ಶಂಕರನಾರಾಯಣ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತನ್ನದೇ ಆದ ವ್ಯವಸ್ಥಿತ ಆಟದ ಮೈದಾನ ಇರಲಿಲ್ಲ ಎಂದು ಹೇಳಿದ್ದೆನಲ್ಲ. ಶಾಲೆಯೊಂದಕ್ಕೆ ಹೇಳಿದ್ದೇ ಅಲ್ಲದ ಜಾಗದಲ್ಲಿದ್ದ ಶಾಲೆ ಅದು. ಅದರ ಕೆಳ ಮಗ್ಗುಲಿನಿಂದ ಹಾದು ಹೋಗುತ್ತಿತ್ತು ಶಂಕರನಾರಾಯಣ ಸಿದ್ದಾಪುರ ರಸ್ತೆ. ಕೇವಲ ಒಂದು ವಾಲಿಬಾಲ್ ಕೋರ್ಟ್ ನಷ್ಟಿದ್ದ ಅಂಗಳದಂತಹ ಜಾಗದಲ್ಲಿ ಅಸೆಂಬ್ಲಿ, ಸ್ವಾತಂತ್ರ್ಯ ದಿನೋತ್ಸವ, ವಾರ್ಷಿಕೋತ್ಸವ, ಆಟ ಎಲ್ಲವೂ ಆಗಬೇಕು. ಆ ಪುಟ್ಟ ಮೈದಾನದಲ್ಲಿ ಕಬಡ್ಡಿ ಆಡಿದವರು ಕೆಳ ರಸ್ತೆಗೆ ಉರುಳಿ ಜಖಂ ಮಾಡಿಕೊಂಡ ಉದಾಹರಣೆ ಅನೇಕ. ಆದರೆ ಊರ ಹಿರಿಯರು ನಿಜಕ್ಕೂ ಮುಂಗಾಣ್ಕೆ ಹೊಂದಿದ್ದವರು ಎನ್ನಬೇಕು. ಶಾಲೆಗೆ ತಾಗಿಕೊಂಡಂತೆಯೇ ಸರಕಾರಿ ಆಸ್ಪತ್ರೆಯನ್ನೂ ಕಟ್ಟಿಸಿಬಿಟ್ಟಿದ್ದರು!
ವಾರ್ಷಿಕೋತ್ಸವಕ್ಕಾಗಿ ವಾರ್ಷಿಕ ಕ್ರೀಡಾಕೂಟವೂ ನಡೆಯಬೇಕಲ್ಲವೇ? ಆ ದಿನದ ರನ್ನಿಂಗ್ ರೇಸ್, ಲಾಂಗ್ ಜಂಪ್, ಗುಂಡೆಸೆತ ಎಲ್ಲವೂ ನಡೆಯುತ್ತಿದ್ದುದು ಊರ ದೇಗುಲದ ರಥಬೀದಿಯಲ್ಲಿ. ಇನ್ನು, ಖೋಖೋ, ಕಬಡ್ಡಿ ಮೊದಲಾದ ಅಂತರ್ ಶಾಲಾ ಸ್ಪರ್ಧೆಗಳಿಗೆ ತಯಾರಿ ನಡೆಯುತ್ತಿದ್ದುದು ವೀರ ಕಲ್ಲುಕುಟಿಗ ದೈವಸ್ಥಾನಕ್ಕೆ ಸೇರಿದ ಗದ್ದೆಯಲ್ಲಿ.
ನಾನು ದಷ್ಟಪುಷ್ಟನಾಗಿರಲಿಲ್ಲ. ಹಾಗಾಗಿ ನನಗೆ ಕಬಡ್ಡಿ ತಂಡದಲ್ಲಿ ಜಾಗ ಇರಲಿಲ್ಲ. ಒಂದೊಂದು ತರಗತಿಯಲ್ಲಿ ಎರಡೆರಡು ಬಾರಿ ಕುಳಿತು, ಏಳನೆಯ ತರಗತಿ ತಲಪುವಾಗ ಎರಡು ಮಕ್ಕಳ ತಂದೆಯಂತೆ ಕಾಣಿಸುತ್ತಿದ್ದ ಕಟ್ಟುಮಸ್ತಾದ ಹುಡುಗರು ಅಲ್ಲಿ ಜಾಗ ಪಡೆದುಕೊಳ್ಳುತ್ತಿದ್ದರು. ನಾನು ಖೋಖೋ ತಂಡದಲ್ಲಿ ಜಾಗ ಪಡೆದಿದ್ದೆ. ನಮಗೆ ದೈವಸ್ಥಾನದ ಗದ್ದೆಯಲ್ಲಿ ತರಬೇತಿ ನಡೆಯುತ್ತಿತ್ತು. ಆ ಕಡೆ ಒಂದು ಮರದ ಗೂಟ, ಈ ಕಡೆ ಒಂದು ಮರದ ಗೂಟ. ಇಷ್ಟಿದ್ದರೆ ಖೋ ಖೋ ಆಟಕ್ಕೆ ಅಗತ್ಯ ಸಲಕರಣೆಗಳೆಲ್ಲ ಮುಗಿಯಿತು ಅಲ್ಲವೇ? ಹುಡುಗರ ಖೋ ಖೋ ತಂಡ ಇದ್ದ ಹಾಗೆಯೇ ಹುಡುಗಿಯರ ಖೋಖೋ ತಂಡವೂ ಇರುತ್ತಿತ್ತು.

