ಹಲ್ಲೆಗೊಳಗಾದ ರಾಮಯ್ಯನವರ ವ್ಯಥೆ; ಎಲ್ಲೆ ಮೀರಿದ ಮಾನವೀಯತೆ

Most read

ಅಂಬೇಡ್ಕರ್ ರವರ ಅನುಯಾಯಿಯಾದ ರಾಮಯ್ಯನವರ ಮೇಲೆಯಾದ ದೈಹಿಕ ಹಲ್ಲೆ ಕ್ಷಮೆಗೆ ಅರ್ಹವಲ್ಲ. ಈಗ ಸಾಮಾಜಿಕ ಹೋರಾಟಗಾರರು, ಜನಪರ ಸಂಘಟನೆಗಳು ಹಾಗೂ ಸಾಂಸ್ಕೃತಿಕ ಮನಸ್ಸುಗಳು ಅವರ ಬೆಂಬಲಕ್ಕೆ ನಿಲ್ಲಬೇಕಿದೆ. ಅದೇ ಗ್ರಾಮದಲ್ಲಿ ಪ್ರತಿರೋಧ ಸಮ್ಮೇಳನ ಏರ್ಪಡಿಸಿ ರಾಮಯ್ಯನವರ ಹಿಂದಿರುವ ಸಂಘಟನಾತ್ಮಕ ಶಕ್ತಿಯ ಅಗಾಧತೆಯನ್ನು ಸ್ಥಳೀಯ ದುರಹಂಕಾರಿ ದುಷ್ಟರಿಗೆ ತೋರಿಸಬೇಕಿದೆ. ಇನ್ನೊಮ್ಮೆ ರಾಮಯ್ಯನವರತ್ತ ಕಣ್ಣೆತ್ತಿ ನೋಡಲೂ ಈ ದುಷ್ಟರು ಹಿಂದೆ ಮುಂದೆ ನೋಡುವಂತೆ ಮಾಡಬೇಕಿದೆ- ಶಶಿಕಾಂತ ಯಡಹಳ್ಳಿ, ರಂಗಕರ್ಮಿ

‘ಕೋಟಿಗಾನಹಳ್ಳಿ ರಾಮಯ್ಯನವರ ಮೇಲೆ ಹಲ್ಲೆ’ ಎನ್ನುವ ಸುದ್ದಿ ಸಾಂಸ್ಕೃತಿಕ ಲೋಕದಲ್ಲಿ ತಲ್ಲಣ ಸೃಷ್ಟಿಸಿದೆ. ಕನ್ನಡ ನಾಡಿನ ಸಾಕ್ಷಿ ಪ್ರಜ್ಞೆಯಂತಿರುವ ರಾಮಯ್ಯನವರು ಸಾಮಾಜಿಕ ಚಳುವಳಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಐದು ದಶಕಗಳಿಂದ ತೊಡಗಿಕೊಂಡವರು. ಕೋಲಾರದ ಹತ್ತಿರದ ಅಂತರಗಂಗೆ ಬೆಟ್ಟದಲ್ಲಿ ಆದಿಮ ಎನ್ನುವ ಸಾಂಸ್ಕೃತಿಕ ಲೋಕವನ್ನು ಸೃಷ್ಟಿಸಿದವರು. ಮಕ್ಕಳ ನಾಟಕಗಳನ್ನು ರಚಿಸಿ ಮಕ್ಕಳ ರಂಗಭೂಮಿಯಲ್ಲಿ ತೊಡಗಿಸಿಕೊಂಡವರು. ಸನಾತನಿಗಳ ಶೋಷಣೆಯನ್ನು ವಿರೋಧಿಸಿದವರು, ಮೇಲ್ವರ್ಗದವರ ದಬ್ಬಾಳಿಕೆಯನ್ನು ಪ್ರತಿರೋಧಿಸಿದವರು. ದಲಿತ ಅಸ್ಮಿತೆಯನ್ನು ಮೈಗೂಡಿಸಿಕೊಂಡವರು.

