ಸಚಿವ ಎಂ.ಸಿ. ಸುಧಾಕರ್‌ ವಿರುದ್ಧ ಭುಗಿಲೆದ್ದ ಆಕ್ರೋಶ: ರಾಜೀನಾಮೆ ಕೊಟ್ಟು ಹೋಗಿ ಎಂದ ಕರವೇ ನಾರಾಯಣಗೌಡ

ಬೆಂಗಳೂರು: ಕಾಲೇಜು ಕ್ಯಾಂಪಸ್‌ಗಳಲ್ಲಿ ಇಂಗ್ಲಿಷ್‌ನಲ್ಲಿಯೇ ಮಾತನಾಡಬೇಕು ಎಂಬ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರ ಹೇಳಿಕೆ ಈಗ ರಾಜ್ಯಾದ್ಯಂತ ಕಿಚ್ಚು ಹಚ್ಚಿದೆ. ಧಾರವಾಡದ ಉನ್ನತ ಶಿಕ್ಷಣ ಅಕಾಡೆಮಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು ನೀಡಿದ ಈ ಹೇಳಿಕೆಯನ್ನು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ. ಎ. ನಾರಾಯಣಗೌಡ ಅವರು ಕನ್ನಡಿಗರ ಸ್ವಾಭಿಮಾನಕ್ಕೆ ಬಡಿದ “ನೇರ ಏಟು” ಎಂದು ಬಣ್ಣಿಸಿದ್ದಾರೆ.

ಧಾರವಾಡದಲ್ಲಿ ನೂತನವಾಗಿ ಆಯ್ಕೆಯಾದ ಪ್ರಾಂಶುಪಾಲರ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಚಿವರು, ಜಾಗತಿಕ ಸ್ಪರ್ಧೆಯನ್ನು ಎದುರಿಸಲು ಭಾಷಾ ಕೌಶಲ್ಯ ಮುಖ್ಯ, ಹಾಗಾಗಿ ಕ್ಯಾಂಪಸ್‌ನಲ್ಲಿ ಇಂಗ್ಲಿಷ್ ಬಳಸುವುದನ್ನು ರೂಢಿಸಿಕೊಳ್ಳಿ ಎಂದು ಕರೆ ನೀಡಿದ್ದರು. ಇದು ಕನ್ನಡಿಗರಲ್ಲಿ ತೀವ್ರ ಅಸಮಾಧಾನ ಮೂಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಚಿವರ ವಿರುದ್ಧ ಆಕ್ರೋಶದ ಅಲೆ ಎದ್ದಿದೆ.

ಕನ್ನಡದ ಅಸ್ಮಿತೆ ಮತ್ತು ಸಚಿವರ ವಿರೋಧಾಭಾಸದ ನಿಲುವು

ಸಚಿವರ ಈ ಹೇಳಿಕೆಯು ಕನ್ನಡಿಗರ ಭಾವನೆಗಳನ್ನು ಘಾಸಿಗೊಳಿಸಿದೆ. ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು “ಪರಭಾಷಿಕರ ಜೊತೆಯಲ್ಲೂ ಧೈರ್ಯವಾಗಿ ಕನ್ನಡದಲ್ಲೇ ಮಾತನಾಡಿ” ಎಂದು ನಾಡಿನ ಜನತೆಗೆ ಕರೆ ನೀಡುತ್ತಿದ್ದರೆ, ಅದೇ ಸರ್ಕಾರದ ಉನ್ನತ ಶಿಕ್ಷಣ ಸಚಿವರು ಕನ್ನಡವನ್ನು ಕಾಲೇಜು ಆವರಣದಿಂದ ಹೊರದಬ್ಬಲು ಯತ್ನಿಸುತ್ತಿರುವುದು ದೊಡ್ಡ ವಿರೋಧಾಭಾಸವಾಗಿದೆ. ಆಧುನಿಕ ಎಐ (AI) ಯುಗದಲ್ಲಿ ಭಾಷಾ ಅನುವಾದ ತಂತ್ರಜ್ಞಾನ ಮುಗಿಲೆತ್ತರಕ್ಕೆ ಬೆಳೆದಿರುವಾಗ, ಇಂಗ್ಲಿಷ್ ಬರದಿದ್ದರೆ ಆತ್ಮವಿಶ್ವಾಸ ಕುಗ್ಗುತ್ತದೆ ಎನ್ನುವುದು ಸಚಿವರ ಹಳೆಯ ಕಾಲದ ಗುಲಾಮಗಿರಿ ಮನಸ್ಥಿತಿಯನ್ನು ತೋರಿಸುತ್ತದೆ ಎಂಬ ಟೀಕೆಗಳು ಕೇಳಿಬರುತ್ತಿವೆ. ಜಗತ್ತಿನ ಮುಂದುವರಿದ ರಾಷ್ಟ್ರಗಳು ತಮ್ಮ ಮಾತೃಭಾಷೆಯಲ್ಲೇ ಸಾಧನೆ ಮಾಡುತ್ತಿರುವಾಗ, ಕನ್ನಡದ ಮಣ್ಣಿನ ಅನ್ನ ಉಣ್ಣುವ ಸಚಿವರು ಇಂಗ್ಲಿಷ್ ವ್ಯಾಮೋಹಕ್ಕೆ ಬಿದ್ದಿರುವುದು ನಾಚಿಕೆಗೇಡು ಎಂದು ಹೋರಾಟಗಾರರು ಕಿಡಿ ಕಾರಿದ್ದಾರೆ.