ಸಾಮಾನ್ಯವಾಗಿ ಒಂದು ಮತ್ತು ಎರಡನೆ ತರಗತಿಯಲ್ಲಿ ಇರುವಾಗ ನಮಗೆ ಲಿಂಗಭೇದಗಳ ಅರಿವಿರುವುದಿಲ್ಲ. ಹಾಗಾಗಿ ಹುಡುಗ ಹುಡುಗಿ ಒಟ್ಟಿಗೇ ಕುಳಿತುಕೊಳ್ಳುತ್ತಿದ್ದುದೂ ಇತ್ತು. ಆದರೆ, ಆಮೇಲೆ ಹೆಣ್ಣು ಗಂಡು ಪರಸ್ಪರರನ್ನು ದ್ವೇಷಿಸುವ ಒಂದು ವಯಸ್ಸು ಬರುತ್ತದಲ್ಲವೇ? ಆಗಂತೂ ʼಆ ಹುಡ್ಗ ಈ ಹುಡ್ಗಿʼ ಎಂದೇ ಸಂಬೋಧಿಸುತ್ತಿದ್ದುದು ಹೊರತು ಹೆಸರು ಹೇಳುತ್ತಿರಲಿಲ್ಲ! ಹುಡುಗ ಹುಡುಗಿ ಪರಸ್ಪರ ಮುಟ್ಟುವಂತಿಲ್ಲ. ಅಪ್ಪಿ ತಪ್ಪಿ ಪರಸ್ಪರ ಡಿಕ್ಕಿಯಾದರೆ ಅದೊಂದು ಭಯಂಕರ ಅವಮಾನ.
ಹುಡುಗನೊಬ್ಬ ಕುಳಿತ ಬೆಂಚಿನಲ್ಲಿ ಹುಡುಗಿಯರು ಕುಳಿತುಕೊಳ್ಳುತ್ತಿರಲಿಲ್ಲ. ಹುಡುಗ ಕುಳಿತರೆ ಹುಡುಗಿಯರೆಲ್ಲ ಎದ್ದು ನಿಲ್ಲುತ್ತಿದ್ದರು. ಇಂತಹ ದಿನಗಳಲ್ಲಿಯೇ ತಪ್ಪು ಮಾಡಿದ ಹುಡುಗನಿಗೆ ಹುಡುಗಿಯರ ಜತೆ ಕುಳಿತುಕೊಳ್ಳಲು ಶಿಕ್ಷಕರು ಹೇಳುತ್ತಿದ್ದರು. ಆಗ ಆಗುತ್ತಿದ್ದ ಅವಮಾನದ ಬಗ್ಗೆ ಏನು ಹೇಳೋಣ?!
ಇನ್ನು ಹುಡುಗಿಯರಿಗೆ ಶಿಕ್ಷೆಯಾದರೆ ಹುಡುಗರಿಗೆ ಖುಷಿಯೋ ಖುಷಿ. ಹುಡುಗರಿಗೆ ಶಿಕ್ಷೆಯಾದರೆ ಹುಡುಗಿಯರಿಗೆ ಖುಷಿ. ಹುಡುಗನೊಬ್ಬ ತರಗತಿಯ ವಿದ್ಯಾರ್ಥಿ ಮುಖಂಡನಾದರೆ, ಆತ ಬೇಕೆಂದೇ ತನಗಾಗದ ಹುಡುಗಿಯ ಮೇಲೆ ದ್ವೇಷ ತೀರಿಸಲು ಆಕೆಯ ಹೆಸರು ಬರೆದು ಶಿಕ್ಷಕರಿಗೆ ಕೊಡುತ್ತಿದ್ದುದು ಇತ್ತು. ಮೌನವಾಗಿರಬೇಕಾಗಿದ್ದ ಹೊತ್ತಿನಲ್ಲಿ ಮಾತನಾಡಿದ್ದಾಳೆ ಎಂಬ ಕಾರಣಕ್ಕೆ ಶಿಕ್ಷಕರಿಂದ ಆಕೆಗೆ ಏಟು ಬೀಳುತ್ತಿತ್ತು. ಆಗ ಹುಡುಗರಿಗೆ ಒಂದು ರೀತಿಯ ಸ್ಯಾಡಿಸ್ಟ್ ಖುಷಿ.
