“ದಿ ಗರ್ಲ್ ವಿಥ್ ದಿ ನೀಡಲ್” ಶಿಶು ಹಂತಕಿಯ ಕಾರ್ಯ; ಬೆಚ್ಚಿ ಬೀಳಿಸುವ ಕ್ರೌರ್ಯ

Most read

ಸಿನೆಮಾ ವಿಮರ್ಶೆ

ಬೆಂಗಳೂರಿನಲ್ಲಿ ಫೆಬ್ರವರಿ 1 ರಿಂದ ಆಯೋಜನೆಗೊಂಡ 16 ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕ್ರೌರ್ಯದ ಪರಮಾವಧಿಯನ್ನು ತೋರಿಸುವ ಮತ್ತೊಂದು ಸಿನೆಮಾ ಇರಲಾರದು. ಪೋಲೆಂಡಿನ ಮ್ಯಾಗ್ನಸ್ ವೋನ್ ಹಾರ್ನ್ ನಿರ್ದೇಶಿಸಿದ ಡೆನ್ಮಾರ್ಕ್ ದೇಶದ “ದಿ ಗರ್ಲ್ ವಿಥ್ ದಿ ನೀಡಲ್” ಎನ್ನುವ ಕಪ್ಪುಬಿಳುಪಿನ ಸಿನೆಮಾ ಕ್ರೌರ್ಯದ ಬರ್ಬರತೆಯ ವಿವಿಧ ಆಯಾಮಗಳನ್ನು ಅನಾವರಣಗೊಳಿಸಿ ಪ್ರೇಕ್ಷಕರನ್ನು ಬೆಚ್ಚಿಬಿಳಿಸಿದೆ.

ಮೊದಲ ಮಹಾಯುದ್ಧ ಸೃಷ್ಟಿಸಿದ ಆತಂಕ, ಹತಾಶೆ, ನಿರುದ್ಯೋಗದ ಭೀಕರತೆಗಳಿಂದಾಗಿ ಡೆನ್ಮಾರ್ಕಿನ ಜನರ ಬದುಕು ಹೇಗೆ ಛಿದ್ರವಾಗಿದೆ ಎಂಬುದನ್ನು ತೋರಿಸುತ್ತಲೇ ವಿನಾಶಕಾರಿ ಯುದ್ಧ ಮಹಿಳೆಯರ ಮೇಲೆ ಮೆರೆದ ಅನಾಹುತಗಳನ್ನು ಈ ಸಿನೆಮಾ ತೆರೆದಿರಿಸುತ್ತದೆ.

ಯುದ್ಧಕ್ಕೆ ಹೋದ ಗಂಡ ವಾಪಸ್ ಬರದೇ, ಕೆಲಸವೂ ಸಿಗದೇ, ಬಾಡಿಗೆ ಕಟ್ಟಲಾಗದ್ದಕ್ಕೆ ಮನೆಯಿಂದ ಹೊರಗಟ್ಟಲ್ಪಟ್ಟ ಕಾರೋಲೈನ್ ಎನ್ನುವ ಮಹಿಳೆಯ ದುರಂತಮಯ ಬದುಕಿನ ಸುತ್ತ ಹಬ್ಬಿ ನಿಂತ ತಣ್ಣನೆಯ ಕ್ರೌರ್ಯಗಳ ಹುತ್ತವನ್ನು ಇಡೀ ಸಿನೆಮಾ ಕಟ್ಟಿಕೊಟ್ಟಿದೆ.

