ವಿಶ್ವದ ಅತ್ಯಂತ ಲಿಂಗ ಸಮಾನ ದೇಶಗಳಲ್ಲಿ ಒಂದಾದ ನೆದರ್ಲ್ಯಾಂಡ್ ನಲ್ಲಿ ಮಕ್ಕಳು ನಾಲ್ಕನೇ ವಯಸ್ಸಿನಲ್ಲೇ ಲಿಂಗ ಮತ್ತು ದೇಹದ ಬಗ್ಗೆ ಕಲಿಯುತ್ತಾರೆ. ಜೊತೆಗೆ ಚಿಕ್ಕ ದೇಶಗಳಾದ ಸುಡಾನ್ ಮತ್ತು ಕಾಂಗೋ ರಿಪಬ್ಲಿಕ್ ಗಳಲ್ಲಿಯೂ ಲೈಂಗಿಕ ಶಿಕ್ಷಣವನ್ನು ಪ್ರಾಥಮಿಕ ಹಂತದಲ್ಲಿಯೇ ಕಲಿಸಲಾಗುತ್ತದೆ. ಆದರೆ ಭಾರತ ದೇಶದಲ್ಲಿ ಇವು ಇವತ್ತಿಗೂ ಕೂಡ ಮಡಿ ಮೈಲಿಗೆ ಗುಟ್ಟಿನ ವಿಷಯಗಳಾಗಿಯೇ ಉಳಿದಿವೆ – ಶೃಂಗಶ್ರೀ.ಟಿ, ಉಪನ್ಯಾಸಕಿ.
ಸೆಕ್ಸ್ ಎಜುಕೇಶನ್ ಎಂದಾಕ್ಷಣ ಕೆಲವರ ಕಣ್ಣು, ಕಿವಿ, ಎಲ್ಲವೂ ನೆಟ್ಟುಗಾಗುವುದಂತೂ ಹೌದು. ಇನ್ನು ಕೆಲವರು ಈ ವಿಷಯದ ಕುರಿತು ಮಾತನಾಡುವುದೇ ಅಸಹ್ಯ ಅಂತ ತೀರ್ಮಾನಿಸಿ ಮೂಗು ಮುರಿಯುವುದೇ ಹೆಚ್ಚು. ಈ ವಿಷಯಗಳನ್ನು ತೀರಾ ಮುಜುಗರದ ಸಂಗತಿಗಳಂತೆ ತೀರ್ಮಾನಿಸಿ ಅದರ ಬಗೆಗೆ ಮಾತಾಡುವುದನ್ನೇ ಮಹಾ ಅಪರಾಧವೆಂಬಂತೆ ಬಿಂಬಿಸಲಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಇವತ್ತಿಗೂ ಕೂಡ ಪ್ರೀತಿ, ಪ್ರೇಮ, ಸೆಕ್ಸ್ ವಿಷಯಗಳ ಕುರಿತು ಮಾತಾಡುವವರನ್ನು ಹುಚ್ಚರಂತೆ, ಕೊಂಚವೂ ಮರ್ಯಾದೆ ಇಲ್ಲದವರಂತೆ, ಸನ್ನೆಸೂಕ್ಷ್ಮತೆಗಳನ್ನೇ ಅರಿಯದವರಂತೆ, ಅನಾಗರಿಕರಂತೆ, ಅಸಭ್ಯರಂತೆ ಕಾಣುವುದು ದುರಂತವೇ ಸರಿ.
ಬಹಳ ಮುಖ್ಯವಾಗಿ ವಿವಿಧತೆಯಲ್ಲಿ ಏಕತೆಗೆ ಹೆಸರಾಗಿರುವ ವಿಶಿಷ್ಟವಾದ ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರಗಳ ಬೀಡಾಗಿರುವ ಭಾರತದಂತಹ ದೇಶದಲ್ಲಂತೂ ಪ್ರೀತಿ, ಪ್ರೇಮ, ಲೈಂಗಿಕ ಬಯಕೆಗಳ ಕುರಿತು, ಗೇ, ಲೆಸ್ಬಿಯನ್, ಟ್ರಾನ್ಸ್ ಜೆಂಡರ್ ಗಳ(Queer) ಕುರಿತು ಲೈಂಗಿಕ ಸ್ವಾತಂತ್ರ್ಯದ ಬಗ್ಗೆ ಮುಕ್ತವಾಗಿ ಚರ್ಚಿಸುವುದು ಮಾತಾಡುವುದಂತೂ ತೀರಾ ಕಡು ಕಷ್ಟದ ಸಂಗತಿ.
