ಅದೊಂದು ದೊಡ್ಡ ಕತೆ – ಆತ್ಮಕಥನ ಸರಣಿ 19 | ಸ್ವಂತದೊಂದು ಮನೆಯ ಮಾಡಿ…

ಸುಬ್ರಹ್ಮಣ್ಯ, ಬಳ್ಪ, ವಿಟ್ಲ, ತೋಡಾರು, ವೇಣೂರು, ಜೋಡುರಸ್ತೆ, ಶಂಕ್ರಾಣ ಹೀಗೆ ಎಲ್ಲೆಡೆಯೂ ನಾವಿದ್ದುದು ಬಾಡಿಗೆ ಮನೆಗಳಲ್ಲೇ. ಕೆಲವು ಹಂಚಿನದಾದರೆ ಹೆಚ್ಚಿನದು ಹುಲ್ಲು ಮಾಡಿನದು. 1927 ರಲ್ಲಿ ಹುಟ್ಟಿದ ಅಪ್ಪ ಐವತ್ತರ ಹರೆಯ ದಾಟಿದ್ದ. ಉದ್ಯೋಗಕ್ಕೆ ಸೇರಿಯೇ 25 ವರ್ಷವಾಗುತ್ತಾ ಬಂದಿತ್ತು. ಆದರೂ ಅವರಿಗೆ ತಮ್ಮದೇ ಆದ ಒಂದು ಜಮೀನು ಎಂಬುದಿರಲಿಲ್ಲ. ಒಂದು ಪುಟ್ಟ ಜಮೀನು ಹೊಂದುವುದು, ಅದರಲ್ಲೊಂದು ಪುಟ್ಟ ಮನೆ ಕಟ್ಟುವ ಕನಸು ಆತನಲ್ಲಿ ಮತ್ತು ನಮ್ಮೆಲ್ಲರಲ್ಲಿ ಇದ್ದೇ ಇತ್ತು.

1966 ರ ದಿನಗಳಲ್ಲಿ ಅಪ್ಪ ಕಾರ್ಕಳ ಜೋಡುರಸ್ತೆಯ ಅರಣ್ಯ ತಪಾಸಣಾ ಗೇಟ್‌ ನ ಜವಾಬ್ದಾರಿಯಲ್ಲಿದ್ದ. ಕಾರ್ಕಳದಿಂದ ಉಡುಪಿಯ ರಸ್ತೆಯಲ್ಲಿ ಆ ಗೇಟು ದಾಟಿದ ತಕ್ಷಣ ಪೂರ್ವಕ್ಕೆ ತಿರುಗಿದರೆ ಅಲ್ಲೇ ಶಿರ್ವ ಶಿವಣ್ಣ ಶೆಟ್ಟರ ದುರ್ಗಾ ಸಾ ಮಿಲ್ಲು (ಊರಿನ ಪ್ರಾಥಮಿಕ ಶಾಲೆಯೂ ಅವರದ್ದೇ). ಆ ಮರದ ಮಿಲ್ಲಿಗೆ ನಾಟಾ ಹೋಗಬೇಕಿದ್ದರೆ ಅಪ್ಪನ ಅನುಮತಿ ಬೇಕು. ಇದೇ ಕಾರಣದಿಂದಲೋ ಅಥವಾ ನಿತ್ಯವೂ ಭೇಟಿಯಾಗುತ್ತಿದ್ದುದರಿಂದಲೋ ಏನೋ, ಶಿವಣ್ಣ ಶೆಟ್ಟರಿಗೂ ನನ್ನ ತಂದೆಗೂ ಒಳ್ಳೆಯ ಸ್ನೇಹ ಬೆಳೆಯಿತು. ಆದರೆ ಶೆಟ್ಟರು ಕೃತಘ್ನರಾಗಿರಲಿಲ್ಲ. “ಫಾರೆಸ್ಟ್ರೆ.. ನೀವು ನಮ್ಮ ಊರಿನಲ್ಲಿಯೇ ನಿಲ್ಲಬೇಕು” ಎಂದು ಅವರು ಹೇಳುತ್ತಾ ಹೇಳುತ್ತಾ ಮುಂದೆ ಒಂದು ದಿನ, “ನನ್ನದೊಂದು ಎಕರೆ ಜಾಗ ಇದೆ ಅದನ್ನು ನಿಮಗೆ ಕೊಡುತ್ತೇನೆ” ಎಂದು ಪ್ರಸ್ತಾಪ ಮುಂದಿಟ್ಟೇ ಬಿಟ್ಟರು.

ಹೀಗೆ ನಾವು ಶಂಕ್ರಾಣದಲ್ಲಿದ್ದಾಗ ಈ ಜಮೀನನ್ನು ಅಪ್ಪ 1200 ರುಪಾಯಿಗೆ ಖರೀದಿಸಿಯೇ ಬಿಟ್ಟರು. ಅಮ್ಮನ ಹೆಸರಿನಲ್ಲಿ ರಿಜಿಸ್ಟರ್ ಆಯಿತು. 1976 ರ ಕಾಲದ 1200 ರುಪಾಯಿ ಎಂದರೆ ಈಗಿನ ಹಣಕ್ಕೆ ಹೋಲಿಸಿದರೆ ಎಷ್ಟು ದೊಡ್ಡ ಮೊತ್ತವಾಗಿರಬಹುದು ಊಹಿಸಿ. ಅಪ್ಪನಿಗೆ ಆಗ ಇದ್ದುದೇ ಮಾಸಿಕ ಸಂಬಳ ಸುಮಾರು 500 ರುಪಾಯಿ!

