Sunday, September 8, 2024

ಮುಳುಗುತ್ತಿರುವ ಮೋದಿ ಕೈಗೆ ಮುಸ್ಲಿಂ ಜನಸಂಖ್ಯಾಸ್ತ್ರ

Most read

ಹೋದಲ್ಲೆಲ್ಲಾ ಪುಂಖಾನು ಪುಂಖವಾಗಿ ಮುಸ್ಲಿಂ ವಿರೋಧಿ  ಭಾಷಣಗಳನ್ನು ಮಾಡಿದರಾದರೂ ಮೋದಿಯ ಸುಳ್ಳುಗಳು ಮತಗಳಾಗಿ ಪರಿವರ್ತನೆಯಾಗುವುದು ಸಂದೇಹವೆಂದು ಗೊತ್ತಾಗುವಷ್ಟರಲ್ಲಿ ಮೋದಿಯವರಿಗೆ ಸೋಲಿನ ವಾಸನೆ ಬಂದಾಗಿತ್ತು. ಇನ್ನೂ ಐದು ಹಂತಗಳ ಚುನಾವಣೆ ಇರುವುದರಿಂದ ಜನರನ್ನು ನಂಬಿಸಿ ಮತಬೇಟೆಯಾಡಲು ಯಾವುದಾದರು ವಿಶ್ವಾಸಾರ್ಹ ಸುಳ್ಳನ್ನು ಸೃಷ್ಟಿಸುವ ಅಗತ್ಯವಿತ್ತು. ಅದಕ್ಕೆ ಹಿಂದೂ ಮುಸ್ಲಿಮರ ಜನಸಂಖ್ಯೆ ಪ್ರಮಾಣದ ಕುರಿತು ವರದಿಯೊಂದನ್ನು ಬಿಡುಗಡೆಮಾಡಿಸಿದರು – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು

“ಹೀಗಾದ್ರೆ ಹೇಗೆ? ಮುಸ್ಲಿಂ ಜನಸಂಖ್ಯೆ 43% ಏರಿಕೆಯಾಗಿದೆಯಂತೆ. ನಮ್ಮ ಹಿಂದೂಗಳ ಜನಸಂಖ್ಯೆ 7.80% ಇಳಿಕೆಯಾಗಿದೆಯಂತೆ. ಹೀಗೆ ಮುಂದುವರೆದರೆ ಮುಸಲ್ಮಾನರ ಸಂಖ್ಯೆ ಜಾಸ್ತಿಯಾಗಿ, ಹಿಂದೂಗಳ ಸಂಖ್ಯೆ ಕಡಿಮೆಯಾಗಿ ಈ ನಮ್ಮ ಭಾರತ ದೇಶ ಮುಸ್ಲಿಂ ದೇಶವಾಗುವುದರಲ್ಲಿ ಸಂದೇಹವೇ ಇಲ್ಲ” ಎಂಬ ರೂಮರನ್ನು ದೇಶಾದ್ಯಂತ ಹಬ್ಬಿಸಲು ಪ್ರಧಾನಿ ಮೋದಿಯವರು ಆರಂಭಿಸಿದ್ದಾರೆ.

ಮೂರು ಹಂತಗಳ ಮತದಾನದ ನಂತರ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಬಹುಮತ ಬರುವುದು ಕಷ್ಟಸಾಧ್ಯವೆಂದು ಗೊತ್ತಾದ ತಕ್ಷಣ ಧರ್ಮಾಧಾರಿತವಾಗಿ ದೇಶವನ್ನು ಒಡೆದು ಹಿಂದೂ ಮತಗಳನ್ನು ಪಡೆಯುವ ದುಷ್ಟ ಕೆಲಸಕ್ಕೆ ಮೋದಿಯವರು ಚಾಲನೆ ಕೊಟ್ಟಿದ್ದಾರೆ. ಮೊದಲ ಹಂತದ ಮತದಾನದ ನಂತರ ‘ಕಾಂಗ್ರೆಸ್ ಮುಸ್ಲಿಮರನ್ನು ತುಷ್ಟೀಕರಣ ಮಾಡುತ್ತಿದೆ’ ಎಂದು ಮೋದಿ ಭಾಷಣ ಮಾಡಿದರು. ಅದು ಯಾವುದೇ ಪರಿಣಾಮ ಬೀರಲಿಲ್ಲ. ಕಾಂಗ್ರೆಸ್ ಆಡಳಿತಕ್ಕೆ ಬಂದರೆ ‘ಹಿಂದೂ ಮಹಿಳೆಯರ ಮಂಗಳಸೂತ್ರ ಸೇರಿದಂತೆ ಹಿಂದೂಗಳ ಚಿನ್ನ ಆಸ್ತಿಯನ್ನು ಕಿತ್ತುಕೊಂಡು ಹೆಚ್ಚು ಮಕ್ಕಳಿರುವ ಮುಸ್ಲಿಮರಿಗೆ ಹಂಚುತ್ತದೆ’ ಎಂದು ಮಹಿಳೆಯರನ್ನು ಕಾಂಗ್ರೆಸ್ ವಿರುದ್ಧ ಎತ್ತಿಕಟ್ಟಲು ನೋಡಿದರು, ಆದರೆ ಅದೂ ಸಹ ಅವರು ಅಂದುಕೊಂಡಷ್ಟು ಹೆಚ್ಚು ಫಲ ನೀಡಲಿಲ್ಲ. ‘ಎಸ್ಸಿ ಎಸ್ಟಿ ಮೀಸಲಾತಿಯನ್ನು ಕಿತ್ತುಕೊಂಡು ಕಾಂಗ್ರೆಸ್ ಮುಸಲ್ಮಾನರಿಗೆ ಕೊಡುತ್ತದೆ’ ಎಂದು ಪ್ರಚಾರ ಭಾಷಣದಲ್ಲಿ ಹೇಳಿ ಕಾಂಗ್ರೆಸ್ ವಿರುದ್ಧ ಪರಿಶಿಷ್ಟ ಜಾತಿ ಪಂಗಡಗಳನ್ನು ಎತ್ತಿ ಕಟ್ಟಲು ಪ್ರಯತ್ನಿಸಿದರು. ಅದನ್ನೂ ಜನರು ಕುರುಡಾಗಿ ನಂಬಲಿಲ್ಲ.