ಇಂತಹ ವಯಸ್ಸಿನಲ್ಲಿ ಹುಡುಗ ಹುಡುಗಿಯರಿಗೆ ಪರಸ್ಪರ ಮುಟ್ಟುವಂತೆ ಶಿಕ್ಷಕರೇ ಹೇಳಿದರೆ ಪರಿಸ್ಥಿತಿ ಹೇಗಿರಬಹುದು? ತರಬೇತಿಗಳೆಲ್ಲ ಮುಗಿದು ಇನ್ನೇನು ಅಂತರ್ ಶಾಲಾ ಸ್ಪರ್ಧೆಗಳಿಗೆ ಬೇರೆ ಬೇರೆ ಊರುಗಳಿಗೆ ಹೋಗಲು ಸಿದ್ಧವಾಗಬೇಕು ಎನ್ನುವಾಗ ಶಾಲೆಯ ಹುಡುಗರ ತಂಡ ಮತ್ತು ಹುಡುಗಿಯರ ತಂಡದ ನಡುವೆ ಖೋ ಖೋ ಸ್ಪರ್ಧೆ ನಡೆಸುತ್ತಿದ್ದರು. ಸ್ಪರ್ಧೆಯಲ್ಲಿ ಪರಸ್ಪರ ಮುಟ್ಟಲೇಬೇಕಾದಾಗ ಆಗುತ್ತಿದ್ದ ಮುಜುಗರವನ್ನು ಪದಗಳಲ್ಲಿ ವರ್ಣಿಸುವುದು ಕಷ್ಟ!
ಶಿಕ್ಷಕರು ನಮ್ಮ ತಂಡವನ್ನು ಅಲ್ಬಾಡಿ, ಸಿದ್ದಾಪುರ ಮೊದಲಾದ ಊರುಗಳಿಗೆ ಕರೆದೊಯ್ಯುತ್ತಿದ್ದರು. ಈಗಿನಂತಹ ಯಾವ ವ್ಯವಸ್ಥೆಯೂ ಇದ್ದಿರದಿದ್ದ ಆ 1973 ರ ದಿನಗಳಲ್ಲಿ ಕೆಲವೊಮ್ಮೆ ಮನೆಯಿಂದ ಬುತ್ತಿ ಕಟ್ಟಿಕೊಂಡು ಹೋಗಿ ಅಲ್ಲಿ ಮಧ್ಯಾಹ್ನದ ಹೊತ್ತು ತಿನ್ನುತ್ತಿದ್ದೆವು. ಬಾಳೆಲೆಯನ್ನು ಬಾಡಿಸಿ ಅದರಲ್ಲಿ ಅಮ್ಮ ಅನ್ನ ಕಟ್ಟಿಕೊಡುತ್ತಿದ್ದರು. ಅಲ್ಬಾಡಿಯಂತಹ ಊರುಗಳಿಗೆ ಹೋಗುವಾಗ ಬಸ್ ನಲ್ಲಿ ಹೋಗುತ್ತಿದ್ದೆವು. ಸಿದ್ದಾಪುರದಂತಹ ಹೆಚ್ಚು ದೂರ ಇರದ ಊರುಗಳಾದರೆ ಅಲ್ಲಿಂದ ವಾಪಸ್ ಬರುವಾಗ ನಡೆದೇ ಬರುತ್ತಿದ್ದೆವು.
ಹೀಗೆ ನಾವು ಹೋದ ಊರುಗಳ ಶಾಲೆಗಳ ತಂಡದೊಂದಿಗೆ ನಮ್ಮ ಸ್ಪರ್ಧೆ ನಡೆಯುತ್ತಿತ್ತು. ಗೆದ್ದರೆ ಸಂತೋಷಕ್ಕೆ ಪಾರವಿರುತ್ತಿರಲಿಲ್ಲ. ಆಟದ ಕೊನೆಯಲ್ಲಿ ʼಹಿಪ್ ಹಿಪ್ ಹುರ್ರಾʼ ಎನ್ನುವಾಗ ಭಾರೀ ಉಮೇದು ಇರುತ್ತಿತ್ತು. ಸೋತರೆ ಮುಖ ಬಾಡಿ ಹೋಗಿರುತ್ತಿತ್ತು. ವಾಪಸ್ ಬರುವಾಗ ನಾವು ಏನೇನು ತಪ್ಪು ಮಾಡಿದೆವು ಎಂದು ಶಿಕ್ಷಕರು ವಿಶ್ಲೇಷಿಸಿ ಹೇಳುತ್ತಿದ್ದರು, ಟೀಕಿಸುತ್ತಲೂ ಇದ್ದರು.
ಸಂಭ್ರಮದ ಶಾಲಾ ವಾರ್ಷಿಕೋತ್ಸವ
ಶಾಲಾ ವಾರ್ಷಿಕೋತ್ಸವ ಎಂದರೆ ಶಾಲೆಯವರಿಗೆ ಮಾತ್ರವಲ್ಲ ಊರವರಿಗೂ ವಿವಿಧ ವಿನೋದಾವಳಿಗಳನ್ನು ನೋಡುವ ಒಂದು ಸಂತಸದ ಹಬ್ಬ. ವಾರ್ಷಿಕೋತ್ಸವಕ್ಕೆ ತಿಂಗಳ ಮೊದಲೇ ನಾಟಕ ಪ್ರಾಕ್ಟಿಸ್, ಲೇಜಿಮ್ ಪ್ರಾಕ್ಟಿಸ್ ಎಲ್ಲವೂ ಆರಂಭವಾಗುತ್ತಿತ್ತು. ನಮ್ಮನ್ನು ಶಿಕ್ಷಕರು ಪ್ರವಾಸಿ ಬಂಗಲೆಗೆ ಕರೆದೊಯ್ದು ಅಲ್ಲಿನ ಆವರಣದಲ್ಲಿ ನಾಟಕ ತರಬೇತಿ ಕೊಡುತ್ತಿದ್ದರು.