ಆ ಜಾಗ ಇದ್ದುದು ಕಾರ್ಕಳ ಜೋಡುರಸ್ತೆಯಿಂದ ಉಡುಪಿ ದಾರಿಯಲ್ಲಿ ಅರ್ಧ ಕಿಲೋಮೀಟರ್‌ ದೂರದ ಅಯ್ಯಪ್ಪನಗರದಿಂದ ಪಶ್ಚಿಮಕ್ಕೆ ಬೈರ್ಲೊಟ್ಟು ರಸ್ತೆಗೆ ಒತ್ತಿಕೊಂಡಂತೆ. ಹೇಳುವುದಕ್ಕೇನೋ ಒಂದು ಎಕರೆ ಜಮೀನು. ಆದರೆ, ಅದರಲ್ಲಿದ್ದುದೆಲ್ಲ ಕಲ್ಲುಪಾದೆ (ಗ್ರಾನೈಟ್). ಹತ್ತೋ ಇಪ್ಪತ್ತೋ ಸೆಂಟ್ಸ್‌ ನಷ್ಟು ಮಣ್ಣು ಜಾಗ ಇರಬಹುದು.‌ ಆ ಜಾಗದಲ್ಲೂ ಸಣ್ಣ ಸಣ್ಣ ಕಲ್ಲುಗಳೇ. ಸುಮಾರು ಹತ್ತು ಅಡಿ ಅಗೆದರೆ ಮತ್ತೆ ಕಗ್ಗಲ್ಲಿನ ಪಾದೆ. ಹಾಗಾಗಿ ಅಲ್ಲಿ ದೊಡ್ಡ ಮರಗಳು ಬೆಳೆಯುತ್ತಿರಲಿಲ್ಲ. ಇದ್ದುದೆಲ್ಲ ಪೊದೆಗಳ ಜಾತಿಯವು.

ನಮ್ಮ ಜಮೀನನ್ನು ಸೀಳಿಕೊಂಡೇ ಅಯ್ಯಪ್ಪನಗರ- ಬೈರ್ಲೊಟ್ಟು ರಸ್ತೆ ಸಾಗುತ್ತಿತ್ತು. ನಮ್ಮದು ರಸ್ತೆಯ ಆಕಡೆ ಒಂದಿಷ್ಟು ಜಾಗ, ಈಕಡೆ ಒಂದಿಷ್ಟು ಜಾಗ. ಅಲ್ಲದೆ, ಜಮೀನಿಗೆ ಬಹಳ ಕಾಲ ಗಡಿ ಬೇಲಿಗಳೂ ಇರಲಿಲ್ಲವಾದ್ದರಿಂದ, ಅನೇಕರ ಮನೆಗಳ ಕಾಲುದಾರಿಗಳೂ ನಮ್ಮ ಜಮೀನಿನಲ್ಲೇ ಇತ್ತು. ಬಹುಕಾಲದಿಂದ ಬಳಕೆಯಲ್ಲಿದ್ದ ಆ ಕಾಲುದಾರಿಗಳನ್ನು ಬಂದ್‌ ಮಾಡುವಂತಿರಲಿಲ್ಲ. ಜಮೀನಿನ ಈಶಾನ್ಯ ದಿಕ್ಕಿಗೆ ಬೃಹತ್ತಾದ ಕಗ್ಗಲ್ಲಿನ ಬೆಟ್ಟ ʼಬೆರ್ಮರ ಪಾದೆʼ.

ನಾವು ಶಂಕ್ರಾಣದಲ್ಲಿದ್ದಾಗ ಕೆಲ ಕಾಲ, ಅಂದರೆ 1976-77, ಅಪ್ಪನಿಗೆ ಮಡಾಮಕ್ಕಿ, ಸೋಮೇಶ್ವರ ಭಾಗದ ಅರಣ್ಯದ ಜವಾಬ್ದಾರಿಯಿತ್ತು. ಒಂದಲ್ಲ ಒಂದು ದಿನ ನಾವು ಮತ್ತೆ ಕಾರ್ಕಳಕ್ಕೆ ಮರಳುವ ಸಾಧ್ಯತೆಯೂ ಇತ್ತು. ಹಾಗಾಗಿ, ಅಪ್ಪ ಅಲ್ಲಿನ ಜಮೀನನ್ನು ಉತ್ತಮ ಪಡಿಸಿ ಮನೆ ಕಟ್ಟಲು ಸೂಕ್ತಗೊಳಿಸುವ ಯೋಚನೆ ಮಾಡಿದ್ದ. ಎಂದೇ, ಅಲ್ಲಿ ಒಂದು ಬಾವಿ ತೋಡಿಸಲಾರಂಭಿಸಿದ. ಒಂದು ಸಂಜೆ ಅಲ್ಲಿಂದ ಶಂಕ್ರಾಣದ ನಮ್ಮ ಮನೆಗೆ ಬಂದಾಗ ಅಪ್ಪ ಖುಷಿ ಖುಷಿಯಲ್ಲಿದ್ದ. “ಆ ದುರ್ಗಾಪರಮೇಶ್ವರಿಯ ಕೃಪೆಯಿಂದ ಬಾವಿಯಲ್ಲಿ ನೀರು ಬಂತು” ಎಂದ. ನಮಗೆಲ್ಲರಿಗೂ ಖುಷಿಯೋ ಖುಷಿ. ಮನೆ ಎಂದ ಮೇಲೆ ಮೊದಲು ಬೇಕಾಗುವುದೇ ನೀರಲ್ಲವೇ?

