“ಹಾಸನ ಮಣ್ಣಿನ ಹೆಣ್ಣು ಬೇರುಗಳು”
ಮಹಿಳೆಯರ ಸ್ಥಿತಿಗತಿಗಳ ಬದಲಾವಣೆ ಎಂದರೆ ಈ ಸಮಾಜದ ಮಾನವೀಯ ಬದಲಾವಣೆ. ಈ ದುಡಿಯುವ ಮಹಿಳೆಯರಿಗೆ ಕೆಲಸಕ್ಕೆ ತಕ್ಕಂತೆ ಕನಿಷ್ಟ ಕೂಲಿ ನಿಗದಿಯಾಗಿ, ಎಲ್ಲಾ ರೀತಿಯ ಸೇವಾ ಸೌಲಭ್ಯಗಳು, ಆರೋಗ್ಯ ಸೌಲಭ್ಯಗಳು ಸಿಗುವಂತಾಗಲು ಅವರ ಹೋರಾಟದಲ್ಲಿ ಎಲ್ಲಾ ರೀತಿಯ ಸಹಾಯ ಸಹಕಾರ ಮಾರ್ಗದರ್ಶನ ನೀಡಿ ಯಶಸ್ವಿಗೆ ಕೈಜೋಡಿಸೋಣ – ಹೆಚ್.ಆರ್.ನವೀನ್ ಕುಮಾರ್
ಯಾವುದೇ ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ ಬಹಳ ಮಹತ್ತರವಾದದ್ದು. ಭಾರತವು ವಸಾಹತುಶಾಹಿಗಳಿಂದ ಬಿಡಿಸಿಕೊಂಡರೂ ಸ್ವಾತಂತ್ರ್ಯ ಹೋರಾಟದ ಆಶಯಗಳಂತೆ ಈ ಕ್ಷೇತ್ರದ ಅಭಿವೃದ್ಧಿ ಆಗಿಲ್ಲವೆನ್ನುವ ಕೊರಗು ಇದ್ದೇ ಇತ್ತು. ಅದರಲ್ಲೂ ಹಳ್ಳಿಗಳಿಂದ ಆವರಿಸಿರುವ, ಬಡತನ, ಮೌಢ್ಯಗಳೇ ಹೆಚ್ಚು ತುಂಬಿರುವ ಭಾರತ ದೇಶದಲ್ಲಿ ಶಿಕ್ಷಣ ಮತ್ತು ಆಹಾರಕ್ಕೆ ಸಿಗಬೇಕಾದ ಆದ್ಯತೆ ನಿರೀಕ್ಷೆಯಂತಿರಲಿಲ್ಲ. ಕೈಯಲ್ಲಿ ಬಳಪ ಹಿಡಿದು ಶಾಲೆಗೆ ಹೋಗಬೇಕಾದ ಮಕ್ಕಳು ಬಡತನದ ಕಾರಣಕ್ಕಾಗಿ ಕೂಲಿಗೆ ಹೋಗುವ ಪರಿಸ್ಥಿತಿಯಿಂದಾಗಿ, ಶಾಲೆ ಬಿಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಾ ಬಂದಿತು. ಈ ಹಿನ್ನೆಲೆಯಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಆಧಾರದಲ್ಲಿ ಶಾಲೆ ಬಿಡುವ ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಉದ್ದೇಶದಿಂದಾಗಿ 2001ರಲ್ಲಿ ದೇಶಾದ್ಯಂತ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಯೋಜನೆ ಜಾರಿಗೆ ಬಂದ ಮೇಲೆ ಶಾಲಾ ದಾಖಲಾತಿಯಲ್ಲಿ ಹೆಚ್ಚಳವಾಯಿತು, ಗೈರುಹಾಜರಾತಿ ಮತ್ತು ಶಾಲೆ ಬಿಡುವ ಮಕ್ಕಳ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಾ ಬಂದಿತು. ಇಂತಹ ಒಂದು ಮಹತ್ವದ ಶೈಕ್ಷಣಿಕ ಯಶಸ್ಸಿನ ಹಿಂದೆ ದೇಶಾದ್ಯಂತ 26 ಲಕ್ಷದಷ್ಟು ತಾಯಂದಿರು ದುಡಿಯುತ್ತಿದ್ದಾರೆ ಎಂಬುದು ವಾಸ್ತವ.