ಕೋಮುವಾದಕ್ಕೆ ಬಹಿರಂಗ ಸರಕಾರಿ ಬೆಂಬಲ ಇದ್ದಿರದ ಆ ದಿನಗಳಲ್ಲಿ ಶಿಕ್ಷಕರು ಬಹಿರಂಗವಾಗಿ ಕೋಮುವಾದಿಗಳಾಗಿರಲಿಲ್ಲ. ಯಾವುದೇ ವಸ್ತುವನ್ನು ಹೊಂದಿರುವ ನಾಟಕ ಆಡುವುದಕ್ಕೆ ಸಮಸ್ಯೆಯೂ ಇರಲಿಲ್ಲ. ಆಕ್ಷೇಪಿಸುವುದಕ್ಕೆ ಬಜರಂಗದಳವೂ ಇರಲಿಲ್ಲ. ಹಾಗಾಗಿ ನಾವು ಆಡುತ್ತಿದ್ದ ನಾಟಕಗಳಲ್ಲಿ ಮುಸ್ಲಿಂ ಅರಸರಿಗೆ ಸಂಬಂಧಿಸಿದ ಕತೆಗಳೇ ಹೆಚ್ಚಾಗಿ ಇರುತ್ತಿದ್ದವು. ಮಾತ್ರವಲ್ಲ ʼ…. ಬಿರಿಯಾನಿ ಅಲಗ್ ಹೆ, ಹಿಂದೂ ಮುಸ್ಲಿಂ ಏಕ್ ಹೆ… ʼ, ಎಂಬಂತಹ ಕೋಮು ಸಾಮರಸ್ಯದ ಮಹತ್ವ ಸಾರುವ ಪದ್ಯಗಳು ಇರುತ್ತಿದ್ದವು.
ಊರಿನಲ್ಲಿ ಕ್ರೈಸ್ತ ಸಮುದಾಯದವರು ಇರಲಿಲ್ಲ. ಸರಕಾರಿ ಉದ್ಯೋಗದಲ್ಲಿದ್ದು ವರ್ಗಾವಣೆಯ ಕಾರಣಕ್ಕೆ ಬರುತ್ತಿದ್ದ ಮುಸ್ಲಿಂ ಕೆಲ ಸರಕಾರಿ ಉದ್ಯೋಗಿಗಳನ್ನು ಹೊರತು ಪಡಿಸಿದರೆ ಮುಸ್ಲಿಮರೂ ಆ ಊರಿನಲ್ಲಿ ಇರಲಿಲ್ಲ.
ಆ ಕಾಲದಲ್ಲಿ ಶಾಲೆಯಲ್ಲಿ ತಪ್ಪದೆ ಶುಕ್ರವಾರದ ಭಜನಾ ಕಾರ್ಯಕ್ರಮವಿರುತ್ತಿತ್ತು. ನಾವೆಲ್ಲ ಮನೆಯಿಂದ ಬರುವಾಗ ರಥಹೂವು ತರುತ್ತಿದ್ದೆವು. ತರಗತಿಗಳನ್ನು ಬೇರ್ಪಡಿಸುವ ಮರದ ಹಲಗೆಗಳನ್ನು ಬದಿಗೆ ಸರಿಸಿ, ದೊಡ್ಡ ಹಾಲ್ ಆಗಿಸಿ, ಒಂದಷ್ಟು ದೇವರ ಫೋಟೋಗಳನ್ನು ಇರಿಸಿ, ಅವುಗಳನ್ನು ಹೂಗಳಿಂದ ಅಲಂಕರಿಸಿ, ಭಜನಾ ಕಾರ್ಯಕ್ರಮ ನಡೆಯುತ್ತಿತ್ತು. ಇಂತಹ ಸಂದರ್ಭದಲ್ಲಿ ಬೇರೆ ಮತಧರ್ಮದವರಿದ್ದರೆ ಅವರಿಗೆ ಮನೆಗೆ ಹೋಗಲು ಅವಕಾಶ ಇರುತ್ತಿತ್ತು. ಭಜನೆಯ ಸಮಯದಲ್ಲಿ ಮಾತನಾಡಿದರೆ, ಅಶಿಸ್ತು ತೋರಿದರೆ, ಅವರ ಹೆಸರು ಶಿಕ್ಷಕರಿಗೆ ತಲಪುತ್ತಿತ್ತು. ಆನಂತರ ಒಂದು ಛಡಿಯೇಟು ಗ್ಯಾರಂಟಿ.
