ಅದೊಂದು ದೊಡ್ಡ ಕಥೆ-ಆತ್ಮಕಥನ ಸರಣಿ ಭಾಗ- 10 ಶಂಕ್ರಾಣ ಎಂಬ ಅಚ್ಚರಿ

Most read

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಅದಾಗ ಕೇವಲ ಎರಡು ದಶಕ ಕಳೆದಿತ್ತು. 1947 ರಲ್ಲಿ ಬ್ರಿಟಿಷರು ದೇಶದ ಖಜಾನೆ ಖಾಲಿ ಮಾಡಿ ಹೊರಟು ಹೋಗಿದ್ದರು. ತೀವ್ರ ಅರ್ಥಿಕ ಸಂಪನ್ಮೂಲಗಳ ಕೊರತೆಯನ್ನು ದೇಶ ಅನುಭವಿಸುತ್ತಿತ್ತು. ಈ ನಡುವೆಯೂ ದೇಶದಲ್ಲಿ ಬಹಳ ದೂರಕ್ಕಾದರೂ ಒಂದು ಎಂಬಂತೆ ಹೊಸ ಶಾಲೆ, ಆಸ್ಪತ್ರೆಗಳ ನಿರ್ಮಾಣ ಆರಂಭವಾಗಿತ್ತು. ತಾಲೂಕು ಕೇಂದ್ರಗಳನ್ನೂ ಆಧುನಿಕ ಸೌಲಭ್ಯಗಳ ಕೊರತೆ ಕಾಡುತ್ತಿದ್ದ 1967 ರ ಇಂತಹ ದಿನಗಳಲ್ಲಿಯೇ ನಾವು ಶಂಕ್ರಾಣ (ಶಂಕರನಾರಾಯಣ)ಕ್ಕೆ ಕಾಲಿಟ್ಟಿದ್ದೆವು.

ಶಂಕ್ರಾಣ ಆಗಲೂ ತಾಲೂಕು ಕೇಂದ್ರವಲ್ಲ, ಈಗಲೂ ಅಗಿಲ್ಲ. ಉತ್ತರಕ್ಕೆ ಅಂಪಾರು ದಕ್ಷಿಣಕ್ಕೆ ಹಾಲಾಡಿ, ಪೂರ್ವಕ್ಕೆ ಸಿದ್ದಾಪುರ, ಪಶ್ಚಿಮಕ್ಕೆ ಸೌಡ ಕ್ಕೆ ಹೋಗುವ ರಸ್ತೆಗಳು ಸೇರುವ ಒಂದು ಜಂಕ್ಷನ್; ಪುಟ್ಟ ಊರು. ಆದರೆ ಒಂದು ತಾಲೂಕು ಕೇಂದ್ರ ಹೊಂದಬಹುದಾದ ಅನೇಕ ಆಧುನಿಕ ಸೌಲಭ್ಯಗಳು ಆಗಲೇ ಶಂಕ್ರಾಣದಲ್ಲಿದ್ದವು!

ಹಾಲಾಡಿಯಿಂದ ಶಂಕ್ರಾಣ ಪ್ರವೇಶಿಸುವಾಗ ಮೊದಲು ಸಿಗುತ್ತಿದ್ದುದು ರೇಂಜ್‌ ಫಾರೆಸ್ಟ್‌ ಆಫೀಸ್‌, ಆ ಬಳಿಕ ಸಬ್‌ ರಿಜಿಸ್ಟ್ರಾರ್‌ ಕಚೇರಿ, ಪೊಲೀಸ್‌ ಸ್ಟೇಶನ್‌, ಜಾನುವಾರು ಆಸ್ಪತ್ರೆ, ಸರಕಾರಿ ಆಸ್ಪತ್ರೆ, ಪ್ರಾಥಮಿಕ ಶಾಲೆ, ಪಂಚಾಯತ್‌ ಕಚೇರಿ, ಗ್ರಂಥಾಲಯ, ಪ್ರವಾಸಿ ಬಂಗಲೆ, ಮೈಕ್ರೋವೇವ್‌ ಸ್ಟೇಶನ್‌, ವಾರದ ಸಂತೆಗೆ ನಿಗದಿತ ಸ್ಥಳ, ಸಿದ್ದಾಪುರಕ್ಕೆ ಹೋಗುವ ರಸ್ತೆಯಲ್ಲಿ ಬ್ಯಾಂಕು, ದೂರವಾಣಿ ವಿನಿಮಯ ಕೇಂದ್ರ, ಪೋಸ್ಟ್‌ ಆಫೀಸ್‌, ಜ್ಯೂನಿಯರ್‌ ಕಾಲೇಜು ಇತ್ಯಾದಿ. ಸಾರ್ವಜನಿಕ ನಳ್ಳಿ ನೀರಿನ ವ್ಯವಸ್ಥೆಯೂ ಇತ್ತು. ಇವುಗಳಲ್ಲಿ ಬಹುತೇಕ ಮೊದಲೇ ಇದ್ದರೆ ಇನ್ನು ಕೆಲವು ಮುಂದೆ ಸೇರ್ಪಡೆಯಾಗುತ್ತಾ ಹೋದವು.