ಹೀಗೆ ಹೋದಲ್ಲೆಲ್ಲಾ ಪುಂಖಾನು ಪುಂಖವಾಗಿ ಮುಸ್ಲಿಂ ವಿರೋಧಿ  ಭಾಷಣಗಳನ್ನು ಮಾಡಿದರಾದರೂ ಮೋದಿಯ ಸುಳ್ಳುಗಳನ್ನು ಕೇಳಿ ಬೇಸತ್ತ ಜನಸಮೂಹ ಈ ಸಲ ಸಮೂಹ ಸನ್ನಿಗೊಳಗಾಗಲಿಲ್ಲ. ತಮ್ಮ ಈ ಯಾವ ಸುಳ್ಳುಗಳೂ ಮತಗಳಾಗಿ ಪರಿವರ್ತನೆಯಾಗುವುದು ಸಂದೇಹವೆಂದು ಗೊತ್ತಾಗುವಷ್ಟರಲ್ಲಿ ಮೂರು ಹಂತಗಳ ಮತದಾನ ಮುಗಿದಾಗಿತ್ತು. ಮೋದಿಯವರಿಗೆ ಸೋಲಿನ ವಾಸನೆ ಬಂದಾಗಿತ್ತು. ಇನ್ನೂ ಐದು ಹಂತಗಳ ಚುನಾವಣೆ ಇರುವುದರಿಂದ ಜನರನ್ನು ನಂಬಿಸಿ ಮತಬೇಟೆಯಾಡಲು ಯಾವುದಾದರು ವಿಶ್ವಾಸಾರ್ಹ ಸುಳ್ಳನ್ನು ಸೃಷ್ಟಿಸುವ ಅಗತ್ಯವಿತ್ತು. ಅದಕ್ಕೆ ಹಿಂದೂ ಮುಸ್ಲಿಮರ ಜನಸಂಖ್ಯೆ ಪ್ರಮಾಣದ ಕುರಿತು ‘ಪ್ರಧಾನಿಯ ಆರ್ಥಿಕ ಸಲಹಾ ಸಮಿತಿ’ಯಿಂದ ವರದಿಯೊಂದನ್ನು ಬಿಡುಗಡೆಮಾಡಿಸಿ ತಮ್ಮ ಭಾಷಣಕ್ಕೆ ಸಾಕ್ಷಿ ಪುರಾವೆ ಒದಗಿಸುವ ಕೆಲಸವನ್ನು ಮೋದಿಯವರು ಮಾಡಿದರು.

ಅಂತಾದ್ದೇನಿದೆ ಆ ವರದಿಯೊಳಗೆ?