ಹಾಸನ ಜಿಲ್ಲೆಯಲ್ಲಿ 1150 ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1-5 ನೆಯ ತರಗತಿ ಓದುತ್ತಾ ಬಿಸಿಯೂಟ ಯೋಜನೆಯ ಲಾಭ ಪಡೆಯುತ್ತಿರುವ ಫಲಾನುಭವಿ ಮಕ್ಕಳ ಸಂಖ್ಯೆ 40,231 ಇದೆ. ಹಾಗೆ 986 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 6-8ನೆಯ ತರಗತಿ ಓದುತ್ತಿರುವ 28,765 ಮಕ್ಕಳು ಮತ್ತು 363 ಪ್ರೌಢಶಾಲೆಗಳಲ್ಲಿ 9-10ನೆಯ ತರಗತಿ ಓದುತ್ತಿರುವ 22,681 ಮಕ್ಕಳು ಬಿಸಿಯೂಟ ಸೇವಿಸಿ ಶಿಕ್ಷಣ ಪಡೆಯುತ್ತಿದ್ದಾರೆ. ಒಟ್ಟಾರೆಯಾಗಿ 2499 ಶಾಲೆಗಳಲ್ಲಿ 91,677 ಮಕ್ಕಳು ನೇರವಾಗಿ ಬಿಸಿಯೂಟ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಇವರಿಗೆ ಅಡುಗೆ ಮಾಡಲು 2,461 ಮುಖ್ಯ ಅಡುಗೆಯವರು ಮತ್ತು 1,321 ಸಹಾಯಕ ಅಡುಗೆಯವರು ಕೆಲಸ ಮಾಡುತ್ತಿದ್ದಾರೆ.

ಕೇವಲ ನಾಲ್ಕು ಗಂಟೆಗಳ ಕೆಲಸಕ್ಕೆಂದು ಸರ್ಕಾರ ಇವರನ್ನೆಲ್ಲ ನೇಮಕ ಮಾಡಿಕೊಂಡಿದೆ. ಆದರೆ ವಾಸ್ತವವಾಗಿ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3.30ರವರೆಗೆ ನಿರಂತರವಾಗಿ ಇವರು ಕೆಲಸ ಮಾಡುತ್ತಾರೆ. ಮಕ್ಕಳು ಹೆಚ್ಚಿರುವ ಶಾಲೆಗಳಲ್ಲಿ ಸಂಖ್ಯೆಗೆ ಅನುಗುಣವಾಗಿ ಅಡುಗೆಯವರು ಮತ್ತು ಸಹಾಯಕಿಯರನ್ನು ನೇಮಕ ಮಾಡಿಕೊಳ್ಳಲಿಲ್ಲ. ಇದರಿಂದ ಬೆಂಕಿಯ ಮುಂದೆ, ದೊಡ್ಡ ದೊಡ್ಡ ಪಾತ್ರೆಗಳನ್ನು ಒಲೆಯ ಮೇಲೆ ಇಡಲು ಮತ್ತು ಇಳಿಸಲು ಯಾವ ಸಲಕರಣೆಗಳೂ ಇಲ್ಲದೇ ಅತ್ಯಂತ ಶ್ರಮದಾಯಕವಾದ ಮತ್ತು ಅಪಾಯಕಾರಿಯಾದ ಕೆಲಸವನ್ನು ಬಿಸಿಯೂಟ ತಾಯಂದಿರು ನಿರ್ವಹಿಸುತ್ತಿದ್ದಾರೆ. ಜೊತೆಗೆ ಅಡುಗೆ ಮಾಡಿದ ಮೇಲೆ ಬಡಿಸುವ ಜಾಗಕ್ಕೆ ಹೊತ್ತೊಯ್ಯುವಾಗ ಅಪಾಯದ ಅಭದ್ರತೆಯಲ್ಲೇ ಇರುವಂತಾಗಿದೆ. ಯೋಜನೆ ಆರಂಭದಲ್ಲಿ ಕೇವಲ ತಿಂಗಳಿಗೆ 300 ರೂಪಾಯಿಗಳ ಸಂಬಳಕ್ಕೆ ದುಡಿಯಲು ಆರಂಭಿಸಿದ ಇವರಿಗೆ 25 ವರ್ಷಗಳು ಕಳೆದ ಮೇಲೂ ಮುಖ್ಯ ಅಡುಗೆಯವರಿಗೆ ಕೇಂದ್ರ ರಾಜ್ಯ ಸರ್ಕಾರಗಳು