ನಡಿಗೆಯ ದೂರದಲ್ಲಿಯೇ ಶಾಲೆ, ಕಾಲೇಜು ಇದ್ದುದರಿಂದ ಊರ ಮಕ್ಕಳಿಗೆ ಶಿಕ್ಷಣ ಪಡೆಯುವುದು ತುಂಬಾ ಸುಲಭವಾಗಿತ್ತು. ಇಲ್ಲಿನ ಜ್ಯೂನಿಯರ್‌ ಕಾಲೇಜಿಗೆ ಹಾಲಾಡಿ, ಜನ್ನಾಡಿ, ವಂಡ್ಸೆ, ಸಿದ್ಧಾಪುರ, ಸೌಡ ಹೀಗೆ ದೂರದ ಊರುಗಳಿಂದಲೂ ಓದಲು ಬರುತ್ತಿದ್ದರು. ಈಗಂತೂ ಅಲ್ಲಿ ಮೊದಲ ದರ್ಜೆಯ ಕಾಲೇಜು, ಪೋಸ್ಟ್‌ ಗ್ರಾಜುವೇಶನ್‌ ಸೆಂಟರ್‌ ಕೂಡಾ ಸ್ಥಾಪನೆಯಾಗಿವೆ. ವಾರಾಹಿ ನೀರಾವರಿ ಯೋಜನೆಯ ಕಾಲುವೆಗಳು ಊರನ್ನು ಸೀಳಿಕೊಂಡು ಸಾಗಿವೆ. ಪೊಲೀಸ್‌ ಸ್ಟೇಶನ್‌ ಮೇಲ್ದರ್ಜೆಗೇರಿದೆ. ಪೆಟ್ರೋಲ್‌ ಬಂಕ್‌ ಗಳು, ಹೊಟೇಲುಗಳು ಇತ್ಯಾದಿ ಆಧುನಿಕ ಸೌಲಭ್ಯಗಳೆಲ್ಲವನ್ನೂ ಅಲ್ಲಿ ಕಾಣಿಸಿಕೊಂಡಿವೆ. ಸಹಜವಾಗಿಯೇ ಈ ʼಡೆವಲಪ್‌ ಮೆಂಟುʼ ಹಿಂದಿನ ಶಂಕ್ರಾಣದ ಪ್ರಾಕೃತಿಕ ಸೊಬಗನ್ನು ನಾಶ ಮಾಡಿದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

ಆ ಕಾಲದಲ್ಲಿಯೇ ಶಂಕ್ರಾಣ ಎಂಬ ಪುಟ್ಟ ಊರು ಅಷ್ಟೊಂದು ಬೆಳೆಯಲು ಕಾರಣವೇನು? ಪ್ರವಾಸಿ ಬಂಗಲೆ ಕೂಡಾ ಇರಬೇಕಾದರೆ ಬ್ರಿಟಿಷರಿಗೂ ಇದೊಂದು ಬಹುಮುಖ್ಯ ಕೇಂದ್ರ ಆಗಿರಬಹುದೇ? ಇದರ ಇನ್ನೊಂದು ಮುಖವಾಗಿ ಪನಿಶ್‌ಮೆಂಟ್‌ ಟ್ರಾನ್ಸ್‌ಫರ್ ರೂಪದಲ್ಲಿ ಇಲ್ಲಿಗೆ ಸರಕಾರಿ ನೌಕರರನ್ನು ವರ್ಗಾವಣೆ ಮಾಡುವ ಕ್ರಮವೂ ಇತ್ತು ಎಂದು ಕಿರಿಯ ಅಣ್ಣ ಉಮೇಶ್‌ ಹೇಳುತ್ತಾನೆ.