 “ದೇಶದ ಜನಸಂಖ್ಯೆಯಲ್ಲಿ ಮುಸ್ಲಿಮರ ಪ್ರಮಾಣ 1950 ರಿಂದ 2015 ರ ನಡುವೆ ಶೇ.43 ರಷ್ಟು ಏರಿಕೆಯಾಗಿದೆ. ಹಾಗೂ ಅದೇ ಅವಧಿಯಲ್ಲಿ ಹಿಂದೂಗಳ ಪ್ರಮಾಣ ಶೇ.7.8 ರಷ್ಟು ಇಳಿಕೆಯಾಗಿದೆ” ಎಂಬುದು ಈ ವರದಿಯ ಸಾರಾಂಶ. ಬೇರೆ ಯಾವುದೋ ನಂಬಲರ್ಹ ರಾಜಕೀಯೇತರ ಸಂಸ್ಥೆಯೊಂದು ಅಧ್ಯಯನ ಮಾಡಿ ಇಂತಹ ವರದಿಯನ್ನು ಕೊಟ್ಟಿದ್ದರೆ ಯೋಚಿಸ ಬಹುದಾಗಿತ್ತು. ಆದರೆ ತರಾತುರಿಯಲ್ಲಿ, ಚುನಾವಣೆಯ ನಡುಮಧ್ಯದಲ್ಲಿ ಇಂತಹ ಸುಳ್ಳು ಡಾಟಾಗಳಿರುವ ವರದಿಯನ್ನು ಕೊಟ್ಟಿದ್ದು ಪ್ರಧಾನಿಯವರ ಆರ್ಥಿಕ ಸಲಹಾ ಸಮಿತಿಯ ಅಧಿಕಾರಿಗಳು. ಈ ವರದಿಯನ್ನು ಇಟ್ಟುಕೊಂಡೇ ಮೋದಿಯವರು ಹಿಂದೂಗಳನ್ನು ಮುಸಲ್ಮಾನರ ವಿರುದ್ಧ ತಿರುಗಿಸಿ ಹಿಂದೂ ಮತಗಳನ್ನು ಕ್ರೋಢೀಕರಿಸಲು ಬಳಸುವ ತಂತ್ರಗಾರಿಕೆಯನ್ನು ಹೂಡಿದರು. ಆದರೆ.. ಈ ವರದಿಯನ್ನು ಬಿಡುಗಡೆ ಮಾಡಿದ ಸಮಿತಿಯು “ಈ ವರದಿಯಲ್ಲಿ ಇರುವ ವಿವರಗಳು, ದತ್ತಾಂಶಗಳು ಮತ್ತು ಅಭಿಪ್ರಾಯಗಳು ಲೇಖಕರಿಗೆ ಮಾತ್ರ ಸಂಬಂಧಿಸಿದ್ದು” ಎಂದು ಅಡಿಟಿಪ್ಪಣಿಯನ್ನೂ ಬರೆದು ವರದಿಯ ವಿಶ್ವಾಸಾರ್ಹತೆಯ ಹೊಣೆಗಾರಿಕೆಯಿಂದ ನುಣುಚಿ ಕೊಂಡಿದೆ. ಆದರೆ ಅಡಿಟಿಪ್ಪಣಿಯನ್ನು ಕೈಬಿಟ್ಟು ತಮಗೆ ಬೇಕಾದ್ದನ್ನು ಮಾತ್ರ ದೊಡ್ಡ ಧ್ವನಿಯಲ್ಲಿ ಹೇಳತೊಡಗಿದ ಮೋದಿಯವರಿಗೆ ಹೇಗಾದರೂ ಮಾಡಿ ಹಿಂದೂ ಮತಗಳನ್ನೆಲ್ಲಾ ಬಾಚಿ ತಮ್ಮ ಬುಟ್ಟಿಗೆ ಹಾಕಿಕೊಳ್ಳಬೇಕು ಎನ್ನುವುದೊಂದೇ ಗುರಿಯಾಗಿದೆ. ಬಿಜೆಪಿ ಪಕ್ಷದವರಿಗೂ ಅದೇ ಬೇಕಾಗಿದೆ. ಗೋದಿ ಮಾಧ್ಯಮಗಳು ಮೋದಿ ಮಾತಿಗೆ ಸಮರ್ಥನೆ ಕೊಡುವುದಕ್ಕೆ ಬದ್ಧವಾಗಿವೆ.

