಶವಾಗಿದೆ. ಬಾಗಲಕೋಟೆಯ ಕೆರೂಡಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ 27 ವರ್ಷ ವಯಸ್ಸಿನ ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಹಿಳೆಯಲ್ಲಿ ನೋಮ ಪತ್ತೆಯಾಗಿರುವುದನ್ನು 2018ರ ವೈದ್ಯಕೀಯ ಕೇಸ್ ವರದಿ ತಿಳಿಸುತ್ತದೆ. ಇದು ಮಕ್ಕಳ ಮೇಲಷ್ಟೇ ಅಲ್ಲದೆ ವಯಸ್ಕರಲ್ಲೂ ನೋವು ಕಾಣಿಸಿಕೊಳ್ಳಬಹುದೆಂದು ತೋರಿಸುವ ಕರ್ನಾಟಕದ ಮೊದಲ ವರದಿಯಾಗಿದೆ.

ಭಾರತದಲ್ಲಿ 2010ಕ್ಕಿಂತ ಹಿಂದೆ ಪತ್ತೆಯಾಗದ ನೋಮ ಈಗ ಮತ್ತೆ ಕಾಣಿಸಿಕೊಂಡಿರುವುದು ನಮ್ಮ ಜನಾರೋಗ್ಯದ ಅಸಮಾನತೆಯ ಕಡೆ ಬೊಟ್ಟು ಮಾಡುತ್ತಿದೆ. ಆರ್ಥಿಕವಾಗಿ ಹಿಂದುಳಿದ ಆಫ್ರಿಕಾ ದೇಶದ ರೋಗವೆಂದೇ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ನೋಮ ಕರ್ನಾಟಕದಲ್ಲೂ ಇತ್ತೀಚೆಗೆ ವರದಿಯಾಗುತ್ತಿರುವುದು ನಮ್ಮನ್ನು ಎಚ್ಚರಿಸಬೇಕಿದೆ. ಪ್ರಾಥಮಿಕ ಆರೋಗ್ಯ ಸೇವೆಗಳು, ಆಹಾರ ಭದ್ರತೆಗಾಗಿ ಇರುವ ಅಂಗನವಾಡಿ ಮತ್ತು ಪಡಿತರ ಯೋಜನೆಗಳು ಅತಿಬಡತನದಿಂದ ಬಳಲುತ್ತಿರುವ ಅಂಚಿನ ಸಮುದಾಯಗಳಾದ ಆದಿವಾಸಿ ಮತ್ತು ತಳಜಾತಿ ಸಮುದಾಯಗಳನ್ನು ತಲುಪುವಲ್ಲಿ ಎಡವಿವೆ. ಅಷ್ಟೇ ಅಲ್ಲದೆ ದೇಶದ ಆರ್ಥಿಕ ನೀತಿಗಳಿಂದ ಬಳಲುತ್ತಿರುವ ಸಣ್ಣ ಮತ್ತು ಮಧ್ಯಮ ಉದ್ಯಮಗಳು ನಿರುದ್ಯೋಗ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿ ಬಡತನದ ಬೇನೆಯನ್ನು ಹೆಚ್ಚಿಸುತ್ತಿವೆ.

ಅವೈಜ್ಞಾನಿಕ ಅಭಿವೃದ್ಧಿ ಯೋಜನೆಗಳಿಂದ ಉಂಟಾಗುವ ಹವಾಮಾನ ವೈಪರೀತ್ಯ ಮತ್ತು ಪರಿಸರ ವಿಕೋಪಗಳು ನೋಮ ಮರುಹುಟ್ಟಿಗೆ ಕಾರಣವಾಗುತ್ತಿವೆ. ಮಾನವ ನಿರ್ಮಿತ ಪರಿಸರ ವಿಕೋಪಗಳಿಂದ ಸೃಷ್ಟಿಯಾಗುವ ಆಹಾರ ಮತ್ತು ಆರ್ಥಿಕ ಅಭದ್ರತೆ, ಶುಚಿ ನೀರಿನ ಕೊರತೆ, ಸ್ಥಳಾಂತರದ ತೊಂದರೆಗಳು ಹಾಗೂ ತಾಯಿ-ಮಕ್ಕಳ ಆರೋಗ್ಯ ಸೇವೆಗಳ ಅಭಾವ ಅಂಚಿನ ಸಮುದಾಯಗಳನ್ನು ನೋಮದಂಥ ಭಯಾನಕ ರೋಗಗಳಿಗೆ ತುತ್ತಾಗಲು ಕಾರಣವಾಗುತ್ತವೆ. ಅಪೌಷ್ಟಿಕತೆ ಮತ್ತು ಬಡತನದ ನೆರಳಿನಲ್ಲಿ ಹುಟ್ಟುವ ‘ನೋಮ’ ನಮ್ಮ ಸಾಮಾಜಿಕ ಪ್ರಜ್ಞೆಯ ದಿಕ್ಕಿಗೆ ಹಿಡಿದ ಕನ್ನಡಿಯಾಗಿದೆ. ಈ ಜನಾರೋಗ್ಯದ ಅಸಮಾನತೆಯನ್ನು ಪರಿಹರಿಸಲು ನಮ್ಮ ದೇಶದ ಆರ್ಥಿಕ, ಕೃಷಿ, ಪರಿಸರ ಮತ್ತು ಶಿಕ್ಷಣ ನೀತಿಗಳ ಪರಾಮರ್ಶೆಯಾಗಬೇಕು. ಇದಕ್ಕೆ ಬುನಾದಿಯಾಗಿ ನಮ್ಮ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಪರಿಕಲ್ಪನೆಗಳು ಸಮಸಮಾಜದ ಉದ್ದೇಶವನ್ನು ಎತ್ತಿಹಿಡಿಯಬೇಕಾಗಿದೆ.

ಡಾ. ಸುಶಿ ಕಾಡನಕುಪ್ಪೆ, ಸಹ ಪ್ರಾಧ್ಯಾಪಕರು,

ಸಮುದಾಯ ಆರೋಗ್ಯ ದಂತವೈದ್ಯಕೀಯ ವಿಭಾಗ,

ವಿ.ಎಸ್.ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಬೆಂಗಳೂರು.

9535205012

More articles

Latest article