ದುರಂತವೆಂದರೆ ಈ ನೆಲದಲ್ಲಿ ಪ್ರೀತಿ, ಪ್ರೇಮ, ಲೈಂಗಿಕತೆಯ ಬಗೆಗೆ, ಮುಟ್ಟಿನ ಬಗೆಗೆ, ಹೆಣ್ಣು ಮತ್ತು ಗಂಡಿನ ವಯೋಸಹಜ ಆಕರ್ಷಣೆಗಳ ಬಗೆಗೆ , ಆಸಕ್ತಿ- ಇಷ್ಟಗಳ ಬಗೆಗೆ ಮುಕ್ತವಾಗಿ ಚರ್ಚಿಸದೆ ಮುಕ್ತವಾಗಿ ಮಾತಾಡಲು ಸ್ಥಳಾವಕಾಶ ಕಲ್ಪಿಸದೆ ಸರಿಯಾದ ಮಾಹಿತಿ ಒದಗಿಸದೆ ತಿಳುವಳಿಕೆ ಮೂಡಿಸುವ ಬದಲು ಬಯಲಿಗೆಳೆಯ ಬೇಕಾದ ವಿಷಯಗಳನ್ನ ಗುಟ್ಟಿನಂತೆ ಇಟ್ಟದ್ದು ದುರಂತವೇ ಸರಿ. ಭಾರತದಲ್ಲಂತೂ ಸೆಕ್ಸ್ ಎಜುಕೇಶನ್ ಅನ್ನು Taboo Topic ನಂತೆಯೇ ನೋಡಲಾಗುತ್ತದೆ. ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತಿಸ್‌ಗಢ ರಾಜ್ಯಗಳಲ್ಲಿ ಸೆಕ್ಸ್ ಎಜುಕೇಶನ್ ಬಗ್ಗೆ ಶಾಲೆಗಳಲ್ಲಿ ಮಾಹಿತಿ ಕೊಡುವುದನ್ನು ನಿಷೇಧಿಸಲಾಗಿದೆ!.
ವಿಷಾದವೆಂದರೆ ಮಧ್ಯಪ್ರದೇಶದ ಹಿಂದೂ ರಾಷ್ಟ್ರೀಯತಾವಾದಿ ಸರ್ಕಾರವು ಲೈಂಗಿಕ ಶಿಕ್ಷಣಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಸ್ಥಾನವಿಲ್ಲ ಎಂದು ಹೇಳಿದೆ ಮತ್ತು ಅದರ ಬದಲಿಗೆ ಶಾಲೆಗಳಲ್ಲಿ ಯೋಗವನ್ನು ಪರಿಚಯಿಸಲು ಯೋಜಿಸಿದೆ ಅಥವಾ ಅದಕ್ಕೆ ಅನುವು ಮಾಡಿಕೊಟ್ಟಿದೆ.
ವಿಶ್ವದ ಅತ್ಯಂತ ಲಿಂಗ ಸಮಾನ ದೇಶಗಳಲ್ಲಿ ಒಂದಾದ ನೆದರ್ಲ್ಯಾಂಡ್ ನಲ್ಲಿ ಮಕ್ಕಳು ನಾಲ್ಕನೇ ವಯಸ್ಸಿನಲ್ಲೇ ಲಿಂಗ ಮತ್ತು ದೇಹದ ಬಗ್ಗೆ ಕಲಿಯುತ್ತಾರೆ. ಜೊತೆಗೆ ಚಿಕ್ಕ ದೇಶಗಳಾದ ಸುಡಾನ್ ಮತ್ತು ಕಾಂಗೋ ರಿಪಬ್ಲಿಕ್ ಗಳಲ್ಲಿಯೂ ಲೈಂಗಿಕ ಶಿಕ್ಷಣವನ್ನು ಪ್ರಾಥಮಿಕ ಹಂತದಲ್ಲಿಯೇ ಕಲಿಸಲಾಗುತ್ತದೆ. ಆದರೆ ಭಾರತ ದೇಶದಲ್ಲಿ ಇವು ಇವತ್ತಿಗೂ ಕೂಡ ಮಡಿ ಮೈಲಿಗೆ ಗುಟ್ಟಿನ ವಿಷಯಗಳಾಗಿಯೇ ಉಳಿದಿವೆಯೇ ವಿನಹ ಅದರ ಬಗೆಗೆ ಅರಿವು ಮೂಡಿಸುವ ಪ್ರಜ್ಞೆಯನ್ನು ಉಂಟುಮಾಡುವ ಯಾವ ಕಾರ್ಯವೂ ನಡೆದಿಲ್ಲ. ನಡೆದರೂ ಅವು ಹೆಚ್ಚಿನ ದಿನಗಳ ಕಾಲ ಉಳಿದಿಲ್ಲ.