ಆದರೆ ಆ ಖುಷಿ ಬಹಳ ದಿನ ಉಳಿಯಲಿಲ್ಲ. ಕಾರ್ಕಳದ ಅನೇಕ ಭಾಗಗಳಲ್ಲಿ ಹೀಗೆ ಬಾವಿಗಳು ಮೋಸ ಮಾಡುವುದಿದೆ. ಒಂದಿಷ್ಟು ನೀರು ಬಂದಂತೆ ಕಾಣಿಸುತ್ತದೆ. ಆದರೆ ಅದು ಒಸರು ನೀರಲ್ಲ. ಹಾಗಾಗಿ, ಆ ಬಾವಿಗಳಲ್ಲಿ ನೀರು ತುಂಬುವುದು ಮಳೆಗಾಲದಲ್ಲಿ ಮಾತ್ರ. ನೀರಿನ ಟಾಂಕಿಯಂತೆ ಅವುಗಳ ಕೆಲಸ. ಅಪ್ಪ ತೋಡಿಸಿದ ಬಾವಿಯ ಕತೆಯೂ ಹಾಗೆಯೇ ಆಯಿತು. ನೀರಿಲ್ಲದ ಬಾವಿಯಾಯಿತು.

1978 ರಲ್ಲಿ ಕಾರ್ಕಳಕ್ಕೆ ಮರಳಿದ ಬಳಿಕ ಮತ್ತೆ ನಮ್ಮ ಜಮೀನಿನಲ್ಲಿ ಮನೆ ಕಟ್ಟುವ ಕನಸು ಚಿಗುರೊಡೆಯಿತು. ಆದರೆ ಹಣ ಎಲ್ಲಿದೆ? ಎಲ್ಲದಕ್ಕೂ ಶಿವಣ್ಣ ಶೆಟ್ಟರು ಮತ್ತು ಮರಿಯಣ್ಣ ಭಟ್ಟರೇ ನಮಗೆ ಆಸರೆ.

ಮನೆ ಕಟ್ಟುವ ಕೆಲಸ ಶುರುವಾಯಿತು

ಮನೆ ಆಗ

ಹೀಗೆ ಅಕ್ಟೋಬರ್‌ 18, 1978 ರಂದು ಮನೆಯ ತಳಕಟ್ಟು ಕೆಲಸ ಶುರುವಾಯಿತು. ಆದರೆ ಹಣದ ಅಡಚಣೆ ಮತ್ತಿತರ ಕಾರಣಗಳಿಂದ ಕೆಲಸ ಸಾಗಲಿಲ್ಲ. ಬಿಡುವಿನ ವೇಳೆಯಲ್ಲಿ ನನ್ನ ತಾಯಿ, ನನ್ನ ಕಿರಿಯ ಅಣ್ಣ ಉಮೇಶ ಮತ್ತು ನಾನು ಹೋಗಿ ಅಲ್ಲಿ ಕೆಲಸ ಮಾಡುತ್ತಿದ್ದೆವು. ತಳಕಟ್ಟಿಗೆ ಮಣ್ಣು ಹಾಕುವುದೆಲ್ಲ ನಮ್ಮದೇ ಕೆಲಸ.

ಮನೆಯ ಗೋಡೆ ಕಟ್ಟುವ ಕೆಲಸ ಶುರುವಾದುದು ಮಾರ್ಚ್‌ 16, 1979 ರಂದು. ಮನೆಯ ಆಸುಪಾಸಿನಲ್ಲಿ ಗ್ರಾನೈಟ್‌ ಕಲ್ಲಿಗೆ ಬರವಿರಲಿಲ್ಲ. ಮನೆಯ ಹಿಂಬದಿಯಲ್ಲಿಯೇ ಕಗ್ಗಲ್ಲಿನ ಪುಟ್ಟ ಪಾದೆಯನ್ನು ತಮಿಳು ಕಾರ್ಮಿಕರ ಮೂಲಕ ಒಡೆಸಿ (ಅಯ್ಯಪ್ಪನಗರ ಎಂದು ಹೆಸರು ಬರಲು ಕಾರಣವೇ ಅಲ್ಲಿನ ತಮಿಳರು. ದೂರದ ತಮಿಳುನಾಡಿನಿಂದ ಬಂದ ಈ ಶ್ರಮಜೀವಿಗಳು ಕಡೆಯುವ ಕಲ್ಲು ಕೆತ್ತುವ, ಕಲ್ಲು ಒಡೆಯುವ ಕೆಲಸ ಮಾಡುತ್ತ ಇಲ್ಲೇ ಮನೆ ಮಾಡಿಕೊಂಡು ಸ್ಥಳೀಯರೇ ಆಗಿಬಿಟ್ಟರು) ಅದೇ ಕಲ್ಲನ್ನು ಮನೆಯ ತಳಹದಿಗೆ ಬಳಸಿದೆವು. ಮರಳು ಮಿಶ್ರಿತ ಮಣ್ಣನ್ನು ಕಲಸಿ ಇಟ್ಟಿಗೆಯಾಗಿಸಿದೆವು. ಮನೆಯ ಗೋಡೆ ನಿಧಾನವಾಗಿ ಏರುತ್ತಾ ಹೋಯಿತು. ಕಿಟಕಿಗೂ ದಾರಂದಕ್ಕೂ ಮರ ಶಿವಣ್ಣ ಶೆಟ್ಟರದೇ.