ಯುದ್ಧದಿಂದ ಛಿದ್ರಗೊಂಡ ಕೋಪನ್ ಹೇಗನ್ ನಗರದಲ್ಲಿ ಬದುಕಿಗಾಗಿ ಕೆಲಸಕ್ಕೆ ಸೇರಿದ್ದಾಗ ಕಾರ್ಖಾನೆಯ ಮಾಲೀಕನಿಂದ ಗರ್ಭವತಿಯಾಗಿ ಇರುವ ಕೆಲಸವನ್ನೂ ಕಳೆದುಕೊಳ್ಳುತ್ತಾಳೆ. ಸಾರ್ವಜನಿಕ ಸ್ನಾನದ ಸ್ಥಳದಲ್ಲಿ ದೊಡ್ಡದಾದ ನೀಡಲ್ ಮೂಲಕ ತನ್ನ ಹೊಟ್ಟೆಯಲ್ಲಿರುವ ಪಿಂಡವನ್ನು ತೆಗೆದು ಹಾಕಲು ಪ್ರಯತ್ನಿಸುವಾಗ ಡ್ಯಾಗ್ಮರ್ ಎನ್ನುವ ಮಹಿಳೆ ಕಾಪಾಡಿ ಮಗು ಹುಟ್ಟಿದ ಮೇಲೆ ತಂದು ಕೊಡಲು ಹೇಳುತ್ತಾಳೆ. ನೀಡಲ್ ಮೂಲಕ ಗರ್ಭಪಾತಕ್ಕೆ ಯತ್ನಿಸುವ ದೃಶ್ಯವಂತೂ ನೋಡುಗರ ಹೃದಯವನ್ನೇ ಕಲಕುವಂತಿದೆ.

ಇದ್ದಕ್ಕಿದ್ದಂತೆ ಯುದ್ಧದಲ್ಲಿ ಗಾಯಗೊಂಡು ಮರಳಿ ಬಂದ ಗಂಡನ ಮುಖದ ವಿಕಾರತೆ ಹಾಗೂ ಆತನ ವಿಕ್ಷಿಪ್ತತೆಯನ್ನು ಅನಿವಾರ್ಯವಾಗಿ ಕಾರೋಲೈನ್ ಸಹಿಸಿಕೊಳ್ಳುತ್ತಾಳೆ. ತನ್ನದಲ್ಲದ ಮಗುವನ್ನು ಆತ ಒಪ್ಪಿಕೊಂಡರೂ ಇಷ್ಟವಿಲ್ಲದ ಕೂಸನ್ನು ತೆಗೆದುಕೊಂಡು ಹೋಗಿ  ಮಗುವನ್ನು ಉತ್ತಮ ಮನೆಗೆ ಸೇರಿಸುತ್ತೇನೆ ಎನ್ನುವ ಭರವಸೆ ಕೊಟ್ಟ ಡ್ಯಾಗ್ಮರ್ ಗೆ ಒಪ್ಪಿಸಿ ನಂತರ ಡ್ಯಾಗ್ಮರ್ ಳ ಅಂಗಡಿಯಲ್ಲಿ ಕೆಲಸಕ್ಕೆ ಸೇರುವ ಕಾರೋಲೈನ್ ಪರಿತ್ಯಕ್ತ ಶಿಶುಗಳಿಗೆ ಎದೆಹಾಲು ಕುಡಿಸುವ ಕಾಯಕ ಮಾಡುತ್ತಾಳೆ.

ಯಾವುಯಾವುದೊ ಕಾರಣಕ್ಕೆ ಬೇಡವಾದ ಕೂಸುಗಳನ್ನು ತಂದು ಕೊಡುವ ಮಹಿಳೆಯರಿಂದ ಹಣವನ್ನು ಪಡೆದು ಮಕ್ಕಳಿಲ್ಲದ ಉತ್ತಮ ಮನೆಗೆ ಸೇರಿಸುವ ಸೇವೆಯನ್ನು ಡ್ಯಾಗ್ಮರ್ ಮಾಡುತ್ತಾಳೆ ಎಂದೇ ಕಾರೋಲೈನ್ ಳಂತೆ ಪ್ರೇಕ್ಷಕರೂ ನಂಬಿರುತ್ತಾರೆ. ತಾಯಂದಿರು ಕೊಟ್ಟುಹೋದ ಪರಿತ್ಯಕ್ತ ಶಿಶುಗಳನ್ನು ಡ್ಯಾಗ್ಮರ್ ಕೊಲ್ಲುವ ಕರಾಳತೆಯನ್ನು ನೋಡಿ ಕೇವಲ ಕಾರೋಲೈನ್ ಮಾತ್ರವಲ್ಲ ಪ್ರೇಕ್ಷಕರು ತಲ್ಲಣಗೊಳ್ಳುತ್ತಾರೆ. ‌ಆಕೆಯ ಕ್ರೌರ್ಯದ ಪರಮಾವಧಿಗೆ ತಳಮಳಗೊಳ್ಳುತ್ತಾರೆ.

