ಕಾವು ಪಡೆದುಕೊಂಡ ಕರವೇ ಹೋರಾಟ: ಕನ್ನಡದ್ರೋಹಿಗಳನ್ನು ಮಟ್ಟ ಹಾಕುವುದು ನಮಗೆ ಗೊತ್ತಿದೆ ಎಂದು ಗುಡುಗಿದ ನಾರಾಯಣಗೌಡ

Most read

ಬೆಂಗಳೂರು: ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೇ ಉದ್ಯೋಗ ಎಂಬ ಘೋಷಣೆಯೊಂದಿಗೆ ನಾಳೆ ರಾಜ್ಯವ್ಯಾಪಿ ಕರೆ ನೀಡಿರುವ ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟ ಕಾವು ಪಡೆದುಕೊಳ್ಳುತ್ತಿದ್ದು, ಇಂದು ಸಂಜೆಯಿಂದ ನಡೆಯುತ್ತಿರುವ ಎಕ್ಸ್ ಅಭಿಯಾನಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಕರ್ನಾಟಕದವರಿಗೆಉದ್ಯೋಗ #jobsforkannadigas ಎಂಬ ಹ್ಯಾಶ್ ಟ್ಯಾಗ್ ಗಳೊಂದಿಗೆ ಸಾವಿರಾರು ಕನ್ನಡಿಗರು ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್)ನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕನ್ನಡಿಗರಿಗೆ ಉದ್ಯೋಗ ನೀಡುವ ಸಂಬಂಧ ರಾಜ್ಯ ಸರ್ಕಾರ ಕಾಯ್ದೆ ರೂಪಿಸಿ ಜಾರಿಗೆ ತರುವಂತೆ ಆಗ್ರಹಿಸುತ್ತಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ‌ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಮಾಡಿದ್ದು, ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗ ಕೊಡಿ ಎಂದು ಚಳವಳಿ ಮಾಡುವಂಥ ಸ್ಥಿತಿ ಇರುವುದೇ ನಾಚಿಕೆಗೇಡು. ಕನ್ನಡಿಗರು ಶಾಂತಿಪ್ರಿಯರು. ಅದಕ್ಕಾಗಿಯೇ ನಮ್ಮ ಮೇಲೆ ಅನ್ಯರು ಸವಾರಿ ಮಾಡುತ್ತಿದ್ದಾರೆ. ಕನ್ನಡದ ಮಕ್ಕಳು ನಮ್ಮ ನೆಲದಲ್ಲೇ ಅನಾಥರಾಗುತ್ತಿದ್ದಾರೆ.

ಡಾ. ಸರೋಜಿನಿ ಮಹಿಷಿ ವರದಿ ಜಾರಿಯಾಗಿ ಐದು ದಶಕಗಳಾಗುತ್ತ ಬಂದಿದೆ.‌ ಆದರೆ ಅದು ಸರಿಯಾಗಿ ಅನುಷ್ಠಾನವಾಗಲೇ ಇಲ್ಲ. ಆಳುವ ಸರ್ಕಾರಗಳು ಮನಸು ಮಾಡಿದ್ದರೆ ಕರ್ನಾಟಕದ ಉದ್ಯೋಗಗಳು ಕನ್ನಡಿಗರಿಗೇ ಸಿಗುತ್ತಿದ್ದವು. ಆದರೆ ನಮ್ಮ ನಿರ್ಲಕ್ಷ್ಯದಿಂದ ಇವತ್ತು ಅಪಾಯಕಾರಿ ಸ್ಥಿತಿಯನ್ನು ತಲುಪಿದ್ದೇವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಕರ್ನಾಟಕಕ್ಕೆ ಆಗುತ್ತಿರುವ ಅನಿಯಂತ್ರಿತ ವಲಸೆಯ ದುಷ್ಪರಿಣಾಮಗಳನ್ನು ನಾವು ಎದುರಿಸುತ್ತಿದ್ದೇವೆ. ಇದು ಹೀಗೇ ಮುಂದುವರೆದರೆ ಇದು ಕನ್ನಡಿಗರ ನಾಡಾಗಿ ಉಳಿಯುವುದಿಲ್ಲ. ಈಗಲಾದರೂ ನಾವು ಎಚ್ಚೆತ್ತುಕೊಳ್ಳದಿದ್ದರೆ ಭೀಕರ ದುರ್ದಿನಗಳನ್ನು ನೋಡಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಜಾಗತೀಕರಣದ ನಂತರ ಕರ್ನಾಟಕದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕರ್ನಾಟಕದಲ್ಲಿ ಬಂಡವಾಳ ಹೂಡಲು ಬಂದವರರು ಸಾವಿರಾರು ಕೋಟಿ ಗಳಿಸುತ್ತಿದ್ದಾರೆ. ಅವರಿಗೆ ಕರ್ನಾಟಕದ ಸೌಲಭ್ಯಗಳೆಲ್ಲ ಬೇಕು. ಆದರೆ ಅವರಿಗೆ ಕನ್ನಡಿಗರು ಬೇಡ. ಕನ್ನಡಿಗರಿಗೆ ಉದ್ಯೋಗ ಕೊಡುವುದು ಅವರಿಗೆ ಇಷ್ಟವಿಲ್ಲ.