ಸರಿ, ಮಾಡು ಆಗಬೇಕಲ್ಲ? ಮಾಡಿನ ಮರಕ್ಕಾಗಿ ಒಂದು ಕಳ್ಳ ಕೆಲಸ ಮಾಡಿದೆವು. ನಮ್ಮ ಬಾಡಿಗೆ ಮನೆಯ ಪಕ್ಕದಲ್ಲಿ ಕಿರಾಲು ಬೋಗಿ ಮರಗಳ ಒಂದು ಹಾಡಿಯಿತ್ತು. ಗಗನದೆತ್ತರಕ್ಕೆ ಎದ್ದು ನಿಂತ ಮರಗಳು. ಒಂದು ಮನೆಗೆ ಒಂದು ಮರ ಸಾಕು. ಒಂದು ಅಮವಾಸ್ಯೆಯ ರಾತ್ರಿ ಧಾರಾಕಾರ ಮಳೆ ಸುರಿಯುತ್ತಿರುವಾಗ ಅದನ್ನು ಗರಗಸದಿಂದ ಕತ್ತರಿಸಿ ಹಾಕಿದೆವು. ಮಾರನೇ ದಿನ ಅದು ಶಿವಣ್ಣ ಶೆಟ್ಟರ ಮರದ ಮಿಲ್ಲು ಸೇರಿ, ವಾಲ್‌ ಪ್ಲೇಟ್‌, ಪಕ್ಕಾಸು, ರೀಪುಗಳಾದವು. ದೂಜನ ಎತ್ತಿನ ಗಾಡಿಯಲ್ಲಿ ಮನೆ ಸೇರಿದವು.

ಮಾಡು ಸಿದ್ದವಾಯಿತು, ಹಂಚು? ಅದಕ್ಕೆ ಹಣ ಎಲ್ಲಿಂದ? ಮತ್ತೆ ಅದನ್ನೂ ಶಿವಣ್ಣ ಶೆಟ್ಟರೇ ಕೊಟ್ಟರು. ಮನೆ ಮುಗಿಸಲು ಹಣ ಇಲ್ಲ ಎಂದ ಮೇಲೆ ಮನೆ ಒಕ್ಕಲಿಗೆ ಎಲ್ಲಿಂದ ಹಣ? ಬಹಳ ಕಷ್ಟದ ದಿನಗಳು. ನನಗಾಗ ಪೋಸ್ಟ್‌ ಮೆಟ್ರಿಕ್‌ ಸ್ಕಾಲರ್‌ ಶಿಪ್‌ 300 ರುಪಾಯಿ ಬಂದಿತ್ತು. ಅದನ್ನು ಮನೆಯ ಕೆಲಸಕ್ಕೆ ಕೊಡು ಎಂಬ ಆಗ್ರಹ ಕಿರಿಯ ಅಣ್ಣನದು. ಆದರೆ ನನಗೆ ಮೊದಲ ಬಾರಿ ಸಿಕ್ಕ ನನ್ನದೇ ಹಣ. ಅಲ್ಲದೆ, ನನಗೊಂದು ಪ್ಯಾಂಟ್ಸ್‌ ಖರೀದಿಸುವ ಮತ್ತು ನನ್ನ ಮುಂಚಾಚಿದ್ದ ಹಲ್ಲನ್ನು ಸರಿಪಡಿಸುವ ಕನಸು ಇತ್ತು. ಹಾಗಾಗಿ ನಾನು ಆ ಹಣ ಕೊಡಲಿಲ್ಲ. ಅಣ್ಣನಿಗೆ ಸಿಟ್ಟು ಬಂತು. ಸಣ್ಣ ಜಗಳವೇ ಆಯಿತು.

ಆಗ ಇಂದಿನಂತೆ ಸಿಮೆಂಟ್‌ ಮುಕ್ತ ಮಾರುಕಟ್ಟೆಯಲ್ಲಿ ಸಿಗುತ್ತಿರಲಿಲ್ಲ (ಅಥವಾ ಮುಕ್ತ ಮಾರುಕಟ್ಟೆಯಲ್ಲಿ ಬಹಳ ದುಬಾರಿಯಾಗಿತ್ತೋ ಗೊತ್ತಿಲ್ಲ). ತಹಸೀಲ್ದಾರರಿಗೆ ಅರ್ಜಿ ಹಾಕಿ ಸಿಮೆಂಟ್‌ ಪಡೆದುಕೊಳ್ಳಬೇಕು, ಅದೂ ಸಿಗುತ್ತಿದ್ದುದು ಕೆಲವೇ ಕೆಲವು ಚೀಲ. ಹೊಸ ಮನೆಯ ಪ್ಲಾನ್‌ ನಲ್ಲಿದ್ದುದು ಒಂದು ಅಡುಗೆ ಕೋಣೆ, ಒಂದು ನಡುಕೋಣೆ ಮತ್ತು ಹೊರಗಿನ ಹಜಾರ. ಅವುಗಳಿಗೆಲ್ಲ ಸಿಮೆಂಟ್‌ ಹಾಕಿಸಲು ಹಣ ಇರಲಿಲ್ಲ. ಹಾಗಾಗಿ ಅಡುಗೆ ಕೋಣೆ ಮತ್ತು ನಡುಕೋಣೆಯನ್ನು ಸಿಮೆಂಟ್‌ ಹೊದೆಸಿ ವ್ಯವಸ್ಥಿತ ಗೊಳಿಸಿದೆವು. ಮುಂದಿನ ಹಜಾರ ಮುಂದೊಂದು ಕಾಲಕ್ಕೆ ಎರಡು ಕೋಣೆಯಾಗಿಸಲು ಅನುಕೂಲವಾಗುವಂತೆ ಇತ್ತು (ಮುಂದೆ ಇದನ್ನು ಹಾಗೆಯೇ ವಿಸ್ತರಿಸಿದೆವು, ಮಾತ್ರವಲ್ಲ ಇನ್ನೂ ಒಂದು ವರ್ಷ ಕಳೆದ ಬಳಿಕ ಹಿಂಬದಿಯಲ್ಲಿ ಮಾಡು ಇಳಿಸಿ ಅದನ್ನು ಅಡುಗೆ ಮನೆಯಾಗಿಸಿದೆವು). ಮನೆಯ ಸಾರಣೆ ಕೆಲಸ ಶಂಕ್ರಾಣದಲ್ಲಿ ನಮ್ಮ ನೆರೆ ಮನೆಯವನಾಗಿದ್ದ ಗೋಪಾಲ ದೇವಾಡಿಗ ಬಂದು ಮಾಡಿಕೊಟ್ಟ.