ಸೇರಿ ಈಗ ತಿಂಗಳಿಗೆ ಕೇವಲ 4750 ರೂಪಾಯಿಗಳನ್ನು ಮತ್ತು ಸಹಾಯಕ ಅಡುಗೆಯವರಿಗೆ ತಿಂಗಳಿಗೆ 4600 ರೂಪಾಯಿಗಳನ್ನು ನೀಡಲಾಗುತ್ತಿದೆ. ಅಡುಗೆಯ ಕೆಲಸ ಮಾತ್ರವಲ್ಲದೆ ಶಾಲೆಯಲ್ಲಿ ಇತರೆ ಕೆಲಸಗಳಿಗೂ ಇವರುಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಜಿಲ್ಲೆಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡುತ್ತಿರುವ ಹೆಣ್ಣುಮಕ್ಕಳಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರು, ವಿಧವೆಯರು, ವಿಚ್ಛೇದಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇವರ ಜೀವನೋಪಾಯಕ್ಕೆ ಈ ಉದ್ಯೋಗವೇ ಆಧಾರ. ಇಂತಹದರಲ್ಲಿ ಇಷ್ಟು ಕಡಿಮೆ ಸಂಬಳಕ್ಕೆ ಇವರನ್ನು ದುಡಿಸಿಕೊಳ್ಳುವುದು ಯಾವುದೇ ಒಂದು ನಾಗರೀಕ ಸರ್ಕಾರದ ಲಕ್ಷಣವಲ್ಲ ಎನ್ನಲೇಬೇಕಿದೆ.
ಕೆಲಸದ ಸಮಯದಲ್ಲಿ ಕುಕ್ಕರ್ಗಳು ಸಿಡಿದು ಬಿಸಿಯೂಟದ ತಾಯಿಯ ಇಡೀ ದೇಹವೇ ಸುಟ್ಟು ಹೋದ ಪ್ರಕರಣ ಹಾಸನದ ರಾಜಘಟ್ಟ ಶಾಲೆಯಲ್ಲಿ ನಡೆದಿದೆ. ಅರಕಲಗೂಡಿನ ಶಾಲೆಯೊಂದರಲ್ಲಿ ಅಡುಗೆ ಮಾಡಲು ಬೇಕಾದ ಸೊಪ್ಪನ್ನು ಕೀಳಲು ಹೋದಾಗ ಕಾಲುಜಾರಿ ಬಿದ್ದು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ. ಇಂತಹ ಅವಘಡಗಳಿಂದ ಚಿಕಿತ್ಸೆಗೆಂದು ಸರ್ಕಾರದಿಂದ ಯಾವ ಸಹಾಯಧನವೂ ಇಲ್ಲ, ಹಿಂದೆ ಜನಶ್ರೀ ಭಿಮಾ ಯೋಜನೆ ಜಾರಿಯಲ್ಲಿತ್ತು. ಈಗ ಅದನ್ನು ರದ್ದುಗೊಳಿಸಲಾಗಿದೆ. ಇಂತಹ ಅವಗಡಗಳಿಂದ ಶಾಶ್ವತ ಅಂಗವಿಕಲರಾದವರಿಗೆ ಸರ್ಕಾರ ನೀಡುತ್ತಿರುವ ಒಂದು ಲಕ್ಷದವರೆಗಿನ ಸಹಾಯಧನ ಯಾವ ಲೆಕ್ಕಕ್ಕೂ ಸಾಲುವುದಿಲ್ಲವೆಂದು ಗಮನಿಸೋಣ. ಇತರ ಯಾವ ಸಹಾಯವನ್ನೂ ಸರ್ಕಾರ ಮಾಡುವುದಿಲ್ಲ. ಬೆಂಕಿಯೊಂದಿಗೆ ಕೆಲಸ ಮಾಡುವ ಈ ತಾಯಂದಿರಿಗೆ ಬೇಕಿರುವ ಸುರಕ್ಷತಾ ಕ್ರಮಗಳು ಮತ್ತು ಸಲಕರಣೆಗಳನ್ನು ಹೊಂದಿರುವ ವ್ಯವಸ್ಥಿತವಾದ, ಸುರಕ್ಷಿತವಾದ ಅಡುಗೆ ಕೋಣೆಗಳ ಕೊರತೆ ಎದ್ದು ಕಾಣುತ್ತಿದೆ.
