ಬೆಂಗಳೂರು: ಲೋಕಸಭೆಯ ಚುನಾವಣೆಯ ಹಿನ್ನೆಲೆಯಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ದುರುದ್ದೇಶದಿಂದ ಬೆಂಗಳೂರಿನ ನಗರ್ತ ಪೇಟೆಯಲ್ಲಿ ಪ್ರತಿಭಟನೆ ನಡೆಸಲು ಪ್ರಚೋದಿಸುವ ಹೇಳಿಕೆ ನೀಡಿರುವ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಈ ಕುರಿತು ಕಾಂಗ್ರೆಸ್ ಪಕ್ಷದ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ದೂರು ನೀಡಿದ್ದು, ಬೆಂಗಳೂರಿನ ನಗರ್ತ ಪೇಟೆಯಲ್ಲಿ ಅಂಗಡಿ ಮಾಲೀಕರೊಬ್ಬರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಕೋಮು ದ್ವೇಷ ಮೂಡಿಸುವ ಸಲುವಾಗಿ ಬಿಜೆಪಿಯ ನಾಯಕರು ತಿರುಚಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ದಿನಾಂಕ:18-03-2024 ರಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮತ್ತು ಬಸವನಗುಡಿ ಶಾಸಕ ರವಿಸುಬ್ರಮಣ್ಯ ಭೇಟಿ ನೀಡಿ ಅಂಗಡಿಯ ಮುಂದೆ ಗುಂಪು ಸೇರಿಸಿ 19 ಮಾರ್ಚ್ 2024 ರ ಮಧ್ಯಾಹ್ನ 12 ಗಂಟೆಗೆ ಹನುಮಾನ್ ಚಾಲೀಸ ಪಠಣೆ ಮಾಡಲು ಕರೆ ನೀಡಿ ಧಾರ್ಮಿಕ ಘೋಷಣೆಗಳನ್ನು ಕೂಗಿರುತ್ತಾರೆ. ಮಾನ್ಯ ಸರ್ವೋಚ್ಚ ನ್ಯಾಯಾಲಯದ ಆದೇಶ ಮತ್ತು ಚುನಾವಣಾ ಆಯೋಗದ ಪ್ರಕಾರ ಚುನಾವಣೆಯ ಸಂದರ್ಭದಲ್ಲಿ ಕೋಮು, ಮತ, ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತಹ ಕೃತ್ಯವೆಸಗುವುದು ಅಪರಾಧ. ನೀತಿ ಸಂಹಿತೆ ಉಲ್ಲಂಘಿಸಿ ಪ್ರತಿಭಟನೆಗೆ ಕರೆ ನೀಡಿರುವ ತೇಜಸ್ವಿ ಸೂರ್ಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ನಗರ್ತಪೇಟೆಯಲ್ಲಿ ನಡೆದ ಗಲಾಟೆ ಹನುಮಾನ್ ಚಾಲೀಸಾ ಹಾಕಿದ್ದಕ್ಕಾಗಲೀ, ಆಜಾನ್ ಪ್ರಾರ್ಥನೆಗೆ ಅಡ್ಡಿಯಾಗುತ್ತಿದೆ ಎಂಬ ಕಾರಣಕ್ಕಾಗಲೀ ನಡೆದಿದ್ದಲ್ಲ ಎಂದು ಪೊಲೀಸರು ಸ್ಪಷ್ಟನೆ ನೀಡುವುದರೊಂದಿಗೆ ಪ್ರಕರಣಕ್ಕೆ ಕೋಮುಬಣ್ಣ ಹಚ್ಚಿ ಲಾಭ ಪಡೆಯಲು ಯತ್ನಿಸಿದ ಬಿಜೆಪಿ ನಾಯಕರಿಗೆ ಭಾರೀ ಮುಖಭಂಗವಾಗಿದೆ.
ಆಜಾನ್ ಪ್ರಾರ್ಥನೆಗೆ ಅಂಗಡಿಯೊಂದರಲ್ಲಿ ಹಾಕಲಾದ ಹನುಮಾನ್ ಚಾಲೀಸಾ ಅಡ್ಡಿಯಾಗುತ್ತಿದೆ ಎಂದು ಹಿಂದೂಗಳ ಮೇಲೆ ಮುಸ್ಲಿಮರು ಹಲ್ಲೆ ನಡೆಸಿದ್ದಾರೆ ಎಂಬ ಕಥೆ ಕಟ್ಟಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಬಿಜೆಪಿ ನಾಯಕರು ಪ್ರಕರಣಕ್ಕೆ ಕೋಮುಬಣ್ಣ ಹಚ್ಚಿ ಅದರ ಲಾಭ ಪಡೆಯಲು ಮುಂದಾಗಿದ್ದರು. ಆದರೆ ಘಟನೆಯಲ್ಲಿ ಹಲ್ಲೆ ನಡೆಸಿದ ಆರೋಪಿಗಳಲ್ಲಿ ಹಿಂದೂಗಳೂ ಇರುವುದು, ಇಡೀ ಪ್ರಕರಣದಲ್ಲಿ ಕೋಮುಸಂಘರ್ಷದ ಕೋನ ಇಲ್ಲದೇ ಇರುವುದು ಬಿಜೆಪಿ ಮುಖಂಡರನ್ನು ಮುಜುಗರಕ್ಕೆ ಈಡು ಮಾಡಿದೆ.
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದ ಕೋಮುಸಂಘರ್ಷದ ಸನ್ನಿವೇಶ ಸೃಷ್ಟಿಸಿ ಲಾಭ ಪಡೆಯುವ ಹುನ್ನಾರ ವಿಫಲವಾಗಿದ್ದು, ಇಡೀ ಘಟನೆಯಲ್ಲಿ ಬಿಜೆಪಿ ನಾಯಕರು ಹೇಳಿದ ರೀತಿಯ ಯಾವ ವಿಷಯವೂ ಇಲ್ಲ ಎಂಬುದು ಬಯಲಾಗಿದೆ.