ಸ್ವಂತ ಮನೆಯಲ್ಲಿ ಒಕ್ಕಲಾದೆವು

ತಕ್ಕ ಮಟ್ಟಿಗೆ ಸಿದ್ಧವಾದ ಮನೆಯಲ್ಲಿ ಜೂನ್‌ 9, 1979 ರಂದು ಒಕ್ಕಲಾದೆವು. ಜೀವನದಲ್ಲಿ ಮೊದಲ ಬಾರಿಗೆ ನಮ್ಮದೇ ಆದ ಜಮೀನು, ಅದರಲ್ಲಿ ನಮ್ಮದೇ ಆದ ಒಂದು ಮನೆಯನ್ನು ಹೊಂದುವಾಗಿನ ಖುಷಿಯನ್ನು ಪದಗಳಲ್ಲಿ ವರ್ಣಿಸಲಾಗದು. ಮನೆಗೆ ತಾಗಿಕೊಂಡಂತೆ ವಿದ್ಯುತ್‌ ವೈರ್‌ ಸಾಗುತ್ತಿದ್ದರೂ, ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ವೈರಿಂಗ್‌ ಗೂ ಹಣ ಇರದ ಕಾರಣ, ನಾವು ಅಲ್ಲಿದ್ದ ಐದು ವರ್ಷವೂ ಆ ಮನೆಯಲ್ಲಿದ್ದುದು ಚಿಮಣಿ ಎಣ್ಣೆಯ‌ ದೀಪ ಮತ್ತು ಲ್ಯಾಂಪ್.

ಆ ದಿನಗಳಲ್ಲಿ ಮನೆಗಳಲ್ಲಿ ಶೌಚಾಲಯ ವ್ಯವಸ್ಥೆ ವಿರಳ. ನಮ್ಮಲ್ಲೂ ಇರಲಿಲ್ಲ. ಬೆಳಗ್ಗೆ ಎಲ್ಲರೂ ಬಂಡೆಗಳ ಮರೆಗೆ ಹೋಗಿ ಕೆಲಸ ಮುಗಿಸಿ ಬರಬೇಕು. ಮೂರು ಬದಿಗೆ ಮಡಲಿನ ತಟ್ಟಿ ಕಟ್ಟಿ ಒಂದು ಸಣ್ಣ ಬಚ್ಚಲು ಮನೆ ಮಾಡಿಕೊಂಡೆವು. ಅದನ್ನು ಹಗಲು ಬಳಸುವಂತಿರಲಿಲ್ಲ. ಮನೆಯಲ್ಲಿ ಸ್ವಂತ ನೀರಿನ ವ್ಯವಸ್ಥೆ ಇರಲಿಲ್ಲ. ಪಕ್ಕದ ಜೋಸೆಫ್‌ ಡಿಸೋಜರ ಬಾವಿಯಿಂದ ನೀರು ತರಬೇಕು. ಅವರ ಬಾವಿಯಲ್ಲೂ ಇದ್ದುದು ಅತ್ಯಲ್ಪ ನೀರು.