ಇಂತಹ ಜನಪರ ವ್ಯಕ್ತಿಯ ಮೇಲೆ ಲೋಕಲ್ ಪುಂಡರು ದಾಳಿ ಮಾಡಿ ಗಾಯಗೊಳಿಸಿದ್ದು ಅಚ್ಚರಿಯ ಸಂಗತಿ ಏನಲ್ಲ. ಯಾಕೆಂದರೆ ಅನ್ಯಾಯ ಅತಿರೇಕಗಳ ವಿರುದ್ಧ ತಿರುಗಿ ಬೀಳುವ ಗುಣವಿಶೇಷತೆ ಹೊಂದಿರುವ ರಾಮಯ್ಯನಂತವರ ವಿರುದ್ಧ ಕತ್ತಿ ಮಸೆಯುವವರೂ ಅವರ ಸುತ್ತ ಮುತ್ತ ಇದ್ದೇ ಇರುತ್ತಾರೆ. ಅದಕ್ಕೆ ಈ ಪಾಪರಾಜನಹಳ್ಳಿಯ ಪುಂಡರೂ ಹೊರತಲ್ಲ.

ತಾವೇ ಕಟ್ಟಿದ ‘ಆದಿಮ’ ದಿಂದ ಹೊರಗೆ ಬಂದ ರಾಮಯ್ಯನವರು ಪಕ್ಕದಲ್ಲಿರುವ ಪಾಪರಾಜನಹಳ್ಳಿಯಲ್ಲಿ ‘ಬುಡ್ಡೀದೀಪ’ ಹೆಸರಲ್ಲಿ ಪುಟ್ಟ ಮನೆಯೊಂದನ್ನು ಕಟ್ಟಿಕೊಂಡು ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಬದುಕನ್ನು ಮುಂದುವರೆಸಿದ್ದಾರೆ. ಬೆಟ್ಟದ ಮೇಲೆ ಪುಟ್ಟ ಮನೆ ಮಾಡಿಕೊಂಡು ನೆಮ್ಮದಿಯಾಗಿ ಬದುಕು ಕಟ್ಟಿಕೊಳ್ಳಬೇಕೆಂಬ ರಾಮಯ್ಯನವರ ಆಶಯಕ್ಕೆ ಪೂರಕವಾಗಿ ಸುತ್ತಮುತ್ತಲ ಮನುಷ್ಯ ನಿರ್ಮಿತ ವಾತಾವರಣ ಇರಲಿಲ್ಲ. ಅಲ್ಲಿಯೇ ಹತ್ತಿರದಲ್ಲಿ ಮಸೀದಿ ಇದೆ, ದಿನಕ್ಕೆ ಐದು ಬಾರಿ ಆಜಾನ್ ಶಬ್ದ ಜೋರಾಗಿ ಮೊಳಗುತ್ತಲೇ ಇರುತ್ತದೆ. ಕೂಗಳತೆಯ ಹತ್ತಿರದಲ್ಲಿ ಮುನೇಶ್ವರ ದೇವಸ್ಥಾನವೂ ಇದೆ. ಹಬ್ಬ ಹರಿದಿನ ಧಾರ್ಮಿಕ ಆಚರಣೆಗಳ ನೆಪದಲ್ಲಿ ಬೆಳಿಗ್ಗೆ ಸಂಜೆ ಭಕ್ತಿಗೀತೆ ಭಜನೆಗಳ ಅರ್ಭಟ ತಾರಕದಲ್ಲಿರುತ್ತದೆ. ಮೈಕಾಸುರನ ಹಾವಳಿಗೆ ರಾಮಯ್ಯನಂತಹ ಏಕಾಂತ  ಪ್ರಿಯರ ನೆಮ್ಮದಿ ಹಾಳಾಗಿದ್ದರಲ್ಲಿ ಅಚ್ಚರಿ ಏನಿಲ್ಲ. ಧ್ವನಿವರ್ಧಕದ ವಾಲ್ಯೂಮ್ ಕಡಿಮೆ ಮಾಡಲು ಅನೇಕ ಸಲ ದೇವಸ್ಥಾನದವರಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ. ಉಗಾದಿ ಹಬ್ಬದ ನೆಪದಲ್ಲಿ ಕಳೆದ ಮೂರು ದಿನದಿಂದಲೂ ಅತ್ತ ದೇವಸ್ಥಾನದ ಧ್ವನಿವರ್ಧಕ ದಾಂಗುಡಿಸುತ್ತಿದೆ.