ನಾನು ಅನೇಕ ಬಾರಿ ಶಾಲಾ ವಾರ್ಷಿಕೋತ್ಸವದ ಲೇಜಿಮ್ ತಂಡದಲ್ಲಿದ್ದೆ. ಹಾಗೆಯೇ ಏಳನೆಯ ತರಗತಿಯಲ್ಲಿರುವಾಗ ʼಭರತನ ಭ್ರಾತೃ ಪ್ರೇಮʼ ಎಂಬ ನಾಟಕದಲ್ಲಿ ಭರತನಾಗಿದ್ದೆ. ಶ್ರೀನಿವಾಸ ಅಡಿಗ ಎಂಬವರು ಬಂದು ನಮಗೆ ನಾಟಕದ ತರಬೇತಿ ನೀಡುತ್ತಿದ್ದರು. ʼಆಹಾ ಪರಮಾನಂದವಾಯಿತುʼ ಎಂಬುದನ್ನು ನಾಟಕೀಯವಾಗಿ ಹೇಳಲು ಆಗದೆ, ನನಗೆ ಅನೇಕ ಟೇಕ್ ಬೇಕಾದುದು ಈಗಲೂ ನೆನಪಿದೆ.
ವಾರ್ಷಿಕೋತ್ಸವದ ದಿನ ಸೂರ್ಯೋದಯ ಬೇಗನೇ ಆಗುತ್ತಿತ್ತು ನಮ್ಮ ಪಾಲಿಗೆ. ಹೊಸ ಡ್ರೆಸ್ ಧರಿಸಿ, ಅಥವಾ ಹಳೆಯದನ್ನು ಚೆನ್ನಾಗಿ ಒಗೆದು, ಬಿಸಿ ನೀರಿನ ಚೊಂಬಿನಲ್ಲಿ ಇಸ್ತ್ರಿ ಹಾಕಿ, ಧರಿಸಿ ಶಾಲೆಗೆ ಓಡುತ್ತಿದ್ದೆವು. ಶಾಲೆಯನ್ನು ಅಲಂಕರಿಸಲು ಹಗ್ಗಕ್ಕೆ ಬಣ್ಣ ಬಣ್ಣದ ಪತಾಕೆಗಳನ್ನು ಅಂಟಿಸುವ ಕೆಲಸದಲ್ಲಿ ಆ ದಿನ ಉತ್ಸಾಹವೋ ಉತ್ಸಾಹ. ಬೆಳಗಿನ ಅಸೆಂಬ್ಲಿ ಆ ಬಳಿಕ ಸಿಹಿತಿಂಡಿ ವಿತರಣೆಯೂ ಇರುತ್ತಿತ್ತು. ಆ ಬಳಿಕ ಮನೆಗೆ ಹೋಗುತ್ತಿದ್ದೆವು.
ಇನ್ನೇನು ಸಂಜೆಯಾಗಬೇಕು ಎನ್ನುವಾಗ ಮತ್ತೆ ಶಾಲೆಯಲ್ಲಿ ಹಾಜರ್. ಅಂಗಳದಷ್ಟು ಇರುವ ಜಾಗದಲ್ಲಿಯ ಕುರ್ಚಿ ಹಾಕಿ ಊರವರಿಗೆ ಆಸೀನ ವ್ಯವಸ್ಥೆ. ಅದರಲ್ಲಿಯೇ ಲೈಟಿಂಗ್, ಮೈಕ್ ನವರಿಗೆ ಜಾಗ. ಕಾರ್ಯಕ್ರಮ ನಡೆಯುವಾಗ ಜಾಗ ಸಾಲದೆ ಸರಕಾರಿ ಆಸ್ಪತ್ರೆಯ ವರಾಂಡ ಸೇರಿದಂತೆ ಸಿಕ್ಕ ಸಿಕ್ಕ ಎಡೆಯಲ್ಲೆಲ್ಲ ಜನವೋ ಜನ.
ಶಾಲಾ ಕಟ್ಟಡದ ಒಂದು ಮೂಲೆಯನ್ನೇ ನಾಟಕ, ಸಭಾ ಕಾರ್ಯಕ್ರಮ ಇತ್ಯಾದಿ ಚಟುವಟಿಕೆಗಳಿಗೆ ಅನುಕೂಲವಾಗುವ ಹಾಗೆ ನಿರ್ಮಿಸಿದ್ದರು. ಅಲ್ಲಿ ಯಾರಾದರೊಬ್ಬರು ಗಣ್ಯರ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ. ನಾನಾ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಪ್ರಶಸ್ತಿ ವಿತರಣೆ. ಪ್ರಶಸ್ತಿ ಎಂದರೆ ಮತ್ತೇನಿಲ್ಲ ಪ್ಲಾಸ್ಟಿಕ್ ಡಬ್ಬ, ಲೋಟ ಇತ್ಯಾದಿ. ಅನೇಕ ಸ್ಪರ್ಧೆಗಳಲ್ಲಿ ಗೆದ್ದವನಿಗೆ/ ಗೆದ್ದವಳಿಗೆ ಚಾಪಿಯನ್ ಪ್ರಶಸ್ತಿ ಸಿಗುತ್ತಿತ್ತು. ಒಂದು ಪುಟ್ಟದಾದ ಟ್ರೋಫಿ.
