Tuesday, September 17, 2024

ವಿಶ್ವೇಶ್ವರ ಹೆಗಡೆ ಕಾಗೇರಿಗೆ ಹತ್ತು ಪ್ರಶ್ನೆಗಳು

Most read

ವಿಶ್ವೇಶ್ವರ ಹೆಗಡೆ ಕಾಗೇರಿಯವರೇ ಮತ್ತೆ ಶುರು ಮಾಡಿದಿರಾ ಹೆಣದ ಮೇಲಿನ ರಾಜಕಾರಣ?

ಹಿಂದುಳಿದ ವರ್ಗದ ಯುವಕರನ್ನು ಬಳಸಿ ಬಿಸಾಡಿದ್ದಕ್ಕೆ ಕ್ಷಮೆ ಕೋರುವಿರಾ?

By ದಿನೇಶ್‌ ಕುಮಾರ್‌ ಎಸ್.ಸಿ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಲಿನ ಭೀತಿಯಿಂದ ಈಗ ಮತ್ತೆ ʻಪರೇಶ್‌ ಮೇಸ್ತಾʼ ಸಾವಿನ ಪ್ರಕರಣವನ್ನು ಕೆದಕಿಕೊಂಡು ಕುಳಿತಿದ್ದಾರೆ. ಹೆಣದ ಮೇಲಿನ ರಾಜಕಾರಣ ಮಾಡಿ ಅವರಿಗೆ ಈಗ ಅಭ್ಯಾಸವಾಗಿ ಹೋದಂತಿದೆ.

ಪರೇಶ್‌ ಮೇಸ್ತಾ ಸಾವು ಆಕಸ್ಮಿಕ, ಆತನ ಮೇಲೆ ಯಾವುದೇ ಹಲ್ಲೆ ನಡೆಸಿದ ಕುರುಹಿಲ್ಲ ಎಂದು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಿಬಿಐ 2022ರ ಅಕ್ಟೋಬರ್‌ ನಲ್ಲಿ ವರದಿ ನೀಡಿ ಪ್ರಕರಣ ಮುಕ್ತಾಯವಾಯಿತು ಎಂಬುದು ವಿಶ್ವೇಶ್ವರ ಹೆಗಡೆ ಕಾಗೇರಿಗೆ ತಿಳಿಯದ ವಿಷಯವೇನಲ್ಲ. ತನಿಖೆ ನಡೆಸಿರುವುದು ಇವರದ್ದೇ ಬಿಜೆಪಿ ಸರ್ಕಾರದ ಅಡಿಯಲ್ಲಿನ, ಗೃಹ ಸಚಿವ ಅಮಿತ್ ಶಾ ನೇರ ಹಿಡಿತದಲ್ಲಿರುವ ಸಿಬಿಐ ಸಂಸ್ಥೆ. ಆದರೂ ಹೆಗಡೆ ಈಗಲೂ ಅದನ್ನು ಕೊಲೆ ಎಂದೇ ಉಲ್ಲೇಖಿಸುತ್ತಾರೆ. ಯಾಕೆಂದರೆ ಪರೇಶ್‌ ಮೇಸ್ತಾ ಸಾವಿನಿಂದ ಇನ್ನೇನಾದರೂ ಲಾಭ ಆಗುತ್ತದೆಯೇ ಎಂದು ಕಾಯುತ್ತಿದ್ದಾರೆ.