ಇತ್ತ ರಾಮಯ್ಯನವರು ಮಕ್ಕಳಿಗೆ ‘ಬುಡ್ಡಿದೀಪ ಟ್ರಸ್ಟ್’ ಮೂಲಕ ಎಪ್ರಿಲ್ 12 ರಿಂದ ಐದು ಬೇರೆ ಬೇರೆ ಸ್ಥಳಗಳಲ್ಲಿ ಸಂಸ್ಕೃತಿ ಸಂಗಮ-3 ಎನ್ನುವ ಮಕ್ಕಳ ಶಿಬಿರವನ್ನು ಆಯೋಜಿಸುತ್ತಿದ್ದಾರೆ. ಹಾಗೂ ಅದರ ಪೂರ್ವ ತಯಾರಿಯ ಒತ್ತಡದಲ್ಲಿದ್ದಾರೆ. ದೇವಸ್ಥಾನದ  ಮೈಕಾಸುರನ ಹಾವಳಿಯಿಂದಾಗಿ ರಾಮಯ್ಯನವರ ಸಹನೆ ಮಿತಿಮೀರಿ ಹೋಗಿದೆ. ಬೆಳಿಗ್ಗೆ 8 ಕ್ಕೆ ಪಾಪರಾಜಹಳ್ಳಿಯ ಮುನೇಶ್ವರ ದೇವಸ್ಥಾನಕ್ಕೆ ಮಗನ ಜೊತೆಗೆ ಹೋಗಿ ಧ್ವನಿವರ್ಧಕದ ಶಬ್ದ ಕಡಿಮೆ ಮಾಡಲು ಪಾಪರಾಜನಹಳ್ಳಿಯ ಗ್ರಾಮ ಪಂಚಾಯತಿ ಸದಸ್ಯ ಮಂಜುನಾಥ ಎನ್ನುವವನಿಗೆ ಹೇಳಿದ್ದಾರೆ. ಆತ ತನ್ನ ಊರಿನ ಭೈರಪ್ಪ, ಗೋವಿಂದಪ್ಪ ಹಾಗೂ ಪಕ್ಕದಲ್ಲಿರುವ  ತೇರಹಳ್ಳಿ ಗ್ರಾಮ ಪಂಚಾಯತಿಯ ಮುನಿಯಪ್ಪ ಹಾಗೂ ಇನ್ನಿತರರನ್ನು ಸೇರಿಸಿ ರಾಮಯ್ಯನವರ ಮೇಲೆ ಜಗಳ ಶುರುಮಾಡಿದ್ದಾನೆ. ದುರಹಂಕಾರದಿಂದ ವರ್ತಿಸಿದ ಈ ಕಿಡಿಗೇಡಿಗಳು ವಯಸ್ಸಾದ ರಾಮಯ್ಯನವರ ಮೇಲೆ ಹಲ್ಲೆ ಮಾಡಿ ತಮ್ಮ ಪೌರುಷ ಮೆರೆದಿದ್ದಾರೆ.  ರಾಮಯ್ಯನವರ ರಕ್ಷಣೆಗೆ ಬಂದ ಮಗ ಮೇಘವರ್ಷನ ಮೇಲೆ ಕೂಡಾ ದೈಹಿಕ ಹಲ್ಲೆ ಮಾಡಲಾಗಿದೆ. ರಾಮಯ್ಯನವರ ದೇಹಕ್ಕೆ ಗಾಯವಾಗಿದೆ, ಕಣ್ಣಿಗೆ ಹಾನಿಯಾಗಿದೆ. ಕೂಡಲೇ ತಂದೆ ಮಗ ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರಿಂದ  ಅಪಾಯದಿಂದ ದೂರಾಗಿದ್ದಾರೆ. ಜಿಲ್ಲಾಡಳಿತವೂ ರಾಮಯ್ಯನವರ ಆರೋಗ್ಯದತ್ತ ಚಿತ್ತ ಹರಿಸಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯವರು ದೂರು ದಾಖಲಿಸಿಕೊಂಡು ಹಲ್ಲೆಕೋರರನ್ನು ಬಂಧಿಸಿದ್ದಾರೆ.