ಆದರೆ.. ಅವಸರದಲ್ಲಿ ಮೋದಿಯವರ ಅನುಕೂಲಕ್ಕೆ ತಕ್ಕಂತೆ ತಯಾರಿಸಲಾದ ಈ ವರದಿಯಲ್ಲಿ ಮೇಲ್ನೋಟಕ್ಕೆ ಹಲವಾರು ದೋಷಗಳಿವೆ. ‘1950-2015 ನಡುವೆ ಅಂದರೆ 65 ವರ್ಷಗಳಲ್ಲಿ ಮುಸ್ಲಿಮರ ಜನಸಂಖ್ಯೆ ಶೇ.9.8 ರಿಂದ ಶೇ.14.09 ರಷ್ಟು ಏರಿಕೆಯಾಗಿದೆ. ಮುಸ್ಲಿಂ ಜನಸಂಖ್ಯೆಗೆ ಹೋಲಿಸಿದರೆ ಇದು ಶೇ.43 ರಷ್ಟಾಗುತ್ತದೆ ಹಾಗೂ ಹಿಂದೂಗಳ ಜನಸಂಖ್ಯೆ ಶೇ.84.68 ರಿಂದ ಶೇ.78.06 ಕ್ಕೆ ಅಂದರೆ ಶೇ.7.8 ರಷ್ಟು ಇಳಿಕೆಯಾಗಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ.. ಸ್ವಾತಂತ್ರ್ಯಾ ನಂತರ ಭಾರತದಲ್ಲಿ ಮೊದಲ ಬಾರಿ ಜನಗಣತಿ ನಡೆದಿದ್ದೇ 1951 ರಲ್ಲಿ. ಆದರೆ 1950 ರ ಕುರಿತ ದತ್ತಾಂಶ ಈ ವರದಿಯ ಸೃಷ್ಟಿಕರ್ತರಿಗೆ ಎಲ್ಲಿಂದ ದೊರಕಿತು?. ಅದೇ ರೀತಿ ಕೊನೆಯ ಬಾರಿ ಭಾರತದಲ್ಲಿ ಜನಗಣತಿ ನಡೆದದ್ದೇ 2011 ರಲ್ಲಿ. ಹಾಗಾದರೆ 2012 ರಿಂದ 2015 ರ ವರೆಗಿನ ಧರ್ಮಾಧಾರಿತ ಜನಸಂಖ್ಯೆಯ ದತ್ತಾಂಶವನ್ನು ಈ ವರದಿಗಾರರು ಎಲ್ಲಿಂದ ಸೃಷ್ಟಿಸಿ ತಂದರು?.

“ಧಾರ್ಮಿಕ ಅಲ್ಪಸಂಖ್ಯಾತರಿಗೆ ಸಂಬಂಧಿಸಿದಂತೆ ಸರ್ಕಾರಗಳು ವಿಶೇಷ ಹಕ್ಕು ಹಾಗೂ ರಕ್ಷಣೆಯನ್ನು ಒದಗಿಸುವುದರಿಂದಲೇ ಮುಸ್ಲಿಮರ ಜನಸಂಖ್ಯೆ ವಿಪರೀತ ಹೆಚ್ಚಾಗಿದೆ. ಇದೇ ನಮ್ಮ ಅಧ್ಯಯನದ ಕೇಂದ್ರ ವಿಷಯ” ಎಂದು ವರದಿಯಲ್ಲಿ ತಿಳಿಸಲಾಗಿದೆ. ಆಯ್ತು, ಸರಕಾರ ಒದಗಿಸುವ ಆ ವಿಶೇಷ ಹಕ್ಕು ರಕ್ಷಣೆಗಳಾದರೂ ಯಾವುವು ಹಾಗೂ ಜನಸಂಖ್ಯೆ ಹೆಚ್ಚಳಕ್ಕೂ ಈ ಹಕ್ಕುಗಳಿಗೂ ಏನು ಸಂಬಂಧ ಎಂದು ಯಾಕೆ ವರದಿಯಲ್ಲಿ ಹೇಳಿಲ್ಲ?. ಹೋಗಲಿ ಸಂವಿಧಾನವು  ಧಾರ್ಮಿಕ ಸ್ವಾತಂತ್ರ್ಯ, ಹಕ್ಕುಗಳನ್ನು ಎಲ್ಲಾ ಧರ್ಮೀಯರಿಗೂ ಕೊಟ್ಟಿದೆ. ಅವುಗಳನ್ನು ಬಳಸಿಕೊಂಡು ಕ್ರಿಶ್ಚಿಯನ್ನರು, ಜೈನರು, ಪಾರ್ಸಿಗಳ ಜನಸಂಖ್ಯೆ ಯಾಕೆ ಹೆಚ್ಚಾಗಿಲ್ಲಾ? ಅಂದರೆ ಸಂವಿಧಾನ ಒದಗಿಸಿದ ಹಕ್ಕು ರಕ್ಷಣೆಗಳಿಗೂ ಜನಸಂಖ್ಯೆಗೂ ಯಾವುದೇ ಸಂಬಂಧ ಇಲ್ಲ. ಆದರೆ ಈ ತರ್ಕ ಈ ಮೋದಿ ಪ್ರೇರಿತ ವರದಿ ತಯಾರಕರಿಗೆ ಬೇಕಾಗಿಲ್ಲ.