ಆಕಸ್ಮಿಕವಾಗಿ ಮೃತಪಟ್ಟ ಪರೇಶ್‌ ಮೇಸ್ತಾ

2017ರಲ್ಲಿ ಕೋಮುಗಲಭೆ ನಡೆದ ಸಂದರ್ಭದಲ್ಲಿ ಹೊನ್ನಾವರದಲ್ಲಿ ಪರೇಶ್‌ ಮೇಸ್ತಾ ಎಂಬ ಅಮಾಯಕ ಮೀನುಗಾರ ಕುಟುಂಬದ ಯುವಕ ಆಕಸ್ಮಿಕವಾಗಿ ಕೆರೆಗೆ ಬಿದ್ದು ತೀರಿಕೊಂಡಿದ್ದ. ಅದಾದ ನಂತರ ರಣಹದ್ದುಗಳಂತೆ ಎರಗಿದ ಈ ಭಾಗದ ಬಿಜೆಪಿ ನಾಯಕರು ಸಾವಿನ ಲಾಭ ಪಡೆದುಕೊಳ್ಳಲು ಕರಾವಳಿಯಲ್ಲಿ ಬೆಂಕಿ ಹಚ್ಚಿ ಗಲಭೆ ಎಬ್ಬಿಸಿದರು. ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಾಶಪಡಿಸಲಾಯಿತು. ಐಜಿಪಿಯವರ ಕಾರಿಗೆ ಬೆಂಕಿ ಹಚ್ಚಲಾಯಿತು. ಅನೇಕ ಪೊಲೀಸರ ಮೇಲೆ ಹಲ್ಲೆಗಳು ನಡೆದಿದ್ದವು. ನಂತರದ ಚುನಾವಣೆಗಳಲ್ಲಿ ಈ ಭಾಗದ ಬಿಜೆಪಿ ನಾಯಕರು ಪರೇಶ್‌ ಮೇಸ್ತಾ ಹೆಸರಲ್ಲೇ ಚುನಾವಣೆಗಳನ್ನು ಎದುರಿಸಿ ಗೆದ್ದರು. ಅದರಲ್ಲಿ ಕಾಗೇರಿ ಕೂಡ ಒಬ್ಬರು.

ವಿಶ್ವೇಶ್ವರ ಕಾಗೇರಿ ಈಗ ಮತ್ತೆ ಪರೇಶ್‌ ಮೇಸ್ತಾನನ್ನು ಎಳೆದುತಂದಿದ್ದಾರೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಸಂಪೂರ್ಣ ತಮ್ಮ ವಿರುದ್ಧದ ಅಲೆ ಇರುವ ಹಿನ್ನೆಲೆಯಲ್ಲಿ ಅವರು ಭೀತರಾಗಿ ಮತ್ತೆ ಸಾವಿನ ರಾಜಕೀಯ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಕೆಲವು ಪ್ರಶ್ನೆಗಳನ್ನು ಅವರಿಗೆ ಕೇಳಲೇಬೇಕಾಗಿದೆ.