ಜೋಸೆಫ್‌ ರ ಬಾವಿಯಲ್ಲಿ ನೀರಿದೆಯಲ್ಲ‌, ಹಾಗಾದರೆ ಅಲ್ಲಿಂದ ಹತ್ತಿಪ್ಪತ್ತು ಅಡಿ ದೂರದ ನಮ್ಮ ಜಾಗದಲ್ಲಿ ಬಾವಿ ತೋಡಿದರೆ ನೀರು ಸಿಗದೇ? ಗಂಗಾಧರಯ್ಯ ಎಂಬ ಭೂಶಾಸ್ತ್ರಜ್ಞ ʼಇಲ್ಲಿ ನೀರು ಸಿಕ್ಕೀತುʼ ಎಂದು ಒಂದು ಜಾಗ ಗುರುತು ಹಾಕಿ ತೋರಿಸಿದರು. ಸರಿ, ನಾವೇ ಸ್ವಲ್ಪ ಸ್ವಲ್ಪವೇ ಬಾವಿ ತೋಡತೊಡಗಿದೆವು. ಮೊದಲು ಕೆಂಪು ಮಣ್ಣು, ಆಮೇಲೆ ಬಿಳಿ ಬಿಳಿ ಮಣ್ಣು, ಚರೆ ಮಣ್ಣು, ಸೇಡಿ ಮಣ್ಣು, ಆಮೇಲೆ ಮತ್ತೆ ಎರಡನೆ ಬಾವಿಯೂ ಮೋಸ ಮಾಡಿತು. ನೀರು ಬಂತು ಎಂದು ಖುಷಿಯಲ್ಲಿದ್ದುದು ಎರಡೇ ದಿನ (ಆಗ ದೇವರ ಮಹಾ ಭಕ್ತನಾಗಿದ್ದ ನಾನು, ʼಗುರು ರಾಘವೇಂದ್ರರ ಕೃಪೆಯಿಂದ ನೀರು ಬಂತುʼ ಎಂದು ನನ್ನ ಡೈರಿಯಲ್ಲಿ 10.3.81 ರಂದು ಬರೆದಿದ್ದೆ!). ಅಲ್ಲೂ ಅಡಿಯಲ್ಲಿ ಇದ್ದುದು ಹಾಸು ಪಾದೆ. ಮಳೆಗಾಲ ಮಾತ್ರ ಉಪಯುಕ್ತವಾದೀತು, ಅಂತಹ ಬಾವಿ. ಹೀಗೆ ಎರಡನೆ ಬಾವಿಯೂ ವ್ಯರ್ಥವಾಯಿತು. ಮತ್ತೆ ತಲೆಗೆ ಕೈಯಿಟ್ಟು ಚಿಂತಾಕ್ರಾಂತರಾದೆವು.

ಕೊನೆಗೂ ನೀರು ಸಿಕ್ಕಿತು!

ಮನೆ ಈಗ..

ಹೀಗೆ ಮತ್ತೊಂದು ವರ್ಷ ಕಳೆಯಿತು. ಈ ಬಾರಿ ಬಾಬು ಎಂಬ ನಾಟಿ ಜಲಶೋಧಕನನ್ನು ಕರೆಸಿದೆವು (17.5.82). ಆತ ಮನೆಯ ಗೋಡೆಯಿಂದ ಪಶ್ಚಿಮಕ್ಕೆ ಕೇವಲ ನಾಲ್ಕೈದು ಅಡಿ ದೂರದಲ್ಲಿ, 20 ಅಡಿ ಆಳದಲ್ಲಿ ನೀರು ಇದೆ ಎಂದು ಗುರುತು ಹಾಕಿಕೊಟ್ಟ. ಸರಿ ಮೂರನೆ ಬಾವಿ ಅಗೆಯುವ ಕೆಲಸ ಶುರುವಾಯಿತು. ಅನೇಕ ವಾರಗಳ ಕೆಲಸದ ಬಳಿಕ ನೀರು ಸಿಕ್ಕಿಯೇ ಬಿಟ್ಟಿತು. ಎರಡು ಬಂಡೆಗಳು ಸೇರುವ ಜಾಗದಲ್ಲಿ ನೀರು ಸಿಕ್ಕರೆ ಅದು ಶಾಶ್ವತ ನೀರಂತೆ. ಹಾಗೆಯೇ ಆಯಿತು.

ಆದರೆ, ಅಲ್ಲಿ ಒಂದಿಷ್ಟು ಬಂಡೆ ಒಡೆಯಲೇಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಯಿತು. ಆದರೆ ಡೈನಮೈಟ್‌ (ತೋಟೆ) ಸ್ಫೋಟಿಸಿದರೆ ಐದಾರು ಅಡಿಯಷ್ಟೇ ದೂರದಲ್ಲಿರುವ ಮನೆಯೇ ಧ್ವಂಸವಾಗುವ ಸ್ಥಿತಿ. ಕೊನೆಗೂ ಸಣ್ಣ ಮಟ್ಟಿನ ಡೈನಮೈಟ್‌ ಸ್ಫೋಟಿಸಿ ಕಲ್ಲು ಒಡೆಯಲಾಯಿತು. ಮನೆಯ ಅಗತ್ಯಕ್ಕೆ ತಕ್ಕಷ್ಟು ನೀರು ಸಿಕ್ಕಿತು. (ಆದರೆ ದುಃಖದ ಸಂಗತಿಯೆಂದರೆ ಈ ಬಾವಿಯಲ್ಲಿ ನೀರು ಸಿಕ್ಕಿದ ಮೇಲೆ ನಾವು ಕಾರ್ಕಳದಲ್ಲಿದ್ದುದು ಕೇವಲ ಒಂದೆರಡು ವರ್ಷ, ನಮ್ಮ ಕಷ್ಟ ಮುಂದೆ ಅದನ್ನು ಖರೀದಿಸಿದವರ ಸುಖಕ್ಕೆ ಕಾರಣವಾಯಿತು).