ಇವತ್ತಿನ ಈ 21ನೇ ಶತಮಾನದಲ್ಲಿ ಎಷ್ಟು ಜನ ತಾಯಂದಿರು- ತಂದೆಯರು ತಮ್ಮ ಮಕ್ಕಳನ್ನ ಕೂರಿಸಿಕೊಂಡು ಮುಕ್ತವಾಗಿ ಮನೆಯಲ್ಲಿಯೇ ಲೈಂಗಿಕ ಶಿಕ್ಷಣದ ಬಗ್ಗೆ ಮಾಹಿತಿ ನೀಡಿದ್ದಾರೆ? ಎಷ್ಟು ಜನ ಪೋಷಕರು ಮೊದಲ ಬಾರಿಗೆ ಋತುಮತಿಯಾಗುವ ಹೆಣ್ಣುಮಗಳನ್ನು ಕೂರಿಸಿಕೊಂಡು ಮುಟ್ಟು ಒಂದು ಸಹಜ ಪ್ರಕ್ರಿಯೆ. ಯಾವ ಪೂರ್ವಾಗ್ರಹವಲ್ಲದ ಮಡಿ ಮೈಲಿಗೆಯ ವಿಷಯವಲ್ಲ ಅದು ಎಂಬ ಸರಳ ಸಂಗತಿಗಳನ್ನು ಎಷ್ಟು ಜನ ವಿವರಿಸಿದ್ದಾರೆ ?
ಎಷ್ಟು ಜನ ಗಂಡು ಮಕ್ಕಳಿಗೆ ಮುಟ್ಟಾಗುವಿಕೆಯ ಪ್ರಕ್ರಿಯೆಯ ಬಗ್ಗೆ ಮಾಹಿತಿ ಇದೆ ? ನಿಜವಾಗಿಯೂ ಪೋಷಕರ ಮೊದಲ ಕರ್ತವ್ಯ ಈ ಎಲ್ಲಾ ವಿಷಯಗಳ ಕುರಿತು ಧೈರ್ಯವಾಗಿ ಸರಿಯಾದ ಶಿಕ್ಷಣವನ್ನು ಕೊಡಬೇಕಾಗಿರುವುದು. ಆದರೆ ಹೇಳಬೇಕಾದದ್ದನ್ನು ಹೇಳದೆ ಗುಟ್ಟಿನಂತೆ ಇಡುವುದರಿಂದಲೇ ಹೆಣ್ಣು ಪಡುವ ಯಾತನೆಗಳ ಬಗೆಗೆ ಅವಳ ನೋವುಗಳ ಬಗೆಗೆ ಗಂಡಿಗೆ ತಿಳುವಳಿಕೆ ಬರದೇ ಹೋದದ್ದಕ್ಕೆ ಮುಖ್ಯ ಕಾರಣ.
ಹೆಣ್ಣಿನ ಬಗೆಗಿನ ಪ್ರೀತಿಯ ಬಗ್ಗೆ ಗೌರವಯುತವಾದ ಸಂಬಂಧಗಳನ್ನು ಇರಿಸಿಕೊಳ್ಳಲು ಸಾಧ್ಯವಿಲ್ಲದಿದ್ದಾಗ ಕೇವಲ ಅವಳೊಂದು ಭೋಗದ ವಸ್ತುವಂತೆ, ಲೈಂಗಿಕ ಸುಖವನ್ನು ನೀಡುವ ವಸ್ತುವಂತೆ ಕಾಣಿಸುವುದು ದುರಂತವಲ್ಲದೆ ಮತ್ತೇನು ?