ಕೊನೆಗೆ ಶಿಶುಗಳ ಹತ್ಯಾ ಪ್ರಕರಣದಲ್ಲಿ ಡ್ಯಾಗ್ಮರ್ ಬಂಧಿಸಲ್ಪಟ್ಟು ಜನರ ಆಕ್ರೋಶಕ್ಕೆ ಈಡಾಗುತ್ತಾಳೆ. ಕಾರೋಲೈನಳು ಮನೆಯ ಮೇಲಿನಿಂದ ಕೆಳಕ್ಕೆ ಧುಮುಕಿ ಸಾಯಲು ಯತ್ನಿಸಿ ಗಾಯಗೊಂಡು ಓಡುತ್ತಾಳೆ. ವಿಕಾರ ಗಂಡನೇ ಆಕೆಗೆ ಆಶ್ರಯ ಕೊಡುತ್ತಾನೆ. ಕೊನೆಗೆ ಡ್ಯಾಗ್ಮರ್ ಸಾಕಿ ಬೆಳೆಸಿದ ಮಗಳನ್ನೇ ಕಾರೋಲೈನ್ ದತ್ತು ಪಡೆಯುವ ಮೂಲಕ ಸಿನೆಮಾ ಏನೋ ಕೊನೆಗೊಳ್ಳುತ್ತದೆ. ಹಾಗೂ ಇದೊಂದು ಸತ್ಯ ಘಟನೆ ಆಧಾರಿತ ಸಿನೆಮಾ ಎಂದು ಸ್ಕ್ರೀನ್ ಮೇಲೆ ತೋರಿಸಿದ ಮೇಲಂತೂ ನೋಡುಗರ ಎದೆಯಲ್ಲಿ ತಲ್ಲಣದ ತೀವ್ರತೆ ಹೆಚ್ಚುತ್ತದೆ.