ಹೊಸಮನೆಗೆ ಕಾರ್ಕಳ ಜೋಡುರಸ್ತೆಯ ಪ್ರಾಥಮಿಕ ಶಾಲೆಗಿಂತ ಬೈರ್ಲೊಟ್ಟು (ಬೈರ್ಲಬೆಟ್ಟು) ಶಾಲೆ ಹತ್ತಿರವಿತ್ತು. ಆದ್ದರಿಂದ ನನ್ನ ತಮ್ಮ ಬಾಲಕೃಷ್ಣ (ಈಗ ಆತ ಬೆಂಗಳೂರಿನಲ್ಲಿ ʼಎಂ ಆರ್‌ ಬಾಲಕೃಷ್ಣʼ ಎಂಬ ಹೆಸರಿನಲ್ಲಿ ಖ್ಯಾತ ಹೈಕೋರ್ಟ್ ವಕೀಲ), ತಂಗಿ ಹೇಮಾ (ಈಕೆ ʼಹೇಮಾ ಸುಳ್ಯʼ ಎಂದು ಪತ್ರಕರ್ತೆಯಾಗಿ ಈಗ ಪರಿಚಿತಳು)‌, ಕಿರಿಯ ತಂಗಿ ಮೀನಾಕ್ಷಿ (ಕೃಷಿ ಪರಿಣತೆ) ಬೈರ್ಲೊಟ್ಟು ಶಾಲೆಗೇ ಹೋಗತೊಡಗಿದರು.

1979-80 ರ ಆ ದಿನಗಳಲ್ಲಿ ನಾನು ಭುವನೇಂದ್ರ ಕಾಲೇಜಿನಲ್ಲಿ ಪ್ರಥಮ ಬಿಎಸ್‌ ಸಿಗೆ ಸೇರಿಕೊಂಡಿದ್ದೆ. ಈ ಮೊದಲು ಜೋಡುರಸ್ತೆಯಿಂದ ಕಾಲೇಜು ಹತ್ತಿರವಿತ್ತು. ಆದರೆ ಹೊಸ ಮನೆಯಿಂದ ಹೋಗಬೇಕಾಗಿದ್ದುದರಿಂದ ಮತ್ತೆ ಎರಡು ಕಿಲೋಮೀಟರ್‌ ಹೆಚ್ಚು ದೂರ ಕ್ರಮಿಸಬೇಕಾಯಿತು. ಹೇಗೂ ನನ್ನ ಸಾರ್ವಕಾಲಿಕ ಗೆಳೆಯ ಸೈಕಲ್‌ ಇತ್ತಲ್ಲ, ಹಾಗಾಗಿ ಕಾಲೇಜಿಗೆ ಪ್ರಯಾಣಿಸುವುದು ಕಷ್ಟದ ಕೆಲಸವಾಗಿರಲಿಲ್ಲ.

ಹೊಸ ಮನೆಯ ಹಜಾರವನ್ನು ಒಂದು ಪುಟ್ಟ ಕೊಠಡಿ ಮತ್ತು ಹಾಲ್‌ ಆಗಿ ಪರಿವರ್ತಿಸಿದ ಬಳಿಕ. ಆ ಪುಟ್ಟ ಕೊಠಡಿ ನನ್ನದಾಯಿತು. ಅಲ್ಲಿ ಓದುವುದಕ್ಕಿದ್ದ ಐಷಾರಾಮೀ ವ್ಯವಸ್ಥೆಯೆಂದರೆ ಒಂದು ಸ್ಟೂಲ್‌, ಒಂದು ಈಸೀ ಚೇರ್, ಒಂದು ಚಿಮಣಿ ಎಣ್ಣೆಯ ಲ್ಯಾಂಪ್ (ನಾನು ಬಿಎಡ್‌ ಮುಗಿಸುವವರೆಗೂ ನನಗೆ ಓದುವುದಕ್ಕಿದ್ದುದು ಇಷ್ಟೇ ವ್ಯವಸ್ಥೆ).‌ ಕೊಠಡಿಗೆ ಕಿಟಕಿ ಇತ್ತು, ಹಲಗೆಯಿಂದ ಮುಚ್ಚುವಂತೆಯೂ ಇತ್ತು. ಆದರೆ ದಳಿಯಂತಹ (ಗ್ರಿಲ್‌) ತಡೆರಚನೆ ಇರಲಿಲ್ಲ. ಹಾಗಾಗಿ ಕಿಟಕಿಯಿಂದ ನುಗ್ಗಿ ಕೊಠಡಿ ಸೇರಿಕೊಳ್ಳುವುದು ಸುಲಭವಿತ್ತು. ನಾನು ಸ್ವಾತಂತ್ರ್ಯವನ್ನು ಸ್ವೇಚ್ಛಾಚಾರಕ್ಕೆ ಕೆಲವೊಮ್ಮೆ ಬಳಸಿಕೊಂಡು ನಾಟಕ, ಜಾತ್ರೆ, ಅದು ಇದು ಎಂದು ನಡುರಾತ್ರಿಯಲ್ಲಿ ಮನೆಗೆ ಬಂದಾಗ ಮನೆಯವರಿಗೆ ತೊಂದರೆ ನೀಡದೆ ಈ ಕಿಟಕಿಯ ಮೂಲಕ ಒಳಗೆ ತೂರಿ ಮಲಗಿಬಿಡುತ್ತಿದ್ದೆ. ನಾನು ರಾತ್ರಿ ಬಂದುದು ಯಾರಿಗೂ ತಿಳಿಯುತ್ತಿರಲಿಲ್ಲ.