ಇನ್ನು ಕೆಲವು ಸಂಪ್ರದಾಯಸ್ಥ ಮನಸ್ಥಿತಿಗಳು, ಪುರುಷ ಪ್ರಧಾನ ವ್ಯವಸ್ಥೆಯ ಮನಸ್ಸುಳ್ಳವರು, ಹೆಣ್ಣು ತುಂಡು ಬಟ್ಟೆ ಹಾಕಿರುವುದೇ, ರಾತ್ರಿ ಹೊತ್ತು ಓಡಾಡುವುದೇ, ಹುಡುಗರೊಟ್ಟಿಗೆ ಸ್ನೇಹದಿಂದ, ಸಲಿಗೆಯಿಂದ ವರ್ತಿಸುವುದೇ ಜಗತ್ತಿನಲ್ಲಿ ನಡೆಯುವ ಎಲ್ಲಾ ಅತ್ಯಾಚಾರಗಳಿಗೆ ಲೈಂಗಿಕ ದೌರ್ಜನ್ಯಗಳಿಗೆ ಮುಖ್ಯ ಕಾರಣ ಎಂಬಂತೆ ಬಿಂಬಿಸುತ್ತಾರೆ.
ಹಾಗಾದರೆ ಇದಕ್ಕೆ ಪ್ರತ್ಯುತ್ತರವೆಂಬಂತೆ ಒಂದು ಉದಾಹರಣೆ ನೀಡುತ್ತೇನೆ. 2018 ರಲ್ಲಿ ದೆಹಲಿಯಲ್ಲಿ ನಡೆದ ಒಂದು ಘಟನೆ. 28 ವರ್ಷದ ವ್ಯಕ್ತಿ 8 ತಿಂಗಳ ಹಸುಗೂಸಿನ ಮೇಲೆ ಅತ್ಯಾಚಾರ ಮಾಡುತ್ತಾನೆಂದಾದರೆ ಅದು ಆ ಎಂಟು ತಿಂಗಳ ಹಸುಗೂಸಿನ ತಪ್ಪಾ ? ಅಥವಾ ಅವನಲ್ಲಿದ್ದ ಕಾಮುಕತೆಯಾ ? ಹುಚ್ಚು ತನವಾ? ಅಥವಾ ಕ್ರೌರ್ಯವಾ ? ಇತ್ತೀಚೆಗೆ ತಾನೆ ನಡೆದಂತ ಮತ್ತೊಂದು ಘಟನೆ. ಉತ್ತರ ಪ್ರದೇಶದ ಹಮೀರ್‌ಪುರದ ಎಂಜಿನಿಯರ್ ಒಬ್ಬ ತನ್ನ ಮೊದಲ ರಾತ್ರಿಯಲ್ಲಿ ವಯಾಗ್ರ ಮಾತ್ರೆ ತೆಗೆದುಕೊಂಡು ಮೃಗದಂತೆ ವರ್ತಿಸಿದ ಪರಿಣಾಮ ಆ ಹೆಣ್ಣುಮಗಳು ಮೂರು ದಿನಗಳ ಕಾಲ ತೀವ್ರ ರಕ್ತಸ್ರಾವ ಹಾಗೂ ಸೋಂಕಿನಿಂದ ಬಳಲಿ ಕೊನೆಗೂ ಸಾವನ್ನಪ್ಪಿದ್ದಾಳೆ. ಅಷ್ಟಲ್ಲದೆ ನೆನ್ನೆ ಮೊನ್ನೆಯಷ್ಟೇ ದಾಖಲಾದ ಕುರುಮ ಹಟ್ ನಲ್ಲಿ ಸ್ಪೇನ್ ದೇಶದ ಪ್ರವಾಸಿ ದಂಪತಿಗಳ ಮೇಲೆ ಏಳು ಮಂದಿ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಭೀಕರ ಕ್ರೌರ್ಯದ ಅಸಹ್ಯದ ಸಂಗತಿಯಲ್ಲದೆ ಮತ್ತೇನು ?
ಇನ್ನೊಂದಡೆ ದಕ್ಷಿಣ ಕನ್ನಡದ ಕಡಬದ ಸರಕಾರಿ ಕಾಲೇಜಿನ ಬಳಿ ಮೂವರು ವಿದ್ಯಾರ್ಥಿನಿಯರ ಮೇಲೆ ಆಸಿಡ್ ದಾಳಿ ನಡೆದಿರುವ ಘಟನೆ ಕಂಡುಬಂದಿದೆ. ಹಾಗಾದರೆ ಈ ಎಲ್ಲಾ ಕ್ರೌರ್ಯಕ್ಕೆ ಕಾರಣವೇನು? ಈ ಕ್ರೌರ್ಯದ ಹಿಂದೆ ಅಡಗಿರುವ ಕಾಮುಕತೆಯ ನಿರ್ನಾಮ ಹೇಗೆ ? ಇದರೆಲ್ಲದರಿಂದ ಮುಕ್ತಿಯಾದರೂ ಪಡೆಯುವುದೆಲ್ಲಿ ?