ಈಗ ಬೇಕಿದ್ದರೆ ಊರ ಅಂಗಡಿಯಲ್ಲಿ ಯಾವ ಟ್ರೋಫಿಯೂ ಸಿಗುತ್ತದೆ. ಟ್ರೋಫಿಗಳಿಗೆ ಬೆಲೆ ಇಲ್ಲವಾಗಿದೆ. ಆದರೆ ಆ ಕಾಲದಲ್ಲಿ ಆ ಮೂರಿಂಚು ಎತ್ತರದ ಪುಟ್ಟದೊಂದು ಟ್ರೋಫಿ ಎಂದರೆ ಅದೊಂದು ದೊಡ್ಡ ಸಂಗತಿ. ಯಾಕೆಂದರೆ ಅದು ಶಾಲೆಯಲ್ಲಿ ಸಿಗುವುದು ಒಬ್ಬರಿಗೇ. ಹಾಂ ಹೇಳುವುದನ್ನು ಮರೆತೆ, ಆ ಕಾಲದಲ್ಲಿ ತರಗತಿಯಲ್ಲಿ ಯಾವ ಪ್ರಶ್ನೆಯನ್ನೂ ಕೇಳದೆ, ಕಿರಿಕಿರಿ ಮಾಡದೆ ಸುಮ್ಮನೆ ಕುಳಿತ ವಿದ್ಯಾರ್ಥಿಗೆ ಅತ್ಯಂತ ಶಿಸ್ತಿನ ವಿದ್ಯಾರ್ಥಿ ಎಂಬ ನೆಲೆಯಲ್ಲಿ ಒಂದು ಪ್ರಶಸ್ತಿ ಇರುತ್ತಿತ್ತು!
ಬಳಿಕ ಶಾಲಾ ಮಕ್ಕಳಿಂದ ನೃತ್ಯ, ಲೇಜಿಮ್, ಡಂಬೆಲ್ಸ್, ನಾಟಕ ಇತ್ಯಾದಿ ಕಾರ್ಯಕ್ರಮ. ನಾಟಕದಲ್ಲಿ ನಟಿಸುವ ನಮ್ಮ ಮುಖಕ್ಕೆ ಬಣ್ಣ ಹಚ್ಚಲು ಕುಂದಾಪುರದಿಂದ ಒಬ್ಬರು ಬರುತ್ತಿದ್ದರು. ಅವರು ಕೆಲವೇ ಕ್ಷಣಗಳಲ್ಲಿ ನಮ್ಮನ್ನು ಧರ್ಮರಾಯ, ಶಕುನಿ, ಟಿಪ್ಪು ಸುಲ್ತಾನ್, ಮೀರ್ ಸಾಧಿಕ್, ಕೃಷ್ಣದೇವರಾಯ, ಅಕ್ಬರ್ ಎಲ್ಲರನ್ನೂ ಮಾಡಿ ಬಿಡುತ್ತಿದ್ದರು. ತಿಂಗಳ ತರಬೇತಿಯ ಬಳಿಕವೂ ವೇದಿಕೆ ಏರಿದಾಗ ಹಿಂದೆ ಬಾಯಿಪಾಠ ಮಾಡಿದ್ದೆಲ್ಲವೂ ಮರೆತು ಏನೇನೋ ಡೈಲಾಗ್ ಹೊಡೆಯುತ್ತಿದ್ದೆವು. ಡೈಲಾಗ್ ಮರೆತಾಗ ಪರದೆಯ ಬಳಿಯಲ್ಲಿ ನಿಂತಿರುತ್ತಿದ್ದ ನಾಟಕ ನಿರ್ದೇಶಕರತ್ತ ನೋಡುತ್ತಿದ್ದೆವು. ಅಂತೂ ಇಂತೂ ನಾಟಕ ಮುಗಿಯುತ್ತಿತ್ತು.
ಅದಾದ ಬಳಿಕ ಊರ ಯುವಕರಿಂದ ಒಂದು ನಾಟಕ. ಹೀಗೆ ಬೆಳಗಿನ ತನಕವೂ ಕಾರ್ಯಕ್ರಮ ನಡೆಯುತ್ತಿತ್ತು. ಊರ ಜನ ಬೆಳಗಿನ ತನಕವೂ ಕುಳಿತು ವಿವಿಧ ವಿನೋದಾವಳಿಗಳನ್ನು ನೋಡುತ್ತಿದ್ದರು. ತಮ್ಮ ಮಕ್ಕಳ ನೃತ್ಯ ನಾಟಕ ಪ್ರದರ್ಶನಗಳನ್ನು ನೋಡುವಾಗ ಹೆತ್ತವರ ಖುಷಿ ಅದು ಬೇರೆಯೇ ಬಗೆಯದು.
ಸರಿ ವಾರ್ಷಿಕೋತ್ಸವ ಮುಗಿಯಿತು. ಬೆಳಗಾಯಿತು. ಮುಖದ ಬಣ್ಣ ಒರೆಸುವಾಗಲೂ ಎಲ್ಲವನ್ನೂ ಒರೆಸಿಕೊಳ್ಳುತ್ತಿರಲಿಲ್ಲ. ದಾರಿಯಲ್ಲಿ ಹೋಗುವಾಗ ʼಇವ ನಿನ್ನೆ ಶಾಲಾ ನಾಟಕದಲ್ಲಿದ್ದವʼ ಎಂಬುದು ಜನರಿಗೆ ತಿಳಿಯಬೇಕಲ್ಲವೇ? ಆದ್ದರಿಂದ, ಅಷ್ಟು ಬಣ್ಣ ಉಳಿಸಿಕೊಂಡು, ಪ್ರಶಸ್ತಿಯ ರೂಪದಲ್ಲಿ ಸಿಕ್ಕ ಪ್ಲಾಸ್ಟಿಕ್ ಡಬ್ಬ ಹಿಡಿದುಕೊಂಡು ಅತ್ಯುತ್ಸಾಹದಿಂದ ಮನೆಯ ದಾರಿ ಹಿಡಿಯುತ್ತಿದ್ದೆವು.