“ಧಾರ್ಮಿಕ ಅಲ್ಪಸಂಖ್ಯಾತರ ಜನಸಂಖ್ಯೆ ಹೆಚ್ಚಾಗಲು ನೆರೆಹೊರೆ ದೇಶಗಳಿಂದಾದ ವಲಸೆ, ನಿರಾಶ್ರಿತರಿಗೆ ಆಶ್ರಯ ಹಾಗೂ ಆಯಾ ಜನರ ಫಲವಂತಿಕೆಯ ಮಟ್ಟ ಕಾರಣವಾಗಿದ್ದರೂ ನಮ್ಮ ಅಧ್ಯಯನದಲ್ಲಿ ನಾವು ಸರ್ಕಾರದ ವಿಶೇಷ ಹಕ್ಕು ಮತ್ತು ರಕ್ಷಣೆಗಳ ಬಗ್ಗೆ ಮಾತ್ರ ಗಮನ ಹರಿಸಿದ್ದೇವೆ” ಎಂದು ಈ ವರದಿ ತಯಾರಕರೇ ವರದಿಯಲ್ಲಿ ಸ್ಪಷ್ಟ ಪಡಿಸಿದ್ದಾರೆ. ಅಂದರೆ ಈ ಮೋದಿ ನಿಯಂತ್ರಣದ ಅಧಿಕಾರಿಗಳಿಗೆ ಸತ್ಯಾಂಶ ಬೇಕಾಗಿಲ್ಲ. 2015 ಕ್ಕಿಂತಲೂ ಮುಂಚೆ ಅಂದರೆ ಮೋದಿ ಸರಕಾರ ಅಧಿಕಾರಕ್ಕೆ ಬರುವುದಕ್ಕಿಂತಲೂ ಮುಂಚೆ ಇದ್ದ ಕಾಂಗ್ರೆಸ್ ಸರಕಾರವು ಅಲ್ಪಸಂಖ್ಯಾತರಿಗೆ ಅದರಲ್ಲೂ ಮುಸ್ಲಿಮರಿಗೆ ವಿಶೇಷ ಹಕ್ಕುಗಳನ್ನು ಹಾಗೂ ರಕ್ಷೆಯನ್ನು ಕೊಟ್ಟಿದೆ. ಅದರಿಂದಾಗಿ ಮುಸಲ್ಮಾನರ ಜನಸಂಖ್ಯೆ ಹೆಚ್ಚಾಗಿದೆ” ಎಂದು ಸಾಬೀತು ಪಡಿಸುವ ಪ್ರಯತ್ನವೇ ಈ ವರದಿ ಎಂಬುದು ಅರ್ಥವಾಗದ ಸತ್ಯವೇನಲ್ಲ. ಕಳೆದ ಹತ್ತು ವರ್ಷಗಳ ಮೋದಿ ಆಡಳಿತದ ಜನಸಂಖ್ಯೆಯ ಬಗ್ಗೆ ಈ ವರದಿ ಉಸಿರೆತ್ತುವುದಿಲ್ಲ. ಹೀಗಾಗಿ ಇಡೀ ವರದಿಯ ಉದ್ದೇಶವೇ ಧಾರ್ಮಿಕ ದ್ವೇಷವನ್ನು ಬಿತ್ತುವುದಾಗಿದೆ. ‘ಕಾಂಗ್ರೆಸ್ ಪಕ್ಷ ಮುಸ್ಲಿಮರ ತುಷ್ಟೀಕರಣದಲ್ಲಿ ನಿರತವಾಗಿತ್ತು, ಮತ್ತೆ ಅಧಿಕಾರಕ್ಕೆ ಬಂದರೆ ಅದೇ ಮುಂದುವರೆಯುತ್ತದೆ’ ಎಂದು ಜನರನ್ನು ನಂಬಿಸುವುದಾಗಿದೆ.

“ಮುಸ್ಲಿಮರ ಜನಸಂಖ್ಯೆ ಹೆಚ್ಚಲು ಮತಾಂತರ ಮತ್ತು ಅಕ್ರಮ ವಲಸೆಯೇ ಕಾರಣ” ಎಂದು ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಹೇಳಿದರೆ, ಮುಸ್ಲಿಮರು ಒಂದಕ್ಕಿಂತ ಹೆಚ್ಚು ಮದುವೆಯಾಗುವುದರಿಂದ ಅವರ ಜನಸಂಖ್ಯೆ ವಿಪರೀತ ಏರಿಕೆಯಾಗಿದೆ” ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಹೇಳಿದ್ದಾರೆ. ಪ್ರಧಾನಿಯ ಸಲಹೆಗಾರರೇ ಸೃಷ್ಟಿಸಿದ ಈ ಸುಳ್ಳು ವರದಿಯ ಮೂಲಕ ಹಿಂದೂಗಳ ಮತಬೇಟೆಯಾಡುವ ಹುನ್ನಾರವನ್ನು ಮೋದಿಯವರು ಜಾರಿಗೆ ತಂದಿದ್ದಾರೆ. ಮುಳುಗುತ್ತಿರುವ ಬಿಜೆಪಿ ಹಡಗಿಗೆ ಮುಸ್ಲಿಂ ಧರ್ಮದ್ವೇಷವೆಂಬುದು ಆಸರೆಯಾಗಬಹುದು ಎನ್ನುವ ಭ್ರಮೆಯಲ್ಲಿ ಮೋದಿಯವರಿದ್ದಾರೆ. ಹತ್ತು ವರ್ಷಗಳ ಕಾಲ ಮೋಸ ಹೋದ ಜನರು ಮತ್ತೊಮ್ಮೆ ಮೋಸಹೋಗಲು ಈ ಸಲ ನಿರಾಕರಿಸುತ್ತಿದ್ದಾರೆ.

ಜನಸಂಖ್ಯೆ ಹೆಚ್ಚುವುದಕ್ಕೂ ಬಡತನ ಅನಕ್ಷರತೆ ಹಾಗೂ ನಿರುದ್ಯೋಗಕ್ಕೂ ಸಂಬಂಧವಿದೆ. ದಲಿತ, ಬುಡಕಟ್ಟು, ಆದಿವಾಸಿ ಗಳಂತಹ ಅತೀ ಹಿಂದುಳಿದ ಸಮುದಾಯಗಳಲ್ಲೂ ಮಕ್ಕಳು ಹೆಚ್ಚಾಗಿರುತ್ತವೆ. ಮುಸ್ಲಿಂ ಸಮುದಾಯದಲ್ಲೂ ಸಹ ಬಡತನ ಹೆಚ್ಚಿದೆ, ಅನಕ್ಷರತೆ ಅತಿಯಾಗಿದೆ, ಕೆಳಹಂತದ ಕೆಲಸಗಳಲ್ಲಿ ಹೆಚ್ಚು ಜನರು ತೊಡಗಿ ಕೊಂಡಿದ್ದಾರೆ. ಅದಕ್ಕೆ ಆಳುವ ಸರಕಾರಗಳೂ ಕಾರಣವಾಗಿವೆ. ಅದೂ ಈ ಬಿಜೆಪಿ ಅಧಿಕಾರಕ್ಕೆ ಬಂದ ಮೇಲಂತೂ ಮುಸ್ಲಿಮರನ್ನು ದೇಶದ್ರೋಹಿಗಳು, ಭಯೋತ್ಪಾದಕರು ಎಂದು ಬಿಂಬಿಸುತ್ತಾ ಎರಡನೇ ದರ್ಜೆ ಪ್ರಜೆಗಳು ಎಂಬಂತೆ ಬಿಂಬಿಸುತ್ತಿದ್ದಾರೆ. ಹಿಜಾಬ್ ನೆಪದಲ್ಲಿ ಹಲವಾರು ಮುಸ್ಲಿಂ ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿಸಿದರು. ಹಲಾಲ್ ವಿವಾದ ಹುಟ್ಟುಹಾಕಿ ಹಾಗೂ ಗೋಹತ್ಯಾ ನಿಷೇಧ ಕಾನೂನನ್ನು ತರುವ ಮೂಲಕ ಮುಸ್ಲಿಂ ಸಮುದಾಯದ ಹೊಟ್ಟೆಯ ಮೇಲೆ ಹೊಡೆದು ಅವರ ಬಡತನವನ್ನು ಹೆಚ್ಚಿಸಲಾಯ್ತು. ಮುಸ್ಲಿಮರು ದೇವಸ್ಥಾನಗಳ ಆವರಣದಲ್ಲಿ ವ್ಯಾಪಾರ ವ್ಯವಹಾರ ಮಾಡದಂತೆ ನಿರ್ಬಂಧಿಸಿ ಬಡ ವ್ಯಾಪಾರಸ್ಥರ ಬದುಕಿಗೆ ಕೊಳ್ಳಿ ಇಡಲಾಯಿತು. ಹೀಗೆ ಎಲ್ಲಾ ಕಡೆಯಿಂದಲೂ ಮುಸ್ಲಿಂ ಸಮುದಾಯದವರನ್ನು ಮೇಲೇಳದಂತೆ ತುಳಿಯುವ ಪ್ರಯತ್ನವನ್ನು ಸಂಘ ಪರಿವಾರ ಮಾಡುತ್ತಲೇ ಬಂತು. ಹೀಗಾಗಿ ಮುಸ್ಲಿಂ ಸಮುದಾಯದಲ್ಲಿ ಬಡತನ ಅನಕ್ಷರತೆ ಹಾಗೂ ನಿರುದ್ಯೋಗ ತಾಂಡವವಾಡತೊಡಗಿತು.