ನಗರ್ತಪೇಟೆಯಲ್ಲಿ ಜುಮ್ಮಾ ಮಸೀದಿ ಬಳಿ ಮುಖೇಶ್ ಎಂಬುವವರು ಅಂಗಡಿ ಹೊಂದಿದ್ದು, ನಿನ್ನೆ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು. ಈ ಸಂಬಂಧ ದೂರು ಕೂಡ ದಾಖಲಾಗಿತ್ತಾದರೂ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ನಡೆದಿದೆ ಎಂದು ದೂರಿನಲ್ಲಿ ಹೇಳಲಾಗಿರಲಿಲ್ಲ. ಪ್ರಕರಣ ಸಂಬಂಧಿಸಿದಂತೆ ಹಲಸೂರು ಗೇಟ್ ಪೊಲೀಸರು ಮುಖೇಶ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ರೋಹಿತ್, ದಾನೀಶ್, ತರುಣ್, ಸುಲೇಮಾನ್, ಶಹನವಾಜ್ ಮತ್ತಿತರರ ಮೇಲೆ ದೂರು ದಾಖಲಿಸಲಾಗಿತ್ತು. ಈ ಪೈಕಿ ದಾನೀಶ್ ಮತ್ತು ತರುಣ್ ಹೊರತುಪಡಿಸಿ ಉಳಿದ ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆದರೆ ಹಲವು ರಾಜಕೀಯ ನಾಯಕರ ಒತ್ತಡಕ್ಕೆ ಒಳಗಾದ ಮುಖೇಶ್, ಮಾಧ್ಯಮದವರೊಂದಿಗೆ ಮಾತನಾಡುವಾಗ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದೆ ಎಂದು ಹೇಳಿದ್ದರು.
ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು, ಘಟನೆಯಲ್ಲಿ ಯಾವುದೇ ಕೋಮುಬಣ್ಣ ಇಲ್ಲದಿರುವುದನ್ನು ಸ್ಪಷ್ಟಪಡಿಸಿದ್ದು, ಆರೋಪಿಗಳ ವಿರುದ್ಧ ಕ್ರಿಮಿನಲ್ ಬೆದರಿಕೆ (ಐಪಿಸಿ 506), ಶಾಂತಿ ಭಂಗದ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ (ಐಪಿಸಿ 504), ಕಾನೂನುಬಾಹಿರ ಸಭೆ (ಐಪಿಸಿ 149) ಮತ್ತು ಕೊಲೆ ಯತ್ನ (ಐಪಿಸಿ 307) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ನೀಡಿರುವ ಸಚಿವ ಹಾಗು ಕ್ಷೇತ್ರದ ಶಾಸಕ ದಿನೇಶ್ ಗುಂಡೂರಾವ್, ಪ್ರಚೋದನೆಗೆ ಒಳಗಾಗದೆ ವಿವೇಚನೆಯಿಂದ ಯೋಚಿಸಿ. ಲಭ್ಯವಾದ ಎಫ್ಐಆರ್ ಪ್ರತಿ ಮತ್ತು ಮುಖೇಶ್ ಅವರು ಕೊಟ್ಟಿರುವ ಕೈ ಬರಹದ ದೂರಿನಲ್ಲಿ ಎಲ್ಲಿಯೂ ನಮಾಝ್ ಅಥವಾ ಆಝಾನ್ ಸಮಯದಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಎಲ್ಲೂ ಉಲ್ಲೇಖಿಸಿಲ್ಲ ಎಂದು ದಾಖಲೆಯೊಂದಿಗೆ ತಿಳಿಸಿದ್ದಾರೆ.
ಮಾಧ್ಯಮಗಳು ಮತ್ತು ಬಿಜೆಪಿ ನಾಯಕರು ಆರೋಪಿಸಿದ ಹಾಗೆ ಪ್ರಕರಣ ನಡೆದಿದ್ದಲ್ಲ. ಆರೋಪಿಗಳಲ್ಲಿ ಮುಸ್ಲಿಮರು ಮಾತ್ರ ಇರುವುದಲ್ಲ. ಮೂವರು ಮುಸ್ಲಿಮರು ಮತ್ತು ಇಬ್ಬರು ಹಿಂದೂ ಆರೋಪಿಗಳಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರಣೆ ಮತ್ತು ಸ್ಪಷ್ಟೀಕರಣವನ್ನು ತನಿಖೆಯ ಬಳಿಕ ಪೊಲೀಸರು ತಿಳಿಸಬೇಕಾಗಿದೆ ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆಗಳು ಸನ್ನಿಹವಾಗುತ್ತಿರುವಂತೆಯೇ ರಾಜ್ಯದ ಕೋಮುದ್ವೇಷದ ವಿಷವನ್ನು ಬಿತ್ತಿ ಅದರ ಮೂಲಕ ರಾಜ್ಯದ ಶಾಂತಿ ನೆಮ್ಮದಿ ಕದಡಲು ಕೆಲ ಸಮಾಜಘಾತಕ ಶಕ್ತಿಗಳು ಯತ್ನಿಸುತ್ತಿದ್ದು, ನಗರ್ತಪೇಟೆ ಘಟನೆಯಲ್ಲೂ ಇದಕ್ಕೆ ಕೋಮುಬಣ್ಣ ಹಚ್ಚಿ ಲಾಭ ಪಡೆಯಲು ಯತ್ನ ನಡೆದಿರುವುದು ಈಗ ಬಹಿರಂಗವಾಗಿದೆ.