ʼಕೇಂದ್ರ ಸರ್ಕಾರ ಕಳೆದ 10 ವರ್ಷದಿಂದ ರಾಜ್ಯಕ್ಕೆ ಬಹಳ ಅನ್ಯಾಯ ಎಸಗಿದೆ. ಕಳೆದ ವರ್ಷದ ಬಜೆಟ್ ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಕ್ಕೆ ಮುಂದಿನ ಬಜೆಟ್ ನಲ್ಲಿ ಸರಿಯಾಗಿ ಕೊಡುತ್ತೇವೆ ಎಂದು ಮಾತುಕೊಟ್ಟಿದ್ದರು. ಆದರೆ ಮಾತಿಗೆ ತಪ್ಪಿದ್ದಾರೆʼ ಎಂದು ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಗುಡುಗಿದರು.
ವಿಧಾನಸೌದದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಿಂದ ನಮ್ಮ ಧ್ವನಿ ಎತ್ತಲೇ ಬೇಕಾದ ಸಂದರ್ಭವಿದು. ಆದ್ದರಿಂದ ರಾಜ್ಯದಲ್ಲಿನ ಎಲ್ಲರೂ ಪಕ್ಷ ಬೇದವನ್ನು ಮರೆತು ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರುಗಳು ರಾಜ್ಯದ ಪರವಾಗಿ ಧ್ವನಿಯಾಗಲು ಬನ್ನಿ ಎಂದು ಡಿ ಕೆ ಶಿವಕುಮಾರ್ ಕರೆಕೊಟ್ಟರು.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಹೋರಾಟ ಮಾಡಲು ಎಲ್ಲರಿಗೂ ಹಕ್ಕಿದೆ. ಅದೇ ರೀತಿ ನಾವು ಹೋರಾಟ ಮಾಡಿ ನಮ್ಮ ಪಾಲನ್ನು ಪಡೆಯಬೇಕಾದ ಸಂದರ್ಭವಿದು ಎಂದರು.
ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಕೊಡುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿತ್ತು ಆದರೆ ಕೊಟ್ಟ ಮಾತಿಗೆ ತಪ್ಪಿದ್ದಾರೆ. ರಾಜ್ಯಕ್ಕೆ ಬರಗಾಲ ಬಂದಾಗ ಪರಿಹಾರ ಕೊಡಿ ಎಂದು ಕೇಳಿದರು ಕೊಡಲಿಲ್ಲ. ನ್ಯಾಯಕ್ಕಾಗಿ, ಕರ್ನಾಟಕದ ಜನರ ಬದುಕಿಗಾಗಿ, ರಾಜ್ಯದ ಆರ್ಥಿಕ ಶಕ್ತಿಯನ್ನು ತುಂಬಲು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಹೋರಾಟ ಮಾಡಲು ಮುಂದಾಗಿದ್ದೆವೆ ಎಂದರು.