ಕೊನೆಗೆ ಸರಣಿ ಶಿಶು ಹಂತಕಿ ಡ್ಯಾಗ್ಮರ್ ಸ್ವಲ್ಪವೂ ಪಾಪ ಪ್ರಜ್ಞೆ ಇಲ್ಲದೇ  ನ್ಯಾಯಾಲಯದಲ್ಲಿ ತನ್ನ ಕುಕೃತ್ಯಗಳಿಗೆ ಕೊಟ್ಟ ಸಮರ್ಥನೆ ಮಾತ್ರ ಪ್ರೇಕ್ಷಕರನ್ನು ತಲ್ಲಣಗೊಳಿಸುವಂತಿದೆ. “ಅಕ್ರಮ ಸಂಬಂಧಕ್ಕೆ ಹುಟ್ಟಿದ ಮಕ್ಕಳು ಬದುಕಲು ಅರ್ಹವಲ್ಲ” ಎನ್ನುವ ಹಂತಕಿಯ ಸಮರ್ಥನೆ ತಳಮಳವನ್ನು ಹುಟ್ಟಿಸುವಂತಿದೆ. ಇಷ್ಟಕ್ಕೂ ನವಜಾತ ಶಿಶುಗಳದ್ದೇನು ತಪ್ಪಿದೆ?. ಅಂತಹ ಕೂಸುಗಳ ಹುಟ್ಟಿಗೆ ಕಾರಣವಾಗಿರುವ ಕಾಮಾತುರ ಗಂಡಸರನ್ನು ಹಿಡಿದು ಶಿಕ್ಷಿಸಿದ್ದರೆ ಒಪ್ಪಬಹುದಾಗಿತ್ತು. ಸಮಾಜದ ನಿಂದನೆಗೆ ಹೆದರಿ  ಹೆತ್ತ ಮಗುವನ್ನು ಅನಾಥವಾಗಿ ಬಿಡುವ ತಾಯಂದಿರನ್ನು ಶಿಕ್ಷಿಸಿದರೂ ಸಹಿಸಿಕೊಳ್ಳ ಬಹುದಾಗಿತ್ತು. ಆದರೆ ಏನೂ ಅರಿಯದ ಕಂದಮ್ಮಗಳ ಮೇಲೆ ತನ್ನ ಕ್ರೌರ್ಯ ಮೆರೆದ ಶಿಶು ಹಂತಕಿಯ ದುಷ್ಕೃತ್ಯ ಅಕ್ಷಮ್ಯ. ಇಂತಹ ಒಬ್ಬಳು ಮಹಾ ಕ್ರೂರಿ ಶಿಶು ಹಂತಕಿಯ ಕ್ರೌರ್ಯವನ್ನು ಕೇವಲ ಸಿನೆಮಾದಲ್ಲಿ ತೋರಿಸಿದ್ದರೆ ನೋಡಿ ಮರೆಯಬಹುದಾಗಿತ್ತು. ಆದರೆ ವಾಸ್ತವದಲ್ಲಿ ಇಂತಹ ಒಬ್ಬ  ಕೊಲೆಗಾರ್ತಿ ಇದ್ದಳು ಹಾಗೂ ಅವಳ ಕೃತ್ಯವನ್ನು ಆಧರಿಸಿಯೇ ಈ ಸಿನೆಮಾ ನಿರ್ಮಾಣವಾಗಿದೆ ಎಂದು ತಿಳಿದಾಗ ಸಂಕಟವಾಗದೇ ಇರದು.

ಕಾರೋಲಿನ್ ಪಾತ್ರ ನಿರ್ವಹಿಸಿದ ವಿಕ್ಟೋರಿಯಾ ಕಾರ್ಮೆನ್ ಸೋನೆ ಅಭಿನಯವೇ ಇಡೀ ಸಿನೆಮಾದ ಜೀವಾಳ. ಎಲ್ಲ ನೋವು ಹತಾಶೆಗಳನ್ನು ಮಾತಿಗಿಂತಲೂ ಭಾವನೆಗಳ ಮೂಲಕವೇ ವ್ಯಕ್ತಪಡಿಸುವ ಕಾರ್ಮೆನ್ ಸೋನೆ ಕ್ಯಾರೋಲಿನ್ ಳ ನೋವುಗಳನ್ನೆಲ್ಲಾ ನೋಡುಗರ ಮನದಾಳಕ್ಕೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾಳೆ. ಡ್ಯಾಗ್ಮರ್ ಪಾತ್ರದಲ್ಲಿ ನಟಿಸಿದ ಟ್ರೈನ್ ಡರ್ಹೋಮ್ ನಟನೆ ಅನನ್ಯ. ಈ ಇಬ್ಬರೂ ಪಾತ್ರಧಾರಿಗಳ ಅಭಿನಯವೇ ಇಡೀ ಸಿನೆಮಾದ ಜೀವಾಳ.

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

ಇದನ್ನೂ ಓದಿ- http://‘ಈ ಪರಗಣ’ವೆಂಬ ಹಾಸ್ಯ ರಸಾಯನ https://kannadaplanet.com/the-comedy-drama-of-ee-paraganaargana/

More articles

Latest article