ಏಳನೆಯ ತರಗತಿಗೂ ಆಗ ಪಬ್ಲಿಕ್ ಪರೀಕ್ಷೆ ಇತ್ತು. ಎರಡು ಕಿಲೋಮೀಟರ್ ದೂರದ ಜ್ಯೂನಿಯರ್ ಕಾಲೇಜಿನಲ್ಲಿ ಆಗ ಆ ಪರೀಕ್ಷೆ ನಡೆಯುತ್ತಿತ್ತು. ಪರೀಕ್ಷೆಯಲ್ಲಿ ನಕಲು ಮಾಡುವ ಅಥವಾ ಶಿಕ್ಷಕರೇ ಪ್ರಶ್ನೆಗಳಿಗೆ ಉತ್ತರ ಹೇಳುವ ಸಂಸ್ಕೃತಿ ನಮಗೆ ಅಪರಿಚಿತವಿತ್ತು. ಅದನ್ನು ನಾವು ನಿರೀಕ್ಷಿಸುತ್ತಲೂ ಇರಲಿಲ್ಲ. ಆದರೂ ಏಳನೆಯ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಯಾರೋ ಹೊರಗಿನ ಮೇಷ್ಟರೊಬ್ಬರು ಬಂದು ಎಲ್ಲರಿಗೂ ಕೇಳುವ ಹಾಗೆ, ಹಾಲ್ ನಲ್ಲಿದ್ದ ವಿದ್ಯಾರ್ಥಿಗಳಿಗೆ ಕೆಲ ಪ್ರಶ್ನೆಗಳಿಗೆ ಉತ್ತರ ಹೇಳಿಕೊಟ್ಟಿದ್ದರು. ಅದು ಅಗತ್ಯ ಇರಲಿಲ್ಲ ಎಂದು ಆಗಲೂ ನನಗೆ ಅನಿಸಿತ್ತು, ಈಗಲೂ ಅನಿಸುತ್ತಿದೆ. ಅಂತೂ ಇಂತೂ ಏಳನೆಯ ತರಗತಿಯಲ್ಲಿ 600 ರಲ್ಲಿ 435 ಅಂಕಗಳೊಂದಿಗೆ ನಾನು ತೇರ್ಗಡೆಯಾದೆ.
ಸೆಂಡ್ ಆಫ್
ಏಳು ವರ್ಷ ಓದಿದ ಪ್ರಾಥಮಿಕ ಶಾಲೆಗೆ ವಿದಾಯ ಹೇಳುವ ದುಃಖದ ದಿನ ಬಂತು. ಸೆಂಡ್ ಆಫ್ ನ ದಿನ ನಿಜಕ್ಕೂ ನಾವು ಗದ್ಗದಿತರಾಗುತ್ತಿದ್ದೆವು. ಮಾತೇ ಹೊರಡುತ್ತಿರಲಿಲ್ಲ. ಶಾಲೆಗಿಂತಲೂ ಹೆಚ್ಚಾಗಿ ಪ್ರಾಥಮಿಕ ಶಾಲಾ ಶಿಕ್ಷಕರೊಂದಿಗಿನ ಸಂಬಂಧವೇ ಅಂಥದ್ದು.

ಸರಿ, ಸೆಂಡ್ ಆಫ್ ಲೆಕ್ಕದಲ್ಲಿ ಒಂದು ಗ್ರೂಪ್ ಫೋಟೋ ಆಗಬೇಕಲ್ಲ? ಅದಕ್ಕಾಗಿ ಒಂದು ದಿನವನ್ನು ನಿಗದಿಪಡಿಸುತ್ತಿದ್ದರು. ಫ್ಲಾಷ್ ಲೈಟಿನ ವ್ಯವಸ್ಥೆ ಇಲ್ಲದ ಫೋಟೋಗ್ರಫಿ. ಹಾಗಾಗಿ ನಮಗೆ ಸೂರ್ಯನೇ ಆಸರೆ, ಭರವಸೆ. ಬೆಳಕು ಹೆಚ್ಚೂ ಅಲ್ಲದ ಕಡಿಮೆಯೂ ಅಲ್ಲದ ಸಂಜೆಯ ಹೊತ್ತೇ ಆಗಬೇಕು. ಕುಂದಾಪುರದಿಂದ ಒಬ್ಬರು ಫೋಟೋಗ್ರಾಫರ್ ಬರುತ್ತಿದ್ದರು. ಆಳೆತ್ತರದ ಮೂರು ಕಾಲಿನ ಒಂದು ಸ್ಟಾಂಡ್. ಅದಕ್ಕೆ ಬೃಹದಾಕಾರದ ಒಂದು ಬಾಕ್ಸ್ ಕ್ಯಾಮರಾ. ಅದರ ಮೇಲೆ ಬುರ್ಖಾದಂತಹ ಇಳಿಬಿಟ್ಟ ಒಂದು ಕಪ್ಪು ಹೊದಿಕೆ.
ನಾವು ಫೋಟೋದಲ್ಲಿ ಚಂದ ಕಾಣಬೇಕೆಂದೇ, ಇದ್ದುದರಲ್ಲಿ ಒಳ್ಳೆಯ ಉಡುಪು ಧರಿಸಿ ಹಾಜರಾಗುತ್ತಿದ್ದೆವು. ಕೈಗಡಿಯಾರ ಸಹಿತ ಫೋಟೋದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆಯಿಂದ ಅಕ್ಕ ಪಕ್ಕದ ಮನೆಯಲ್ಲಿ ಯಾರಲ್ಲಾದರೂ ಒಂದು ಸಂಜೆಯ ಮಟ್ಟಿಗೆ ಒಂದು ವಾಚ್ ಸಿಗಬಹುದೋ ಎಂದು ಹುಡುಕುತ್ತಿದ್ದೆವು. ಅಪ್ಪನ ಬಳಿ ಒಂದು ಫ್ಯಾವರ್ ಲ್ಯೂಬಾ ವಾಚ್ ಇತ್ತು. ಆದರೆ ಅಪ್ಪ ಡ್ಯೂಟಿಗೆ ಹೋದ ಕಾರಣ ಅದು ನನಗೆ ಸಿಗಲಿಲ್ಲ. ಕೆಲವರು ಅದು ಹೇಗೋ ವಾಚ್ ಕಟ್ಟಿಕೊಂಡು ಬಂದಿದ್ದರು. ಕಟ್ಟಿಕೊಂಡು ಬಂದರೆ ಸಾಲದು ಅದು ಫೋಟೋದಲ್ಲಿ ಬರಬೇಕಲ್ಲವೇ? ಹಾಗಾಗಿ ಕೈಯನ್ನು ಮುಂದಕ್ಕೆ ಚಾಚಿ ಸೂಕ್ತ ಭಂಗಿಯಲ್ಲಿ ಇರಿಸಿಕೊಂಡು ನಿಲ್ಲುತ್ತಿದ್ದರು.
ಇಳಿ ಸಂಜೆ. ಫೋಟೊಗೆ ಸರಿಯಾದ ಸಮಯ. ಎಲ್ಲರನ್ನೂ ಹಲವು ಸಾಲುಗಳಲ್ಲಿ ಸರಿಯಾಗಿ ನಿಲ್ಲಿಸಿಯಾಯಿತು. ಕಪ್ಪು ವಸ್ತ್ರದೊಳಗೆ ನುಗ್ಗಿ ಕ್ಯಾಮರಾದಲ್ಲಿ ಫಿಲಂ ಅಳವಡಿಸಿ ಫೋಟೋಗ್ರಾಫರ್ ಬದಿಯಲ್ಲಿ ನಿಂತುಕೊಂಡರು. ʼಹಾಂ. ರೆಡಿಯಾ?.. ಈಗ ಎಲ್ಲರೂ ಇಲ್ಲಿ ಕ್ಯಾಮರಾದ ಲೆನ್ಸ್ ಕಡೆ ನೋಡಬೇಕು, ಸರಿಯಾ? ಒಂದು, ಎರಡು, ಮೂರುʼ ಎಂದು ಹೇಳಿ ಕ್ಯಾಮರಾದ ಲೆನ್ಸ್ ನ ಕವರ್ ತೆಗೆದು ಒಂದೆರಡು ಸೆಕೆಂಡ್ ಗಳ ಬಳಿಕ ಮತ್ತೆ ಮುಚ್ಚಿಬಿಡುತ್ತಿದ್ದರು. ಅಷ್ಟಾಗುವಾಗ ನಾವೆಲ್ಲರೂ ಕಪ್ಪು ಬಿಳುಪು ರೂಪದಲ್ಲಿ, ಕೆಲವರು ನಸುನಗುವಿನೊಂದಿಗೆ, ಇನ್ನು ಕೆಲವರು ಹುಬ್ಬುಗಂಟಿಕ್ಕಿದ ಮುಖಾರವಿಂದದೊಂದಿಗೆ ಕ್ಯಾಮರಾದ ಒಳಗಿನ ಫಿಲಂ ಒಳಗೆ ಬಂಧಿಯಾಗಿ ಬಿಡುತ್ತಿದ್ದೆವು.
ಶ್ರೀನಿವಾಸ ಕಾರ್ಕಳ
ಚಿಂತಕರು
ಇದನ್ನೂ ಓದಿ- ಅದೊಂದು ದೊಡ್ಡ ಕಥೆ-ಆತ್ಮಕಥನ ಸರಣಿ -12| ಕೃಷ್ಣ ಭವನದ ಮಸಾಲೆದೋಸೆ