ಸಚಿವ ಸುಧಾಕರ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ. ಎ. ನಾರಾಯಣಗೌಡರು, ಕಾಲೇಜು ಕ್ಯಾಂಪಸ್‌ನಲ್ಲಿ ಇಂಗ್ಲಿಷ್‌ನಲ್ಲಿ ಮಾತನಾಡಿ ಎಂದು ಹೇಳುವುದು ಹೆತ್ತ ತಾಯಿಯನ್ನು ಬಿಟ್ಟು ಬೇರೆಯವರನ್ನು ತಾಯಿ ಎಂದು ಕರೆದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನ್ನಡದ ಮಣ್ಣಿನಲ್ಲಿ ಕನ್ನಡದ ಅನ್ನ ಉಣ್ಣುತ್ತಾ, ಕನ್ನಡಿಗರ ಮತದಿಂದ ಆಯ್ಕೆಯಾದ ಸಚಿವರು ಕನ್ನಡವನ್ನೇ ಕಾಲೇಜಿನಿಂದ ಹೊರಹಾಕುವಂತೆ ಹೇಳುವುದು ನಿಜಕ್ಕೂ ನಾಚಿಕೆಗೇಡು ಎಂದು ಅವರು ಕಿಡಿಕಾರಿದ್ದಾರೆ. ಜಾಗತಿಕ ಸ್ಪರ್ಧೆಯಲ್ಲಿ ಮುನ್ನಡೆಯಲು ಇಂಗ್ಲಿಷ್ ಅನಿವಾರ್ಯ ಎಂಬ ಸಚಿವರ ನಿಲುವನ್ನು “ಹಳೆಯ ಗುಲಾಮಗಿರಿ ಮನೋಭಾವ” ಎಂದು ಕರೆದಿರುವ ಗೌಡರು, ಎಐ ತಂತ್ರಜ್ಞಾನದ ಇಂದಿನ ಯುಗದಲ್ಲಿ ಇಂಗ್ಲಿಷ್ ಮಾತನಾಡದಿದ್ದರೆ ಆತ್ಮವಿಶ್ವಾಸ ಕುಗ್ಗುತ್ತದೆ ಎನ್ನುವುದು ಬರಿ ಭ್ರಮೆಯಷ್ಟೆ ಎಂದು ತಿರುಗೇಟು ನೀಡಿದ್ದಾರೆ. ಕನ್ನಡವೇ ಕನ್ನಡಿಗರ ಅಸ್ಮಿತೆ ಮತ್ತು ಶಕ್ತಿಯಾಗಿದ್ದು, ಅದರ ಮೇಲೆ ಏಟು ನೀಡುವ ಇಂತಹ ಕನ್ನಡ ವಿರೋಧಿ ಧೋರಣೆಯನ್ನು ನಾಡು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಈ ಕೂಡಲೇ ಸಚಿವ ಸುಧಾಕರ್ ಅವರು ತಮ್ಮ ಹೇಳಿಕೆಯನ್ನು ಹಿಂಪಡೆದು ಕನ್ನಡಿಗರ ಕ್ಷಮೆಯಾಚಿಸಬೇಕು ಹಾಗೂ ಕನ್ನಡ ವಿರೋಧಿ ನಿಲುವು ಹೊಂದಿರುವ ಅವರು ಸಚಿವರಾಗಿ ಮುಂದುವರಿಯುವ ನೈತಿಕತೆ ಕಳೆದುಕೊಂಡಿರುವುದರಿಂದ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ನಾರಾಯಣಗೌಡರು ಟ್ವೀಟ್‌ ಮಾಡುವ ಮೂಲಕ ಸಚಿವರ ನಡೆಯನ್ನು ಖಂಡಿಸಿದ್ದಾರೆ.

More articles

Latest article

Most read