ಹಾ.ಮಾ. ನಾಯಕರ ಕೃತಿ
ಹಾ.ಮಾ.ನಾಯಕರು ತಮ್ಮ ಗಂಭೀರ ಸಾಹಿತ್ಯ ಕೃಷಿಯ ನಡುವೆ ʻನಮ್ಮ ಮನೆಯ ದೀಪʻ ದಂತಹ ಮೃದುವಾದ, ಹೂವಿನಂತಹ ಕೃತಿಯನ್ನು ರಚಿಸಿರುವುದು ಕನ್ನಡ ಸಾಹಿತ್ಯಕ್ಕೆ ಸಿಕ್ಕಿದ ಒಂದು ವರ. ಇದರಲ್ಲಿ ಪಾಂಡಿತ್ಯದ ಭಾರವಿಲ್ಲ, ಬದಲಾಗಿ ಪ್ರೀತಿಯ ಹಗುರವಿದೆ. ಜೀವನದ ಜಂಜಾಟಗಳ ನಡುವೆ ಮಗು ಎಂಬುದು ಹೇಗೆ ತಂಪಾದ ಗಾಳಿಯಂತೆ, ಕತ್ತಲ ಮನೆಯ ದೀಪದಂತೆ ಬದುಕನ್ನು ಬೆಳಗುತ್ತದೆ ಎಂಬುದನ್ನು ಈ ಕೃತಿ ಸಾಬೀತುಪಡಿಸುತ್ತದೆ – ಡಾ. ರವಿ ಎಂ ಸಿದ್ಲಿಪುರ, ಸಹಾಯಕ ಪ್ರಾಧ್ಯಾಪಕರು.
ಜಗತ್ತಿನಲ್ಲಿ ತಂದೆ-ಮಗಳ ಬಾಂಧವ್ಯಕ್ಕಿಂತ ಮಿಗಿಲಾದ, ಮಧುರವಾದ ಕಾವ್ಯ ಮತ್ತೊಂದಿಲ್ಲ ಎನ್ನಬಹುದು. ಎಳೆಯ ಮಗುವಿನ ತೊದಲು ನುಡಿಗಳು, ಆಕೆಯ ಪುಟ್ಟ ಹೆಜ್ಜೆಗಳು, ಕಾರಣವಿಲ್ಲದೆ ಉಕ್ಕುವ ನಗು ತಂದೆಯ ಪಾಲಿಗೆ ಬದುಕಿನ ದೊಡ್ಡ ಸಂಭ್ರಮ. ಅಕ್ಷರಗಳೆಲ್ಲವೂ ಕೇವಲ ಪದಗಳಾಗಿ ಉಳಿಯದೆ, ಪ್ರತಿಯೊಂದು ಸಾಲೂ ಪೋಷಕರ ಎದೆಯ ಬಡಿತವನ್ನೇ ಅಕ್ಷರ ರೂಪಕ್ಕೆ ಇಳಿಸಿದಂತಿರುವ ಅಪರೂಪದ ಕೃತಿ ಹಾ.ಮಾ. ನಾಯಕ ಅವರ ʻನಮ್ಮ ಮನೆಯ ದೀಪʻ.
ಇತ್ತೀಚೆಗಷ್ಟೇ ನನ್ನ ಮಗಳು ʻಇಹʼಳ ಕುರಿತು ಬರಹವೊಂದನ್ನು ಬರೆದಿದ್ದೆ. ಆ ಬರಹದ ಗುಂಗಿನಲ್ಲೇ ಇನ್ನೇನಾದರೂ ಓದಬೇಕೆಂದು ಪುಸ್ತಕಗಳನ್ನು ಹುಡುಕುವಾಗ ನನ್ನ ಕಣ್ಣಿಗೆ ಬಿದ್ದಿದ್ದು ಈ ಕೃತಿ. ಹೀಗೆ ಅಕಸ್ಮಾತ್ತಾಗಿ ಸಿಗುವ ಹಳೆಯ ಪುಸ್ತಕವೊಂದು, ಓದಿದಷ್ಟೂ ಹೊಸದಾಗಿ ಕಾಡುವ ಅದ್ಭುತ ಅನುಭವವನ್ನು ನೀಡಬಲ್ಲದು ಎಂಬುದಕ್ಕೆ ಇದು ಸಾಕ್ಷಿ. ʻಇಹʼಳ ಕುರಿತು ಬರೆದ ಬೆನ್ನಲ್ಲೇ ಈ ಪುಸ್ತಕ ನನ್ನ ಕಣ್ಣಿಗೆ ಬಿದ್ದಿದ್ದು ಕಾಕತಾಳೀಯವೇನಲ್ಲ; ಅದೊಂದು ಪ್ರಕೃತಿಯೇ ಬೆಸೆದ ಸುಂದರ ಅನುಬಂಧ.