ಹೀಗೆ ಹಲ್ಲೆ ಮಾಡಿದ ಆಗುಂತಕರು ರಾಮಯ್ಯನವರಿಗೆ ಊರನ್ನು ಬಿಟ್ಟು ಹೋಗಬೇಕೆಂದು ಧಮಕಿ ಹಾಕಿದ್ದರ ಹಿಂದೆ ಬೇರೆಯದೇ ಕಾರಣವಿದೆ. ಇಲ್ಲಿ ರಾಮಯ್ಯನವರ ಮೇಲಿನ ಹಲ್ಲೆಗೆ ಧ್ವನಿವರ್ಧಕವೆಂಬುದು ಕೇವಲ ನೆಪ ಮಾತ್ರ. ಅದರ ಹಿಂದೆ ರಿಯಲ್ ಎಸ್ಟೇಟ್ ದಂಧೆಕೋರರ ಆಕ್ರೋಶವೂ ಇದೆ.‌ ಶಿವಗಂಗೆ ಬೆಟ್ಟದಲ್ಲಿರುವ ಈ ಪುಟ್ಟ ಗ್ರಾಮಗಳಲ್ಲಿನ ಜಮೀನು ನಿವೇಶನಗಳಿಗೆ ಭಾರೀ ಬೇಡಿಕೆ ಇದೆ. ಖಾಲಿ ಜಮೀನು ಇದ್ದಲ್ಲೆಲ್ಲಾ ಲೇಔಟ್ ಮಾಡಿ ನಿವೇಶನ ಮಾರಲಾಗುತ್ತಿದೆ. ಈ ನಿವೇಶನ ನಿರ್ಮಾಣ ಹಾಗೂ ಮಾರಾಟದ ಹಿಂದೆ ಈ ಹಳ್ಳಿಗಳ ಗ್ರಾಮ ಪಂಚಾಯತಿಯ ಸದಸ್ಯರುಗಳ ಕೈವಾಡವಿದೆ. ರಾಮಯ್ಯನವರು ಈ ಅಕ್ರಮ ಭೂವ್ಯವಹಾರಗಳ ವಿರುದ್ದ ಧ್ವನಿ ಎತ್ತುತ್ತಲೇ ಬಂದಿದ್ದಾರೆ. ಇದರಿಂದಾಗಿ ಈ ಪಂಚಾಯತಿಗಳ ಹಾಲಿ ಮಾಜಿ ಸದಸ್ಯರುಗಳು ಹಾಗೂ ಅವರ ಹಿಂಬಾಲಕರು ಕೆರಳಿದ್ದರು. ಇವರ ಅಕ್ರಮಗಳಿಗೆ ಅಡೆತಡೆ ಒಡ್ಡುತ್ತಿರುವ ರಾಮಯ್ಯನವರನ್ನು ಹೇಗಾದರೂ ಮಾಡಿ ಊರಿನಿಂದಲೇ ಹೊರಗೆ ಹಾಕಲು ನಿರ್ಧರಿಸಿದ್ದರು. ಈಗ ಮೈಕ್ ಹಾವಳಿಯ ನೆಪದಲ್ಲಿ ರಾಮಯ್ಯ ಹಾಗೂ ಅವರ ಮಗನ ಮೇಲೆ ತೀವ್ರವಾಗಿ ಹಲ್ಲೆ ಮಾಡಿ ಊರನ್ನು ಬಿಟ್ಟು ಹೋಗಬೇಕೆಂದು ಹೆದರಿಸಿದ್ದಾರೆ.