ಸಂವಿಧಾನದ ಅಡಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ಒಂದಿಷ್ಟು ಅನುಕೂಲಗಳನ್ನೇನಾದರೂ ಬಿಜೆಪಿಯೇತರ ಪಕ್ಷಗಳು ಮಾಡಿದ್ದೇ ಆದಲ್ಲಿ ಅದಕ್ಕೂ ಸಹ ಮುಸ್ಲಿಂ ತುಷ್ಟೀಕರಣ, ಅಲ್ಪಸಂಖ್ಯಾತರ ಓಲೈಕೆ ಎನ್ನುವ ಆರೋಪಗಳನ್ನು ಮಾಡುತ್ತಾ ಮತಾಂಧತೆಯ ವಿಷ ಬೀಜವನ್ನು ಬಿತ್ತುವ ಕೆಲಸವನ್ನು ಈ ಧರ್ಮಾಂಧರು ಮಾಡುತ್ತಲೇ ಬಂದರು. ಹಿಂದೂ ದೇವಸ್ಥಾನ, ಮಠ ಮಾನ್ಯಗಳಿಗೆ ಯಡಿಯೂರಪ್ಪರವರ ಸರಕಾರ ಸಾವಿರಾರು ಕೋಟಿ ಹಣ ಕೊಟ್ಟಾಗ  ಹೊಗಳುವ ಇದೇ ಸಂಘಿಗಳು ಕಾಂಗ್ರೆಸ್ ಸರಕಾರ ಮುಸ್ಲಿಂ ಸಮುದಾಯಕ್ಕೆ ಒಂದಿಷ್ಟು ಅನುದಾನ ಕೊಟ್ಟರೆ ವಿರೋಧಿಸಲು ವೀರಾವೇಶ ತೋರಿಸುತ್ತಾರೆ. ದೇಶದ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಮುಸಲ್ಮಾನ ಸಮುದಾಯದ ಜನರ ಬಡತನ ನಿವಾರಣೆಯಾಗಿ ಅವರಿಗೂ ಸಹ ಶಿಕ್ಷಣ, ಉದ್ಯೋಗಗಳು ಸಿಕ್ಕರೆ, ಅವುಗಳಿಗಾಗಿ ಮೀಸಲಾತಿಯನ್ನು ಕೊಟ್ಟರೆ ಆ ಸಮುದಾಯದವರೂ ಮೇಲೆ ಬರಲು ಸಾಧ್ಯ. ಹಾಗಾದಾಗ ಅವರೂ ಸಹ ವಿದ್ಯಾವಂತರಾಗಿ ಮಿತವಾದ ಮಕ್ಕಳನ್ನು ಹೆರಲು ಸಾಧ್ಯ. ಜನಸಂಖ್ಯೆ ನಿಯಂತ್ರಣಕ್ಕೆ ಬರಲು ಸಾಧ್ಯ. ಆದರೆ ಸಂಘ ಪರಿವಾರಕ್ಕೆ ಇದು ಬೇಕಾಗಿಲ್ಲ. ಮುಸ್ಲಿಂ ಸಮುದಾಯ ಬಡತನದಲ್ಲೇ ಇರಬೇಕು, ಅವರನ್ನು ಆತಂಕವಾದಿಗಳು ಎಂದು ಬಿಂಬಿಸಬೇಕು, ಹಿಂದೂ ಧರ್ಮಿಯರನ್ನು ಪ್ರಚೋದಿಸಿ ಮತ ಗಳಿಸಿ ಅಧಿಕಾರ ಹಿಡಿಯಲು ಮುಸ್ಲಿಂ ಸಮುದಾಯವನ್ನು ಶತ್ರುವಿನಂತೆ ಬಿಂಬಿಸಬೇಕು. ಹೀಗೆ ಮಾಡುತ್ತಾ ಹೋದರೆ ಧರ್ಮದ್ವೇಷ ಹೆಚ್ಚಾಗುತ್ತದೆ, ವಿಕಾಸದ ಬದಲಾಗಿ ವಿನಾಶವೇ ಹೆಚ್ಚಾಗುತ್ತದೆ. ಮತಾಂಧತೆ ಉಲ್ಬಣಿಸಿದ ಯಾವ ದೇಶವೂ ನೆಮ್ಮದಿಯಾಗಿರಲು ಸಾಧ್ಯವಿಲ್ಲ. ಸದಾ ಮುಸ್ಲಿಂ ದ್ವೇಷವನ್ನೇ ಉಸಿರಾಗಿಸಿ ಕೊಂಡಿರುವ ಬಿಜೆಪಿ ಹಾಗೂ ಸಂಘ ಪರಿವಾರಕ್ಕೆ ಮತಾಂಧತೆಯೇ ಅಧಿಕಾರದ ಮೆಟ್ಟಲಾಗಿದೆ.