ಕೇವಲ ಐವತ್ತೆಂಟು ಪುಟಗಳ ಈ ಪುಟ್ಟ ಪುಸ್ತಕ, ತೂಕದಲ್ಲಿ ಹಗುರವಿದ್ದರೂ, ಭಾವದಲ್ಲಿ ಹಿಮಾಲಯದಷ್ಟೇ ಎತ್ತರವಾದದ್ದು. 1956 ರಲ್ಲಿ ಪ್ರಕಟವಾದ ಈ ಕೃತಿಯಲ್ಲಿ ಏಳು ಬರಹಗಳಿವೆ. ಹೊಸಗನ್ನಡ ಕಾವ್ಯಕ್ಷೇತ್ರದ ʻರತ್ನತ್ರಯʼರಲ್ಲಿ ಒಬ್ಬರಾದ ಪು.ತಿ.ನರಸಿಂಹಾಚಾರ್ಯರು ಇದಕ್ಕೆ ʻಗದ್ಯ ಬರವಣಿಗೆʻಯ ಕುರಿತು ಮಹತ್ವದ ಮುನ್ನುಡಿ ಬರೆದಿದ್ದಾರೆ. ಕನ್ನಡ ಸಾರಸ್ವತ ಲೋಕದ ದಿಗ್ಗಜರಲ್ಲೊಬ್ಬರಾದ ಹಾ.ಮಾ. ನಾಯಕರು ಇಲ್ಲಿ ಪಂಡಿತರಾಗಿ ಅಲ್ಲ, ಬದಲಾಗಿ ಮಗುವಿನ ಅಚ್ಚರಿಯಲ್ಲಿ ಕಳೆದುಹೋಗುವ ಒಬ್ಬ ಅಪ್ಪನಾಗಿ, ಸಂಸಾರವೆಂಬ ಸಾಗರದಲ್ಲಿ ಪ್ರೀತಿಯ ದೋಣಿ ನಡೆಸುವ ಪತಿಯಾಗಿ ನಮಗೆ ಆಪ್ತರಾಗುತ್ತಾರೆ. ಸ್ವತಃ ಲೇಖಕರೇ ಈ ಬರಹಗಳು ಯಾವ ಸಾಹಿತ್ಯ ಪ್ರಕಾರಕ್ಕೆ ಸೇರುತ್ತವೆ ಎಂದು ಗೊಂದಲ ಪಟ್ಟುಕೊಳ್ಳುತ್ತಾರೆಂದರೆ, ಅದರರ್ಥ ಇಲ್ಲಿನ ಭಾಷೆ ಅಷ್ಟು ಸಹಜವಾಗಿ, ಹರಿಯುವ ನೀರಂತೆ ಹರಿದಿದೆ ಎಂದು. ತಮ್ಮ ಬಾಳಸಂಗಾತಿ ಯಶೋದಮ್ಮನವರಿಗೆ(ಪುಸ್ತಕದಲ್ಲಿನ ವಸುಂಧರೆ) ಇದನ್ನು ʻಪ್ರೇಮದ ಕಾಣಿಕೆʼಯಾಗಿ ಅರ್ಪಿಸಿರುವುದು ಕೃತಿಯ ಹಿಂದಿನ ಭಾವನಾತ್ಮಕ ಬಲವನ್ನು ತೋರಿಸುತ್ತದೆ.
ಪುಸ್ತಕದ ಆರಂಭವೇ ಎಷ್ಟೊಂದು ಆಪ್ತವಾಗಿದೆ ಎಂದರೆ, “ನಮ್ಮ ರಮಾ ಹುಟ್ಟಿದ ಮೇಲೆ ಮನೆಯೇ ಬದಲಾಯಿಸುತ್ತಾ ನಡೆದಿದೆ” ಎಂದು ಲೇಖಕರು ಹೇಳುವಾಗ, ಮಗುವು ಮನೆಯ ವಾತಾವರಣವನ್ನಷ್ಟೇ ಅಲ್ಲ, ತಂದೆ-ತಾಯಿಯ ವ್ಯಕ್ತಿತ್ವವನ್ನೂ ಹೇಗೆ ಬದಲಿಸಿಬಿಡುತ್ತದೆ ಎಂಬ ಸತ್ಯ ದರ್ಶನವಾಗುತ್ತದೆ. ರಮಾ ಕೇವಲ ಮಗುವಲ್ಲ, ಅವಳೊಂದು ಚಲನಶೀಲ ಚೈತನ್ಯ. ದಿನವಿಡೀ ಅವಳು ನಡೆದಷ್ಟು ನಡೆಯಲು ಇವರಿಗಾಗುವುದಿಲ್ಲ. ಅಡುಗೆ ಮನೆಯಿಂದ ಚಾವಡಿಯವರೆಗೆ, ದೇವರ ಕೋಣೆಯಿಂದ ಬಚ್ಚಲವರೆಗೆ ಅವಳದೇ ಸಾಮ್ರಾಜ್ಯ. ಗುಲಾಬಿ ಹೂವಿಗೆ ಆಸೆಪಟ್ಟು ಮುಳ್ಳು ಚುಚ್ಚಿಸಿಕೊಂಡು ರಕ್ತ ಬಂದರೂ, ಹೂವಿನ ಮೇಲಿನ ಆಸೆ ಬಿಡದ ರಮಾಳ ಹಠಮಾರಿತನದಲ್ಲಿ ಬಾಲಸಹಜವಾದ ಕುತೂಹಲ ಮತ್ತು ಛಲ ಎರಡೂ ಇವೆ.
ಇಲ್ಲಿನ ಅಪ್ಪ-ಅಮ್ಮ ಮತ್ತು ಮಗಳ ನಡುವಿನ ಬಾಂಧವ್ಯದ ಚಿತ್ರಣಗಳು ಮನಸ್ಸಿಗೆ ಮುದ ನೀಡುತ್ತವೆ. ಅಜ್ಜಿ ಹೊಲಿಸಿಕೊಟ್ಟ ಲಂಗಕ್ಕೆ ಜೇಬಿದೆ, ಆದರೆ ತಾಯಿ ಹೊಲಿಸಿದ ಲಂಗಕ್ಕೆ ಜೇಬಿಲ್ಲ ಎಂಬ ಒಂದೇ ಕಾರಣಕ್ಕೆ ರಮಾ ಮಾಡುವ ರಂಪಾಟ ಎಷ್ಟೊಂದು ಸ್ವಾರಸ್ಯಕರ! ಕೊನೆಗೆ ಅಪ್ಪ-ಅಮ್ಮ ಇಬ್ಬರೂ ಕುಳಿತು ಅವಳ ಎಲ್ಲ ಲಂಗಗಳಿಗೂ ಜೇಬು ಇಡುವ ಪ್ರಸಂಗ, ಮಗುವಿನ ಪ್ರಪಂಚದಲ್ಲಿ ʻಜೇಬುʼ ಎಂಬುದು ಕೇವಲ ಬಟ್ಟೆಯ ಭಾಗವಲ್ಲ, ಅದೊಂದು ಸಂಪತ್ತಿನ ಕಣಜ ಎಂಬ ಸತ್ಯವನ್ನು ದರ್ಶಿಸುತ್ತದೆ. ಆ ಜೇಬಿನಲ್ಲಿ ಕಲ್ಲು, ಮಣ್ಣು, ಹೂವು, ತಿಂಡಿ ಎಲ್ಲವೂ ಸೇರಿಕೊಳ್ಳುವ ಪರಿ ಮಕ್ಕಳ ಜಗತ್ತಿನ ವೈಶಾಲ್ಯತೆಯನ್ನು ತೋರಿಸುತ್ತದೆ.
ಲೇಖಕರ ಅಚ್ಚುಮೆಚ್ಚಿನ ಪೆನ್ನಿನ ʻಮುಳ್ಳುʼ ಮುರಿದಾಗ, ಹನ್ನೆರಡು ರೂಪಾಯಿ ಕೊಟ್ಟು ತಂದ ʻಭಾರತದರ್ಶನʼವನ್ನು ನೀರಿನಲ್ಲಿ ಹಾಕಿ ತೆಗೆದಾಗ ಅಥವಾ ಬರೆದಿಟ್ಟ ಹೊಸ ಕಥೆಯ ಹಸ್ತಪ್ರತಿಯನ್ನು ಹರಿದು ಹಾಕಿದಾಗಲೂ ಲೇಖಕರಿಗೆ ಕೋಪ ಬರುವುದಿಲ್ಲ! ಬದಲಾಗಿ, ಮಗಳ ಚೇಷ್ಟೆಯಲ್ಲಿಯೇ ಆನಂದವನ್ನು ಕಾಣುವ ತಂದೆಯ ವಾತ್ಸಲ್ಯ ಇಲ್ಲಿ ಎದ್ದು ಕಾಣುತ್ತದೆ. ತಂದೆಯೊಬ್ಬ ತನ್ನ ಬೌದ್ಧಿಕ ಸಾಧನೆಗಿಂತ ಮಗಳ ಬಾಲಿಶ ಚೇಷ್ಟೆಯಲ್ಲೇ ಹೆಚ್ಚು ಸುಖ ಕಾಣುವ ಈ ಪರಿವರ್ತನೆ ಇದೆಯಲ್ಲ, ಅದೇ ತಾಯ್ತನಕ್ಕೆ ಸರಿಸಾಟಿಯಾದ ತಂದೆಯ ಪ್ರೀತಿ.
ಇಲ್ಲಿನ ʻವಸುಂಧರೆʼ ಮತ್ತು ಲೇಖಕರ ನಡುವಿನ ಸಂಭಾಷಣೆಗಳು ದಾಂಪತ್ಯದ ಸವಿಗಾನದಂತಿವೆ. ಇವರಿಬ್ಬರ ಸರಸ-ಸಲ್ಲಾಪಗಳು, ಮುನಿಸು-ಒಲವುಗಳು ಕೃತಿಗೆ ಹೊಸ ಕಳೆಕಟ್ಟಿವೆ. ವಸುಂಧರೆ ಮಗುವಿನಂತೆ ಹಠ ಮಾಡುವ, ಪಗಡೆ ಆಡುವ, ಸೋತರೆ ಜಗಳವಾಡುವ ಸ್ವಭಾವದವಳು. ಆದರೆ, ತಾಯಿಯಾಗಿ ಅವಳು ತೋರುವ ಜವಾಬ್ದಾರಿ ಮತ್ತು ಪ್ರೀತಿ ಅನನ್ಯ. ರಮಾಳ ಆಗಮನದ ನಂತರ ವಸುಂಧರೆಯ ಬದುಕಿನ ಆದ್ಯತೆಗಳು ಬದಲಾಗುತ್ತವೆ.
ಮದುವೆಯಾದ ಹೊಸದರಲ್ಲಿ ಜಾತ್ರೆಯಲ್ಲಿ ವಸುಂಧರೆ ತನಗೊಂದು ʻಜಪಾನಿ ಬೊಂಬೆʼ ಬೇಕೆಂದು ಹಠ ಹಿಡಿಯುವ ಸನ್ನಿವೇಶ ಮತ್ತು ಮುಂದೆ ಅದೇ ಬೊಂಬೆಯನ್ನು ರಮಾ ತನ್ನ ಮಗಳೆಂಬಂತೆ(ರಂಗಿ) ಲಾಲನೆ-ಪಾಲನೆ ಮಾಡುವ ಸನ್ನಿವೇಶಗಳು ಕಾಲದ ಚಕ್ರವನ್ನು ಸುಂದರವಾಗಿ ಕಟ್ಟಿಕೊಡುತ್ತವೆ. ಅಂದು ಬೊಂಬೆಗಾಗಿ ಹಠ ಹಿಡಿದಿದ್ದ ವಸುಂಧರೆ, ಇಂದು ಜೀವಂತ ಬೊಂಬೆಯಾದ ರಮಾಳನ್ನು ಎತ್ತಿಕೊಂಡು ತಿರುಗುವ ಚಿತ್ರಣ ಮನೋಜ್ಞವಾಗಿದೆ. ರಮಾ ತನ್ನ ಬೊಂಬೆಗೆ ʻಬೂಟ್ಸ್ ಬೇಕುʼ ಎಂದು ಹಠ ಹಿಡಿಯುವಾಗ, ಅದಕ್ಕೆ ತಂದೆ ಕೊಡುವ ತಾರ್ಕಿಕ ಉತ್ತರಗಳ್ಯಾವುವೂ ಆ ಪುಟ್ಟ ಮಗುವಿನ ಎದುರು ನಿಲ್ಲುವುದಿಲ್ಲ. ಹಾಗೆಯೇ “ನನ್ನ ಮಗು ಮಲಗಿದೆ, ಸದ್ದು ಮಾಡಬೇಡಿ” ಎಂದು ಅಪ್ಪನನ್ನೇ ಗದರಿಸುವ ರಮಾಳಲ್ಲಿ ಒಬ್ಬ ಪುಟ್ಟ ತಾಯಿ ಅಡಗಿದ್ದಾಳೆ.
ಇನ್ನು ಮಗು ಯಾರ ಹೋಲಿಕೆ ಎಂಬ ಚರ್ಚೆ ಬಂದಾಗ, “ಉದ್ದವಾಗಿ ಬೆಳೆಯುವ ಹೆಣ್ಣುಮಕ್ಕಳಿಗೆ ಬೆರಳುಗಳು ನೀಳವಾಗಿರುತ್ತವೆ, ರಮಾಳ ಬೆರಳು ಪುಟ್ಟದಾಗಿದೆ, ಹಾಗಾಗಿ ಅವಳು ನನ್ನಂತೆಯೇ ಕುಳ್ಳಿ” ಎಂದು ವಸುಂಧರೆ ಸಮರ್ಥಿಸಿಕೊಳ್ಳುವ ಜಾಣ್ಮೆ ಎಂಥವರ ಮೊಗದಲ್ಲೂ ಮುಗುಳ್ನಗೆ ತರಿಸುತ್ತದೆ. ಮಗು ರಮಾ, ಇಲ್ಲಿ ಗಂಡ-ಹೆಂಡತಿಯರ ನಡುವಿನ ಪ್ರೀತಿಯ ಕೊಂಡಿ. ಇಬ್ಬರ ಜಗಳವನ್ನು ತಣ್ಣಗಾಗಿಸುವ, ಅಹಂಕಾರಗಳನ್ನು ಕರಗಿಸುವ ಮಾಂತ್ರಿಕ ಶಕ್ತಿ ಆ ಪುಟ್ಟ ಜೀವಕ್ಕಿದೆ. ಲೇಖಕರು ಹೇಳುವಂತೆ, “ರಮಾ ಬಂದಮೇಲೆ ಜೀವನ ವ್ಯವಸ್ಥಿತವಾಗುತ್ತಿದೆ. ಕೋಪ, ದ್ವೇಷ, ಮತ್ಸರ, ಆಡಂಬರಗಳಂತೂ ಮರೆಯಾಗಿಯೇ ಹೋಗುತ್ತಿವೆ.” ಇದು ಕೇವಲ ನಾಯಕರ ಮನೆಯ ಮಾತಲ್ಲ, ಹೆಣ್ಣು ಮಗುವಿರುವ ಪ್ರತಿಯೊಂದು ಮನೆಯ ಸತ್ಯ.
ರಮಾಳ ʻಮಾತಿನ ಮಲ್ಲಿʼ ವ್ಯಕ್ತಿತ್ವವಂತೂ ನಗೆಯುಕ್ಕಿಸುತ್ತದೆ. ಮನೆಗೆ ಯಾರೇ ಬರಲಿ, ಅವರ ಕುಲಗೋತ್ರ ವಿಚಾರಿಸಿ, ಅವರಿಗೆ ಆಪ್ತಳಾಗಿಬಿಡುವ ರಮಾ, ಮನೆಯ ಯಜಮಾನತಿಯಂತೆಯೇ ವರ್ತಿಸುತ್ತಾಳೆ. “ನಾನು ಎಂಬೀಸ್(ಎಂಬಿಬಿಎಸ್) ಓತ್ತೇನೆ, ಡಾಕ್ಟರ್ ಆಗುತ್ತೇನೆ” ಎಂದು ಅವಳು ತೊದಲು ನುಡಿಯುವಾಗ, ಆ ಪುಟ್ಟ ಕಣ್ಣುಗಳಲ್ಲಿ ನಾಳಿನ ಕನಸುಗಳು ಮಿಂಚುತ್ತವೆ. ಅಪ್ಪ ತಂದ ಪೌಡರ್ ಡಬ್ಬಿ ಮಗುವಿಗೆ ಆಗುವುದಿಲ್ಲ, ಅಮ್ಮನ ಪೌಡರ್ ಡಬ್ಬಿಯೇ ಬೇಕು ಎಂದು ಹಠ ಹಿಡಿಯುವಲ್ಲಿರುವ ಮಕ್ಕಳ ಸಹಜವಾದ ತಾರ್ಕಿಕತೆ ಮತ್ತು ಹಠಮಾರಿ ಗುಣವನ್ನು ಲೇಖಕರು ಬಲು ಸೂಕ್ಷ್ಮವಾಗಿ ಹಿಡಿದಿಟ್ಟಿದ್ದಾರೆ.
ಪುಸ್ತಕದ ಅತ್ಯಂತ ಸ್ವಾರಸ್ಯಕರ ಭಾಗವೆಂದರೆ ರಮಾಳ ʻಅಕ್ಷರಾಭ್ಯಾಸʼ ಮತ್ತು ಅವಳ ಓದು. ಸ್ಲೇಟಿನ ಬದಲು ಕಾಗದದ ಮೇಲೆಯೇ ಬರೆಯುತ್ತೇನೆ ಎಂಬ ಹಠ, ಲೇಖಕರ ಪುಸ್ತಕಗಳಲ್ಲಿ ತನ್ನ ʻಸಹಿʼ ಹಾಕುವುದು, ಚಿತ್ರಗಳಿಲ್ಲದ ಪುಸ್ತಕವನ್ನು ಕಂಡು ತಿರಸ್ಕರಿಸುವುದು– ಇವೆಲ್ಲವೂ ಪ್ರತಿಯೊಬ್ಬರೂ ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುವಂತೆ ಮಾಡುತ್ತವೆ. ಅಜ್ಜಿಗೇನೋ ಕಾಗದ ಬರೆಯಬೇಕು, ಆದರೆ ಬರೆಯಲು ಬರುವುದಿಲ್ಲ. ತಂದೆಯ ಕೈಲಿ ಬರೆಸಿ, ಅದಕ್ಕೆ ಗೀಚುಗೆರೆಗಳ ಸಹಿ ಹಾಕಿ, ಅದು ತಲುಪುವ ಮೊದಲೇ ಅಜ್ಜಿಯಿಂದ ಉತ್ತರ ಬಂತೆ ಎಂದು ಸಂಭ್ರಮಿಸುವ ರಮಾಳ ಮುಗ್ಧತೆಗೆ ಬೆಲೆಕಟ್ಟಲು ಸಾಧ್ಯವೇ? ಮತ್ತೊಂದು ಪ್ರಸಂಗದಲ್ಲಿ, ಚಿತ್ರದಲ್ಲಿರುವುದು ಕುದುರೆಯೋ ಅಥವಾ ಕತ್ತೆಯೋ ಎಂಬ ಜಿಜ್ಞಾಸೆ ಬಂದಾಗ, ಅಮ್ಮನ ಮಾತನ್ನೇ ಎತ್ತಿ ಹಿಡಿಯಲು ಅಪ್ಪ ಸುಳ್ಳು ಹೇಳಬೇಕಾಗುತ್ತದೆ. ಆದರೆ ರಮಾಳ ಎದುರು ಸತ್ಯವನ್ನು ಉಳಿಸಿಕೊಳ್ಳಲು ಫೋಟೋದಲ್ಲಿರುವ ಅಮ್ಮನನ್ನು ತೋರಿಸಿ ʻಇದು ಕತ್ತೆʼ ಎಂದು ಹೇಳುವ ಲೇಖಕರ ತುಂಟತನದ ಸೇಡು ಮಜವಾಗಿ ಚಿತ್ರಿತವಾಗಿದೆ.

ʻಮಕ್ಕಳ ಜಗತ್ತುʻ ಅಧ್ಯಾಯವು ಮಕ್ಕಳ ಭಾವನಾತ್ಮಕ ಪ್ರಪಂಚವನ್ನು ತೆರೆದಿಡುತ್ತದೆ. ವಸುಂಧರೆಯ ಅಣ್ಣನ ಮಗಳು ಉಮಾ ಮನೆಗೆ ಬಂದಾಗ ರಮಾ ತೋರುವ ಅಕ್ಕರೆ, ಅವಳು ಹೋದಾಗ ಅನುಭವಿಸುವ ಒಂಟಿತನ ಮಕ್ಕಳ ಮನಸ್ಸಿನ ಸೂಕ್ಷ್ಮತೆಯನ್ನು ತೋರಿಸುತ್ತದೆ. ವೀಣೆಯ ತಂತಿಯನ್ನು ಮುರಿದೆನೆಂದು ತಂದೆ-ತಾಯಿಯರಿಂದ ಏಟು ತಿಂದ ರಮಾ, ಊಟ ಬಿಟ್ಟು ಮಲಗಿದಾಗ ಲೇಖಕರು ಅನುಭವಿಸುವ ಪಶ್ಚಾತ್ತಾಪ ಕರುಳು ಹಿಂಡುವಂತಿದೆ. “ಇನ್ನೊಂದು ಸಲ ಹೊಡೆದರೆ ನಾನು ಮನೆ ಬಿಟ್ಟು ಹೋಗುತ್ತೇನೆ” ಎಂಬ ಅವಳ ಬೆದರಿಕೆಯಲ್ಲಿ ಸ್ವಾಭಿಮಾನದ ದನಿಯಿದೆ. ಭಿಕ್ಷುಕರಿಗೆ ದಾನ ಮಾಡುವುದು, ಪ್ರಾಣಿಗಳನ್ನು ಪ್ರೀತಿಸುವುದು, ಮನೆಯ ಮುದಿ ನಾಯಿ ʻಟೈಗರ್ʼ ಅನ್ನು ಜಿಗಿಸಲು ಪ್ರಯತ್ನಿಸುವುದು, ಮಾವಿನ ಗೊರಟೆಯನ್ನು ನೆಟ್ಟು ಅದು ನಾಳೆಯೇ ಮರವಾಗಿ ಹಣ್ಣು ನೀಡಬೇಕೆಂದು ಬಯಸುವುದು– ಹೀಗೆ ರಮಾಳ ಜಗತ್ತು ಆಸೆ, ಕನಸು ಮತ್ತು ಪ್ರೀತಿಯಿಂದ ತುಂಬಿದೆ. ಮಳೆಗಾಲದಲ್ಲಿ ಕಾಗದದ ದೋಣಿಗಳನ್ನು ಬಿಡುತ್ತಾ, ಹರಿಯುವ ನೀರಿನಲ್ಲಿ ತನ್ನ ಕನಸುಗಳನ್ನು ತೇಲಿಬಿಡುವ ರಮಾ, ಲೇಖಕರಿಗೆ ಬಾಲ್ಯದ ಮಧುರ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತಾಳೆ. ನಿಜಕ್ಕೂ ರಮಾಳ ಜಗತ್ತಿನಲ್ಲಿ ದ್ವೇಷಕ್ಕೆ ಆಸ್ಪದವೇ ಇಲ್ಲ; ಅಲ್ಲಿರುವುದು ಬರೀ ಪ್ರೀತಿ, ಕುತೂಹಲ ಮತ್ತು ವರ್ತಮಾನದ ಕ್ಷಣಗಳಲ್ಲಿ ಬದುಕುವ ನಿಷ್ಕಲ್ಮಷ ಆನಂದ.
ʻಕನಸಿನ ಮಗಳುʼ ಅಧ್ಯಾಯದಲ್ಲಿ ಬರುವ ಕಥೆ ಹೇಳುವ ಪ್ರಸಂಗವಂತೂ ಅತ್ಯಂತ ಮಾರ್ಮಿಕವಾಗಿದೆ. ಗಾಳಿಪಟ ಬೇಕೆಂದು ಹಠ ಹಿಡಿದು, ಹಣ ಕೈಗೆ ಬಂದಾಗ ಬೇಡವೆಂದು, ಕಥೆ ಹೇಳು ಎಂದು ತಂದೆಯ ತೊಡೆಯೇರುವ ರಮಾ, ಮಕ್ಕಳ ಮನಸ್ಸು ಕ್ಷಣಕ್ಷಣಕ್ಕೂ ಹೇಗೆ ಬದಲಾಗುತ್ತದೆ ಎಂಬುದಕ್ಕೆ ನಿದರ್ಶನ. ತಂದೆ ಹೇಳುವ ʻಚಿನ್ನಮ್ಮ ಬಾಲೆ ಮತ್ತು ಜೋಗಿʼಯ ಕಥೆಯಲ್ಲಿ ರಮಾ ಎಷ್ಟು ತನ್ಮಯಳಾಗುತ್ತಾಳೆಂದರೆ, ಕಥೆಯ ನಾಯಕನೊಂದಿಗೆ ತಾನೂ ಏಳು ಸಮುದ್ರಗಳನ್ನು ದಾಟುತ್ತಾಳೆ, ರಾಕ್ಷಸರ ಕಣ್ತಪ್ಪಿಸಿ ಸಾಗುತ್ತಾಳೆ. ವಾಸ್ತವ ಮತ್ತು ಕಲ್ಪನೆಯ ನಡುವಿನ ಗೆರೆ ಅಳಿಸಿಹೋಗುವ ಆ ಕ್ಷಣ, ಕಥೆಗಾರ ತಂದೆ ಮತ್ತು ಕೇಳುಗ ಮಗಳಿಬ್ಬರೂ ಒಂದೇ ಲೋಕದಲ್ಲಿ ವಿಹರಿಸುವ ದಿವ್ಯ ಗಳಿಗೆ.
ಲೇಖಕರು ಹೇಳುವಂತೆ, ಮಕ್ಕಳಿಲ್ಲದ ಮನೆ ಸ್ಮಶಾನಕ್ಕೆ ಸಮಾನ. “ಕೂಸು ಇರುವ ಮನೆಗೆ ಬೀಸಣಿಕೆ ಯಾತಕೆ?” ಎಂಬ ಜನಪದರ ಮಾತು ಇಲ್ಲಿ ಅಕ್ಷರಶಃ ನಿಜವಾಗಿದೆ. ಮಕ್ಕಳು ಬೆಳೆದಂತೆ ಅವರು ನೀಡುವ ಆನಂದದ ಸ್ವರೂಪ ಬದಲಾಗಬಹುದು, ನಾವು ಅವರಿಂದ ದೂರವಾಗಬಹುದು. ಆದರೆ ರಮೆಯಂತಹ ಮಕ್ಕಳು ಎಷ್ಟೇ ಬೆಳೆಯಲಿ, ಅವರು ಬಾಲ್ಯದಲ್ಲಿ ನೀಡಿದ ಸುಖದ ನೆನಪುಗಳೇ ನಮ್ಮ ಬಾಳನ್ನು ಬೆಳಗಲು ಸಾಕು. ಎಣ್ಣೆ ಬತ್ತಿ ಉಳಿದರೆ, ಗಾಳಿ ಸುಯ್ಯದಿದ್ದರೆ, ಯಾವ ಕಾಲಕ್ಕೂ ಇಂಥ ದೀಪಗಳು ನಮ್ಮ ಮನೆಯನ್ನು ಕಾಂತಿಯುತವಾಗಿರಿಸುತ್ತವೆ.
ಹಾ.ಮಾ.ನಾಯಕರು ತಮ್ಮ ಗಂಭೀರ ಸಾಹಿತ್ಯ ಕೃಷಿಯ ನಡುವೆ ಇಂಥದೊಂದು ಮೃದುವಾದ, ಹೂವಿನಂತಹ ಕೃತಿಯನ್ನು ರಚಿಸಿರುವುದು ಕನ್ನಡ ಸಾಹಿತ್ಯಕ್ಕೆ ಸಿಕ್ಕಿದ ಒಂದು ವರ. ಇದರಲ್ಲಿ ಪಾಂಡಿತ್ಯದ ಭಾರವಿಲ್ಲ, ಬದಲಾಗಿ ಪ್ರೀತಿಯ ಹಗುರವಿದೆ. ಜೀವನದ ಜಂಜಾಟಗಳ ನಡುವೆ ಮಗು ಎಂಬುದು ಹೇಗೆ ತಂಪಾದ ಗಾಳಿಯಂತೆ, ಕತ್ತಲ ಮನೆಯ ದೀಪದಂತೆ ಬದುಕನ್ನು ಬೆಳಗುತ್ತದೆ ಎಂಬುದನ್ನು ಈ ಕೃತಿ ಸಾಬೀತುಪಡಿಸುತ್ತದೆ. ನಾಯಕರು ಮನೆಯ ನಾಲ್ಕು ಗೋಡೆಗಳ ಮಧ್ಯೆ ನಡೆದ ಸಾಮಾನ್ಯ ಘಟನೆಗಳನ್ನೇ ಅಸಾಮಾನ್ಯ ಕಾವ್ಯವಾಗಿಸಿದ್ದಾರೆ. ಇಲ್ಲಿನ ಭಾಷೆ ಸರಳವಾದರೂ, ಭಾವ ಸಾಂದ್ರವಾಗಿದೆ. ವಸುಂಧರೆಯ ಸಿಡುಕು, ರಮಾಳ ತುಂಟಾಟ, ಲೇಖಕರ ತಾಳ್ಮೆ – ಈ ಮೂರೂ ಸೇರಿ ʻನಮ್ಮ ಮನೆಯ ದೀಪʼವನ್ನು ಬೆಳಗಿವೆ.
ಇಂತಹ ಕೃತಿಯನ್ನು ಓದಿ ಮುಗಿಸಿದಾಗ ಮನಸ್ಸು ಭಾರವಾಗುವುದಿಲ್ಲ, ಬದಲಾಗಿ ಹಗುರವಾಗುತ್ತದೆ. ಕಣ್ಣುಗಳು ಒದ್ದೆಯಾದರೂ ತುಟಿಯಲ್ಲಿ ನಗು ಇರುತ್ತದೆ. ನನ್ನ ಮಗಳು ʻಇಹʼಳ ಕುರಿತು ನಾನು ಬರೆದ ಭಾವನೆಗಳಿಗೂ, ಹಾ.ಮಾ.ನಾಯಕರು ರಮಾಳ ಬಗ್ಗೆ ಬರೆದ ಸಾಲುಗಳಿಗೂ ಅಂತಹ ವ್ಯತ್ಯಾಸವೇನೂ ಇಲ್ಲ. ಕಾಲ ಬದಲಾಗಬಹುದು, ಪರಿಸರ ಬದಲಾಗಬಹುದು, ಆದರೆ ತಂದೆಯ ಪಾಲಿಗೆ ಮಗಳು ಯಾವಾಗಲೂ ಒಂದು ವಿಸ್ಮಯವೇ. ಅಂದು ಹಾ.ಮಾ.ನಾಯಕರ ಮನೆಯ ಅಂಗಳದಲ್ಲಿ ಓಡಾಡಿದ ʻರಮಾʼ ಇಂದು ಈ ಬರಹದ ಮೂಲಕ, ನನ್ನ ಮಗಳ ರೂಪದಲ್ಲಿ ಮತ್ತೆ ಜೀವ ಪಡೆದಿದ್ದಾಳೆ. ಇಲ್ಲಿನ ಚೇತನಮಯಿ ʻರಮಾʼ ಬೇರಾರೂ ಅಲ್ಲ; ಅವಳು ನಮ್ಮ ಮನೆಯ ʻಇಹʼಳೂ ಹೌದು, ಎಲ್ಲರ ಮನೆಯ ಅಕ್ಕರೆಯ ʻಮಗಳುʼ ಹೌದು!
ಡಾ. ರವಿ ಎಂ ಸಿದ್ಲಿಪುರ
ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಕನ್ನಡ ಪತ್ರಿಕೋದ್ಯಮದಲ್ಲಿ ಡಿಪ್ಲೊಮೋ ಪದವಿಯನ್ನು, ‘ಕನ್ನಡ ಮಹಾಭಾರತ ಕಾವ್ಯಗಳಲ್ಲಿ ಪ್ರಭುತ್ವ, ಯುದ್ಧಮತ್ತುಜನತೆ’ ಎಂಬ ವಿಷಯ ಕುರಿತು ಪಿಎಚ್.ಡಿ ಪದವಿಯನ್ನುಇವರು ಪಡೆದಿದ್ದಾರೆ.’ಪರ್ಯಾಯ’, ‘ವಿಮರ್ಶೆ ಓದು’, ಶಾಸನ ಓದು’ ಪುಸ್ತಕಗಳು ಪ್ರಕಟಗೊಂಡಿವೆ. ಪ್ರಸ್ತುತ ರಾಣೇಬೆನ್ನೂರು ತಾಲೂಕಿನ ಸುಣಕಲ್ಲ ಬಿದರಿಯ ಸರ್ಕಾರಿ ಪ್ರಥಮ ದರ್ಜೆಕಾಲೇಜಿಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ- ಕವನ | ಜಗವು ಕೂಡಲ ಸಂಗಮ