ಪ್ರಶ್ನಿಸಿದವರ ಮೇಲೆ ಈ ರೀತಿಯ ದಬ್ಬಾಳಿಕೆ ಹೊಸದೇನಲ್ಲ. ಅಂಬೇಡ್ಕರ್ ರವರ ಅನುಯಾಯಿಯಾದ ರಾಮಯ್ಯನವರ ಮೇಲೆಯಾದ ಇಂತಹ ದೈಹಿಕ ದಮನ ಕ್ಷಮೆಗೆ ಅರ್ಹವಲ್ಲ. ಬಂಧಿಸಲ್ಪಟ್ಟವರು ಹೇಗೋ ಜಾಮೀನಿನ ಮೇಲೆ ಹೊರಗೆ ಬಂದು ತಮ್ಮ ದಂಧೆ ಮುಂದುವರೆಸುತ್ತಾರೆ. ಮತ್ತೆ ಈ ದೇವಸ್ಥಾನ ಪ್ರಾರ್ಥನಾ ಮಂದಿರಗಳ ಧ್ವನಿವರ್ಧಕಗಳಲ್ಲಿ ಭಜನೆ ಭಕ್ತಿಗೀತೆಗಳು ಶಬ್ದಮಾಲಿನ್ಯ ಮಾಡುತ್ತಲೇ ಇರುತ್ತವೆ. ಆದರೆ ಇದಕ್ಕೆಲ್ಲಾ ಏನು ಪರಿಹಾರ? ಸಂಘಟಿತವಾದ ದುಷ್ಟ ಶಕ್ತಿಗಳನ್ನು ನಿಯಂತ್ರಿಸುವ ಬಗೆಯಾದರೂ ಏನು? ಉತ್ತರ ಅಷ್ಟು ಸುಲಭವಲ್ಲ. ಮತ್ತೆ ನೊಂದ ಜನರನ್ನು ಸಂಘಟಿಸಿ ಈ ಲೋಕಲ್ ಪುಂಡರ ಅಟ್ಟಹಾಸವನ್ನು ಮೆಟ್ಟಿ ನಿಲ್ಲಬಹುದಾಗಿದೆ. ಆದರೆ ರಾಮಯ್ಯನಂತವರಿಗೆ ಮಾಡಲು ಇದಕ್ಕಿಂತಲೂ ಮಹತ್ವದ ಕೆಲಸಗಳಿವೆ. ಮೊದಲಿನಂತೆ ಅವರ ಆರೋಗ್ಯ ಹಾಗೂ ವಯಸ್ಸು ಬೆಂಬಲಿಸುತ್ತಿಲ್ಲ. ಈಗ ಸಾಮಾಜಿಕ ಹೋರಾಟಗಾರರು, ಜನಪರ ಸಂಘಟನೆಗಳು ಹಾಗೂ ಸಾಂಸ್ಕೃತಿಕ ಮನಸ್ಸುಗಳು ಅವರ ಬೆಂಬಲಕ್ಕೆ ನಿಲ್ಲಬೇಕಿದೆ. ಅದೇ ಗ್ರಾಮದಲ್ಲಿ ಪ್ರತಿರೋಧ ಸಮ್ಮೇಳನ ಏರ್ಪಡಿಸಿ ರಾಮಯ್ಯನವರ ಹಿಂದಿರುವ ಸಂಘಟನಾತ್ಮಕ ಶಕ್ತಿಯ ಅಗಾಧತೆಯನ್ನು ಸ್ಥಳೀಯ ದುರಹಂಕಾರಿ ದುಷ್ಟರಿಗೆ ತೋರಿಸಬೇಕಿದೆ. ಇನ್ನೊಮ್ಮೆ ರಾಮಯ್ಯನವರತ್ತ ಕಣ್ಣೆತ್ತಿ ನೋಡಲೂ ಈ ದುಷ್ಟರು ಹಿಂದೆ ಮುಂದೆ ನೋಡುವಂತೆ ಮಾಡಬೇಕಿದೆ.

ಹಲ್ಲೆಯ ಅಪಾದಿತರು

ಇದರ ಜೊತೆಗೆ ಈ ಗುಡಿ ಗುಂಡಾರ ಮಸೀದಿಗಳಿಂದಾಗುವ ಶಬ್ದಾತಂಕದ ಬಗ್ಗೆಯೂ ಯೋಚಿಸಬೇಕಿದೆ. ದೇವರ ಹೆಸರಲ್ಲಿ ಬಹುತೇಕ ಎಲ್ಲಾ ದೇವಸ್ಥಾನಗಳು ಮಾಡುವ ಶಬ್ದಮಾಲಿನ್ಯ ಖಂಡಿತಾ ಸಹನೀಯವಲ್ಲ. ಯಾವುದೇ ದೇವಸ್ಥಾನಗಳು ಹಾಗೂ ಪ್ರಾರ್ಥನಾ ಮಂದಿರಗಳ ಸುತ್ತಮುತ್ತ ಮನೆ ಮಾಡಿದವರಿಗೆ ಮೈಕಾಸುರನ ಕಾಟ ತಪ್ಪಿದ್ದಲ್ಲ. ಅಲ್ಲಿರುವವರ ಪರಿಸ್ಥಿತಿ “ಅನ್ನುವ ಹಾಗಿಲ್ಲಾ, ಅನುಭವಿಸೋ ಹಾಗಿಲ್ಲ” ಎನ್ನುವಂತಾಗಿರುತ್ತದೆ. ದೇವಸ್ಥಾನಗಳ ಶಬ್ದ ಭಯೋತ್ಪಾದನೆಯ ವಿರುದ್ಧ ದ್ವನಿ ಎತ್ತಿದರೆ  ಭಕ್ತಾದಿಗಳ ವಿರೋಧ ಕಟ್ಟಿಕೊಳ್ಳಬೇಕಾದೀತೆಂಬ ಆತಂಕ. ದೈವದ್ರೋಹದ ಆರೋಪಕ್ಕೆ ಗುರಿಯಾಗಬಹುದೆಂಬ ಭಯ. ಹೀಗಾಗಿ ಎಷ್ಟೇ ಕಿರಿಕಿರಿಯಾದರೂ ಸಹಿಸಿಕೊಂಡು ಹೋಗುವುದು ಜನರಿಗೆ ಅಭ್ಯಾಸವಾಗಿರುತ್ತದೆ. ಆದರೆ ರಾಮಯ್ಯನಂತವರಿಗೆ ಅದು ಸಾಧ್ಯವಿಲ್ಲ. ಹಾಗಂತ ಏಕಾಂಗಿಯಾಗಿ ಸಂಘಟಿತ ದುಷ್ಟಕೂಟವನ್ನು ಎದುರಿಸುವುದೂ ಸಾಧುವಲ್ಲ.