ಇಷ್ಟಕ್ಕೂ ಮುಸ್ಲಿಂ ಜನಸಂಖ್ಯೆ ಹೆಚ್ಚಾಗುತ್ತಿದೆ ಎನ್ನುವ ಆರೋಪವೇ ಸುಳ್ಳು. ಮುಸಲ್ಮಾನರು ಹೆಚ್ಚು ಮಕ್ಕಳನ್ನು ಹುಟ್ಟಿಸಿ ಹಿಂದೂಗಳ ಪಾಲನ್ನು ಕಬಳಿಸುತ್ತಿದ್ದಾರೆ ಎನ್ನುವುದು ಬಿಜೆಪಿ ಹುಟ್ಟಿಸಿದ ದೊಡ್ಡ ಸುಳ್ಳು. ಬಿಮಾರು (BIMARU) ರಾಜ್ಯಗಳು ಎಂದೇ ಹೆಸರಾಗಿರುವ ಬಿಹಾರ, ಮಧ್ಯಪ್ರದೇಶ, ರಾಜಸ್ತಾನ, ಉತ್ತರ ಪ್ರದೇಶದಲ್ಲಿ ಯಾಕೆ ಜನಸಂಖ್ಯೆ ಹೆಚ್ಚಾಗುತ್ತಲೇ ಇದೆ. ಜನಸಂಖ್ಯೆಯನ್ನು ನಿಯಂತ್ರಿಸಿ ಆದಾಯವನ್ನು ಹೆಚ್ಚಿಸಿಕೊಂಡ ಕರ್ನಾಟಕದಂತಹ ರಾಜ್ಯಗಳು ಕಟ್ಟಿದ ತೆರಿಗೆಯ ಬಹುಪಾಲನ್ನು ಈ ವಿಪರೀತ ಜನಸಂಖ್ಯೆ ಇರುವ ಬಿಮಾರು ರಾಜ್ಯಗಳು ಯಾಕೆ ಬಳಸಿ ಕೊಳ್ಳುತ್ತವೆ?. ಯಾಕೆಂದರೆ ಇದೇ ಬಿಜೆಪಿ ಆಡಳಿತ ಇರುವ ಆ ಬಿಮಾರು ರಾಜ್ಯಗಳು ವಿಕಾಸ ಹೊಂದಿಲ್ಲ. ಅಲ್ಲಿಯ ಜನರ ತಲಾ ಆದಾಯ ಹೆಚ್ಚಿಲ್ಲ. ಉತ್ತಮ ಗುಣಮಟ್ಟದ ಶಿಕ್ಷಣ ಸಿಕ್ಕಿಲ್ಲ. ಬಡತನವನ್ನೇ ಹಾಸಿ ಹೊದ್ದುಕೊಂಡು ಮಲಗಿರುವ ಉತ್ತರ ಭಾರತದ ಈ ರಾಜ್ಯಗಳಲ್ಲಿ ಈ ಎಲ್ಲಾ ಕಾರಣಗಳಿಂದಾಗಿ ಜನಸಂಖ್ಯೆ ಹೆಚ್ಚಾಗುತ್ತಲೇ ಇದೆ. ಬಡವರ ಬದುಕಿನ ಆದಾಯವನ್ನು ಹೆಚ್ಚಿಸುವ ಯೋಜನೆಗಳನ್ನು ರೂಪಿಸುವುದನ್ನು ಬಿಟ್ಟು, ಉದ್ಯೋಗಗಳನ್ನು ಸೃಷ್ಟಿಸುವುದನ್ನು ಬಿಟ್ಟು ಮುಸಲ್ಮಾನರೇ ಇದಕ್ಕೆಲ್ಲ ಕಾರಣ ಎಂದು ಆರೋಪಿಸಿ ತಮ್ಮ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳುತ್ತಿರುವ ಬಿಜೆಪಿ ಪಕ್ಷ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಆದರೆ ಅದರ ಆತ್ಮದ ತುಂಬೆಲ್ಲಾ ಬರೀ ಅನ್ಯ ಧರ್ಮದ್ವೇಷವೇ ತುಂಬಿದೆ.

ಧರ್ಮದ್ವೇಷವನ್ನು ಹೆಚ್ಚಿಸುವ, ಧರ್ಮಾಧಾರಿತವಾಗಿ ದೇಶವನ್ನು ಒಡೆದಾಳುತ್ತಿರುವ ಬಿಜೆಪಿ ಪಕ್ಷವನ್ನು ಎತ್ತೆಚ್ಚ ಜನರು ಈ ಚುನಾವಣೆಯಲ್ಲಿ ಸೋಲಿಸಲೇ ಬೇಕಿದೆ. ಮತಾಂಧರಿಗೆ ಮುಟ್ಟಿ ನೋಡಿಕೊಳ್ಳುವಂತಹ ಪಾಠವನ್ನು ಕಲಿಸಲೇ ಬೇಕಿದೆ. ದೇಶದ ಬಡತನಕ್ಕೆ ಜನಸಂಖ್ಯೆ ಮಾತ್ರ ಕಾರಣವಲ್ಲ ಸಂಘ ಪರಿವಾರಿಗರ ಮತಾಂಧತೆಯೂ ಕಾರಣವೆಂದು ಹೇಳಬೇಕಿದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ದಾಭೋಲ್ಕರ್ ಹಂತಕರಿಗೆ ಶಿಕ್ಷೆ  ಸಂಚುಕೋರರಿಗೆ ರಕ್ಷೆ

More articles

Latest article