ಕನ್ನಡಿಗರೆಂಬ ಕಾರಣಕ್ಕೆ ಕೆಲಸ ಕೊಡಲಿಲ್ಲ ಎಂದು ಹಲವರು ನನ್ನ ಬಳಿ‌ ದೂರು ತೆಗೆದುಕೊಂಡು ಬರುತ್ತಾರೆ. ಕನ್ನಡಿಗರೆಂಬ ಕಾರಣಕ್ಕೆ ಉದ್ಯೋಗದಿಂದ ತೆಗೆಯುವ, ಕಿರುಕುಳ‌ ನೀಡುವ ಘಟನೆಗಳೂ ನನ್ನ ಗಮನಕ್ಕೆ ಬಂದಿದೆ. ಹೀಗೆ ಪ್ರತಿನಿತ್ಯ ನರಳುತ್ತಿರುವ ಕನ್ನಡದ ಮಕ್ಕಳ ರಕ್ಷಣೆ ಯಾರು ಮಾಡುತ್ತಾರೆ? ಎಂದು ನಾರಾಯಣಗೌಡ ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರದ ಉದ್ಯೋಗಗಳು ಹಿಂದಿ ಭಾಷಿಕರಿಗೇ ಸಿಗುವ ವ್ಯವಸ್ಥೆಯನ್ನು ದಿಲ್ಲಿ‌ಯಲ್ಲಿ ಕುಳಿತ ಜನರು ಮಾಡಿಕೊಂಡಿದ್ದಾರೆ. ಹೀಗಾಗಿ ಕರ್ನಾಟಕದಲ್ಲಿ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ, ಬ್ಯಾಂಕುಗಳಲ್ಲಿ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗುತ್ತಿಲ್ಲ.

ಮಧ್ಯಪ್ರದೇಶ, ಒರಿಸ್ಸಾ, ಮಹಾರಾಷ್ಟ್ರ ಸೇರಿದಂತೆ ಬಹುತೇಕ ರಾಜ್ಯಗಳು ಸ್ಥಳೀಯರಿಗೆ ಉದ್ಯೋಗ ಸಿಗುವ ಹಾಗೆ ಕಾನೂನು ಮಾಡಿಕೊಂಡು ಜಾರಿಗೊಳಿಸಿವೆ. ಈ ಕೆಲಸ ಕರ್ನಾಟಕದಲ್ಲಿ ಯಾಕೆ ಆಗುತ್ತಿಲ್ಲ.? ಯಾವ ಶಕ್ತಿಗಳು ನಮ್ಮ ಸರ್ಕಾರವನ್ನು ತಡೆಯುತ್ತಿವೆ? ಈ ಶಕ್ತಿಗಳ ಉದ್ದೇಶವಾದರೂ ಏನು? ಎಂದು ಅವರು ಪ್ರಶ್ನಿಸಿದ್ದಾರೆ.

ಕನ್ನಡ ನಾಮಫಲಕ ಚಳವಳಿಯ ಸಂದರ್ಭದಲ್ಲಿ ನಮಗೆ ಬಂದ ಪ್ರತಿರೋಧ ಸಣ್ಣ ಪ್ರಮಾಣದ್ದೇನೂ ಆಗಿರಲಿಲ್ಲ. ಈ ಶಕ್ತಿಗಳು ಈಗ ಬಲಿತುಹೋಗಿವೆ. ರಾಜಕೀಯ ಬೆಂಬಲವನ್ನೂ ಗಿಟ್ಟಿಸಿಕೊಂಡಿವೆ. ಆದರೂ ನಾವು ಎದೆಗುಂದದೆ ಹೋರಾಡಿದೆವು. ಇಂಥವರನ್ನು ಹೇಗೆ ಬಗ್ಗಿಸಬೇಕು ಎಂಬುದು ನಮಗೆ ಗೊತ್ತಿದೆ.

ರಾಜ್ಯ ಸರ್ಕಾರ ಕೂಡಲೇ ಎಲ್ಲ ಹಂತದ ಉದ್ಯೋಗಗಳೂ ಕನ್ನಡಿಗರಿಗೆ ಸಿಗುವಂತಾಗಲು ಕಾಯ್ದೆ ರೂಪಿಸಿ, ಕೂಡಲೇ ಜಾರಿಗೊಳಿಸಬೇಕು. ಈ ಕಾಯ್ದೆಗೆ ಅಡ್ಡಿ ಬರುವ ಯಾರೇ ಆದರೂ ಅವರು ಕನ್ನಡದ್ರೋಹಿಗಳೇ ಆಗಿರುತ್ತಾರೆ. ಅಂಥವರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸಮರ ಸಾರುತ್ತದೆ ಎಂದು ಅವರು ಘೋಷಿಸಿದ್ದಾರೆ.

ಕನ್ನಡಿಗರು ಈಗ ಒಂದಾಗಿ ನಿಲ್ಲಬೇಕಾದ ಕಾಲ. ಯಾಕೆಂದರೆ ಕನ್ನಡದ ಮಕ್ಕಳು ಇಂದು ನಿರುದ್ಯೋಗಿಗಳಾಗಿ ಅಲೆಯುತ್ತಿದ್ದಾರೆ. ಅವರ ಹಕ್ಕನ್ನು ಇನ್ಯಾವುದೋ ರಾಜ್ಯದಿಂದ ಬಂದವರು ಕಿತ್ತುಕೊಂಡು ಕರ್ನಾಟಕದ ಸೌಲಭ್ಯಗಳನ್ನು ಅನುಭವಿಸುತ್ತಿದ್ದಾರೆ. ನಾವು ಸಿಡಿದು ನಿಲ್ಲದೇ ಹೋದಲ್ಲಿ ಅಪಾಯ ಖಂಡಿತ ಎಂದು ಅವರು ಹೇಳಿದ್ದಾರೆ.

More articles

Latest article