ಮರುಭೂಮಿಯಲ್ಲಿ ಹಸಿರು ಚಿಗುರಿಸಿದೆವು

ನಮ್ಮದೇ ಜಮೀನು, ನಮ್ಮದೇ ಮನೆ. ಆದರೆ ಅಲ್ಲಿ ಹೊಸದಾಗಿ ನಿರ್ಮಾಣಗೊಂಡ ಮನೆ ಹೊರತುಪಡಿಸಿ ಏನೂ ಇರಲಿಲ್ಲ. ಅಯ್ಯಪ್ಪ ನಗರದ ಪಕ್ಕದಲ್ಲಿಯೇ ಹಾರ್ಟಿಕಲ್ಚರಲ್‌ ಫಾರಂ ಇತ್ತು. ಅಲ್ಲಿ ನಮ್ಮ ಗೆಳೆಯರೇ ಆದ ಜವರಪ್ಪರು ಇದ್ದರು. ಅಲ್ಲಿಂದ ಕಾಳಪ್ಪಾಡಿ, ಮುಂಡಪ್ಪ, ಬೆನೆಟ್‌ ಆಪೋಸ್‌, ತೋತಾಪುರಿ ಹೀಗೆ ಅನೇಕ ಬಗೆಯ ಮಾವಿನ ಗಿಡ ತಂದು ನಮ್ಮ ಮನೆಯ ಸುತ್ತ ನಟ್ಟೆವು. ಗುಂಡಿ ತೋಡಿ ತೆಂಗಿನ ಮರವನ್ನೂ ನೆಟ್ಟೆವು. ಗಿಡವನ್ನು ಜಾನುವಾರುಗಳು ನಾಶಮಾಡಬಾರದಲ್ಲಾ? ಎಂದೇ, ಜಮೀನಿನಲ್ಲೇ ಇದ್ದ ಗುಂಡು ಕಲ್ಲುಗಳನ್ನು ಸಬ್ಬಲ್‌ ನಿಂದ ಎತ್ತಿ ಇಷ್ಟಿಷ್ಟೇ ಪಾಗಾರ ಕಟ್ಟಲಾರಂಭಿಸಿದೆವು. ಪಾಗಾರ ದಾಟಲು ಪುಟ್ಟದೊಂದು ತಡಮೆಯೂ ನಿರ್ಮಾಣವಾಯಿತು.

ಬಿಡುವಿನ ದಿನಗಳಲ್ಲಿ ಅಪ್ಪ ಲಂಗೋಟಿ ತೊಟ್ಟು ರಸ್ತೆಯ ಬದಿಯಲ್ಲಿ ಈ ಕೆಲಸ ಮಾಡುತ್ತಿದ್ದ. ಕೆಲಸ ಮಾಡುವಾಗ ಆತನಿಗೆ ನಾಚಿಕೆ ಎಂಬುದಿರಲಿಲ್ಲ. “ನೀವು ಫಾರೆಸ್ಟರ್‌, ಹೀಗೆ ಲಂಗೋಟಿಯಲ್ಲಿ ಕೆಲಸ ಮಾಡಬಹುದೇ?” ಎಂದು ಪ್ರಶ್ನಿಸಿದರೆ “ಮಣ್ಣಿನ ಕೆಲಸ ಮಾಡುವಾಗ ಇನ್ನೇನು ಪ್ಯಾಂಟ್‌ ತೊಟ್ಟಕೊಳ್ಳಬೇಕೇ?” ಎಂದು ಮರು ಪ್ರಶ್ನಿಸುತ್ತಿದ್ದ.

ನಿಧಾನವಾಗಿ ಮನೆ ಹೆಚ್ಚುವರಿ ಕೊಠಡಿಗಳಿಂದ ವಿಸ್ತಾರಗೊಂಡು, ವಾಸಯೋಗ್ಯವಾಯಿತು. ಸುತ್ತಲಿನ ಗಿಡಗಳು ಮೇಲೇಳಲಾರಂಭಿಸಿದವು. ಹಸಿರು ಗಿಡಗಳಿಂದ ಜಮೀನಿಗೆ ಒಂದು ರೂಪ ಬಂತು. ಈ ರೀತಿ ಒಂದು ರೂಪ ಬರಲು ನಾವು ಮನೆಮಂದಿಯೆಲ್ಲರೂ ಹರಿಸಿದ ಬೆವರು ಮತ್ತು ರಕ್ತ ಅಷ್ಟಿಷ್ಟಲ್ಲ. ಹೀಗೆ ನಮ್ಮದೇ ಶ್ರಮದಿಂದ ಬಹುಮಟ್ಟಿಗೆ ವಾಸಯೋಗ್ಯ ಜಮೀನನ್ನಾಗಿಸಿದ ನಾವು ಅಲ್ಲಿದ್ದುದು ಮುಂದೆ ಕೇವಲ ಮೂರು ವರ್ಷ. ಮೂರು ಬಾವಿ ತೋಡಿ ಮೂರನೇ ಬಾವಿಯಲ್ಲಿ ನೀರು ದಕ್ಕಿಸಿಕೊಂಡು, ಕಲ್ಲಿನಿಂದಲೇ ಕೂಡಿದ ಜಮೀನಿನಲ್ಲಿ ಮಾವು, ತೆಂಗು ಬೆಳೆದು, ಅವು ಇನ್ನೇನು ಫಸಲು ನೀಡುತ್ತವೆ ಎನ್ನುವಾಗ, ನಾವು ಆ ಜಮೀನು ಮಾರಿ ಕಾರ್ಕಳಕ್ಕೆ ಶಾಶ್ವತ ವಿದಾಯ ಹೇಳಬೇಕಾಯಿತು. ಆ ದುಃಖದ ಕತೆಯನ್ನು ಮುಂದೆ ಹೇಳುತ್ತೇನೆ.

ಶ್ರೀನಿವಾಸ ಕಾರ್ಕಳ

ಚಿಂತಕರು

More articles

Latest article

Most read