ಐಜಿಪಿ ಕಾರಿಗೆ ಬೆಂಕಿ
  1. ವಿಶ್ವೇಶ್ವರ ಹೆಗಡೆ ಕಾಗೇರಿಯವರೆ, ಪರೇಶ್ ಮೇಸ್ತ ಎಂಬ ಯುವಕನ ಸಾವನ್ನು ‘ಕೊಲೆ’ ಎಂದು ಪ್ರಚೋದಿಸಿ ಸಾವಿರಾರು ಶೂದ್ರ ಹುಡುಗರನ್ನು ಪ್ರಚೋದಿಸಿ ಇಡೀ ಜಿಲ್ಲೆಯಲ್ಲಿ ಕಾನೂನು ಶಾಂತಿ ಭಂಗ ಮಾಡಿದ್ದು ನೀವು ಮತ್ತು ನಿಮ್ಮ ಪಕ್ಷದ ಮುಖಂಡರು. ಈ ಗಲಭೆಯಲ್ಲಿ ಬೆಂಕಿ ಹಚ್ಚಲು ಪ್ರಚೋದಿಸಿದವರು ನೀವು. ನಿಮ್ಮ ಚಿತಾವಣೆಯಿಂದಾಗಿ ನೂರಾರು ಶೂದ್ರ ಹುಡುಗರು ಜೈಲು ಪಾಲಾದರು. ಶೂದ್ರ ಮಕ್ಕಳ ಜೀವದೊಂದಿಗೆ ಚೆಲ್ಲಾಟವಾಡಿದ್ದಕ್ಕೆ  ಎಂದಾದರೂ ನಿಮಗೆ ಪಶ್ಚಾತ್ತಾಪ ಆಗಿದ್ದಿದೆಯಾ? ಉತ್ತರಿಸಿ.‌
  2. ಶಾಸಕರಾಗಿ, ಮಂತ್ರಿಯಾಗಿ, ಸ್ಪೀಕರ್‌ ಆಗಿ ನೀವು ಈ ಭಾಗದಲ್ಲಿ ನಡೆಸಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡುವ ಬದಲು ಮತ್ತದೇ ಹಿಂದೂ-ಮುಸ್ಲಿಂ, ಪರೇಶ್‌ ಮೇಸ್ತಾ ವಿಷಯಗಳನ್ನು ಯಾಕೆ ಪ್ರಸ್ತಾಪಿಸುತ್ತಿದ್ದೀರಿ? ಜನೋಪಯೋಗಿ ಕೆಲಸ ಮಾಡಿದ್ದರೆ ತಾನೇ ಅವುಗಳನ್ನು ಹೇಳಿಕೊಳ್ಳಲು ಸಾಧ್ಯ?
  3. ಪರೇಶ್‌ ಮೇಸ್ತಾ ಸಾವಿನಿಂದಲೇ ರಾಜಕೀಯ ಲಾಭ ಪಡೆದುಕೊಂಡ ನೀವು ಆತನ ಕುಟುಂಬಕ್ಕೆ ಮಾಡಿದ್ದೇನು? ಯಾವ ಸಹಾಯ ಮಾಡಿದ್ದೀರಿ?
  4. ಶಿರಸಿಯಲ್ಲಿ ಗಲಭೆ ನಡೆಯುತ್ತಿದ್ದಾಗ ಬಂಧಿತ ಹಿಂದುತ್ವ ಕಾರ್ಯಕರ್ತರಿಗೆ ನೀವು ಏನು ಮಾಡಿದಿರಿ? ಅವರ ಕುಟುಂಬಗಳಿಗೆ ಯಾವ ಸಹಾಯ ಮಾಡಿದಿರಿ?
  5. ನಿಮ್ಮ ಚಿತಾವಣೆಯಿಂದ, ಪ್ರಚೋದನೆಯಿಂದ ಗಲಭೆ ನಡೆಯುತ್ತಿದ್ದಾಗ, ಹಿಂದುಳಿದ ಸಮುದಾಯಗಳ ಹಿಂದುತ್ವ ಕಾರ್ಯಕರ್ತರು ಬಂಧನಕ್ಕೆ ಒಳಗಾಗುತ್ತಿದ್ದಾಗ ಅಲ್ಲಿಂದ ಓಡಿ ಹೋದವರು ಯಾರು? ಎದೆ ಮುಟ್ಟಿಕೊಂಡು ಹೇಳಬಲ್ಲಿರಾ?
  6. ಶಿರಸಿಯ ಗಲಭೆ ನಿಮ್ಮ ನೇತೃತ್ವದಲ್ಲೇ ನಡೆದಿದ್ದರೂ ಎಫ್‌ ಐ ಆರ್‌ ನಲ್ಲಿ ನಿಮ್ಮ ಹೆಸರು ಇಲ್ಲದೇ ಇರಲು ಏನು ಕಾರಣ? ಯಾರ ಜೊತೆ ಹೊಂದಾಣಿಕೆ ಮಾಡಿಕೊಂಡು ನಿಮ್ಮ ಹೆಸರು ಕೈಬಿಡುವಂತೆ ಮಾಡಿದಿರಿ? ʻನನ್ನ ಹೆಸರು ಎಫ್ ಐಆರ್‌ ನಲ್ಲಿ ಸೇರಿಸಬೇಡಿʼ ಎಂದು ಯಾರ ಬಳಿ ನೀವು ಬೇಡಿಕೊಂಡಿರಿ? ಈ ಅನೈತಿಕ ಅನುಸಂಧಾನ ಮಾಡಿಕೊಳ್ಳಲು ನಿಮಗೆ ನಾಚಿಕೆಯಾಗಲಿಲ್ಲವೇ?
  7. ಹಿಂದುತ್ವ ಹೋರಾಟಗಳಲ್ಲಿ ನಿಮ್ಮ ಕುಟುಂಬದ ಸದಸ್ಯರು, ಸೋದರರು, ಸಂಬಂಧಿಕರ ಮೇಲೆ ಎಷ್ಟು ಪ್ರಕರಣಗಳು ದಾಖಲಾಗಿವೆ? ಪೂರ್ಣ ವಿವರ ಕೊಡಬಲ್ಲಿರಾ? ಹೋರಾಡಿ ಜೈಲು ಸೇರಲು ಹಿಂದುಳಿದ ವರ್ಗಗಳ ಯುವಕರು, ಮನೆಗಳಲ್ಲಿ ಬೆಚ್ಚಗೆ ಕೂತು ರಾಜಕೀಯ ಲಾಭ ಪಡೆಯಲು ನೀವು, ನಿಮ್ಮ ಕುಟುಂಬ; ಇದು ಯಾವ ನ್ಯಾಯ ಸ್ವಾಮಿ?
  8. ಅದೆಲ್ಲ ಬಿಡಿ, ನಿಮ್ಮ ಪ್ರಚೋದನೆಗಳಿಂದ ಹಿಂದುತ್ವ ಹೋರಾಟಗಳಲ್ಲಿ ಭಾಗವಹಿಸಿದ ಕಾರಣಕ್ಕೆ ವಿವಿಧ ನ್ಯಾಯಲಯಗಳಲ್ಲಿ ಪ್ರಕರಣಗಳನ್ನು ಎದುರಿಸುತ್ತಿರುವ ಎಷ್ಟು ಮಂದಿಗೆ ಸಹಾಯ ಮಾಡಿದ್ದೀರಿ? ಯಾವತ್ತಾದರೂ ವಕೀಲರ ಶುಲ್ಕವನ್ನಾದರೂ ಕೊಟ್ಟಿರುವ ಉದಾಹರಣೆ ಇದೆಯಾ? ಅಂಥದ್ದೆಲ್ಲ ನಿಮ್ಮ ಜೀವಮಾನದಲ್ಲಿ ಎಂದೂ ಮಾಡಿದವರು ನೀವಲ್ಲ ಅಲ್ಲವೇ?
  9. ನೀವೇ ಜಿಲ್ಲಾ ಮಂತ್ರಿ ಆಗಿದ್ದಿರಿ, ನಂತರ ವಿಧಾನಸಭಾ ಸ್ಪೀಕರ್‌ ಕೂಡ ಆದಿರಿ. ಹಿಂದುತ್ವ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಯಾಕೆ ಕೈಬಿಡಲಿಲ್ಲ? ಬಳಸಿಕೊಂಡು ನಂತರ ಬಿಸಾಡುವುದು ನಿಮ್ಮ ಹಳೆಯ ಚಾಳಿ ಅಲ್ಲವೇ? ಹಿಂದುಳಿದ ವರ್ಗದ ಯುವಕರು ನಿಮ್ಮ ಕಾಲಾಳುಗಳಂತೆಯೇ ಇರಬೇಕು, ಅವರು ತಮ್ಮ ಬದುಕು, ವೃತ್ತಿ ನೋಡಿಕೊಂಡು ಮೇಲೆ ಬರುವುದು ನಿಮಗೆ ಇಷ್ಟವಿಲ್ಲ ಅಲ್ಲವೇ?
  10. ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ನಿಮ್ಮ ಪಾತ್ರವೇನು ಹೇಳಿ? ಎಲ್ಲಾದರೂ ಎಂದಾದರೂ ಒಂದಾದರೂ ಪ್ರತಿಭಟನೆ ಮಾಡಿದ್ದೀರಾ? ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಶಾಸಕಿಯೊಬ್ಬರು ಮಾತನಾಡಲು ಹೊರಟರೆ ಸ್ಪೀಕರ್‌ ಸ್ಥಾನದಲ್ಲಿ ಇದ್ದ ನೀವು ಅವರ ಧ್ವನಿ ಅಡಗಿಸಿ, ಕೂರಿಸಿದ್ದನ್ನು ಜಿಲ್ಲೆಯ ಜನರು ಮರೆಯಲು ಸಾಧ್ಯವೇ?

ವಿಶ್ವೇಶ್ವರ ಹೆಗಡೆ ಕಾಗೇರಿಯವರೇ ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎಂಬುದು ನಿಮ್ಮ ನಾಲಿಗೆಯ ಮೇಲಿನ ಮಾತು ಅಷ್ಟೆ. ನೀವು ಯಾವತ್ತಿದ್ದರೂ ಸ್ವಜಾತಿಪ್ರೇಮಿ. ಇದಕ್ಕಾಗಿಯೇ ಹಿಂದುಳಿದ ವರ್ಗದ ಯುವಕರು ಕಳೆದ ಚುನಾವಣೆಯಲ್ಲಿ ನಿಮ್ಮನ್ನು ಸೋಲಿಸಿದರು. ಈ ಬಾರಿಯೂ ಸೋಲಿನ ಭೀತಿಯಿಂದ ಹೆಣದ ಮೇಲಿನ ರಾಜಕಾರಣ ಮಾಡುತ್ತಿದ್ದೀರಿ? ಕನಿಷ್ಠ ಪಕ್ಷ ಈಗಲಾದರೂ ಹಿಂದುಳಿದ ವರ್ಗದ ಯುವಕರಲ್ಲಿ ನೀವು ಮಾಡಿದ ದ್ರೋಹ, ಅನ್ಯಾಯಗಳಿಗೆ ಕ್ಷಮೆ ಕೇಳುವಿರಾ? ನಿಮ್ಮಿಂದ ಅದು ಸಾಧ್ಯವೇ?

    More articles

    Latest article