ರೇಂಜ್‌ ಫಾರೆಸ್ಟ್‌ ಆಫೀಸ್‌ ಗೆ ಶಂಕ್ರಾಣದ ಹೊರಗಿನ ಅನೇಕ ಊರುಗಳ ಕಾಡುಗಳು ಸೇರಿದ್ದವು. ಸಬ್‌ ರಿಜಿಸ್ಟ್ರಾರ್‌ ಕಚೇರಿ ಯಾವಾಗಲೂ ನೋಂದಣಿ ಕಾರ್ಯಗಳಿಂದ ಬಿಡುವಿಲ್ಲದೆ ಇರುತ್ತಿತ್ತು. ಪೊಲೀಸ್‌ ಸ್ಟೇಶನ್‌ ನಲ್ಲಿ ಎಂದಿನ ದರ್ಪದಲ್ಲಿ ಪೊಲೀಸರು ಆರೋಪಿಗಳನ್ನು ʼವಿಚಾರಣೆ, ತೀವ್ರ ವಿಚಾರಣೆʼ ನಡೆಸುತ್ತಿದ್ದುದು ರಸ್ತೆಗೇ ಕಾಣಿಸುತ್ತಿತ್ತು, ಪೊಲೀಸ್‌ ಭಾಷೆ ರಸ್ತೆಗೇ ಕೇಳಿಸುತ್ತಿತ್ತು. ಜಾನುವಾರು ಆಸ್ಪತ್ರೆ ಸುತ್ತಲ ಅನೇಕ ಊರುಗಳಿಗೆ ಒಂದು ವರದಾನವಾಗಿತ್ತು. ಪಂಚಾಯತ್‌ ಕಚೇರಿ ಗ್ರಂಥಾಲಯವಾಗಿಯೂ ಕೆಲಸ ಮಾಡುತ್ತಿತ್ತು. ಅದರ ಸದಸ್ಯರಾಗಿ ಯಾರು ಬೇಕಾದರೂ ಓದಲು ಪುಸ್ತಕ ಒಯ್ಯ ಬಹುದಾಗಿತ್ತು. ಇದೇ ಪಂಚಾಯತ್‌ ಕಚೇರಿಯಲ್ಲಿ ರೇಡಿಯೋ ವ್ಯವಸ್ಥೆಯಿದ್ದು ಸಂಜೆ ಹೊತ್ತು ದೊಡ್ಡದೊಂದು ಮೈಕ್‌ ಸಿಕ್ಕಿಸಿ ಊರಿಗೆಲ್ಲ ರೇಡಿಯೋ ಕೇಳುವಂತೆ ಮಾಡುತ್ತಿದ್ದರು.

ಪ್ರಾಥಮಿಕ ಶಾಲೆ ಮಾತ್ರ ಊರಿನ ನಡುವೆಯೇ ಇದ್ದು, ಅದಕ್ಕೆ ಸರಿಯಾದ ಆಟದ ಮೈದಾನವೂ ಇರಲಿಲ್ಲ. ಈ ಮುಖ್ಯ ಶಾಲೆಯ ಉತ್ತರಕ್ಕೆ ಒಂದು ಫರ್ಲಾಂಗು ದೂರದಲ್ಲಿ ಒಂದರಿಂದ ಮೂರನೆಯ ತರಗತಿಯ ತನಕ ಪಾಠಗಳು ನಡೆಯುತ್ತಿದ್ದವು. ಕೊರತೆಗಳ ನಡುವೆಯೂ ಅನೇಕ ಸೌಲಭ್ಯಗಳನ್ನು ಈ ಊರು ಹೊಂದಿರಲು ಇಲ್ಲಿನ ಪ್ರಭಾವಿ ರಾಜಕಾರಣಿಗಳೂ ಕಾರಣವಿರಬಹುದು. ಶಂಕರನಾರಾಯಣವು ಬೈಂದೂರು ವಿಧಾನ ಸಭಾ ಕ್ಷೇತ್ರಕ್ಕೆ ಸೇರಿದ್ದು ಮೊದಲು ಎ ಜಿ ಕೊಡ್ಗಿ ಅಲ್ಲಿನ ಶಾಸಕರಾಗಿದ್ದರು. ಜಿ ಎಸ್‌ ಆಚಾರ್‌ ತಾಲೂಕು ಪಂಚಾಯತ್‌ ಅಧ್ಯಕ್ಷರಾಗಿದ್ದರು. ಆನಂತರ ಜಿ ಎಸ್‌ ಆಚಾರ್‌ ಶಾಸಕರಾದರು. ಇವರೆಲ್ಲರೂ ಊರಿನ ಅಭಿವೃದ್ಧಿಗೆ ದೊಡ್ಡ ಮಟ್ಟದ ಕೊಡುಗೆ ನೀಡಿದ್ದರು ಎಂಬುದನ್ನು ಹೇಳಲೇಬೇಕು.

ಆಗ ಎಲ್ಲೆಡೆಯೂ ಮುಖ್ಯ ರಾಜಕೀಯ ಪಕ್ಷವೆಂದರೆ ಭಾರತ ರಾಷ್ಟ್ರೀಯ ಕಾಂಗ್ರೆಸ್. ಚಿಹ್ನೆ ದನ ಮತ್ತು ಕರು. ಇನ್ನೊಂದು ಪಕ್ಷ ಜನಸಂಘ. ಜನಸಂಘದ ಚಿಹ್ನೆ ನಂದಾದೀಪ.  ಕಾಂಗ್ರೆಸ್‌ ನಿಂದ ಲೈಟ್‌ ಕಂಬ ನಿಲ್ಲಿಸಿದರೂ ಅದು ಗೆಲ್ಲುತ್ತದೆ ಎಂಬ ಕಾಲ. ಮುಂದೆ ಕಾಂಗ್ರೆಸ್‌ ಒಡೆದು ಅದಕ್ಕೆ ಕೈ ಚಿಹ್ನೆ ಬಂತು. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಉದಯಿಸಿದ ಪಕ್ಷ ಜನತಾ ಪಕ್ಷ. ಅದರ ಚಿಹ್ನೆ ʼಚಕ್ರದೊಳಗೆ ನೇಗಿಲು ಹೊತ್ತ ರೈತʼ. ಮತದಾನ ಕೇಂದ್ರಕ್ಕೆ ರಾಜಕೀಯ ಪಕ್ಷಗಳು ಮತದಾರರನ್ನು ವಾಹನದಲ್ಲಿ ಒಯ್ಯುವಂತಿಲ್ಲ. ಆದರೆ ಊರ ಪ್ರಭಾವಿಗಳು ಒಯ್ಯುತ್ತಿದ್ದರು. ಮತದಾರರಿಗೆ ಜೀಪಿನಲ್ಲಿ ಕೂರುವ ಸುಖ ಅದೊಂದೇ ದಿನ.

ಕಿರಿಯ ವಯಸಿನ ನಮಗೆ ಅಷ್ಟೊಂದು ರಾಜಕೀಯ ಆಗುಹೋಗುಗಳ ಅರಿವಿರಲಿಲ್ಲ. ಆದರೂ ದೊಡ್ಡವರ ಚುನಾವಣಾ ಪ್ರಚಾರ ಕೆಲಸಗಳಲ್ಲಿ ನಾವು ʼವೀಕ್ಷಕರಾಗಿʼ ಕೆಲವೊಮ್ಮೆ ಸಣ್ಣಮಟ್ಟಿನ ಸಹಾಯಕರಾಗಿ ಪಾಲ್ಗೊಳ್ಳುತ್ತಿದ್ದೆವು. ನಾವು ಕ್ರಾಂತಿಕಾರಿಗಳು, ಇಂದು ಮಾತ್ರವಲ್ಲ ಆಗಲೂ ಆಳುವ ಪಕ್ಷದ ವಿರೋಧಿಗಳು (ನನ್ನ ಮತ ಪಡೆದ ಒಬ್ಬನೇ ಒಬ್ಬ ಅಭ್ಯರ್ಥಿ ಇದುವರೆಗೆ ಚುನಾವಣೆ ಗೆದ್ದುದಿಲ್ಲ). ಹಾಗಾಗಿ ತುರ್ತುಪರಿಸ್ಥಿತಿ ಕಾಲದಲ್ಲಿ ಜನತಾಪಕ್ಷಕ್ಕೆ ಕೆಲಸ ಮಾಡುತ್ತಿದ್ದೆವು. ಚಕ್ರದೊಳಗಿನ ನೇಗಿಲು ಹೊತ್ತ ರೈತ ಆಗ ನಮಗೆ ದೊಡ್ಡ ಆಕರ್ಷಣೆ. ಅದರ ಚಿಹ್ನೆಯನ್ನು ರಸ್ತೆಯಲ್ಲಿ, ಗೋಡೆಯಲ್ಲಿ ಪೇಂಟ್‌ ಮಾಡಲು ನಾವೂ ಯತ್ನಿಸುತ್ತಿದ್ದೆವು. ಕಿರಿಯ ಅಣ್ಣ ರಸ್ತೆಯಲ್ಲಿ ಸುಣ್ಣ ಬಳಸಿ ನೇಗಿಲು ಹೊತ್ತ ರೈತನನ್ನು ಚಿತ್ರಿಸುತ್ತಿದ್ದ. ಇದೇ ಕಾರಣಕ್ಕೆ ಕಾಂಗ್ರೆಸ್‌ ನಾಯಕ ಜಿ ಎಸ್‌ ಆಚಾರ್‌ ಅವರಿಗೆ ನಮ್ಮ ಮೇಲೆ ಸಿಟ್ಟಿರುವುದು ಮುಂದೊಮ್ಮೆ ಯಾವುದೋ ಶಿಫಾರಸಿಗೆ ಅವರ ಬಳಿ ಹೋದಾಗ ತಿಳಿಯಿತು ಎಂದು ಅಣ್ಣ ಹೇಳುತ್ತಾನೆ. ಕಾಂಗ್ರೆಸ್‌ ವಿರೋಧಿ ಕೆಲಸ ಮಾಡುವುದು ಸುಲಭವಾಗಿರಲಿಲ್ಲ. ಶಂಕ್ರಾಣದ ಆರ್‌ ಎಸ್‌ ಎಸ್‌ ಚಟುವಟಿಕೆ ನಿಲ್ಲಲೂ ಇದೇ ಕಾರಣ ಎಂದು ಹಿರಿಯ ಅಣ್ಣ ಸುಬ್ರಹ್ಮಣ್ಯ ಹೇಳುತ್ತಾನೆ.

ತುರ್ತುಪರಿಸ್ಥಿತಿ ಕಾಲದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ ಜೋರಾಗಿತ್ತು. ಉಡುಪಿಯ ಜೈಲಿನಲ್ಲಿದ್ದ ವಿ ಎಸ್‌ ಆಚಾರ್ಯ ಜನತಾ ಪಕ್ಷದಿಂದ ಚುನಾವಣೆಗೆ ನಿಂತಿದ್ದು, ಶಂಕ್ರಾಣಕ್ಕೂ ಪ್ರಚಾರಕ್ಕೆ ಬಂದಿದ್ದರು. ಅದರೂ ಬಡವರು, ಹಿಂದುಳಿದವರು, ಅನಕ್ಷರಸ್ಥರು, ಹೀಗೆ ತೀರಾ ಸಾಮಾನ್ಯರಲ್ಲಿ ಒಲವು ಇದ್ದುದು ಕಾಂಗ್ರೆಸ್‌ ಪರವೇ. ಹಾಗಾಗಿ ಕಾಂಗ್ರೆಸ್‌ ಭಾರೀ ಬಹುಮತದಿಂದ ಗೆಲ್ಲುತ್ತಿತ್ತು.

ಶಂಕ್ರಾಣದ ವಾರದ ಸಂತೆ ಅಗಲೇ ತುಂಬಾ ಪ್ರಸಿದ್ಧ. ಈ ಊರು ಘಟ್ಟದ ಬುಡದಲ್ಲಿರುವುದರಿಂದ ಘಟ್ಟದ ಮೇಲ್ಭಾಗದವರು ತಮ್ಮ ಸರಕುಗಳ ಮಾರಾಟಕ್ಕೆ ಇಲ್ಲಿಗೆ ಬರುತ್ತಿದ್ದರು. ಆರಂಭದಲ್ಲಿ ಪೇಟೆಯ ಕೇಂದ್ರಸ್ಥಳಕ್ಕೆ ತಾಗಿಕೊಂಡಂತೆ ಪಶ್ಚಿಮಕ್ಕೆ ಇತ್ತು. ಅಲ್ಲಿ ಸಾಕಷ್ಟು ವ್ಯವಸ್ಥೆ ಇರಲಿಲ್ಲ. ತೆರೆದ ಜಾಗ, ಮರದ ಕೋಲುಗಳನ್ನು ಆಧಾರ ಮಾಡಿಕೊಂಡು ಹುಲ್ಲು ಹೊದೆಸಿದ ಗುಡಿಸಲಿನಂತಹ ವ್ಯವಸ್ಥೆ. ಈಗ ಊರ ತುಂಬಾ ಅಂಗಡಿಗಳು ಇದ್ದು ಸಂತೆಗಳ ಮಹತ್ವ ಕಡಿಮೆಯಾಗಿದೆ. ಆದರೆ ಆ ಕಾಲದಲ್ಲಿ ಊರವರೆಲ್ಲ ವಾರದ ಸಂತೆಗೆ ಕಾಯುತ್ತಿದ್ದರು. ಅಲ್ಲಿ ಮಡಿಕೆ, ಕಾರಕಡ್ಡಿಯಂತಹ ತಿಂಡಿಗಳು, ಮೀನು, ಓಲೆಬೆಲ್ಲ ಇತ್ಯಾದಿ ಸಿಗುತ್ತಿತ್ತು. ನಾನು ಅಮ್ಮನ ಜತೆಗೆ ಸಂತೆಗೆ ಅನೇಕ ಬಾರಿ ಹೋಗುತ್ತಿದ್ದೆ. ಅಮ್ಮ ಮಡಿಕೆ, ಕಾರಕಡ್ಡಿ, ಒಣಮೀನು ಇತ್ಯಾದಿ ಖರೀದಿಸುತ್ತಿದ್ದರು. ಮುಂದೆ ಈ ಸಂತೆಯನ್ನು ಊರಿನ ಈಶಾನ್ಯ ದಿಕ್ಕಿನ ಅಂಪಾರು ರಸ್ತೆಯ ಎಡಬದಿಯ ಮೇಲಕ್ಕೆ ವರ್ಗಾಯಿಸಿದರು. ಅದು ಅತ್ಯಂತ ವ್ಯವಸ್ಥಿತ ಜಾಗವಾಗಿತ್ತು. ಸಂತೆಯೊಂದಕ್ಕೆ ಬೇಕಾದ ಎಲ್ಲ ಸವಲತ್ತುಗಳು ಅಲ್ಲಿದ್ದವು.

ಈಗ ಕಾಣುವ ಕೋಟಿ ತೀರ್ಥ ಕೆರೆ

ಶಂಕ್ರಾಣದ ಹಬ್ಬ

ಶಂಕ್ರಾಣದ ಅತ್ಯಂತ ಮಹತ್ವದ ಸ್ಥಳ ಎಂದರೆ, ಊರಿಗೆ ಶಂಕರನಾರಾಯಣ ಎಂಬ ಹೆಸರು ಬರಲು ಕಾರಣವಾದ ಕ್ರೋಡ ಶಂಕರನಾರಾಯಣ ಕ್ಷೇತ್ರ. ಅವಿಭಜಿತ ದಕ್ಷಿಣ ಕನ್ನಡದ ಏಳು ಬಹುಮುಖ್ಯ ಪುಣ್ಯಕ್ಷೇತ್ರಗಳಲ್ಲಿ ಈ ಕ್ರೋಡ ಶಂಕರನಾರಾಯಣವೂ ಒಂದು. ಹಾಗೆಯೇ ಕುಂದಾಪುರ ತಾಲೂಕಿನ ಐದು ಶಂಕರನಾರಾಯಣ ಕ್ಷೇತ್ರಗಳಲ್ಲಿ ಇದು ಬಹುಮುಖ್ಯವಾದುದು.

ಈ ದೇವಸ್ಥಾನಕ್ಕೆ ಸುಮಾರು ಸಾವಿರಕ್ಕೂ ಅಧಿಕ ವರ್ಷಗಳ ಇತಿಹಾಸ ಇದೆ ಎನ್ನುತ್ತಾರೆ. ಕೆರೆಯ ಮೇಲೆ ಕಟ್ಟಲಾದ ಹರಹರಿ ದೇವಸ್ಥಾನ ಇದು. ದೇಗುಲದ ಅಂಗಣಕ್ಕೆ ಹೊದಿಸಲಾದ ಕಲ್ಲುಚಪ್ಪಡಿಗಳ ಎಡೆಯಲ್ಲಿ ಕೈಹಾಕಿದರೆ ಸಿಗುವುದು ನೀರು.

ನಾವು ಹುಡುಗರಿಗೆ ಶಂಕರನಾರಾಯಣ ದೇವಸ್ಥಾನ ಯಾವತ್ತೂ ಆಕರ್ಷಣೆಯ ಕೇಂದ್ರ. ಅಲ್ಲಿರುವ ಕೋಟಿ ತೀರ್ಥ ಕೆರೆ, ಅಲ್ಲಿ ನಡೆಯುವ ಲಕ್ಷ ದೀಪೋತ್ಸವ, ಓಕುಳಿಯಾಟ, ಶ್ರಾವಣ ತಿಂಗಳ ಸೋಣೆ ಆರತಿ, ಅಲ್ಲಿ ಕೊಡಲಾಗುವ ಕಡ್ಲೆ ಹುಡಿಯ ಸ್ವಾದಿಷ್ಟಕರ ಪಂಚಕಜ್ಜಾಯ (ದೇಗುಲದ ಒಂದು ಬಾಗಿಲಲ್ಲಿ ಕೈಯೊಡ್ಡಿ ಪಂಚಕಜ್ಜಾಯ ತಿಂದು, ಸರಿಯಾಗಿ ಮುಖ ಒರೆಸಿಕೊಳ್ಳದೆ ಇನ್ನೊಂದು ಬಾಗಿಲಿಗೆ ಹೋಗಿ ಅಲ್ಲೂ ಕೈಯೊಡ್ಡುವಾಗ ಮುಖದ ಮೇಲಿನ ಪಂಚಕಜ್ಜಾಯದ ಕುರುಹು ಗುರುತಿಸಿದ ಭಟ್ಟರಿಂದ ಬೈಸಿಕೊಳ್ಳುತ್ತಿದ್ದೆವು). ಕೃಷ್ಣ ಜನ್ಮಾಷ್ಟಮಿ ಸಂದರ್ಭದ ವಿಟ್ಲಪಿಂಡಿ. ದೇವಸ್ಥಾನ ಪ್ರವೇಶಿಸುತ್ತಿದ್ದಂತೆ ಎಡಕ್ಕೆ ಒಂದು ಬೃಹದಾಕಾರದ ಗಂಟೆ ಇತ್ತು. ʼಇದು ಟಿಪ್ಪು ಸುಲ್ತಾನರ ಕೊಡುಗೆʼ ಎಂದು ಅದರಲ್ಲಿ ಬರೆದುಕೊಂಡಿತ್ತು. ನಾವು ಮಕ್ಕಳು ಅದರ ಮುಂದೆ ನಿಂತರೆ ಆ ಗಂಟೆಗಿಂತ ಚಿಕ್ಕವರಾಗಿ ಕಾಣಿಸುತ್ತಿದ್ದೆವು (90 ರ ದಶಕದ ಹಿಂದುತ್ವದ ಗಲಾಟೆ ಜೋರಾಗಿ, ಟಿಪ್ಪು ಸುಲ್ತಾನನನ್ನು ವಿಲನ್‌ ಮಾಡಿದ ಮೇಲೆ, ಆ ಗಂಟೆಯ ಮೇಲಿನ ಬರೆಹವನ್ನು ಅಳಿಸಿ ಹಾಕಿ, ʼಇದು ಪ್ರಖ್ಯಾತಿ ಪಟ್ಟ ಘಂಟೆʼ ಎಂದು ಬರೆದಿರುವುದನ್ನು 2019 ರಲ್ಲಿ ನಾನು ಅಲ್ಲಿಗೆ ಭೇಟಿ ನೀಡಿದಾಗ ಗಮನಿಸಿದೆ. ಇತಿಹಾಸದ ಸತ್ಯಗಳನ್ನು ಅಳಿಸಲು ಎಲ್ಲೆಡೆಯೂ ಭರದ ಯತ್ನ ನಡೆಯುತ್ತಿರುವುದನ್ನು ಕಂಡು ಮನಸು ಮಮ್ಮಲ ಮರುಗಿತ್ತು).

ಶಂಕ್ರಾಣ ಹಬ್ಬ ನಡೆಯುವುದು ಜನವರಿ ಒಂಭತ್ತರಿಂದ ಹದಿನೆಂಟರ ವರೆಗೆ. ಆಗ ನಮಗೆಲ್ಲ ಸಂಭ್ರಮವೋ ಸಂಭ್ರಮ. ಅಲ್ಲಿ ದಿನಕ್ಕೊಂದು ಕಾರ್ಯಕ್ರಮ. ನಾವು ಹಬ್ಬದ ಪೂರ್ವ ತಯಾರಿಯ ದಿನಗಳ ಸಂಜೆ ಹೊತ್ತು ಅಲ್ಲಿಗೆ ಒಂದು ಭೇಟಿ ನೀಡಿ ಉತ್ಸವಕ್ಕೆ ಸಿದ್ಧವಾಗುತ್ತಿದ್ದ ರಥದ ಸೌಂದರ್ಯವನ್ನು ಕಣ್ಣು ತುಂಬಿಕೊಳ್ಳುತ್ತಿದ್ದೆವು. ಜನವರಿ 16 ಹತ್ತಿರವಾಗುತ್ತಿದ್ದಂತೆ ನಮ್ಮ ಕಾಲು ನೆಲದ ಮೇಲೆ ಇರುತ್ತಿರಲಿಲ್ಲ. ಅಪ್ಪ ಅಮ್ಮ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದುದು ಸಂಜೆ. ಆದರೆ ಹೊಸ ಉಡುಗೆ ಧರಿಸಿ ನಾವು ಬೆಳಗ್ಗೆಯೇ ಅಲ್ಲಿ ಹಾಜರಿರುತ್ತಿದ್ದೆವು. ತಪ್ಪಿಯೂ ದೇಗುಲದ ಒಳಗೆ ಹೋಗುತ್ತಿರಲಿಲ್ಲ. ನಮ್ಮ ಅಸಕ್ತಿಯೆಲ್ಲ ಅಲ್ಲಿ ಹೊರಗಡೆಯ ಸಂತೆ. ಅಲ್ಲಿ ʼಗರಗರ ಮಂಡಲʼ, ʼಕೋಕೋ ಕೋಲಾ ಬಾಟಲಿಗೆ ರಿಂಗ್‌ ಹಾಕುವುದುʼ ಇಂತಹ ಸಣ್ಣ ಜುಗಾರಿ ಆಟಗಳು, ಆಟದ ಸಾಮಗ್ರಿಗಳ ಅಂಗಡಿಗಳು. ಅದೆಂಥದೋ ʼಕ್ಯಾಸಿನೋ ಎಫೆಕ್ಟ್‌ʼ ಅಂತಾರಲ್ಲ, ಹಾಗೆ ಜೂಜಿನ ಆಟಗಳಿಗೆ ಹಣ ಹಾಕಿ ನಷ್ಟ ಮಾಡಿಕೊಳ್ಳದೆ ವಾಪಸ್‌ ಬರುವವರು ಕಡಿಮೆ. ಒಂದು ರುಪಾಯಿಗೆ ಎರಡು ರುಪಾಯಿ ಸಿಕ್ಕಾಗ, ಎರಡು ರುಪಾಯಿಗೆ ನಾಲ್ಕು ರುಪಾಯಿ ಸಿಗಲಿ ಎಂದು, ಆ ಬಳಿಕ ನಾಲ್ಕು ಎಂಟಾಗಲಿ ಎಂದು ಅದನ್ನೂ ಹಾಕಿ ಪೂರ್ತಿ ಕಳೆದುಕೊಂಡು ಪೆಚ್ಚು ಮೋರೆಯೊಂದಿಗೆ  ವಾಪಸ್‌ ಬರುತ್ತಿದ್ದೆವು.

ಟಿಪ್ಪೂ ಕೊಡುಗೆ

ಚಿಕ್ಕ ಮಕ್ಕಳಲ್ಲವೇ, ನಮಗೆ ಆಟಿಕೆಗಳ ಮೇಲೆ ಮಹಾ ಮೋಹ. ಅಪ್ಪನ ಕಿಸೆಯಿಂದ ಕದ್ದ ಹಣದಲ್ಲಿ, ಕೀ ಕೊಟ್ಟರೆ ಓಡುವ ಫಿರಂಗಿ- ಸೈನಿಕನನ್ನು ಕೊಂಡು ತರುತ್ತಿದ್ದೆ. ಆಡಬೇಕು ಎಂಬ ತೀವ್ರ ಆಸೆ. ಅದರೆ ಹಣದ ಮೂಲದ ಗುಮಾನಿಯಿಂದ ಅಪ್ಪ ಬಯ್ಯಬಹುದು ಎಂಬ ಭಯ. ಹಾಗಾಗಿ ಅದನ್ನು ಅಟ್ಟದಲ್ಲಿಟ್ಟು ಆಗೊಮ್ಮೆ ಈಗೊಮ್ಮೆ ಅಟ್ಟಕ್ಕೆ ಹೋಗಿ ಯಾರಿಗೂ ಗೊತ್ತಾಗದಂತೆ ಸ್ವಲ್ಪ ಆಟ ಆಡಿ ಮೆತ್ತಗೆ ಇಳಿದು ಬರುತ್ತಿದ್ದೆ.

ರಥೋತ್ಸವದ ದಿನ ಸರ್ವಾಲಂಕೃತ ರಥ ವೈಯಾರದಿಂದ ಸಾಗುವುದನ್ನು ನೋಡುವುದೇ ಒಂದು ಸಂಭ್ರಮ. ಫಲ ವಸ್ತುಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿ ಮಾರ್ಚ್‌ ಎಪ್ರಿಲ್‌ ತಿಂಗಳಲ್ಲಿ. ಆದರೆ ಶಂಕ್ರಾಣ ರಥದ ಅಲಂಕಾರದಲ್ಲಿ ಅದಾಗಲೇ ಮಾವು, ಹಲಸು ಹೀಗೆ ಎಲ್ಲ ರೀತಿಯ ಫಲಗಳನ್ನೂ ನೋಡಬಹುದಿತ್ತು. ರಥೋತ್ಸವದ ದಿನ ಬೆಳಗಿನ ಹೊತ್ತು ಕೋಟಿ ತೀರ್ಥದ ಸುತ್ತಲ ಹಾದಿಯಲ್ಲಿ ಅರ್ಧಕ್ಕೆ ಅದನ್ನು ಎಳೆದು ನಿಲ್ಲಿಸುತ್ತಿದ್ದರು. ಬಳಿಕ ನಾವೆಲ್ಲ ಊಟಕ್ಕೆ ಹೋಗುತ್ತಿದ್ದೆವು. ಸಂಜೆ ಮತ್ತೆ ಅದನ್ನು ಎಳೆದು ರಥದ ಮನೆಯ ಮುಂದೆ ಇರಿಸುತ್ತಿದ್ದರು. ಅಲ್ಲಿಗೆ ಶಂಕ್ರಾಣ ಹಬ್ಬದ ಮುಖ್ಯ ಭಾಗ ಮುಗಿಯಿತು.

ಶಂಕ್ರಾಣ ದೇವಸ್ಥಾನ ಊರಿನ ಸಾಂಸ್ಕೃತಿಕ ಕೇಂದ್ರವೂ ಹೌದು. ರಾಮದಾಸ ಸಾಮಗರಂತಹ ಹರಿದಾಸರಿಂದ ಅಲ್ಲಿ ಹರಿಕಥಾ ಸಪ್ತಾಹ ನಡೆಯುತ್ತಿತ್ತು. ಊರಲ್ಲಿ ಮನರಂಜನೆಯ ಯಾವ ಅವಕಾಶಗಳೂ ಇಲ್ಲದ ಕಾಲದಲ್ಲಿ ಊರ ಜನರಿಗೆ ಅದು ಮನರಂಜನೆಯ ಜತೆಗೆ ಪುರಾಣ ಕತೆಗಳ ಅರಿವನ್ನು ಮೂಡಿಸಿಕೊಳ್ಳುವ ಅವಕಾಶವೂ ಅಗಿತ್ತು.

ಅದೇ ದಿನಗಳಲ್ಲಿ ಪುಟ್ಟಪರ್ತಿಯ ಸಾಯಿಬಾಬಾನ ಪವಾಡಗಳ ಪ್ರಚಾರ ಜೋರಾಗಿತ್ತು. ಆ ಪವಾಡಗಳ ಚಲನಚಿತ್ರ ಪ್ರದರ್ಶನವೂ ದೇಗುಲದ ಮುಂಭಾಗಲ್ಲಿ ನಡೆದಿತ್ತು. ಮುಂದೆ ಸಾಯಿಬಾಬಾನ ಫೋಟೋ ಇತಿಹಾಸ ಪ್ರಸಿದ್ಧ ದೇಗುಲದ ಅಂಗಣದ ಒಳಗೂ ಕಾಣಿಸಿಕೊಂಡಾಗ ಊರ ಕ್ರಾಂತಿಕಾರಿ ಯುವಕರು ಅದನ್ನು ವಿರೋಧಿಸಿ ಭಾರೀ ಗಲಾಟೆ ಮಾಡಿದ್ದರು.

ಶ್ರೀನಿವಾಸ ಕಾರ್ಕಳ

ಚಿಂತಕರು

ಇದನ್ನು ಓದಿದ್ದೀರಾ? http://ಅದೊಂದು ದೊಡ್ಡ ಕಥೆ-ಆತ್ಮಕಥೆ ಸರಣಿ ಭಾಗ-9| ಮನೆಗೆ ಬಂತು ಆರ್‌ ಎಸ್‌ ಎಸ್ https://kannadaplanet.com/thats-a-big-story-autobiography-series-part-9/



More articles

Latest article