ಇಲ್ಲಿ ರಾಮಯ್ಯನವರೂ ಸ್ವಲ್ಪ ಸಂಯಮವಹಿಸಬೇಕಿತ್ತು. ಶಬ್ದಾಸುರರ ವಿರುದ್ಧ ಪೊಲೀಸರಿಗೆ ದೂರು ಕೊಡಬಹುದಾಗಿತ್ತು. ಇಲ್ಲವೇ ತಮ್ಮ ಸ್ನೇಹಿತರ ತಂಡದ ಜೊತೆ ಹೋಗಿ ವಿರೋಧ ವ್ಯಕ್ತಪಡಿಸ ಬೇಕಾಗಿತ್ತು. ಧರ್ಮೋನ್ಮಾದದಿಂದ ಉನ್ಮತ್ತ ಜನರನ್ನು ಏಕಾಂಗಿಯಾಗಿ ಎದುರಿಸುವ ಸಾಹಸ ಮಾಡಬಾರದಿತ್ತು. ಸ್ವಲ್ಪ ಸಹನೆ ಇಟ್ಟು ಕಾನೂನಾತ್ಮಕವಾಗಿ ಹೆಜ್ಜೆ ಇಟ್ಟಿದ್ದರೆ ಈ ಹಿಂಸಾತ್ಮಕ ಹಲ್ಲೆಯಿಂದ ತಪ್ಪಿಸಿ ಕೊಳ್ಳಬಹುದಾಗಿತ್ತು. ವ್ಯಕ್ತಿಗತ ಶಕ್ತಿಗಿಂತ ಸಾಂಘಿಕ ಶಕ್ತಿ ಮುಖ್ಯವೆಂಬುದು ಹೋರಾಟದ ಹಾದಿಯಲ್ಲೇ ಬದುಕು ಸವೆಸಿದ ರಾಮಯ್ಯನವರಿಗೆ ಗೊತ್ತಿಲ್ಲದ ಸತ್ಯವೇನಲ್ಲ.

ಅದೇ ರೀತಿ ಈ ಧರ್ಮಾಂಧರೂ ಸಹ ಸಾರ್ವಜನಿಕರಿಗೆ ತೊಂದರೆಯಾಗದಂತೆ ತಮ್ಮ ಆಚರಣೆಗಳನ್ನು ಮಾಡಬೇಕು. ಆದರೆ ಎಷ್ಟೋ ಸಂದರ್ಭದಲ್ಲಿ ಅದು ಅಸಾಧ್ಯ. ದೈವದ ಅಮಲೇರಿದವರಿಗೆ ಬೇರೆಯವರಿಗೆ ತೊಂದರೆಯಾಗುವುದರ ಬಗ್ಗೆ ಅರಿವಿರುವುದಿಲ್ಲ. ಅರಿವಿದ್ದರೂ ದೇವರ ಕಾರ್ಯಗಳಿಗೆ ಎಲ್ಲರೂ ಸಹಕರಿಸಲೇಬೇಕು ಎನ್ನುವ ಮನೋಭಾವ. ಇಂತಹ ಭಾವೋದ್ವೇಗ ಪೀಡಿತರಿಗೆ ಮದ್ದಿಲ್ಲ. ರಾಮಯ್ಯನಂತಹ ಸೂಕ್ಷ್ಮ ಪ್ರಜ್ಞೆಯ ವ್ಯಕ್ತಿಗಳಿಗಂತೂ ಎಲ್ಲೇ ಇದ್ದರೂ ನೆಮ್ಮದಿ ಎಂಬುದಿಲ್ಲ.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ ಹಾಗೂ ಪತ್ರಕರ್ತರು

More articles

Latest article