ಶಾಲೆಗೆ ಮಕ್ಕಳನ್ನು ಆಕರ್ಷಿಸುವ ಇಂತಹ ಯೋಜನೆಯಲ್ಲಿ ಕೆಲಸ ಮಾಡುವವರಿಗೆ ಕನಿಷ್ಟ ಕೂಲಿ, ಸೇವಾ ಭದ್ರತೆ ಮತ್ತಿತರೆ ಸೌಲಭ್ಯಗಳನ್ನು ನೀಡಬೇಕಾದ ಸಂದರ್ಭದಲ್ಲಿ, ಖಾಸಗಿ ಶಾಲೆಗಳ ಹಾವಳಿಯಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವ ಕಡೆಗಳಲ್ಲೆಲ್ಲಾ ಅಡುಗೆಯವರನ್ನು ಏಕಾಏಕಿಯಾಗಿ ಕೆಲಸದಿಂದ ತೆಗೆಯಲಾಗುತ್ತಿದೆ. ಕೇಂದ್ರ ಸರ್ಕಾರ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ನೀಡುತ್ತಿದ್ದ ಶೇ. 90ರಷ್ಟು ಅನುದಾನದಲ್ಲಿ ಕಡಿತಗೊಳಿಸಿ ಈಗ ಶೇಕಡ 60ರಷ್ಟನ್ನು ಮಾತ್ರ ನೀಡುತ್ತಿದೆ. ಮತ್ತೊಂದು ಕಡೆ ಇಡೀ ಯೋಜನೆಯನ್ನು ಖಾಸಗೀಕರಿಸಿ ಇಸ್ಕಾನ್ನಂತಹ ಸಂಸ್ಥೆಗಳಿಗೆ, ಮಠಗಳಿಗೆ ವಹಿಸುವ ಹುನ್ನಾರ ನಡೆದಿದೆ. ಬೆಂಗಳೂರು ಜಿಲ್ಲೆಯಲ್ಲಿ ಈಗಾಗಲೇ ಈ ಯೋಜನೆಯನ್ನು ಇಸ್ಕಾನ್ ಸಂಸ್ಥೆಗೆ ವಹಿಸಲಾಗಿದೆ. ಇದರಿಂದ ದೊಡ್ಡ ಸಂಖ್ಯೆಯಲ್ಲಿ ಅಡುಗೆ ಕೆಲಸದವರು ಕೆಲಸ ಕಳೆದುಕೊಳ್ಳುತ್ತಾರೆ. ಮಾತ್ರವಲ್ಲ ಇಂತಹ ಸಂಸ್ಥೆಗಳು ಲಕ್ಷಾಂತರ ಮಕ್ಕಳಿಗೆ ಒಂದು ಕಡೆ ಅಡುಗೆಯನ್ನು ತಯಾರಿಸಿ ಅವುಗಳನ್ನು ವಾಹನದಲ್ಲಿ ಸಾಗಿಸಿ ವಿತರಿಸುತ್ತಾರೆ. ಇದು ಆಯಾಯ ಪ್ರದೇಶದ ರುಚಿ ಮತ್ತು ಆಹಾರದ ವಿಶಿಷ್ಟತೆ ಮತ್ತು ವೈವಿಧ್ಯತೆಯನ್ನು ಹಾಳು ಮಾಡುತ್ತದೆ. ಮತ್ತು ಆಹಾರದ ಗುಣಮಟ್ಟದಲ್ಲಿ ಖಂಡಿತವಾಗಿಯೂ ವ್ಯತ್ಯಾಸವಾಗುತ್ತದೆ. ಕೇಂದ್ರೀಕೃತ ಅಡುಗೆಯನ್ನು ಸಾಗಿಸಿದ ನಂತರ ಬಿಸಿ ಅನ್ನದ ಬದಲು ಅದು ತಂಗಳನ್ನವಾಗುತ್ತದೆ.
ಇಷ್ಟೆಲ್ಲಾ ಕಷ್ಟಗಳನ್ನು ಅನುಭವಿಸಿಕೊಂಡೇ ಶೈಕ್ಷಣಿಕ ಕ್ಷೇತ್ರದಲ್ಲಿ, ಮಕ್ಕಳ ಹಾಜರಾತಿ ಮತ್ತು ಅವರ ಹಸಿವನ್ನು ನೀಗಿಸುವಲ್ಲಿ ಮಹತ್ತರ ಪಾತ್ರವನ್ನು ಈ ತಾಯಂದಿರು ವಹಿಸುತ್ತಿದ್ದಾರೆ. ಇವರುಗಳನ್ನು ಪ್ರತಿಯೊಬ್ಬರು ನೆನೆಯಬೇಕು. ಈಗಾಗಲೇ ಈ ತಾಯಂದಿರು ಕೆಂಬಾವುಟದಡಿ ಸಂಘಟಿತರಾಗಿ ಹಲವು ಹಂತಗಳ ಹೋರಾಟಗಳನ್ನು ನಡೆಸಿದರೂ ಸರ್ಕಾರಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಮಹಿಳೆಯರ ಸ್ಥಿತಿಗತಿಗಳ ಬದಲಾವಣೆ ಎಂದರೆ ಈ ಸಮಾಜದ ಮಾನವೀಯ ಬದಲಾವಣೆ. ಈ ದುಡಿಯುವ ಮಹಿಳೆಯರಿಗೆ ಕೆಲಸಕ್ಕೆ ತಕ್ಕಂತೆ ಕನಿಷ್ಟ ಕೂಲಿ ನಿಗದಿಯಾಗಿ, ಎಲ್ಲಾ ರೀತಿಯ ಸೇವಾ ಸೌಲಭ್ಯಗಳು, ಆರೋಗ್ಯ ಸೌಲಭ್ಯಗಳು ಸಿಗುವಂತಾಗಲು ಅವರ ಹೋರಾಟದಲ್ಲಿ ಎಲ್ಲಾ ರೀತಿಯ ಸಹಾಯ ಸಹಕಾರ ಮಾರ್ಗದರ್ಶನ ನೀಡಿ ಯಶಸ್ವಿಗೆ ಕೈಜೋಡಿಸೋಣ. ಹಾಸನ ಮಣ್ಣಿನ ಫಲವತ್ತತೆಗಾಗಿ ಮರೆಯಲ್ಲೇ ಇದ್ದು ನಿರಂತರವಾಗಿ ದುಡಿಯುತ್ತಿರುವ ಈ ತಾಯಿ ಬೇರುಗಳಿಗೆ ನಮಿಸೋಣ.

ಹೆಚ್.ಆರ್.ನವೀನ್ ಕುಮಾರ್
ಇದನ್ನೂ ಓದಿ- ಹಾಸನ ಜಿಲ್ಲೆಯ ಹೆಮ್ಮೆಯ ಪತ್ರಕರ್ತೆ- ಲೀಲಾವತಿ