ಇದರೊಟ್ಟಿಗೆ ಸೌಜನ್ಯ, ಬಿಲ್ಕಿಸ್ ಬಾನು, ನಿರ್ಭಯ, ಕಥುವಾ ಮಗುವಿನಂತಹ ಹೆಣ್ಣು ಮಕ್ಕಳ ಕರಾಳ ಬದುಕು ಕಣ್ಣು ಮುಂದೆ ಬರುತ್ತದೆ. ಎಷ್ಟೋ ದಲಿತ ಕೆಳವರ್ಗದ ಹೆಣ್ಣು ಮಕ್ಕಳು ಬರ್ಬರ ಅತ್ಯಾಚಾರಕ್ಕೆ ಒಳಗಾದಂತ ಲಕ್ಷಗಟ್ಟಲೆಯ ಘಟನೆಗಳು ದಾಖಲೆಯೇ ಆಗದಿರುವುದು ತೀರಾ ಶೋಚನೀಯ ಸಂಗತಿ.
ಇದನ್ನೂ ಓದಿ- http://ಮಹಿಳಾ ದಿನ ವಿಶೇಷ |ಪಾತ್ರಗಳು ಬದಲಾದಾಗ…https://kannadaplanet.com/womens-day-special-when-the-roles-change/
ಇದೆಲ್ಲಕ್ಕೂ ಹೆಣ್ಣನ್ನ ಹಣ್ಣಿನಂತೆ, ಭೋಗದ ವಸ್ತುವಂತೆ, ಕೇವಲ ಸುಖವನ್ನು ನೀಡುವ ವಸ್ತುವಂತೆ, ಪ್ರಾಣಿಯಂತೆ, ಮನೆ ಕೆಲಸದವಳಂತೆ, ತನ್ನಡಿಯಾಳಂತೆ ನೋಡಿರುವುದೇ ಕಾರಣ. ಪರಸ್ಪರ ಪ್ರೀತಿ-ಬೆಸುಗೆಯ, ಸ್ನೇಹದ, ಮಾನವೀಯತೆಯ, ಗೌರವಯುತವಾದ ಸಂಬಂಧಗಳನ್ನು ಗಂಡು-ಹೆಣ್ಣಿನ ನಡುವೆ ಸೃಷ್ಟಿಸುವಲ್ಲಿ ಪೋಷಕರು ಮತ್ತು ಸಮಾಜವೂ ಎಡವಿದೆ.
ಲಿಂಗ ಸಮಾನತೆ, ಇಂಟರ್ಸೆಕ್ಷನಲ್ ಜಸ್ಟೀಸ್, ಆರೋಗ್ಯ ಅಥವಾ ಲೈಂಗಿಕ ಶಿಕ್ಷಣ ಮತ್ತು ವೈಜ್ಞಾನಿಕ ಮನೋಧರ್ಮದ ತರಗತಿಗಳನ್ನು ನೀಡದೆ ಲೈಂಗಿಕ ಶಿಕ್ಷಣದ ಬಗ್ಗೆ ಮಾಹಿತಿ ನೀಡದೆ ಇರುವುದು ಕೂಡ ಎಷ್ಟೋ ದುರಂತಗಳಿಗೆ ಮುಖ್ಯವಾದ ಕಾರಣ.ಹಾಗಾಗಿ ಲೈಂಗಿಕ ಶಿಕ್ಷಣದ ಬಗ್ಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ನಾವು ಕ್ರಮಗಳನ್ನ ತೆಗೆದುಕೊಳ್ಳಬೇಕಿದೆ. ಪ್ರತಿಯೊಬ್ಬರೂ ಜಾಗೃತರಾಗಬೇಕಿದೆ. ಸಾಮರಸ್ಯದ, ಶಾಂತಿಯುತವಾದ, ಗೌರವಯುತವಾದ ಬದುಕನ್ನ ಕಟ್ಟುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು.
ಶೃಂಗಶ್ರೀ.ಟಿ
ಅತಿಥಿ ಉಪನ್ಯಾಸಕಿ, ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ.