ಬೆಂಗಳೂರು: ನಗರ್ತಪೇಟೆಯಲ್ಲಿ ಮಾರ್ವಾಡಿ ಯುವಕನೊಂದಿಗೆ ನಡೆದ ಬೀದಿಜಗಳದ ಘಟನೆಗೆ ಕೋಮುಬಣ್ಣ ಹಚ್ಚಿದ ಸಂಸದ ತೇಜಸ್ವಿ ಸೂರ್ಯ ಅವರನ್ನು ಎಳೆಕೂಸಿನಂಥ ಸಂಸದ ಎಂದು ಕಾಂಗ್ರೆಸ್ ಪಕ್ಷ ಲೇವಡಿ ಮಾಡಿದೆ.
ತೇಜಸ್ವಿ ಸೂರ್ಯ ಬೀದಿಜಗಳದ ವಿಷಯಕ್ಕೆ ಓಡೋಡಿ ಬಂದಿದ್ದಾರೆ. ಸಂಸದನಾಗಿ ತನ್ನ ಹೊಣೆಗಾರಿಕೆ ಮರೆತು ಮಕ್ಕಳಾಟ ಆಡುವವರನ್ನು ಈ ಬಾರಿ ಜನತೆ ತಿರಸ್ಕರಿಸಿ ಮನೆಗೆ ಕಳಿಸುವುದು ನಿಶ್ಚಿತ ಎಂದು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಪಕ್ಷ ಟೀಕಿಸಿದೆ.
ತೇಜಸ್ವಿ ಸೂರ್ಯ ಎಂಬ ಎಳೆ ಕೂಸಿನಂತಹ ಸಂಸದ ಕೋವಿಡ್ ಬಂದಾಗ ಫುಟ್ಬಾಲ್ ಆಡೋಕೆ ಹೋಗಿದ್ದರು! ನೆರೆ ಬಂದಾಗ ದೋಸೆ ತಿನ್ನೋಕೆ ಹೋಗಿದ್ದರು! ಕನ್ನಡಿಗರಿಗೆ ಅನ್ಯಾಯವಾದಾಗ ಎಮರ್ಜೆನ್ಸಿ ಎಕ್ಸಿಟ್ ನಲ್ಲಿ ಹಾರೋಕೆ ಹೋಗಿದ್ದರು! ಕನ್ನಡಿಗ ಯುವಕರು ಉದ್ಯೋಗ ಕೇಳುತ್ತಿದ್ದಾಗ ನಾಪತ್ತೆಯಾಗಿದ್ದರು! ಆದರೆ ಈಗ ಬೀದಿ ಜಗಳದ ವಿಷಯಕ್ಕೆ ಮಾತ್ರ ಓಡೋಡಿ ಬಂದಿದ್ದಾರೆ! ಸಂಸದನಾಗಿ ತನ್ನ ಹೊಣೆಗಾರಿಕೆ ಮರೆತು ಮಕ್ಕಳಾಟ ಆಡುವವರನ್ನು ಈ ಬಾರಿ ಜನತೆ ತಿರಸ್ಕರಿಸಿ ಮನೆಗೆ ಕಳಿಸುವುದು ನಿಶ್ಚಿತ ಎಂದು ಎಕ್ಸ್ ನಲ್ಲಿ ಬರೆಯಲಾಗಿದೆ.
ವೈಯಕ್ತಿಕ ಕಾರಣಗಳಿಗಾಗಿ ನಡೆದ ಗಲಾಟೆಯನ್ನು ಹಿಡಿದುಕೊಂಡು ಕೋಮು ಸಂಘರ್ಷ ಉಂಟುಮಾಡಲು ಹವಣಿಸಿದ ತೇಜಸ್ವಿ ಸೂರ್ಯ ಚುನಾವಣಾ ನೀತಿ ಸಂಹಿತೆಯ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ಮುಖ್ಯ ಚುನಾವಣಾಧಿಕಾರಿಗಳು ಕೂಡಲೇ ಸಂಸದ ತೇಜಸ್ವಿ ಸೂರ್ಯನ ವಿರುದ್ಧ ಕ್ರಮ ಕೈಗೊಳ್ಳಬೇಕು, ಈತನ ಉಮೇದುವಾರಿಕೆಯನ್ನು ಮಾನ್ಯ ಮಾಡಬಾರದು ಹಾಗೂ ಚುನಾವಣಾ ಪ್ರಚಾರಕ್ಕೆ ನಿರ್ಬಂಧ ವಿಧಿಸಬೇಕು. ನಿಸ್ಪಕ್ಷಪಾತ ಹಾಗೂ ಪಾರದರ್ಶಕ ಚುನಾವಣೆಗಾಗಿ ಚುನಾವಣಾ ಆಯೋಗ ಈ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಭಾವಿಸಿದ್ದೇವೆ ಎಂದು ಪಕ್ಷ ಹೇಳಿದೆ.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಅವರು ಕರ್ನಾಟಕ ಬಿಜೆಪಿಯ ಪ್ರಾಪಗಾಂಡಾಗಳಿಗೆ ತಪರಾಕಿ ನೀಡಿದ್ದಾರೆ, ಇದು ಬಿಜೆಪಿಯವರು ಚುನಾವಣೆಗಾಗಿ ಹಚ್ಚಿದ ಕೋಮು ಬೆಂಕಿ ಎನ್ನುವುದಕ್ಕೆ ಪುಷ್ಟಿ ನೀಡಿದ್ದಾರೆ. ತೇಜಸ್ವಿ ಸೂರ್ಯ ಎಂಬ ಅವಿವೇಕಿ ಶಿಶುವಿಗೆ ಈ ಗಲಾಟೆಯ ವಿಷಯದಲ್ಲಿ ರಾಜಕೀಯ ಬೇಳೆ ಬೇಯಿಸಬೇಡ ಎಂದು ಸ್ವತಃ ಬಿಜೆಪಿ ಶಾಸಕರೇ ಹೇಳಿದ್ದರೂ ಕೋಮು ಸಂಘರ್ಷ ಉಂಟುಮಾಡಲು ಮುಂದಾಗಿದ್ದಾರೆ. ಇಷ್ಟು ದಿನ ಕಣ್ಮರೆಯಾಗಿದ್ದ ತೇಜಸ್ವಿ ಸೂರ್ಯನಿಗೆ ತನ್ನ ಸಾಧನೆ ಹೇಳಿ ಮತ ಕೇಳುವ ಯೋಗ್ಯತೆ ಅರ್ಹತೆ ಇಲ್ಲದಿರುವುದೇ ಈ ಎಲ್ಲಾ ನಾಟಕಗಳ ಮೂಲ ಕಾರಣ ಎಂದು ಕಾಂಗ್ರೆಸ್ ಪಕ್ಷ ಕಿಡಿಕಾರಿದೆ.